Saturday, January 18, 2025
Homeಯಕ್ಷಗಾನಪುರುಷ ಪಾತ್ರಗಳಲ್ಲೂ ಪ್ರಸಿದ್ಧಿಯನ್ನು ಪಡೆದ ಖ್ಯಾತ ಸ್ತ್ರೀ ವೇಷಧಾರಿ - ಕುಂಬಳೆ ಶ್ರೀಧರ ರಾವ್ 

ಪುರುಷ ಪಾತ್ರಗಳಲ್ಲೂ ಪ್ರಸಿದ್ಧಿಯನ್ನು ಪಡೆದ ಖ್ಯಾತ ಸ್ತ್ರೀ ವೇಷಧಾರಿ – ಕುಂಬಳೆ ಶ್ರೀಧರ ರಾವ್ 

ಶ್ರೀ ಧರ್ಮಸ್ಥಳ ಮೇಳದ ರಂಗಸ್ಥಳ. ಶ್ರೇಷ್ಠ ಕಲಾವಿದರ ಒಡನಾಟದಲ್ಲಿ ಕುಂಬಳೆ ಶ್ರೀಧರ ರಾಯರು ಸ್ತ್ರೀ ಪಾತ್ರಗಳನ್ನು ಮಾಡುತ್ತಾ ರಂಜಿಸುತ್ತಿದ್ದ ದಿನಗಳವು. ಈಗಲೂ ನೆನಪಾಗುತ್ತದೆ. ದಮಯಂತಿ, ದಾಕ್ಷಾಯಿಣಿ, ಅಮ್ಮು ಬಲ್ಲಾಳ್ತಿ, ಲಕ್ಷ್ಮಿ, ಸುಭದ್ರೆ, ಸತ್ಯಭಾಮೆ ಅಲ್ಲದೆ ಪ್ರಮೀಳೆ, ಶಶಿಪ್ರಭೆ, ಮಹಾಕಲಿ ಮಗದೇಂದ್ರ ಪ್ರಸಂಗದ ವಜ್ರಲೇಖೆ ಮೊದಲಾದ ಕಸೆ ಸ್ತ್ರೀವೇಷಗಳನ್ನೂ ಮಾಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಸ್ತ್ರೀ ಪಾತ್ರಗಳಿಗೆ ಜೀವತುಂಬಿದ ಕುಂಬಳೆ ಶ್ರೀಧರ ರಾಯರು ಈಗ ಅದೇ ರಂಗಸ್ಥಳದಲ್ಲಿ ಪುರುಷ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ವಯಸ್ಸು ಮತ್ತು ದೇಹದ ಭಾಷೆ ತೊಡಕಾಗುವ ಮೊದಲೇ ಸ್ತ್ರೀ ಪಾತ್ರಗಳ ನಿರ್ವಹಣೆಯನ್ನು ಬಿಟ್ಟು ಪುರುಷ ಪಾತ್ರಗಳನ್ನು ಆಯ್ಕೆ ಮಾಡಿಕೊಂಡ ಚತುರಮತಿ ಇವರು.

 ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ನಾಯ್ಕಾಪು ಕುಂಬಳೆ ಶ್ರೀಧರ ರಾಯರ ಹುಟ್ಟೂರು. 1948ನೇ ಇಸವಿ ಜುಲೈ 23ರಂದು ಮಾಲಿಂಗ ಮುಕಾರಿ ಮತ್ತು ಕಾವೇರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನನ. ಸೂರಂಬೈಲು ಸರಕಾರೀ ಶಾಲೆಯಲ್ಲಿ 4ನೇ ತರಗತಿಯ ವರೇಗೆ ವಿದ್ಯಾಭ್ಯಾಸ. ಎಳವೆಯಲ್ಲಿ ಬಡತನದ ಬೇಗೆ. ಹೊಟ್ಟೆಗೆ ಬಟ್ಟೆಗೆ ಇಲ್ಲದೆ ಕಷ್ಟವನ್ನನುಭವಿಸಿದ ದಿನಗಳು. ಶಾಲೆ ಅನಿವಾರ್ಯವಾಗಿ ಬಿಡಬೇಕಾಯಿತು. ಪ್ರಸಿದ್ಧ ಕಲಾವಿದರಾದ ಶ್ರೀ ಕುಂಬಳೆ ಸುಂದರ ರಾಯರ ತೀರ್ಥರೂಪರು ಶ್ರೀ ಕುಂಞಕಣ್ಣ ಚೆಟ್ಟಿಯಾರರಿಂದ ಬಟ್ಟೆ ನೇಯುವ ಕೆಲಸವನ್ನು ಶ್ರೀಧರ ರಾಯರು ಕಲಿತರು. ಜತೆಗೆ ಕುಂಬಳೆ ಚಂದ್ರಶೇಖರರಿಂದ (ಕುಂಬಳೆ ಚಂದು) ಮತ್ತು ಕುಂಬಳೆ ಹಾಸ್ಯಗಾರ ಕಮಲಾಕ್ಷ ನಾಯಕ್ (ವಿಟ್ಲ ಜೋಯಿಸರ ಸಮಕಾಲೀನರು) ರಿಂದ ಯಕ್ಷಗಾನ ನಾಟ್ಯವನ್ನು ಅಭ್ಯಸಿಸಿದರು.

ಕುಂಬಳೆ ಚಂದುರವರು ಆ ಕಾಲದಲ್ಲಿ ನೃತ್ಯ ರೂಪಕ ಪ್ರದರ್ಶನವನ್ನು ನಿರ್ದೇಶಿಸಿ ಆಯೋಜಿಸುವುದರಲ್ಲಿ ಪ್ರಸಿದ್ಧರಾಗಿದ್ದರಂತೆ. ಅದೇ ಸಮಯದಲ್ಲಿ (1962) ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳ ಕುಂಬಳೆಗೆ ಬಂದಿದ್ದಾಗ ಕುಂಬಳೆ ಶ್ರೀಧರ ರಾಯರು ಬಾಲಕಲಾವಿದನಾಗಿ ಸೇರ್ಪಡೆಗೊಂಡರು. ಯಕ್ಷಗಾನದ ಭೀಷ್ಮ ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರ ಶಿಷ್ಯನಾಗಿ ಬೆಳೆದರು. ಮುಂದಿನ ವರ್ಷಗಳಲ್ಲಿ ನೂಜಿಪ್ಪಾಡಿ ಶಂಕರನಾರಾಯಣಪ್ಪಯ್ಯ ಯಜಮಾನಿಕೆಯ ಕುತ್ಯಾಳ ಗೋಪಾಲಕೃಷ್ಣ ಮೇಳದಲ್ಲಿ ಶೇಣಿಯವರ ಒಡನಾಟದಲ್ಲಿ ಕಲಾವಿದನಾಗಿ ಕಾಣಿಸಿಕೊಂಡರು.


                      1965ನೇ ಇಸವಿ ಖಾವಂದರಾದ ಶ್ರೀ ರತ್ನವರ್ಮ ಹೆಗಡೆಯವರು ಮೇಳವನ್ನು ಶ್ರೀ ಕ್ಷೇತ್ರದಿಂದಲೇ ನಡೆಸುವ ತೀರ್ಮಾನಕ್ಕೆ ಬಂದಿದ್ದರು. (ಮೊದಲು ಕುರಿಯ ವಿಠಲ ಶಾಸ್ತ್ರಿಗಳು ನಡೆಸುತ್ತಿದ್ದರು) ಎರಡು ವರ್ಷ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯವನ್ನು ಮಾಡಿ ನಂತರ ಪೆರುವೊಡಿ ನಾರಾಯಣ ಭಟ್ಟರ ಸಂಚಾಲಕತ್ವದ ಮುಲ್ಕಿ ಮೇಳ ಮತ್ತೆ ಕೂಡ್ಲು ಮೇಳದಲ್ಲಿ ಎರಡು ವರ್ಷ ತಿರುಗಾಟ ನಡೆಸಿದರು. 1970ರಲ್ಲಿ ಮತ್ತೆ ಎರಡು ವರ್ಷಗಳ ಕಾಲ ಧರ್ಮಸ್ಥಳ ಮೇಳಕ್ಕೆ. ಮುಂದಿನ ಮೂರು ವರ್ಷಗಳ ಕಾಲ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ ತಿರುಗಾಟ ನಡೆಸಿ ಕಳೆದ 44 ವರುಷಗಳಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ| ವೀರೇಂದ್ರ ಹೆಗಡೆಯವರು ಮತ್ತು ಡಿ. ಹರ್ಷೇಂದ್ರ  ಕುಮಾರರ ಆಶೀರ್ವಾದದಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಹೀಗೆ ಕಲಾವಿದನಾಗಿ ಕುಂಬಳೆ ಶ್ರೀಧರ ರಾಯರದ್ದು 57 ವರುಷಗಳಿಗೂ ಮಿಕ್ಕಿದ ತಿರುಗಾಟ.

ಶೇಣಿ ಗೋಪಾಲಕೃಷ್ಣರಿಂದಲೇ ನಾನು ಮಾತುಗಾರಿಕೆ ಕಲಿತೆ. ಅವರು ಆಶೀರ್ವದಿಸಿದರು. ಅವರಿಂದಾಗಿಯೇ ನನಗೆ ಎಡನೀರು ಶ್ರೀಮಠ ಹತ್ತಿರವಾಯಿತು. ನಾನು ಶ್ರೀಮಠದ, ಶ್ರೀಗಳವರ ಭಕ್ತನೂ ಹೌದು ಶಿಷ್ಯನೂ ಹೌದು ಎಂದು ಹೇಳುವ ಕುಂಬಳೆ ಶ್ರೀಧರ ರಾಯರು ಕಲಾವಿದನಾಗಿ ಶ್ರೀಮಠದ ಯಕ್ಷಗಾನ ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗವಹಿಸುತ್ತಾರೆ. ಕಡತೋಕಾ, ಅಗರಿ, ಮಂಡೆಚ್ಚರು, ಹೊಳ್ಳರು, ಮಯ್ಯರ ಭಾಗವತಿಕೆಗೆ ವೇಷಗಳನ್ನು ಮಾಡಿ ಸಂತೋಷವನ್ನು ಅನುಭವಿಸಿದ್ದೇನೆ. ಶೇಣಿಯವರೊಂದಿಗೆ ಮಂಡೋದರಿ, ತಾರೆ ಮೊದಲಾದ ಪಾತ್ರಗಳನ್ನು ಮಾಡಿದ ಧನ್ಯತೆಯಿದೆ. ಕುಂಬಳೆ ಸುಂದರ ರಾಯರ ಜತೆ ಲಕ್ಷ್ಮಿ, ಸತ್ಯಭಾಮೆ, ಕೆ. ಗೋವಿಂದ ಭಟ್ಟರ ಜತೆ ಹಲವು ವೇಷಗಳು, ನಯನ ಕುಮಾರರ ಬಾಹುಕ, ಬ್ರಾಹ್ಮಣ ಪಾತ್ರಗಳಿಗೆ ದಮಯಂತಿ, ದಾಕ್ಷಾಯಿಣಿ, ಅರುವ ಕೊರಗಪ್ಪ ಶೆಟ್ಟರ ಪುಷ್ಪಧ್ವಜ ಪಾತ್ರಕ್ಕೆ ಕನಕಮಾಲಿನಿಯಾಗಿ (ಪ್ರಸಂಗವೀರ ಪುಷ್ಪಧ್ವಜ) ಪುತ್ತೂರು ನಾರಾಯಣ ಹೆಗ್ಡೆಯವರ ಅಣ್ಣಪ್ಪ ಪಾತ್ರಕ್ಕೆ ಅಮ್ಮು ಬಲ್ಲಾಳ್ತಿಯಾಗಿ ಅಭಿನಯಿಸಿದ್ದು ಮರೆಯಲಾರದ ಅನುಭವ ಎಂದು ಶ್ರೀಧರರಾಯರು ಕಳೆದ ದಿನಗಳನ್ನು ನೆನಪಿಸುತ್ತಾರೆ.


                              ಮಳೆಗಾಲದಲ್ಲಿ ಕಳೆದ 30 ವರುಷಗಳಿಂದ ನಿಡ್ಲೆ ಗೋವಿಂದ ಭಟ್ಟರ ನೇತೃತ್ವದ  ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಪ್ರಮುಖ ಕಲಾವಿದನಾಗಿ ಕುಂಬಳೆ ಶ್ರೀಧರ ರಾಯರು ತಿರುಗಾಟ ನಡೆಸುತ್ತಿದ್ದಾರೆ. 1988ರಲ್ಲಿ ದುಬಾೈ, ಅಬುದಾಭಿ, 1991ರಲ್ಲಿ ಬಹ್ರೈನ್, ಶಾರ್ಜಾದಲ್ಲಿ ನಡೆದ ಪ್ರದರ್ಶನಗಳಲ್ಲಿಯೂ ಭಾಗವಹಿಸಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ| ವೀರೇಂದ್ರ ಹೆಗಡ್ಡೆಯವರ ಪಟ್ಟಾಭಿಷೇಕೋತ್ಸವದ ಸಂದರ್ಭ ಸನ್ಮಾನಿತರಾಗಿದ್ದಾರೆ. ದೆಹಲಿ ಪಾರ್ಲಿಮೆಂಟು ಭವನದಲ್ಲಿ ನಡೆದ ಧರ್ಮಸ್ಥಳ ಮೇಳದ ಕಲಾವಿದರಿಂದ ನಡೆದ ಪ್ರದರ್ಶನದಲ್ಲಿ ಭಾಗವಹಿಸಿದ್ದಲ್ಲದೆ ಕುಂಬಳೆ ಶ್ರೀಧರ ರಾಯರನ್ನು ಅನೇಕ ಕಡೆಗಳಲ್ಲಿ ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ಮಂಗಳೂರು ಆಕಾಶವಾಣಿಗಾಗಿ ಶ್ರೀ ಸದಾನಂದ ಪೆರ್ಲ ಅವರು ನಡೆಸಿದ ತುಳು ಸಂದರ್ಶನ ಮತ್ತು ಸುದ್ದಿ ಟಿ. ವಿ.ಗಾಗಿ ಸೌಮ್ಯಾ ಮಾರ್ನಾಡು ಅವರು ನಡೆಸಿದ ಸಂದರ್ಶನದಲ್ಲೂ ಭಾಗವಹಿಸಿದ್ದಾರೆ.


              ಅಬಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಹಿರಿಯ ಸಹೋದರ ಶಂಕರ ಮುಕಾರಿಯವರ ಸಹಕಾರವನ್ನು ಶ್ರೀಧರ ರಾಯರು ಸದಾ ಸ್ಮರಿಸುತ್ತಾರೆ. ಇವರ ತಮ್ಮ ಕುಂಬಳೆ ಗೋಪಾಲ ಅವರು ಬೆಂಗಳೂರಿನಲ್ಲಿ ಉದ್ಯೋಗಿ. ಹವ್ಯಾಸೀ ಉತ್ತಮ ಕಲಾವಿದ. ಕುಂಬಳೆ ಶ್ರೀಧರ ರಾಯರ ಪತ್ನಿ ಶ್ರೀಮತಿ ಸುಲೋಚನಾ ಶಾಂತಿನಗರ ಸರಕಾರೀ ಶಾಲೆಯಲ್ಲಿ ಅಧ್ಯಾಪಿಕೆ. ಶ್ರೀಧರ ರಾವ ದಂಪತಿಗಳಿಗೆ ಮೂವರು ಗಂಡು ಮಕ್ಕಳು. ಹಿರಿಯ ಪುತ್ರ ಗಣೇಶ್ ಪ್ರಸಾದ್ ಎಂ.ಎ. ಪದವೀಧರ. ಪತ್ರಿಕೋದ್ಯಮಿಯಾಗಿ ಕೆಲಸ ಮಾಡುತ್ತಿದಾರೆ. ದ್ವಿತೀಯ ಪುತ್ರ ಕೃಷ್ಣಪ್ರಸಾದ್ ಎಂ.ಎ., ಬಿ.ಎಡ್. ಪದವೀಧರ. ಕಿರಿಯ ಪುತ್ರ ದೇವೀಪ್ರಸಾದ್ ಬಿ.ಬಿ.ಎಂ. ಪದವೀಧರ.

ಲೇಖಕ: ರವಿಶಂಕರ್ ವಳಕ್ಕುಂಜ 

ಫೋಟೋ: ಕೋಂಗೋಟ್ ರಾಧಾಕೃಷ್ಣ ಭಟ್ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments