Friday, November 22, 2024
Homeಯಕ್ಷಗಾನಅನುಭವಿ ಕಲಾವಿದ - ಶ್ರೀ ಬಾಲಕೃಷ್ಣ ಶೆಟ್ಟಿ ತಾರಿಯಡ್ಕ

ಅನುಭವಿ ಕಲಾವಿದ – ಶ್ರೀ ಬಾಲಕೃಷ್ಣ ಶೆಟ್ಟಿ ತಾರಿಯಡ್ಕ

ಒಬ್ಬಳು ತಾಯಿ ಹೆತ್ತ ಎಲ್ಲಾ ಮಕ್ಕಳೂ ಒಂದೇ ತೆರನಿರುವುದಿಲ್ಲ. ಇರಬೇಕೆಂಬ ನಿಯಮವೂ ಇಲ್ಲ. ಕೆಲವರಿಗೆ ಅವಕಾಶಗಳು ಹೆಚ್ಚು. ಕೆಲವರು ಅವಕಾಶವಿಲ್ಲದ ಪ್ರತಿಭೆಗಳಾಗಿಯೇ ಉಳಿಯುವುದುಂಟು. ಕೆಲವರು ಶ್ರೇಷ್ಠ ಕಲಾವಿದನೆಂದು ಪ್ರಸಿದ್ಧಿಯನ್ನು ಪಡೆಯುತ್ತಾರೆ. ಕೆಲವರು ಎಲೆಮರೆಯ ಕಾಯಿಯಾಗಿ ಉಳಿಯುತ್ತಾರೆ. ತುಂಬಾ ಎತ್ತರಕ್ಕೇರದಿದ್ದರೂ ತನಗೆ ಬಂದ ಪಾತ್ರವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ತನ್ನ ಬೌದ್ಧಿಕ ಮಿತಿಯೊಳಗೆ ಆ ಪಾತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ಕಲಾವಿದನು ನೀಡಬಲ್ಲ. ಯಾವ ಪಾತ್ರ ಎನ್ನುವುದು ಮುಖ್ಯವಲ್ಲ ತಾನೆ? ಪಾತ್ರವನ್ನು ಹೇಗೆ ನಿರ್ವಹಿಸಿದ, ಎಷ್ಟು ಚೆನ್ನಾಗಿ ನಿರ್ವಹಿಸಿದ ಎಂಬುದು ನಿರ್ಣಯಕ್ಕಿರುವ ಮಾನದಂಡವಲ್ಲವೇ.
ಕಲಾವಿದರೆಲ್ಲರೂ ಕಲಾಮಾತೆಯ ಸುಪುತ್ರರು. ಕಲಾಸೇವೆಯನ್ನು ಮಾಡುವವರು. ಪ್ರಾಮಾಣಿಕವಾಗಿ ದುಡಿದಾಗ ಆ ಕಲಾವಿದನು ಖಂಡಿತಾ ಗೌರವಿಸಲ್ಪಡುತ್ತಾನೆ. ಪ್ರಚಾರವನ್ನು ಬಯಸದೆ ಮಾಧ್ಯಮಗಳಿಂದ ದೂರ ಉಳಿದು ಪ್ರಾಮಾಣಿಕ ವಾಗಿ ಕಲಾಕೈಂಕರ್ಯವನ್ನು ನಡೆಸುವ ಕಲಾವಿದರನೇಕರಿದ್ದಾರೆ. ಅಂತಹವರಲ್ಲೊಬ್ಬರು ಬಾಲಕೃಷ್ಣ ಶೆಟ್ಟಿ ತಾರಿಯಡ್ಕ. ಪ್ರಸ್ತುತ ಕಟೀಲು ಮೇಳದ ಕಲಾವಿದ.

ಬಾಲಕೃಷ್ಣ ಶೆಟ್ಟಿ ಇವರು ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ತಾರಿಯಡ್ಕ ಎಂಬಲ್ಲಿ ಕೊರಗಪ್ಪ ಶೆಟ್ಟಿ ಮತ್ತು ಮುತ್ತಕ್ಕ ದಂಪತಿಗಳಿಗೆ ಮಗನಾಗಿ 01-09-1963ರಲ್ಲಿ ಜನಿಸಿದರು. ಇವರದು ಬಡ ಕೃಷಿ ಕುಟುಂಬ. ಬಾಲಕೃಷ್ಣ ಶೆಟ್ಟರು ಕೊಡುಂಗಾಯಿ ಶಾಲೆಯಲ್ಲಿ 4ನೇ ತರಗತಿ ವರೇಗೆ ಓದಿದರು. ಬಡತನದಿಂದಾಗಿಯೆ ಶಾಲೆ ಬಿಡಬೇಕಾಯಿತು. ಓದನ್ನು ನಿಲ್ಲಿಸಿ ತಂದೆಗೆ ಕೃಷಿ ಕಾರ್ಯಗಳಲ್ಲಿ ಸಹಕರಿಸಿದರು. ಬಾಲಕೃಷ್ಣ ಶೆಟ್ಟರಿಗೆ ಯಕ್ಷಗಾನವೆಂದರೆ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಬಲು ಇಷ್ಟ. ವಿಟ್ಲ, ಮಂಚಿ ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ನೋಡುತ್ತಿದ್ದರು. ತಾಳಮದ್ದಳೆಗೂ ಹೋಗುತ್ತಿದ್ದರಂತೆ. ಸಹಜವಾಗಿ ಕಲಾವಿದನಾಗಬೇಕೆಂಬ ಆಸೆ ಮೂಡಿತು. ನಾಟ್ಯ ಕಲಿಯಬೇಕೆಂಬ ತುಡಿತವೂ ಹೆಚ್ಚಿತು.

1981ನೇ ಇಸವಿ ಧರ್ಮಸ್ಥಳ ಲಲಿತಕಲಾ ಕೇಂದ್ರಕ್ಕೆ ತೆರಳಿ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯ ಕಲಿತರು. ಆಗ ಹಿಮ್ಮೇಳಕ್ಕೆ ಗುರುಗಳಾಗಿದ್ದವರು ನೆಡ್ಲೆ ನರಸಿಂಹ ಭಟ್ಟರು. ಕಟೀಲು ಮೇಳ 2 ಇದ್ದ ಸಂದರ್ಭ. 2ನೇ ಮೇಳದಲ್ಲಿ 1 ವರ್ಷ ಕಲಾವಿದನಾಗಿಯೂ ಚೌಕಿಸಹಾಯಕನಾಗಿಯೂ ಕೆಲಸ ಮಾಡಿದರು. ಮುಂದಿನ ವರ್ಷ 3ನೇ ಮೇಳ ಪ್ರಾರಂಭವಾದಾಗ ವೇಷಧಾರಿಯಾಗಿ ಸೇರಿಕೊಂಡರು. ಆಗ ಭಾಗವತರಾಗಿದ್ದವರು ಸರಪಾಡಿ ಶ್ರೀ ಶಂಕರನಾರಾಯಣ ಕಾರಂತರು. ಗೇರುಕಟ್ಟೆ, ಗುಡ್ಡಪ್ಪ ಗೌಡ, ಸಂಜೀವ ಚೌಟರು, ಪೇಜಾವರ ಸತ್ಯಾನಂದ ರಾವ್, ಕೃಷ್ಣಮೂಲ್ಯ, ಉಮೇಶ್ ಹೆಬ್ಬಾರ್, ನಾರಾಯಣ ಮಣಿಯಾಣಿ, ಕುತ್ಯಾಳ ಬಾಬು ರೈಗಳ ಒಡನಾಟ ಇವರಿಗೆ ಸಿಕ್ಕಿತು.

3ನೇ ಮೇಳದಲ್ಲಿ 1 ವರ್ಷ ತಿರುಗಾಟ ನಡೆಸಿ ನಂತರ 9 ವರ್ಷ 1ನೇ ಮೇಳದಲ್ಲಿ ಕಲಾಸೇವೆಯನ್ನು ಮಾಡಿದರು. ಭಾಗವತರಾಗಿದ್ದವರು ಇರಾ ಗೋಪಾಲಕೃಷ್ಣ ಭಾಗವತರು. 1ನೇ ಮೇಳದಲ್ಲಿ ಕೊರಗಪ್ಪ ನಾಯ್ಕ ಕಾಟುಕುಕ್ಕೆ, ಕುಂಞಣ್ಣ ಶೆಟ್ಟಿ, ಸಂಪಾಜೆ ಶೀನಪ್ಪ ರೈ, ಕುಷ್ಠ ಗಾಣಿಗ, ಸುಣ್ಣಂಬಳ, ಬೆಳ್ಳಾರೆ ಮಂಜುನಾಥ ಭಟ್, ಗುಂಡಿಮಜಲು, ಕೇಶವ ಶೆಟ್ಟಿಗಾರ್, ಮುಚ್ಚೂರು ಉಮೇಶ ಶೆಟ್ರು ಮೊದಲಾದವರೊಂದಿಗೆ ತಿರುಗಾಟ ನಡೆಸಿದ ಶ್ರೀ ಬಾಲಕೃಷ್ಣ ಶೆಟ್ರು ಕಳೆದ 25 ವರುಷಗಳಿಂದ ಕಟೀಲು 4ನೇ ಮೇಳದಲ್ಲಿ ಕಲಾಮಾತೆಯ ಸೇವೆಯನ್ನು ಮಾಡುತ್ತಿದ್ದಾರೆ.

ಸದ್ರಿ ಮೇಳದಲ್ಲಿ ಪೂಂಜರು, ಕುಬಣೂರು, ಜೋಗಿ, ಶೀನಪ್ಪ ರೈ, ತೊಡಿಕಾನ, ಸುಬ್ರಾಯ ಹೊಳ್ಳರು, ವಿಷ್ಣುಶರ್ಮರು, ಕಾವು ಗಿರೀಶ, ಪೆರುವಾಯಿ, ಪೆರ್ಮುದೆ, ಉಮಾ ಮಹೇಶ್ವರ ಮೊದಲಾದವರೊಂದಿಗೆ ಕೊಡುಂಗಾಯಿ ಬಾಲಕೃಷ್ಣ ಶೆಟ್ಟರು ಕಲಾವಿದರಾಗಿ ಎಲ್ಲರ ಪ್ರೀತಿಗೆ ಪಾತ್ರರಾದರು. ಕೋಡಂಗಿ, ಬಾಲಗೋಪಾಲರು, ಮುಖ್ಯ ಸ್ತ್ರೀವೇಷ, ಪೀಠಿಕಾ ಸ್ತ್ರೀವೇಷಗಳನ್ನು (ಪೂರ್ವರಂಗ) ನಿರ್ವಹಿಸುತ್ತಾ ಹಂತ ಹಂತವಾಗಿ ಬೆಳೆದು ಕಲಾವಿದರಾದರು.

ಪುರಾಣಪ್ರಸಂಗಗಳ ಮಾಹಿತಿ ಇವರಿಗೆ ಅದ್ಭುತವಾದುದು. ಪ್ರಸಂಗ ನಡೆಗಳ ಬಗ್ಗೆ ಉತ್ತಮ ಮಾಹಿತಿಯಿರುವ ಅನುಭವೀ ಕಲಾವಿದರಿವರು. ಸ್ತ್ರೀವೇಷ, ಪುಂಡುವೇಷಗಳನ್ನು ನಿರ್ವಹಿಸುತ್ತಿದ್ದ ಇವರು ಈಗ ಕಿರೀಟ ವೇಷಧಾರಿ. ತನಗೆ ಬಂದ ಪಾತ್ರಗಳನ್ನು ನಿರ್ವಂಚನೆಯಿಂದ ನಿರ್ವಹಿಸುವ ಪ್ರಾಮಾಣಿಕ ಕಲಾವಿದರು. ಪ್ರಚಾರಪ್ರಿಯರಲ್ಲ. ತೆರೆದುಕೊಳ್ಳುವ ಸ್ವಭಾವ ಅಲ್ಲ. ಯಾವಾಗಲೂ ಮುಚ್ಚಿಕೊಳ್ಳುವ ಸ್ವಭಾವ. ತಾನಾಯಿತು ತನ್ನ ಕೆಲಸವಾಯಿತು ಎಂದು ವ್ಯವಹರಿಸುವವರು.

ಪತ್ನಿ ಶ್ರೇಯಾ, 1993ರಲ್ಲಿ ವಿವಾಹವಾದ ಬಾಲಕೃಷ್ಣ ಶೆಟ್ಟರು ಇಬ್ಬರು ಮಕ್ಕಳ ತಂದೆ. ಪುತ್ರಿ ಮಶೀಶಾ ಶೆಟ್ಟಿ ಪದವೀಧರೆ, ವಿವಾಹಿತೆ. ಪುತ್ರ ಯತಿನ್ ಪದವೀಧರ. ವಾಮಂಜೂರು ಲಿಂಗಮಾರು ಶಿವಣ್ಣ ಶೆಟ್ರ 50ನೇ ವರುಷದ ಬಯಲಾಟದ ಸಂದರ್ಭ ಮತ್ತು ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ ಸಂದರ್ಭ ಶ್ರೀ ಕಟೀಲು ಪದ್ಮನಾಭ ಇವರಿಂದ ಸನ್ಮಾನಿತರಾದ ಶ್ರೀ ಬಾಲಕೃಷ್ಣ ಶೆಟ್ಟಿ ಕೊಡುಂಗಾಯಿ ಇವರಿಗೆ ಕಲಾಮಾತೆಯ ಅನುಗ್ರಹ ಸದಾ ಇರಲೆಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆ.

ಲೇಖಕ : ರವಿಶಂಕರ್ ವಳಕ್ಕುಂಜ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments