ತೆಂಕುತಿಟ್ಟು ಯಕ್ಷಗಾನದಲ್ಲಿ ‘ಬಣ್ಣದ ವೇಷ’ ಎಂಬುದು ಒಂದು ಪ್ರಮುಖವಾದ ವಿಭಾಗವು. ಹಿರಿಯ ತಲೆಮಾರಿನ ಅನೇಕ ಕಲಾವಿದರು ಬಣ್ಣದ ವೇಷಧಾರಿಗಳಾಗಿ ರಂಗದಲ್ಲಿ ವಿಜೃಂಭಿಸಿ ಈ ವಿಭಾಗವನ್ನು ಬಲಿಷ್ಠಗೊಳಿಸಿ ಅಲೌಕಿಕ ಪ್ರಪಂಚವನ್ನು ಸೇರಿಕೊಂಡಿರುತ್ತಾರೆ.
ವಿದ್ವಾಂಸರೂ ಹಿರಿಯ ಕಲಾವಿದರೂ ಬರೆದ ಪುಸ್ತಕಗಳಿಂದಷ್ಟೇ ನಮಗೆ ಅಂತಹಾ ಕಲಾವಿದರ ವಿಚಾರಗಳನ್ನು ತಿಳಿಯಬಹುದು. ಕೋಲುಳಿ ಸುಬ್ಬ, ಬಣ್ಣದ ಕುಂಞ, ಒತ್ತೆಕಿವಿ ಸುಬ್ಬ, ಬಣ್ಣದ ನರಸಪ್ಪಯ್ಯ, ಅಯ್ಯಪ್ಪ ಕುಂಞಣ್ಣ ಅಡ್ಯಂತಾಯ, ಹಂದಿ ತಿಮ್ಮಪ್ಪು ಮೊದಲಾದ ಅನೇಕ ಬಣ್ಣದ ವೇಷಧಾರಿಗಳು ಬಹಳ ಹಿಂದಿನವರು.
ಕಲಾವಿದರಾಗಿದ್ದ ಅಳಿಕೆ ರಾಮಯ್ಯ ರೈ ಅವರು ತಮ್ಮ ಆತ್ಮಕಥನದಲ್ಲಿ ಕೋಲುಳಿ ಸುಬ್ಬನವರ ಬಗ್ಗೆ ಈ ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. “ಬಣ್ಣದ ವೇಷದ ಸುಬ್ಬ ಕೋಲುಳಿ ಸುಬ್ಬನೆಂದೇ ಪ್ರಖ್ಯಾತ. ಇವನದು ಈಡು ಜೋಡಿಲ್ಲದ ಬಣ್ಣದ ವೇಷಗಾರಿಕೆ. ಅಪ್ರತಿಮ ವಾಗ್ವಾದ ನಿಪುಣ. ಇವನ ಮುಖದ ಚಿಟ್ಟಿ, ಬಣ್ಣದ ವೇಷದ ಅಟ್ಟಹಾಸಕ್ಕೆ ಹೆದರಿ ಮೂರ್ಛೆ ಹೋದವರೂ ಲೆಕ್ಕವಿಲ್ಲದಷ್ಟು ಮಂದಿ. ಕೆಲವೆಡೆಗಳಲ್ಲಿ ಮಕ್ಕಳೂ, ಹೆಂಗಸರೂ ಹೆದರಿಕೊಳ್ಳದಂತೆ ಸುಬ್ಬನ ವೇಷ ಬರುವುದೆಂದು ಮುನ್ನಚ್ಚರಿಕೆ ಕೊಡುವ ಸಂಪ್ರದಾಯವಿತ್ತು. ನನ್ನ ಜೀವಮಾನದಲ್ಲಿ ಇಂತಹಾ ಮನಸ್ಸಿನಿಂದ ಮಾಯದ ಬಣ್ಣದ ವೇಷವನ್ನು ನೋಡಿಲ್ಲವೆಂದು ಪ್ರಾಂಜಲವಾಗಿ ಹೇಳುವೆ”.
ಬಣ್ಣದ ವೇಷಗಳಲ್ಲಿ ಹಿಂದಿನ ಹಿಂದಿನ ತಲೆಮಾರಿನ ಕಲಾವಿದರು ಸಾಧಕರಾಗಿ ಮೆರೆದಿದ್ದರು ಎಂಬುದಕ್ಕೆ ಅಳಿಕೆ ರಾಮಯ್ಯ ರೈಗಳ ಈ ಮಾತುಗಳೇ ಸಾಕ್ಷಿ. ಅವರ ಮುಂದಿನ ತಲೆಮಾರಿನ ಅನೇಕ ಕಲಾವಿದರೂ ಬಣ್ಣದ ವೇಷಧಾರಿಗಳಾಗಿ ಮೆರೆದು ಖ್ಯಾತರಾದರು. ಅಂತಹವರಲ್ಲಿ ಶ್ರೀ ಬಣ್ಣದ ಮಹಾಲಿಂಗನವರೂ ಪ್ರಮುಖರು. ಪ್ರಸಿದ್ಧ ಬಣ್ಣದ ವೇಷಧಾರಿಯಾಗಿ ಮೆರೆದ ಬಣ್ಣದ ಮಾಲಿಂಗ ಅವರು ಕಾಸರಗೋಡು ತಾಲೂಕಿನ ಆದೂರು ಗ್ರಾಮದ ಚೆನ್ನಂಗೊಡು ಎಂಬಲ್ಲಿ ಶ್ರೀ ಮಾಲಿಂಗ ಪಾಟಾಳಿ ಮತ್ತು ಶ್ರೀಮತಿ ಸುಬ್ಬಮ್ಮ ದಂಪತಿಗಳ ಮಗನಾಗಿ 1913ರಲ್ಲಿ ಜನಿಸಿದರು.
ಬಾಲ್ಯದಲ್ಲಿ ಬಡತನವಿತ್ತು. ಓದಿದ್ದು ಕೇವಲ ಒಂದನೇ ತರಗತಿ ವರೆಗೆ ಮಾತ್ರ. ಯಕ್ಷಗಾನವು ಹಿರಿಯರಿಂದ ರಕ್ತಗತವಾಗಿ, ಬಳುವಳಿಯಾಗಿ ಬಂದಿತ್ತು. ಅಜ್ಜ ಚಲ್ಯ ಶಂಕರರು ಯಕ್ಷಗಾನ ಭಾಗವತರಾಗಿದ್ದರು. ಮೇಲೆ ತಿಳಿಸಿದ ಮಹಾನ್ ಬಣ್ಣದ ವೇಷಧಾರಿ ಕೋಲುಳಿ ಸುಬ್ಬ ಇವರ ಮಾವ. ಅಲ್ಲದೆ ಆ ಕಾಲದಲ್ಲಿ ಗಾಣಿಗ ಸಮಾಜದ ಅನೇಕ ಕಲಾವಿದರು ಯಕ್ಷಗಾನ ಬಣ್ಣದ ವಿಭಾಗದಲ್ಲಿ ಮೆರೆದವರೇ ಆಗಿದ್ದರು. ಬಣ್ಣದ ಕುಂಞ, ಒತ್ತೆಕಿವಿ ಸುಬ್ಬ, ದೊಡ್ಡ ತಿಮ್ಮಪ್ಪ ಇವರೆಲ್ಲಾ ಮಾಲಿಂಗ ಅವರ ಬಂಧುಗಳೇ ಆಗಿದ್ದರು. ಹಾಗಾಗಿ ಬಾಲ್ಯದಲ್ಲಿಯೇ ಯಕ್ಷಗಾನಾಸಕ್ತಿಯು ಮೊಳೆತು ಬೆಳೆದಿತ್ತು. ಕಲಿತು ಮೇಲಕ್ಕೆ ಹೋದುದಲ್ಲ. ಮೇಳಕ್ಕೆ ಹೋಗಿ ಕಲಿತವರು.
ತನ್ನ 9ನೇ ವಯಸ್ಸಿನಲ್ಲಿ ಕೊರಕ್ಕೋಡು ಮೇಳಕ್ಕೆ ಸೇರ್ಪಡೆ. ಸಣ್ಣ ಪುಟ್ಟ ಕೆಲಸಗಳನ್ನೂ, ಹಿರಿಯ ಕಲಾವಿದರ ಸೇವೆಯನ್ನೂ ಮಾಡುತ್ತಾ ಯಕ್ಷಗಾನವನ್ನು ಕಲಿತರು. ಮೇಳದ ಬದುಕಿಗೆ ಹೊಂದಿಕೊಂಡರು. ಕೋಡಂಗಿಯಿಂದ ತೊಡಗಿ, ಬಾಲಗೋಪಾಲ ಹೀಗೆ ಪೂರ್ವರಂಗದ ಎಲ್ಲಾ ವೇಷಗಳನ್ನೂ ಮಾಡುತ್ತಿದ್ದರು. ಮಂಜಪ್ಪ ಹಾಸ್ಯಗಾರರಿಂದ ನಾಟ್ಯಾಭ್ಯಾಸ. ಅಲ್ಲದೆ ಕಾಸರಗೋಡು ಸುಬ್ಬಯ್ಯ ಶೆಟ್ಟರಿಂದಲೂ ಕಲಿತಿದ್ದರಂತೆ. ತನ್ನ ವೇಷವಾದ ಮೇಲೆ ನಿದ್ರಿಸದೆ ಬೆಳಗಿನ ವರೆಗೂ ಆಟ ನೋಡುತ್ತಾ ಕಲಿತರು. ಸ್ತ್ರೀ ಪಾತ್ರಗಳನ್ನೂ ತಿರುಗಾಟದಲ್ಲಿ ನಿರ್ವಹಿಸಿದ್ದರು.
ಎಲ್ಲಾ ಬಣ್ಣಕ್ಕೆ ಸಂಬಂಧಿಸಿದ ಎಲ್ಲಾ ವೇಷಗಳ ಮುಖವರ್ಣಿಕೆ ಬಗೆಗೆ ಅಪಾರವಾದ ಜ್ಞಾನವನ್ನು ಹೊಂದಿದ್ದರು. ಕೊರೊಕ್ಕೋಡು ಮೇಳದಲ್ಲಿ ಎರಡು ತಿರುಗಾಟ. ಬಳಿಕ ಕೂಡ್ಲು ಮೇಳದಲ್ಲಿ ಐದು ತಿರುಗಾಟ. ಭಾಗವತರಾದ ಪುತ್ತಿಗೆ ರಾಮಕೃಷ್ಣ ಜೋಯಿಸರ ನಿರ್ದೇಶನ, ಪ್ರೋತ್ಸಾಹ. ಒಂದನೇ ಬಣ್ಣದ ವೇಷಧಾರಿ ಸುಬ್ಬಯ್ಯ ಶೆಟ್ಟರಿಂದ ಕಲಿಕೆ. ಮೂರನೇ ಬಣ್ಣದ ವೇಷಧಾರಿಯಾಗಿ ತಿರುಗಾಟ ಆರಂಭಿಸಿ ಎರಡನೇ ಬಣ್ಣದ ವೇಷಧಾರಿಯಾಗಿ ಭಡ್ತಿ ಹೊಂದಿದ್ದರು.
ಮತ್ತೆ ಮುಲ್ಕಿ, ಕದ್ರಿ ಧರ್ಮಸ್ಥಳ, ಸುರತ್ಕಲ್, ನಿಟ್ಟೆ, ವೇಣೂರು ಮೇಳಗಳಲ್ಲಿ ವ್ಯವಸಾಯ. ಬಳಿಕ ಕಟೀಲು ಮೇಳದಲ್ಲಿ ಕೊನೆವರೆಗೂ ತಿರುಗಾಟ ನಡೆಸಿದ್ದರು. ತನ್ನ ಸುದೀರ್ಘ ಕಲಾ ಬದುಕಿನಲ್ಲಿ ಅಪಾರ ಅನುಭವಗಳನ್ನು ಗಳಿಸಿ, ಯಕ್ಷಗಾನ ಬಣ್ಣದ ವೇಷಗಳ ಬಗೆಗೆ ಓರ್ವ ಸಮರ್ಥ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಬಣ್ಣದ ವೇಷಗಳಿಗೆ ಬೇಕಾದ ಆಳಂಗವನ್ನು ಹೊಂದಿದ ಶ್ರೀ ಮಾಲಿಂಗ ಅವರ ಅಟ್ಟಹಾಸ, ತೆರೆಕ್ಲಾಸ್, ಒಡ್ಡೋಲಗ ವೈಭವ, ನಡೆ ಎಲ್ಲವೂ ಅಚ್ಚುಕಟ್ಟು ಮತ್ತು ಶಿಸ್ತಿನಿಂದ ಕೂಡಿರುತ್ತಿದ್ದುವು. ಬಣ್ಣಕ್ಕೆ ಸಂಬಂಧಿಸಿದ ಎಲ್ಲಾ ವೇಷಗಳಲ್ಲೂ ಮಾಲಿಂಗನವರು ಹೆಸರನ್ನು ಗಳಿಸಿದ್ದಾರೆ.
ಮಹಿಷಾಸುರ, ರುದ್ರ ಭೀಮ, ವೀರಭದ್ರ, ಪುರುಷಾಮೃಗ, ಕುಂಭಕರ್ಣ, ನರಕಾಸುರ, ಬಾಣಾಸುರ, ಮೈರಾವಣ, ಹಿಡಿಂಬ, ಶೂರ್ಪನಖಿ, ಪೂತನಿ ಮೊದಲಾದ ವೇಷಗಳು ಪ್ರಸಿದ್ಧಿಯನ್ನು ನೀಡಿದ್ದುವು. ಕುರಿಯ ವಿಠಲ ಶಾಸ್ತ್ರಿಗಳ ಈಶ್ವರನಿಗೆ ವೀರಭದ್ರ, ಶೇಣಿಯವರ ರಾವಣನಿಗೆ ಕುಂಭಕರ್ಣನಾಗಿ ಇವರ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಪಾತ್ರೋಚಿತವಾದ ಮಾತುಗಾರಿಕೆಯಲ್ಲಿ ಬಣ್ಣದ ಮಹಾಲಿಂಗನವರು ಪಳಗಿದ ಕಲಾವಿದ. ಶಶಿಪ್ರಭಾ ಪರಿಣಯ ಪ್ರಸಂಗದ ಘೋರರೂಪಿಯ ವೇಷವೂ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಬಣ್ಣದ ವೇಷಧಾರಿಗಳೇ ನಿರ್ವಹಿಸುವ ಕಿರಾತ, ವೀರವರ್ಮ ಮೊದಲಾದ ವೇಷಗಳನ್ನೂ ಮಾಲಿಂಗನವರು ಅತ್ಯುತ್ತಮವಾಗಿ ಚಿತ್ರಿಸುತ್ತಿದ್ದರು.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
ಶ್ರೀಯುತರ ಹೆಸರಿನಲ್ಲಿ ‘ಬಣ್ಣದ ಮಹಾಲಿಂಗ ಪ್ರತಿಷ್ಠಾನ’ ಪುತ್ತೂರು ಎಂಬ ಸಂಸ್ಥೆಯು ಕಾರ್ಯಾಚರಿಸುತ್ತಿದ್ದು ಯಕ್ಷಗಾನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ವರ್ಷವೂ ಸಾಧಕರಿಗೆ ಬಣ್ಣದ ಮಹಾಲಿಂಗ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದ್ದಾರೆ. ಈ ಪ್ರಶಸ್ತಿಯನ್ನು ಮೊತ್ತ ಮೊದಲು ಪಡೆದವರು ಬಣ್ಣದ ಮಾಲಿಂಗ ಅವರ ಶಿಷ್ಯರೇ ಆದ ಸಿದ್ದಕಟ್ಟೆ ಶ್ರೀ ಸದಾಶಿವ ಶೆಟ್ಟಿಗಾರ್ ಅವರು. ಬಣ್ಣದ ಮಾಲಿಂಗ ಅವರ ಪುತ್ರ ಶ್ರೀ ಬಣ್ಣದ ಸುಬ್ರಾಯ ಅವರು ತೆಂಕುತಿಟ್ಟಿನ ಅನುಭವೀ ಬಣ್ಣದ ವೇಷಧಾರಿ. ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿರುವುದು ಸಂತೋಷದ ವಿಚಾರ.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು