ಯಕ್ಷಗಾನ ರಂಗಕ್ಕೋಸ್ಕರ ಹಾಗೂ ಅದರ ಏಳಿಗೆಗೋಸ್ಕರ ದುಡಿದವರು ಹಲವರಿದ್ದಾರೆ. ಆ ರಂಗದಿಂದ ತಾನು ಗಳಿಸಿದ ಒಂದಂಶವನ್ನು ಅದೇ ಕಲೆಯ ಅಭಿವೃದ್ಧಿಗೋಸ್ಕರ ವಿನಿಯೋಗಿಸುವವರೂ ಇದ್ದಾರೆ. ಅಂತಹವರಲ್ಲಿ ಒಬ್ಬರು ಭಾಗವತರಾದ ಶ್ರೀ ಸಿರಿಬಾಗಿಲು ರಾಮಕೃಷ್ಣ ಮಯ್ಯ. ತನ್ನನ್ನು ಪೋಷಿಸಿದ ಯಕ್ಷಗಾನವನ್ನು ಉಳಿಸಿ ಬೆಳೆಸುವುದಕ್ಕೋಸ್ಕರ ವಿಶಿಷ್ಟವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದಿನ ಪೀಳಿಗೆಗೋಸ್ಕರ ಯಕ್ಷಗಾನ ಕಲೆಯ ಸೊಗಸು-ಸೊಗಡುಗಳನ್ನು ಸ್ಥಿರವಾಗಿ ಉಳಿಸುವಂತೆ ಮಾಡುವ ಮಹತ್ಕಾರ್ಯ, ಮಹಾ ಪ್ರಯತ್ನಗಳನ್ನು ಹಲವಾರು ಮಹನೀಯರ ಸಹಕಾರದಿಂದ ಮಾಡುತ್ತಿರುವ ಮಹಾನುಭಾವ.
ಒಕ್ಟೋಬರ್ 25, 1967ರಲ್ಲಿ ಕಾಸರಗೋಡು ಜಿಲ್ಲೆಯ ಮಾಯಿಪ್ಪಾಡಿ ಸಮೀಪದ ಸಿರಿಬಾಗಿಲು ವೆಂಕಪ್ಪಯ್ಯ ಮತ್ತು ಪಾರ್ವತಿ ಅಮ್ಮ ದಂಪತಿಗಳಿಗೆ ಪುತ್ರರಾಗಿ ಜನಿಸಿದ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಪರಂಪರೆಯಿಂದಲೇ ಯಕ್ಷಗಾನದ ಗಂಧವನ್ನು ಆಸ್ವಾದಿಸುತ್ತಾ ಬಂದವರು.
ತಂದೆ ಶ್ರೀ ಸಿರಿಬಾಗಿಲು ವೆಂಕಪ್ಪಯ್ಯನವರು ಆ ಕಾಲದಲ್ಲಿ ಉತ್ತಮ ಸಾಹಿತ್ಯಾತ್ಮಕ ಚಟುವಟಿಕೆಗಳಿಂದ ಗುರುತಿಸಿಕೊಂಡವರು ಆದರೆ ದುರದೃಷ್ಟವಶಾತ್ ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡರು. ರಾಮಕೃಷ್ಣ ಮಯ್ಯರ ತಂದೆ ಹಾಗೂ ತಾಯಿಯ ವಂಶಸ್ಥರು ಯಕ್ಷಗಾನದಲ್ಲಿ ಖ್ಯಾತನಾಮರೇ ಆಗಿದ್ದರು. ಅದರಲ್ಲೂ ಇವರ ಅಜ್ಜ (ತಾಯಿಯ ತಂದೆ) ಪುತ್ತಿಗೆ ಜೋಯಿಸರೆಂದೇ ಪ್ರಖ್ಯಾತರಾದ ಪುತ್ತಿಗೆ ರಾಮಕೃಷ್ಣ ಜೋಯಿಸರು, ಸೋದರಮಾವನಾದ ಖ್ಯಾತ ಭಾಗವತರಾದ ‘ಭಾಗವತಹಂಸ’ ಬಿರುದಾಂಕಿತ ಪುತ್ತಿಗೆ ರಘುರಾಮ ಹೊಳ್ಳರು ತೆಂಕುತಿಟ್ಟಿನ ಮೇರುಕಲಾವಿದರು. ಪದವಿಪೂರ್ವ ಶಿಕ್ಷಣವನ್ನು ಪೂರ್ತಿಗೊಳಿಸಿದ ಬಳಿಕ ತನ್ನ ಸೋದರಮಾವ ಪುತ್ತಿಗೆ ರಘುರಾಮ ಹೊಳ್ಳರ ಸೂಚನೆಯಂತೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಲ್ಲಿ ಭಾಗವತಿಕೆಯನ್ನು ಅಭ್ಯಾಸ ಮಾಡಿದರು.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಪ್ರಾರಂಭದಲ್ಲಿ ಮೂರು ವರ್ಷಗಳ ಕಾಲ ಕಟೀಲು ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ ನಂತರ ಬಪ್ಪನಾಡು ಮೇಳದಲ್ಲಿ ಒಂದು ವರ್ಷ ತಿರುಗಾಟ ನಡೆಸಿದರು. ಆ ನಂತರ ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ನಿರಂತರವಾಗಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೋದರಮಾವ ಪುತ್ತಿಗೆ ರಘುರಾಮ ಹೊಳ್ಳರ ನೆರಳಿನಲ್ಲೇ ಭಾಗವತರಾಗಿದ್ದು ಅವರದೇ ಶೈಲಿಯಲ್ಲಿ ಪಳಗಿದರೂ ಪ್ರತ್ಯೇಕವಾಗಿ ಗುರುತಿಸುವ ಶಾರೀರ ಮತ್ತು ಶೈಲಿಯನ್ನು ಕರಗತ ಮಾಡಿಕೊಂಡವರು. ಮಾಧುರ್ಯದಿಂದ ಕೂಡಿದ ಸ್ವರ ಇವರ ವಿಶೇಷತೆಗಳಲ್ಲೊಂದು. ಹಲವಾರು ಪ್ರಸಂಗಗಳನ್ನು ಪ್ರಸಂಗ ಪುಸ್ತಕಗಳಿಲ್ಲದೆ ಆಡಿಸಬಲ್ಲ ಸಾಮರ್ಥ್ಯವಿರುವ ಶ್ರೀ ಮಯ್ಯರಿಗೆ ಹೆಚ್ಚಿನ ಪದ್ಯಗಳು ಕಂಠಪಾಠ.
ಯಾವುದೇ ಪೌರಾಣಿಕ ಪ್ರಸಂಗವನ್ನು ಆಡಿಸುವ ಸಾಮರ್ಥ್ಯ, ಪರಂಪರೆಯನ್ನು ನಿರ್ಲಕ್ಷಿಸದ ಕಲೆಯ ಮೇಲಿನ ಕಾಳಜಿ ಹಾಗೂ ಅತಿರೇಕ, ಸರ್ಕಸ್‍ಗಳಿಲ್ಲದ ಎಲ್ಲರಿಗೂ ಸಹ್ಯವಾಗುವ ಭಾಗವತಿಕೆಗಳಿಂದ ಹಿರಿಯ ತಲೆಮಾರಿನಿಂದ ಹಿಡಿದು ಯುವ ಪ್ರೇಕ್ಷಕರೆಲ್ಲರ ಅಭಿಮಾನವನ್ನು ಗಳಿಸಿಕೊಂಡ ಕೆಲವೇ ಕಲಾವಿದರಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಮುಂಚೂಣಿಯಲ್ಲಿ ನಿಲ್ಲುವವರ ಸಾಲಿಗೆ ಸೇರುತ್ತಾರೆ. ಈ ಎಲ್ಲ ಕಾರಣಗಳಿಂದ ಮಯ್ಯರು ಇಷ್ಟವಾಗುತ್ತಾರೆ.
ಕುಟುಂಬವು ಕಲಾಸೇವೆಯೊಂದಿಗೆ ಸಾಮಾಜಿಕ ಸೇವೆಗಳಲ್ಲಿಯೂ ತೊಡಗಿಕೊಂಡಿದೆ ಎಂಬುದಕ್ಕೆ ರಾಮಕೃಷ್ಣ ಮಯ್ಯರ ಧರ್ಮಪತ್ನಿ ಶ್ರೀಮತಿ ಸುಮಿತ್ರಾ ಮಯ್ಯರೇ ಸಾಕ್ಷಿ. ಗ್ರಾಮ ಪಂಚಾಯತ್ ಸದಸ್ಯೆಯಾಗಿರುವ ಶ್ರೀಮತಿ ಸುಮಿತ್ರಾ ಆರ್. ಮಯ್ಯ ತಾನು ಸ್ವತಃ ಯಕ್ಷಗಾನ ಕಲಾವಿದೆಯಾಗಿರುವುದರ ಜೊತೆಗೆ ಜನಪರ ಕಾಳಜಿಯುಳ್ಳ ಮಹಿಳೆಯಾಗಿ ಅನೇಕ ಅಭಿವೃದ್ಧಿಪರ ಕೆಲಸಗಳನ್ನು ಮಾಡಿದ್ದಾರೆ. ಗಂಡನ ಕಲಾಸೇವೆಯನ್ನು ಪ್ರೋತ್ಸಾಹಿಸುತ್ತಾ, ಕುಟುಂಬ ನಿರ್ವಹಣೆಯ ಜೊತೆಗೆ, ಸಮಾಜಸೇವೆಯ ಕಾರ್ಯವನ್ನು ಕೈಗೊಂಡು ಮುನ್ನಡೆಸುವ ಸದ್ಗೃಹಿಣಿ. ಮಕ್ಕಳಾದ ಶ್ರೀಮುಖ ಮತ್ತು ಶ್ರೀರಾಜ್ ವಿದ್ಯಾಭ್ಯಾಸದ ನಡುವೆಯೂ ಈಗಾಗಲೇ ಯಕ್ಷಗಾನದ ವೇಷಧಾರಿಗಳಾಗಿ ತಮ್ಮ ಕಲಾಸಕ್ತಿ, ಹುಮ್ಮಸ್ಸನ್ನು ತೋರಿಸುತ್ತಿದ್ದಾರೆ.

ರಾಮಕೃಷ್ಣ ಮಯ್ಯರು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ ಇದರಲ್ಲಿ ಸುಮಾರು 25ಕ್ಕಿಂತಲೂ ಹೆಚ್ಚು ಮಳೆಗಾಲದ ತಿರುಗಾಟವನ್ನೂ ಮಾಡಿದ್ದಾರೆ.
ಸದಾ ಹಸನ್ಮುಖಿ, ವಿವಾದಗಳಿಂದ ಮಾರು ದೂರವೇ ಉಳಿಯುವ ಕಲಾವಿದರಲ್ಲಿ ಒಬ್ಬರು, ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಸುಮಧುರ ಕಂಠಸಿರಿಯಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಮಯ್ಯರು ತಮ್ಮ ಕಲಾಜೀವನದ ಉನ್ನತಿಗೆ ಮೂಲಕಾರಣರಾದವರನ್ನು ನೆನಪಿಸಿಕೊಳ್ಳುತ್ತಾರೆ. ‘‘ಧರ್ಮಸ್ಥಳದ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾಗಿರುವ ಶ್ರೀ ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀ ಹರ್ಷೇಂದ್ರ ಕುಮಾರ್ ಅವರ ಆಶೀರ್ವಾದವೇ ನನಗೆ ಹಾಗೂ ಶ್ರೀ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನಕ್ಕೆ ಶ್ರೀರಕ್ಷೆ’’ ಎಂದು ವಿನೀತರಾಗಿ ನುಡಿಯುತ್ತಾರೆ.
ರಾಮಕೃಷ್ಣ ಮಯ್ಯರ ಸಾಧನೆಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ಸಂದಿವೆ. ದಾವಣಗೆರೆಯ ಶ್ರೀ ಭಾಗವತ ಪ್ರತಿಷ್ಠಾನ, ಶ್ರೀ ಶಾರದಾ ಸಂಗೀತ ಮತ್ತು ನೃತ್ಯ ವಿದ್ಯಾಲಯವು ‘ಯಕ್ಷಲೋಕ ಗಾನವಿಹಾರಿ’ ಎಂಬ ಬಿರುದನ್ನು ನೀಡಿ ಗೌರವಿಸಿದೆ. ಹೈದರಾಬಾದ್‍ನ ಕರ್ನಾಟಕ ಕರಾವಳಿ ಮೈತ್ರಿ ಸಂಘವು ‘ಗಾನಗಂಧರ್ವ’ ಬಿರುದು ಹಾಗೂ ಮೈಸೂರು ಚಾಮುಂಡಿಪುರದ ಚೆಂಡೆ ಕಲಾಸಂಘವು ‘ಕರ್ನಾಟಕ ಭಾಗವತ ಸಿರಿ’ ಬಿರುದುಗಳನ್ನು ನೀಡಿ ಸನ್ಮಾನಿಸಿವೆ. ಬಹರೈನ್ ಕನ್ನಡ ಸಂಘ, ಕೇರಳ, ಕರ್ನಾಟಕ ಮೊದಲಾದ ರಾಜ್ಯಗಳ ಕಲಾಸಂಘ ಸಂಸ್ಥೆಗಳು ಪ್ರಶಸ್ತಿ, ಸನ್ಮಾನಗಳನ್ನು ನೀಡಿ ಗೌರವಿಸಿವೆ.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ರಂಗಪ್ರಸಂಗ:
ಗಡಿನಾಡಿನ ಸಾಹಿತಿ, ಸಂಶೋಧಕರಲ್ಲಿ ಓರ್ವರಾದ ಸಿರಿಬಾಗಿಲು ವೆಂಕಪ್ಪಯ್ಯನವರ ಸ್ಮರಣಾರ್ಥ ತನ್ನ ತೀರ್ಥರೂಪರ ಹೆಸರಿನಲ್ಲಿಯೇ ‘‘ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ’’ವನ್ನು ರಾಮಕೃಷ್ಣ ಮಯ್ಯರು ಸ್ಥಾಪಿಸಿದರು. ಈ ಪ್ರತಿಷ್ಠಾನದ ಮೂಲಕ ಸಾಹಿತ್ಯ ಲೋಕಕ್ಕೆ ಮತ್ತು ಯಕ್ಷಗಾನ ಕಲೆಗೆ ಸಂಬಂಧಪಟ್ಟಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಸಾಹಿತಿ ಸಿರಿಬಾಗಿಲು ವೆಂಕಪ್ಪಯ್ಯನವರ ಸಮಗ್ರ ಬರಹಗಳ ಪುಸ್ತಕ ‘ಸಿರಿಬಾಗಿಲು’ ಎಂಬ ಗ್ರಂಥವನ್ನು ಪ್ರಕಟಿಸಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರತಿವರ್ಷವೂ ‘ಸಿರಿಬಾಗಿಲು’ ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅಲ್ಲದೆ ಪ್ರತಿಷ್ಠಾನವು ಹಿರಿಯ ಕಲಾವಿದ ಹಾಗೂ ಸಂಶೋಧಕ ದೇಶಮಂಗಲ ಕೃಷ್ಣ ಕಾರಂತರ ಜನ್ಮಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದೆ. ಆ ತಾಳಮದ್ದಳೆ ಸರಣಿ ಕಾರ್ಯಕ್ರಮವನ್ನು ನಡೆಸಿದೆ. ಅದೂ ಅಲ್ಲದೆ ‘ಯಕ್ಷ ಶ್ರೀಕರ’ ಎಂಬ ತಾಳಮದ್ದಳೆ ಸರಣಿಯನ್ನು ಕಾಸರಗೋಡು ಶ್ರೀ ವೆಂಕಟ್ರಮಣ ದೇವಳದಲ್ಲಿ ವರ್ಷವಿಡಿ ನಡೆಸಿದೆ.
‘ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ’ದ ವತಿಯಿಂದ ನಡೆಯುತ್ತಿರುವ ಅಪೂರ್ವವೂ ಅಪರೂಪವೂ ಆದ ವಿಶಿಷ್ಟವಾದ ಕಾರ್ಯಕ್ರಮವೇ ‘ರಂಗಪ್ರಸಂಗ’. ಈ ಕಾರ್ಯಕ್ರಮದ ರೂವಾರಿಗಳಾದ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಮಯ್ಯರು ತನ್ನ ಹಲವಾರು ವರ್ಷಗಳ ಚಿಂತನೆಗೆ ಕಾರ್ಯರೂಪ ನೀಡಿದ್ದಾರೆ.



ರಂಗಪ್ರಸಂಗದ ವಿವಿಧ ಪ್ರದರ್ಶನಗಳು
ರಂಗಪ್ರಸಂಗದಲ್ಲಿ, ಮಾಯವಾಗುತ್ತಿರುವ ಯಕ್ಷಗಾನ ಕಲೆಯ ಸಾಂಪ್ರದಾಯಕತೆಗೆ ಮರುಜೀವ ನೀಡಿ ರಂಗದಲ್ಲಿ ಪ್ರದರ್ಶಿಸುವುದು ಮತ್ತು ಅದರ ದಾಖಲೀಕರಣವೂ ಒಳಗೊಂಡಿದೆ. ಪೂರ್ವರಂಗ, ರಂಗ ಮಾಹಿತಿ, ಬಣ್ಣಗಾರಿಕೆ, ಒಡ್ಡೋಲಗ ಕ್ರಮಗಳು, ಹಿಮ್ಮೇಳ ಇತ್ಯಾದಿ ಯಕ್ಷಗಾನದ ಹಲವಾರು ಅಂಗಗಳ ಪರಂಪರೆಯನ್ನು ಅಭ್ಯಾಸಿಗಳಿಗೆ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಅದರ ಪ್ರದರ್ಶನ ಮತ್ತು ದಾಖಲೀಕರಣವನ್ನು ‘ರಂಗಪ್ರಸಂಗ’ ಎಂಬ ಕಾರ್ಯಕ್ರಮದಡಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ವಿವಿಧೆಡೆಗಳಲ್ಲಿ ಈಗಾಗಲೇ ರಂಗಪ್ರಸಂಗದ ಐದು ಭಾಗಗಳು ಅಥವಾ ಪ್ರದರ್ಶನಗಳು ಆಗಿವೆ. ರಂಗಪ್ರಸಂಗದ ಆರನೇ ಭಾಗದ ಪ್ರದರ್ಶನದ ತಯಾರಿಯಲ್ಲಿದ್ದಾರೆ. ಸಿರಿಬಾಗಿಲು ರಾಮಕೃಷ್ಣ ಮಯ್ಯರ ಅದ್ಭುತ ಕಲ್ಪನೆ ಹಾಗೂ ಯಕ್ಷರಂಗಕ್ಕೆ ಮುಂದೊಂದು ದಿನ ಅಮೂಲ್ಯವಾದ ಕೊಡುಗೆಯಾಗುವುದರಲ್ಲಿ ಎಳ್ಳಿನಿತೂ ಸಂಶಯವಿಲ್ಲ.
ರಂಗಪ್ರಸಂಗದ ಯಶಸ್ಸಿನಿಂದ ಪ್ರೇರಿತವೋ ಎಂಬಂತೆ ತಾಳಮದ್ದಳೆಗೆ ಸಂಬಂಧಪಟ್ಟಂತೆ ಅರ್ಥಾಂತರಂಗ ಎಂಬ ಕಾರ್ಯಕ್ರಮವನ್ನು ‘ಪ್ರತಿಷ್ಠಾನ’ ಆಯೋಜಿಸಿತು. ತಾಳಮದ್ದಳೆಯ ಮೂಲಸ್ವರೂಪ, ಪಾತ್ರೋಚಿತ ಅರ್ಥಗಾರಿಕೆ ಹೇಗಿರಬೇಕು ಎಂಬ ಕಲ್ಪನೆ, ಅರ್ಥಗಾರಿಕೆಯ ಸಮಯಾವಕಾಶ, ಪೋಷಕ ಪಾತ್ರದ ಅರ್ಥಗಾರಿಕೆ, ಮುಖ್ಯ ಪಾತ್ರಗಳ ಅರ್ಥಗಾರಿಕೆ ಮುಂತಾದುವುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅರ್ಥಾಂತ ರಂಗವನ್ನು ಶ್ರೀ ರಾಧಾಕೃಷ್ಣ ಕಲ್ಚಾರ್ ಅವರ ನಿರ್ದೇಶನದಲ್ಲಿ ಆರಂಭ ಮಾಡಿದರು. ರಂಗಪ್ರಸಂಗ ಮತ್ತು ಅರ್ಥಾಂತರಂಗ ಯಕ್ಷಗಾನಾಧ್ಯಯನ ಮತ್ತು Ph.D ಮಾಡುವವರಿಗೆ ತುಂಬಾ ಸಹಕಾರಿಯಾಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಸಿರಿಬಾಗಿಲು ರಾಮಕೃಷ್ಣ ಮಯ್ಯ-50 ಮತ್ತು ಸುವರ್ಣ ಯಕ್ಷಗಾನಾರ್ಚನೆ:
ಅಕ್ಟೋಬರ್ 25, 2017ರಂದು ಸಿರಿಬಾಗಿಲು ಶ್ರೀ ರಾಮಕೃಷ್ಣ ಮಯ್ಯರ 50ನೇ ಜನ್ಮದಿನ. ಈ ದಿನವನ್ನು ಅವರು ಅತಿ ವಿಶಿಷ್ಠವಾಗಿ ಆಚರಿಸಿದ್ದರು. ಬಹುಶಃ ಮಯ್ಯರಿಗೆ ಹಾಗೂ ಯಕ್ಷಾಭಿಮಾನಿಗಳಿಗೆ ಈ ದಿನ ಮರೆಯಲಾರದ ದಿನ.
ಆ ದಿನವನ್ನು ಅವರು ಕೂಡ್ಲು ಎಂಬಲ್ಲಿರುವ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವರಿಗೆ ‘ಸುವರ್ಣ ಯಕ್ಷಗಾನಾರ್ಚನೆ’ ನಡೆಸುವುದರ ಮೂಲಕ ಸ್ಮರಣೀಯವಾಗಿಸಿದ್ದರು. ಮಯ್ಯರ ಗುರುಗಳಾದ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದ್ದ ಈ ಕಾರ್ಯಕ್ರಮದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಒಟ್ಟು 50 ಕವಿಗಳ ಪರಿಚಯ ವಿವರಗಳ ಸಹಿತ 50 ಮಟ್ಟುಗಳ ಯಕ್ಷಗಾನ ಪದ್ಯಗಳನ್ನು ಹಾಡಿ ‘‘ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನ’’ದಲ್ಲಿ ಸುವರ್ಣ ಯಕ್ಷಗಾನಾರ್ಚನೆ ನಡೆಸಿದ್ದರು.
ಈ ಸುವರ್ಣ ಯಕ್ಷಗಾನಾರ್ಚನೆಯ ಸಮಗ್ರ ನಿರ್ದೇಶನ ಮತ್ತು ನಿರೂಪಣೆಯನ್ನು ಯಕ್ಷಗಾನ ವಿದ್ವಾಂಸ ಮತ್ತು ಸಾಹಿತಿ ಶ್ರೀಧರ್ ಡಿ.ಎಸ್. ನಿರ್ವಹಿಸಿದ್ದರು.
ಸಿರಿಬಾಗಿಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ’ ಭಾಗವತ ರಾಮಕೃಷ್ಣ ಮಯ್ಯರ ಕನಸಿನ ಕೂಸು. ಹಲವಾರು ಸಂಘ, ಸಂಸ್ಥೆಗಳ ಮಹನೀಯರ, ಕಲಾಪೋಷಕರ ಸಹಕಾರದಿಂದ ಈ ಮಹತ್ತರವಾದ ಕಾರ್ಯವನ್ನು ಮಯ್ಯರು ಕೈಗೆತ್ತಿಕೊಂಡಿದ್ದಾರೆ. ಈ ಬೃಹತ್ ಕಟ್ಟಡದ ಕಾಮಗಾರಿಯು ಭರದಿಂದ ನಡೆಯುತ್ತಿದೆ. ಇನ್ನೂ ಹೆಚ್ಚಿನ ಮೂಲಗಳಿಂದ ಹಲವಿಧದ ಸಹಕಾರ ಮತ್ತು ನೆರವು ದೊರೆಯುವುದರ ಜೊತೆಗೆ ಸರಕಾರದ ಸಹಾಯಧನವೂ ಹರಿದುಬರುವ ನಿರೀಕ್ಷೆಯಿದೆ.