ಪದ್ಯ: ಎನಲು ಸಂಜಯ ನುಡಿದ ಎನ್ನೊಳು| ಇನಿತು ವೈರಾಗ್ಯಗಳು ಏತಕೆ| ಜನಪನವನಿಯ ಸೋತ ಮೇಲನುವರದೊಳು ಯುದ್ಧದ|| ಮೊನೆಯೊಳೀವುದು ಕ್ಷತ್ರಿಯ| ವಂಶದ ಗುಣದ ಪದ್ಧತಿ ಸತ್ಯವಿರ್ದರೆ| ಜನಪನನುವಾಗಲಿ ಎನಲೈ ತಂದೆ ತಾನೆಂದ ||
ಸಂಜಯ (ತೆಕ್ಕಟ್ಟೆ ಆನಂದ ಮಾಸ್ತರ್): ಧರ್ಮರಾಜಾ, ಉದ್ಯೋಗ ಪರ್ವ ಇದು. ಉದ್ಯಮಶೀಲನಾಗಿರುವವನು ಕರುಣೆಯ ಉದ್ವೇಗಗಳಿಗೆ ಒಳಗಾಗಬಾರದು. ಭಾವವಿವಶನಾಗಿ ಯಾವನು ಜೀವನದಲ್ಲಿ ಮುಂದೆ ಸಾಗುತ್ತಾನೋ ಅವನು ಹೆಜ್ಜೆ ಹೆಜ್ಜೆಗೂ ಸೋಲನ್ನೇ ಅನುಭವಿಸುತ್ತಾನೆಯೇ ಹೊರತು ಗೆಲುವನ್ನಲ್ಲ. ನಿನ್ನ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದವರು ನಾವು. ನಾವು ಅಂದರೆ ನಾನು ಒಬ್ಬನೇ. ಹಾಗಾದರೆ ನಾವು ಅಂತ ಯಾಕೆ ಹೇಳಿದೆ? ನಿನ್ನ ತಂದೆ, ದೊಡ್ಡತಂದೆ ಅವರ ಸಮಕಾಲೀನನೂ ಒಡನಾಡಿಯೂ ನಾನು.
ಸಾಮಾಜಿಕವಾದ ಸ್ಥಾನಮಾನಗಳಲ್ಲಿ ನಮಗೆ ಭಿನ್ನತೆ ಇದ್ದರೂ ಆಂತರಂಗಿಕವಾದ ಸೌಹಾರ್ದ, ಸ್ನೇಹಗಳಲ್ಲಿ ನಮ್ಮಲ್ಲಿ ವಿಭಿನ್ನತೆಯಿರಲಿಲ್ಲ. ಹಾಗಾದ್ದರಿಂದಲೇ ಇಲ್ಲಿಗೆ ಬರುವಾಗ ನಾನು ಏನನ್ನು ನಿರೀಕ್ಷೆ ಮಾಡಿಕೊಂಡಿದ್ದೆನೋ ಅದು ತಲೆ ಕೆಳಗಾಗಿ ಹೋಯಿತು. ಅಯ್ಯಾ, ಈ ಪಕ್ಷದ ಪ್ರಮುಖನೂ ಪ್ರಧಾನನೂ ನೀನು. ನೀನಾಗಲೀ ನಿನ್ನವರಾಗಲೀ ನನ್ನನ್ನು ಹೀಗೆ ಸ್ವಾಗತಿಸುತ್ತೀರಿ ಎಂದು ನಾನು ಎಣಿಸಿರಲಿಲ್ಲ. ಯಾಕೆ ಗೊತ್ತೋ? ‘ಕೋಣಕ್ಕೆ ಹುಣ್ಣಾದರೆ ಆಕಳಿಗೆ ಬರೆ’ ಎಳೆಯಲಾಗದಲ್ಲ? ಸುಯೋಧನನ ಬಗ್ಗೆ ನಿಮ್ಮವರ ಮನಸ್ಸಿನಲ್ಲಿ ಮೂಡಿರುವ ದ್ವೇಷ, ಈರ್ಷೆ, ಮಾತ್ಸರ್ಯ ಇವುಗಳನ್ನು ಅವನ ದೂತನಾಗಿ ಬಂದ ನನ್ನ ಮುಂದೆ ಆಡಿದರೆ, ತೋಡಿದರೆ ಫಲವೇನು ಹೇಳು.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಒಂದು ಮಾತು ನಿಮಗೆ ಹೇಳ್ತೇನೆ. ‘ಕುಲ ನಾಲಿಗೆಯರುಹಿತು’. ನಿಮ್ಮ ಮಾತುಗಳಲ್ಲಿರುವ ವೀರ್ಯ, ನಿಮ್ಮ ಮಾತುಗಳಲ್ಲಿರುವ ಶೌರ್ಯ, ನಿಮ್ಮ ಮಾತುಗಳಲ್ಲಿರುವ ವ್ಯಂಗ್ಯ, ಪ್ರಯೋಜನಕಾರಿಯಲ್ಲ. ಮಾತು ಕೃತಿಯಾಗಿ ಮೂಡಿದಾಗಲೇ ಮನುಷ್ಯ ಮಹತ್ವನೆನಿಸಿಕೊಳ್ಳುತ್ತಾನೆ. ಹಾಗಾದರೆ ನೀನಾಗಲೀ ನಿನ್ನವರಾಗಲೀ ಕೇಳಿದ ಮಾತಿನ ವಾಚ್ಯಾರ್ಥ ನನಗೆ ಗ್ರಾಹ್ಯ ಅಲ್ಲವಷ್ಟೇ ? ಒಟ್ಟಾರೆ ಎಲ್ಲವರೂ ಸುಯೋಧನನ, ಸುಯೋಧನನ ಕಡೆಯವರ ಕ್ಷೇಮವನ್ನು ವಾಚ್ಯವಾಗಿ ಕೇಳಿದ್ದೀರಲ್ಲ. ಹಾಗಾದರೆ ವಾಚ್ಯಾರ್ಥ ಅಲ್ಲ. ನಿಮಗೆಲ್ಲರಿಗೂ ವೃಷ್ಟಿಯಾಗಿ ಸುಯೋಧನನ ಬಗ್ಗೆ ಅಂತರಂಗದಲ್ಲಿ ಮೂಡಿರುವ ದ್ವೇಷ, ಈರ್ಷ್ಯೆಗಳೇ, ಅವುಗಳ ವಾಸನೆಯೇ, ಅವುಗಳ ಕಂಪೇ ನಿಮ್ಮ ಮಾತಿನಲ್ಲಿದೆ. ಹಾಗಾಗಿ ಪ್ರಸ್ತುತ ಆ ಬಗ್ಗೆ ಉತ್ತರಿಸುವುದಕ್ಕೆ ನಾನು ಉತ್ತರದಾಯಿ ಅಲ್ಲ.
ಇನ್ನೊಬ್ಬ ನಿಮ್ಮಲ್ಲಿ ಒಳಗಿದ್ದೂ ಹೊರಗುಳಿಯುವವನು. ಹೊರಗಿದ್ರೂ ಒಳಗೆ ನಡೆಸುವವನು. ವಾಸುದೇವ. ಅವನ ಬಗ್ಗೂ ಅಷ್ಟೇ. ಶ್ರದ್ಧೆಯಿಂದ ನಮಸ್ಕಾರ ಕೊಟ್ಟೇನೆ ವಿನಃ ಬುದ್ಧಿಯಿಂದ ಪ್ರತ್ಯುತ್ತರ ನೀಡಲಾರೆ. ಯಾಕೆ? ನನಗದು ಉದ್ಯೋಗ ಅಲ್ಲ. ಈಗ ನಾನಿಲ್ಲಿಗೆ ಬಂದಿರುವುದು ಯಾವನನ್ನು ನೀವು ಪ್ರತಿಕಕ್ಷಿ ಎಂದು ಸ್ವೀಕರಿಸಿ, ಒಪ್ಪಿದ್ದೀರಿ, ನಿಮ್ಮ ಸುದೀರ್ಘವಾದ ಜೀವಮಾನದಲ್ಲಿ ಇದು ತನಕದ ನಿಮ್ಮ ಆಯುರ್ಮಾನವನ್ನು ಯಾರಾತನ ವಿರೋಧವನ್ನು ಸಾಧಿಸುವುದಕ್ಕಾಗಿ ನೀವು ಸವೆಸಿದ್ದೀರಿ, ಅಂತಹಾ ಸುಯೋಧನನಿಂದ ಆಜ್ಙಾಪಿತನಾಗಿ ಬಂದಿರುವ ರಾಜದೂತ ನಾನು.

ದೂತನಾದವನ ಕಾರ್ಯವ್ಯಾಪ್ತಿ ಎಷ್ಟು ಅಂತ ಅರಿಯದೆ ಇದ್ದ ಅಜ್ಞ, ಅಪ್ರಬುದ್ಧ ರಾಜಕಾರಣಿ ನೀನಲ್ಲ. ಈ ಭರವಸೆಯಿಂದ ನಿನಗೆ ಹೇಳುತ್ತಾ ಇದ್ದೇನೆ. ಸುಯೋಧನನಾಡಿದ ಮಾತುಗಳನ್ನೇ ಅನುವಾದ ರೂಪವಾಗಿ ನನ್ನ ನಾಲಗೆಯಿಂದ ಹೇಳ್ತೇನೆ. ಜೂಜಿನಲ್ಲಿ ನೀವು ಸೋತಿರಬಹುದು. ಸುಯೋಧನ ಗೆದ್ದಿರಬಹುದು. ಆ ಸೋಲಾಗಲೀ ಈ ಗೆಲುವಾಗಲೀ ನಿರ್ಣಾಯಕವಲ್ಲ. ಕ್ಷತ್ರಿಯನಾಗಿ ಹುಟ್ಟಿದವನು ಅವನಿಯನ್ನಾಳುವ ಅಧಿಕಾರವನ್ನು ಆಶಿಸ್ತಾನೆ ಅಂತಾದ್ರೆ ಅನವರದಲ್ಲಿ ವಿರೋಧಿಯನ್ನು ಸೋಲಿಸಿ ತಾನು ಗೆದ್ದು ಆಳಬೇಕಾದದ್ದು ಕ್ಷತ್ರಿಯಕ್ಕೆ ಭೂಷಣ. ಕ್ಷತ್ರಿಯನ ಧರ್ಮ.
ಹಾಗಾದ್ದರಿಂದ ನೀವಾಸೆಪಟ್ಟಿರುವ ರಾಜ್ಯವನ್ನು ಅಂದರೆ ನಿಮ್ಮ ಅರ್ಧರಾಜ್ಯವನ್ನಲ್ಲ, ಅಧಿಕಾರಕ್ಕೆ ಸಂಬಂಧಪಟ್ಟ ಚಂದ್ರವಂಶದ ರತ್ನಸಿಂಹಾಸನವನ್ನು ಆಯುಧದ ಮೊನೆಯಲ್ಲಿಟ್ಟಿದ್ದೇನೆ. ಶಕ್ತರಾದರೆ ಪಾಂಡವರು ಪಡೆಯಲಿ. ಅಶಕ್ತರಾದರೆ ಅಂಬೋಣ ಏನು ಅಂತ ತಿಳಿಯಿಸಲಿ. ಇದನ್ನು ಹೇಳುವುದಕ್ಕಾಗಿ, ಇದಕ್ಕೆ ಉತ್ತರ ಕೇಳುವುದಕ್ಕಾಗಿ ಬಂದವನು ನಾನು. ಅರಸನಾಗಿ, ಈ ಪಕ್ಷದ ಪ್ರಮುಖನಾಗಿ ಏನು ಹೇಳ್ತೀಯ?