ಈ ತಲೆಬರಹ ಓದುವಾಗಲೇ ಇಲ್ಲಿ ಯಾವ ವಿಷಯದ ಬಗೆಗೆ ಬರೆದಿರಬಹುದು ಎಂಬುದನ್ನು ಎಲ್ಲರೂ ನಿಖರವಾಗಿ ಊಹಿಸಬಹುದು. 2014ನೇ ಇಸವಿಯಲ್ಲಿ ನಡೆದ ಕಲ್ಲುಗುಂಡಿ ಸಂಪಾಜೆ ಯಕ್ಷೋತ್ಸವವು ಒಂದು ಅಭೂತಪೂರ್ವ ಘಟನೆಗೆ ಸಾಕ್ಷಿಯಾಯಿತು.
ಪ್ರತಿ ವರ್ಷದಂತೆ ನಡೆಯುವ ಯಕ್ಷೋತ್ಸವ ಆ ಬಾರಿ ನಿಗದಿಯಾದದ್ದು 01. 11. 2014ರಂದು. ಅಪರಾಹ್ನ 2 ಘಂಟೆಗೆ ಸಂಪನ್ನಗೊಂಡ ಆ ದಿನದ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪೇಜಾವರ, ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಎಡನೀರು, ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಹಣ್ಯ ಇವರ ಘನ ಉಪಸ್ಥಿತಿಯಿತ್ತು. ಸಭಾ ಕಾರ್ಯಕ್ರಮದ ನಂತರ 5 ಘಂಟೆಯಿಂದ ಯಕ್ಷಗಾನ ಬಯಲಾಟ ಆರಂಭವಾಗಿತ್ತು. ಆ ಬಾರಿಯ ಯಕ್ಷೋತ್ಸವದಲ್ಲಿ ಆಡಲಾದ ಪ್ರಸಂಗಗಳು ನಾಲ್ಕು. ಶಿವಕಾರುಣ್ಯ, ಭೀಷ್ಮ ಪ್ರತಿಜ್ಞೆ, ವಂಶವಾಹಿನಿ ಮತ್ತು ಅಮೃತಕಲಶ ಎಂಬ ಪ್ರಸಂಗಗಳಲ್ಲಿ ಮೊದಲೆರಡು ಪ್ರಸಂಗಗಳು ಮುಗಿದ ನಂತರ ಸುಮಾರು ಮಧ್ಯರಾತ್ರಿಯ ಸಮಯದಲ್ಲಿ ವಂಶವಾಹಿನಿ ಪ್ರಸಂಗದ ಪ್ರದರ್ಶನ ಆರಂಭವಾಯಿತು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಈ ಪ್ರಸಂಗದ ಮುಖ್ಯ ಪಾತ್ರಗಳಾದ ಸುದರ್ಶನ ಮತ್ತು ಶತ್ರುಜಿತನ ಯುದ್ಧದ ಭಾಗದ ಸನ್ನಿವೇಶದಲ್ಲಿ ಅದ್ಭುತವೊಂದು ನಡೆದುಹೋಯಿತು. ಯಕ್ಷೋತ್ಸವ 01. 11. 2014 ರಂದು ಆಗಿದ್ದರೂ ಈ ದೃಶ್ಯ ರಂಗದಲ್ಲಿ ಬರುವಾಗ 02. 11. 2014ರ ಬೆಳಗಿನ ಜಾವದ ಸಮಯವಾಗಿತ್ತು. ಒಬ್ಬನೇ ರಾಜನ ಇಬ್ಬರು ಮಡದಿಯರ ಮಕ್ಕಳ ನಡುವೆ ನಡೆದ ಕಲಹದಲ್ಲಿ ಪಾತ್ರಧಾರಿಗಳಾಗಿ ಶ್ರೀ ಚಂದ್ರಶೇಖರ ಧರ್ಮಸ್ಥಳ (ಶತ್ರುಜಿತ) ಮತ್ತು ಶ್ರೀ ದಿವಾಕರ ರೈ ಸಂಪಾಜೆ (ಸುದರ್ಶನ) ಇವರುಗಳು ಭಾಗವಹಿಸಿದ್ದರು. ವೈಯುಕ್ತಿಕವಾಗಿ ಇಬ್ಬರು ಕಲಾವಿದರೂ ಸ್ನೇಹಿತರಾದರೂ ಆ ದಿನ ವೇದಿಕೆಯಲ್ಲಿ ಪಾತ್ರೋಚಿತ ಸನ್ನಿವೇಶ ಮತ್ತು ಕಥಾ ಸಾರದಂತೆ ಶತ್ರುಗಳಾಗಿದ್ದರು!
ಯುದ್ಧದ ಸನ್ನಿವೇಶದಲ್ಲಿ ಅಲ್ಲಿ ನೆರೆದಿದ್ದ ಅಸಂಖ್ಯಾತ ಪ್ರೇಕ್ಷಕರೆದುರು ಇಬ್ಬರಿಗೂ ಎಲ್ಲಿಲ್ಲದ ಹುರುಪು ಬಂದಿರಬೇಕು. ನಾಟ್ಯದ ವರಸೆ ವೈವಿಧ್ಯಗಳು ಇನ್ನಿಲ್ಲದಂತೆ ಮೂಡಿಬಂದುವು. ಇಬ್ಬರಿಗೂ ಸ್ಪರ್ಧೆಯ ಮನೋಭಾವ ಮೂಡತೊಡಗಿತು. ದಿಗಿಣಗಳು ರಂಗಸ್ಥಳದಲ್ಲಿ ದೂಳೆಬ್ಬಿಸಿದುವು. ಯುದ್ಧದ ಕೊನೆಯ ಸನ್ನಿವೇಶದಲ್ಲಂತೂ ಪ್ರೇಕ್ಷಕರು ಉಸಿರು ಬಿಗಿಹಿಡಿವ ಗಂಭೀರವಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದರೆ ಅದು ಅತಿಶಯೋಕ್ತಿಯಾಗಲಾರದು. ಯುದ್ಧದ ಕೊನೆಯ ಹಂತಕ್ಕೆ ಬಂದಾಗ ಒಂದು ಪದ್ಯಕ್ಕೆ ಇಬ್ಬರೂ ಸುಮಾರು ತಲಾ 50ರಷ್ಟು ದಿಗಿಣಗಳನ್ನು ಹಾರಿ ಗಿರಕಿ ತಿರುಗಲು ಸುರುಮಾಡಿದರು.
ಇಬ್ಬರಲ್ಲಿ ಒಬ್ಬರು ಗಿರಕಿ ತಿರುಗಲು ಪ್ರಾರಂಭಿಸಿದರು ಎಂದು ಊಹಿಸಿದರೆ ಅದು ತಪ್ಪು. ಬದಲಾಗಿ ಇಬ್ಬರೂ ಜೊತೆಯಾಗಿ ತಿರುಗಲು(ಗಿರಕಿ) ತೊಡಗಿದರು. ಹಾಗೆ ಪ್ರಾರಂಭಗೊಂಡ ಸುತ್ತು ತಿರುಗುವಿಕೆ ನಿಮಿಷ ಪೂರ್ತಿಯಾದರೂ ನಿಲ್ಲಲಿಲ್ಲ. ಅಂದು ಇಬ್ಬರಲ್ಲೂ ಯಾಕೋ ಸ್ಪರ್ಧಾ ಮನೋಭಾವ ಅಧಿಕವಾಗಿದ್ದಂತೆ ತೋರಿತು. ‘ನೀ ಬಿಟ್ಟರೂ ನಾ ಬಿಡೆ’ ಎಂಬ ಛಲವೋ ಅಥವಾ ಸ್ಪರ್ಧೆಯೋ ಎಂಬುದನ್ನು ತಿಳಿಯದಂತೆ ತೊಡಗಿದ ಈ ಸ್ಪರ್ಧೆ ನಿಮಿಷ ಹತ್ತಾದರೂ ನಿಲ್ಲುವ ಲಕ್ಷಣಗಳು ಗೋಚರಿಸಲಿಲ್ಲ. ಹತ್ತು ನಿಮಿಷಗಳ ನಂತರ ಮುಗಿಲು ಮುಟ್ಟಿದ ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆಗಳ ಸದ್ದುಗಳ ನಡುವೆ ಚೆಂಡೆ ಮದ್ದಲೆಗಳ ನಿನಾದಗಳು ಅಡಗಿ ಹೋದಂತೆ ಭಾಸವಾಯಿತು. ಆದರೂ ಅವರ ತಿರುಗುವಿಕೆಯ ನಾಟ್ಯ ನಿಲ್ಲಲಿಲ್ಲ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಮತ್ತೂ ಮತ್ತೂ ಮುಂದುವರಿಯುತ್ತಾ 15 ನಿಮಿಷಗಳ ವರೆಗೆ ತಲುಪಿತು. ಪ್ರೇಕ್ಷಕರಾಗಿದ್ದವರಿಗೆ ಸಿಳ್ಳು, ಕೇಕೆ, ಚಪ್ಪಾಳೆ ಹೊಡೆದು ಆಯಾಸವಾದಂತೆ ಅನಿಸತೊಡಗಿತು. ಆದರೆ ರಂಗದಲ್ಲಿದ್ದ ಕುಣಿಯುತ್ತಿದ್ದ ಈರ್ವರಿಗೂ ಆಯಾಸವಾದಂತೆ ಕಾಣಿಸಲಿಲ್ಲ. ಚೆಂಡೆಯ ಬದಲಾದುದು ಮಾತ್ರವಲ್ಲ, ಹೆಚ್ಚಾಯಿತು. ಒಂದು ಚೆಂಡೆಯ ಬದಲು ಇಬ್ಬರು ವಾದಕರಿಂದ ಎರಡು ಚೆಂಡೆಗಳ ವಾದನ. ಆದರೂ ಶತ್ರುಜಿತ, ಸುದರ್ಶನರ ಗಿರಕಿ ನಿಲ್ಲಲಿಲ್ಲ. ಚೆಂಡೆವಾದಕರ ಸಂಖ್ಯೆ ಮೂರಕ್ಕೇರಿತು. ಆದರೂ ಏನೂ ವ್ಯತ್ಯಾಸವಾಗಲಿಲ್ಲ. ಚಂದ್ರಶೇಖರ ಧರ್ಮಸ್ಥಳ ಮತ್ತು ದಿವಾಕರ ರೈ ಸಂಪಾಜೆ ಇನ್ನೂ ತಿರುಗುತ್ತಲೇ ಇದ್ದರು. ನೋಡುತ್ತಿದ್ದ ಸಾವಿರಾರು ಪ್ರೇಕ್ಷಕರಿಗೆ ತಲೆ ತಿರುಗಿದ ಅನುಭವವಾದರೂ ಕಲಾವಿದರಿಗೇನೂ ಆಗಲಿಲ್ಲ.
ಯಾಕೋ ಏನೋ ಇದು ವಿಷಮಕ್ಕೆ ತಲುಪುವ ಮೊದಲೇ ಸಂಘಟಕರ, ಹಿರಿಯರ ಸೂಚನೆ ಭಾಗವತರಿಗೆ ಸಿಕ್ಕಿರಬಹುದು. ಭಾಗವತರಿಂದ ಮುಂದಿನ ಪದ್ಯಕ್ಕೆ ಎತ್ತುಗಡೆಯೂ ಆಯಿತು. ಆದರೆ ಅಷ್ಟರಲ್ಲಾಗಲೇ ಅತ್ಯಪೂರ್ವ ದಾಖಲೆಯೊಂದು ಸೃಷ್ಟಿಯಾಗಿಬಿಟ್ಟಿತ್ತು. ಇಬ್ಬರು ಕಲಾವಿದರೂ ಸಾವಿರಕ್ಕೂ ಮಿಕ್ಕಿದ ಗಿರಕಿಗಳನ್ನು (1000 ಸುತ್ತು) ಪೂರೈಸಿಯಾಗಿತ್ತು. ಗೌರವಪೂರ್ವಕವಾಗಿ ಅಲ್ಲಿ ತುಂಬಿ ತುಳುಕುತ್ತಿದ್ದ ಪ್ರೇಕ್ಷಕರ ಗಡಣವೇ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿ ಕಲಾವಿದರನ್ನು ಪ್ರೋತ್ಸಾಹಿಸಿತು.
ಇದೊಂದು ಅತ್ಯಪೂರ್ವ ಅನುಭವ. ಸಂಪಾಜೆಯ ಯಕ್ಷೋತ್ಸವಗಳ ಇತಿಹಾಸದಲ್ಲಿ ದಾಖಲೆಯಾಗಿ ಉಳಿದುಬಿಡುತ್ತದೆ. ಸಂಪಾಜೆ ಯಕ್ಷೋತ್ಸವದಲ್ಲಿ ಮಾತ್ರವಲ್ಲದೆ ಈ ವರೆಗಿನ ಯಕ್ಷಗಾನದ ಸಮಗ್ರ ಇತಿಹಾಸದ ಪುಟಗಳನ್ನು ತೆರೆದು ನೋಡಿದರೂ ನಮಗೆ ಇಂತಹದೊಂದು ಘಟನೆ ಉಲ್ಲೇಖವಾದುದು ಕಂಡು ಬರುವುದಿಲ್ಲ. ಶ್ರೀ ರಾಧಾಕೃಷ್ಣ ಭಟ್, ಕೋಂಗೋಟ್ ಅವರು ಈ ವಿಡಿಯೋವನ್ನು ಯು ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದನ್ನು ಮತ್ತೆ ಮತ್ತೆ ನೋಡುವಾಗಲೂ ಉಸಿರು ಬಿಗಿ ಹಿಡಿದು ನೋಡುವ ಸನ್ನಿವೇಶ ಎದುರಾಗುತ್ತದೆ.
ಈ ಪ್ರದರ್ಶನದ ಬಗ್ಗೆ ಎರಡಭಿಪ್ರಾಯಗಳಿರಬಹುದು. ಕಲಾವಿದರ ಆರೋಗ್ಯ ದೃಷ್ಟಿಯಿಂದಲೂ ಆಕ್ಷೇಪ ಅಥವಾ ಯಕ್ಷಗಾನದ ಸಾಂಪ್ರದಾಯಿಕತೆಗೆ ಪೂರಕವಾಗಿಲ್ಲ ಎಂಬ ವಾದ ಇವೆರಡೂ ಇರಬಹುದು. ಅವುಗಳೇನೇ ಇರಲಿ. ಕಲಾವಿದರೀರ್ವರೂ ಕಾಲು ನೋವಿನ ಸಮಸ್ಯೆ ಕಾಡುತ್ತಿದ್ದರೂ ಈ ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ಇದು ಯಕ್ಷಗಾನ ಪ್ರೇಮಿಗಳು ಸದಾಕಾಲ ನೆನಪಿಡುವಂತೆ ಮಾಡಿದ ಪ್ರದರ್ಶನ ಎಂಬುದರಲ್ಲಿ ಎರಡು ಮಾತಿಲ್ಲ.