Tuesday, December 3, 2024
Homeಯಕ್ಷಗಾನಕಲಾವಿದ, ಪ್ರಸಾಧನ ತಜ್ಞ ವೆಂಕಟೇಶ ಮಯ್ಯರ 'ಶ್ರೀ ಗುರು ನೃಸಿಂಹ ಕಲಾಮಂಡಳಿ, ಆರ್ಯಾಪು ಪುತ್ತೂರು'

ಕಲಾವಿದ, ಪ್ರಸಾಧನ ತಜ್ಞ ವೆಂಕಟೇಶ ಮಯ್ಯರ ‘ಶ್ರೀ ಗುರು ನೃಸಿಂಹ ಕಲಾಮಂಡಳಿ, ಆರ್ಯಾಪು ಪುತ್ತೂರು’

ಯಕ್ಷಗಾನ ಕಲೆಯ ಬಗ್ಗೆ ಜ್ಞಾನವನ್ನು ಹೊಂದಿದವರು ವೇಷಭೂಷಣ, ಮೇಕಪ್ ನೋಡಿದಾಗಲೇ ಇದು ಇಂತಹ ವೇಷ ಎಂದು ತೀರ್ಮಾನಿಸುತ್ತಾರೆ. ಪ್ರತಿಯೊಂದು ವೇಷಕ್ಕೂ ಬಣ್ಣಗಾರಿಕೆ, ವೇಷಭೂಷಣಗಳು, ಕಿರೀಟ ಹೀಗೆಯೇ ಇರಬೇಕು ಎಂಬ ನಿಯಮವಿದೆ. ಪದ್ಯಗಳ ಲಯ, ಕುಣಿತದ ಕ್ರಮವೂ ಹೀಗೆಯೇ ಇರಬೇಕೆಂಬ ನಿಯಮವೂ ಇದೆ. ಹೀಗೆ ಮೊಗೆದಷ್ಟೂ ಯಕ್ಷಗಾನದಲ್ಲಿ ವಿಚಾರಗಳು ಸಿಗುತ್ತವೆ. ಆದರೆ ನಮ್ಮ ಬೊಗಸೆ ಸಣ್ಣದು. ತುಂಬಿಸಲಿರುವ ಪಾತ್ರೆಯೂ ಚಿಕ್ಕದು. ಯಕ್ಷಗಾನವೆಂಬುದು ಅಕ್ಷಯ ಪಾತ್ರೆಯೇ ಹೌದು. ಒಂದು ವೇಷ ರಂಗವನ್ನು ಪ್ರವೇಶಿಸಿದ ಕೂಡಲೇ ಪ್ರೇಕ್ಷಕರು ಅದನ್ನು ಸ್ವೀಕರಿಸುವಂತಿರಬೇಕು. ಮೊದಲ ನೋಟದಲ್ಲೇ ಪ್ರೇಕ್ಷಕನ ಮನಸ್ಸು ಆ ವೇಷವನ್ನು ಒಪ್ಪಿಕೊಳ್ಳಬೇಕು. ಡ್ರೆಸ್ ಅಂದವಾಗಿದ್ದರೆ ಸಾಕೆ? ಅದನ್ನು ಧರಿಸುವ ಕಲೆಯೂ ಕಲಾವಿದನಿಗೆ ಕರಗತವಾಗಿರಬೇಕು. ಈ ಎಲ್ಲಾ ವಿಚಾರಗಳಲ್ಲಿ ಆರ್ಯಾಪು ಖಂಡಿಗೆ ಮನೆಯ ಶ್ರೀ ಕೆ. ವೆಂಕಟೇಶ ಮಯ್ಯರು ನಿಷ್ಣಾತರು. ಕಲಾವಿದನಾಗಿ, ವೇಷಭೂಷಣಗಳ ತಯಾರಿಕೆಯಲ್ಲೂ ಮೇಕಪ್ ಮಾಡುವ ಕಲೆಯಲ್ಲೂ ಪಳಗಿ ಶ್ರೀ ಗುರು ನೃಸಿಂಹ ಕಲಾಮಂಡಳಿ, ಆರ್ಯಾಪು ಪುತ್ತೂರು ಈ ಸಂಸ್ಥೆಯ ಮಾಲೀಕನಾಗಿ ಪ್ರಸಿದ್ಧರು. ಕಲಾವಿದರಿಗೆ, ಮಿತ್ರರಿಗೆಲ್ಲಾ ಇವರು ಪ್ರೀತಿಯ ‘ಮಯ್ಯಣ್ಣ’.

ಶ್ರೀ ವೆಂಕಟೇಶ ಮಯ್ಯರು ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಖಂಡಿಗೆ ಎಂಬಲ್ಲಿ 1964ನೇ ಇಸವಿಯಲ್ಲಿ ಶ್ರೀ ಕೆ. ಶ್ರೀನಿವಾಸ ಮಯ್ಯ ಮತ್ತು ಸಾವಿತ್ರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಇವರ ಮೂಲಮನೆ ಮಂಗಳೂರು ತಾಲೂಕಿನ ಕೊಂರ್ಗಿಬೈಲು (ಮಯ್ಯರ ಮನೆ). ಅಜ್ಜನ ಮನೆಯಲ್ಲಿ ವಾಸ್ತವ್ಯವಿದ್ದು 2ನೇ ತರಗತಿಯ ವರೆಗೆ ನೆಟ್ಲ ಶಾಲೆಯಲ್ಲಿ ಓದಿದ್ದರು. ಮತ್ತೆ ಸಂಟ್ಯಾರು ಮತ್ತು ಸಂಪ್ಯ ಶಾಲೆಯಲ್ಲೂ 7ರಿಂದ 10ನೇ ತರಗತಿಯ ವರೆಗೆ ನವೋದಯ ಹೈಸ್ಕೂಲ್‍ನಲ್ಲಿಯೂ ಓದಿದ್ದರು. ನಂತರ ಇಲೆಕ್ಟ್ರಾನಿಕ್ಸ್ ವಿಷಯದಲ್ಲಿ ಡಿಪ್ಲೋಮ ಓದಿದ್ದರು. ಇವರಿಗೆ ಎಳವೆಯಲ್ಲಿಯೇ ಯಕ್ಷಗಾನಾಸಕ್ತಿ. ನೆಟ್ಲ ಶಾಲೆಯಲ್ಲಿ ಓದುತ್ತಿರುವಾಗ ಖ್ಯಾತ ಕಲಾವಿದ ಮೂಡಬಿದ್ರೆ ಮಾಧವ ಶೆಟ್ಟರು ಕಲ್ಲಡ್ಕದಲ್ಲಿ ನಾಟ್ಯ ತರಗತಿ ನಡೆಸುತ್ತಿದ್ದರು. ಅವರು ಮಕ್ಕಳಿಗೆ ತರಬೇತಿ ನೀಡುತ್ತಿದ್ದ ರೀತಿಯನ್ನು ನೋಡಿ ಮಯ್ಯರಿಗೆ ಕಲಿಯಬೇಕೆಂಬ ಆಸೆಯಾಯಿತು.

ರಜಾ ದಿನಗಳಲ್ಲಿ ನಾಟ್ಯ ಕಲಿತರು. ಮಾಧವ ಶೆಟ್ಟರು ತನ್ನ ವಾಸ್ತವ್ಯವನ್ನು ಕಬಕಕ್ಕೆ ಬದಲಾಯಿಸಿದಾಗ ಅವರ ಮನೆಗೆ ಹೋಗಿ ನಾಟ್ಯ ಕಲಿತಿದ್ದರು. ಅಧ್ಯಾಪಕ, ಕಲಾವಿದ ನುಳಿಯಾಲು ಸಂಜೀವ ರೈಗಳೂ ಪ್ರೋತ್ಸಾಹಿಸಿದರು. ಶಾಲಾ ವಾರ್ಷಿಕೋತ್ಸವದ ಪ್ರದರ್ಶನಗಳಲ್ಲೂ ಅವಕಾಶ ಸಿಕ್ಕಿತ್ತು. ನೆಟ್ಲ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ವೇತಕುಮಾರ ಚರಿತ್ರೆ ಪ್ರಸಂಗ. ಸಿತಕೇತನಾಗಿ ವೆಂಕಟೇಶ ಮಯ್ಯರು ರಂಗಪ್ರವೇಶ ಮಾಡಿದರು. ಯಕ್ಷಗಾನ ಕೃಷಿಯ ಜೊತೆ ಮಯ್ಯರು ಸುಮಾರು ಹದಿನೈದು ವರ್ಷಗಳ ಕಾಲ ಪುತ್ತೂರು ದರ್ಬೆಯಲ್ಲಿ ‘ವಿಜಯ ಇಲೆಕ್ಟ್ರಾನಿಕ್ಸ್’ ಎಂಬ ಸಂಸ್ಥೆಯನ್ನು ನಡೆಸಿದ್ದರು. ಈ ಸಂದಭದಲ್ಲಿ ಹವ್ಯಾಸೀ ಕಲಾವಿದನಾಗಿ ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ಅಪೇಕ್ಷೆಯಂತೆ ಸುಬ್ರಹ್ಮಣ್ಯ ಮೇಳದಲ್ಲೂ ಕಲಾಸೇವೆ ಮಾಡುತ್ತಿದ್ದರು. ಪುತ್ತಿಗೆ, ಪುತ್ತೂರು ಮಹಾಲಕ್ಷ್ಮಿ ಮೇಳಗಳಲ್ಲೂ ವೇಷ ಮಾಡಿದ್ದರು. ಕಲಾವಿದನಾಗಿ ಬೆಳೆಯುವುದಕ್ಕೆ ಅನುಕೂಲವಾಯಿತು.

ಮೊದಲು ಪುಂಡುವೇಷ, ಕಿರೀಟವೇಷಗಳನ್ನೂ ಮಾಡುತ್ತಿದ್ದರು. ಆಗ ಬಣ್ಣದ ವೇಷ ನಿರ್ವಹಿಸುವ ಕಲಾವಿದರ ಅನಿವಾರ್ಯತೆ ಇತ್ತು. ಮಯ್ಯರಿಗೆ ಆಸಕ್ತಿಯೂ ಇತ್ತು. ಅದನ್ನೇ ಆಯ್ಕೆ ಮಾಡಿ ಕೊಂಡರು. 1987-88ರ ಹನ್ನೆರಡು ತಿಂಗಳುಗಳಲ್ಲಿ ದೇವಿ ಮಹಾತ್ಮೆ ಪ್ರಸಂಗದಲ್ಲಿ ನೂರಕ್ಕೂ ಮಿಕ್ಕಿ ಶುಂಭಾಸುರ ಪಾತ್ರವನ್ನು ನಿರ್ವಹಿಸಿದ್ದರು. ಮೇಳಗಳಲ್ಲಿ ಹೆಸರಾಂತ ಬಣ್ಣದ ವೇಷಧಾರಿಗಳು ತಿರುಗಾಟ ಮಾಡುತ್ತಿದ್ದರು. ಹವ್ಯಾಸೀ ತಂಡಗಳಲ್ಲಿ ಆ ವಿಭಾಗ ದುರ್ಬಲವಾಗಿತ್ತು. ಬಣ್ಣದ ವೇಷಗಳನ್ನೇ ಆಯ್ಕೆ ಮಾಡಿ ಮಯ್ಯರು ಪರಿಸ್ಥಿತಿಯ ಲಾಭವನ್ನೆತ್ತಿ ಕಾಣಿಸಿಕೊಂಡು ಆ ವಿಭಾಗವನ್ನು ಪ್ರಬಲಗೊಳಿಸಿದರು. ಮೊತ್ತಮೊದಲು ವೀರಭದ್ರನಾಗಿ ಅಭಿನಯಿಸಿದರು. ಅಲ್ಲದೆ ಶುಂಭ, ನಿಶುಂಭ, ರಾವಣ, ಕುಂಭಕರ್ಣ, ಮೈರಾವಣ, ಮಹಿಷಾಸುರ, ತಾರಕಾಸುರ, ಶೂರಪದ್ಮ, ಭೀಮ, ಶತ್ರುಪ್ರಸೂಧನ, ಶೂರ್ಪನಖಿ, ಪೂತನಿ, ಕರಾಳನೇತ್ರೆ, ಮಹಿಷಿ, ಯಮ, ಮೃತ್ಯು ಮೊದಲಾದ ವೇಷಗಳನ್ನು ನಿರ್ವಹಿಸುತ್ತಿದ್ದರು. ಮಯ್ಯರು ನಾಟಕೀಯ ವೇಷಗಳನ್ನು ಚೆನ್ನಾಗಿ ಮಾಡುತ್ತಾರೆ. ಕಂಸ ಮತ್ತು ಶನಿ ಪಾತ್ರಗಳನ್ನು ಮಾಡಲೆಂದೇ ಅವರನ್ನು ಸಂಘಟಕರು ಕರೆಯುತ್ತಿದ್ದರು.
                               

ಹಿಂದಿನ ಕಾಲದಲ್ಲಿ ವೇಷಭೂಷಣಗಳ ವಿಚಾರದಲ್ಲಿ ಅಸಮತೋಲನವಿತ್ತು. ಕಲಾವಿದರು ಧರಿಸುವ ಎಲ್ಲಾ ಭೂಷಣಗಳೂ ಭಾರವಾಗಿದ್ದುವು. ಕಲಾವಿದರಿಗೆ ವೇಷ ಮಾಡಿ ಕುಣಿಯಲು ತೊಡಕಾಗುತ್ತಿತ್ತು. ಅಲ್ಲದೆ ಭೂಷಣ ಗಳು ಒಂದಕ್ಕೊಂದು ಹೊಂದಿಕೆಯಾಗುತ್ತಿರಲಿಲ್ಲ. ಹಿಂದಿನ ಕಾಲದ ಸಂಪನ್ಮೂಲಗಳ ಕೊರತೆಯೂ ಇದಕ್ಕೆ ಕಾರಣವಿರಬಹುದು. ಭಾರವನ್ನು ಕಡಿಮೆಗೊಳಿಸಿ, ವೇಷಭೂಷಣಗಳಲ್ಲಿರುವ ಅಸಮತೋಲನವನ್ನು ಹೋಗಲಾಡಿಸಬೇಕೆಂದು ಮಯ್ಯರು ನಿರ್ಧರಿಸಿದರು. ಮೂಡಬಿದಿರೆ ಮಾಧವ ಶೆಟ್ಟರು ಮೇಕಪ್ ಅಂದವಾಗಿ ಹೇಳಿಕೊಟ್ಟಿದ್ದರು. ಡ್ರೆಸ್‍ನ ಬಗ್ಗೆಯೂ ಮಯ್ಯರಿಗೆ ಮಾಹಿತಿ ನೀಡಿದರು. ಅಲ್ಲದೆ ಮೇಳಗಳಿಗೆ ಭೇಟಿ ನೀಡಿ ಮೇಳದ ಯಜಮಾನರುಗಳಲ್ಲಿ, ಕಲಾವಿದರಲ್ಲಿ ಮಾಹಿತಿ ಸಂಗ್ರಹಿಸಿದರು. ತಾನು ನಿರ್ವಹಿಸುವ ವೇಷಕ್ಕೆ ಬೇಕಾದ ವೇಷಭೂಷಣಗಳನ್ನು ತಯಾರಿಸಿ ಧರಿಸಿ ತೃಪ್ತಿಪಟ್ಟರು. ಪ್ರಯೋಗಕ್ಕೆ ಮೊದಲು ತನ್ನನ್ನು ತಾನು ಬಳಸಿಕೊಂಡು ನಂತರ ತಂಡವೊಂದಕ್ಕೆ ಬೇಕಾಗುವಷ್ಟು ಸಿದ್ಧಪಡಿಸಿದರು.

ವೇಷಧಾರಿಯಾದ ಶ್ರೀ ವೆಂಕಟೇಶ ಮಯ್ಯರು 1996ರಲ್ಲಿ ಡ್ರೆಸ್‍ನ ಮಾಲೀಕರಾದರು. ಶ್ರೀ ಗುರು ನೃಸಿಂಹ ಕಲಾಮಂಡಳಿ, ಖಂಡಿಗೆ, ಆರ್ಯಾಪು ಎಂಬ ಸಂಸ್ಥೆಯನ್ನು ಆರಂಭಿಸಿ ಸಂಘದ ಆಟ, ಶಾಲಾ ಕಾಲೇಜುಗಳ ಕಾರ್ಯಕ್ರಮಕ್ಕೆ ಮೇಕಪ್ ಮತ್ತು ವೇಷಭೂಷಣಗಳ ವ್ಯವಸ್ಥೆಯನ್ನೂ ಮಾಡಿದರು. 2004ರಿಂದ 2006ರ ತನಕ ಡ್ರೆಸ್‍ನ ಪಾಲಿಗೆ ಸುವರ್ಣಯುಗವೆಂದೂ ಆರು ತಿಂಗಳುಗಳಲ್ಲಿ ಸರಿಯಾಗಿ ನಿದ್ದೆ ಮಾಡಿದ್ದು ಕೇವಲ ಬೆರಳೆಣಿಕೆಯ ದಿನಗಳೆಂದೂ ಮಯ್ಯರು ಹೇಳುತ್ತಾರೆ. 1997ರಲ್ಲಿ ಡ್ರೆಸ್ ಬಾಡಿಗೆ ನೀಡಲು, ಪ್ರಥಮ ವರ್ಷವೇ 58 ಕಾರ್ಯಕ್ರಮಗಳು ಸಿಕ್ಕಿತ್ತು. ಮೇಕಪ್ ವಿಚಾರದಲ್ಲಿ ಮಯ್ಯರು ಎತ್ತಿದ ಕೈ. ಸವ್ಯಸಾಚಿ. ಎರಡೂ ಕೈಗಳಲ್ಲಿ ಸರಾಗವಾಗಿ ಒಂದೇ ವೇಗದಲ್ಲಿ ಗೆರೆ ಎಳೆಯಬಲ್ಲರು.

ಆದರೆ ಇತ್ತೀಚಿನ ದಿನಗಳಲ್ಲಿ ಆ ವೇಗ ಇಲ್ಲವೆಂದೂ, ನಿರ್ವಹಣೆಯ ವೆಚ್ಚ ಹೆಚ್ಚುತ್ತಿದ್ದು ನೇಪಥ್ಯ ಕಲಾವಿದರು ಸಿದ್ಧರಾಗುತ್ತಿಲ್ಲ. ಕೃಷಿಯ ಜೊತೆ ಇದನ್ನೂ ನಿರ್ವಹಿಸಲು ಕಷ್ಟವಾಗುತ್ತಿದೆ. ಮೊದಲು ದಿನಕ್ಕೆ ಐದಾರು ಕಾರ್ಯಕ್ರಮಗಳನ್ನು ವಹಿಸಿಕೊಂಡದ್ದಿದೆ. ಆದರೆ ಈಗ ದಿನಕ್ಕೆ ಒಂದೇ ಕಾರ್ಯಕ್ರಮ. ತೀರಾ ಅನಿವಾರ್ಯವಾದರೆ, ಸಂಘಟಕರಿಗೆ ತೊಂದರೆಯಾಗಬಾರದು, ಪ್ರದರ್ಶನ ನಿಲ್ಲಬಾರದು ಎಂಬುದರಿಂದ ಎರಡು ಕಾರ್ಯಕ್ರಮ ಒಪ್ಪಿಕೊಳ್ಳುತ್ತೇನೆ ಎಂದು ಮಯ್ಯರು ಹೇಳುತ್ತಾರೆ. ವೇಷಭೂಷಣಗಳ ನಿರ್ವಹಣೆ, ರಿಪೇರಿ, ವಸ್ತ್ರಗಳನ್ನು ಹೊಲಿಯುವುದು, ಬೇಗಡೆ ಬದಲಿಸಿ ಹೊಳಪು ಮಾಡುವುದು ಈ ಎಲ್ಲಾ ವಿಚಾರಗಳಲ್ಲಿ ಮಯ್ಯರು ನಿಷ್ಣಾತರಾಗಿದ್ದಾರೆ. ವೇಷಭೂಷಣಗಳ ಮಾಲಕರಾದರೂ ಅದರಿಂದ ಇವರು ಶ್ರೀಮಂತರಾಗಿಲ್ಲ. ಹೊಂದಾಣಿಕೆ ಮತ್ತು ಕಷ್ಟಗಳಿಗೆ ಸ್ಪಂದಿಸುವ ಗುಣ ಮಯ್ಯರಿಗಿದೆ. ಕೆಲವು ಪ್ರದರ್ಶನಗಳಿಗೆ ಉಚಿತವಾಗಿ ಡ್ರೆಸ್ ನೀಡಿರುತ್ತಾರೆ.

ಮಕ್ಕಳ ಯಕ್ಷಗಾನ ತಂಡವನ್ನು ಕಟ್ಟಿ ಶ್ರೀ ಉಂಡೆಮನೆ ಶ್ರೀಕೃಷ್ಣ ಭಟ್ಟರಿಂದ ನಾಟ್ಯ ತರಬೇತಿಯನ್ನು ಕೊಡಿಸಿ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. ಶ್ರೀ ವೆಂಕಟೇಶ ಮಯ್ಯರು ಸಾರಣೆ, ಮರದ ಕೆಲಸ, ಟಿವಿ ಮತ್ತು ರೇಡಿಯೋ ರಿಪೇರಿ, ಕೃಷಿ ವಾಹನ ರಿಪೇರಿ ಹೀಗೆ ಹಲವಾರು ಕೆಲಸಗಳನ್ನು ಮಾಡಬಲ್ಲ ಸಾಹಸಿ. ಕೆಲವು ದೇವಳದ ಗರ್ಭಗುಡಿಯ ಸಾರಣೆಯ ಕೆಲಸವನ್ನೂ ಮಾಡಿರುತ್ತಾರೆ. ಇತ್ತೀಚಿಗೆ ಪಾಣಾಜೆ ರಣಮಂಗಲದ ಶ್ರೀ ಸುಬ್ರಹ್ಮಣ್ಯ ದೇವಳದ ಗರ್ಭಗುಡಿಯ ಸಾರಣೆ ಕೆಲಸವನ್ನು ಮಾಡಿರುತ್ತಾರೆ. ‘‘ಯಕ್ಷಗಾನದಿಂದ ಆರ್ಥಿಕವಾಗಿ ಶ್ರೀಮಂತನಾಗದಿದ್ದರೂ ಅನೇಕ ಜನರ ಸಂಪರ್ಕವಾಗಿದೆ. ಹಿರಿಯ, ಕಿರಿಯ ಕಲಾವಿದರ, ಸಂಘಟಕ, ವಿದ್ವಾಂಸರ ಒಡನಾಟ ಸಿಕ್ಕಿದೆ. ಆ ವಿಚಾರದಲ್ಲಿ ಸಂತೋಷವಿದೆ’’ ಎನ್ನುವ ಶ್ರೀ ಮಯ್ಯರು ಸಾಂಸಾರಿಕವಾಗಿಯೂ ತೃಪ್ತರು. ಪತಿಯ ಇಚ್ಛೆಯನ್ನರಿತು ನಡೆಯುವ ಪತ್ನಿ ವಿಜಯಲಕ್ಷ್ಮಿ. ಶ್ರೀ ವೆಂಕಟೇಶ ಮಯ್ಯ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀಧರ M.Com ಆಗಿ CA ಮಾಡುತ್ತಿದ್ದಾರೆ. ಮೈಸೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿ. ಕಿರಿಯ ಪುತ್ರ ಸುದರ್ಶನ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ M.Com ಸ್ನಾತಕೋತ್ತರ ಪದವೀಧರ. ಇವರಿಬ್ಬರೂ ಯಕ್ಷಗಾನ ಕಲಾವಿದರು.

ಲೇಖಕ: ರವಿಶಂಕರ್ ವಳಕ್ಕುಂಜ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments