ಕೇರಳದ ಕಾಸರಗೋಡಿನಿಂದ ತೊಡಗಿ ಕರ್ನಾಟಕದ ಕರಾವಳೀ ಪ್ರದೇಶದ ದಕ್ಷಿಣ ಕನ್ನಡ, ಉತ್ತರ ಕನ್ನಡ ಅಲ್ಲದೆ ಮಲೆನಾಡು ಪ್ರದೇಶದ ಜನರು ಯಕ್ಷಗಾನ ಕಲೆಯನ್ನು ಆರಾಧಿಸುತ್ತಾರೆ. ಅವರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ ಈ ಶ್ರೇಷ್ಠ ಕಲೆ. ಪ್ರತಿಯೊಂದು ಮನೆಯಲ್ಲೂ ಕಲಾವಿದರೋ, ಕಲಾಭಿಮಾನಿಗಳೋ, ಸಂಘಟಕರೋ ಇದ್ದೇ ಇರುತ್ತಾರೆ. ಹಗಲು ತಮ್ಮ ದೈನಂದಿನ ಕರ್ತವ್ಯಗಳನ್ನು ಮುಗಿಸಿ ರಾತ್ರಿ ಯಕ್ಷಗಾನ ಪ್ರದರ್ಶನವನ್ನು ನೋಡಿ ಸಂತೋಷಪಡುತ್ತಾರೆ.
ಯಕ್ಷಗಾನವಿಲ್ಲದ ಬದುಕನ್ನು ಈ ಪ್ರದೇಶದ ಜನರು ಕನಸಿನಲ್ಲೂ ಕಲ್ಪಿಸಿಕೊಳ್ಳಲಾರರು. ಉತ್ತಮ ಸಂದೇಶಗಳನ್ನು ನೀಡುವ ಈ ಮೇರು ಕಲೆಯು ಅಷ್ಟೊಂದು ಗಾಢ ಪರಿಣಾಮವನ್ನು ಅವರ ಮೇಲೆ ಬೀರಿ ಬೇರೂರಿ ನೆಲೆನಿಂತಿದೆ. ಪ್ರದರ್ಶನಗಳನ್ನು ನೋಡಿ ಬಂದು ಯಕ್ಷಗಾನ ಹಾಡುಗಳನ್ನು ಗುನುಗುನಿಸುತ್ತಾ ದೈನಂದಿನ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವವರೂ ಇದ್ದಾರೆ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಇತರ ಪ್ರದೇಶದ ಜನರಾದರೆ ಸಿನಿಮಾ ಹಾಡುಗಳನ್ನು ಹೇಳುತ್ತಾರೆ. ಆದರೆ ಈ ಭಾಗದ ಜನರ ಬಾಯಲ್ಲಿ ಯಕ್ಷಗಾನದ ಹಾಡುಗಳು! ತೋಟದಲ್ಲಿ ದುಡಿಯುವ ರೈತಾಪಿ ಜನರ ಬಾಯಲ್ಲೂ ಯಕ್ಷಗಾನ ಪ್ರಸಂಗಗಳ ಪದ್ಯಗಳು! ಪ್ರಸಂಗ ಪುಸ್ತಕ ನೋಡಿ ಬಾಯಿಪಾಠ ಮಾಡಿ ಹೇಳುವುದಲ್ಲ ಅವರು. ಪ್ರದರ್ಶನಗಳನ್ನು ನೋಡಿ ಭಾಗವತರು ಹೇಳಿದ ಹಾಡುಗಳನ್ನು ಕೇಳಿಯೇ ಕಂಠಸ್ಥವಾದುದು! ಅದೆಂತಹಾ ಯಕ್ಷಗಾನಾಸಕ್ತಿ! ಯಕ್ಷಗಾನವನ್ನು ಇವರೆಷ್ಟು ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಅನ್ನುವುದಕ್ಕೆ ಇದುವೇ ನಿದರ್ಶನ. ಇದು ನಮ್ಮ ಹೆಮ್ಮೆಯ ಕಲೆಯೆಂಬ ಅಭಿಮಾನ ಅವರಿಗೆ.
ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯು ಎಲ್ಲರಿಗೂ ಇರುತ್ತದೆ. ತಾನು ಭಾಗವತನಾಗಬೇಕು ಮದ್ದಳೆಗಾರನಾಗಬೇಕು, ಹಾಸ್ಯಗಾರನಾಗಬೇಕು, ಸ್ತ್ರೀವೇಷಧಾರಿಯಾಗಬೇಕು, ಪುಂಡುವೇಷಧಾರಿಯಾಗಬೇಕು ಹೀಗೆ ಒಬ್ಬೊಬ್ಬರ ಆಸೆಗಳು ಒಂದೊಂದು. ಆದರೆ ಎಲ್ಲರಿಗೂ ಆ ಭಾಗ್ಯ ಸಿದ್ಧಿಸುವುದಿಲ್ಲ. ಅವಕಾಶ ಸಿಕ್ಕಿದವರೆಲ್ಲಾ ಹೊಳೆದು ಕಾಣಿಸಿಕೊಳ್ಳುವುದೂ ಇಲ್ಲ. ಅದಕ್ಕೂ ಯೋಗ ಬೇಕು. ಆದರೂ ಯಕ್ಷಗಾನ ಕಲೆಯ ಒಂದು ಅಂಗವಾಗಿ ಕಾಣಿಸಿಕೊಳ್ಳಲು ಅವಕಾಶ ಸಿಕ್ಕಿದರೆ ಸಹಜವಾಗಿ ಸಂತೋಷವಾಗುತ್ತದೆ. ಹೀಗೆ ಅವಕಾಶಗಳು ಒದಗಿ ವೃತ್ತಿ ಕಲಾವಿದರಾಗಿಯೋ ಅನೇಕರು ಇಂದು ಈ ಗಂಡು ಕಲೆಯ ಒಂದು ಅಂಗವಾಗಿ ವ್ಯವಸಾಯ ಮಾಡುತ್ತಿದ್ದಾರೆ. ಅಂತವರಲ್ಲೊಬ್ಬರು ಶ್ರೀ ಮಿಜಾರು ಸದಾನಂದ ಶೆಟ್ಟಿಗಾರ. ವೃತ್ತಿ ಕಲಾವಿದ. ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ.

ಮಿಜಾರು ಸದಾನಂದ ಶೆಟ್ಟಿಗಾರರು ಮೃದು ಮನಸ್ಸಿನ ಸಹೃದಯೀ ಕಲಾವಿದರು. ಪ್ರಾರಂಭದಲ್ಲಿ ವೇಷ ಮಾಡುತ್ತಿದ್ದ ಇವರು ಹಿಮ್ಮೇಳ ಕಲಾವಿದರಾಗಿ ಕಾಣಿಸಿಕೊಂಡರು (ಮದ್ದಳೆಗಾರರಾಗಿ). ಶ್ರೀಯುತರು ಮಂಗಳೂರು ತಾಲೂಕು ತೆಂಕಮಿಜಾರು ಗ್ರಾಮದ ಪೂಮಾರಪದವು ಎಂಬಲ್ಲಿ 1968 ಫೆಬ್ರವರಿ 17ರಂದು ಶ್ರೀ ರಾಮ ಶೆಟ್ಟಿಗಾರ ಮತ್ತು ವಾರಿಜ ದಂಪತಿಗಳಿಗೆ ಮಗನಾಗಿ ಜನಿಸಿದರು. ಬಾಲಕನಾಗಿದ್ದಾಗಲೇ ಯಕ್ಷಗಾನದಲ್ಲಿ ಆಸಕ್ತಿಯನ್ನು ಹೊಂದಿ ಪ್ರದರ್ಶನಗಳನ್ನು ನೋಡುತ್ತಿದ್ದರು. ಓದಿದ್ದು 9ನೇ ತರಗತಿಯ ವರೆಗೆ. ಎಡಪದವು ಸ್ವಾಮಿ ವಿವೇಕಾನಂದ ಹೈಸ್ಕೂಲಿನಲ್ಲಿ.
ನೇಯ್ಗೆಗಾರಿಕೆಯು ಇವರ ಕುಲ ಕಸುಬು. ಇದು ಹಿರಿಯರಿಂದ ಬಳುವಳಿ. ಶಾಲೆ ಬಿಟ್ಟ ನಂತರ ನೇಯ್ಗೆ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಶಾಲಾ ವಿದ್ಯಾರ್ಥಿಯಾಗಿದ್ದಾಗ ಖ್ಯಾತ ಕಲಾವಿದ ಮುಚ್ಚೂರು ಹರೀಶ ಶೆಟ್ಟಿಗಾರರಿಂದ ನಾಟ್ಯಾಭ್ಯಾಸ. ಹರೀಶ ಶೆಟ್ಟಿಗಾರರು ವೇಷಧಾರಿಯೂ ಅರ್ಥಧಾರಿಯೂ ಆಗಿದ್ದರು. ಕಲಿಕಾಸಕ್ತರಿಗೆ ಚೆನ್ನಾಗಿ ಹೇಳಿಕೊಡುವುದು ಮಾತ್ರವಲ್ಲ, ಸಂಭಾಷಣೆಗಳನ್ನೂ ಬರೆದು ಕೊಡುತ್ತಿದ್ದವರು. ಅವರಿಂದ ಕಲಿತು ಸದಾನಂದ ಶೆಟ್ಟಿಗಾರರು ಶಾಲೆ ಮತ್ತು ಊರಲ್ಲಿ ನಡೆಯುತ್ತಿದ್ದ ಪ್ರದರ್ಶನಗಳಲ್ಲಿ ವೇಷ ಮಾಡಲಾರಂಭಿಸಿದರು. ಆ ಸಂದರ್ಭದಲ್ಲಿ ಗುರುಪುರ ಶ್ರೀ ಅಣ್ಣಿ ಭಟ್ಟರಿಂದ ಹಿಮ್ಮೇಳ ಅಭ್ಯಾಸ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಸದಾನಂದ ಶೆಟ್ಟಿಗಾರರ ಮೊದಲ ತಿರುಗಾಟ ತಲಕಳದಲ್ಲಿ. ವೇಷಧಾರಿಯಾಗಿ ಮತ್ತು ಮದ್ದಳೆಗಾರರಾಗಿ ಮೂರು ವರ್ಷ ತಿರುಗಾಟ. ಹಿಮ್ಮೇಳ ಮತ್ತು ನಾಟ್ಯವನ್ನೂ ಕಲಿತು ವೇಷ ಮಾಡಿದುದು ಇವರಿಗೆ ಅನುಕೂಲವೇ ಆಗಿತ್ತು. ಪ್ರಸಂಗ ಜ್ಞಾನ, ರಂಗ ನಡೆ, ಲಯಸಿದ್ಧಿಯೂ ಸಿದ್ಧಿಸಿತ್ತು. ನಂತರ ಸಸಿಹಿತ್ಲು ಮೇಳದಲ್ಲಿ ಮದ್ದಳೆಗಾರನಾಗಿ 2 ವರ್ಷ ತಿರುಗಾಟ. ನಂತರ ಬಪ್ಪನಾಡು ಮೇಳದಲ್ಲಿ 8 ವರ್ಷ ವ್ಯವಸಾಯ. ಹೀಗೆ ಹಿರಿಯ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರ ಒಡನಾಟದಿಂದಾಗಿ ಸದಾನಂದ ಶೆಟ್ಟಿಗಾರರು ಪಕ್ವರಾಗಿದ್ದರು. ನಂತರ ಸುಂಕದಕಟ್ಟೆ ಮೇಳದಲ್ಲಿ 4 ವರ್ಷ, ಕಟೀಲು ಮೇಳದಲ್ಲಿ 2 ವರ್ಷ. ಮತ್ತೆ ಬಪ್ಪನಾಡು ಮೇಳದಲ್ಲಿ ಮತ್ತು ಸುಂಕದಕಟ್ಟೆ ಮೇಳಗಳಲ್ಲಿ 5 ವರ್ಷ. ಪ್ರಸ್ತುತ 4 ವರ್ಷಗಳಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿಯಲ್ಲಿ ಮದ್ದಳೆಗಾರನಾಗಿ ವ್ಯವಸಾಯ ಮಾಡುತ್ತಿದ್ದಾರೆ.
ಮಿಜಾರು ಸದಾನಂದ ಶೆಟ್ಟಿಗಾರರ ಜತೆ ತಿರುಗಾಟವಿದ್ದ ಕಾರಣ ನಾನು ಅವರನ್ನು ಹತ್ತಿರದಿಂದಲೇ ಬಲ್ಲೆ. ಮೃದು ಮನಸ್ಸಿನ ಸಹೃದಯೀ ಸಜ್ಜನ ಕಲಾವಿದರಿವರು. ಪ್ರದರ್ಶನಗಳಿಗೆ ಸದಾ ಸಿದ್ಧರಾಗಿಯೇ ಬರುತ್ತಾರೆ. ಪ್ರಸಂಗ ನಡೆಗಳ ಬಗ್ಗೆ ಭಾಗವತರು, ಕಲಾವಿದರೊಡನೆ ಚರ್ಚಿಸಿಯೇ ರಂಗವೇರುತ್ತಾರೆ. ಪ್ರದರ್ಶನಗಳು ಹಾಳಾಗಬಾರದು. ರಂಜಿಸಬೇಕು. ತಂಡವಾಗಿ ಶ್ರಮಿಸಿ ಎಲ್ಲಾ ಕಲಾವಿದರೂ ಪ್ರಸಂಗದ ಗೆಲುವಿಗೆ ಕಾರಣರಾಗಬೇಕು ಎಂಬ ಅಭಿಪ್ರಾಯವನ್ನು ಹೊಂದಿರುವ ಕಲಾವಿದರಿವರು. ಯಾರೊಡನೆಯೂ ಹೆಚ್ಚು ಬೆರೆಯುವವರಲ್ಲ. ಹಾಗೆಂದು ಏಕಾಂಗಿಯಾಗಿ ಇರುವವರಲ್ಲ. ವಿನೋದಪ್ರಿಯರಾದ ಇವರು ರಸಮಯವಾದ ಸನ್ನಿವೇಶಗಳು ಸೃಷ್ಟಿಯಾದಾಗ ಅವುಗಳಿಗೆ ಸ್ಪಂದಿಸಿ ಎಲ್ಲರೊಡನೆ ಸಂತಸವನ್ನು ಅನುಭವಿಸುತ್ತಾರೆ.

ತನಗೆ ನೀಡಿದ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಿ ಮುಗಿಸುವ ಇವರು ಕಲಾವಿದರೆಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಚೆಂಡೆ ಮತ್ತು ಮದ್ದಳೆ ಎರಡನ್ನೂ ನುಡಿಸುವುದರಲ್ಲಿ ನಿಪುಣರು. ಪರಂಪರೆಯ ರೀತಿಗಳಿಗೆ ಧಕ್ಕೆಯಾಗದೆ ರಂಗದಲ್ಲಿ ಎಲ್ಲವೂ ಇರಬೇಕು ಎನ್ನುವ ಇವರು ಅದಕ್ಕೆ ಕೊರತೆಯಾದರೆ ಬೇಸರಿಸುತ್ತಾರೆ. ತೆರೆದುಕೊಳ್ಳುವ ಸ್ವಭಾವವು ಇವರದಲ್ಲ. ತಾನಾಯಿತು, ತನ್ನ ಕೆಲಸವಾಯಿತು. ಹಾಗಾಗಿ ಪ್ರಚಾರದಿಂದ ದೂರ ಉಳಿದರೇನೋ ಎಂದು ಅನಿಸಿದರೆ ತಪ್ಪಲ್ಲ. ಇವರು ಕಲಿಕಾಸಕ್ತರಿಗೆ ತರಬೇತಿಯನ್ನೂ ನೀಡುತ್ತಾರೆ. ಪ್ರಸ್ತುತ ಮಾರಿಕಾಂಬಾ ಯಕ್ಷಗಾನ ಮಂಡಳಿ ನೀರ್ಕೆರೆ ಮೊದಲಾದೆಡೆ ನಾಟ್ಯ ತರಬೇತಿಯನ್ನೂ ಕೊಡುತ್ತಿದ್ದಾರೆ. 1998ರಲ್ಲಿ ವಿವಾಹಿತರಾದ ಇವರು ಪತ್ನಿ ಶ್ರೀಮತಿ ಚಂದ್ರಾವತಿ ಜೊತೆ ಮಿಜಾರು ಸಮೀಪ ನೆಲೆಸಿರುತ್ತಾರೆ. ಮಿಜಾರು ಶ್ರೀ ಸದಾನಂದ ಶೆಟ್ಟಿಗಾರ್ ದಂಪತಿಗಳಿಗೆ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಮದ್ದಳೆಗಾರ ಸದಾನಂದ ಶೆಟ್ಟಿಗಾರರಿಂದ ಇನ್ನಷ್ಟು ಕಲಾ ಸೇವೆಯು ನಡೆಯಲಿ ಎಂಬ ಹಾರೈಕೆಗಳು.
