Saturday, January 18, 2025
Homeಯಕ್ಷಗಾನಶೇಣಿ ವಾಗ್ವೈಭವ - ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯ ತುಣುಕು - 1

ಶೇಣಿ ವಾಗ್ವೈಭವ – ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯ ತುಣುಕು – 1

ಪದ್ಯ: ಲಾಲಿಸು ಮಯತನುಜೆ ಮಚ್ಛರಿತವ |
ಕ್ಷೀರಾಬ್ಧಿಶಯನನೋಲಗದಿ | ನಾವು |
ದ್ವಾರಪಾಲಕರಾಗಿ ಮುದದಿ | ಇರೆ |
ಮಾರಮಣನ ಕಾಂಬುತ್ಸಾಹದಿ |
ಮುನಿಜರು ಸನಕ ಸನಂದರೈತರೆ |
ಮದ|ವೇರಿ ಧಿಕ್ಕಾರದೊಳ್ ಅಡ್ಡಗಟ್ಟಿದೆವು


ಅರ್ಥ: “ಮಂಡೋದರಿ… ಕೊನೆಯ ಉಸಿರಿನ ವರೆಗೂ ಈ ರಹಸ್ಯವನ್ನು ಬಯಲುಪಡಿಸಲಾಗದು ಅಂತ ನಿರ್ಧಾರ ತಳೆದಿದ್ದೆ. ಆದರೆ ಆ ನಿರ್ಧಾರವನ್ನು ನೀನು ಸಡಿಲಿಸಿದೆ. ಇದು ನಿನ್ನ ವೈಯಕ್ತಿಕವಾದ ಜಯ. ಮಂಡೋದರಿ, ಶ್ರೀರಾಮನು ಯಾರು? ಏನು ಮತ್ತು ವರ್ತಮಾನ ಕಾಲದಲ್ಲಿ ಮನುಷ್ಯಾಕೃತಿಯಿಂದ ಸಂಚರಿಸುತ್ತಾನೆ ಯಾಕೆ ಎಂಬುದನ್ನೂ ನನ್ನ ಹಿರಿಯರು ಮತ್ತು ತಮ್ಮನಾದ ವಿಭೀಷಣನೋ ಅಥವಾ ನೀವೆಲ್ಲರೋ ಹೇಳಿ ತಿಳಿಯಬೇಕಾದ ಪ್ರಮೇಯವೇ ನನಗಿಲ್ಲ. ಈಗ ಕೇಳು. ವೇದಾಧ್ಯಯನ ಮಾಡಿದ ಪ್ರಭಾವ, ನಾನು ಸಾಧಿಸಿದ ಅಣಿಮಾದಿ ಅಷ್ಟಸಿದ್ಧಿ ಯೋಗಗಳ ಪ್ರಭಾವ, ಶಿವನ ಅನುಗ್ರಹದ ಪ್ರಸಾದ ಎಲ್ಲವೂ ನನ್ನ ಜೀವನದಲ್ಲಿ ಸುತ್ತಮುತ್ತಲೂ ಬೆಳಕಾಗಿ, ಬೆಂಬಲವಾಗಿ ಇರುವುದರಿಂದ ನಾನು ಗುರುತಿಸಿಕೊಳ್ಳಬಲ್ಲೆ, ನಾನು ಏನಾಗಿದ್ದೆ ಎಂದು. ಸಾಧಾರಣ ಜನರಿಗೆ ಇದು ಸಾಧ್ಯವಿಲ್ಲ. ಯೋಗನಿರತರಾದಂತಹ ತ್ರಿಕಾಲ ಜ್ಞಾನಿಗಳಿಗೆ ಮಾತ್ರವೇ ಇದು ಸಾಧ್ಯ. ಈ ಸಾಧ್ಯತೆ ನಿನ್ನ ಗಂಡ ಸಾಧಿಸಿಕೊಂಡಿದ್ದಾನೆ ಎಂಬುದು ನಿನ್ನ ಬದುಕಿಗೆ ಹೆಮ್ಮೆಯಾಗಲಿ. ಜನ ಏನೋ ಹೇಳಲಿ, ಮೂರ್ಖ, ಮದಾಂಧ ರಾಕ್ಷಸ. ಆದರೆ ಅದು ಒಂದೂ ಅಲ್ಲ ಎಂಬ ಆತ್ಮತೃಪ್ತಿ ನಿನಗುಂಟಾಗುವುದಕ್ಕಾಗಿಯೂ ಈ ಗುಟ್ಟನ್ನು ಹೊರಹಾಕುತ್ತಿದ್ದೇನೆ.

ಆ ವೈಕುಂಠದಲ್ಲಿ ಲಕ್ಷ್ಮೀಸಹಿತನಾದಂತಹ ಶ್ರೀಹರಿ ಶೇಷಸಾಯಿಯಾಗಿದ್ದ ಹೊತ್ತಿನಲ್ಲಿ ದರ್ಶನಾಕಾಂಕ್ಷಿಯಿಂದ ಸನಕಾದಿ ಋಷಿಗಳು ಒಂದು ಶುಭಮುಹೂರ್ತದಲ್ಲಿ ಬಂದರು. ಆ ಶುಭಮುಹೂರ್ತದಲ್ಲಿ ಅವರು ಬಂದಾಗ ಅಲ್ಲಿ ಜಯ-ವಿಜಯರು ಎಂಬ ದ್ವಾರಪಾಲಕರಿದ್ದರು. ಅವರಿಗೆ ಏನಾಯಿತೋ ಗೊತ್ತಿಲ್ಲ. ಬಹುಶಃ ಪೂರ್ಣತೆ ಪ್ರಾಪ್ತಿಯಾಗಬೇಕಾದರೆ ನಾರಾಯಣತ್ವವೇ ಬರಬೇಕೋ ಏನೋ ಆದುದರಿಂದ ಮಾರ್ಗವಿರೋಧ ಮಾಡಿದರು ಜಯ-ವಿಜಯರು. ಬಹುಶಃ ಅಹಂಕಾರ ಮೂಲದಿಂದಲೇ ಆ ಜಯ-ವಿಜಯರು ತಡೆದದ್ದಕ್ಕೆ ಪ್ರಾಯಶ್ಚಿತ್ತ ಅಥವಾ ಶಿಕ್ಷಾ ಎಂಬ ರೂಪದಿಂದ ಋಷಿಗಳು ಶಪಿಸಿದರು. ಪ್ರಪಂಚದಲ್ಲಿ ದುಷ್ಟ ದಾನವರೋ, ರಾಕ್ಷಸರೋ, ಆಸುರೀ ಪ್ರವೃತ್ತಿಯವರೋ ಆಗಿ ಹುಟ್ಟಿ ಎಂದು ಶಪಿಸ ಲ್ಪಟ್ಟಂತಹ ಜಯ-ವಿಜಯರು ಶ್ರೀಹರಿಯನ್ನೇ ಪಶ್ಚಾತ್ತಾಪದಿಂದ ಪ್ರಾರ್ಥಿಸಿದರು.

ಮಂಡೋದರೀ, ವಿವೇಕಿಯಾದವರಿಗೆ ಪಶ್ಚಾತ್ತಾಪಪಡುವುದಕ್ಕೋ, ಹೃದಯ ನಿವೇದನೆ ಮಾಡುವುದಕ್ಕೆ ಜಗದೀಶ್ವರನಲ್ಲದೆ ಬೇರೆ ಯಾರಿರುತ್ತಾರೆ ಹೇಳು. ಪಾಮರರಾದವರು ಕಂಡ ಕಂಡವರ ಮುಂದೆ ಎಲ್ಲಾ ಪಶ್ಚಾತ್ತಾಪಪಟ್ಟು ಹೀಗಾಯಿತಲ್ಲಾ ಎಂದು ಕಣ್ಣೀರಿಳಿಸಬಹುದು. ಆದರೆ ಜಯ-ವಿಜಯರಂತಹವರು ಸ್ವಾಮಿಯಲ್ಲಿ ಪ್ರಾರ್ಥಿಸಿದಾಗ ಒಳ್ಳೆಯದು, ಅಹಂಕಾರ ನಿಮ್ಮಲ್ಲಿ ಇದ್ದುದು ನಿಜ. ಅದರ ಪರಿಮಾರ್ಜನೆ ಆಗದೆ ವೈಕುಂಠದ ಸತ್ಪ್ರಜೆಗಳಾಗುವುದಕ್ಕೋ ಅಥವಾ ನನ್ನ ಆತ್ಯಂತಿಕ ಭಕ್ತರಾಗುವುದಕ್ಕೋ ನಿಮಗೆ ಪರಿಶುದ್ಧತೆ ಸಾಕಾಗುವುದಿಲ್ಲ. ಎಲ್ಲಾ ಪ್ರಾಯಶ್ಚಿತ್ತಕ್ಕೂ ಮರ್ತ್ಯಲೋಕದಲ್ಲಿ ಹುಟ್ಟುವುದೇ, ಕರ್ಮಭೂಮಿ ಎನಿಸುತ್ತದೆ ಅದು. ಆದಕಾರಣ ಕರ್ಮಭೂಮಿಯಲ್ಲಿ ಮೂರು ಜನ್ಮದಲ್ಲಿ ನನ್ನಲ್ಲೇ ವಿರೋಧವನ್ನು ಸಾಧಿಸಿ ಅಂದರೆ ಆ ವಿರೋಧ ಅಷ್ಟು ಪ್ರಬಲವಾಗಿರಬೇಕು. ವಿಚಿತ್ರವಾದದ್ದು ಇದು. ಮಂಡೋದರೀ… ಭಗವಂತನಲ್ಲಿ ಆದರೂ ತೀವ್ರವಾದ ವಿರೋಧವನ್ನು ಬೆಳೆಸಬೇಕು, ಇಟ್ಟುಕೊಳ್ಳಬೇಕು ಆಗಿದ್ದರೆ ಬಾಕಿ ಇದ್ದ ವಿಷಯಗಳಲ್ಲಿ ಇವನಿಗೆ ವೈರಾಗ್ಯ ಬರಬೇಕೋ ಬೇಡವೇ ಹೇಳು. ಪ್ರೇಮ ಹೇಗೆ? ಭಗವಂತನ ಕುರಿತಾಗಿ ಉತ್ಕಟವಾಗಿ, ತದೇಕಚಿತ್ತವಾಗಿ ಇರಬೇಕೋ ಹಾಗೆಯೇ ವಿರೋಧವೂ ಕೂಡಾ ಹಾಗೆಯೇ ಇರಬೇಕಲ್ಲ. ಭಗವಂತನ ಕುರಿತಾಗಿ ಪ್ರೇಮವಾದರೇನು, ವಿರೋಧವಾದರೇನು? ಪ್ರೇಮ, ಕ್ರೋಧ, ಲೋಭ ಇವೆಲ್ಲಾ ಮಾನಸಿಕವಾದಂತಹ ವಿಚಾರಗಳು ತಾನೆ? ಹಾಗಾಗಿ ವಿರೋಧವನ್ನೇ ಮಾಡಿ. ಈ ವಿರೋಧದಿಂದ ಒಂದು ಪರಮ ಲಾಭ ಇದೆ. ಏನು? ಆ ವಿರೋಧವನ್ನು ನೀವು ಸಾಧಿಸಿದಾಗ ನಿಮಗೆ ಅನುಗ್ರಹರೂಪವಾದ ಮರಣವನ್ನು ಕೊಡುವುದಕ್ಕಾಗಿ ನಾನೇ ಆವಿರ್ಭವಿಸುತ್ತೇನೆ. ಭೂಮಂಡಲದಲ್ಲಿ. ಎಂದು ಭಗವಂತನ ಅಪ್ಪಣೆಯಾಯಿತು.

ಆಲೋಚಿಸು… ಈ ಅಪ್ಪಣೆ ಪಡೆದ ಜಯ-ವಿಜಯರು ವೈಕುಂಠದಿಂದ ನಿರ್ಗಮಿಸಿದರು. ಪ್ರಥಮ ಜನ್ಮದಲ್ಲಿ ಹುಟ್ಟಿದರು ಹಿರಣ್ಯಾಕ್ಷ, ಹಿರಣ್ಯಕಶಿಪುವಾಗಿ. ಎರಡನೇ ಜನ್ಮವೇ ಇದು. ರಾವಣ ಮತ್ತು ಕುಂಭಕರ್ಣ, ನಾನೇ ಜಯ, ಅಳಿದ ಕುಂಭಕರ್ಣನೇ ವಿಜಯ. ಇನ್ನೊಂದು ಜನ್ಮ ಮೀಸಲಾಗಿದೆ. ಅದು ಏನೋ ಗೊತ್ತಿಲ್ಲ. ಹೀಗೆ ಮೂರು ಜನ್ಮದಲ್ಲಿ ವಿರೋಧವನ್ನು ಸಾಧಿಸುವುದು. ಅದು ಒಂದೇ ಏಕಾಗ್ರ ಬುದ್ಧಿ, ಇಲ್ಲಿಯ ವರೆಗೆ ನಾನು ಉಳಿಸಿಕೊಂಡು ಬಂದಿದ್ದೇನೆ ಎಂಬುದು ನನಗೆ ಆತ್ಮಕಲ್ಯಾಣಕ್ಕೆ ಇದ್ದಂತಹ ಬಲು ದೊಡ್ಡದಾದಂತಹ ಮಾರ್ಗ ಎಂಬ ನಿರ್ಣಯ ಇದ್ದದ್ದರಿಂದ ರಾಮನನ್ನು ವಿರೋಧಿಸುತ್ತೇನೆ. ವಿರೋಧಿಸುತ್ತೇನೆ, ಮನಸಾ ವಿರೋಧಿಸುತ್ತೇನೆ. ಕೇವಲ ಸೋಗಿನಿಂದ ಅಲ್ಲ. ಹಾಗಾದರೆ ರಾಮನನ್ನು ವಿರೋಧಿಸುವಾಗ ಆ ವಿರೋಧಕ್ಕೆ ಇನ್ನಷ್ಟು ಒತ್ತುಕೊಡುವುದಕ್ಕೆ ಬೇಕಾಗಿ ರಾಮನ ಹೃದಯರೂಪಿಣಿಯಾದ ಸೀತೆಯನ್ನು ನಾನು ಕಾಮಿಸುತ್ತೇನೆ. ಈ ಕಾಮ ಯಾಕೆ ಅಂತ ಅಂದರೆ ಆ ಕ್ರೋಧಕ್ಕೆ ಪೂರಕವೇ ಹೊರತು ಬೇರೇನಲ್ಲ. ಶಾಸ್ತ್ರವೂ ಹಾಗೆ. ಮನಸಿನಲ್ಲಿ ಹುಟ್ಟಿದಂತಹಾ ಕಾಮ. ಆ ಕಾಮವೇ ಕ್ರೋಧವಾಗಿ ಪರಿಣಮಿಸುತ್ತದೆ. ಆ ಕ್ರೋಧ ಬುದ್ಧಿ ನಷ್ಟಗೊಳಿಸುತ್ತದೆ ಬಾಕಿ ಉಳಿದವರಿಗೆ. ನಮಗೆ ವಿವೇಕವನ್ನು ಜಾಗೃತಗೊಳಿಸುತ್ತದೆ.

ರಾಮನ ಮುಂದೆ ಆಗಲೀ ಸೀತೆಯ ಮುಂದೆ ಆಗಲಿ ನಾನು ನಡೆದಂತಹ ನಡತೆಯೆಲ್ಲಿ. ಈ ಉದ್ದೇಶದಿಂದಲೆ ಹೊರತು ಮತ್ತೇನೂ ಅಲ್ಲ. ಮಂಡೋದರೀ… ಈಗ ಹೇಳು, ಆಡಿ ತಪ್ಪಲು ಬಹುದೆ? ಓಡಿ ಸಿಕ್ಕಲು ಬಹುದೆ? ಆದಕಾರಣ ಭಗವಂತನು ಲಕ್ಷ್ಮೀಸಹಿತನಾಗಿ ಏನು ಅಪ್ಪಣೆ ಕೊಟ್ಟಿದ್ದಾನೆ. ಅದರಂತೆ ಕಾಯೇನ ವಾಚಾ ಮನಸಾ ಆ ರಾಮನು ಎಲ್ಲಿದ್ದಾನೆ ಎಂದು ಹುಡುಕುತ್ತಾ ಹುಡುಕುತ್ತಾ ಹುಡುಕುತ್ತಾ ಎಲ್ಲಿಯೂ ಸಿಕ್ಕದಿದ್ದಾಗ ಕೊನೆಗೆ ಗೊತ್ತಾಯಿತು. ಶೂರ್ಪನಖಿಯ ಕರ್ಣ ನಾಸಾಛೇದನ ಯಾವಾಗ ಆಯಿತೋ ಆವಾಗ ನಮ್ಮ ಶತ್ರುವೊಬ್ಬ ಹುಟ್ಟಿದ್ದಾನೆ. ಇದು ಶ್ರೀರಾಮನು ಆಧ್ಯಾತ್ಮಿಕವಾಗಿ ನನಗೆ ಕೊಟ್ಟಂತಹ ಸೂಚನೆ. ಅಂದಿನಿಂದಲೇ ನಿನ್ನ ಮಾತನ್ನೂ ತಿರಸ್ಕರಿಸಿದೆ. ನಾನು ಪ್ರಪಂಚದಲ್ಲಿ ಗೊತ್ತಾಗುವ ಹಾಗೆ ಸೀತೆಯಲ್ಲಿ ಕಾಮ ಸಂಬಂಧದಿಂದ ವ್ಯವಹರಿಸುತ್ತೇನೆಯೇ ಹೊರತು ಬೇರೇನೂ ಅಲ್ಲ.

ಇದು ನನಗೆ ಮಾತ್ರ. ಆದ್ದರಿಂದ ರಾವಣನಾದದ್ದಂತಹ ನಡತೆ ಬಾಕಿ ಇದ್ದವರಿಗೆ ಆದರ್ಶವೂ ಅಲ್ಲ. ಈ ವಿಶಿಷ್ಟ ಕೆಲವು ಜೀವಾತ್ಮರಿಗೆ ಯಾವುದೋ ಒಂದು ಶಾಪ ಕಾರಣವಾಗಿ ಈ ಪ್ರಪಂಚದಲ್ಲಿ ಹುಟ್ಟು ಸಂಭವಿಸಿದಾಗ ಅವರ ನಡತೆಯೂ ವಿಚಿತ್ರವಾಗಿರುತ್ತದೆ. ಹಿರಣ್ಯಕಶ್ಯಪು, ಹಿರಣ್ಯಾಕ್ಷನ ಸಂಹಾರಕ್ಕೆ ಶ್ರೀಮನ್ನಾರಾಯಣ ನರಸಿಂಹನೋ, ವರಾಹನೋ ಆದ. ನಮ್ಮ ಸಂಹಾರಕ್ಕಾಗಿ ಲೋಕಾಭಿರಾಮ ಶ್ರೀರಾಮನಾದ. ಮುಂದೆ ಏನಾಗುತ್ತಾನೋ ಗೊತ್ತಿಲ್ಲ. ಅದು ಭಗವಂತನ ಚಿತ್ತ. ಈಗ ಹೇಳು… ತಪ್ಪಿದೆನೇ ನಾನು. ತಪ್ಪಿದೆನೇ… ಸಾಂತ್ವನಗೊಂಡೆ ತಾನೇ? ಒಬ್ಬ ಗೃಹಸ್ಥನಾಗಿ ಈ ವರೆಗಿನ ಬದುಕಿನಲ್ಲಿ ಇದು ಬಲು ದೊಡ್ಡ ಜಯ ಎಂದು ತಿಳಿದುಕೊಂಡಿದ್ದೇನೆ. ಸ್ವಲ್ಪ ವಿಶ್ರಮಿಸಿಕೊಳ್ಳುತ್ತೇನೆ.”

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments