Saturday, January 18, 2025
Homeಯಕ್ಷಗಾನಮಹನೀಯರ ಮಹಾನುಡಿಗಳು(ಭಾಗ - 8) - ಶೇಣಿ ಗೋಪಾಲಕೃಷ್ಣ ಭಟ್ 

ಮಹನೀಯರ ಮಹಾನುಡಿಗಳು(ಭಾಗ – 8) – ಶೇಣಿ ಗೋಪಾಲಕೃಷ್ಣ ಭಟ್ 

(ಡಾ. ಶೇಣಿ ಗೋಪಾಲಕೃಷ್ಣ ಭಟ್ – ‘ಯಕ್ಷಗಾನ ಮತ್ತು ನಾನು’ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ – 1981)  

‘ಭೀಷ್ಮ ವಿಜಯ’ ಪ್ರಸಂಗದಲ್ಲಿ ಅಂಬೆಯ ಪಾತ್ರಧಾರಿಯು “ಕೇಳು ಭೀಷ್ಮಾಚಾರ್ಯ ಬಿನ್ನಪವ” ಎಂಬ ಪದ್ಯವನ್ನವಲಂಬಿಸಿ ಮೊದಲ ಹಂತದಲ್ಲೇ, ಮದುವೆಯ ಹಂದರಕ್ಕೆ ಬ್ರಹ್ಮಚರ್ಯ ನಿಷ್ಠೆಯುಳ್ಳ ಭೀಷ್ಮನ ಪ್ರವೇಶದ ಸಾಧುತ್ವವನ್ನೂ ರಾಕ್ಷಸ ವಿವಾಹ ಕ್ರಮವೆಂದಾದರೆ ತಮ್ಮನ ಬದಲಿಗೆ ಅಣ್ಣನು ಬರುವ ಧರ್ಮಪದ್ಧತಿಯನ್ನೂ ಅಕ್ಷೇಪಿಸಿ ಭೀಷ್ಮವಿಜಯ ಪ್ರಸಂಗದ ಸಮಗ್ರ ವಿಚಾರಮಂಥನಕ್ಕೆ ತೊಡಗಿದರೆ, ಭೀಷ್ಮನ ಪಾತ್ರಧಾರಿಯು ಅಲ್ಲೇ ಎಲ್ಲಕ್ಕೂ ಉತ್ತರಿಸಬೇಕೇ? ಬೇಡವೇ? ಎಂಬ ಜಿಜ್ನಾಸೆಯು ಒಂದೆರಡು ಸಲ ನನ್ನಲ್ಲಿ ಮೂಡಿದೆ. ಕೆಲವೊಮ್ಮೆ ಅಂಬೆಯ ಪಾತ್ರಧಾರಿಗಳಲ್ಲಿ ಈ ಕಾರಣದಿಂದ ವಿರಸವೂ ಉಂಟಾಗಿದೆ. ಏಕೆಂದರೆ ಅಂಬೆಯ ಪಾತ್ರದ ಚೌಕಟ್ಟಿನ ಹೊರಗಿನ ವಿಷಯಗಳಿವು.

ಆದುದರಿಂದಲೇ ಮುಂದೆ ಪರಶುರಾಮ, ಭೀಷ್ಮರ ವಾಗ್ವಾದದಲ್ಲಿ ಇತ್ಯರ್ಥವಾಗುವ ವಿಷಯಗಳಾಗಿ ಇವು ಪ್ರಸಂಗದಲ್ಲಿ ನಿರೂಪಿಸಲ್ಪಟ್ಟಿವೆಯೆಂಬುದು ನನ್ನ ಅಭಿಪ್ರಾಯ. ಹೀಗೆ ಪರಶುರಾಮ, ಭೀಷ್ಮರ ವಾದದಲ್ಲಿ ನಿರ್ಣಯಿಸಲ್ಪಡಬೇಕಾದ, ಭೀಷ್ಮನ ವ್ಯಕ್ತಿತ್ವವನ್ನು ಅಂಬೆಯೇ ಒರೆಗಲ್ಲಿಗೆ ಹಚ್ಚುವ ಪ್ರಯತ್ನಕ್ಕೆ ಅರ್ಥಧಾರಿಯು ಸಮರ್ಥನೆಂಬುದರಿಂದ ಮುಂದಾಗುವ ಸಾಹಸವು ಯಕ್ಷಗಾನದ ಸುಗಮ ಪಂಥವಾಗಲಾರದು; ಮಾತ್ರವಲ್ಲ ಆಗಲೂಬಾರದು.


ಮಾಯಾಮೃಗದ ಪ್ರಕರಣದಲ್ಲಿ ರಾಮನು, “ಸರಸಿಜಾಂಬಕಿ ನಿನ್ನ ಮರುಳು ಮಾಡಲು ಬಂದ ದುರುಳರ ಕಪಟ ಕಣೆ” ಎಂಬ ಪದ್ಯಕ್ಕೆ ಅರ್ಥವಿಸುವಾಗ, “ರಾಕ್ಷಸನ ಕೃತ್ರಿಮವಿದಾದರೆ ದುಷ್ಟದಮನ ನಿಮಗೆ ಕರ್ತವ್ಯವೆ ಅಗಿದೆಯಲ್ಲವೇ? ಹಾಗಿರುವಾಗ ನನ್ನ ಬಯಕೆಗಾಗಿ ಅಲ್ಲವೆಂದಾದರೂ, ಅದನ್ನು ಬೆನ್ನಟ್ಟಿ ಕೊಲ್ಲಲೇಬೇಕಾಗಿರುವ ನೀವು ಸುಮ್ಮನೆ ನನ್ನಲ್ಲಿ ಚರ್ಚಿಸುತ್ತಾ ಹೊತ್ತು ಕಳೆಯುವುದು ಸರಿಯೇ” ಎಂಬ ಪ್ರಸ್ತಾವನೆಯಿಂದ ಸೀತೆಯ ಅರ್ಥಧಾರಿ ರಾಮನನ್ನು ಅಕ್ಷೇಪಿಸಿ ಮಾತಾಡತೊಡಗಿದರೆ ಪ್ರಸಂಗದ ಗುರಿಯೇನಾದಿತೆಂಬ ವಿವೇಚನೆಯಿಲ್ಲದೆ ಅರ್ಥಧಾರಿಯೂ, ಇಂಥ ಮಾತುಗಳಿಗೆ ಚಪ್ಪಾಳೆ ತಟ್ಟುವ ಪ್ರೇಕ್ಷಕರೂ ಯಕ್ಷಗಾನ ಕ್ಷೇತ್ರದಲ್ಲಿ ಅಪಾಯಕಾರಿಗಳೆಂಬ ಮಾತು ಸ್ವಲ್ಪ ನಿಷ್ಠುರವಾದರೂ ಸತ್ಯವೆಂಬುದನ್ನು ವಿವೇಕಿಗಳು ಮರೆಯಬಾರದು”.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments