Saturday, January 18, 2025
Homeಯಕ್ಷಗಾನಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಶ್ರೀಧರ್ ಡಿ.ಎಸ್. ಆಯ್ಕೆ - ನಿಸ್ವಾರ್ಥ ಕಾಯಕಕ್ಕೆ ಸಂದ ಗೌರವ 

ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಶ್ರೀಧರ್ ಡಿ.ಎಸ್. ಆಯ್ಕೆ – ನಿಸ್ವಾರ್ಥ ಕಾಯಕಕ್ಕೆ ಸಂದ ಗೌರವ 

ಕರ್ನಾಟಕ ಯಕ್ಷಗಾನ ಅಕಾಡೆಮಿಯ 2020ನೇ ಸಾಲಿನ ಪ್ರಶಸ್ತಿಗಳ ಘೋಷಣೆ ಮಾಡಲಾಗಿದೆ. ಪ್ರತಿಷ್ಠಿತ ‘ಪಾರ್ತಿಸುಬ್ಬ ಪ್ರಶಸ್ತಿ’ಯು ಯಕ್ಷಗಾನ ಪ್ರಸಂಗಕರ್ತ, ತಾಳಮದ್ದಳೆ ಅರ್ಥಧಾರಿ, ನಿವೃತ್ತ ಉಪನ್ಯಾಸಕ ಶ್ರೀಧರ ಡಿ.ಎಸ್ ಅವರಿಗೆ ಒಲಿದಿದೆ. 

ಶ್ರೀಧರ್ ಡಿ. ಎಸ್. ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ನಿಟ್ಟೂರು ಸಮೀಪದ ಧರೆಮನೆ ಎಂಬಲ್ಲಿ ಶ್ರೀಪಾದಯ್ಯ ಮತ್ತು ಸರಸ್ವತಿ ಅಮ್ಮ ದಂಪತಿಗಳಿಗೆ ಮಗನಾಗಿ 1950ನೇ ಇಸವಿ ಆಗಸ್ಟ್ 25ರಂದು ಜನಿಸಿದರು. ಶ್ರೀಧರ್ ಡಿ. ಎಸ್. ಇವರು ಹೆಬ್ಬಿಗೆ ಸರಕಾರೀ ಶಾಲೆಯಲ್ಲಿ 7ನೇ ತರಗತಿಯ ವರೇಗೆ ಓದಿ ಹೆಚ್ಚಿನ ವಿದ್ಯಾರ್ಜನೆಗೆ ಉಡುಪಿಯನ್ನು ಆಶ್ರಯಿಸಿದರು. ಹೆಬ್ಬಿಗೆ ಶಾಲೆಯಲ್ಲಿ ಓದುತ್ತಿರುವಾಗ ತೆಂಕಿನ ಮುಲ್ಕಿ ಮತ್ತು ಕೂಡ್ಲು ಮೇಳಗಳ ಆಟಗಳನ್ನು ಸಾಗರ ಪರಿಸರದಲ್ಲಿ ನೋಡುವ ಅವಕಾಶ ಸಿಕ್ಕಿತ್ತು. 

ಯಕ್ಷಗಾನವೆಂಬ ಆವರಣದಲ್ಲೇ ಬೆಳೆದ ಕಾರಣ ಇವರಿಗೆ ಸಹಜವಾಗಿ ಆಸಕ್ತಿ ಹುಟ್ಟಿಕೊಂಡಿತ್ತು. ಶ್ರೀಧರ್ ಡಿ. ಎಸ್.ರು ಪಾಠೇತರ ಚಟುವಟಿಕೆಗಳಲ್ಲೂ ಚುರುಕು. 6ನೇ ತರಗತಿಯಲ್ಲಿರುವಾಗಲೇ ಕುಮಾರವ್ಯಾಸ ಭಾರತವನ್ನು ಓದಿ ಮುಗಿಸಿದ್ದರು. ಯಕ್ಷಗಾನದ ಜತೆಗೆ ಓದುವ ಹವ್ಯಾಸವೂ ಇತ್ತು. ಈ ಸಂದರ್ಭ ನಾಟಕವೊಂದನ್ನು ರಚಿಸಿ, ನಿರ್ದೇಶಿಸಿ ಅಭಿನಯಿಸಿದ ಪ್ರತಿಭಾವಂತರು. 9ನೇ ತರಗತಿಯಲ್ಲಿ ಕಲಿಯುತ್ತಿರುವಾಗ ತಾಳಮದ್ದಳೆಗೆ ರಂಗಪ್ರವೇಶ- ಕರ್ಣಪರ್ವದ ವೃಷಸೇನನ ಪಾತ್ರದಲ್ಲಿ. 

ಉಡುಪಿಯಲ್ಲಿ ಹೈಸ್ಕೂಲ್ ಓದುತ್ತಿದ್ದಾಗ ಸಕ್ರಿಯವಾಗಿ ಯಕ್ಷಗಾನದಲ್ಲಿ ಭಾಗವಹಿಸಲಿಲ್ಲವಾದರೂ ಪಿ. ಯು. ಸಿ. ಓದುತ್ತಿರುವಾಗ ಅವಕಾಶಗಳು ಅರಸಿಬಂದವು. ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ, ನರಹರಿ ಭಟ್ (ಇವರು ಶ್ರೀಧರ್ ಡಿ. ಎಸ್. ಅವರ ಭಾವ), ತೋಕೂರು ರಾಮಚಂದ್ರ ಭಟ್ ಮತ್ತು ದೇವರು ನಾರಾಯಣ ಹೆಗಡೆಯವರ ಒಡನಾಟದಿಂದ ಮತ್ತೆ ಯಕ್ಷಗಾನದತ್ತ ಸೆಳೆಯಲ್ಪಟ್ಟರು. ಪಿ.ಯು.ಸಿ. ವಿದ್ಯಾರ್ಥಿಯಾಗಿರುವಾಗ ನಾಟ್ಯಾಭ್ಯಾಸ. ಸಕ್ಕಟ್ಟು ಸೀತಾರಾಮಯ್ಯನವರು ಉಡುಪಿ ಪರಿಸರದಲ್ಲಿ ನಾಟ್ಯ ತರಬೇತಿ ನೀಡುತ್ತಿದ್ದರು.

ಶ್ರೀಯುತರು ಬಡಗಿನ ಪ್ರಸಿದ್ಧ ಬಣ್ಣದ ವೇಷಧಾರಿ ಲಕ್ಷ್ಮೀನಾರಾಯಣಯ್ಯ ಸಕ್ಕಟ್ಟು ಇವರ ತಮ್ಮ ಅಧ್ಯಾಪಕರಾಗಿದ್ದ ಸೀತಾರಾಮಯ್ಯನವರಿಂದ ನಾಟ್ಯಾಭ್ಯಾಸ. ತೆಂಕಿನಲ್ಲೂ ಬಡಗಿನಲ್ಲೂ ಶ್ರೀಧರ್ ಡಿ. ಎಸ್. ವೇಷ ಮಾಡಲಾರಂಭಿಸಿದರು. ಪ್ರಸ್ತುತ ಈಗಲೂ ಕಾರ್ಯಾಚರಿಸುತ್ತಿರುವ ಉಡುಪಿ ವಿದ್ಯಾದಾಯಿನೀ ಯಕ್ಷಗಾನ ಸಭಾ ಸಂಸ್ಥೆಯು ಪ್ರತೀ ಭಾನುವಾರ ನಡೆಸುವ ತಾಳಮದ್ದಳೆಗಳಲ್ಲೂ ಭಾಗವಹಿಸುವ ಅವಕಾಶ ಸಿಕ್ಕಿತು. ಈ ಸಂಸ್ಥೆಯು ಕಲಿಕಾಸಕ್ತರಿಗೆ ಒಂದು ಪ್ರಾಥಮಿಕ ಶಾಲೆ ಇದ್ದಂತೆ ಎಂಬುದು ಶ್ರೀಧರ್ ಡಿ. ಎಸ್.ರವರ ಅಭಿಪ್ರಾಯ. 

ಪ್ರಸಂಗಜ್ಞಾನ, ರಂಗನಡೆಗಳನ್ನು ಅಭ್ಯಸಿಸಿದ ಶ್ರೀಯುತರು ಪಿ.ಯು.ಸಿ.ಯಲ್ಲಿರುವಾಗಲೇ ಪ್ರಸಂಗ ರಚನೆಗೆ ತೊಡಗಿದವರು. ವೀರಚಿತ್ರಧ್ವಜ ಎಂಬ ಕಾಲ್ಪನಿಕ ಪ್ರಸಂಗವನ್ನು, ಕೆಳದಿ ಶಿವಪ್ಪ ನಾಯಕ, ಕೆಳದಿ ಚೆನ್ನಮ್ಮ ಮತ್ತು ಶ್ರೀರಂಗರಾಯಭಾರ ಎಂಬ ಐತಿಹಾಸಿಕ ಪ್ರಸಂಗಗಳನ್ನೂ ರಚಿಸಿದರು. ಆದರೆ ಇವುಗಳೆಲ್ಲಾ ಅನಿರೀಕ್ಷಿತವಾಗಿ ಇವರ ಕೈಯಿಂದ ನಷ್ಟವಾದುದು ಬೇಸರದ ವಿಚಾರವೇ ಹೌದು. ಪದವಿ ಓದುತ್ತಿರುವಾಗ ಶ್ರೀಧರ್ ಡಿ. ಎಸ್.ರ ಪದ್ಯ ರಚನೆಯ ತುಡಿತಕ್ಕೆ ನೀರೆರೆದು ಸಾರವಿತ್ತವರು ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯರು (ಕೊರ್ಗಿ ವೆಂಕಟೇಶ ಉಪಾಧ್ಯಾಯರ ತೀರ್ಥರೂಪರು.) ಇವರು ಖ್ಯಾತ ವಿದ್ವಾಂಸ, ಕವಿ, ಪುರೋಹಿತ, ಜೋತಿಷ್ಯರಾಗಿದ್ದರು. ಆದರೂ ಆರ್ಥಿಕವಾಗಿ ದುರ್ಬಲರಾಗಿದ್ದರು. ಇವರ ಪದ್ಯರಚನಾ ಕೌಶಲವು ಅದ್ಭುತ. ಅವರ ಸಲಹೆ ಸೂಚನೆಗಳಂತೆ ಶ್ರೀಧರ್ ಅವರು ಪ್ರಸಂಗ ರಚನಾ ಕಾರ್ಯದಲ್ಲಿ ತೊಡಗಿಸಿಕೊಂಡರು.

ಪಿ.ಯು.ಸಿ.ಯಲ್ಲಿರುವಾಗ ರುಕ್ಮಿಣೀ ಕಲ್ಯಾಣ ಪ್ರಸಂಗದಲ್ಲಿ ರುಕ್ಮಿಣಿಯಾಗಿ ರಂಗಪ್ರವೇಶ. ಪದವಿ ಓದುತ್ತಿರುವಾಗಲೂ, ಆಟಕೂಟಗಳಲ್ಲಿ ಭಾಗವಹಿಸುವಿಕೆ, ಪ್ರಸಂಗ ರಚನೆ ಹೀಗೆ ಕಲಾಸಂಬಂಧೀ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಪದವಿ ಶಿಕ್ಷಣ ಪೂರೈಸಿದ ಬಳಿಕ ಉಡುಪಿ ರಾಘವೇಂದ್ರ ಪುಸ್ತಕ ಭಂಡಾರದಲ್ಲಿ ಉದ್ಯೋಗಿಯಾಗಿದ್ದುಕೊಂಡು ಅಂಚೆ ತೆರಪಿನ ಶಿಕ್ಷಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದ ಶ್ರೀಧರ್ ಡಿ.ಎಸ್.ರು ಕೆಮ್ಮಣ್ಣು ಮತ್ತು ಕೋಟ ವಿದ್ಯಾಸಂಸ್ಥೆಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ದುಡಿದವರು. ಈ ಸಂದರ್ಭದಲ್ಲಿ ಯಕ್ಷಗಾನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಇವರೊಳಗೆ ಕವಿಯೊಬ್ಬ ಅವ್ಯಕ್ತವಾಗಿ ಕುಳಿತಿದ್ದ. ಆಸಕ್ತಿಯೂ ಇತ್ತು. ಹಾಗಾಗಿ ಪ್ರಸಂಗ ರಚನೆ ಮಾಡಬೇಕೆಂಬ ಹಂಬಲ ಉಂಟಾಯಿತು.

ಇವರಿಗೆ ಕಾಲೇಜಿನಲ್ಲಿ ಗುರುಗಳಾಗಿದ್ದವರು- ಉದ್ಯಾವರ ಮಾಧವ ಆಚಾರ್ಯ,  ಪ್ರೊ| ಎಂ. ರಾಜಗೋಪಾಲ ಆಚಾರ್ಯ, ರಾಮದಾಸ್ (ಕವಿ, ನಾಟಕಕಾರ). ಇವರ ಪ್ರೋತ್ಸಾಹ, ಸಹಕಾರವೂ ಸಿಕ್ಕಿತು. ಕರ್ನಾಟಕದಲ್ಲಿ ಉಡುಪಿಯು ಪ್ರತಿಭಾ ಬೆಳವಣಿಗೆಗೆ ಉತ್ತಮ ಸ್ಥಳ. ನನ್ನ ಬದುಕನ್ನೂ, ಜೀವನಕ್ಕೊಂದು ಸಾಂಸ್ಕೃತಿಕ ವಲಯವನ್ನೂ ನಿರ್ಮಿಸಿತು ಎಂದು ಶ್ರೀಧರ್ ಡಿ. ಎಸ್.ರು ಹೇಳುತ್ತಾರೆ. 1991ರಲ್ಲಿ ಕಿನ್ನಿಗೋಳಿ ಪೊಂಪೇ ಕಾಲೇಜಿಗೆ ಪೂರ್ಣಕಾಲಿಕ ಉಪನ್ಯಾಸಕನಾಗಿ ಸೇರ್ಪಡೆ. ಪರಿಸರದ ಜನರು ಯಕ್ಷಗಾನಾಸಕ್ತರು. ಸಮಾನಮನಸ್ಕರೆಲ್ಲಾ ತಾಳಮದ್ದಳೆ ಪ್ರದರ್ಶನಕ್ಕೆ ಸಂಘಟನೆಯೊಂದರ ಅವಶ್ಯಕತೆಯನ್ನು ಮನಗಂಡರು. ಗೋಪಾಲ ಶೆಟ್ರು, ರಾಧಾಕೃಷ್ಣ ಭಟ್ ಪೆರ್ಲ, ನಾರಾಯಣ ಹೆಗಡೆ ಮೊದಲಾದವರ ಜತೆ ಸೇರಿ ‘ಯಕ್ಷಲಹರಿ’ ಸಂಸ್ಥೆಯು ಚಿಗುರೊಡೆಯಲು ಕಾರಣರಾದರು.

ದಿ| ಇ. ಶ್ರೀನಿವಾಸ ಭಟ್ಟರು ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗಿ ಅನೇಕ ವರ್ಷಕಾಲ ಸದ್ರಿ ಹುದ್ದೆಯನ್ನು ನಿರ್ವಹಿಸಿದ್ದರು. ಯಕ್ಷಲಹರಿಯ ಯಶಸ್ವೀ ಕಾರ್ಯಕ್ರಮಗಳಿಗೆ ಶ್ರೀಧರ್ ಡಿ. ಎಸ್. ಅವರ ಪರಿಶ್ರಮವೂ ಕಾರಣವಾಗಿದೆ. 24 ವರ್ಷಗಳ ಕಾಲ ಈ ಸಂಸ್ಥೆಯ ಕಾರ್ಯದರ್ಶಿಯಾಗಿ ಪ್ರದರ್ಶನಗಳಲ್ಲಿ ಶಿಸ್ತಿಗೂ ಒಂದು ಆಕೃತಿಯನ್ನು ನಿರ್ಮಿಸುವಲ್ಲಿ ಶ್ರಮಿಸಿದ್ದಾರೆ. ಪ್ರಸಂಗಗಳನ್ನು ಜೋಡಿಸಿ ಕಥಾಸರಣಿ, ಸಪ್ತಾಹ, ಅಷ್ಟಾಹ, ದಶಾಹ, ಏಕಾದಶಾಹ ಅಲ್ಲದೆ ಯಕ್ಷಪಕ್ಷ ಕಾರ್ಯಕ್ರಮಗಳನ್ನೂ ಯಕ್ಷಲಹರಿ ಸಂಸ್ಥೆಯು ನಡೆಸಿದೆ.

ಶ್ರೀಧರ್ ಡಿ.ಎಸ್. ಅವರು ಬರೆದ ಪ್ರಸಂಗಗಳು ಒಟ್ಟು 34. 2011ರಲ್ಲಿ ಪ್ರಸಂಗಮಾಲಿಕಾ ಎಂಬ ಹೆಸರಲ್ಲಿ ಯಕ್ಷಗಾನ ಕೇಂದ್ರ ಉಡುಪಿ ಇವರಿಂದ ಲೋಕಾರ್ಪಣೆಗೊಂಡಿತು. ಇದು 13 ಪ್ರಸಂಗಗಳನ್ನೊಳಗೊಂಡಿದೆ. ಅಲ್ಲದೆ ಜಡಭರತ (ಪೌರಾಣಿಕ) ಎಂಬ ಕಾದಂಬರಿ ಶ್ರೀರಾಮಚಂದ್ರಾಪುರ ಮಠದಿಂದ ಪ್ರಕಟಣೆಯಾಗಿ ಧರ್ಮಭಾರತಿ ಪುಸ್ತಕದಲ್ಲಿ ಧಾರಾವಾಹಿಯಾಗಿ ಬಂದಿತ್ತು. ವೀರತಪಸ್ವಿ ಎಂಬ ಕಾದಂಬರಿಯು ಧರ್ಮಭಾರತೀ ಪುಸ್ತಕದಲ್ಲಿ ಧಾರಾವಾಹಿಯಾಗಿ ಪ್ರಸ್ತುತ ಪ್ರಕಟವಾಗುತ್ತಿದೆ. ಅಲ್ಲದೆ ಶ್ರೀಧರ್ ಡಿ. ಎಸ್. ಅವರು ಗೋವಿಪ್ರ (ಕಿರುಕಾದಂಬರಿ), ಅಸುರಗುರು (ಬೃಹತ್ ಕಾದಂಬರಿ) ಎಂಬ ಪುಸ್ತಕವನ್ನು ಬರೆದಿರುತ್ತಾರೆ. ಇವುಗಳನ್ನು ಖ್ಯಾತ ಪ್ರಕಾಶನ ಸಂಸ್ಥೆ- ಸಾಹಿತ್ಯ ಭಂಡಾರ ಬೆಂಗಳೂರು ಇವರು ಪ್ರಕಟಿಸುತ್ತಿದ್ದಾರೆ. ಶುಕ್ರಾಚಾರ್ಯ, ದ್ರೋಣಾಚಾರ್ಯ, ಮಹಾಮುನಿ ಶುಕ ಎಂಬ ಮೂವರ ಜೀವನ ಚಿತ್ರಗಳು ಶ್ರೀರಾಮಚಂದ್ರಾಪುರ ಮಠದ ಸಂಸ್ಥೆಯಾದ ಭಾರತೀ ಪ್ರಕಾಶನ- ಶ್ರೀರಾಮಾಶ್ರಮ ಬೆಂಗಳೂರು ಇವರು ಪ್ರಕಟಿಸಿದ್ದಾರೆ.

‘ಬಸ್ಸು ಜಟಕಾ ಬಂಡಿ’ ಎಂಬ ಹಾಸ್ಯ ಲೇಖನಗಳ ಸಂಕಲನವನ್ನು ಕಿನ್ನಿಗೋಳಿಯ ಯುಗಪುರುಷ ಸಂಸ್ಥೆಯು ಪ್ರಕಟಿಸಿದೆ. ಹೀಗೆ ಶ್ರೀಧರ್ ಡಿ. ಎಸ್.ರ 42 ಪುಸ್ತಕಗಳು ಪ್ರಕಟವಾಗಿವೆ. ಕಟೀಲು ತಾಳಮದ್ದಳೆ ಕಥಾಸರಣಿಗಾಗಿ ಪೃಥುಯಜ್ಞ, ನೈಮಿಷಾರಣ್ಯ ಎಂಬ ಎರಡು ಪ್ರಸಂಗಗಳನ್ನೂ ರಚಿಸಿ ಕೊಟ್ಟಿದ್ದರು. ಇವರು ರಚಿಸಿದ ಮಹಾಪ್ರಸ್ಥಾನ ಪ್ರಸಂಗದ ಒಂದು ಭಾಗ ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ಎರಡನೇ ವರ್ಷದ ಕನ್ನಡ ಪಠ್ಯವಾಗಿತ್ತು. ಹೀಗೆ ಶ್ರೀಧರ್ ಡಿ. ಎಸ್. ಅವರು ಯಕ್ಷಗಾನಕ್ಕೆ ಅನೇಕ ಕೊಡುಗೆಗಳನ್ನಿತ್ತವರು. 2016ರಲ್ಲಿ ಕೆರೆಮನೆಯಲ್ಲಿ ‘ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಕಾರ್ಯಕ್ರಮದಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ. ಅಲ್ಲದೆ ಅನೇಕ ತಾಳಮದ್ದಳೆ, ಕಮ್ಮಟಗಳಲ್ಲಿ ಅವಲೋಕನಕಾರರಾಗಿ ಭಾಗವಹಿಸಿದ ಹಿರಿಮೆ ಶ್ರೀಧರ್ ಡಿ. ಎಸ್. ಅವರದು. 

ಪೊಂಪೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೆಚ್ಚುಗೆಯ ಉಪನ್ಯಾಸಕನಾಗಿ ಸದ್ಯ ಕಿನ್ನಿಗೋಳಿಯಲ್ಲಿ ನಿವೃತ್ತ ಜೀವನವನ್ನು ನಡೆಸುತ್ತಾ ಜತೆಗೆ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಕಲಾವಿದನಾಗಿ, ಉಪನ್ಯಾಸಕನಾಗಿ, ಕಲಾಸಂಘಟಕನಾಗಿ, ಲೇಖಕನಾಗಿ, ಪ್ರಸಂಗಕರ್ತನಾಗಿ ಗುರುತಿಸಿಕೊಂಡು ಕೀರ್ತಿಯನ್ನು ಗಳಿಸಿದರು. ಇವರು ಬರೆದ ಪ್ರಸಂಗಗಳು ‘ಯಕ್ಷಗಾನ ಪ್ರಸಂಗ ಮಾಲಿಕಾ’ ಸಂಪುಟವಾಗಿ ಪ್ರಕಟಗೊಂಡಿದ್ದು, ಈ ಕೃತಿಗೆ 2011ನೇ ಸಾಲಿನ ಯಕ್ಷಗಾನ ಬಯಲಾಟ ಅಕಾಡಮಿಯಿಂದ ಶ್ರೇಷ್ಠ ಪುಸ್ತಕ ಪ್ರಶಸ್ತಿಯೂ ಬಂದಿತ್ತು. 2016ನೇ ಇಸವಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದರು. ಯಕ್ಷಗಾನ ಮತ್ತು ಇತರ ಪತ್ರಿಕೆಗಳಿಗೆ ಇವರು ಬರೆದ ಲೇಖನಗಳು ಸುಮಾರು 475ಕ್ಕೂ ಮಿಕ್ಕಿ. ಯಕ್ಷಗಾನ ಕವಿಗಳ ಬಗ್ಗೆ ಇವರು ಬರೆದ ಲೇಖನಗಳು 25. ನಾಟಕಗಳ ಬಗ್ಗೆ ಅಲ್ಲದೆ ಉದಯವಾಣಿ, ಹೊಸದಿಗಂತ, ತುಷಾರ ಮೊದಲಾದ ಪತ್ರಿಕೆಗಳಲ್ಲಿ ಇವರು ಬರೆದ ಲೇಖನಗಳು ಪ್ರಕಟವಾಗಿದೆ. ಶ್ರೀಧರ ಡಿ.ಎಸ್. ಅವರಿಗೆ  ಪ್ರತಿಷ್ಠಿತ ‘ಪಾರ್ತಿಸುಬ್ಬ ಪ್ರಶಸ್ತಿ’ಯು ಅರ್ಹವಾಗಿಯೇ ಸಂದಿದೆ. 

ಲೇಖಕ: ರವಿಶಂಕರ್ ವಳಕ್ಕುಂಜ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments