ಶ್ರೀ ಅಶೋಕ್ ಭಟ್ ಅವರು 1961ನೇ ಇಸವಿ ಡಿಸೆಂಬರ್ ಹದಿನೇಳರಂದು ಈ ಲೋಕದ ಬೆಳಕನ್ನು ಕಂಡವರು. ಇವರು ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಹೊನ್ನೆಗುಂಡಿ. ಶ್ರೀ ತಿಮ್ಮಣ್ಣ ಭಟ್ಟ ಮತ್ತು ಶ್ರೀಮತಿ ಯಶೋದಾ ದಂಪತಿಗಳ ಪುತ್ರರಿವರು. ಕೃಷಿ ಕುಟುಂಬದಲ್ಲಿ ಜನನ. ಬಾಲ್ಯದಲ್ಲಿ ಬಡತನದ ಬೇಗೆಯನ್ನು ಉಂಡಿದ್ದರು. ತಂದೆ ತಿಮ್ಮಣ್ಣ ಭಟ್ಟರು ಕೃಷಿಕರು. ಅಲ್ಲದೆ ನಾಟಕ ಮತ್ತು ಯಕ್ಷಗಾನ ಕಲಾವಿದರಾಗಿದ್ದರು. ಖ್ಯಾತ ಕಲಾವಿದ ಶಿರಳಗಿ ಶ್ರೀ ತಿಮ್ಮಪ್ಪ ಹೆಗಡೆಯವರು ಅಶೋಕ ಭಟ್ಟರಿಗೆ ತಾಯಿಯ ಕಡೆಯಿಂದ ಬಂಧುಗಳೇ ಆಗಿದ್ದರು. ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ಗೋಡೆ ಶ್ರೀ ನಾರಾಯಣ ಹೆಗಡೆಯವರು ಅಶೋಕ ಭಟ್ಟರ ಸೋದರಮಾವ. ಸ್ತ್ರೀಪಾತ್ರಧಾರಿ ಶಿರಳಗಿ ಶ್ರೀ ಭಾಸ್ಕರ ಜೋಷಿಯವರು, ದೊಡ್ಡಪ್ಪನ ಮಗ ಅಣ್ಣ. ಹೀಗೆ ತಂದೆಯ ಕಡೆಯಿಂದಲೂ, ತಾಯಿಯ ಕಡೆಯಿಂದಲೂ ಅಶೋಕ ಭಟ್ಟರಿಗೆ ಯಕ್ಷಗಾನದ ನಂಟು ರಕ್ತವಾಗಿಯೇ ಬಂದಿತ್ತು. ಬಂಧುಗಳೆಲ್ಲಾ ಕಲಾವಿದರೂ, ಯಕ್ಷಗಾನಾಸಕ್ತರೂ ಆಗಿದ್ದರು.
ಶ್ರೀ ಅಶೋಕ ಭಟ್ ಸಿದ್ಧಾಪುರ ಅವರು ಪಾತ್ರೋಚಿತವಾಗಿ ಅಭಿನಯಿಸುವ ಕಲೆಯನ್ನು ಸಿದ್ಧಿಸಿಗೊಂಡವರು. 1980ನೆಯ ಇಸವಿಯಿಂದ ತೊಡಗಿ ಸುಮಾರು ಮೂವತ್ತೊಂಬತ್ತು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಸವ್ಯಸಾಚಿಯಾಗಿ, ಅತ್ಯುತ್ತಮ ಪೋಷಕ ಪಾತ್ರಧಾರಿಯಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ತೆರೆದು ಕಾಣಿಸಿಕೊಳ್ಳುವ ಸ್ವಭಾವವನ್ನು ಹೊಂದಿದವರಲ್ಲ. ಪ್ರಚಾರದಿಂದ ಯಾವತ್ತೂ ಬಲುದೂರ ಉಳಿಯುತ್ತಾರೆ. ತನ್ನ ಪ್ರತಿಭಾ ವ್ಯವಹಾರದಿಂದಲೇ ರಂಗದಲ್ಲಿ ಅಭಿನಯಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಾತ್ರವನ್ನು ಧರಿಸಿ ರಂಗಪ್ರವೇಶಿಸಿದ ತಕ್ಷಣ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಕಲೆಯು ಇವರಿಗೆ ಕರಗತ. ಕಲಾಬದುಕನ್ನು ಹಳ್ಳಿಯಿಂದ ಆರಂಭಿಸಿದರೂ ಕೊಂಡದಕುಳಿಯವರ ತಂಡದ ಸದಸ್ಯನಾಗಿ ಸಿಂಗಾಪುರ್, ದುಬಾೈ, ಕುವೈಟ್, ಶಾರ್ಜಾಗಳಲ್ಲಿ ತನ್ನ ಪ್ರತಿಭೆಯನ್ನು ಮೆರೆಸಿದವರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಅಶೋಕ ಭಟ್ಟರು ಓದಿದ್ದು ಎಸ್.ಎಸ್.ಎಲ್.ಸಿ. ವರೆಗೆ. 5ನೇ ತರಗತಿ ವರೆಗೆ ಸಿದ್ಧಾಪುರ ಶಾಲೆಯಲ್ಲಿ. 7ನೇ ತರಗತಿ ವರೆಗೆ ತಲವಾಟ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಸಿದ್ಧಾಪುರದ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ. ಸಿದ್ಧಾಪುರ ತಾಲೂಕಿನ ಕೊಳಗಿ, ಶಿರಳಗಿ, ಹಣಜೀಬೈಲು ಮೊದಲಾದ ಗ್ರಾಮಗಳ ಮನೆ ಮಂದಿಗಳೆಲ್ಲಾ ಕಲಾವಿದರೂ, ಕಲಾಭಿಮಾನಿಗಳೇ ಆಗಿದ್ದು, ಅಶೋಕ ಭಟ್ಟರು ಯಕ್ಷಗಾನದ ವಾತಾವರಣದಲ್ಲೇ ಬೆಳೆಯುವಂತಾಗಿತ್ತು. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಪ್ರದರ್ಶನಗಳನ್ನು ನೋಡುತ್ತಿದ್ದರು. ಸಹಜವಾಗಿ ಕಲಾಸಕ್ತಿಯು ಮೊಳಕೆಯೊಡೆದಿತ್ತು. ವೇಷ ಮಾಡುವ ಅವಕಾಶವೂ ಇತ್ತು. ಆದರೂ ಸರಿಯಾಗಿ ಕಲಿಯದೆ ರಂಗವೇರಬಾರದು ಎಂಬ ವಿಚಾರವನ್ನು ತಿಳಿದಿದ್ದರು. ಕಲಿತೇ ವೇಷ ಮಾಡುವೆನೆಂಬ ನಿರ್ಣಯವನ್ನು ಮಾಡಿದ್ದರು.
ಅಶೋಕ ಭಟ್ಟರ ಈ ನಿರ್ಧಾರವು, ಯಕ್ಷಗಾನ ಕಲಾವಿದನಾಗಲು ಬಯಸುವವನಿಗೆ, ‘ಅಭ್ಯಾಸವನ್ನು ಮಾಡದೆಯೇ ರಂಗವೇರುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಡಿ’ ಎಂಬ ಸಂದೇಶವನ್ನು ಸಾರುತ್ತದೆ. ಪ್ರದರ್ಶನಗಳನ್ನು ನೋಡಿ ಮನೆಗೆ ಬಂದು ಗೆಳೆಯರ ಜತೆ ಕುಣಿಯುವ ಅಭ್ಯಾಸವೂ ರೂಢಿಯಾಗಿತ್ತು. ಅದೂ ಮುಖಕ್ಕೆ ಬಣ್ಣ ಬಳಿದು. ಅಮ್ಮನ ಸೀರೆ, ಅಡಿಕೆ ಮರದ ಹಾಳೆ ಮೊದಲಾದ ವಸ್ತುಗಳನ್ನು ವೇಷಭೂಷಣಗಳಾಗಿ ಬಳಸಿಕೊಳ್ಳುತ್ತಿದ್ದರು. ಹತ್ತಿರವೆಲ್ಲೂ ತರಬೇತಿ ಕೇಂದ್ರವಿಲ್ಲದ ಕಾರಣ ನಾಟ್ಯ ಕಲಿಯಲು ಅವಕಾಶವಾಗಿರಲಿಲ್ಲ. ಹೈಸ್ಕೂಲು ವಿದ್ಯಾರ್ಜನೆಯ ನಂತರ ಸಿದ್ಧಾಪುರ ಸಮೀಪದ ಹಾಳದಕಟ್ಟಾ ವೇದಪಾಠ ಶಾಲೆಯನ್ನು ಸೇರಿ ಮಂತ್ರ ಕಲಿತಿದ್ದರು. ಯಕ್ಷಗಾನ ಕಲಾವಿದನಾಗಿಯೇ ಸಿದ್ಧ ಎಂಬ ಛಲವಿತ್ತು. ಕುಣಿತ ಕಲಿಯುವುದಕ್ಕಾಗಿ ಉಡುಪಿ ಯಕ್ಷಗಾನ ಕಲಿಕಾ ಕೇಂದ್ರದತ್ತ ಸಾಗಿದರು. ಕೋಟ ಶಿವರಾಮ ಕಾರಂತರು ಸಂದರ್ಶಕರಾಗಿದ್ದರು. ಕಲಿಕಾಸಕ್ತರಾಗಿ ಇನ್ನೂರರಷ್ಟು ಮಂದಿಗಳು ಬಂದಿದ್ದರೂ ಅವರಲ್ಲಿ ಹತ್ತು ಮಂದಿಗಳನ್ನು ಮಾತ್ರ ಆಯ್ಕೆ ಮಾಡುತ್ತಿದ್ದರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಅಶೋಕ ಭಟ್ಟರು ಆಯ್ಕೆಯಾಗಿದ್ದರು. ಕಲಿಕಾ ಕೇಂದ್ರದಲ್ಲಿ ಹೇರಂಜಾಲು ಶ್ರೀ ವೆಂಕಟರಮಣ ಗಾಣಿಗರಿಂದ ನಾಟ್ಯವನ್ನು ಅಭ್ಯಸಿಸಿದರು. ಆಗ ನೀಲಾವರ ಶ್ರೀ ರಾಮಕೃಷ್ಣಯ್ಯ ಹಾಗೂ ಕೋಟ ಶ್ರೀ ಮಹಾಬಲ ಕಾರಂತರು ಕೇಂದ್ರದ ಹಿಮ್ಮೇಳ ಗುರುಗಳಾಗಿದ್ದರು. ತರಬೇತಿಯ ಅವಧಿ ಒಂದು ವರ್ಷ. ಗೆಜ್ಜೆ ಕಟ್ಟುವುದು, ನಾಟ್ಯ, ಬಣ್ಣಗಾರಿಕೆ, ಮಾತಿಗಾರಿಕೆ, ಅಭಿನಯ, ಕಿರೀಟವೇಷ ಕಟ್ಟುವುದು ಹೀಗೆ ಎಲ್ಲಾ ವಿಚಾರಗಳ ಬಗ್ಗೆ ತರಬೇತಿ ಕೊಡುತ್ತಿದ್ದರು. ತರಬೇತಿಯೆಂದರೆ ಹೀಗೆಯೇ ಇರಬೇಕು. ಇದುವೇ ಪರಿಪೂರ್ಣ ತರಬೇತಿ ಎನಿಸಲ್ಪಡುತ್ತದೆ. ಕಲಿಕಾ ಕೇಂದ್ರದ ತರಬೇತಿಯ ಸಂದರ್ಭ ನಾಲ್ಕು ಪ್ರದರ್ಶನಗಳು ನಡೆದಿತ್ತು. ಇವರು ಬಾಲಗೋಪಾಲರಾಗಿ ರಂಗಪ್ರವೇಶ ಮಾಡಿದ್ದರು. ಅಶೋಕ ಭಟ್ಟರು ಉಡುಪಿ ಕಲಿಕಾ ಕೇಂದ್ರದ 1978-1979ನೇ ಸಾಲಿನ ವಿದ್ಯಾರ್ಥಿ. ಪ್ರಭಾಕರ ಹೆಗಡೆ ಹಣಜೀಬೈಲು ಮತ್ತು ಕೇಶವ ಶೆಟ್ಟಿಗಾರ್ ಕಿನ್ನಿಗೋಳಿ ಕಲಿಕಾ ಕೇಂದ್ರದಲ್ಲಿ ಸಹಪಾಠಿಗಳಾಗಿದ್ದರು. ಅಶೋಕ ಭಟ್ಟರೂ, ಕೇಂದ್ರದ ಸಹಪಾಠಿ ಪ್ರಭಾಕರ ಹೆಗಡೆಯವರೂ ಸಾಲಿಗ್ರಾಮ ಮೇಳದಲ್ಲಿ ಜತೆಯಾಗಿಯೇ ತಿರುಗಾಟ ಮಾಡಿದವರು. ಕೇಶವ ಶೆಟ್ಟಿಗಾರ್ ತೆಂಕಿನಲ್ಲಿ ಪುಂಡು ಮತ್ತು ಸ್ತ್ರೀಪಾತ್ರಧಾರಿಗಳಾಗಿ ಒಳ್ಳೆಯ ಹೆಸರನ್ನು ಗಳಿಸಿದ್ದರು. ಕೆಲವು ವರ್ಷಗಳ ಹಿಂದೆ ಅವರು ನಮ್ಮನ್ನಗಲಿ ಅವ್ಯಕ್ತ ಲೋಕದತ್ತ ಸಾಗಿದ್ದರು. ತರಬೇತಿಯು ಮುಗಿದ ಬಳಿಕ ಯಕ್ಷಗಾನವನ್ನೇ ವೃತ್ತಿಯನ್ನಾಗಿ ಸ್ವೀಕರಿಸುವ ಮನ ಮಾಡಿದ್ದರು. ಮೇಳದ ತಿರುಗಾಟ ನಡೆಸುವುದೆಂಬ ನಿರ್ಣಯವನ್ನೂ ಕೈಗೊಂಡರು.
ವೃತ್ತಿಕಲಾವಿದನಾಗಿ ಸಿದ್ಧಾಪುರ ಅಶೋಕ ಭಟ್ಟರ ಮೊದಲ ತಿರುಗಾಟ ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ- ಕೆರೆಮನೆ ಈ ಮೇಳದಲ್ಲಿ. ಈ ತಂಡದಲ್ಲಿ ಆರು ವರ್ಷಗಳ ತಿರುಗಾಟ ನಡೆಸಿದ್ದರು. ಮೊದಲ ವರ್ಷ ಪೀಠಿಕಾ ಸ್ತ್ರೀವೇಷ ಮತ್ತು ಪ್ರಸಂಗಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುವ ಅವಕಾಶವಾಗಿತ್ತು. ಕಲಾವಿದನಾಗಿ ಅಶೋಕ ಭಟ್ಟರ ಕ್ಷಿಪ್ರ ಬೆಳವಣಿಗೆಯನ್ನು ಮೇಳದ ಆಡಳಿತವು ಗುರುತಿಸಿತ್ತು. 3ನೇ ವರ್ಷ ವೃಷಕೇತ, ಪ್ರದ್ಯುಮ್ನ ಮೊದಲಾದ ಪಾತ್ರಗಳನ್ನು ಮಾಡುವ ಅವಕಾಶವು ಸಿಕ್ಕಿತ್ತು. ಮೂರನೆಯ ವರ್ಷ ಅಭಿಮನ್ಯು, ಬಭ್ರುವಾಹನ, ಕಂಸವಧೆ ಪ್ರ್ರಸಂಗದ ಶ್ರೀಕೃಷ್ಣ ಮೊದಲಾದ ವೇಷಗಳನ್ನು ನಿರ್ವಹಿಸಿದರು. ಶಂಭು ಹೆಗಡೆಯವರ ಸಂಚಾಲಕತ್ವ. ಅಪರೂಪಕ್ಕೆ ಶಿವರಾಮ ಹೆಗಡೆಯವರೂ ಬರುತ್ತಿದ್ದರಂತೆ. ನೆಬ್ಬೂರು, ಕೆಪ್ಪೆಕೆರೆ ಸುಬ್ರಾಯ ಭಾಗವತರು, ಪ್ರಭಾಕರ ಭಂಡಾರಿ, ಸತ್ಯನಾರಾಯಣ ಭಂಡಾರಿ, ಕೆರೆಮನೆ ಮಹಾಬಲ ಹೆಗಡೆ, ಗೋಡೆ ನಾರಾಯಣ ಹೆಗಡೆ, ದಂಟಕಲ್ ಗಣಪತಿ ಹೆಗಡೆ, ಕುಂಜಾಲು ರಾಮಕೃಷ್ಣ, ಕೊಕ್ಕಡ ಈಶ್ವರ ಭಟ್, ಬೆಳಿಯೂರು ಕೃಷ್ಣಮೂರ್ತಿ ಮೊದಲಾದವರು ಸಹ ಕಲಾವಿದರಾಗಿದ್ದರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಆಗ ಬಿಳಿಯೂರು ಅವರು ಪುಂಡುವೇಷಗಳಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದರು. ಶ್ರೇಷ್ಠ ಕಲಾವಿದರ ಒಡನಾಟವು ಅಶೋಕ ಭಟ್ಟರಿಗೆ ಕಲಾವಿದನಾಗಿ ಬೆಳೆಯಲು ಅನುಕೂಲವಾಗಿತ್ತು. ಶಂಭು ಹೆಗಡೆಯವರ ಭೀಷ್ಮ, ಸುಧನ್ವ, ಕಂಸನ ಪಾತ್ರಗಳಿಗೆ ಕ್ರಮವಾಗಿ ಅಭಿಮನ್ಯು, ಕುವಲೆ, ಶ್ರೀಕೃಷ್ಣನಾಗಿ ಅಭಿನಯಿಸಿದ್ದರು. ಶಂಭು ಹೆಗಡೆಯವರಿಂದ ಪ್ರಶಂಸೆಯೂ ಸಿಕ್ಕಿತ್ತು. ಕಂಸವಿವಾಹ-ವಧೆ ಪ್ರಸಂಗದ ಆಸ್ತಿಪ್ರಾಸ್ತಿಯರಾಗಿ ಕಸೆವೇಷಗಳನ್ನೂ ಮಾಡಿದ್ದರು. ಶಂಭು ಹೆಗಡೆಯವರು ಇಡಗುಂಜಿ ಮೇಳವನ್ನು ನಿಲ್ಲಿಸಿದಾಗ ಬಿ. ವಿ. ಶೆಟ್ಟರು ಅಮೃತೇಶ್ವರೀ ಮೇಳವನ್ನು ಪುನರಚಿಸಲು ಪ್ರಯತ್ನಿಸಿದ್ದರು. ಅವರಿಗೆ ಮೇಳದ ನಿರ್ವಹಣೆಯ ವಿಚಾರದಲ್ಲಿ ಪಳ್ಳಿ ಸೋಮನಾಥ ಹೆಗ್ಡೆಯವರ ಸಹಕಾರವೂ ಇತ್ತು. ಅಮೃತೇಶ್ವರೀ ಮೇಳದಲ್ಲಿ ಮೂರು ತಿಂಗಳು ತಿರುಗಾಟ ನಡೆದಾಗ ಶಿರಳಗಿ ತಿಮ್ಮಪ್ಪ ಹೆಗಡೆ ಮತ್ತು ಅಶೋಕ ಭಟ್ಟರನ್ನೂ ಪಳ್ಳಿ ಸೋಮನಾಥ ಹೆಗಡೆಯವರು ಸಾಲಿಗ್ರಾಮ ಮೇಳಕ್ಕೆ ಕರೆಸಿಕೊಂಡಿದ್ದರು. ಆ ವರುಷದಿಂದ ತೊಡಗಿ ನಿರಂತರ ಹದಿನಾಲ್ಕೂವರೆ ವರ್ಷಗಳ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ.
ಅಮೃತೇಶ್ವರೀ ಮೇಳವೂ ಸೇರಿದಂತೆ ಈ ಸಂದರ್ಭಗಳಲ್ಲಿ ಜಿ. ಆರ್. ಕಾಳಿಂಗ ನಾವಡ, ಶಬರಾಯರು, ರಾಮಕೃಷ್ಣ ಮಂದರ್ತಿ, ಶಂಕರ ಭಾಗವತ, ವಾಸುದೇವ ಸಾಮಗ, ಚಿಟ್ಟಾಣಿ, ಜಲವಳ್ಳಿ, ಯಾಜಿ, ಐರೋಡಿ, ಅರಾಟೆ, ರಾಮನಾೈರಿ, ಮುಖ್ಯಪ್ರಾಣ, ಶಿರಳಗಿ ಭಾಸ್ಕರ ಜೋಷಿ, ಕೊಂಡದಕುಳಿ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ಗುಡಿಗಾರ, ತೀರ್ಥಹಳ್ಳಿ ಗೋಪಾಲಾಚಾರ್, ಧರ್ಮಸ್ಥಳ ರತ್ನಾಕರ, ಶಶಿಕಾಂತ ಶೆಟ್ಟಿ, ರಾಜೀವ ಶೆಟ್ಟಿ ಮೊದಲಾದವರ ಒಡನಾಟ ಸಿಕ್ಕಿತ್ತು. ತೀರ್ಥಹಳ್ಳಿ ಗೋಪಾಲಾಚಾರ್ ಅವರು ಪ್ರಧಾನ ಪುಂಡುವೇಷಕ್ಕೆ. ಅಶೋಕ ಭಟ್ಟರದು 3ನೇ ಪುಂಡುವೇಷ.
‘‘ಶಂಭು ಹೆಗಡೆಯವರಂತೆ, ಕಾಳಿಂಗ ನಾವಡರೂ ನಾನು ಕಲಾವಿದನಾಗಿ ಬೆಳೆಯಲು ಕಾರಣರು. ಈರ್ವರೂ ಅವಕಾಶಗಳನ್ನಿತ್ತು ಪ್ರೋತ್ಸಾಹಿಸಿದ್ದಾರೆ. ಶಂಭು ಹೆಗಡೆಯವರು ಯಕ್ಷಗಾನವು ಹೀಗೆಯೇ ಇರಬೇಕೆಂದು ಹೇಳುತ್ತಿದ್ದರು. ಪ್ರೌಢ ಸಂಭಾಷಣೆಗಳನ್ನು ಸಹಕಲಾವಿದರಿಂದ ನಿರೀಕ್ಷಿಸುತ್ತಿದ್ದರು. ಅಸಭ್ಯತೆಯನ್ನು ಸಹಿಸುತ್ತಿರಲಿಲ್ಲ. ಅವರೇ ನಮಗೆ ಆದರ್ಶರು. ಅವರು ಸಾಗಿದ ದಾರಿಯೇ ನಮಗೆ ಅನುಸರಣೀಯವು. ಎಲ್ಲಾ ತರದ ವೇಷಗಳನ್ನು ಮಾಡಲು ಕಾಳಿಂಗ ನಾವಡರು ಕಾರಣರು. ಭಯಗೊಂಡರೆ ಧೈರ್ಯ ತುಂಬಿ ಪ್ರೋತ್ಸಾಹಿಸುತ್ತಿದ್ದರು. ಆಗುವುದಿಲ್ಲ ಎಂದು ಕುಳಿತರೆ ಹೇಗೆ? ಪ್ರಯತ್ನ ಮಾಡು. ಆಗುತ್ತದೆ. ನಾನಿದ್ದೇನೆ ಎಂದು ಹೇಳಿ ಉತ್ಸಾಹವನ್ನು ತುಂಬುತ್ತಿದ್ದರು. ಖಳ ನಾಯಕ, ನಾಯಕ, ಸ್ತ್ರೀಪಾತ್ರ, ಹಾಸ್ಯಪಾತ್ರಗಳನ್ನು ನನ್ನಿಂದ ಕಾಳಿಂಗ ನಾವಡರು ಮಾಡಿಸಿದರು.’’ ಶಂಭು ಹೆಗಡೆಯವರಿಗೆ ಮತ್ತು ಕಾಳಿಂಗ ನಾವಡರಿಗೆ ಇದು ಅಶೋಕ ಭಟ್ಟರ ಗೌರವದ ನುಡಿಗಳು.
ಗೋಪಾಲ ಆಚಾರ್ಯರು, ಪೆರ್ಡೂರು ಮೇಳಕ್ಕೆ ಸೇರಿದಾಗ ಅವರು ಧರಿಸುವ ಪಾತ್ರಗಳನ್ನು ಕೊರತೆಯಾಗದಂತೆ ನಿರ್ವಹಿಸಿ ಅಶೋಕ ಭಟ್ಟರು ಮೇಳಕ್ಕೆ ಆಪದ್ಬಾಂಧವರಾಗಿದ್ದರು. ಪುಂಡುವೇಷಗಳಲ್ಲಿ ಅಭಿಮನ್ಯು, ಬಭ್ರುವಾಹನ, ಶ್ರೀಕೃಷ್ಣ ಮೊದಲಾದ ಪಾತ್ರಗಳು ಹೆಸರನ್ನು ಕೊಟ್ಟಿತ್ತು. ಚೈತ್ರಪಲ್ಲವಿ ಪ್ರಸಂಗದಲ್ಲಿ ಕರಿಹುಡುಗಿ ಎಂಬ ಪಾತ್ರವು ಒಳ್ಳೆಯ ಹೆಸರನ್ನು ತಂದಿತ್ತಲ್ಲದೆ ಆ ವರ್ಷ ನೂರ ಐವತ್ತಕ್ಕೂ ಹೆಚ್ಚಿನ ಪ್ರದರ್ಶನ ಗಳನ್ನು ಕಂಡಿತ್ತು. ಸಾಲಿಗ್ರಾಮ ಮೇಳಕ್ಕೆ ಶೇಣಿ ಗೋಪಾಲಕೃಷ್ಣ ಭಟ್ಟರು ಅತಿಥಿ ಕಲಾವಿದರಾಗಿ ಬಂದಿದ್ದಾಗ ಅವರ ಕೈಲಾಸ ಶಾಸ್ತ್ರಿಗೆ ರಾಣಿಯಾಗಿ ಅಭಿನಯಿಸಿದ್ದರು. ಶೇಣಿಯವರೊಂದಿಗೆ ಹಲವಾರು ಬಾರಿ ವೇಷ ಮಾಡುವ ಅವಕಾಶವು ಸಿಕ್ಕಿತ್ತು. ರಾಮದಾಸ ಸಾಮಗರೊಂದಿಗೆ ತಾಳಮದ್ದಳೆಯಲ್ಲಿ ಅರ್ಥ ಹೇಳಲು ಅವಕಾಶ ಸಿಕ್ಕಿತ್ತು. ಸಾಲಿಗ್ರಾಮ ಮೇಳದ ತನ್ನ ಹದಿನೈದನೇ ತಿರುಗಾಟದ ಸಂದರ್ಭ- ಉಜಿರೆಯಲ್ಲಿ ‘ಧರ್ಮಸಂಕ್ರಾಂತಿ’ ಪ್ರಸಂಗ ನಡೆಯುತ್ತಿತ್ತು. ಕುಣಿಯುತ್ತಾ ಇರುವಾಗ ರಂಗದಲ್ಲಿ ಜಾರಿಬಿದ್ದು ಸೊಂಟನೋವು ಆರಂಭವಾಗಿತ್ತು. ಡಿಸ್ಕ್ ಸಮಸ್ಯೆಯಿಂದಾಗಿ ತಿರುಗಾಟವನ್ನು ನಿಲ್ಲಿಸಬೇಕಾಗಿ ಬಂದಿತ್ತು.
ಆರೋಗ್ಯ ಸಮಸ್ಯೆಯಿಂದ ಮೇಳದ ವ್ಯವಸಾಯದಿಂದ ದೂರವಾದ ಮೇಲೆ ಬಿಳಿಯೂರು ಕೃಷ್ಣಮೂರ್ತಿಯವರ ಜತೆ ಸೇರಿ ಸಾಗರದಲ್ಲಿ ಹೋಟೆಲ್ ಉದ್ಯಮವನ್ನು ನಡೆಸಿದ್ದರು. ಮೂರು ವರ್ಷಗಳ ಕಾಲ ಹೋಟೆಲ್ ನಡೆಸಿ ಬಳಿಕ ಗೋಕರ್ಣ ಬಸ್ ನಿಲ್ದಾಣದ ಬಳಿ ಸ್ಟೇಶನರಿ ಅಂಗಡಿಯನ್ನು ಓರ್ವನೇ ನಡೆಸಿದ್ದರು. ಈ ಸಂದರ್ಭಗಳಲ್ಲಿ ಅತಿಥಿ ಕಲಾವಿದನಾಗಿ ತೆರಳಿ ಕುಣಿತ ಕಡಿಮೆ ಇರುವ ವೇಷಗಳನ್ನು ಮಾಡುತ್ತಿದ್ದರು. 2000ನೇ ಇಸವಿಯಲ್ಲಿ ಶೈಲಜಾ ಅವರ ಜತೆ ವಿವಾಹ. ಅಶೋಕ ಭಟ್ಟರ ಪತ್ನಿ ಶ್ರೀಮತಿ ಶೈಲಜಾ ಪ್ರಸ್ತುತ ಶಿಕಾರಿಪುರದಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸೊರಬ ತಾಲೂಕು ಮುಟುಗುಪ್ಪೆಯ ಶ್ರೀ ಸೀತಾರಾಮ ರಾವ್ ಮತ್ತು ಭವಾನಿ ದಂಪತಿಗಳ ಪುತ್ರಿ.
ಅಶೋಕ ಭಟ್ಟರು 2004ರಲ್ಲಿ ಶಿರಸಿಯಲ್ಲಿ ಮೊಬೈಲ್ ಕ್ಯಾಂಟೀನ್ ನಡೆಸಿದ್ದರು. ಸರಳ, ಸಜ್ಜನರಾದ ಇವರು ಸಹನಾಗುಣವುಳ್ಳವರು. ಹೊಂದಾಣಿಕೆಯ ಸ್ವಭಾವ. ಎಲ್ಲಾ ವೇಷಗಳನ್ನು ಮಾಡಬಲ್ಲವರು. ಹಾಗಾಗಿ ಇವರು ಎಲ್ಲರಿಗೂ ಬೇಕು. ಕರೆಬಂದ ಎಲ್ಲಾ ತಂಡಗಳಲ್ಲೂ ಭಾಗವಹಿಸುತ್ತಾರೆ. ವೀರಾಂಜನೇಯ ಯಕ್ಷಗಾನ ಮಂಡಳಿ ಬಂಗಾರಮಕ್ಕಿ, ಪೂರ್ಣಚಂದ್ರ ಕಲಾಪ್ರತಿಷ್ಠಾನ ಕೊಂಡದಕುಳಿ, ಯಾಜಿ ಮಿತ್ರಮಂಡಳಿ, ಕಲಾಧರ ಯಕ್ಷಗಾನ ಬಳಗ ಜಲವಳ್ಳಿ, ನಾಟ್ಯಶ್ರೀ ಕಲಾತಂಡ ಶಿವಮೊಗ್ಗ ಇವರು ಭಾಗವಹಿಸುವ ಪ್ರಮುಖ ತಂಡಗಳು. ಅಶೋಕ ಭಟ್ಟರು ಸ್ವಪ್ರತಿಷ್ಠೆಗಾಗಿ ಹಪಹಪಿಸಿದವರಲ್ಲ. ಪ್ರದರ್ಶನ ಚೆನ್ನಾಗಿ ಆಗಬೇಕೆಂಬ ಮನೋಭಾವನೆಯನ್ನು ಹೊಂದಿದವರು. 2000ನೇ ಇಸವಿಯಲ್ಲಿ ಚಪ್ಪರಮನೆ ಶ್ರೀಧರ ಹೆಗಡೆ, ಶಂಕರ ಭಾಗವತ, ದಂಟಕಲ್ ಸತೀಶ ಹೆಗಡೆ, ಸಂಜಯ ಬಿಳಿಯೂರು ಇವರೊಂದಿಗೆ ಸೇರಿ ಸ್ನೇಹ ಬಳಗ- ಶಿರಸಿ ಎಂಬ ಸಂಸ್ಥೆಯ ಹುಟ್ಟಿಗೂ ಕಾರಣರಾಗಿದ್ದರು. ಈ ತಂಡವು ಯಕ್ಷದೃಶ್ಯ-ಲಾಸ್ಯ-ಹಾಸ್ಯ ಎಂಬ ತಲೆಬರಹದಡಿ ಬೆಂಗಳೂರು ಮೈಸೂರು ಮೊದಲಾದ ಕಡೆ ಅನೇಕ ಪ್ರದರ್ಶನಗಳನ್ನು ನೀಡಿತ್ತು. ಈ ಸಂಸ್ಥೆಯು ಈಗಲೂ ಕಾರ್ಯಾ ಚರಿಸುತ್ತಿದೆ.
ಸಿದ್ಧಾಪುರದಲ್ಲಿ ‘ಕಲಾಸಿಂಚನ’ ಎಂಬ ತಂಡವನ್ನು ರಚಿಸಿದ್ದು ಸದ್ರಿ ತಂಡವು ಈಗಲೂ ಪ್ರದರ್ಶನಗಳನ್ನು ನೀಡುತ್ತಿದೆ. ಹಣಜೀಬೈಲು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ರಚನೆಗೆ ಕಾರಣಕರ್ತರಾದವರಲ್ಲಿ ಅಶೋಕ ಭಟ್ಟರೂ ಒಬ್ಬರು. ಶಾಲಾ ಮಕ್ಕಳಿಗೆ ಮತ್ತು ಮಹಿಳಾ ತಂಡಗಳಿಗೆ ತರಬೇತಿಯನ್ನು ನೀಡಿ ಪ್ರದರ್ಶನಗಳನ್ನು ಕೊಡಿಸಿದ್ದಾರೆ. ತಂಡವಲ್ಲದೆ ವ್ಯಕ್ತಿಗತವಾಗಿಯೂ ಅನೇಕರಿಗೆ ತರಬೇತಿ ನೀಡಿ ಅವರಿಂದ ವೇಷಗಳನ್ನು ಮಾಡಿಸಿದ್ದಾರೆ. ಉಪ್ಪಿನಕುದ್ರುವಿನ ಶ್ರೀ ರಾಜಶೇಖರ ಹಂದೆಯವರು ಮತ್ತು ಶ್ರೀ ಸುಧಾಕರ ರಾವ್ ಹೆಗ್ಗೋಡು ಇವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ, ಹೆಗ್ಗೋಡು ಕೇಡಲಸರದ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿಯ ಪ್ರದರ್ಶನಗಳಲ್ಲೂ ಅಶೋಕ ಭಟ್ಟರು ಭಾಗವಹಿಸುತ್ತಾರೆ. ರಾಜಶೇಖರ ಹಂದೆಯವರು ನೈಜೀರಿಯಾದಲ್ಲಿ ಉದ್ಯೋಗಿಯಾಗಿದ್ದು, ಶ್ರೀ ಸುಧಾಕರ ರಾಯರ ಜತೆ ಸೇರಿ ವರ್ಷಕ್ಕೆ ಅನೇಕ ಪ್ರದರ್ಶನಗಳನ್ನು ಏರ್ಪಡಿಸುವ ಮಹನೀಯರುಗಳು.
ಈರ್ವರೂ ಯಕ್ಷಗಾನ ಕಲೆಯನ್ನು ಮತ್ತು ಕಲಾವಿದರನ್ನು ಅತ್ಯಂತ ಗೌರವಿಸುವವರು. ಪ್ರದರ್ಶನಗಳನ್ನು ನಡೆಸುವುದರ ಜತೆಗೆ ವರ್ಷಕ್ಕೆ ಹತ್ತಾರು ಕಲಾವಿದರನ್ನು ಸನ್ಮಾನಿಸಿ ಗೌರವಿಸುವ ಗುಣವನ್ನೂ ಹೊಂದಿದ್ದಾರೆ. ಇವರಿಬ್ಬರೂ ಕಲಾಸಂಘಟಕರು, ಕಲಾಪೋಷಕರಾಗಿ ಗುರುತಿಸಿಕೊಂಡಿರುತ್ತಾರೆ. ಡಿಸೆಂಬರ್ ಜನವರಿ ತಿಂಗಳಲ್ಲಿ ಇವರು ಅನೇಕ ಪ್ರದರ್ಶನಗಳನ್ನು ನಡೆಸಿ, ಕಲಾವಿದರನ್ನು ಸನ್ಮಾನಿಸುವುದು, ಗೌರವನಿಧಿ ಸಮರ್ಪಣೆ ಮೊದಲಾದ ಕಲಾ, ಸಮಾಜಮುಖೀ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಕಾರ್ಯಕ್ರಮಗಳಲ್ಲಿ ಅಶೋಕ ಭಟ್ಟರು ಖಾಯಂ ಆಗಿ ಭಾಗವಹಿಸುತ್ತಾರೆ. ಶ್ರೀ ಅಶೋಕ್ ಭಟ್ ಸಿದ್ಧಾಪುರ, ಶೈಲಜಾ ದಂಪತಿಗಳ ಪುತ್ರ ಚಿ| ಅಪೂರ್ವ ಸಿದ್ಧಾಪುರ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ.