Saturday, January 18, 2025
Homeಯಕ್ಷಗಾನತನ್ನದೇ ಶೈಲಿಯಿಂದ ಹಾಸ್ಯ ಪಾತ್ರಗಳಿಗೆ ಮೆರುಗು ನೀಡಿದ ಹಾಸ್ಯ ವಿಶಾರದ - ಶ್ರೀ ಬಂಟ್ವಾಳ ಜಯರಾಮ ಆಚಾರ್ಯ 

ತನ್ನದೇ ಶೈಲಿಯಿಂದ ಹಾಸ್ಯ ಪಾತ್ರಗಳಿಗೆ ಮೆರುಗು ನೀಡಿದ ಹಾಸ್ಯ ವಿಶಾರದ – ಶ್ರೀ ಬಂಟ್ವಾಳ ಜಯರಾಮ ಆಚಾರ್ಯ 

ಪ್ರತಿಯೊಂದು ಪ್ರಸಂಗದಲ್ಲೂ ಬೇರೆ ಬೇರೆ ಸ್ವಭಾವದ ವೇಷಗಳನ್ನು ಹಾಸ್ಯಗಾರನು ನಿರ್ವಹಿಸಲೇಬೇಕು. ಇದು ಅಷ್ಟೊಂದು ಸುಲಭವಲ್ಲ. ಪಾತ್ರದ ಸ್ವಭಾವ, ಪ್ರಸಂಗಜ್ಞಾನವನ್ನು ತಿಳಿದವನಿಗೆ ಮಾತ್ರ ಸಾಧ್ಯ. ಆಲಸಿಯಾಗದೆ ದೈಹಿಕವಾಗಿಯೂ, ಮಾನಸಿಕವಾಗಿಯೂ ಚುರುಕಾಗಿದ್ದವನಿಗೆ ಮಾತ್ರ ಸಾಧ್ಯ. ವೇಗವಾಗಿ, ವೈವಿಧ್ಯಮಯವಾಗಿ, ಪಾತ್ರೋಚಿತವಾಗಿ ಬಣ್ಣ ಹಾಕಿ, ವೇಷ ಮಾಡಿಕೊಂಡು ರಂಗಪ್ರವೇಶ ಮಾಡುವ ಕಲೆಯೂ ಅವನಿಗೆ ಕರಗತವಾಗಿರಬೇಕು. ಹೀಗೆ ಸದಾ ಅಧ್ಯಯನಶೀಲರಾಗಿ, ಕಲಾಸೇವೆಯನ್ನು ಮಾಡುತ್ತಾ ಹಾಸ್ಯಗಾರರಾಗಿ ರಂಜಿಸಿದವರು ಅನೇಕರು. ಅವರಲ್ಲೊಬ್ಬರು ಶ್ರೀ ಬಂಟ್ವಾಳ ಜಯರಾಮ ಆಚಾರ್ಯರು.

ಹಾಸ್ಯಗಾರ ಶ್ರೀ ಬಂಟ್ವಾಳ ಜಯರಾಮ ಆಚಾರ್ಯರು ಪ್ರಸ್ತುತ ಶ್ರೀ ಹನುಮಗಿರಿ ಮೇಳದ ಕಲಾವಿದರು. ಸರಳ, ಸಜ್ಜನ, ನಿಗರ್ವಿ, ವಿನಯವಂತ ಹಾಸ್ಯಗಾರರು. ಇವರು ಜನಿಸಿದ್ದು 12-10-1957ರಂದು. ತಂದೆ ಬಂಟ್ವಾಳ ಗಣಪತಿ ಆಚಾರ್ಯ, ತಾಯಿ ಶ್ರೀಮತಿ ಭವಾನಿ ಅಮ್ಮ. ಗಣಪತಿ ಆಚಾರ್ಯರು ತನ್ನ ಕುಲವೃತ್ತಿಯಾದ ಚಿನ್ನದ ಕೆಲಸ ಮಾಡುವುದು ಮಾತ್ರವಲ್ಲದೆ ಆ ಕಾಲದ ಉತ್ತಮ ಕಲಾವಿದರಾಗಿದ್ದರು. ಹಾಸ್ಯಗಾರರಾಗಿ ಕಲಾಸೇವೆಯನ್ನು ಮಾಡುತ್ತಿದ್ದವರು. ಬಳ್ಳಂಬೆಟ್ಟು, ಹೆರ್ಗ, ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.

ವಿದೂಷಕ ಜಯರಾಮ ಆಚಾರ್ಯರು ಕಲಿತದ್ದು ಬಂಟ್ವಾಳ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಬೋರ್ಡ್ ಶಾಲೆ). ಶಾಲಾ ದಿನಗಳಲ್ಲಿ ತೀರ್ಥರೂಪರಿಂದ ತನ್ನ ಕುಲಕಸುಬನ್ನು ಅಭ್ಯಾಸ ಮಾಡಿದ್ದರು. ಎಳವೆಯಲ್ಲೇ ಇವರಿಗೆ ಯಕ್ಷಗಾನಾಸಕ್ತಿ. ಬಂಟ್ವಾಳ ಆಸುಪಾಸಿನಲ್ಲಿ ನಡೆಯುತ್ತಿದ್ದ ಆಟ ತಾಳಮದ್ದಳೆ ಪ್ರದರ್ಶನಗಳನ್ನು ತಪ್ಪದೆ ನೋಡುತ್ತಿದ್ದರು.

ತಂದೆಯವರ ಜತೆಯೂ ಯಕ್ಷಗಾನ ಪ್ರದರ್ಶನಗಳಿಗೆ ಹೋಗುತ್ತಿದ್ದರು. ತಂದೆಯವರ ಜತೆಯಾಗಿಯೇ ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟವನ್ನು ನಡೆಸಿ ವೇಷವನ್ನೂ ಮಾಡಿದರು.

ಹೀಗೆ ಯಕ್ಷಗಾನ ಪ್ರದರ್ಶನಗಳನ್ನು ಶ್ರದ್ಧೆಯಿಂದ ನೋಡಿದ ಪರಿಣಾಮದಿಂದ ನಾನಿಂದು ಕಲಾವಿದನಾದೆ. ಪ್ರಸಂಗ ಮಾಹಿತಿ, ವೇಷಗಳ ಸ್ವಭಾವವೇನು ಎಂಬುದನ್ನು ತಿಳಿಯಲು ನನಗೆ ಅನುಕೂಲವಾಯಿತು ಎಂದು ಜಯರಾಮ ಆಚಾರ್ಯರು ಹೇಳುತ್ತಾ ತನ್ನ ಬಾಲ್ಯದ ದಿನಗಳನ್ನು ನೆನಪಿಸುತ್ತಾರೆ. ಶಾಸ್ತ್ರೀಯವಾಗಿ ನಾಟ್ಯಾಭ್ಯಾಸ ಮಾಡುವ ಮೊದಲೇ ಬಂಟ್ವಾಳ ಜಯರಾಮ ಆಚಾರ್ಯರು ಅಮ್ಟಾಡಿ, ಸೊರ್ನಾಡು, ಸುಂಕದಕಟ್ಟೆ, ಕಟೀಲು ಮೇಳಗಳಲ್ಲಿ 4 ತಿರುಗಾಟ ನಡೆಸಿದ್ದರು! ಇದು ಇವರ ಪ್ರತಿಭೆಗೆ ಸಾಕ್ಷಿ.

1974-75ನೇ ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ `ಲಲಿತ ಕಲಾ ಕೇಂದ್ರ’ದಲ್ಲಿ ನಾಟ್ಯಾರ್ಜನೆಗಾಗಿ ಸೇರಿಕೊಂಡರು. ಅಲ್ಲಿ ಗುರುಗಳಾಗಿದ್ದವರು ಖ್ಯಾತ ಕಲಾವಿದರೂ, ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿದ ಕೀರ್ತಿಗೆ ಪಾತ್ರರೂ ಆದ ಶ್ರೀ ಪಡ್ರೆ ಚಂದು.

ಸದ್ಯ ಖ್ಯಾತ ಕಲಾವಿದರಾದ ಕರ್ಗಲ್ಲು ವಿಶ್ವೇಶ್ವರ ಭಟ್, ಸಬ್ಬಣಕೋಡಿ ಕೃಷ್ಣ ಭಟ್, ಸಬ್ಬಣಕೋಡಿ ರಾಮ ಭಟ್, ವಸಂತ ಗೌಡ ಕಾಯರ್ತಡ್ಕ, ವೇಣೂರು ಸದಾಶಿವ ಕುಲಾಲ್, ಹಳುವಳ್ಳಿ ಗಣೇಶ ಭಟ್, ಕೆ. ಎಂ. ಕೃಷ್ಣ (ಬಣ್ಣದ ಮಹಾಲಿಂಗಜ್ಜನವರ ಮಗ) ಮೊದಲಾದವರು ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ಬಂಟ್ವಾಳ ಜಯರಾಮ ಆಚಾರ್ಯರ ಸಹಪಾಠಿಗಳಾಗಿದ್ದರು

ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ನಾಟ್ಯ ಕಲಿತ ಜಯರಾಮ ಆಚಾರ್ಯರು ಅದೇ ವರ್ಷ ಕಟೀಲು ಮೇಳಕ್ಕೆ ಕಲಾವಿದನಾಗಿ ಸೇರಿಕೊಂಡರು. ಬಲಿಪ ನಾರಾಯಣ ಭಾಗವತರು ಭಾಗವತರಾಗಿದ್ದ ಮೇಳದಲ್ಲಿ 4 ವರ್ಷಗಳ ಕಾಲ ತಿರುಗಾಟ ನಡೆಸಿದರು. ಕೋಡಂಗಿ, ಬಾಲ ಗೋಪಾಲರ ವೇಷಗಳನ್ನು ಪೂರ್ವರಂಗದಲ್ಲಿ ನಿರ್ವಹಿಸುತ್ತಾ, ಪ್ರಸಂಗದಲ್ಲೂ ಸಣ್ಣಪುಟ್ಟ ವೇಷಗಳನ್ನು ಮಾಡುತ್ತಾ, ನಿದ್ದೆ ಮಾಡದೆ ಪ್ರದರ್ಶನಗಳನ್ನು ನೋಡುತ್ತಾ ಹಂತ ಹಂತವಾಗಿ ಬೆಳೆದು ಈಗ ಉತ್ತಮ ಹಾಸ್ಯಗಾರರಾಗಿ ಹೆಸರು ಗಳಿಸಿದ್ದಾರೆ. ಕಟೀಲು ಮೇಳದಲ್ಲಿ 4 ವರ್ಷ ತಿರುಗಾಟ ನಡೆಸಿದ

ನಂತರ ಡಾ. ಶ್ರೀಧರ ಭಂಡಾರಿಯವರ ಸಂಚಾಲಕತ್ವದ ಪುತ್ತೂರು ಮೇಳದಲ್ಲಿ ತಿರುಗಾಟ. ಅಲ್ಲಿ ಶ್ರೇಷ್ಠ ಹಾಸ್ಯಗಾರರಾಗಿದ್ದ ವೀರಕಂಭ ತಿಮ್ಮಪ್ಪ ಕುಲಾಲರ ಒಡನಾಟವೂ ಇವರಿಗೆ ಸಿಕ್ಕಿತ್ತು. ಅವರ ಜತೆ ಹಾಸ್ಯಗಾರನಾಗಿಯೂ, ಮತ್ತೆ ಪ್ರಧಾನ ಹಾಸ್ಯಗಾರನಾಗಿಯೂ ಕಲಾಸೇವೆಯನ್ನು ನಡೆಸಿದರು. ನಂತರ ಸುಂಕದಕಟ್ಟೆ ಮೇಳದಲ್ಲಿ ಸುಜನ ಸುಳ್ಳ (ಖ್ಯಾತ ಹಾಸ್ಯಗಾರರು) ಅವರ ಜತೆ ಒಂದು ವರುಷ ತಿರುಗಾಟ ನಡೆಸಿದರು. ತರುವಾಯ ಮತ್ತೆ ಕಟೀಲು ಮೇಳದಲ್ಲಿ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರ ಜತೆಯಲ್ಲಿ ಕಲಾಸೇವೆಯನ್ನು ಮಾಡಿದರು.

ಮುಂದಿನ 5 ವರ್ಷಗಳ ಕಾಲ ಮತ್ತೆ ಪುತ್ತೂರು ಮೇಳದಲ್ಲಿ ಹಾಸ್ಯಗಾರನಾಗಿ ಕಲಾಸೇವೆಯನ್ನು ಮಾಡಿದ ಬಂಟ್ವಾಳ ಜಯರಾಮ ಆಚಾರ್ಯರು ಮತ್ತು ಕರ್ನೂರು ಕೊರಗಪ್ಪ ರೈಗಳ ಸಂಚಾಲಕತ್ವದ ಕದ್ರಿ ಮೇಳವನ್ನು ಸೇರಿಕೊಂಡರು. ಅಲ್ಲಿ ಇವರಿಗೆ ಕೋಳ್ಯೂರು ರಾಮಚಂದ್ರ ರಾವ್, ಕ್ರಿಶ್ಚನ್ ಬಾಬು, ಡಿ. ಮನೋಹರ ಕುಮಾರ್, ಮೂಡುಬಿದಿರೆ ಮಾಧವ ಶೆಟ್ರು, ಕುಡ್ತಡ್ಕ ಬಾಬು, ಸರಪಾಡಿ ಅಶೋಕ ಶೆಟ್ರು ಮೊದಲಾದವರ ಜತೆ ರಂಗದಲ್ಲಿ ಅಭಿನಯಿಸುವ ಅವಕಾಶ ಬಂತು. ನಂತರ ಕುಂಬಳೆ ಮೇಳದಲ್ಲಿ ತಿರುಗಾಟ. ಕುಂಬಳೆ ದಾಸಪ್ಪ ರೈಗಳ ನೇತೃತ್ವ. ಹರಿದಾಸ ಶ್ರೀ ರಾಮದಾಸ ಸಾಮಗ, ಪೆರುವಾಯಿ ನಾರಾಯಣ ಶೆಟ್ಟಿ, ಅರುವ ನಾರಾಯಣ ಶೆಟ್ಟಿ ಮೊದಲಾದವರೊಂದಿಗೆ ಅಭಿನಯಿಸುವ ಅವಕಾಶ.

ನಂತರ ಬಂಟ್ವಾಳ ಜಯರಾಮ ಆಚಾರ್ಯರು ಕಲಾಸೇವೆಯನ್ನು ಮಾಡಿದ್ದು ಸುರತ್ಕಲ್ಲು ಮೇಳದಲ್ಲಿ (2 ವರ್ಷ). ಅಗರಿ ರಘುರಾಮ ಭಾಗವತ, ಪದ್ಯಾಣ ಗಣಪತಿ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ಕೊಕ್ಕಡ ಈಶ್ವರ ಭಟ್, ಶಿವರಾಮ ಜೋಗಿ ಮೊದಲಾದವರ ಜತೆ. ತದನಂತರ ಖ್ಯಾತ ಕಲಾವಿದರಾದ ಶ್ರೀ ಡಿ. ಮನೋಹರ ಕುಮಾರರ ಸಂಚಾಲಕತ್ವದ ಕದ್ರಿ ಮೇಳದಲ್ಲಿ 11 ವರುಷಗಳ ತಿರುಗಾಟ. ದಿನೇಶ ಅಮ್ಮಣ್ಣಾಯರ ಭಾಗವತಿಕೆ. ಅರುವ ಕೊರಗಪ್ಪ ಶೆಟ್ರು, ಪುಳಿಂಚ ರಾಮಯ್ಯ ಶೆಟ್ರು, ಮನೋಹರ ಕುಮಾರರೊಂದಿಗೆ ಹಾಸ್ಯಗಾರರಾಗಿ ಕಲಾಸೇವೆ.

ಬಳಿಕ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ, ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳು ಭಾಗವತರಾಗಿದ್ದ ಕಟೀಲು 3ನೇ ಮೇಳದಲ್ಲಿ ಬಂಟ್ವಾಳ ಜಯರಾಮ ಆಚಾರ್ಯರು ಹಾಸ್ಯಗಾರರಾಗಿ ರಂಜಿಸಿದರು. ಮತ್ತೆ 2 ವರುಷಗಳ ಕಾಲ ಎಡನೀರು ಮೇಳ, 9 ವರ್ಷಗಳ ಕಾಲ ಹೊಸನಗರ ಮೇಳ, ಪ್ರಸ್ತುತ 2017ರಿಂದ ಹನುಮಗಿರಿ ಮೇಳದಲ್ಲಿ. ಹೀಗೆ, 50 ವರುಷಗಳ ಕಲಾಸೇವೆ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರದ್ದು. ಕಲಾಪೋಷಕ, `ಸಂಪಾಜೆ ಯಕ್ಷೋತ್ಸವ’ದ ರೂವಾರಿ ಶ್ರೀ ಟಿ. ಶ್ಯಾಮ ಭಟ್ಟರನ್ನೂ, ಎಲ್ಲಾ ಕಲಾಪೋಷಕರನ್ನೂ, ಕಲಾಭಿಮಾನಿಗಳನ್ನೂ ಗೌರವಿಸುವ ಬಂಟ್ವಾಳ ಹಾಸ್ಯಗಾರರು ಕಲಾವಿದನಾಗಿ ನಾನು ಅತ್ಯಂತ ತೃಪ್ತನಿದ್ದೇನೆ ಎಂದು ಹೇಳುತ್ತಾರೆ.

ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪಡೆದ ಶ್ರೀಯುತರನ್ನು ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ಇವರ ಪತ್ನಿ ಶ್ಯಾಮಲಾ ಸಂತುಷ್ಟ ಗೃಹಿಣಿಯಾಗಿ ಮನೆಯನ್ನು ನಡೆಸುತ್ತಿದ್ದಾರೆ. ಬಂಟ್ವಾಳ ಜಯರಾಮ ಆಚಾರ್ಯ ದಂಪತಿಗಳಿಗೆ ಇಬ್ಬರು ಮಕ್ಕಳು. ಹಿರಿಯಾಕೆ ಕು| ವರ್ಷಾ. ಶಿವಮೊಗ್ಗದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಳೆ. ಕಿರಿಯವ ವರುಣ್ ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ (KPT) ಇಂಜಿನಿಯರಿಂಗ್ ಡಿಪ್ಲೊಮಾ ವಿದ್ಯಾರ್ಥಿ.

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments