“ಆ ಕಿರೀಟಿಯು ನುಡಿದುದಂ ಕೇಳ್ದು ನಗುತ ಕರುಣಾಕರಂ ಪೇಳ್ದ” ಎಂದು ಕರ್ಣ ಪರ್ವದ ಈ ಪದ್ಯವನ್ನು ಪಿಕವ ನಾಚಿಸುವ ತೆರದಿ ಕಲ್ಯಾಣಿ, ಚಾರುಕೇಶಿ ರಾಗದಲ್ಲಿ ತನ್ನ ಕೋಗಿಲೆಯ ಕಂಠದಿಂದ ಹಾಡಿದರೆ ನಾವು ಎಷ್ಟೊಂದು ತಲ್ಲೀನತೆಯಿಂದ ಕೇಳುತ್ತೇವೆ. ತಮ್ಮ ಸುಮಧುರವಾದ ಗಾಯನದಿಂದ ಎಂತಹ ಕಲ್ಲು ಮನಸ್ಸಿನವರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಶಕ್ತಿ ಯಕ್ಷಗಾನಕ್ಕಿದೆ. ಅಂತಹ ಶೃತಿ, ಲಯ ಬದ್ದ ಪರಂಪರೆಯ ಹವ್ಯಾಸಿ ಭಾಗವತರಾಗಿ ಡಾ. ಸುಬ್ರಹ್ಮಣ್ಯ ಪದ್ಯಾಣರವರನ್ನು ಕಾಣಬಹುದು. ಪದ್ಯಾಣ ಕುಟುಂಬದಲ್ಲಿ ಇರುವವರು ಎಲ್ಲರೂ ಸಂಗೀತ, ಗಮಕ, ಭಜನೆ, ಯಕ್ಷಗಾನ ಮುಂತಾದ ಕಲಾ ಪ್ರಕಾರದಲ್ಲಿ ಇರುವುದು ಹೆಮ್ಮೆಯ ವಿಷಯವಾಗಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಹವ್ಯಕ ಬ್ರಾಹ್ಮಣ ಮನೆತನದ ಪದ್ಯಾಣ ತಿಮ್ಮಣ್ಣ ಭಟ್ ಮತ್ತು ತಾಯಿ ಈಶ್ವರಿಯವರ ಮೂರು ಜನ ಮಕ್ಕಳಲ್ಲಿ ಹಿರಿಯವರಾಗಿ 02-08-1971ರಲ್ಲಿ ಜನಿಸಿದರು. ಪ್ರಾಥಮಿಕ ವಿಧ್ಯಾಭಾಸವನ್ನು ಕನ್ಯಾನ, ಮಿತ್ತನಡ್ಕ ಶಾಲೆ, ಪ್ರೌಢ ಶಿಕ್ಷಣವನ್ನು ಮಂಗಳೂರು ರಾಮಕೃಷ್ಣ ಆಶ್ರಮದಲ್ಲಿದ್ದು ಅಲ್ಲಿ ಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ಕಾಸ್ಸಿಯಾ ಪ್ರೌಢ ಶಾಲೆಯಲ್ಲಿ ಕಲಿತು, ನಂತರ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಪೂರ್ವ ಹಾಗು ಬಿಎಸ್ಸಿ ಪದವಿಯನ್ನು ಪಡೆದರು. ಕೊಪ್ಪ ಆರೂರು ಲಕ್ಷ್ಮೀ ನಾರಾಯಣ ರಾವ್ ಮೆಮೋರಿಯಲ್ ಆಯುರ್ವೇದ ಕಾಲೇಜಿನಲ್ಲಿ ಬಿಎಯಂಯಸ್ ಪದವಿ, ಹೈದರಾಬಾದ್ ನ ಸರಕಾರಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಎನ್. ಟಿ. ಆರ್. ಆರೋಗ್ಯ ವಿಶ್ವ ವಿದ್ಯಾನಿಲಯದಿಂದ ಎಂ.ಡಿ. ಪದವಿಯನ್ನೂ, ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಲ್ಲಿ ಆಯುರ್ವೇದ ಕ್ಷೇತ್ರದಲ್ಲಿ ಪಿಎಚ್ ಡಿ ( ಡಾಕ್ಟರೇಟ್) ಪದವಿಯನ್ನು ಪಡೆದವರಲ್ಲಿ ಮೊದಲಿಗರು ಎಂಬ ಖ್ಯಾತಿಯನ್ನು ಪಡೆದಿದ್ದಾರೆ.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
2001ರಿಂದ ಮೂಡಬಿದರೆಯ ಅಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ದ್ರವ್ಯಗುಣ ವಿಭಾಗದಲ್ಲಿ ಉಪನ್ಯಾಸ ವೃತ್ತಿಯನ್ನು ಮಾಡುತ್ತಿದ್ದರು. ಪ್ರಸ್ತುತ ಅದೇ ಕಾಲೇಜಿನ ರಿಸರ್ಚ್ ಸೆಂಟರಿನ ನಿರ್ದೇಶಕರಾಗಿ, ದ್ರವ್ಯಗುಣ ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯವಾಗಿ ಔಷಧೀಯ ಸಸ್ಯಗಳ ಆಳವಾದ ಅಧ್ಯಯನ, ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಅನುಭವ ದಾಖಲೀಕರಣ, ಸಂಶೋಧನೆ ಅಲ್ಲದೇ, ಮೂಡಬಿದಿರೆಯ ಅಭಿರಾಮ ಆಯುರ್ವೇದ ಕ್ಲಿನಿಕ್ ನಲ್ಲಿ ವಿವಿಧ ವ್ಯಾಧಿಗಳಿಗೆ ಶುದ್ಧ ಆಯುರ್ವೇದ ಚಿಕಿತ್ಸೆಯನ್ನೂ ನೀಡುತ್ತಾ ಜನಾನುರಾಗಿಯಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ.
ಶ್ರೀಯುತರು ಎಳವೆಯಲ್ಲೇ ಪದ್ಯಾಣ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ತನ್ನ ತಂದೆ, ಚಿಕ್ಕಪ್ಪಂದಿರಿಂದ ಸಂಗೀತ ಕೇಳಿ ಅನುಭವಿಸಿ ವಿವಿಧ ರಾಗಗಳನ್ನು ಸಿದ್ಧಿಸಿ ಯಕ್ಷಗಾನದಲ್ಲಿ ಪ್ರಾಯೋಗಿಕವಾಗಿ ಯಶಸ್ಸನ್ನು ಕಂಡರು. ಇವರು ಮಾಂಬಾಡಿ ನಾರಾಯಣ ಭಾಗವತರಿಂದ ಯಕ್ಷಗಾನ ಭಾಗವತಿಕೆಯ ಮೊದಲ ಪಾಠವನ್ನು ಆರಂಭಿಸಿ ಮುಂದೆ ಅವರ ಮಗ ಮಾಂಬಾಡಿ ಸುಬ್ರಹ್ಮಣ್ಯ ಭಟ್ ರವರಿಂದ ಯಕ್ಷಗಾನ ಭಾಗವತಿಕೆಯನ್ನು ಕಲಿತರು.

ತೆಂಕುತಿಟ್ಟಿನ ಹೆಜ್ಜೆಯನ್ನು ಸಹ ಕಲಿತು, ತನ್ನ ಮೊದಲ ಯಕ್ಷಗಾನ ವೇಷವನ್ನು ತಾನು ಬಾಲಕನಾಗಿದ್ದಾಗ ಮಿತ್ತನಡ್ಕ ಶಾಲೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಕರಾಕ್ಷ ಕಾಳಗದ “ದುರ ದುರಂಧರನೆ ಕೇಳು” ಎಂದು ದೊಡ್ಡಪ್ಪ ರಾವಣೇಶ್ವರನಲ್ಲಿ ಪ್ರತಿಜ್ಞಾ ಬದ್ಧನಾಗಿ ಯುದ್ಧಕ್ಕೆ ಹೋಗುವ ಕಲಿ ಮಕರಾಕ್ಷನ ಪಾತ್ರದಲ್ಲಿ ರಂಗಸ್ಥಳ ಪ್ರವೇಶ ಮಾಡಿ ಪ್ರಥಮ ಪ್ರದರ್ಶನದಲ್ಲೇ ತನ್ನ ಸಾಮರ್ಥ್ಯದ ಅನಾವರಣ ಮಾಡಿದರು. ಮುಂದೆ ಕಾಲೇಜು ಜೀವನ ಹಾಗೂ ನಂತರದಲ್ಲಿ ದೇವೇಂದ್ರ, ಮುರಾಸುರ, ಅರ್ಜುನ ಮುಂತಾದ ಕಿರೀಟ ವೇಷಗಳನ್ನು ಮಾಡಿ ವಿಜೃಂಭಿಸಿದರು.
ಪ್ರಸಿದ್ಧ ಗಮಕಿಗಳಾದ ಚಿಕ್ಕಪ್ಪ ಗಣಪತಿ ಪದ್ಯಾಣ ಹಾಗೂ ಮಧೂರು ಮೋಹನ ಕಲ್ಲೂರಾಯರಿಂದ ಗಮಕ ಅಭ್ಯಸಿಸಿ ಕರ್ನಾಟಕ ಗಮಕ ಕಲಾ ಪರಿಷತ್ ನಡೆಸುವ ಗಮಕ ಪಾರೀಣ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಮಂಗಳೂರು ಆಕಾಶವಾಣಿಯಲ್ಲಿ ಗಮಕ ಕಲಾವಿದರಾಗಿ ಕಾರ್ಯಕ್ರಮ ನೀಡುತ್ತಾ ಸರ್ವಮಾನ್ಯರಾಗಿದ್ದಾರೆ. ಪದ್ಯಾಣ ಶಂಕರನಾರಾಯಣ ಭಟ್, ಪದ್ಯಾಣ ಗಣಪತಿ ಭಟ್, ಬಲಿಪ ನಾರಾಯಣ ಭಾಗವತರು, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಕುರಿಯ ಗಣಪತಿ ಶಾಸ್ತ್ರಿಗಳು ಹಾಗೂ ಪದ್ಯಾಣ ಕುಟುಂಬದವರ ಸಮಗ್ರ ಪ್ರೋತ್ಸಾಹ, ಮಾರ್ಗದರ್ಶನದಿಂದ ಯಕ್ಷಗಾನ ಭಾಗವತರಾಗಿ ರೂಪಗೊಂಡರು.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
ಶ್ರೀಯುತರು ನಾಟಿ, ಕಾಂಬೋಧಿ, ಹಿಂದೋಳ, ಮದುವಂತಿ, ಆರಭಿ, ಮಧ್ಯಮಾವತಿ, ಅಠಾಣ, ಕೇದಾರಗೌಳ, ಶಂಕರಾಭರಣ ಸಿಂಧೂ ಭೈರವಿ, ಭೈರವಿ, ಆನಂದ ಭೈರವಿ, ಹಂಸಧ್ವನಿ, ಕಲ್ಯಾಣಿ, ಮೋಹನ, ಶುದ್ಧ ಸಾವೇರಿ, ಸಾರಂಗ, ಶುಭ ಪಂತುವರಾಳಿ, ಸಿಂಹೇಂದ್ರ ಮಧ್ಯಮ, ಖರಹರ ಪ್ರಿಯ, ವೃಂದಾವನ ಸಾರಂಗ, ಯಮನ್ ಕಲ್ಯಾಣಿ, ರೇವತಿ, ಚಾರುಕೇಶಿ, ಶಿವರಂಜಿನಿ, ರೇವತಿ, ಸಾರಮತಿ, ಕಲ್ಯಾಣ ವಸಂತ, ದೇಶ್, ತೋಡಿ, ಕಾನಡ, ದೇವಗಾಂಧಾರ, ಬೇಗಡೆ, ಬೇಹಾಗ್ ಮುಂತಾದ ನೂರಕ್ಕೂ ಹೆಚ್ಚು ರಾಗಗಳ ಜ್ಞಾನವನ್ನು ಹೊಂದಿದ್ದು ನವರಸಗಳಲ್ಲಿ ಸಂದರ್ಭಾನುಸಾರ ಹಾಡುವುದರಲ್ಲಿ ನಿಷ್ಣಾತರು. ಶ್ರೀಯುತರು “ಸತ್ಯ ಹರಿಶ್ಚಂದ್ರ” ಪ್ರಸಂಗದಲ್ಲಿ “ಎಂದು ಪೇಳುತ ಭೂಪನಂದು ತಾನಾಳ್ವ ಸುಂಧರೆ ದ್ರವ್ಯಗಳ|” ಎಂದು ಕೇಧಾರಗೌಳ ರಾಗದ ಮಟ್ಟಿನಲ್ಲಿ ಅಷ್ಟತಾಳದಲ್ಲಿ ಹಾಡಿದರೆ ಪ್ರೇಕ್ಷಕರು ಮಂತ್ರ ಮುಗ್ದರಾಗುತ್ತಾರೆ.
ಅಲ್ಲದೆ ಶನೀಶ್ವರ ಮಹಾತ್ಮೆಯ ಪ್ರಸಂಗದ “ಏನಿದು ಶನಿರಾಯ ನಿನ್ನನು ಕಾಣೆನು ಮಹನೀಯ” ಎಂದು ಸುರುಟಿ ರಾಗದ ಮಟ್ಟಿನಲ್ಲಿ ಏಕತಾಳದಲ್ಲಿ ಹಾಡಿದರೆ ಕರ್ಣಾನಂದಕರವಾಗಿರುತ್ತದೆ. ಶ್ರೀರಾಮ ನಿರ್ಯಾಣ ಪ್ರಸಂಗದ “ಜನಪ ಕುಲಮಣಿ ರಾಮಚಂದ್ರನು” ಇತ್ಯಾದಿಯಾಗಿ ಒಂದೇ ಪದ್ಯವನ್ನು ಸೌರಾಷ್ಟ್ರ, ನಾಟಿ ಅಥವಾ ಕಲ್ಯಾಣಿ ಆದಿ ವಿವಿಧ ರಾಗಗಳಲ್ಲಿ ಭಾವ, ರಸಗಳಿಗೆ ಚ್ಯುತಿ ಬರದಂತೆ ಹಾಡಿ ತೋರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಹಾಡುಗಾರಿಕೆಯಲ್ಲಿ ಯಾರದೇ ಅನುಕರಣೆಯಿಲ್ಲದೆ ಮಾಂಬಾಡಿ ಮಟ್ಟು, ಪದ್ಯಾಣ ಗಣಪತಿ ಭಟ್ಟರ ಛಾಯೆಯಿದ್ದರೂ ರಾಗ ಸಂಯೋಜನೆ, ಹಾಡಿನಲ್ಲಿ ತನ್ನದೇ ಆದ ಸ್ವಂತಿಕೆಯನ್ನೂ ಬಿಂಬಿಸುತ್ತಾರೆ. ಅದಕ್ಕಾಗಿ ಇವರು ವಿಶೇಷವೆನಿಸಿದ್ದಾರೆ. ಶ್ರೀಯುತರಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಡಾ. ಮೋಹನ್ ಆಳ್ವರ ಪ್ರೋತ್ಸಾಹ, ಹಾಗಯೇ ಮೂಡಬಿದರೆಯಲ್ಲಿ ಯಕ್ಷೋಪಾಸನಮ್ ಸಂಘದ ಕಲಾವಿದರು, ಎಂ. ಶಾಂತಾರಾಮ ಕುಡ್ವರು, ದೇವಾನಂದ ಭಟ್ ಮುಂತಾದವರ ಒಡನಾಟ ಮತ್ತು ಪ್ರಭಾಕರ ಜೋಷಿ, ಸುಣ್ಣಂಬಳ ವಿಶ್ವೇಶ್ವರ ಭಟ್, ವಿಟ್ಲ ಶಂಭು ಶರ್ಮ, ಉಜಿರೆ ಅಶೋಕ ಭಟ್, ವಾಸುದೇವ ರಂಗ ಭಟ್, ಸುಬ್ರಾಯ ಹೊಳ್ಳ, ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್, ಎಂ. ವಾಸುದೇವ ಸಾಮಗರು ಮುಂತಾದವರೊಂದಿಗೆ ಆಟ-ಕೂಟಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡರು ಅಲ್ಲದೇ ಅವರೆಲ್ಲರೂ ಶ್ರೀಯುತರ ಭಾಗವತಿಕೆಗೆ ಸ್ಪೂರ್ತಿಯಾದರು.
ಯಕ್ಷಗಾನವನ್ನು ಪ್ರವೃತ್ತಿಯಾಗಿ ತೆಗೆದುಕೊಂಡು ವಾರದಲ್ಲಿ ಎರಡು ದಿನ ಕಲೆಗೆ ಮೀಸಲಿಟ್ಟಿದ್ದೇನೆ ಎಂದು ಡಾ. ಪದ್ಯಾಣರು ಸಂತೋಷದಿಂದ ಹೇಳುತ್ತಿದ್ದರು. ಇವರ ಪ್ರತಿಭೆಯನ್ನು ಗುರುತಿಸಿ ಅಲ್ಲಲ್ಲಿ ಸಂಘ ಸಂಸ್ಥೆಗಳು ಸನ್ಮಾನ, ಗೌರವಗಳು ಅರಸಿ ಬಂದಿದೆ. ಹೊಸನಗರದ ರಾಘವೇಶ್ವರ ಶ್ರೀಗಳು ಹಾಗು ಒಡಿಯೂರಿನ ಶ್ರೀ ಗುರು ದೇವಾನಂದ ಸ್ವಾಮಿಗಳಿಂದ, ಮತ್ತು ಅಖಿಲ ಹವ್ಯಕ ಸಭಾ ಮುಂತಾದವರಿಂದ ಆಶೀರ್ವಾದ ಪೂರ್ವಕ ಸನ್ಮಾನ ಗಳು ನಡೆದಿವೆ. ಡಾ. ಸೌಮ್ಯ ಸರಸ್ವತಿ ಅವರನ್ನು ಪಾಣಿಗ್ರಹಣ ಮಾಡಿ ಕುಲದೀಪಕರಾದ ಪ್ರಣವ ಭಟ್ ಹಾಗು ಆತ್ರೇಯ ಭಟ್ ರೊಂದಿಗೆ ಮೂಡಬಿದರೆಯಲ್ಲಿ ಸುಖಿ ಜೀವನ ನಡೆಸುತ್ತಿದ್ದಾರೆ.
ಡಾ. ಪದ್ಯಾಣರ ಸಂಪರ್ಕ ದೂರವಾಣಿ ಸಂಖ್ಯೆ – 9448327156

