Saturday, January 18, 2025
Homeಯಕ್ಷಗಾನಗತ್ತುಗಾರಿಕೆ, ಲಾಲಿತ್ಯ, ಭಾವಾಭಿನಯ, ಲಯಸಿದ್ಧಿ ಮೇಳೈಸಿದ ಅಭಿನಯ ಚತುರ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ

ಗತ್ತುಗಾರಿಕೆ, ಲಾಲಿತ್ಯ, ಭಾವಾಭಿನಯ, ಲಯಸಿದ್ಧಿ ಮೇಳೈಸಿದ ಅಭಿನಯ ಚತುರ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ

ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಬಡಗುತಿಟ್ಟಿನ ಶ್ರೇಷ್ಠ ಕಲಾವಿದ. ಪ್ರದರ್ಶನಗಳನ್ನು ನೋಡುತ್ತಾ ಅಭಿನಯಿಸುತ್ತಾ ತನ್ನ ಪರಿಶ್ರಮ ಮತ್ತು ಹಿರಿಯ ಕಲಾವಿದರ ಒಡನಾಟ, ನಿರ್ದೇಶನಗಳಿಂದ ಬೆಳೆದು ಪಕ್ವರಾದವರು. ತನ್ನ ಹನ್ನೆರಡನೆಯ ವರ್ಷದಿಂದ ಆರಂಭಿಸಿ, ಸತತ 40 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಾ ಕಲಾಭಿಮಾನಿಗಳ ಮನಸೂರೆಗೊಂಡಿದ್ದಾರೆ.

ಕೊಂಡದಕುಳಿಯವರು ಇದ್ದಾರಾ? ಅವರೇನು ವೇಷ ಮಾಡ್ತಾರೆ ಇಂದು? ಎಂದು ಕೇಳುವಷ್ಟು ಪ್ರೇಕ್ಷಕರ ಮನದಲ್ಲಿ ತುಂಬಿಕೊಂಡಿದ್ದಾರೆ. ಪ್ರಸಂಗ ಗೊತ್ತಾದರೆ ಸಾಕು, ಕೊಂಡದಕುಳಿಯವರು ಇಂತಹ ವೇಷವನ್ನೇ ಮಾಡುತ್ತಾರೆ ಎಂದು ಕಲಾಭಿಮಾನಿಗಳು ನಿರ್ಣಯಿಸುವಷ್ಟು ಪ್ರಸಿದ್ಧರಿವರು. ಗತ್ತುಗಾರಿಕೆ, ಲಾಲಿತ್ಯ, ಭಾವಾಭಿನಯ, ಲಯಸಿದ್ಧಿ ಎಲ್ಲವೂ ಇವರ ವೇಷಗಳಲ್ಲಿ ತುಂಬಿಕೊಂಡಿವೆ. ಲಯ ಮತ್ತು ಅಭಿನಯದಲ್ಲಿ ಖಚಿತತೆ ಇರುವ ಕಾರಣದಿಂದ ಕೊಂಡದಕುಳಿಯವರ ವೇಷಗಳಿಗೆ ಪದ್ಯ ಹೇಳುವುದು ಸುಲಭವೆಂದು ಭಾಗವತರುಗಳನೇಕರ ಅಭಿಪ್ರಾಯವೂ ಹೌದು.

‘‘ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ (ರಿ.) ಕುಂಭಾಶಿ’’ ಎಂಬ ಸಂಸ್ಥೆಯ ಸ್ಥಾಪಕರಾದ ಶ್ರೀಯುತರು ಯಕ್ಷಗಾನ ಕ್ಷೇತ್ರದಲ್ಲಿ ತೋರಿದ ಸಾಧನೆಯು ಪ್ರಶಂಸನೀಯವಾದುದು.ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ಬೇರಂಕಿ ಗ್ರಾಮದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಹುಟ್ಟೂರು. 1961ನೇ ಇಸವಿ ಜೂನ್ 26ರಂದು ಶ್ರೀ ಗಣೇಶರಾಮ ಹೆಗಡೆ ಮತ್ತು ಶ್ರೀ ಕಮಲಾ ದಂಪತಿಗಳ ಮಗನಾಗಿ ಜನಿಸಿದರು. ಓದಿದ್ದು ಎಸ್.ಎಸ್. ಎಲ್.ಸಿ. ವರೇಗೆ. 1ನೇ ತರಗತಿಯಿಂದ 7ರ ವರೇಗೆ ಬೇರಂಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು 10ನೇ ತರಗತಿ ವರೇಗೆ ಅನಿಲಗೋಡ ಜನತಾ ವಿದ್ಯಾಲಯದಲ್ಲಿ.

ಕೊಂಡದಕುಳಿಯವರ ತೀರ್ಥರೂಪರು ಗಣೇಶರಾಮ ಹೆಗಡೆಯವರು ಕೃಷಿಕರು. ಕಲಾವಿದರಲ್ಲದಿದ್ದರೂ ಕಲಾಸಕ್ತರೇ ಆಗಿದ್ದರು. ಅಜ್ಜ ಕೊಂಡದಕುಳಿ ಶ್ರೀ ರಾಮ ಹೆಗಡೆ ಮತ್ತು ಸಣ್ಣಜ್ಜ ಶ್ರೀ ಲಕ್ಷ್ಮಣ ಹೆಗಡೆಯವರು ಆ ಕಾಲದ ಪ್ರಸಿದ್ಧ ಕಲಾವಿದರಾಗಿದ್ದರು. (ನಾರಾಯಣ ಹೆಗಡೆಯವರ ಅವಳಿ ಮಕ್ಕಳು). ಇಬ್ಬರೂ ವಾಕ್ಚಾತುರ್ಯವನ್ನು ಹೊಂದಿ ವೇಷಧಾರಿಗಳೂ, ತಾಳಮದ್ದಳೆ ಅರ್ಥಧಾರಿಗಳೂ ಆಗಿದ್ದರು. ಕೃಷಿಕುಟುಂಬ. ಜತೆಗೆ ಯಕ್ಷಗಾನ ಕಲಾವಿದರಾಗಿಯೂ ಮೆರೆದಿದ್ದರು.

ಇವರು ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕೊಂಡದಕುಳಿ ಈ ಮೇಳವನ್ನು ನಡೆಸುತ್ತಿದ್ದರು. ಖ್ಯಾತ ಕಲಾವಿದರಾಗಿದ್ದ ಜಲವಳ್ಳಿ ಶ್ರೀ ವೆಂಕಟೇಶ ರಾಯರು ಸದ್ರಿ ಮೇಳದಲ್ಲಿ ಸ್ತ್ರೀವೇಷಧಾರಿಯಾಗಿ ತಿರುಗಾಟ ನಡೆಸಿದ್ದರಂತೆ. ಕೊಂಡದಕುಳಿ ರಾಮ ಹೆಗಡೆಯವರಿಗೆ ವಾಲಿ, ಕೌರವ ಮೊದಲಾದ ಪಾತ್ರಗಳು ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಲಕ್ಷ್ಮಣ ಹೆಗಡೆಯವರು ಹನೂಮಂತ ಅಲ್ಲದೆ ಹಲವಾರು ಒಡ್ಡೋಲಗ ಪಾತ್ರಗಳಲ್ಲಿ ಹೆಸರು ಗಳಿಸಿದ್ದರು. ಲಕ್ಷ್ಮಣ ಹೆಗಡೆಯವರು 68ನೇ ವಯಸ್ಸಿನಲ್ಲೂ ರಾಮ ಹೆಗಡೆಯವರು 78ನೇ ವಯಸ್ಸಿನಲ್ಲಿ ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡಿದ್ದರು. ಕೊಂಡದಕುಳಿ ಶ್ರೀ ರಾಮ ಹೆಗಡೆಯವರು ರಾಜ್ಯ ಪ್ರಶಸ್ತಿ ವಿಜೇತ ಕಲಾವಿದರಾಗಿದ್ದರು.

ಕಲಾವಿದರ ಮನೆ. ತಂದೆ ಕಲಾವಿದರಲ್ಲದಿದ್ದರೂ ಅಜ್ಜಂದಿರಿಬ್ಬರಿಂದ ಕೊಂಡದಕುಳಿ ರಾಮಚಂದ್ರ ಹೆಗ್ಗಡೆಯವರಿಗೆ ಯಕ್ಷಗಾನವು ಬಳುವಳಿಯಾಗಿ ಬಂದಿತ್ತು. ಕಲೆಯು ರಕ್ತಗತವಾಗಿತ್ತು. ಶಾಲಾ ವಿದ್ಯಾರ್ಥಿಯಾಗಿರುವಾಗಲೇ ಆಟಗಳನ್ನು ನೋಡುತ್ತಾ 20 ಪ್ರಸಂಗಗಳ ನಡೆ, ಪದ್ಯ ಕಂಠಪಾಠವಾಗಿತ್ತು! ಎಸ್.ಎಸ್.ಎಲ್.ಸಿ. ವಿದ್ಯಾರ್ಜನೆ ಪೂರೈಸಿದಾಗಲೇ ಶ್ರೀ ಮಹಾ ಗಣಪತಿ ಯಕ್ಷಗಾನ ತಾಳಮದ್ದಳೆ ಸಂಘವನ್ನೂ ಸ್ಥಾಪಿಸಿದ್ದರು. ಪ್ರತೀ ಭಾನುವಾರ ಬೇರಂಕಿ ಶಾಲೆಯಲ್ಲಿ ತಾಳಮದ್ದಳೆ ನಡೆಸುತ್ತಿದ್ದರು.

ಬಹುಷಃ ಇವರಿಗೆ ಸಂಘಟನಾ ಚಾತುರ್ಯವೂ ಅಜ್ಜಂದಿರಿಬ್ಬರಿಂದ ಒದಗಿ ಬಂದಿರಬೇಕು. ಮೇಳವನ್ನು ಕಟ್ಟಿ ನಡೆಸಿದವರು ತಾನೆ? ಬಾಲಕನಾಗಿದ್ದಾಗ ರಾತ್ರೆಯಿಡೀ ಆಟ ನೋಡಿ ರಾಮಚಂದ್ರ ಹೆಗಡೆಯವರು ಹಗಲು ಮುಖಕ್ಕೆ ಬಣ್ಣ ಹಾಕಿ ಗೇರುಬೆಟ್ಟದಲ್ಲಿ ಕುಣಿದು ಅಭಿನಯಿಸುತ್ತಿದ್ದರು. ಆಗಲೇ ಕಲಾವಿದನೊಬ್ಬ ಅವರೊಳಗೆ ಅಡಗಿ ಕುಳಿತಿದ್ದ. ಅಜ್ಜ ರಾಮ ಹೆಗಡೆಯವರು ಮೊಮ್ಮಗನ ಏಕಪಾತ್ರಾಭಿನಯವನ್ನು ದಿನವೂ ಇವರಿಗರಿಯದಂತೆ ನೋಡುತ್ತಿದ್ದರು.

ಒಂದು ದಿನ ಚಿಟ್ಟಾಣಿಯವರ ಭಸ್ಮಾಸುರನ ಪಾತ್ರವನ್ನು ನೋಡಿ ಗುಡ್ಡದಲ್ಲಿ ಕೊಂಡದಕುಳಿಯವರು ಕುಣಿಯುತ್ತಿರುವಾಗ ನೋಡಿದ ಅಜ್ಜ ಕರೆದು ಏ ಮಾಣೀ… ಯಕ್ಷಗಾನ ಕಲಿಯುತ್ತಿಯಾ? ಎಂದು ಕೇಳಿದ್ದರು. ಮುರ್ಡೇಶ್ವರದಿಂದ ಕೆಲಸ ನಿಮಿತ್ತ ಬೇರಂಕಿ ಗ್ರಾಮಕ್ಕೆ ಬಂದಿದ್ದ ಮಹನೀಯರೊಬ್ಬರು ತೋಟದಲ್ಲಿ ಇವರ ಕುಣಿತವನ್ನು ನೋಡಿ- ಏ… ರಾಮಚಂದ್ರಾ ಒಂದು ತಾಸಿನಿಂದ ಕುಣೀತಾ ಇದ್ದಿಯಾ. ಏನು ಕಲಾವಿದನಾಗೋ ಆಸೆಯಾ? ಎಂದಿದ್ದರಂತೆ. ಅಂದಿನ ದಿನದಿಂದಲೇ ಅಜ್ಜ ರಾಮ ಹೆಗಡೆಯವರಿಂದ ಮನೆಯಲ್ಲಿಯೇ ಪಾಠ ಆರಂಭ. ಇವರ ಜತೆ ತಮ್ಮ ಗಣಪತಿಯೂ ಸೇರಿಕೊಂಡ. ಮೊಮ್ಮಕ್ಕಳಿಬ್ಬರಿಗೆ ಅಜ್ಜನಿಂದ ಯಕ್ಷಗಾನ ಪಾಠ ಶುರುವಾಗಿತ್ತು. ನಾಟ್ಯ ಮತ್ತು ಮಾತುಗಾರಿಕೆಗೆ ಅಜ್ಜ ರಾಮ ಹೆಗಡೆಯವರೇ ಮೊದಲ ಗುರುಗಳು.

ರುಕ್ಮಾಂಗದ ಚರಿತ್ರೆ ಪ್ರಸಂಗದ ಧರ್ಮಾಂಗದನಾಗಿ ಕೊಂಡದಕುಳಿಯವರು ರಂಗವೇರಿದರು. (ಮೊದಲ ಭಾಗ ಭರತನ ಸನ್ನಿವೇಶದ ವರೇಗೆ). ಅಂದು ಅವರ ತಮ್ಮ ಗಣಪತಿ  ಹೆಗಡೆಯವರು ಭರತನ ಪಾತ್ರವನ್ನು ಮಾಡಿದ್ದರು. ಗಣಪತಿ  ಹೆಗಡೆಯವರು ಸ್ನಾತಕೋತ್ತರ ಪದವೀಧರರೂ, ಉತ್ತಮ ಸಾಹಿತ್ಯ ರಚನಾಕಾರರೂ ಆಗಿದ್ದಾರೆ. ಹೀಗೆ ಆರಂಭವಾದುದು ಕೊಂಡದಕುಳಿಯವರ ಯಕ್ಷಯಾತ್ರೆ. ಎಸ್.ಎಸ್.ಎಲ್.ಸಿ. ಆದ ನಂತರ ಮೂರು ವರ್ಷಗಳು ಮನೆಯಲ್ಲಿಯೇ ಇದ್ದು ಕೃಷಿ ಚಟುವಟಿಕೆ, ಮರ ಹತ್ತುವುದು, ಗೊನೆ ತೆಗೆಯುವುದು, ಸೊಪ್ಪು ಗೊಬ್ಬರ ಹಾಕುವುದು ಜತೆಗೆ ಆಟ ನೋಡುವುದು ಹೀಗೆ ಸಾಗಿತ್ತು ಜೀವನ. ಮತ್ತೆ ಮೇಳಕ್ಕೆ ಹೋಗಿ ಕಲಾವಿದನಾಗುವ ಬಯಕೆ ಚಿಗುರೊಡೆಯಿತು. ಅಜ್ಜನ ಬಳಿ ಪ್ರಸ್ತಾಪ. ಗುಂಡಬಾಳಾ ಮೇಳಕ್ಕೆ ಹೋಗು ಎಂದರಂತೆ.

ಕೊಂಡದಕುಳಿಯವರು ಅಮೃತೇಶ್ವರೀ ಮೇಳಕ್ಕೆ ಹೋಗುತ್ತೇನೆ ಎಂದರಂತೆ. ಕಾರಣ… ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿರುವ ಮೇಳ ಅದು. ಕೊಂಡದಕುಳಿಯವರು ಅವರ ಅಭಿಮಾನಿಯಾಗಿದ್ದರು. ಚಿಟ್ಟಾಣಿಯವರನ್ನು ವಿನೋದಕ್ಕಾಗಿ ಯಾರಾದರೂ ಬೈದರೂ ಸಿಟ್ಟಾಗುತ್ತಿದ್ದರಂತೆ. ಅವರಿಗೆ ಹೊಡೆಯಲು ಹೋಗುತ್ತಿದ್ದರಂತೆ ಕೊಂಡದಕುಳಿಯವರು. ಹಾಗೆ 1979 ನವೆಂಬರ್ ನಲ್ಲಿ  ಮೇಳದ ತಿರುಗಾಟ ಆರಂಭ. ಈಗಿನ ಪ್ರಸಿದ್ಧ ಭಾಗವತ ಹೆರಂಜಾಲು ಗೋಪಾಲ ಗಾಣಿಗರೂ ಇವರು ಬಾಲಗೋಪಾಲರಾಗಿ ತಿರುಗಾಟ ಶುರು ಆಗಿತ್ತು. ಆಗ ಉಪ್ಪೂರರೂ, ಕಡತೋಕ ಕೃಷ್ಣ ಭಾಗವತರೂ ಅಮೃತೇಶ್ವರೀ ಮೇಳದಲ್ಲಿ ಭಾಗವತರುಗಳಾಗಿದ್ದರು. ವೇಷ ಕಟ್ಟಲು, ಬಣ್ಣ ಹಾಕಲು ತಿಳಿಯದ ಕಾರಣ ಕುಣಿಯುವಾಗ ಕೊಂಡದಕುಳಿಯವರನ್ನು ನೋಡಿದವರೆಲ್ಲಾ ನಗಾಡುತ್ತಿದ್ದರಂತೆ.

ಭಾಗವತರಾದ ಶ್ರೀ ನಾರ್ಣಪ್ಪ ಉಪ್ಪೂರರು ಕರೆದು ಏ ಮಾಣೀ ವೇಷ ಸುಖ ಇಲ್ಲೆ ಅಂತ ಗದರಿಸಿದ್ದರು. ಕೋಲಿನ ಪೆಟ್ಟಿಗಿಂತಲೂ ಮಾತಿನ ಪೆಟ್ಟೇ ಪರಿಣಾಮ ಬೀರಿತು. 15 ದಿನಗಳಲ್ಲೇ ಮೇಳ ಬಿಟ್ಟು ಕೊಂಡದಕುಳಿಯವರು ಮನೆಗೆ ಹೋಗಿದ್ದರು. “ಆಟ ಸಾಕು. ತೋಟವೇ ಅಡ್ಡಿ ಇಲ್ಲೆ’’ ಎಂದು ಅಜ್ಜನಲ್ಲಿ ಹೇಳಿದ್ದರು. ತೋಟಕ್ಕೆ ಹೋದಾಗಲೂ ಚಿಂತೆ ಇದುವೆ. ಕೇದಗೆ ಮುಂದಲೆ ಕಟ್ಟಲು ನನಗೇಕೆ ಆಗುವುದಿಲ್ಲ? ಇದೇನು ಒಂದು ಬ್ರಹ್ಮವಿದ್ಯೆಯಾ? ಎಂದು ನಿರ್ಧರಿಸಿ ಅಭ್ಯಾಸಕ್ಕೆ ಪ್ರಾರಂಭಿಸಿದರು. ಜಾಣನಿಗೆ ಉಪ್ಪೂರರು ಮಾತಿನ ಹೊಡೆತವನ್ನೇ ನೀಡಿದ್ದರು. ಪರಿಣಾಮವೂ ಮೂಡಿತ್ತು. ಕನ್ನಡಿ ಮುಂದೆ ಕುಳಿತು ಬಣ್ಣ ಹಾಕಲು, ಕಿರೀಟ ಕಟ್ಟಲು ಅಭ್ಯಸಿಸಿದರು. ಆ ಕಲೆಯು ಕರಗತವೂ ಆಯಿತು. ಮತ್ತೆ ಅಜ್ಜನ ಬಳಿ ಮೇಳಕ್ಕೆ ಹೋಗುತ್ತೇನೆ ಎಂಬ ಹಠ. ಮೊದಲೇ ಗುಂಡಬಾಳಾ ಮೇಳಕ್ಕೆ ಹೋಗು ಎಂದಿದ್ದ ರಾಮ ಹೆಗಡೆಯವರು ಮೊಮ್ಮಗನಿಗೆ ಬೈದಿದ್ದರು. ಆದರೂ ಮೇಳಕ್ಕೆ ಸೇರಲು ಸಮ್ಮತಿ ಸೂಚಿಸಿದರು.

ಅದೇ ವರ್ಷ ಜನವರಿ 26ಕ್ಕೆ ಗುಂಡಬಾಳಾ ಮೇಳಕ್ಕೆ (1979). ಸದ್ರಿ ಮೇಳದಲ್ಲಿ ಹಿರಿಗದ್ದೆ ಶಂಕರ ಭಾಗವತ್ ಭಾಗವತರಾಗಿದ್ದರು. ಮೊದಲ ಬಾರಿಗೆ ಲಕ್ಷ್ಮಣನಾಗಿ ಗೆದ್ದರು. ಅಂದು ಬಳ್ಕೂರು ರಾಮಚಂದ್ರ ಯಾಜಿ (ಬಳ್ಕೂರು ಕೃಷ್ಣ ಯಾಜಿಯವರ ಅಣ್ಣ) ಶ್ರೀರಾಮನಾಗಿಯೂ, ಬಳ್ಕೂರು ವಿಷ್ಣು ಆಚಾರ್ ಅವರು ಮಾಯಾ ಶೂರ್ಪನಖಿಯಾಗಿಯೂ ಅಭಿನಯಿಸಿದ್ದರು.  ಸದ್ರಿ ಮೇಳದಲ್ಲಿ 3 ವರ್ಷಗಳ ತಿರುಗಾಟ. ಕೊಂಡದಕುಳಿಯವರು ಸುಧನ್ವ, ಶ್ರೀಕೃಷ್ಣ, ಹನೂಮಂತ ಮೊದಲಾದ ಪಾತ್ರಗಳಲ್ಲಿ ಕಾಣಿಸಿಕೊಂಡರು. ಮಾತುಗಾರಿಕೆಯ ಬಗೆಗಿನ ಎಚ್ಚರಿಕೆಯನ್ನು ಅಜ್ಜ ರಾಮ ಹೆಗಡೆಯವರು ಹೇಳಿದ್ದರು. ಅಲ್ಲದೆ ಶೇಣಿ, ಸಾಮಗ, ಕುಂಬಳೆಯವರ ಆಡಿಯೋ ಕ್ಯಾಸೆಟ್‍ಗಳನ್ನು ಕೇಳಿ ಪಾತ್ರಕ್ಕೆ ಸಂಭಾಷಣೆಗಳನ್ನು ಅಳವಡಿಸುತ್ತಿದ್ದರು. ಮೇಳದಲ್ಲಿ ಬಳ್ಕೂರು ರಾಮಚಂದ್ರ ಯಾಜಿಯವರೂ ಹೇಳಿಕೊಡುತ್ತಿದ್ದರು. ಚೆನ್ನಾಗಿ ಹೇಳಿಕೊಡುತ್ತಿದ್ದರು ಎಂದು ಹೇಳಿ ನೆನಪಿಸುವ ಮೂಲಕ ಕೊಂಡದಕುಳಿಯವರು ಅವರನ್ನು ಗೌರವಿಸುತ್ತಾರೆ.

ಗುಂಡಬಾಳಾ ಮೇಳದಲ್ಲಿ ಮೂರೂರು ವಿಷ್ಣು ಭಟ್, ಹಡಿನಬಾಳಾ ಶ್ರೀಪಾದ ಹೆಗಡೆ, ಗುಂಡಿಬೈಲು ಸುಬ್ರಾಯ ಭಟ್ ಮೊದಲಾದವರು ಸಹ ಕಲಾವಿದರಾಗಿದ್ದರು. ಮೇಳದ ಸಂಚಾಲಕರಾಗಿ, ಕಲಾವಿದರಾಗಿ ಹಡಿನಬಾಳ ಶ್ರೀ ಸತ್ಯ ಹೆಗಡೆಯವರ ಪ್ರೋತ್ಸಾಹವೂ ಇತ್ತು. 1982ರಲ್ಲಿ ಪಳ್ಳಿ ಸೋಮನಾಥ ಹೆಗ್ಡೆಯವರ ಸಾಲಿಗ್ರಾಮ ಮೇಳಕ್ಕೆ. 18 ವರ್ಷಗಳ ತಿರುಗಾಟ. ಕಾಳಿಂಗ ನಾವಡರ ಭಾಗವತಿಕೆಯಲ್ಲಿ 6 ವರ್ಷ. ನಂತರ ಶ್ರೀ ನಾರಾಯಣ ಶಬರಾಯ ಮತ್ತು ವಿದ್ವಾನ್ ಗಣಪತಿ ಭಟ್ಟರ ಭಾಗವತಿಕೆ. ಸದ್ರಿ ಮೇಳದಲ್ಲಿ ಮೊದಲ ಮೂರು ವರ್ಷ ಒಂದು ರಾತ್ರೆಯಲ್ಲಿ ನಾಲ್ಕೈದು ವೇಷಗಳ ನಿರ್ವಹಣೆ. ಬೆಳಗಿನ ವರೆಗೂ ವೇಷ. ಇದರಿಂದ ಬೆಳೆಯಲು, ಕಲಿಯಲು ಅನುಕೂಲವಾಯಿತು. ಪುಂಡುವೇಷ ಮತ್ತು ಒಡ್ಡೋಲಗ ವೇಷಗಳಲ್ಲಿ ರಂಜಿಸಿದರು.  

ಕಲಿತರು, ಬೆಳೆದರು. ಎಷ್ಟು ಬೆಳೆದರೆಂದರೆ ಜಲವಳ್ಳಿಯವರು ರಜೆಯಾದರೆ ಶನಿ, ಸಾಮಗರು ರಜೆಯಾದರೆ ವಿಕ್ರಮಾದಿತ್ಯ, ಬೆಳಿಯೂರು ರಜೆಯಾದರೆ ನಂದಿಶೆಟ್ಟಿ, ಮುಖ್ಯಪ್ರಾಣ ರಜೆಯಾದರೆ ಕುದುರೆ ವ್ಯಾಪಾರಿ ಮಾಡುವಷ್ಟು ಬೆಳೆದರು! ಮುಖ್ಯ ಕಲಾವಿದರ ಅನುಪಸ್ಥಿತಿಯಲ್ಲಿ ಅವರು ನಿರ್ವಹಿಸುತ್ತಿದ್ದ ಪಾತ್ರಗಳನ್ನು ಆಕಸ್ಮಿಕವಾಗಿ ಮಾಡಿ  ರಂಜಿಸಿದರು. ಕೆಲವು ಪ್ರಸಂಗಗಳಲ್ಲಿ ಅನಿವಾರ್ಯವಾಗಿ ಪಾತ್ರಗಳನ್ನು ನಿರ್ವಹಿಸಿ, ಆ ಪಾತ್ರಗಳು ಇವರಿಗೆ ಖಾಯಂ ಆಗಿತ್ತು. ಶ್ರೀ ಸಾಲಿಗ್ರಾಮ ಮೇಳದ ತಿರುಗಾಟದ ನಂತರ (18 ವರ್ಷ) ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಶ್ರೀ ಪಂಚಲಿಂಗೇಶ್ವರ ಮೇಳಕ್ಕೆ (ಶಿರಸಿ) ಸೇರಿದರು. ಪುರ್ಲೆ ಶ್ರೀ ರಾಮಚಂದ್ರ ಹೆಗಡೆಯವರ ಯಾಜಮಾನ್ಯ. ನೆಬ್ಬೂರು ಶ್ರೀ ನಾರಾಯಣ ಭಾಗವತ, ಕೆ. ಪಿ. ಹೆಗಡೆ, ವಿದ್ವಾನ್ ಗಣಪತಿ ಭಟ್, ಕೆಪ್ಪೆಕೆರೆ ಸುಬ್ರಾಯ ಭಾಗವತ, ಹೊಳೆಗೆದ್ದೆ ಗಜಾನನ ಭಂಡಾರಿ, ಶಂಕರ ಭಾಗವತ್ ಯಲ್ಲಾಪುರ ಅಲ್ಲದೆ ವೇಷಕ್ಕೆ ಕೆಪ್ಪೆಕೆರೆ ಮಹಾದೇವ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ ಮೊದಲಾದ ಶ್ರೇಷ್ಠರ ಜತೆ ತಿರುಗಾಟ.

ಸದ್ರಿ ಮೇಳದಲ್ಲಿ ಮಹಾಬಲ ಹೆಗಡೆಯವರ ಜಮದಗ್ನಿ, ಕೊಂಡದಕುಳಿ ಅವರ ಪರಶುರಾಮ, ಮಹಾಬಲ ಹೆಗಡೆಯವರ ಅರ್ಜುನನಿಗೆ ಕೃಷ್ಣ (ಕೃಷ್ಣಾರ್ಜುನ ಕಾಳಗ ಪ್ರಸಂಗದಲ್ಲಿ), ಬ್ರಹ್ಮಕಪಾಲ ಪ್ರಸಂಗದಲ್ಲಿ ಮನ್ಮಥ ಮಾಡಿ ಯಕ್ಷಿಣಿ ಭಾಗದಿಂದ ಈಶ್ವರ, ಪಟ್ಟಾಭಿಷೇಕ ಭರತಾಗಮನ ಪ್ರಸಂಗದಲ್ಲಿ ಶಂಭು ಹೆಗಡೆಯವರ ದಶರಥ ಕೊಂಡದಕುಳಿ ಅವರ ಭರತ- ಹೀಗೆ ಬೆಳೆಯುತ್ತಾ ಸಾಗಿದ ಕೊಂಡದಕುಳಿಯವರಿಗೆ ಮಳೆಗಾಲದಲ್ಲಿ ಚಿಟ್ಟಾಣಿಯವರ ಜತೆ ಅಭಿನಯಿಸುವ ಅವಕಾಶಗಳೂ ಸಿಕ್ಕಿತ್ತು. ಪುಂಡು ವೇಷದಲ್ಲಿ ರಂಜಿಸಿ ಬಹುಬೇಗನೇ ರಾಜವೇಷಗಳನ್ನು ನಿರ್ವಹಿಸುವ ಪ್ರಬುದ್ಧತೆಯು ಸಿದ್ಧಿಸಿತ್ತು. ತನ್ನ 25ನೇ ವಯಸ್ಸಿನಲ್ಲಿ ಗದಾಯುದ್ಧದ ಕೌರವ, 26ನೆಯ ವಯಸ್ಸಿಗೆ ಭೀಷ್ಮ, 30ನೆಯ ವಯಸ್ಸಿನಲ್ಲಿ ಪಟ್ಟಾಭಿಷೇಕ ಪ್ರಸಂಗದ ದಶರಥನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

ರಂಪಾಟದ ಪ್ರಸಂಗಗಳಿಗಿಂತಲೂ ಭಾವನಾತ್ಮಕ ಪ್ರಸಂಗಗಳೇ ಇಷ್ಟ. ಮೈಮರೆತು ಅಭಿನಯಿಸಲು, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತದೆ ಎನ್ನುವ ಕೊಂಡದಕುಳಿಯವರು ನಳ, ಹರಿಶ್ಚಂದ್ರ, ರಾಮ, ರಾವಣ, ಹನೂಮಂತ, ವಾಲಿ, ದಶರಥ, ಭರತ, ಕಾರ್ತವೀರ್ಯ, ಕೀಚಕ, ವಲಲ, ದಕ್ಷ, ಸುಗ್ರೀವ, ಭಸ್ಮಾಸುರ, ದುಷ್ಠಬುದ್ಧಿ, ಚಂದ್ರಹಾಸ, ಭೀಷ್ಮ, ದುಷ್ಯಂತ, ರುಕ್ಮಾಂಗದ, ಉಗ್ರಸೇನ, ವತ್ಸಾಖ್ಯ ಧರ್ಮಾಂಗದ, ವಿಕ್ರಮ ಮೊದಲಾದ ಪಾತ್ರಗಳಲ್ಲಿ ರಂಜಿಸಿದರು. ಋತುಪರ್ಣನನ್ನೂ ಮಾಡಬಲ್ಲರು. ಬಾಹುಕನಾಗಿಯೂ ಅಭಿನಯಿಸಬಲ್ಲರು. ಮೋಹಿನಿ, ಮೇನಕೆ, ಚಂದ್ರಾವಳೀ, ಚಿತ್ರಾಕ್ಷಿ, ಪ್ರಮೀಳೆ, ನಾರದ, ಅಕ್ರೂರ, ವಿದುರ ಮೊದಲಾದ ಪಾತ್ರಗಳನ್ನೂ ಜನ ಮೆಚ್ಚುವಂತೆ ನಿರ್ವಹಿಸಿದರು. ಹಾಸ್ಯ ಪಾತ್ರಗಳಲ್ಲೂ ಸೈ ಎನಿಸಿಕೊಂಡರು.

2000ನೇ ಇಸವಿ ನವಂಬರ್ 16ರಂದು ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ (ರಿ.) ಕುಂಭಾಶಿ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಸದ್ರಿ ಸಂಸ್ಥೆಯಡಿಯಲ್ಲಿ ಪ್ರದರ್ಶನಗಳನ್ನು ನೀಡುತ್ತಿರುವ ಹಿರಿಮೆ ಕೊಂಡದಕುಳಿ ರಾಮಚಂದ್ರ ಹೆಗಡೆಯವರದು. ಈ ತಂಡವು ಭಾರತ ದೇಶದ ನಾನಾ ಕಡೆ ಮತ್ತು ವಿದೇಶಗಳಲ್ಲಿ ಪ್ರದರ್ಶನಗಳನ್ನು ನೀಡಿದೆ (ಸಿಂಗಾಪುರ, ದುಬೈ, ಶಾರ್ಜಾ, ಅಬುದಾಭಿ ಮತ್ತು ಅಮೇರಿಕಾದಲ್ಲಿ). ಪ್ರಸ್ತುತ 22 ವರ್ಷಗಳಿಂದ ಕುಂಭಾಶಿಯಲ್ಲಿ ವಾಸ್ತವ್ಯ. ಇವರ ಬಾಳಸಂಗಾತಿಯಾಗಿ ಬಂದವರು ಪೂರ್ಣಿಮಾ. ಪತಿಯ ನೆರಳಾಗಿ ಬದುಕಿದವರು ಶ್ರೀಮತೀ ಪೂರ್ಣಿಮಾ ರಾಮಚಂದ್ರ ಹೆಗಡೆಯವರು. ಕಲಾಸಕ್ತೆಯೂ ಆಗಿದ್ದರು. 2010ರಲ್ಲಿ ಅವರು ಅಲೌಕಿಕ ಪ್ರಪಂಚವನ್ನು ಸೇರಿಕೊಂಡಿದ್ದರು.

ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ದಂಪತಿಗಳಿಗೆ ಮೂವರು ಮಕ್ಕಳು (ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ). ಹಿರಿಯ ಪುತ್ರಿ ಶ್ರೀಮತಿ ಅಶ್ವಿನಿ ಕೊಂಡದಕುಳಿ M.Sc. ಓದಿದವರು. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಕಲಾವಿದೆಯಾಗಿ, ಸಂಘಟಕಿಯಾಗಿ ಪ್ರಸಿದ್ಧರು. ಇವರು ಬಡಗಿನ ಉದಯೋನ್ಮುಖ ಕಲಾವಿದ ಶ್ರೀ ಉದಯ ಕಡಬಾಳರ ಪತ್ನಿ. ಕಿರಿಯ ಪುತ್ರಿ ಅಕ್ಷತಾ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮಾಡಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರ ಗುರುಗಣೇಶ ಪದವಿ ವಿದ್ಯಾರ್ಥಿ. ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಸಂಸ್ಥೆಯಡಿಯಲ್ಲಿ ತನ್ನ ಅಜ್ಜ ಕೊಂಡದಕುಳಿ ಶ್ರೀ ರಾಮ ಹೆಗಡೆಯವರ ಹೆಸರಿನ ಪ್ರಶಸ್ತಿಯನ್ನು ವಿವಿಧ ವಿಭಾಗಗಳಲ್ಲಿ ಸಾಧಕರಾಗಿ ಮೆರೆದವರಿಗೆ ನೀಡುತ್ತಾ ಬಂದಿದ್ದಾರೆ (31 ವರ್ಷಗಳಿಂದ) ಶ್ರೀಯುತರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯರಾಗಿಯೂ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ.

ಒಟ್ಟು 40 ವರ್ಷಗಳ ಕಲಾಸೇವೆ ಇವರದು. ಶ್ರೇಷ್ಠ ಕಲಾವಿದ, ತಾಳಮದ್ದಳೆ ಅರ್ಥಧಾರಿ, ಸಂಯಮಂ ತಂಡದ ರೂವಾರಿ ಶ್ರೀ ವಾಸುದೇವ ಸಾಮಗರು ನನ್ನ ಅಘೋಷಿತ ಗುರು ಎಂದೂ, ಸರಳವಾಗಿ ಸಂಭಾಷಣೆಗಳನ್ನು ಹೇಳಿಕೊಡುತ್ತಾರೆ, ಕೊಟ್ಟಿರುತ್ತಾರೆ, ಈಗಲೂ ಹೊಸ ಪಾತ್ರಗಳು ಬಂದಾಗ ಅವರಲ್ಲಿ ಕೇಳುತ್ತೇನೆ ಎಂದು ಹೇಳುವ ಮೂಲಕ ಅವರನ್ನು ಕೊಂಡದಕುಳಿಯವರು ಗೌರವಿಸುತ್ತಾರೆ. ಪ್ರಸ್ತುತ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಪತ್ನಿ ಚೇತನಾ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments