ಯಶಸ್ವೀ ವ್ಯಕ್ತಿಗಳ ಸಾಧನೆಯೇನೂ ಅದ್ಭುತಗಳಿಂದ ಸಿದ್ಧಿಸಿದ್ದಲ್ಲ. ಪವಾಡ ನಡೆಸಿ ಜೀವನದಲ್ಲಿ ಯಶಸ್ಸು ಸಂಪಾದಿಸಲು ಸಾಧ್ಯವಿಲ್ಲ. ಜನಪ್ರಿಯತೆಯ ಹಿಂದಿನ ಶ್ರಮದ ಮಹತ್ವ ಅರಿಯಬೇಕಾದರೆ ದೀರ್ಘ ಯಶೋಗಾಥೆಗಳನ್ನು ತಿಳಿಯಬೇಕು. ಅಲ್ಲಿ ಪವಾಡಗಳಿರುವುದಿಲ್ಲ. ಕೇವಲ ಅದೃಷ್ಟವನ್ನೇ ನಂಬಿ ಕುಳಿತ ಕಾಯಕ ವಿರುವುದಿಲ್ಲ. ಪ್ರತಿಯೊಂದು ಯಶಸ್ಸಿನ ಕಣಕಣಗಳಲ್ಲಿಯೂ ಶ್ರಮದ ಬೆವರಿನ ವಾಸನೆಯಿರುತ್ತದೆ. ಕಷ್ಟಗಳ ಕಣ್ಣೀರಿನ ಬಿಂದುಗಳ ಚಿತ್ರಗಳಿರುತ್ತವೆ.
ಜನರು ಆರಾಧಿಸುವ, ಇಂದು ಉನ್ನತ ಸ್ಥಾನದಲ್ಲಿ ರಾರಾಜಿಸುತ್ತಿರುವವರೆಲ್ಲರೂ ನಿರಾಯಾಸವಾಗಿ ಆ ಸಾಧನೆಗಳನ್ನು ಸಿದ್ಧಿಸಿಕೊಂಡವರಲ್ಲ. ಕನಸುಗಳನ್ನು ನನಸಾಗಿಸುವಲ್ಲಿ ಅವರ ಆ ಛಲದ ಪಯಣ ಹಾಗೂ ಶ್ರಮ ಅವರನ್ನು ಅಷ್ಟು ಎತ್ತರಕ್ಕೇರಿಸಿದೆ.ಕೆಲವರಂತೂ ಬದುಕಿನುದ್ದಕ್ಕೂ ನಿರಂತರ ಹೋರಾಟಗಳನ್ನು ನಡೆಸಿದವರು. ಆ ಪಯಣದಲ್ಲಿ ಅನೇಕ ಎಡರುತೊಡರುಗಳನ್ನು, ಅವಹೇಳನ, ಟೀಕೆಗಳನ್ನು ಎದುರಿಸಿ ಮನಸ್ಸನ್ನು ಕಲ್ಲುಬಂಡೆಯನ್ನಾಗಿಸಿ ನಿರಂತರವಾಗಿ ಮಳೆ ಬಿಸಿಲುಗಳಿಗೆ ಮೈಯೊಡ್ಡಿ ನಿಂತರು, ಅವೆಲ್ಲವುಗಳನ್ನೂ ಮೀರಿ ನಿಂತು ಸಾಧನೆಯೇ ತಪಸ್ಸೆಂದು ಮುನ್ನುಗ್ಗಿ ನಡೆದವರ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಅವರಲ್ಲೊಬ್ಬರು ತೋಟಿಮನೆ ಗಣಪತಿ ಹೆಗಡೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಸಂಘಟಕರ ಕಲಾವಿದ : ಸಾಧಾರಣವಾಗಿ ಯಕ್ಷಗಾನ ಕಲಾವಿದರು ಎದುರಿಸುವ ಮುಖ್ಯ ಆರೋಪವೊಂದಿದೆ. ಸಮಯಕ್ಕೆ ಕೈಕೊಡುವುದು ಹಲವರ ಅಭ್ಯಾಸವಾಗಿ ಬಿಟ್ಟಿದೆ ಎಂಬ ಮಾತು ಕಲಾವಲಯದಲ್ಲಿ ಪ್ರಚಲಿತವಿರುವ ಮಾತು. ಹಾಗೆಂದ ಮಾತ್ರಕ್ಕೆ ಎಲ್ಲರೂ ಆ ರೀತಿ ಎಂದು ತಿಳಿದುಕೊಳ್ಳಬಾರದು. ಆದರೆ ತೋಟಿಮನೆ ಗಣಪತಿ ಹೆಗಡೆಯವರದ್ದು ವಿಭಿನ್ನ ವ್ಯಕ್ತಿತ್ವ. ಕೊನೆಯ ಘಳಿಗೆಯಲ್ಲಿ ಯಾವುದೇ ಪ್ರದರ್ಶನಗಳಿಗೆ ಗೈರು ಹಾಜರಾದವರಲ್ಲ. ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದವರಲ್ಲ. ಸಂಘಟಕರಿಗೂ ನೋವು ತಂದವರಲ್ಲ. ಯಾವುದೇ ಪಾತ್ರವಿರಲಿ ಅದನ್ನು ಸಮರ್ಥವಾಗಿ ನಿಭಾಯಿಸಿ ಪಾತ್ರಕ್ಕೆ ನ್ಯಾಯ ಒದಗಿಸುವ ಸಂಭಾವಿತ.
ಹೋರಾಟದ ಬಾಲ್ಯ : ತೋಟಿಮನೆ ಗಣಪತಿ ಹೆಗಡೆಯವರ ಬಾಲ್ಯವು ಹಸನಾದ ಬದುಕಾಗಿರಲಿಲ್ಲ. ಕಡು ಬಡತನದ ಕಹಿಯನ್ನುಂಡ ಅವರು ಅದಕ್ಕಾಗಿ ವ್ಯಥೆಪಡಲಿಲ್ಲ. ಎಲ್ಲವೂ ವಿಧಿಲಿಖಿತ ನಿಯಮವೆಂದುಕೊಂಡು ಅದನ್ನು ಅನುಭವಿಸಿ ಸಾಧಿಸಿ ತೋರಿಸಿದವರು.
ತೋಟಿಮನೆಯವರ ತಂದೆ ದಿ| ಗೋವಿಂದ ಹೆಗಡೆ ಮತ್ತು ತಾಯಿ ದಿ| ಮಹಾದೇವಿಯವರ ಆಸ್ತಿ, ಶ್ರೀಮಂತಿಕೆಗಳು ಕೈಬಿಟ್ಟು ಹೋಗಿದ್ದರೂ ಮನೆತನದ ಸಂಸ್ಕಾರ, ಹೃದಯವಂತಿಕೆಗಳು ಹಾಗೆಯೇ ಉಳಿದುಕೊಂಡಿದ್ದುವು. ಧನವಿಲ್ಲದೊಡೇನು? ಅತಿಥಿ ಸತ್ಕಾರದ ಮನವಿದ್ದೊಡೆ… ಎಂಬಂತೆ ಮನೆಗೆ ಬಂದವರಿಗೆ ಹೊಟ್ಟೆ ತುಂಬಾ ಬಡಿಸುವ ಔದಾರ್ಯವಿತ್ತು. ಇಂತಹಾ ಸುಮನಸರಾದ ಗೋವಿಂದ ಹೆಗಡೆ, ಮಹಾದೇವಿ ದಂಪತಿಗಳ ನಾಲ್ಕು ಮಂದಿ ಮಕ್ಕಳಲ್ಲಿ ತೋಟಿಮನೆ ಗಣಪತಿ ಎರಡನೆಯವರು. 14-07-1964ರಲ್ಲಿ ಹೊನ್ನಾವರ ತಾಲೂಕಿನ ನಗರೆ ಗ್ರಾಮದ ತೋಟಿಮನೆಯಲ್ಲಿ ಜನಿಸಿದ ಗಣಪತಿ ಹೆಗಡೆಯ ಅಣ್ಣ ಸತ್ಯನಾರಾಯಣ ಹೆಗಡೆ (ಹವ್ಯಾಸಿ ಕಲಾವಿದರು) ಮತ್ತು ಇಬ್ಬರು ತಂಗಿಯಂದಿರು.
ಅಣ್ಣ ಸತ್ಯನಾರಾಯಣ ಹೆಗಡೆಯವರು ವಿದ್ಯಾಭ್ಯಾಸದಲ್ಲಿ ಮುಂದಿದ್ದು ಪದವಿ ಶಿಕ್ಷಣವನ್ನು ಪೂರೈಸಿದ್ದರೂ ಗಣಪತಿ ಹೆಗಡೆಯವರಿಗೆ ಮಾತ್ರ ಓದು ಅಷ್ಟಾಗಿ ತಲೆಗೆ ಹತ್ತಲಿಲ್ಲ. ಶಾಲೆಯಲ್ಲಿ ಪುಂಡಾಟದ ಹುಡುಗನಾಗಿದ್ದ ಹಾಗೂ ನೋಡಲು ತಕ್ಕಮಟ್ಟಿಗೆ ಗಟ್ಟಿಮುಟ್ಟಾಗಿದ್ದ ತೋಟಿಮನೆಯ ಹುಡುಗನಿಗೆ ಓದಿನಲ್ಲಿ ಆಸಕ್ತಿಯಿರಲಿಲ್ಲ. ಅನ್ಯಾಯ, ತಪ್ಪುಗಳನ್ನು ವಿರೋಧಿಸುವ ಗುಣಗಳನ್ನು ಚಿಕ್ಕಂದಿನಲ್ಲಿಯೇ ಮೈಗೂಡಿಸಿದ್ದ ಗಣಪತಿ ಹೆಗಡೆ ಹಲವಾರು ಕೀಟಲೆ ಹುಡುಗರಿಗೆ ಪೆಟ್ಟಿನ ರುಚಿ ತೋರಿಸಿದ್ದರು. ಇದರಿಂದ ತನ್ನ ಶಾಲಾವಧಿಯುದ್ದಕ್ಕೂ ಪುಂಡಾಟದ ಹುಡುಗನೆಂದು ಗುರುತಿಸಲ್ಪಟ್ಟಿದ್ದರು. ಸಿನಿಮಾ ನಟ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದ ಅವರು ವಿಷ್ಣು ಅಭಿನಯದ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಿದ್ದರಂತೆ. ಅಂತೂ ಬಡತನದ ನಡುವೆಯೂ ತೋಟಿಮನೆ ಗಣಪತಿ ಹೆಗಡೆ ಯವರು ಕವಲಕ್ಕಿಯ ಸಂಯುಕ್ತ ಪದವಿಪೂರ್ವ ವಿದ್ಯಾಲಯದಲ್ಲಿ ಹತ್ತನೆ ತರಗತಿಯವರೆಗೆ ಓದಿದ್ದರು.
ಬಾಲ್ಯದಲ್ಲಿಯೇ ಮನೆಗೆಲಸವನ್ನೂ ಮಾಡಿ ಅನುಭವವಿದ್ದ ಇವರು ಅಡಿಕೆ ಮರದ ತುತ್ತತುದಿಯನ್ನೇರಿ ‘ಚೆಂಡೆ ಎಲೆ’ಯನ್ನು ಕೊೈದು ಅದರಿಂದ ಸಿಕ್ಕ ಅಲ್ಪ ಸ್ವಲ್ಪ ಹಣದಿಂದ ತನ್ನ ಶಾಲೆಯ ಫೀಸನ್ನು ಭರಿಸುತ್ತಿದ್ದರು.
ಹೀಗೆ ಶ್ರಮಜೀವಿಯಾಗಿದ್ದ ಹುಡುಗ ಶಾಲೆಯ ವಿದ್ಯಾಭ್ಯಾಸವನ್ನು ಬಿಟ್ಟ ನಂತರವೂ ಮನೆಕೆಲಸ, ಕೃಷಿ ಕೆಲಸ, ಹಟ್ಟಿ, ತೋಟಗಳ ಗೊಬ್ಬರದ ಕೆಲಸಗಳೇ ಮೊದಲಾದ ಶ್ರಮದ ದುಡಿಮೆಯನ್ನು ಮೈಗೂಡಿಸಿಕೊಂಡ ತೋಟಿಮನೆಯವರಿಗೆ ಚಿಕ್ಕಂದಿನಲ್ಲಿಯೇ ಯಕ್ಷಗಾನದತ್ತ ಅತೀವ ಆಸಕ್ತಿಯಿತ್ತು.
ಚಿಕ್ಕಂದಿನಲ್ಲಿಯೇ ಮನೆಯಿಂದ ನಾಲ್ಕು ಕಿಲೋಮೀಟರ್ ದೂರವಿರುವ ಗುಂಡಬಾಳಕ್ಕೆ ನಡೆದುಕೊಂಡೇ ಹೋಗಿ ಯಕ್ಷಗಾನ ನೋಡಿ ಬರುತ್ತಿದ್ದರು. ಹೀಗೆ ಯಕ್ಷಗಾನ ಪ್ರದರ್ಶನಗಳನ್ನು ನೋಡಿ ತಾವೂ ಕಲಾವಿದರಾಗಬೇಕೆಂಬ ಆಕಾಂಕ್ಷೆ ಚಿಗುರೊಡೆದಿತ್ತು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಮನೆಯವರ ಹಿನ್ನೆಲೆ ಯಕ್ಷಗಾನದ ಪರಂಪರೆಯದ್ದೇ ಆದರೂ ತೋಟಿಮನೆಯ ಹುಡುಗ ಗಣಪತಿ ಯಕ್ಷಗಾನದತ್ತ ಆಕರ್ಷಿತರಾಗುವುದು ಮನೆಯವರಿಗೆ ಇಷ್ಟವಿರಲಿಲ್ಲ. ತೋಟಿಮನೆಯವರ ತಂದೆ ಗೋವಿಂದ ಹೆಗಡೆ ಮತ್ತು ದೊಡ್ಡಪ್ಪ ಸುಬ್ರಾಯ ಹೆಗಡೆ ಹವ್ಯಾಸೀ ಕಲಾವಿದರಾಗಿದ್ದರು. ತಾಯಿಯ ತಂದೆ ಅಂದರೆ ಅಜ್ಜ ಗಣಪತಿ ಹೆಗಡೆ ಗೋಪಿಯವರು ಆ ಕಾಲದಲ್ಲಿ ಭಾಗವತಿಕೆಯಲ್ಲಿ ಹೆಸರು ಮಾಡಿದ್ದರು. ಹೀಗೆ ಕಲಾವಿದರ ಕುಟುಂಬದಲ್ಲಿ ಬೆಳೆದ ತೋಟಿಮನೆ ಗಣಪತಿಗೆ ಸಹಜವಾಗಿಯೇ ಯಕ್ಷಗಾನದ ನಂಟು, ಆಸಕ್ತಿ ಬೆಳೆಯಿತು. ಆದಕಾರಣ ಮನೆಯವರ ವಿರೋಧದ ನಡುವೆಯೂ ತಾನೂ ಯಕ್ಷಗಾನ ಕಲಾವಿದನಾಗಬೇಕೆಂಬ ತೋಟಿಮನೆಯವರ ತುಡಿತ ಯಕ್ಷಗಾನ ಕಲಿಯುವಂತೆ ಪ್ರೇರೇಪಿಸಿತು.
ಆ ಕಾಲದ ಸುಪ್ರಸಿದ್ಧ ಭಾಗವತರಾಗಿದ್ದ ಕಪ್ಪೆಕೆರೆ ಸುಬ್ರಾಯ ಹೆಗಡೆಯವರು ಕವಲಕ್ಕಿಯಲ್ಲಿ ಯಕ್ಷಗಾನ ತರಗತಿಯನ್ನು ನಡೆಸುತ್ತಿದ್ದರು. ಕಪ್ಪೆಕೆರೆಯವರು ತೋಟಿಮನೆಯವರ ಸಮೀಪದ ಬಂಧುವಾಗಿದ್ದರು. ಭಾಗವತರು ಇತರ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದುದನ್ನು ಆಸೆ ಹಾಗೂ ಆಸಕ್ತಿಯಿಂದ ಗಮನಿಸುತ್ತಿದ್ದ ತೋಟಿಮನೆ ಗಣಪತಿ ಹೆಗಡೆಯವರ ಕಣ್ಣುಗಳಿಗೆ ಏನೋ ಒಂದು ಆಶಾಕಿರಣದ ಮಿಂಚು ಗೋಚರಿಸಿತು.
ಹುಡುಗನ ಕಣ್ಣಂಚಿನ ಮಿಂಚನ್ನು ಕಪ್ಪೆಕೆರೆ ಸುಬ್ರಾಯ ಹೆಗಡೆಯವರು ಗುರುತಿಸಿದರು. ಇವರ ಆಸಕ್ತಿಯನ್ನು ಕಂಡ ಅವರು ಶಿಷ್ಯನಾಗಿ ಸ್ವೀಕರಿಸಿದರು. ಒಂದೆರಡು ತಿಂಗಳುಗಳಲ್ಲಿ ತರಗತಿ ನಿಂತುಹೋದರೂ ಸುಬ್ರಾಯ ಹೆಗಡೆಯವರು ತೋಟಿಮನೆಯವರನ್ನು ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಕಲಿಸತೊಡಗಿದರು.
ಪ್ರಾರಂಭದಲ್ಲಿ ನಾಟ್ಯಗಾರಿಕೆಯ ಲಯ, ಹಿಡಿತವನ್ನು ಕಂಡುಕೊಳ್ಳಲು ಪ್ರಯತ್ನಪಟ್ಟ ತೋಟಿಮನೆಯ ಗಣಪತಿಯ ಕುಣಿತದ ಅಭ್ಯಾಸ ಆರಂಭವಾಯಿತು. ಆದರೆ ಇವರ ಕುಣಿತವನ್ನು ಅಭ್ಯಾಸ ವೀಕ್ಷಿಸಲು ಬರುತ್ತಿದ್ದ ಅಕ್ಕಪಕ್ಕದವರು ತಮಾಷೆ ಮಾಡುತ್ತಿದ್ದರು. ಇದರಿಂದ ಅವಮಾನಗೊಂಡ ಇವರು ನಾಟ್ಯ ಮಾಡುವುದನ್ನೇ ಬಿಟ್ಟರೂ ಆಗಲೇ ಒಂದು ವರ್ಷದ ಕಲಿಕೆಯನ್ನು ಪೂರೈಸಿದ್ದರು!
ಆಮೇಲೆ ಚಿಟ್ಟಾಣಿ ನರಸಿಂಹ ಹೆಗಡೆಯವರ ಸಹಾಯದಿಂದ ಗುಂಡಬಾಳ ಮೇಳಕ್ಕೆ ಸೇರಿದರು. ಆಗ ಮೇಳಕ್ಕೆ ಸೇರಲು ಗೆಜ್ಜೆ ಮತ್ತು ವೇಷದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬೇಕಾಗಿತ್ತು. ಅಜ್ಜನ ಗೆಜ್ಜೆಗಳು ಹಾಗೂ ಹಳೆಯ ಕಲಾವಿದರ ಹಾಗೂ ಕಪ್ಪೆಕೇರಿ ಮಹಾದೇವ ಹೆಗಡೆಯವರ ಹಳೆಯ ವೇಷಭೂಷಣಗಳನ್ನು ಒಟ್ಟುಗೂಡಿಸಿಕೊಂಡು ಗುಂಡಬಾಳ ಮೇಳಕ್ಕೆ ಸೇರಿದರು.
ಆಗ ಕಪ್ಪೆಕೇರಿ ಸುಬ್ರಾಯ ಭಾಗವತರಿದ್ದ ಪಂಚಲಿಂಗೇಶ್ವರ ಮೇಳಕ್ಕೆ ಕರೆಬಂದು ಅಲ್ಲಿಗೆ ಸೇರಿದರು. ಪಂಚಲಿಂಗೇಶ್ವರ ಮೇಳದಲ್ಲಿ ಚಿಕ್ಕಪುಟ್ಟ ಪಾತ್ರಗಳು ಯಾವುದೇ ಇದ್ದರೂ ಎಲ್ಲವನ್ನೂ ನಿರ್ವಹಿಸಿದರು. ಉಳಿದ ಸಮಯದಲ್ಲಿ ಪ್ರಸಿದ್ಧ ಕಲಾವಿದರ ವೇಷಗಳನ್ನು ನೋಡಿ ಕಲಿಯುತ್ತಿದ್ದರೇ ವಿನಃ ವಿಶ್ರಾಂತಿ ಪಡೆಯುತ್ತಿರಲಿಲ್ಲ.
ಆದರೂ ‘ನಾಟ್ಯಗಾರಿಕೆ ಚೆನ್ನಾಗಿಲ್ಲ’ ಎಂಬ ಹಿರಿಯ ಕಲಾವಿದರ ಮಾತಿಗೆ ಕಟ್ಟುಬಿದ್ದು ಪಂಚಲಿಂಗೇಶ್ವರ ಮೇಳದ ಆಡಳಿತ ವರ್ಗ ಮುಂದಿನ ವರ್ಷಕ್ಕೆ ತೋಟಿಮನೆಯವರನ್ನು ಉಳಿಸಿಕೊಳ್ಳಲಿಲ್ಲ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಆ ಕಾಲದಲ್ಲಿ ‘short temper’ ಎಂದು ಗುರುತಿಸಿಕೊಂಡಿದ್ದ ತೋಟಿಮನೆಯವರು ಇದರಿಂದ ಖಿನ್ನರಾದರು. ಛಲದಿಂದ ಮತ್ತೆ ಗುಂಡಬಾಳ ಮೇಳಕ್ಕೆ ಸೇರಿದರು. ಆ ವರ್ಷ ಕಪ್ಪೆಕೇರಿ ಸುಬ್ರಾಯ ಭಾಗವತರೂ ಗುಂಡಬಾಳ ಮೇಳಕ್ಕೆ ಸೇರಿದುದು ತೋಟಿಮನೆಯವರ ಪುಣ್ಯವೆಂದೇ ಹೇಳಬೇಕು. ರಾತ್ರಿ ಕುಣಿತ, ದುಡಿತ ಹಗಲು ಕಪ್ಪೆಕೇರಿ ಭಾಗವತರಿಂದ ಕಲಿಕೆ. ಹೀಗೆ ಪಳಗಿದ ತೋಟಿಮನೆಯವರು ನಾಟ್ಯದಲ್ಲಿ ಪ್ರಾವೀಣ್ಯತೆಯನ್ನು ಗಳಿಸಿಕೊಂಡರು.
ಕಪ್ಪೆಕೇರಿ ಭಾಗವತರು ನೀಡುತ್ತಿದ್ದ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸಿ ತೋಟಿಮನೆ ಗಣಪತಿ ಹೆಗಡೆಯವರು ಯಾವುದೇ ಪಾತ್ರಗಳನ್ನೂ ಲೀಲಾಜಾಲವಾಗಿ ನಿರ್ವಹಿಸುವಷ್ಟು ಪ್ರಬುದ್ಧತೆಯನ್ನು ಹೊಂದಿದರು. ಆ ಕಾಲದಲ್ಲಿ ಅವರ ಕೃಷ್ಣ, ಸುಧನ್ವ, ಸಾಲ್ವನೇ ಮೊದಲಾದ ನಾಯಕ, ಪ್ರತಿನಾಯಕ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುವ ಕಲೆಯನ್ನು ಸಿದ್ಧಿಸಿದರು. ‘‘ಯಾವುದೇ ಪಾತ್ರವನ್ನು ಒಂದಿನಿತೂ ಕೊರತೆ ಯಾಗದಂತೆ ನಿರ್ವಹಿಸಲು ಹಾಗೂ ಆ ಸಾಮರ್ಥ್ಯವನ್ನು ನನ್ನಲ್ಲಿ ತುಂಬಿದವರು ಕಪ್ಪೆಕೇರಿ ಸುಬ್ರಾಯ ಭಾಗವತರು’’ ಎಂದು ತೋಟಿಮನೆ ಗಣಪತಿ ಹೆಗಡೆಯವರು ಕಪ್ಪೆಕೇರಿ ಸುಬ್ರಾಯ ಭಾಗವತರನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ತೋಟಿಮನೆಯವರನ್ನು ಈ ಕಾಲದಲ್ಲಿ ಅವರ ನಾಯಕ ಪಾತ್ರದ ನಿರ್ವಹಣೆಗಾಗಿ ‘‘ಯಕ್ಷರಂಗದ ರಾಜಕುಮಾರ’’ ಎಂದೂ ಹಾಗೂ ನಾಯಕ, ಪ್ರತಿನಾಯಕ ಸೇರಿದಂತೆ ಎಲ್ಲಾ ಪಾತ್ರದ ನಿರ್ವಹಣೆಗಾಗಿ ‘‘ಯಕ್ಷರಂಗದ ಸವ್ಯಸಾಚಿ’’ ಎಂದು ಕಲಾಭಿಮಾನಿಗಳು ಕರೆಯುತ್ತಿದ್ದಾರೆ. ತೋಟಿಮನೆಯವರ ವೇಷಗಳನ್ನು ಹತ್ತಿರದಿಂದ ಗಮನಿಸುವವರಿಗೆ ಈ ಮಾತುಗಳಲ್ಲಿ ಉತ್ಪ್ರೇಕ್ಷೆಯಿಲ್ಲ ಎಂದು ಖಂಡಿತವಾಗಿಯೂ ಅನಿಸುತ್ತದೆ.
ಹೀಗೆ ಬಾಲ್ಯದಿಂದ ತೊಡಗಿ ಒಂದು ಹೋರಾಟದ ಜೀವನವನ್ನೇ ರೂಢಿಯಾಗಿ ಹೋಗಿದ್ದ ತೋಟಿಮನೆಯವರು ಬಹುಬೇಗನೆ ತನ್ನ ಸಾಮರ್ಥ್ಯದಿಂದ ಯಕ್ಷರಂಗದಲ್ಲಿ ತನ್ನ ಛಾಪನ್ನು ಮೂಡಿಸುವತ್ತ ದಾಪುಗಾಲು ಹಾಕ ತೊಡಗಿದರು.
ಹಲವು ಮೇಳಗಳಲ್ಲಿ ಅನುಭವ : ತೋಟಿಮನೆ ಯವರು ಒಂದೇ ಮೇಳವನ್ನು ನೆಚ್ಚಿಕೊಳ್ಳದೆ ಹಲವು ಮೇಳಗಳಲ್ಲಿ ಪಾತ್ರ ನಿರ್ವಹಿಸಿದವರು. ಇದಕ್ಕೆ ಒಟ್ಟಾರೆ ವ್ಯವಸ್ಥೆಯಲ್ಲಿ ಇದ್ದ ಅನಿಶ್ಚಿತತೆ, ಹಾಗೂ ತೋಟಿಮನೆಯವರು ಎದುರಿಸಿ ಅನುಭವಿಸಿದ ಕಷ್ಟ-ಕಾರ್ಪಣ್ಯಗಳು, ಅವಮಾನಗಳು ಕಾರಣವೇ ಹೊರತು ಬೇರಾವ ಕಾರಣಗಳಲ್ಲ. ಗುಂಡಬಾಳ ಮೇಳದಿಂದ ಆರಂಭಗೊಂಡ ತೋಟಿಮನೆಯವರ ಕಲಾಸೇವೆ ಶ್ರೀ ಪಂಚಲಿಂಗೇಶ್ವರ ಮೇಳ, ನಂತರ ಪುನಃ ಗುಂಡಬಾಳ ಮೇಳ, ಆಮೇಲೆ ಶಿರಸಿಯ ಶ್ರೀ ಮಾರಿಕಾಂಬಾ ಮೇಳ, ಆಮೇಲೆ ಶ್ರೀ ಮಂದಾರ್ತಿ ಮೇಳ, ನಂತರ ಸಾಲಿಗ್ರಾಮ ಮೇಳ ಹಾಗೂ ಪ್ರಸ್ತುತ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಪೂರ್ಣಚಂದ್ರ ಮೇಳದಲ್ಲಿ ಹಾಗೂ ಇತರ ಮೇಳಗಳಲ್ಲಿಯೂ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದಾರೆ.
ನಾಯಕ, ಪ್ರತಿನಾಯಕ ಪಾತ್ರಗಳು : ಈ ಮೊದಲೇ ಹೇಳಿದಂತೆ ತೋಟಿಮನೆ ಗಣಪತಿ ಹೆಗಡೆಯವರು ಎಂದೂ ಬಡಗುತಿಟ್ಟು ಯಕ್ಷಗಾನದ ಪರಂಪರೆಗೆ ಅನುಗುಣವಾಗಿ ಪಾತ್ರನಿರ್ವಹಿಸಿದವರು. ಅನಿವಾರ್ಯವಾಗಿ ಪೌರಾಣಿಕೇತರ ಪ್ರಸಂಗಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿ ಯಶಸ್ವಿಯಾದರೂ ಅವರ ಒಲವು ಇದ್ದದ್ದು ಪೌರಾಣಿಕ ಪ್ರಸಂಗಗಳ ಕಡೆಗೆ. ಟೆಂಟ್ ಮೇಳಗಳಲ್ಲಿ ಹಲವು ಕಾಲ್ಪನಿಕ ಪ್ರಸಂಗಗಳನ್ನು ಕಲೆಕ್ಷನ್ ದೃಷ್ಟಿಯಿಂದ ಆಡಬೇಕಾದ ಅನಿವಾರ್ಯತೆ ಬಂದಾಗ ಆ ರೀತಿಯ ವ್ಯವಸ್ಥೆಯಿಂದ ವಿಮುಖರಾದದ್ದು ಅವರ ಬದ್ಧತೆಗೆ ಸಾಕ್ಷಿ. ಪೌರಾಣಿಕ ಪಾತ್ರಗಳಲ್ಲಿ ಹೆಚ್ಚಾಗಿ ಕೃಷ್ಣ, ವಿಷ್ಣು, ಸುಧನ್ವ ಮೊದಲಾದ ವೇಷಗಳು ಪ್ರಸಿದ್ಧಿಯನ್ನು ಪಡೆದುವು. ಸುಧನ್ವನ ವೇಷವಂತೂ ಅಗ್ರಪಂಕ್ತಿಯಲ್ಲಿ ನಿಲ್ಲುವ ಪಾತ್ರ. ಅಲ್ಲದೆ ರಾಮ, ಲಕ್ಷ್ಮಣ, ಹನುಮಂತ, ವಲಲ, ಭೀಮ, ಹರಿಶ್ಚಂದ್ರ ಪಾತ್ರಗಳಲ್ಲದೆ ರಾವಣ, ಶೃಂಗಾರ ರಾವಣ, ಕೌರವ, ಭಸ್ಮಾಸುರ, ಮಾಗಧ, ಬಲರಾಮ, ಸಾಲ್ವ, ಅಂಬೆ ಮೊದಲಾದ ಪಾತ್ರಗಳಲ್ಲಿ ವೈವಿಧ್ಯಮಯ ಅಭಿನಯ ನೀಡಿದವರು.
ಆಂಜನೇಯನ ವೇಷಧಾರಿಯಾಗಿ ಅತ್ಯುತ್ತಮ ಮುಖವರ್ಣಿಕೆಯಲ್ಲೂ ಶೋಭಿಸಿದವರು. ತೋಟಿಮನೆಯವರು ರೂಪಿಸಿದ ಪರಂಪರೆಯಲ್ಲಿ ಒಂದು ನವೀನ ಶೈಲಿಯು ಇಂದು ಬಹಳ ಜನಪ್ರಿಯತೆಯನ್ನು ಪಡೆದಿದೆ. ಒಂದು ಕಾಲದಲ್ಲಿ ತೋಟಿಯವರ ಸುಧನ್ವ ಪಾತ್ರಕ್ಕೆ ಬಹಳ ಬೇಡಿಕೆಯಿತ್ತು. ಇವರ ಕಲ್ಪನೆಯಲ್ಲಿ ಮೂಡಿದ ‘ತೋಟಿಮನೆ’ ಶೈಲಿಯನ್ನು ಇಂದು ಹಲವು ಯುವ ಕಲಾವಿದರು ಅನುಸರಿಸುತ್ತಿರುವುದು ಇವರು ಈ ರಂಗದಲ್ಲಿ ಸಾಧಿಸಿದ ಜನಪ್ರಿಯತೆಗೆ ಸಾಕ್ಷಿ. ಲಂಕಾದಹನದ ಹನುಮಂತ, ಪಟ್ಟಾಭಿಷೇಕದ ರಾಮ, ಚಂದ್ರಾವಳಿ ವಿಲಾಸದ ಕೃಷ್ಣ… ಹೀಗೆ ಎಲ್ಲ ಪಾತ್ರಗಳಲ್ಲಿ ತನ್ನದೇ ಆದ ಛಾಪನ್ನು, ವಿಶಿಷ್ಟತೆಯನ್ನು ಒಡಮೂಡಿಸಿದ್ದಾರೆ.
ಹಲವರು ಹಿರಿಯ ಕಲಾವಿದರ ಜೊತೆ ರಂಗದಲ್ಲಿ ನಿರ್ವಹಿಸಿದವರು ತೋಟಿಮನೆಯವರು. ರಾಮದಾಸ ಸಾಮಗ, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ವಾಸುದೇವ ಸಾಮಗ, ಕೊಂಡದಕುಳಿ ರಾಮಚಂದ್ರ ಹೆಗಡೆ, ಬಳ್ಕೂರು ಕೃಷ್ಣಯಾಜಿ- ಹೀಗೆ ಇನ್ನೂ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಜೀವನವೆಂಬುದು ಹೂವಿನ ಹಾಸಿಗೆಯಲ್ಲ. ಮುಳ್ಳುಗಳು ತುಂಬಿದ ಕಡಿದಾದ ದಾರಿಯೂ ಆಗಿರಬಹುದು. ಕಲಾವಿದರ ಪಾಲಿಗಂತೂ ಈ ಮಾತು ಅಕ್ಷರಶಃ ಸತ್ಯ ಎಂಬ ಮಾತಿದೆ. ಅದರಲ್ಲೂ ತನ್ನ ಬಾಳ ಪಯಣದ ಪ್ರಾರಂಭದ ಹಂತದಲ್ಲಿ ಬಹಳಷ್ಟು ಎಡರು-ತೊಡರುಗಳನ್ನು ಎದುರಿಸಿದ ತೋಟಿಮನೆ ಗಣಪತಿ ಹೆಗಡೆ ಎಂಬ ಸಂಭಾವಿತ ಕಲಾವಿದ ತನ್ನ ಜೀವನದಲ್ಲಿ ಆಸರೆಯಾದ, ಪ್ರೇರಕರಾದ ಹಲವು ಮುಖಗಳನ್ನು ಮರೆಯುವುದಿಲ್ಲ. ತನ್ನನ್ನು ಕಲಾವಿದನಾಗಿ ರೂಪುಗೊಳಿಸುವಲ್ಲಿ ಅವಿರತ ಶ್ರಮಿಸಿದ ಕಪ್ಪೆಕೇರಿ ಸುಬ್ರಾಯ ಹೆಗಡೆ, ಗುಂಡಬಾಳ ಮೇಳಕ್ಕೆ ಸೇರಲು ಕಾರಣಕರ್ತರಾದ ನರಸಿಂಹ ಚಿಟ್ಟಾಣಿ ಹಾಗೂ ಆತ್ಮೀಯ ಅಣ್ಣನಂತಿರುವ ಕೊಂಡದಕುಳಿ ರಾಮಚಂದ್ರ ಹೆಗಡೆ- ಹೀಗೆ ತನ್ನ ಕಲಾಯಾನದಲ್ಲಿ ತನ್ನ ಉನ್ನತಿಯನ್ನು ಬಯಸಿದ ಎಲ್ಲರಿಗೂ ಕೃತಜ್ಞರಾಗಿದ್ದಾರೆ.
ತಾನಿನ್ನೂ ಈ ರಂಗದಲ್ಲಿ ಸಾಧಿಸುವುದಕ್ಕೆ ಬಹಳವಿದೆ ಎಂಬ ವಿನೀತಭಾವ ತೋಟಿಯವರನ್ನು ಪಕ್ವವಾಗಿಸಿದೆ. ಈಗಲೂ ತನಗೆ ಯಾವುದೇ ಪಾತ್ರ ಸಿಕ್ಕಿದರೂ ಅದಕ್ಕೆ ನ್ಯಾಯ ಸಲ್ಲಿಸುವ ಕೆಲವೇ ಕಲಾವಿದರಲ್ಲಿ ಇವರೂ ಒಬ್ಬರು. ಅದಕ್ಕೆ ಅವರು ಈಗಲೂ ಕಲಾವಿದ ದಿಗ್ಗಜರ ನಡುವೆ ಪೋಷಕ ಪಾತ್ರ ನೀಡಿದರೂ ಒಪ್ಪಿಕೊಳ್ಳಲು ಹಿಂದೇಟು ಹಾಕದಿರುವುದೇ ಸಾಕ್ಷಿ.
ತೋಟಿಮನೆ ಗಣಪತಿ ಹೆಗಡೆಯವರು ದೇಶಾದ್ಯಂತ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಹೊರನಾಡಿನ ಕನ್ನಡ ಸಂಘ ಹಾಗೂ ಯಕ್ಷಗಾನ ಕಲಾಸಂಘಗಳ ಆಹ್ವಾನದ ಮೇರೆಗೆ ದೇಶದ ಉದ್ದಗಲಕ್ಕೂ ಸಂಚರಿಸಿದ್ದಾರೆ. ಹೈದರಾಬಾದ್, ಉಜ್ಜೈನಿ, ದೆಹಲಿ, ಮುಂಬೈ ಮೊದಲಾದ ನಗರಗಳಲ್ಲಿ ಪ್ರದರ್ಶನಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ.
ಕೆಲವಾರು ವಿದೇಶ ಪ್ರವಾಸಗಳಲ್ಲೂ ಯಶಸ್ವಿಯಾಗಿ ಪಾತ್ರನಿರ್ವಹಿಸಿ ಅವರು ವಿದೇಶದಲ್ಲಿ ಉದ್ಯೋಗದಲ್ಲಿರುವ ಯಕ್ಷಗಾನ ಅಭಿಮಾನಿಗಳ ಮನಸ್ಸನ್ನು ಸಂತೋಷ ಗೊಳಿಸಿದ್ದಾರೆ. ದುಬೈ, ಅಬುಧಾಬಿ, ಸಿಂಗಾಪುರ ಪ್ರವಾಸಗಳಲ್ಲಿ ಭಾಗವಹಿಸಿದ ತೋಟಿಯವರು ಕೆನಡಾ ಪ್ರವಾಸ ಕೂಡಾ ಮಾಡಿದ್ದಾರೆ.
ರೂಪದಲ್ಲೂ ಚೆಲುವಾಂಗ ಸುಂದರ ನಾಗಿರುವ ತೋಟಿಯವರಿಗೆ ಸಹಜವಾಗಿಯೇ ಅಭಿಮಾನಿಗಳು ಹಲವಾರು ಬಿರುದುಗಳನ್ನಿತ್ತು ಸನ್ಮಾನಿಸಿದ್ದಾರೆ. ಸವ್ಯಸಾಚಿ, ಯಕ್ಷಸುಂದರ, ರಂಗಸ್ಥಳದ ಯುವರಾಜ, ನಟನಾಚೆಲುವ, ನಟಪದ್ಮನೇಸರ- ಹೀಗೆ ಕೆಲವು ಬಿರುದುಗಳನ್ನು ಪಡೆದಿದ್ದಾರೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಪಡೆದ ಸನ್ಮಾನ ಪ್ರಶಸ್ತಿಗಳು ಹಲವಾರು. 2002ರಲ್ಲಿ ಬೆಂಗಳೂರಿನ ಕುವೆಂಪು ಕಲಾಕ್ಷೇತ್ರ ದಲ್ಲಿ ಸನ್ಮಾನ, 2002ರಲ್ಲಿ ಶ್ರೀ ರಾಮಚಂದ್ರಾಪುರ ಮಠದಲ್ಲಿ ಸನ್ಮಾನ ಹಾಗೂ ಅದೇ ವರ್ಷ ಶಿವಮೊಗ್ಗದಲ್ಲಿ ಸನ್ಮಾನ, 2003ರಲ್ಲಿ ಶಿವಮೊಗ್ಗ ಕುವೆಂಪು ಕಲಾಕ್ಷೇತ್ರದಲ್ಲಿ ಕಲ್ಯಾಣೋತ್ಸವ ಪ್ರಯುಕ್ತ ಸನ್ಮಾನ. ಅದೇ ವರ್ಷ ಪೂರ್ಣಚಂದ್ರ ಯಕ್ಷಗಾನ ಮಂಡಳಿ ಮತ್ತು ಪ್ರತಿಷ್ಠಾನ ವತಿಯಿಂದ ‘ಕೊಂಡದಕುಳಿ ರಾಮ ಹೆಗಡೆ’ ಪ್ರಶಸ್ತಿ 2003ರಲ್ಲಿ ಹೊನ್ನಾವರ ತಾಲೂಕು ಕನ್ನಡ ಪರಿಷತ್ತಿನವರಿಂದ ಸನ್ಮಾನ, 2004ರಲ್ಲಿ ಶ್ರೀ ರಾಮಚಂದ್ರಾಪುರ ಮಠ ಇವರಿಂದ ಸನ್ಮಾನ, 2008ರಲ್ಲಿ ತೋಟಿಮನೆ ಅಭಿಮಾನಿ ಬಳಗ, ಬೆಂಗಳೂರು ಇವರಿಂದ ಸನ್ಮಾನ. 2014ರಲ್ಲಿ ಆರ್. ಜಿ. ಭಟ್ಟ ಮಿತ್ರರಿಂದ ಹುಬ್ಬಳ್ಳಿಯಲ್ಲಿ ಸನ್ಮಾನ, ಅದೇ ವರ್ಷ ಶಿರಸಿಯಲ್ಲಿ ಯಕ್ಷಕಲ್ಯಾಣ ನಿಧಿ ಅವರಿಂದ ಸನ್ಮಾನ, 2016ರಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವ ಮುನ್ವಾ ಇವರ ಸೇವಾ ಸಮಿತಿಯಿಂದ ಸನ್ಮಾನ- ಹೀಗೆ ಹಲವಾರು ಸನ್ಮಾನ, ಪ್ರಶಸ್ತಿ, ಬಿರುದುಗಳನ್ನು ತೋಟಿಮನೆ ಗಣಪತಿ ಹೆಗಡೆಯವರು ಪಡೆದಿದ್ದಾರೆ.
ತೋಟಿಮನೆಯವರು ತಮ್ಮ ಯಕ್ಷಜೀವನ ಕಲಾಯಾನದ 25 ವಸಂತಗಳನ್ನು ಪೂರೈಸಿದ ಸಂದರ್ಭದಲ್ಲಿ ತೋಟಿಮನೆ ಎಂಬ ಊರಿನ ಜನರು ಹಾಗೂ ಅವರ ಅಸಂಖ್ಯ ಅಭಿಮಾನಿಗಳು ಸೇರಿ 2017ರಲ್ಲಿ ‘ತೋಟಿ ರಜತರಂಗ’ ಎಂಬ ವಿಶಿಷ್ಟ ಹಾಗೂ ಅಭೂತಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ತೋಟಿಮನೆ ಅಂದು-ಇಂದು : ಹೌದು. ತೋಟಿಮನೆ ಗಣಪತಿ ಹೆಗಡೆ ಬದಲಾಗಿದ್ದಾರೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಬಹುದು. ಆದರೆ ಬದಲಾಗಿದ್ದಾರೆ ಎನ್ನುವ ಬದಲು ಬಲಿತು ಪರಿಪಕ್ವವಾಗಿದ್ದಾರೆ ಎಂಬ ಮಾತು ಸಮಂಜಸವಾಗಬಹುದು. ಕಬ್ಬಿಣವೊಂದು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಕೆಂಪಾಗಿ ಹಲವಾರು ಪೆಟ್ಟುಗಳನ್ನು ತಿಂದು ಹೇಗೆ ಸುಂದರವಾದ ಉಪಯೋಗೀ ಸಾಧನವಾಗಬಹುದೋ ಹಾಗೆಯೇ ತೋಟಿಯವರು ಬದಲಾಗಿದ್ದಾರೆ. ಎಳವೆಯಲ್ಲಿ ಸಹಿಸಿದ ಕಷ್ಟ, ಬಡತನ, ಅವಮಾನಗಳು ಅವರನ್ನು ತ್ಯಾಗಮಯಿ ಮತ್ತು ವಿನೀತರನ್ನಾಗಿಸಿದೆ. ತನ್ನ ಕುಟುಂಬದ ಬಗ್ಗೆ ಅತೀವ ಕಾಳಜಿಯಿರುವ ತೋಟಿ ಒಬ್ಬ ತ್ಯಾಗಮಯಿ ಜೀವಿ ಎಂದರೆ ತಪ್ಪಾಗಲಾರದು. ಅವಿವಾಹಿತನಾಗಿರುವ ತೋಟಿಯವರು ಕುಟುಂಬದ ಕಷ್ಟದ ದಿನಗಳಲ್ಲಿ ತನ್ನ ತಂದೆ, ತಾಯಿ, ಸಹೋದರಿಯರ ಏಳ್ಗೆಗಾಗಿಯೇ ಸದಾ ಯೋಚಿಸಿದರು.
ಬಾಲ್ಯದ ತೋಟಿಮನೆ ನಿಮಗೆ ಈಗ ಕಾಣಸಿಗಲಾರರು. ಯಶಸ್ಸು, ಜನಪ್ರಿಯತೆ ಅವರನ್ನು ವಿನೀತರನ್ನಾಗಿಸಿದೆ. ಪರಿಪಕ್ವವಾಗಿಸಿದೆ. ಹಿರಿಯರು ಮೂಗಿನ ಮೇಲೆ ಬೆರಳಿಡುವಷ್ಟು ‘‘ಅಂದಿನ ತೋಟಿ ಮಾಣಿ ಇವನೇನಾ…?’’ ಎಂದು ಉದ್ಗಾರ ಜೀವನದ ಮುಸ್ಸಂಜೆಯನ್ನು ಕಾಣುತ್ತಿರುವವರ ಬಾಯಿಯಿಂದ ಬಂದರೆ ಆಶ್ಚರ್ಯವೇನಿಲ್ಲ.
ಲೇಖನ: ಮನಮೋಹನ್ ವಿ.ಎಸ್