Saturday, January 18, 2025
Homeಯಕ್ಷಗಾನಬಣ್ಣದ ವೇಷದ ದೈತ್ಯ ಪ್ರತಿಭೆ - ಶ್ರೀ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್

ಬಣ್ಣದ ವೇಷದ ದೈತ್ಯ ಪ್ರತಿಭೆ – ಶ್ರೀ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್

ಬಣ್ಣದ ವೇಷಗಳು ರೌದ್ರ, ಭಯಾನಕ, ಬೀಭತ್ಸ ಮೊದಲಾದ ರಸಗಳನ್ನು ಸೃಷ್ಠಿಸುತ್ತವೆ. ರಾಜಬಣ್ಣ, ಹೆಣ್ಣುಬಣ್ಣ, ಕಾಟುಬಣ್ಣ ಹೀಗೆ ಈ ವಿಭಾಗದಲ್ಲಿ ವೈವಿಧ್ಯತೆಗಳು. ಹಿಂದಿನ ತಲೆಮಾರಿನ ಅನೇಕ ಕಲಾವಿದರು ನೇಪಥ್ಯದಲ್ಲಿ ಮತ್ತು ರಂಗಸ್ಥಳದಲ್ಲಿ ಅರ್ಪಣಾಭಾವದಿಂದ ದುಡಿದು ಪ್ರಸಿದ್ಧರಾದರು. ಯಕ್ಷಗಾನದಲ್ಲಿ ಬಣ್ಣದ ವೇಷಗಳಿಗೆ ಜೀವ ತುಂಬಿದರು. ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಅವರ ಶ್ರಮ, ಸಾಧನೆಯು ಹಿರಿದಾದುದು ಮತ್ತು ಪ್ರಶಂಸನೀಯವಾದುದು. ಪ್ರಸ್ತುತ ಅನೇಕ ಹಿರಿಯ ಮತ್ತು ಯುವ ಕಲಾವಿದರು ಬಣ್ಣದ ವೇಷಧಾರಿಗಳಾಗಿ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಅಂತವರಲ್ಲೊಬ್ಬರು ಶ್ರೀ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್. ಇವರು ಹನುಮಗಿರಿ ಮೇಳದಲ್ಲಿ ಪ್ರಸ್ತುತ ತಿರುಗಾಟ ನಡೆಸುತ್ತಿದ್ದಾರೆ.

`ಯಕ್ಷಗಾನ’ ದಲ್ಲಿ “ಬಣ್ಣದ ವೇಷಗಳು’’ ಎಂಬ ವಿಭಾಗಕ್ಕೆ ವಿಶೇಷ ಸ್ಥಾನವಿದೆ. ತೆಂಕುತಿಟ್ಟಿನಲ್ಲಂತೂ ಮುಖವರ್ಣಿಕೆ, ಅಟ್ಟಹಾಸ, ರಂಗಪ್ರವೇಶಿಸುವ ರೀತಿ, ಒಡ್ಡೋಲಗ ವೈಭವ, ಕುಣಿತಗಳಿಂದ ಈ ಪಾತ್ರಗಳು ವಿಜೃಂಭಿಸುತ್ತವೆ. ನೇಪಥ್ಯದಲ್ಲಿ (ಚೌಕಿಯಲ್ಲಿ) ಇವರಿಗೆ ದುಡಿಮೆ ಹೆಚ್ಚು. ಹಾಗೆಂದು ರಂಗದಲ್ಲಿ ದುಡಿಮೆ ಕಡಿಮೆಯೇನಲ್ಲ. ಪಾತ್ರಕ್ಕನುಗುಣವಾಗಿ ಮೆರೆಯುವ ಅವಕಾಶಗಳು ಇದ್ದೇ ಇದೆ. ಕೆಲವೊಂದು ಪಾತ್ರಗಳಿಗೆ ರಂಗದಲ್ಲಿ ಕೆಲಸ ಕಡಿಮೆಯಾದರೂ ಪ್ರೇಕ್ಷಕರ ಮನಸೂರೆಗೊಳ್ಳುವ ಸಾಮರ್ಥ್ಯವಿದೆ.

ನಾಟ್ಯ ಕಲಿತದ್ದು ಖ್ಯಾತ ಕಲಾವಿದರಾದ ರೆಂಜಾಳ ರಾಮಕೃಷ್ಣ ರಾಯರಿಂದ. ಬಣ್ಣಗಾರಿಕೆ ಮತ್ತು ರಂಗದ ನಡೆಗಳನ್ನು ಅಭ್ಯಸಿಸಿದ್ದು ಪ್ರಸಿದ್ಧ ಬಣ್ಣದ ವೇಷಧಾರಿಯಾಗಿ ಮೆರೆದ ಬಣ್ಣದ ಮಹಾಲಿಂಗ ಅವರಿಂದ.
ಶ್ರೀ ಸದಾಶಿವ ಶೆಟ್ಟಿಗಾರರ ಹುಟ್ಟೂರು ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆ. ಇವರು 1965 ಡಿಸೆಂಬರ್ 17ರಂದು ಶ್ರೀ ಬಾಬು ಶೆಟ್ಟಿಗಾರ್ ಮತ್ತು ಗಿರಿಯಮ್ಮ ದಂಪತಿಗಳ ಮಗನಾಗಿ ಜನಿಸಿದರು. ಓದಿದ್ದು ಸಿದ್ಧಕಟ್ಟೆ ಸೈಂಟ್ ಮೆಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. 6ನೇ ತರಗತಿಯ ವರೇಗೆ. ಶಾಲಾ ಬಾಲಕನಾಗಿದ್ದಾಗಲೇ ಯಕ್ಷಗಾನಾಸಕ್ತಿ ಇತ್ತು. ತಂದೆ ತಾಯಿಯವರ ಜತೆ ಆಟ ನೋಡಲು ಹೋಗುತ್ತಿದ್ದರು.

ಪರಿಸರದಲ್ಲಿ ಸುರತ್ಕಲ್, ಕರ್ನಾಟಕ, ಆದಿಸುಬ್ರಹ್ಮಣ್ಯ, ಪುತ್ತೂರು ಮೇಳಗಳ ಕಲಾಪ್ರದರ್ಶನಗಳು ನಡೆಯುತ್ತಿತ್ತು. ಟೆಂಟ್ ಮೇಳಗಳ ಪ್ರದರ್ಶನ. ಬಡತನದ ಕಾರಣ ಟಿಕೇಟು ಖರೀದಿಸಲು ಕಷ್ಟವಿತ್ತು. ಹಾಗೆಂದು ಆಟ ನೋಡಲು ಮನಸ್ಸು ಹಾತೊರೆಯುತ್ತಿತ್ತು. ಯಾರಿಗೂ ತಿಳಿಯದಂತೆ ಟೆಂಟ್‍ನ ಪರದೆಯೊಳಗೆ ನುಸುಳಿ ಕುಳಿತು ಆಟ ನೋಡುತ್ತಿದ್ದರಂತೆ! 7ನೇ ತರಗತಿಗೆ ಸೇರಿ ಕೆಲವಾರು ದಿನಗಳ ನಂತರ ಬಡತನದ ಮತ್ತು ಮನೆಯ ಸಮಸ್ಯೆಗಳ ಕಾರಣದಿಂದ ಶಾಲೆ ಬಿಡಬೇಕಾಗಿ ಬಂದಿತ್ತು. ಮನೆಯವರ ಒಪ್ಪಿಗೆ ಪಡೆದು ಸದಾಶಿವ ಶೆಟ್ಟಿಗಾರರು ಭಾವೀ ಬದುಕಿನ ಹೊಂಗನಸುಗಳನ್ನು ಹೊತ್ತು ಮುಂಬಯಿಗೆ ತೆರಳಿದರು. ಮುಂಬಯಿಯಲ್ಲಿ 3 ವರ್ಷ ಹೋಟೆಲ್ ಕೆಲಸ. ನಂತರ ಮರಳಿ ಊರಿಗೆ. ಮತ್ತೆ ಹುಬ್ಬಳ್ಳಿಯ ಹೋಟೆಲ್‍ನಲ್ಲಿ 1 ವರ್ಷ ಕೆಲಸ. ಅಲ್ಲಿಂದಲೇ ಪುನಃ ಮುಂಬಯಿಗೆ. ಹೋಟೆಲ್‍ನಲ್ಲಿ 2 ವರ್ಷ ದುಡಿಮೆ. ಮರಳಿ ಊರಿಗೆ. ಉಜಿರೆಯ ಹೋಟೆಲೊಂದರಲ್ಲಿ 6 ತಿಂಗಳು ಕೆಲಸ. ಹೋಟೆಲುಗಳಲ್ಲಿ ದುಡಿಯುತ್ತಿರುವಾಗಲೂ ಯಕ್ಷಗಾನದ ಹುಚ್ಚು ತೀವ್ರವಾಗಿತ್ತು. ಯಕ್ಷಗಾನದ ಹಾಡುಗಳನ್ನು ಹೇಳುವುದು, ಚೆಂಡೆಯ ಬಾಯಿತಾಳಗಳನ್ನು ಹೇಳುತ್ತಾ ಕುಪ್ಪಿಯ ಗ್ಲಾಸುಗಳನ್ನೂ, ಪ್ಲೇಟ್‍ಗಳನ್ನೂ ಬಡಿಯುತ್ತಿದ್ದರು. ಇವರ ತಾಳಕ್ಕೆ ಕುಪ್ಪಿಯ ಗ್ಲಾಸುಗಳನೇಕ ಪುಡಿಯಾಗಿದ್ದವು! ಹೋಟೆಲ್ ಸಾಹುಕಾರರಿಂದ ಬೈಗುಳದ ಸುರಿಮಳೆಯಾಗುತ್ತಿತ್ತು. ಅವಕಾಶ ಸಿಕ್ಕಿದಾಗಲೆಲ್ಲಾ ಆಟಗಳನ್ನು ಬಿಡದೆ ನೋಡುತ್ತಿದ್ದರು.

ಕೆಲಸ ಮಾಡುತ್ತಿರುವಾಗಲೇ ತಾನೂ ವೇಷ ಮಾಡಬೇಕು, ಯಕ್ಷಗಾನ ಕಲಾವಿದನಾಗಬೇಕೆಂಬ ಬಯಕೆಯು ಚಿಗುರೊಡೆದಿತ್ತು. ನಾಟ್ಯ ಕಲಿತು ವೇಷ ಮಾಡಲು ನಿರ್ಧರಿಸಿಯೇ ಬಿಟ್ಟರು. ಆಗ ಪತ್ತನಾಜೆಯ ಸಮಯ. ಶ್ರೀ ಧರ್ಮಸ್ಥಳ ಮೇಳದ ಪ್ರದರ್ಶನ ನಡೆಯುತ್ತಿತ್ತು. ಆ ಸಂದರ್ಭದಲ್ಲೇ ಕಲಿಕಾಸಕ್ತರಿಗೆ ಲಲಿತಕಲಾ ಕೇಂದ್ರದಲ್ಲಿ ಸಂದರ್ಶನ ನಡೆಯುತ್ತಿತ್ತು. ಕಲಾವಿದನಾಗುವ ಬಯಕೆಯು ಸಾಕಾರಗೊಳ್ಳುತ್ತದೆ ಎಂಬ ಸಂತಸದಿಂದ ತೆರಳಿದರು. (18ನೇ ವರ್ಷ) ಆಗಲೇ ದೃಢಕಾಯರಾಗಿದ್ದ ಶೆಟ್ಟಿಗಾರರು ಸಂದರ್ಶನದಲ್ಲಿ ಆಯ್ಕೆಯಾಗಿರಲಿಲ್ಲ. ಹೋಟೆಲ್ ಕೆಲಸದ ಸಂದರ್ಭ ದಿನವೂ ವ್ಯಾಯಾಮ ಮಾಡಿ ಗಟ್ಟಿಮುಟ್ಟಾಗಿ ಬೆಳೆದಿದ್ದರು ಶೆಟ್ಟಿಗಾರರು. ಇವರ ದೇಹವೇ ಆಯ್ಕೆಯಾಗುವುದಕ್ಕೆ ತೊಡಕಾಗಿತ್ತು. 

ರೆಂಜಾಳದವರು ಕಲ್ಲಾಡಿ ಶ್ರೀ ವಿಠಲ ಶೆಟ್ಟರಲ್ಲಿ ಮಾತನಾಡಿ ಕಟೀಲು ಮೇಳಕ್ಕೆ ಸೇರಿಸಿದರು. (ನೇಪಥ್ಯ ಕಲಾವಿದನಾಗಿ) ಆಗ ಮೂರು ಮೇಳಗಳು ಕಾರ್ಯಾಚರಿಸುತ್ತಿತ್ತು. ಇವರು ಸೇರಿದ್ದು 2ನೇ ಮೇಳಕ್ಕೆ. ಪ್ರಥಮ ವರ್ಷವೇ ಬಣ್ಣದ ಮಹಾಲಿಂಗ ಅವರಿಗೆ ವೇಷಕಟ್ಟುವ ಭಾಗ್ಯ ಒದಗಿತ್ತು. ಮೇಕಪ್ ಮಾಡುವಾಗ ದೂರದಿಂದಲೇ ಗಮನಿಸಿ ಗ್ರಹಿಸುತ್ತಿದ್ದರು. ನಂತರ ಅವರಿಗೆ ವೇಷ ಕಟ್ಟುತ್ತಿದ್ದರು. ತಿರುಗಾಟ ಮುಗಿಸಿ ಮಳೆಗಾಲ ಕಟೀಲಿನಲ್ಲಿ ನಡೆಯುವ ಯಕ್ಷಗಾನ ಸಪ್ತಾಹಕ್ಕೆ ನೇಪಥ್ಯ ಕಲಾವಿದನಾಗಿ ಬಂದ ಸಂದರ್ಭ. ಅಲ್ಲಿ ನಾಟ್ಯ ಕಲಿಯಲು ತೀರ್ಮಾನ. ಅಲ್ಲಿಯೇ ಇದ್ದ ರೆಂಜಾಳ ರಾಮಕೃಷ್ಣ ರಾಯರಿಂದ ನಾಟ್ಯಾಭ್ಯಾಸ. ಕಟೀಲು ಗೋಪಾಲಕೃಷ್ಣ ಆಸ್ರಣ್ಣರು ಆ ಕಾಲದಲ್ಲಿ ಯಕ್ಷಗಾನವನ್ನೂ ಕಲಾವಿದರನ್ನೂ ಪ್ರೀತಿಸಿ ಪ್ರೋತ್ಸಾಹಿಸುತ್ತಿದ್ದರಂತೆ. ಅವರ ನಿರ್ದೇಶನದಲ್ಲಿ ಆಗ ಆಟಕೂಟಗಳು  ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿದ್ದುವು. ಸಪ್ತಾಹದ ಸಮಯದಲ್ಲಿ ರೆಂಜಾಳದವರಿಂದ ನಾಟ್ಯ ಕಲಿತರು. ಶೆಟ್ಟಿಗಾರರು ನಾಟ್ಯ ಕಲಿತುದು 7 ದಿನಗಳು ಮಾತ್ರ. ಆದರೂ ಕಲಾವಿದನಾಗುವ ಛಲ ಇರುವವರಿಗೆ ಅಷ್ಟು ಸಾಕು. ಮೇಳದ ತಿರುಗಾಟದಲ್ಲಿ ಮತ್ತಷ್ಟು ಕಲಿಯಲು ಇದು ಭದ್ರ ವೇದಿಕೆಯಾಗಿ ಪರಿಣಮಿಸಿತ್ತು. “ಕಟೀಲಿನಲ್ಲಿ ನಡೆಯುವ ಯಕ್ಷಗಾನ ಸಪ್ತಾಹವು ನಾಟ್ಯ, ಮುಖವರ್ಣಿಕೆ, ನೇಪಥ್ಯ ಕೆಲಸ ಮಾಡಲು ಅಭ್ಯಾಸಿಗಳಿಗೆ ಅನುಕೂಲವಾಗಿತ್ತು. ಒಂದರ್ಥದಲ್ಲಿ ‘ಕಟೀಲು ಸಪ್ತಾಹ’ವು `ಕಲಿಕಾಕೇಂದ್ರ’ವೇ ಆಗಿತ್ತು.’’ ಇದು ಸದಾಶಿವ ಶೆಟ್ಟಿಗಾರರು ಅನುಭವಿಸಿ ಆಡಿದ ಮಾತುಗಳು.

(ಫೋಟೋ ಕೃಪೆ: ಎಸ್. ಎನ್. ಶರ್ಮ ನೀರ್ಚಾಲ್ )

2ನೇ ವರ್ಷವೂ ಕಟೀಲು 2ನೇ ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ತಿರುಗಾಟ. ಶೆಟ್ಟಿಗಾರರು ತನ್ನ ಕರ್ತವ್ಯ ಮುಗಿದ ನಂತರದಲ್ಲಿ ನಿದ್ರಿಸುತ್ತಿರಲಿಲ್ಲ. ಪ್ರದರ್ಶನಗಳನ್ನು ನೋಡುತ್ತಿದ್ದರು. ಚೌಕಿಯ ಹಿಂದೆ, ರಂಗಸ್ಥಳದ ಹಿಂದೆ ಕುಣಿಯುತ್ತಿದ್ದರು. ಹಗಲು ಬಿಡಾರದಲ್ಲೂ ಕೂಡಾ ಈ ಅಭ್ಯಾಸ ಮುಂದುವರಿದಿತ್ತು. ಅಣಕು ಪ್ರದರ್ಶನ ನಿರಂತರ ನಡೆಯುತ್ತಿತ್ತು. ಇದನ್ನು ಬಣ್ಣದ ಮಹಾಲಿಂಗನವರು ಗಮನಿಸುತ್ತಿದ್ದರು. ಶೆಟ್ಟಿಗಾರರಲ್ಲಿ ಅಡಗಿದ್ದ ಪ್ರತಿಭೆಯನ್ನು ಅವರು ಗುರುತಿಸಿಯೂ ಇದ್ದರು. ಕಲಿಯುತ್ತಿಯಾ? ಎಂದು ಕೇಳಿ ಹೇಳಿಕೊಡಲಾರಂಭಿಸಿದರಂತೆ. ಮುಖವರ್ಣಿಕೆ, ಬಣ್ಣದ ವೇಷಗಳ ಸ್ವಭಾವ, ನಡೆ, ಸಂಭಾಷಣೆಗಳ ಬಗೆಗೆ ಪಾಠ ಆರಂಭವಾಯಿತು. ಅಲ್ಲದೆ ಹುಡುಗನಿಗೆ ವೇಷ ಮಾಡುವ ಆಸಕ್ತಿ ಇದೆ. ಮಾಡಿಸಿ ಎಂಬ ಸೂಚನೆಯನ್ನೂ ಬಲಿಪ ಭಾಗವತರಿಗೆ ನೀಡಿದ್ದರು. ಬಲಿಪರು ಕೇಳಿದಾಗ ಶೆಟ್ಟಿಗಾರರ ಸಂತಸಕ್ಕೆ ಪಾರವೇ ಇರಲಿಲ್ಲ. ಸಿದ್ಧಕಟ್ಟೆಯಲ್ಲಿ ನಡೆದ ಕಟೀಲು ಮೇಳದ ಪ್ರದರ್ಶನ. ಪ್ರಸಂಗ ಶ್ರೀ ಮಹಾದೇವೀ ಲಲಿತೋಪಾಖ್ಯಾನ. ಊರಲ್ಲೇ ಮೊದಲ ವೇಷ ಮಾಡುವ ಅವಕಾಶ. `ಕಾಮೇಶ್ವರ’ನಾಗಿ ಶೆಟ್ಟಿಗಾರರು ರಂಗವೇರಿದರು. ಸದಾಶಿವನಿಗೆ ಸದಾಶಿವನಾಗಿಯೇ ಅಭಿನಯಿಸುವ ಭಾಗ್ಯ. ನಂತರ ದೇವೀ ಮಹಾತ್ಮ್ಯೆ ಪ್ರಸಂಗದಲ್ಲಿ ಶಂಖದುರ್ಗರು ಉಳಿದ ಪ್ರಸಂಗಗಳಲ್ಲಿ ರಾಕ್ಷಸ ಬಲಗಳಾಗಿ ವೇಷ ನಿರ್ವಹಣೆ.

2ನೇ ಮೇಳದಲ್ಲಿ ಬಲಿಪರು, ಪೆರುವಾಯಿ ನಾರಾಯಣ ಭಟ್, ಸಂಪಾಜೆ ಶೀನಪ್ಪ ರೈ, ರೆಂಜಾಳ, ಪೆರುವಾಯಿ ನಾರಾಯಣ ಶೆಟ್ಟಿ, ಬೆಳ್ಳಾರೆ ಮಂಜುನಾಥ ಭಟ್, ಬೆಳ್ಳಾರೆ ಸುಬ್ಬಯ್ಯ ಶೆಟ್ಟಿ, ಬಣ್ಣದ ಮಹಾಲಿಂಗ, ಸುಬ್ರಾಯ ಸಂಪಾಜೆ, ಗುಂಡಿಮಜಲು ಗೋಪಾಲ ಭಟ್, ಪಡ್ರೆ ಕುಮಾರ ಮೊದಲಾದ ಕಲಾವಿದರ ಒಡನಾಟ ಸಿಕ್ಕಿತ್ತು. ಬೆಳ್ಳಾರೆ ಮಂಜುನಾಥ ಭಟ್ಟರೂ ಮುಖವರ್ಣಿಕೆ ಬಗೆಗೆ ಮಾಹಿತಿಯನ್ನು ನೀಡಿದ್ದರು. ವೇಷ ಕಟ್ಟಿದ ಮೇಲೆ ಸದಾಶಿವ ಶೆಟ್ಟಿಗಾರರು ಚಕ್ರತಾಳ ಬಾರಿಸಲು ಓಡುತ್ತಿದ್ದರು. ಮದ್ಲೆಗಾರರಾದ ಪೆರುವಾಯಿ ನಾರಾಯಣ ಭಟ್ಟರು ಅವಕಾಶವಿತ್ತು ಪ್ರೋತ್ಸಾಹಿಸುತ್ತಿದ್ದರು. ನಾಟ್ಯದಲ್ಲಿ ಹಿಡಿತ ಸಾಧಿಸಲು ಇದರಿಂದ ಅವಕಾಶವಾಗಿತ್ತು. ಈ ತಿರುಗಾಟದ ಎಪ್ರಿಲ್ ತಿಂಗಳಲ್ಲಿ ಮೇಳ ಬಿಡಬೇಕಾದ ಸಂದರ್ಭ ಬಂದಿತ್ತು. ರಾತ್ರೆ ಬಡಕಬೈಲಿನಿಂದ ಸಿದ್ಧಕಟ್ಟೆಗೆ ನಡೆದೇ ಬಂದಿದ್ದರು. ಆದರೂ ಕಲಾವಿದನಾಗುವ ಭಾಗ್ಯ ಅಳಿಯದೆ ಉಳಿದಿತ್ತು.
ಮುಂದಿನ ಮಳೆಗಾಲ ಕಟೀಲು ಸಪ್ತಾಹದ ಸಂದರ್ಭ- ಕಿನ್ನಿಗೋಳಿ ಮೋಹಿನೀ ಕಲಾಸಂಪದದ ಯಜಮಾನರ ನೇತೃತ್ವದಲ್ಲಿ ಪದ್ಮಶಾಲೀ ಬಳಗದ ವತಿಯಿಂದ ನಡೆದ ಆಟ- ಶಶಿಪ್ರಭಾ ಪರಿಣಯ ಪ್ರಸಂಗದ ಘೋರರೂಪಿಯಾಗಿ ಅಭಿನಯ. ಪಾತ್ರನಿರ್ವಹಣೆಯನ್ನು ನೋಡಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಮೇಳಕ್ಕೆ ಬರುವೆಯಾ ಎಂದು ಕೇಳಿದ್ದರು. ಶೆಟ್ಟಿಗಾರರಿಗೆ ಸಂತಸವಾಗಿತ್ತು. ಕಟೀಲು 1ನೇ ಮೇಳಕ್ಕೆ 3ನೇ ಬಣ್ಣದ ವೇಷಧಾರಿಯಾಗಿ ಸೇರಿದರು.

                         ಇರಾ ಗೋಪಾಲಕೃಷ್ಣರು 1ನೇ ಮೇಳದ ಭಾಗವತರಾಗಿದ್ದ ಕಾಲ. ಮುಖವರ್ಣಿಕೆಯಲ್ಲಿ ಶೆಟ್ಟಿಗಾರರು ಆಗಲೇ ಪಳಗಿದ್ದರು. ಬಣ್ಣದ ಮಹಾಲಿಂಗನವರ ಗರಡಿಯಲ್ಲಿ ಅಭ್ಯಸಿಸಿದ್ದು ಸಾರ್ಥಕವಾಗಿತ್ತು. ಆಗಲೇ ತುಂಬಾ ಉದ್ದ ಚಿಟ್ಟಿ ಇಡುವ ಕಲೆಯು ಕರಗತವಾಗಿತ್ತು. ಮೊದಲ ಮೂರು ತಿಂಗಳು ಮಾತ್ರ 3ನೇ ಬಣ್ಣದ ವೇಷ ನಿರ್ವಹಿಸಿದ್ದರು. ತಿರುಗಾಟದ 4ನೇ ತಿಂಗಳಿನಲ್ಲಿ 1ನೇ ಬಣ್ಣ ಮಾಡುವ ಅವಕಾಶ ಸಿಕ್ಕಿತ್ತು. ಶುಂಭಾಸುರನ ಪಾತ್ರ ಮಾಡಿ ಅದು ಶೆಟ್ಟಿಗಾರರೇ ತಿರುಗಾಟದುದ್ದಕ್ಕೂ ನಿರ್ವಹಿಸುವಂತಾಗಿತ್ತು. 2ನೇ ವರ್ಷದಲ್ಲಿ ಶುಂಭಾಸುರ ಅಲ್ಲದೆ, 1ನೇ ಮತ್ತು 2ನೇ ಬಣ್ಣಕ್ಕೆ ಸಂಬಂಧಿಸಿದ ಹೆಚ್ಚಿನ ಎಲ್ಲಾ ವೇಷಗಳನ್ನೂ ನಿರ್ವಹಿಸಿದ್ದರು. ಇರಾ ಭಾಗವತರ ಮತ್ತು ಸುಣ್ಣಂಬಳ ವಿಶ್ವೇಶ್ವರ ಭಟ್ಟರ ನಿರ್ದೇಶನದಲ್ಲಿ ಶೆಟ್ಟಿಗಾರರು ಕಲಾವಿದರಾಗಿ ಮಿಂಚತೊಡಗಿದರು- “ಎಲ್ಲಾ ವೇಷಗಳ ನಡೆ ಮತ್ತು ಸಂಭಾಷಣೆಗಳನ್ನೂ ಸುಣ್ಣಂಬಳದವರು ಹೇಳಿಕೊಡುತ್ತಿದ್ದರು. ಅವರಲ್ಲಿ ಕೇಳಿಯೇ ನಾನು ರಂಗಪ್ರವೇಶ ಮಾಡುತ್ತಿದ್ದೆ. ಇರಾ ಭಾಗವತರ ನಿರ್ದೇಶನದಲ್ಲೇ ನಾನು ಮೊತ್ತಮೊದಲು ಮಹಿಷಾಸುರ, ರುದ್ರಭೀಮ, ಗದಾಯುದ್ಧದ ಭೀಮ, ಅಜಮುಖಿ, ಶೂರ್ಪನಖಿ ಮೊದಲಾದ ವೇಷಗಳನ್ನು ನಿರ್ವಹಿಸಿದೆ. ಸರಳ, ಸಜ್ಜನರಾದ ಇವರುಗಳು ಕೇಳಿದಾಗ ಪ್ರೀತಿಯಿಂದ ಹೇಳಿಕೊಟ್ಟಿದ್ದಾರೆ. ಅವಕಾಶಗಳನ್ನಿತ್ತು ಪ್ರೋತ್ಸಾಹಿಸಿದ್ದಾರೆ. ಹಾಗಾಗಿ ಇರಾ ಭಾಗವತರು ಮತ್ತು ಸುಣ್ಣಂಬಳದವರು ನನಗೆ ಗುರುಸಮಾನರು ಎಂದು ಹೇಳುವ ಮೂಲಕ ಶೆಟ್ಟಿಗಾರರು ಅವರೀರ್ವರನ್ನೂ ಗೌರವಿಸುತ್ತಾರೆ.

1ನೇ ಮೇಳದ 3ನೇ ತಿರುಗಾಟದಲ್ಲಿ ಮಹಿಷಾಸುರ ಪಾತ್ರವನ್ನು ನಿರ್ವಹಿಸುವ ಅವಕಾಶವೂ ಒದಗಿತ್ತು. ಅದೂ ತನ್ನ 23ನೇ ವಯಸ್ಸಿನಲ್ಲಿ. ರಾಮಕುಂಜದಲ್ಲಿ ನಡೆದ ಪ್ರದರ್ಶನ- ಅನಿವಾರ್ಯವಾಗಿ ಮಹಿಷಾಸುರ ಮಾಡುವ ಅವಕಾಶ. ಮೊದಲ ಪ್ರಯೋಗದಲ್ಲೇ ಗೆದ್ದಿದ್ದರು. ಮರುದಿನ ತಲಪಾಡಿಯಲ್ಲಿ ಮತ್ತೆ 2ನೇ ಅವಕಾಶ. ಅಂದು ಮೇಳದ ಸಂಚಾಲಕರಾದ ಕಲ್ಲಾಡಿ ಶ್ರೀ ವಿಠಲ ಶೆಟ್ಟರು ಬಂದಿದ್ದರು. ಮೇಕಪ್, ವೇಷ ಕಟ್ಟುವಲ್ಲಿಂದ ತೊಡಗಿ ಪ್ರದರ್ಶನದ ಕೊನೆತನಕವೂ ನೋಡಿ ಹೋಗಿದ್ದರು. ಮಹಿಷಾಸುರನ ವೇಷವು ಶೆಟ್ಟಿಗಾರರೇ ಮಾಡಬೇಕೆಂದು ಹೇಳಿಯೂ ಇದ್ದರು. “ಕಲ್ಲಾಡಿ ವಿಠಲ ಶೆಟ್ಟರು ಸಹಕರಿಸಿದ್ದಾರೆ, ಪ್ರೋತ್ಸಾಹಿಸಿದ್ದಾರೆ ಅಲ್ಲದೆ ವೇಷಗಳನ್ನು ನಿರ್ವಹಿಸುವಲ್ಲಿ ನಿರ್ದೇಶನವನ್ನೂ ನೀಡಿದ್ದಾರೆ’’. ಇದು ಶೆಟ್ಟಿಗಾರರು ಅವರ ಬಗೆಗೆ ಆಡುವ ಮಾತುಗಳು. ಕಟೀಲು ಮೇಳದ ತಿರುಗಾಟವು ಮರೆಯಲಾಗದ ಅನುಭವ. ನನಗೆ ಪ್ರಸಿದ್ಧಿಯನ್ನು ನೀಡಿತು. ಕಲಾವಿದನಾಗಿ ನಾನು ಕಾಣಿಸಿಕೊಂಡದ್ದು ಕಟೀಲು ಮೇಳದಲ್ಲಿ. ಕಟೀಲು ಮೇಳಗಳು ಕಲಿಕಾಸಕ್ತರಿಗೆ ಪಾಠಶಾಲೆ ಇದ್ದಂತೆ. ಅಲ್ಲಿ ಕಲಾವಿದರು ತಯಾರಾಗುತ್ತಾರೆ ಎಂಬ ಅಭಿಪ್ರಾಯವನ್ನು ಸದಾಶಿವ ಶೆಟ್ಟಿಗಾರರು ಹೊಂದಿರುತ್ತಾರೆ.

ಕಟೀಲು ಮೇಳದ ತಿರುಗಾಟದ ಸಂದರ್ಭ- ಮಳೆಗಾಲದಲ್ಲಿ ಬೆಳ್ಳಾರೆಯಲ್ಲೊಂದು ಪ್ರದರ್ಶನ. ದುಶ್ಶಾಸನ ವಧೆ ಪ್ರಸಂಗ. ಬಣ್ಣದ ಮಹಾಲಿಂಗನವರ ರುದ್ರಭೀಮ. ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರ ದುಶ್ಶಾಸನ. ಆಗ ಶೆಟ್ಟಿಗಾರರ ವಯಸ್ಸು 23. ಗುರುಶಿಷ್ಯರೊಂದಾಗಿ ಅಭಿನಯಿಸಿದ್ದರು. ಸಂತೋಷಗೊಂಡ ಬಣ್ಣದ ಮಹಾಲಿಂಗನವರು ನೀನು ಒಳ್ಳೆಯ ಪ್ರಸಿದ್ಧ ವೇಷಧಾರಿಯಾಗುವೆ ಎಂದು ಆಲಿಂಗಿಸಿ ಆಶೀರ್ವದಿ ಸಿದ್ದರು. ಅದುವೇ ನನಗೆ ರಕ್ಷಾಕವಚವಾಗಿರಲಿ ಎಂದು ಶೆಟ್ಟಿಗಾರರು ಆತ್ಮೀಯರಲ್ಲಿ ಹೇಳುವುದನ್ನು ನಾವು ಗಮನಿಸಬಹುದು. ಬದುಕಿನಲ್ಲಿ ಮರೆಯಲಾರದ ಘಟನೆಯಾಗಿ ಅದನ್ನು ಶೆಟ್ಟಿಗಾರರು ಆಗಾಗ ನೆನಪಿಸುತ್ತಾರೆ. ಕಟೀಲು 1ನೇ ಮೇಳದಲ್ಲಿ 8 ವರ್ಷಗಳ ತಿರುಗಾಟ. ನಂತರ 13 ವರ್ಷಗಳ ಕಾಲ ತಿರುಗಾಟ ಧರ್ಮಸ್ಥಳ ಮೇಳದಲ್ಲಿ. ಖಾವಂದರ, ಹರ್ಷೇಂದ್ರ ಕುಮಾರರ ಸಹಕಾರ ಆಶೀರ್ವಾದಗಳಿತ್ತು.                                             

(ಫೋಟೋ ಕೃಪೆ: ಎಸ್. ಎನ್. ಶರ್ಮ ನೀರ್ಚಾಲ್ )

ಸಹಕಲಾವಿದರೆಲ್ಲರು ಸಹಕಾರ ನೀಡಿದ್ದರು. ಭಾಗವತರು ಮತ್ತು ಚಿಪ್ಪಾರು ಅವರ ಚೆಂಡೆಗೆ ವೇಷಗಳು ರಂಜಿಸುತ್ತಿತ್ತು. ಗೋವಿಂದ ಭಟ್ ನಯನಕುಮಾರರ ಜತೆ ವೇಷ ಮಾಡಿ ಪ್ರೌಢ ಸಂಭಾಷಣೆಗಳ ಕ್ರಮವೂ ಸಿದ್ಧಿಸಿತ್ತು. ಪುತ್ತಿಗೆ ರಘುರಾಮ ಹೊಳ್ಳರ ಮತ್ತು ರಾಮಕೃಷ್ಣ ಮಯ್ಯರ ಹಾಡುಗಳಲ್ಲಿ ಮತ್ತು ಸಹಕಲಾವಿದರೆಲ್ಲರ ಸಹಕಾರದಲ್ಲಿ ವೇಷಗಳನ್ನು ನಿರ್ವಹಿಸಿದ್ದೆ. ನಯನಕುಮಾರರ ಜತೆಗಿನ ಸಂಭಾಷಣೆಗಳಲ್ಲಿ ಪ್ರೌಢ ರಾಜಹಾಸ್ಯವು ಹೊರಹೊಮ್ಮುತ್ತಿತ್ತು. ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ ಪ್ರಸಂಗದ ಕುಕ್ಕಿತ್ತಾಯ, ಕಾಳರಾಹು, ಗಣಮಣಿ ಪಾತ್ರಗಳನ್ನು, ಅನೇಕ ಪ್ರಸಂಗದ ಬಣ್ಣದ ವೇಷಗಳನ್ನು ನಿರ್ವಹಿಸುವ ಅವಕಾಶವೂ ಸಿಕ್ಕಿತ್ತು.’’ ಧರ್ಮಸ್ಥಳ ಮೇಳದ ತಿರುಗಾಟದ ಬಗೆಗೆ ಸದಾಶಿವ ಶೆಟ್ಟಿಗಾರರ ಅನಿಸಿಕೆಗಳು ಹೀಗೆ ಸಾಗುತ್ತದೆ.

ನಂತರ ಹೊಸನಗರ ಮೇಳದಲ್ಲಿ 10 ತಿರುಗಾಟ. ಮತ್ತೆ 1 ವರ್ಷ ಎಡನೀರು. ಪ್ರಸ್ತುತ 3 ವರ್ಷಗಳಿಂದ ಹನುಮಗಿರಿ ಮೇಳದಲ್ಲಿ ವ್ಯವಸಾಯ. ಈ ಸಂದರ್ಭದಲ್ಲಿ ಶೆಟ್ಟಿಗಾರರು ಕಲಾಪೋಷಕರಾದ ಡಾ. ಟಿ. ಶ್ಯಾಮ ಭಟ್ಟರ ಸಹಕಾರವನ್ನು ನೆನಪಿಸುತ್ತಾರೆ. ಕಲೆಯನ್ನೂ, ಕಲಾವಿದರನ್ನೂ ಪ್ರೀತಿಸಿ ಗೌರವಿಸುವ ಶ್ಯಾಮ್ ಭಟ್ಟರನ್ನು ಕಲಾವಿದರ ರಕ್ಷಕರೆಂದೂ ಅನ್ನದಾತರೆಂದೂ ಗೌರವಿಸುತ್ತಾರೆ. ಹನುಮಗಿರಿ ಮೇಳದ ಹಿಮ್ಮೇಳ ಮುಮ್ಮೇಳದ ಸರ್ವ ಕಲಾವಿದರಿಂದಲೂ ನನಗೆ ಸಹಕಾರ, ಉತ್ತೇಜನ ಸಿಕ್ಕಿದೆ ಎನ್ನುವ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರಿಗೆ ಇನ್ನಷ್ಟು ಕಲಾಸೇವೆಯನ್ನು ಮಾಡುವ ಬಯಕೆಯಿದೆ. ಅಲ್ಲದೆ ಕುಂಭಕರ್ಣ ಕಾಳಗ ಪ್ರಸಂಗ ಕುಂಭಕರ್ಣನ ವೇಷ ಅಲ್ಲದೆ ಇನ್ನಿತರ ಕೆಲವು ವೇಷಗಳನ್ನು ನನ್ನಿಂದ ಮೊದಲು ಮಾಡಿಸಿದ್ದು ಅಗರಿ ಶ್ರೀನಿವಾಸ ಭಾಗವತರು. ಅವರೊಬ್ಬ ಸಮರ್ಥ ನಿರ್ದೇಶಕನೆಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಾರೆ.

ಬಣ್ಣಕ್ಕೆ ಸಂಬಂಧಿಸಿದ ಪಾತ್ರಗಳು ಮುಖವರ್ಣಿಕೆ, ವೇಷಭೂಷಣಗಳು, ಅಟ್ಟಹಾಸ, ಒಡ್ಡೋಲಗ ವೈಭವಗಳಿಂದ ಪ್ರೇಕ್ಷಕರನ್ನು ಬಹುಬೇಗನೆ ತಲುಪಿ ಆಕರ್ಷಿಸುತ್ತವೆ. ಬೆಳಗ್ಗಿನ ನಿದ್ದೆ ಆವರಿಸುವ ಹೊತ್ತಲ್ಲೂ ಪ್ರೇಕ್ಷಕರನ್ನು ಬಡಿದೆಬ್ಬಿಸುತ್ತವೆ. ಸಹಜವಾಗಿ ನಾನು ಬಾಲ್ಯದಲ್ಲೇ ಅದರತ್ತ ಆಕರ್ಷಿತನಾದೆ. ಅದಕ್ಕೆ ಸರಿಯಾಗಿ ಬಣ್ಣದ ಮಹಾಲಿಂಗನವರಿಂದ ಕಲಿಯುವ ಅವಕಾಶವೂ ಸಿಕ್ಕಿತು ಎನ್ನುವ ಸಿದ್ಧಕಟ್ಟೆ ಸದಾಶಿವ ಶೆಟ್ಟರು ತಾನು ಕಲಿತ ವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಇವರಿಂದ ಕಲಿತವರಲ್ಲಿ ಸತೀಶ ನೈನಾಡು, ಶಬರೀಶ ಮಾನ್ಯ, ಮನೀಷ್ ಪಾಟಾಳಿ, ಮಧುರಾಜ್ ಪಾಟಾಳಿ, ಸುಬ್ರಹ್ಮಣ್ಯ ಭಟ್ ಬದಿಯಡ್ಕ, ಸಚಿನ್ ಪಾಟಾಳಿ, ಶ್ರೀಶ ಮಣಿಲ, ರಂಜಿತ್ ಗೋಳಿಯಡ್ಕ ಮೊದಲಾದವರು ಪ್ರಮುಖರು. ಮಾಹಿತಿಗಳನ್ನು ಕೇಳಿದ ಹಲವರಿಗೆ ಹೇಳಿಕೊಟ್ಟಿರುತ್ತಾರೆ. ಪುರಾಣ ಪ್ರಸಂಗಗಳನ್ನೇ ಮೆಚ್ಚುವ ಶೆಟ್ಟಿಗಾರರು ಅವುಗಳನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಪುರಾಣ ಪ್ರಸಂಗಗಳಲ್ಲಿ ಹೆಚ್ಚಿನ ವಿಚಾರಧಾರೆಗಳು ಮತ್ತು ಸಂದೇಶಗಳು ಇವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ-
                     

“ರಂಗದ್ರೋಹ ಸಲ್ಲದು. ಆತ್ಮವಿಶ್ವಾಸ ಅತ್ಯಗತ್ಯ. ಸಹನಾಶೀಲರಾಗಿರಬೇಕು. ಮುಖವರ್ಣಿಕೆ ಮತ್ತು ವೇಷ ಕಟ್ಟಿ ರಂಗವೇರಿ ಅಭಿನಯಿಸುವಲ್ಲಿ ಶ್ರದ್ಧೆ ಮತ್ತು ಭಕ್ತಿಯು ಬೇಕು. ಬಣ್ಣಗಾರಿಕೆ ಮಾಡುವಾಗ ಇನ್ನು ಸಾಕಪ್ಪ ಎಂದು ಎಣಿಸಬಾರದು. ವೇಷಕ್ಕೆ ಬೇಕಾದಂತೆ ಮುಖವರ್ಣಿಕೆ ಮಾಡಲೇ ಬೇಕು. ಔದಾಸೀನ್ಯ ಮಾಡಲೇಬಾರದು. ವೇಷದ ಸ್ವಭಾವ ತಿಳಿದು ಸಂಭಾಷಣೆಗಳನ್ನು ಸಿದ್ಧಗೊಳಿಸಿಯೇ ರಂಗವೇರಬೇಕು’’. ಅಭ್ಯಾಸಿಗಳಿಗೆ ಶೆಟ್ಟಿಗಾರರ ಸಂದೇಶವಿದು. ಆಂಧ್ರಪ್ರದೇಶ, ತಮಿಳುನಾಡು, ದೆಹಲಿ, ಅಯೋಧ್ಯೆ, ಕಾಶಿ, ಕೋಲ್ಕತ್ತಾ, ಕೇರಳ, ಹರಿದ್ವಾರ ಮೊದಲಾದೆಡೆ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಅರಸಂಕಲ ಪ್ರಶಸ್ತಿಗಳನ್ನು ಪಡೆದುದಲ್ಲದೆ ಹರೇಕಳ ಪಾವೂರು, ಬಿ. ಸಿ. ರೋಡಿನಲ್ಲಿ ಅಲ್ಲದೆ ಇನ್ನೂ ಅನೇಕ ಕಡೆ ಸನ್ಮಾನಿತರಾಗಿದ್ದಾರೆ. ಪತ್ನಿ ಶ್ರೀಮತಿ ಕಲಾವತಿ ಮತ್ತು ಪುತ್ರರೊಂದಿಗೆ ಪ್ರಸ್ತುತ ಸಿದ್ಧಕಟ್ಟೆಯಲ್ಲಿ ವಾಸವಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ 36ಕ್ಕೂ ಹೆಚ್ಚಿನ ವರ್ಷಗಳ ಕಾಲ ವ್ಯವಸಾಯವನ್ನು ಮಾಡಿರುತ್ತಾರೆ.

ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರೂ ಸಾಂಸಾರಿಕವಾಗಿಯೂ ತೃಪ್ತರು. ಸದಾಶಿವ ಶೆಟ್ಟಿಗಾರ್ ದಂಪತಿಗಳಿಗೆ ಮೂವರು ಮಕ್ಕಳು (ಎರಡು ಗಂಡು ಮತ್ತು 1 ಹೆಣ್ಣು).ಹಿರಿಯ ಪುತ್ರ ದಿಲೀಪ್ ಕುಮಾರ್ ಮತ್ತು ಕಿರಿಯ ಪುತ್ರ ಪದ್ಮನಾಭ ಇಬ್ಬರೂ ಉದ್ಯೋಗಿಗಳು. ಪುತ್ರಿ ಕವಿತಾ ವಿವಾಹಿತೆ. ಅಳಿಯ ಶ್ರೀ ಯಶವಂತ ಉದ್ಯೋಗಿ- ಮೊಮ್ಮಗ ಹರ್ಧಿಕ್‍ಗೆ ಒಂದುವರೆ ವರ್ಷ ಪ್ರಾಯ. ಇವರು ಕೊಣಾಜೆ ನಿವಾಸಿಗಳು. ಕಲಾಬದುಕಿನುದ್ದಕ್ಕೂ ಪತ್ನಿ ಮತ್ತು ಮಕ್ಕಳ ಸಹಕಾರ ಪ್ರೋತ್ಸಾಹವಿತ್ತು ಎನ್ನುವ ಸದಾಶಿವ ಶೆಟ್ಟಿಗಾರರಿಗೆ ಇನ್ನಷ್ಟು ಕಲಾಸೇವೆಯನ್ನು ಮಾಡುವ ಅವಕಾಶ ಒದಗಲಿ.

ಲೇಖಕ: ರವಿಶಂಕರ್ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments