Thursday, November 21, 2024
Homeಯಕ್ಷಗಾನಸರ್ಪಂಗಳ ಪ್ರಶಸ್ತಿ ವಿಜೇತ ಕಲಾವಿದ - ಶ್ರೀ ಸಂಜೀವ ಬಳೆಗಾರ, ಶಂಕರನಾರಾಯಣ 

ಸರ್ಪಂಗಳ ಪ್ರಶಸ್ತಿ ವಿಜೇತ ಕಲಾವಿದ – ಶ್ರೀ ಸಂಜೀವ ಬಳೆಗಾರ, ಶಂಕರನಾರಾಯಣ 

ಮೊದಲೆಲ್ಲಾ ಯಕ್ಷಗಾನ ಪ್ರದರ್ಶನಗಳು ಕಾಸರಗೋಡು, ದ.ಕ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ನಡೆಯುತ್ತಿತ್ತು. ಈಗ ಹಾಗಲ್ಲ. ದೇಶ-ವಿದೇಶಗಳಲ್ಲಿರುವ ಜನರು ಈ ಗಂಡು ಕಲೆಯತ್ತ ಆಕರ್ಷಿತರಾಗಿದ್ದಾರೆ. ಮಾತ್ರವಲ್ಲ, ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದಾರೆ. ನಮ್ಮ ಹೆಮ್ಮೆಯ ಕಲೆಯಾದ ಯಕ್ಷಗಾನ ಪ್ರದರ್ಶನಗಳ ವ್ಯಾಪ್ತಿ ವಿಸ್ತರಣೆಯಾದುದು ಅಭಿಮಾನ ಪಡಬೇಕಾದ ವಿಚಾರ.

ಸಂಘಟಕರು ಪ್ರದರ್ಶನಗಳನ್ನು ಏರ್ಪಡಿಸುವುದರ ಜತೆಗೆ ಹಿರಿಯ, ಅರ್ಹ ಕಲಾವಿದರುಗಳನ್ನು ಗುರುತಿಸಿ ಗೌರವಿಸುವ ಸತ್ಕಾರ್ಯವನ್ನು ಮಾಡುತ್ತಿದ್ದಾರೆ. ಹೊರರಾಜ್ಯಗಳಲ್ಲೂ ವಿದೇಶಗಳಲ್ಲೂ ಈ ಪ್ರಕ್ರಿಯೆಯು ನಡೆಯುತ್ತಾ ಇರುವುದನ್ನು ನಾವು ಗಮನಿಸಬಹುದು. ಕಲಾಸೇವೆಯ ಜತೆ ಕಲಾವಿದರನ್ನು ಸನ್ಮಾನಿಸುವ ನಿರ್ಣಯ. ಯಕ್ಷಗಾನ ಸಂಘಟಕರ ಈ ಸತ್ಕಾರ್ಯವನ್ನು ನಾವು ಪ್ರೋತ್ಸಾಹಿಸೋಣ. ಅವರನ್ನು ಅಭಿನಂದಿಸೋಣ.

ಅನೇಕ ವರ್ಷಗಳ ಕಾಲ ಯಕ್ಷಗಾನಕ್ಕಾಗಿ ಬದುಕನ್ನು ಸವೆಸಿ ಪ್ರಾಮಾಣಿಕವಾಗಿ ಕಲಾ ಸೇವೆಯನ್ನು ಮಾಡಿದ ಕಲಾವಿದರುಗಳಿಗೆ ತಾವು ಸನ್ಮಾನಕ್ಕೆ, ಪ್ರಶಸ್ತಿಗೆ ಆಯ್ಕೆಯಾದಾಗ ಆನಂದವಾಗುವುದು ಸಹಜ. ಈ ಸನ್ಮಾನ ಪ್ರಶಸ್ತಿಗಳು ಕಲಾವಿದರ ಹೊಣೆಗಾರಿಕೆಯನ್ನು ಹೆಚ್ಚಿಸಿ ಇನ್ನಷ್ಟು ಕಲಾಸೇವೆಯನ್ನು ಮಾಡಲು ಉತ್ತೇಜನವನ್ನು ಕೊಡಲಿ ಎಂದು ಆಶಿಸೋಣ. ಕಲಾಪೋಷಕರಾಗಿ ಕಾಣಿಸಿಕೊಂಡವರು ಸರ್ಪಂಗಳ ಶ್ರೀ ಸುಬ್ರಹ್ಮಣ್ಯ ಭಟ್ಟರು. ಉಡುಪಿಯಲ್ಲಿ ಭಾರತೀಯ ಜೀವ ವಿಮಾ ಉದ್ಯೋಗಿಯಾಗಿದ್ದ ಇವರು ಕಲಾಪೋಷಕರೆಂದು ಖ್ಯಾತರಾದರು. ಉಡುಪಿಯಲ್ಲಿ ತೆಂಕುತಿಟ್ಟಿನ ಪ್ರದರ್ಶನಗಳಿಗೆ ಕಾರಣರಾದುದಲ್ಲದೆ ಯಕ್ಷಗಾನ ಕಲಾರಂಗ (ರಿ) ಉಡುಪಿ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದರು.

ಶ್ರೀಯುತರು ಅವ್ಯಕ್ತ ಲೋಕವನ್ನು ಸೇರಿಕೊಂಡ ಮೇಲೆ ಇವರ ಪತ್ನಿ ಶ್ರೀಮತಿ ನಳಿನಿ ಸುಬ್ರಹ್ಮಣ್ಯ ಭಟ್ ನತ್ತು ಮಕ್ಕಳು ‘ಸರ್ಪಂಗಳ ಯಕ್ಷೋತ್ಸವ’ ಕಾರ್ಯಕ್ರಮದಡಿ  ಸರ್ಪಂಗಳ ಪ್ರಶಸ್ತಿಯನ್ನು ಕಳೆದ ಏಳು ವರ್ಷಗಳಿಂದ ಹಿರಿಯ ಕಲಾವಿದರಿಗೆ ನೀಡಿ ಗೌರವಿಸುತ್ತಾ ಬಂದಿರುತ್ತಾರೆ. ಕಳೆದ ವರುಷ (2019)  ಸರ್ಪಂಗಳ ಪ್ರಶಸ್ತಿಗೆ  ಭಾಜನರಾದವರು ಕಟೀಲು ಮೇಳದ ಹಿರಿಯ ಸ್ತ್ರೀ ವೇಷಧಾರಿ ಶ್ರೀ ಸಂಜೀವ ಬಳೆಗಾರ, ಶಂಕರನಾರಾಯಣ.

ಬಡಗಿನವರಾದ (ಕುಂದಾಪುರ) ಇವರು ತೆಂಕಿನ ಕಟೀಲು ಮೇಳದ ಕಲಾವಿದರಾಗಿ ಮಿಂಚಿದವರು. ಕಲೆಗಿರುವ ಆಕರ್ಷಣೆಯೆಂದರೆ ಹಾಗೆ. ಪ್ರದೇಶ, ಜಾತಿ, ಭಾಷೆ ಕಲಾವಿದನಾಗಲು ತೊಡಕಾಗುವುದಿಲ್ಲ. ಸಾಧನೆಯೊಂದೇ ಬೇಕಾದುದು. ಹೊರರಾಜ್ಯದವರೂ, ವಿದೇಶಿಗರೂ ಈ ಸರ್ವಾಂಗ ಸುಂದರ ಕಲೆಯತ್ತ ಆಕರ್ಷಿತರಾಗಿ ಅಧ್ಯಯನವನ್ನು ನಡೆಸುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ. ಸರ್ಪಂಗಳ  ಪ್ರಶಸ್ತಿ ವಿಜೇತರಾದ ಶ್ರೀ ಸಂಜೀವ ಬಳೆಗಾರರನ್ನು ನಾವೆಲ್ಲಾ ಅಭಿನಂದಿಸೋಣ. 

ಶ್ರೀ ಸಂಜೀವ ಬಳೆಗಾರರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಕುಳ್ಳಂಜೆಯಲ್ಲಿ 1948ನೇ ಇಸವಿಯಲ್ಲಿ ಜನಿಸಿದರು. ತಂದೆ ಶ್ರೀ ಗೋವಿಂದ ಬಳೆಗಾರ. ತಾಯಿ ಸೀತಮ್ಮ. ಓದಿದ್ದು 8ನೇ ತರಗತಿ ವರೆಗೆ. ಶಂಕರನಾರಾಯಣ ಶಾಲೆಯಲ್ಲಿ. ಮನೆಯಲ್ಲಿ ಯಾರೂ ಯಕ್ಷಗಾನ ಕಲಾವಿದರಲ್ಲದಿದ್ದರೂ ಕಲಾಸಕ್ತರಾಗಿದ್ದರು. ಸಂಜೀವ ಬಳೆಗಾರರ ಅಣ್ಣ ಗೋಪಾಲಕೃಷ್ಣ ಎಂಬವರು (ದೊಡ್ಡಮ್ಮನ ಮಗ) ಪೆರ್ಡೂರು ಮೇಳದ ಕಲಾವಿದರಾಗಿದ್ದರು. ಸ್ತ್ರೀ ವೇಷಗಳನ್ನು ನಿರ್ವಹಿಸುತ್ತಿದ್ದರು. ಸಂಜೀವ ಬಳೆಗಾರರಿಗೆ ಬಾಲ್ಯದಲ್ಲಿಯೇ ಯಕ್ಷಗಾನಾಸಕ್ತಿ ಇತ್ತು. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಆಟ ನೋಡುತ್ತಾ ಬೆಳೆದವರು.

ಅಣ್ಣ ಗೋಪಾಲಕೃಷ್ಣ ಅವರ ಪ್ರೋತ್ಸಾಹದಿಂದಲೇ ಆಸಕ್ತಿ ಹೆಚ್ಚಿತು. ಯಕ್ಷಗಾನ ಸೇರುವಂತಾಯಿತು ಎಂಬುದು ಸಂಜೀವ ಬಳೆಗಾರರ ಅಭಿಪ್ರಾಯ. ಶಾಲೆ ಬಿಟ್ಟ ನಂತರ ತೀರ್ಥಹಳ್ಳಿಯ ಶ್ರೀನಿವಾಸ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಉದ್ಯೋಗಕ್ಕೆ ಸೇರಿದ್ದರು. ಅಲ್ಲಿ ಕಂಪೋಸಿಂಗ್ ಕೆಲಸವನ್ನು 2 ವರ್ಷ ಮಾಡಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದನಾಗುವ ಸಂಜೀವ ಬಳೆಗಾರರ ಆಸೆಯೂ ಕೈಗೂಡುವ ಅವಕಾಶ ಬಂದಿತ್ತು. ತೀರ್ಥಹಳ್ಳಿಯ ಮಂಗಳಗಾರ್ ಎಂಬಲ್ಲಿ ಖ್ಯಾತ ಸ್ತ್ರೀ ಪಾತ್ರಧಾರಿ ಶ್ರೀ ಎಂ.ಕೆ ರಮೇಶ ಆಚಾರ್ಯರು ವಾಸ್ತವ್ಯವಿದ್ದರು. ಅವರಿಂದಲೇ ನಾಟ್ಯವನ್ನು ಅಭ್ಯಸಿಸಿ ಮೇಳದ ತಿರುಗಾಟ ನಡೆಸುವ ಮನ ಮಾಡಿದರು.

ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣೆಯ ಸಂದರ್ಭ ಗೌರವಿಸಲ್ಪಟ್ಟ ಸಂಜೀವ ಬಳೆಗಾರ. (ಫೋಟೋ: ರಾಮ್ ನರೇಶ್ ಮಂಚಿ)

ಮೊದಲ ತಿರುಗಾಟ ಕೊಲ್ಲೂರು ಮೇಳದಲ್ಲಿ 1 ವರ್ಷ. ಮುಂದಿನ ತಿರುಗಾಟ ಪ್ರಸಿದ್ಧ ಕೆರೆಮನೆ ಇಡಗುಂಜಿ ಮೇಳದಲ್ಲಿ. ಆಗ ಖ್ಯಾತ ಕಲಾವಿದ ಕೆರೆಮನೆ ಶಿವರಾಮ ಹೆಗಡೆಯವರು ಮೇಳವನ್ನು ನಡೆಸುತ್ತಿದ್ದರು. 2 ವರ್ಷಗಳ ಕಾಲ ತಿರುಗಾಟ.  ಶಿವರಾಮ ಹೆಗಡೆಯವರ ಜತೆ ವೇಷ ಮಾಡುವ ಭಾಗ್ಯವೂ ಒದಗಿತ್ತು ಸಂಜೀವ ಬಳೆಗಾರರಿಗೆ. ನಂತರ 6 ವರ್ಷಗಳ ಕಾಲ ತೆಂಕಿನ ಸುರತ್ಕಲ್ ಮೇಳದಲ್ಲಿ ವ್ಯವಸಾಯ. ಅಗರಿ ರಘುರಾಮ ಭಾಗವತರು, ಶೇಣಿ, ತೆಕ್ಕಟ್ಟೆ ಎಂ.ಕೆ ಮೊದಲಾದ ಶ್ರೇಷ್ಠರ ಒಡನಾಟ ಸಿಕ್ಕಿದ ಪರಿಣಾಮ ನೆಲೆಯಲು ಅನುಕೂಲವಾಗಿತ್ತು. ಕಳೆದ 31 ವರ್ಷಗಳಿಂದ ಕಟೀಲು ಮೇಳದಲ್ಲಿ ಕಲಾಸೇವೆ ಮಾಡುತ್ತಿದ್ದಾರೆ.

ಜಾಹೀರಾತು

ಕುರಿಯ ಗಣಪತಿ ಶಾಸ್ತ್ರಿ, ಪದ್ಯಾಣ ಶಂಕರನಾರಾಯಣ ಭಟ್, ಗುಡ್ಡಪ್ಪ ಗೌಡ ಮೊದಲಾದವರ ಜತೆ ತಿರುಗಾಟ. ಎಲ್ಲಾ ತರದ ಸ್ತ್ರೀ ವೇಷಗಳನ್ನೂ ನಿರ್ವಹಿಸಿದವರು ಸಂಜೀವ ಬಳೆಗಾರರು. ಚಂದ್ರಮತಿ, ದಮಯಂತಿ, ದಾಕ್ಷಾಯಣಿ ಅಲ್ಲದೆ ಶೃಂಗಾರಕ್ಕೆ ಸಂಬಂಧಿಸಿದ ವೇಷಗಳು, ಕಸೆ ಸ್ತ್ರೀ ವೇಷಗಳನ್ನೂ ಮಾಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಕುರಿಯ ಗಣಪತಿ ಶಾಸ್ತ್ರಿಗಳ ನಿರ್ದೇಶನದಲ್ಲಿ ದೇವಿ ಮಹಾತ್ಮೆ ಪ್ರಸಂಗದ ‘ಶ್ರೀದೇವಿ’ಯಾಗಿ 2 ವರ್ಷ ಅಭಿನಯಿಸಿದ್ದರು. ಭಾವನಾತ್ಮಕ ಪಾತ್ರಗಳೆಂದರೆ ಸಂಜೀವಣ್ಣನಿಗೆ ಬಲು ಪ್ರೀತಿ. ಮೈಮರೆತು ಅಭಿನಯಿಸಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಲು ಭಾವನಾತ್ಮಕ ಸಾತ್ವಿಕ ಪಾತ್ರಗಳಲ್ಲಿ ಅನುಕೂಲತೆಗಳಿವೆ ಎಂಬುದು ಸಂಜೀವ ಬಳೆಗಾರರ ಅನುಭವದ ಮಾತುಗಳು.

ಕಟೀಲು ಮೇಳದಲ್ಲಿ ಗುಡ್ಡಪ್ಪ ಗೌಡ ಮತ್ತು ಸಂಜೀವ ಬಳೆಗಾರರದ್ದು ಅಪೂರ್ವ, ಖ್ಯಾತ ಜೋಡಿ. ಜತೆ ವೇಷಗಳಲ್ಲಿ ಇವರಿಬ್ಬರೂ ಮೆರೆದಿದ್ದರು. ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಗುಡ್ಡಪ್ಪ ಗೌಡರ ಅರುಣಾಸುರನಿಗೆ ಯಶೋಮತಿಯಾಗಿ ಸಂಜೀವ ಬಳೆಗಾರರು ಎಲ್ಲರೂ ಮೆಚ್ಚುವಂತೆ ಅಭಿನಯಿಸಿದ್ದರು. ಅದನ್ನು ಪ್ರೇಕ್ಷಕರು ಈಗಲೂ ಹೇಳಿ ನೆನಪಿಸುತ್ತಾರೆ. ಆ ಪಾತ್ರದಿಂದಾಗಿ ಸಂಜೀವ ಬಳೆಗಾರರು ‘ಯಶೋಮತಿ ಸಂಜೀವಣ್ಣ’ ಎಂದೇ ಖ್ಯಾತರಾದರು. ಹೀಗೆ ಸಂಜೀವ ಬಳೆಗಾರರು ಯಕ್ಷಗಾನ ವೃತ್ತಿ ಕಲಾವಿದನಾಗಿ 45ಕ್ಕೂ ಮಿಕ್ಕಿದ ವಸಂತಗಳನ್ನು ಕಂಡಿದ್ದಾರೆ. ಅನೇಕ ಸಂಘ ಸಂಸ್ಥೆಗಳು, ಕಲಾಪೋಷಕರು ಇವರನ್ನು ಗುರುತಿಸಿ ಗೌರವಿಸಿದ್ದಾರೆ. ಶ್ರೀಯುತರು ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ಪಡೆದುದಲ್ಲದೆ ಯಕ್ಷಗಾನ ಕಲಾರಂಗ (ರಿ) ಉಡುಪಿ ಸಂಸ್ಥೆಯಿಂದಲೂ ಸನ್ಮಾನಿತರಾಗಿರುತ್ತಾರೆ. 

ಸಂಸಾರಿಕವಾಗಿಯೂ ತೃಪ್ತರಿವರು. ಪತ್ನಿ ಸೀತಾ ಅವರು ಪತಿಯ ಕಲಾಸೇವೆಗೆ ಸದಾ ಸಹಕರಿಸಿ ಪ್ರೋತ್ಸಾಹಿಸಿದವರು. ಸಂಜೀವ ಬಳೆಗಾರ ಮತ್ತು ಸೀತಾ ದಂಪತಿಗಳಿಗೆ ಮೂವರು ಮಕ್ಕಳು. (2 ಹೆಣ್ಣು ಮತ್ತು 1 ಗಂಡು) ಜ್ಯೇಷ್ಠ ಪುತ್ರಿ ಶಾಂತಾ ವಿವಾಹಿತೆ. ಪುತ್ರ ಸುರೇಶ ಉದ್ಯಮಿ. ಫ್ಯಾನ್ಸಿ ಸ್ಟೋರ್ಸ್ ನಡೆಸುತ್ತಿದ್ದಾರೆ. ಕಿರಿಯ ಪುತ್ರಿ ಮಮತಾ ವಿವಾಹಿತೆ. ಶಂಕರಣರಾಯಣದಲ್ಲಿ ಫ್ಯಾನ್ಸಿ ಸ್ಟೋರ್ಸ್ ನಡೆಸುತ್ತಿದ್ದಾರೆ.  ಸರ್ಪಂಗಳ ಪ್ರಶಸ್ತಿ ವಿಜೇತರಾದ ಶ್ರೀ ಸಂಜೀವ ಬಳೆಗಾರರಿಗೆ ಇನ್ನಷ್ಟು ಪ್ರಶಸ್ತಿಗಳು ಬರಲಿ. ಇನ್ನಷ್ಟು ಕಲಾಸೇವೆಯನ್ನು ಮಾಡುವಲ್ಲಿ ಅವರಿಗೆ ಶ್ರೀ ದೇವರ ಅನುಗ್ರಹವಿರಲಿ ಎಂಬ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ  


RELATED ARTICLES

LEAVE A REPLY

Please enter your comment!
Please enter your name here

Most Popular

Recent Comments