Saturday, January 18, 2025
Homeಯಕ್ಷಗಾನಹಿರಿಯ ಪೋಷಕ ಪಾತ್ರಧಾರಿ ಶ್ರೀ ಬಾಬು ಕುಲಾಲರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ 

ಹಿರಿಯ ಪೋಷಕ ಪಾತ್ರಧಾರಿ ಶ್ರೀ ಬಾಬು ಕುಲಾಲರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ 

ಹಿರಿಯ ಪೋಷಕ ಪಾತ್ರಧಾರಿ ಶ್ರೀ ಬಾಬು ಕುಲಾಲರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಯಕ್ಷಗಾನ ಕಲಾರಂಗ ಸಂಸ್ಥೆಯು ಹಿರಿಯ ಸಾಧಕರ ಸ್ಮರಣಾರ್ಥ ಮತ್ತು ಗೌರವಾರ್ಥ ನೀಡುವ ಪ್ರಶಸ್ತಿಗೆ ತೆಂಕು ಬಡಗಿನ ಈ ಹಿರಿಯ ಕಲಾವಿದ ಶ್ರೀ ಬಾಬು ಕುಲಾಲ್ ಆಯ್ಕೆಯಾಗಿದ್ದಾರೆ.

ಯಕ್ಷಗಾನವು ಒಂದು ಸಮಷ್ಟಿ ಕಲೆ. ಪ್ರದರ್ಶನವು ವಿಜಯಿಯಾಗಬೇಕಾದರೆ ಪ್ರಸಂಗದೊಳಗಣ ಎಲ್ಲಾ ಪಾತ್ರಗಳೂ ಬೇಕು ಮತ್ತು ಸರಿಯಾಗಿಯೇ ಇರಬೇಕು. ಒಂದು ಪಾತ್ರವನ್ನು ನಿರ್ವಹಿಸುವ ಕಲಾವಿದ ಅಪ್ರಬುದ್ಧನಾಗಿದ್ದರೆ ಆ ಭಾಗ ಪೇಲವವಾಗಿ ಪ್ರದರ್ಶನ ಕೆಟ್ಟು ಹೋಗುವುದನ್ನು ನಾವು ಗಮನಿಸಬಹುದು. ಹಾಗಾಗಿ ಯಕ್ಷಗಾನ ಕಲೆಯಲ್ಲಿ ದೊಡ್ಡ ಪಾತ್ರ, ಸಣ್ಣ ಪಾತ್ರ ಎಂಬ ವಿಂಗಡಣೆ ಇಲ್ಲ. ಮುಖ್ಯ ಪಾತ್ರಗಳು, ಪೋಷಕ ಪಾತ್ರಗಳು…. ಹೀಗೆ ಗುರುತಿಸುತ್ತಾರೆ.

ಹೆಸರೇ ಸೂಚಿಸುವಂತೆ ಮುಖ್ಯ ಪಾತ್ರಗಳನ್ನು ಈ ಪಾತ್ರಗಳು ಪೋಷಿಸುತ್ತವೆ. ಮುಖ್ಯ ಪಾತ್ರಗಳು ರಂಜಿಸುವುದು ಪೋಷಕ ಪಾತ್ರಗಳು ಸರಿಯಿದ್ದಾಗ ಮಾತ್ರ. ಮುಖ್ಯ ಪಾತ್ರಗಳು ರಂಗದಲ್ಲಿ ವಿಜೃಂಭಿಸಲು ಪೋಷಕ ಪಾತ್ರಗಳು ಕೊಂಡಿಯಾಗಿ ಸಹಕರಿಸುತ್ತವೆ. ಪೋಷಕ ಪಾತ್ರಧಾರಿಯೂ ಪ್ರಬುದ್ಧನಾಗಿದ್ದರೆ ಪ್ರದರ್ಶನವು ಕಳೆಯೇರಿ ರಂಜಿಸುವುದನ್ನೂ ಅಪ್ರಬುದ್ಧನಾಗಿದ್ದರೆ ಪ್ರದರ್ಶನವು ಕಳೆಗುಂದುವುದನ್ನೂ ಪೇಕ್ಷಕರು ಅನುಭವಿಸುತ್ತಾರೆ. ಹಾಗಾಗಿ ಯಕ್ಷಗಾನದ ಎಲ್ಲಾ ಪಾತ್ರಗಳೂ ಮುಖ್ಯವೇ ಹೌದು.

ಮುಖ್ಯ ಪಾತ್ರಗಳನ್ನು ನಿರ್ವಹಿಸುವ ಕಲಾವಿದರು ತನ್ನ ಜತೆ ಪಾತ್ರಕ್ಕೆ ಇಂತಹಾ ಕಲಾವಿದನೇ ಬೇಕು ಎಂದು ಬೇಡಿಕೆ ಇಡುವುದನ್ನು ನಾವೆಲ್ಲಾ ಗಮನಿಸುತ್ತೇವೆ. ತನ್ನ ಪಾತ್ರ ಮತ್ತು ಒಟ್ಟು ಪ್ರದರ್ಶನ ಹಾಳಾಗಬಾರದೆಂಬ ಉದ್ದೇಶದಿಂದಲೇ ಹೀಗೆ ಹೇಳುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಇಂತಹಾ ಕೇಳಿಕೆಗಳಲ್ಲಿ ರಾಜಕೀಯವೂ ಅಡಗಿರಬಹುದು. ತನ್ನ ಆತ್ಮೀಯನಿಗೆ ಅವಕಾಶ ಕೊಡಿಸುವುದಕ್ಕಾಗಿ ಹೀಗೆ ಹೇಳಿದರೂ ಹೇಳಬಹುದು. ಅದು ನಮಗೆ ಇಲ್ಲಿ ಅಪ್ರಸ್ತುತ. ಇರಲಿ. ಯಕ್ಷಗಾನ ಪ್ರದರ್ಶನವು ಗೆಲ್ಲುವಲ್ಲಿ ಪೋಷಕ ಪಾತ್ರಗಳ, ಪಾತ್ರಧಾರಿಗಳ ಕೊಡುಗೆ ಹಿರಿದಾದುದು. ಅಂತ ಪೋಷಕ ಪಾತ್ರಧಾರಿಗಳಲ್ಲಿ ಶ್ರೀ ಬಾಬು ಕುಲಾಲರೂ ಒಬ್ಬರು.

ಪ್ರಸ್ತುತ ಕಟೀಲು 2ನೇ ಮೇಳದಲ್ಲಿ ಕಲಾಸವೆಯನ್ನು ಮಾಡುತ್ತಿದ್ದಾರೆ. ಶ್ರೀ ಬಾಬು ಕುಲಾಲ್ (ಬಸವ ಕುಲಾಲ್) ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹರ್ಕಾಡಿ ಗ್ರಾಮದ ಗಾವಳಿ ಎಂಬಲ್ಲಿ ವೆಂಕಟ ಕುಲಾಲ್ ಮತ್ತು ಸೂರಮ್ಮ ದಂಪತಿಗಳ ಮಗನಾಗಿ 1951 ಫೆಬ್ರವರಿ 8ರಂದು ಜನಿಸಿದರು. ಓದಿದ್ದು 5ನೇ ತರಗತಿ ವರೆಗೆ. ಹಳ್ಳಾಡಿ ಪ್ರಾಥಮಿಕ ಶಾಲೆಯಲ್ಲಿ.(ಗಾವಳಿ) ಯಕ್ಷಗಾನದ ಹಿನ್ನೆಲೆ ಇಲ್ಲದ ಕುಟುಂಬ ಇವರದು. ಹಿರಿಯರು ಕುಲ ಕಸುಬಿನಲ್ಲಿ ಆಸಕ್ತರಾಗಿದ್ದರು. (ಮಡಕೆ ತಯಾರಿಕೆ). ಆಟ ನೋಡುವ ಹವ್ಯಾಸ ಇತ್ತು. ಬಾಬು ಕುಲಾಲರಿಗೆ ಆಟ ನೋಡುವ ಆಸೆ. ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ನೋಡುತ್ತಿದ್ದರು. ತಾನೂ ಕಲಾವಿದನಾಗಬೇಕೆಂಬ ಆಸೆ ಹುಟ್ಟಿಕೊಂಡಿತ್ತು.

ಆ ಕಾಲದ ಪ್ರಸಿದ್ಧ ಪುರುಷ ವೇಷಧಾರಿ ವಂಡಾರು ಬಸವರು ಇವರನ್ನು ನವರಾತ್ರಿ ಸಮಯದಲ್ಲಿ ನಡೆಯುವ ಕಲಾರಾಧನೆ ‘ಹೂವಿನ ಕೊಲು’ ಆಟಕ್ಕೆ ಕರೆದೊಯ್ದರು. ಇದು ಕಲಿಕಾಸಕ್ತರಿಗೆ ಅನುಕೂಲವಾಗಿತ್ತು. ಯಕ್ಷಗಾನದ ಸಣ್ಣ ಸಣ್ಣ ತುಣುಕುಗಳನ್ನು ಹೂವಿನ ಕೋಲು ಸೇವೆಯೊಳಗೆ ಪ್ರದರ್ಶಿಸುತ್ತಿದ್ದರು. ಒಂದು ರೀತಿ ಚಿಕ್ಕ ಮೇಳ ಇದ್ದಂತೆ. ವಂಡಾರು ಬಸವ ಅವರು ಖ್ಯಾತ ಸ್ತ್ರೀ ಪಾತ್ರಧಾರಿ ರಾಮ ನಾಯಿರಿ ಅವರ ಬಂಧುವಾಗಿದ್ದರು. ಹೂವಿನಕೋಲು ಪ್ರದರ್ಶನಗಳಲ್ಲಿ ಭಾಗವಹಿಸಿ ಬಾಬು ಕುಲಾಲರಿಗೆ ಯಕ್ಷಗಾನಾಸಕ್ತಿ ಹೆಚ್ಚಿತು. ಕಲಿತು ಕಲಾವಿದನಾಗಬೇಕೆಂಬ ಛಲವೂ ಹುಟ್ಟಿಕೊಂಡಿತು. ಹೂವಿನ ಕೋಲು ಕಾರ್ಯಕ್ರಮದ ನಡುವೆ ಬಿಡುವಿದ್ದಾಗ ನಾಟ್ಯಾಭ್ಯಾಸವನ್ನು ಮಾಡುತ್ತಿದ್ದರು.

1966ರಲ್ಲಿ ವಂಡಾರು ಬಸವ ಅವರು ಅಮೃತೇಶ್ವರೀ ಮೇಳಕ್ಕೆ ಕರೆದುಕೊಂಡು ಹೋಗಿದ್ದರು. ಬಾಲಗೋಪಾಲರ ವೇಷದಿಂದ ಆರಂಭ. ಅದು ಮೇಳದಲ್ಲಿ ಮೊದಲ ತಿರುಗಾಟ ಬಾಬು ಕುಲಾಲರದ್ದು. ಆಗ ಪ್ರಾಚಾರ್ಯ ಶ್ರೀ ನಾರ್ಣಪ್ಪ ಉಪ್ಪೂರರು ಭಾಗವತರಾಗಿದ್ದರು. ತಿಮ್ಮಪ್ಪ ಮದ್ದಳೆಗಾರರು, ಕೆಮ್ಮಣ್ಣು ಆನಂದ, ಮಾರ್ಗೋಳಿ ಗೋವಿಂದ ಸೇರಿಗಾರ್, ವಂಡಾರು ಬಸವ, ಪೆರ್ಡೂರು ರಾಮ, ನಾವುಂದ ಮಹಾಬಲ ಗಾಣಿಗ ಮೊದಲಾದ ಕಲಾವಿದರ ಒಡನಾಟವು ದೊರಕಿತ್ತು. ಆಗ ಅಮೃತೇಶ್ವರೀ ಮೇಳವು ಬಯಲಾಟಗಳನ್ನು ಮಾತ್ರ ನಡೆಸುತ್ತಿತ್ತು. 2 ವರ್ಷಗಳ ತಿರುಗಾಟದ ನಂತರ ಶ್ರೀ ನಾರ್ಣಪ್ಪ ಉಪ್ಪೂರರ ಮನೆಗೆ ತೆರಳಿ ಅವರ ಪುತ್ರ ಶ್ರೀ ದಾಮೋದರ ಉಪ್ಪೂರರಿಂದ ನಾಟ್ಯ ಕಲಿತರು. ಅವರು ಚೆನ್ನಾಗಿ ನಾಟ್ಯ ಹೇಳಿ ಕೊಡುತ್ತಿದ್ದರೆಂದು ಬಾಬು ಕುಲಾಲರು ಹೇಳುತ್ತಾರೆ.

ಹೀಗೆ ಅಮೃತೇಶ್ವರೀ ಮೇಳದಲ್ಲಿ 5 ವರ್ಷಗಳ ತಿರುಗಾಟ ನಡೆಸಿದರು. ಸಣ್ಣ ಪುಟ್ಟ ವೇಷಗಳನ್ನು ಮಾಡುತ್ತಾ ಪೋಷಕ ಪಾತ್ರಧಾರಿಯಾಗಿಯೇ ಬೆಳೆದರು. ಬಳಿಕ 2 ವರ್ಷ ಮಂದಾರ್ತಿ ಮೇಳದಲ್ಲಿ ತಿರುಗಾಟ( ಮಂದಾರ್ತಿ 1 ಮೇಳ ಇದ್ದ ಸಂದರ್ಭ). ಮತ್ತೆ 2 ವರ್ಷ ಮಾರಣಕಟ್ಟೆ ಮೇಳದಲ್ಲಿ. ಬಳಿಕ ಪುನಃ ಅಮೃತೇಶ್ವರೀ ಟೆಂಟಿನ ಮೇಳದಲ್ಲಿ 2 ವರ್ಷಗಳ ತಿರುಗಾಟ. ಈ ಸಂದರ್ಭದಲ್ಲಿ ಚಿಟ್ಟಾಣಿ, ಗೋಡೆ, ಕೋಟ ವೈಕುಂಠ, ವಾಸುದೇವ ಸಾಮಗ, ಕುಂಜಾಲು, ಕೊಳ್ತಿಗೆ ನಿರಾಯಣ ಗೌಡ, ಹೊಸಂಗಡಿ ರಾಜೀವ ಶೆಟ್ಟಿ ಮೊದಲಾದವರ ಒಡನಾಟವೂ ದೊರಕಿತ್ತು. ಬಳಿಕ ಸಾಲಿಗ್ರಾಮ ಮೇಳದಲ್ಲಿ 1 ವರ್ಷ, ಕಮಲಶಿಲೆ ಮೇಳದಲ್ಲಿ 2 ವರ್ಷ, ಹಾಲಾಡಿ ಮೇಳದಲ್ಲಿ 2 ವರ್ಷ, ಸೌಕೂರು ಮೇಳದಲ್ಲಿ 2 ವರ್ಷ ತಿರುಗಾಟ ನಡೆಸಿದ್ದರು.

ಸ್ತ್ರೀ ಪಾತ್ರಧಾರಿಯಾಗಿ ಗುರುತಿಸಿಕೊಂಡರೂ ಪುರುಷ ಪಾತ್ರಗಳಲ್ಲೂ ಎಲ್ಲರೂ ಮೆಚ್ಚುವಂತೆ ಅಭಿನಯಿಸುತ್ತಾರೆ ಬಾಬು ಕುಲಾಲರು. ಕುವಲೆ, ಸುಗರ್ಭೆ, ಮಾಯಾ ಪೂತನಿ, ಯಶೋದೆ, ಮಾಯಾ ಶೂರ್ಪನಖಿ, ಮಾಯಾ ಹಿಡಿಂಬೆ, ಪ್ರಭಾವತಿ, ಮೀನಾಕ್ಷಿ, ಸುದೇಷ್ಣೆ, ಶಚಿ, ದಿತಿ, ಧರ್ಮರಾಯ, ಈಶ್ವರ, ಬ್ರಹ್ಮ, ಪಾರ್ವತಿ ಮೊದಲಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಯಾವ ಸಾತ್ವಿಕ ಪಾತ್ರಗಳನ್ನು ನೀಡಿದರೂ ಮಾಡಬಲ್ಲರು. ಸಹನೆ, ಸರಳತೆಯಿಂದ ಎಲ್ಲರಲ್ಲೂ ನಗುಮುಖದಿಂದಲೇ ವ್ಯವಹರಿಸುತ್ತಾರೆ. ಸಹಕಲಾವಿದರ ಮನವನ್ನು ಗೆದ್ದು ಎಲ್ಲರಿಗೂ ಬೇಕಾದವರಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಕಳೆದ 33 ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಕಟೀಲು 3ನೇ ಮೇಳ ಆರಂಭವಾದ ವರ್ಷ ಬಾಬು ಕುಲಾಲರು 2ನೇ ಮೇಳಕ್ಕೆ ಸೇರಿದ್ದರು. ನಿರಂತರ 33 ವರ್ಷಗಳ ಕಾಲ ಕಟೀಲು 2ನೇ ಮೇಳದಲ್ಲಿ ತಿರುಗಾಟ.

ಅತ್ಯುತ್ತಮ ಪೋಷಕ ಪಾತ್ರಧಾರಿ ಎಂದು ಗುರುತಿಸಿಕೊಂಡರೂ ಅಗತ್ಯ ಬಿದ್ದರೆ ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬಲ್ಲ ಕಲಾವಿದ ಶ್ರೀ ಬಾಬು ಕುಲಾಲರು. ವೈವಾಹಿಕ ಬದುಕಿನಲ್ಲೂ ತೃಪ್ತರಿವರು. ಇಚ್ಛೆಯನ್ನರಿತು ನಡೆಯುವ ಸತಿ ಲಕ್ಷ್ಮಿ. ಬಾಬು ಕುಲಾಲ್, ಲಕ್ಷ್ಮಿ ದಂಪತಿಗಳಿಗೆ ಮೂವರು ಮಕ್ಕಳು. ಪುತ್ರಿ ಸುಶೀಲ ವಿವಾಹಿತೆ. ಹಿರಿಯ ಪುತ್ರ ಚಂದ್ರ ಉದ್ಯೋಗಿ, ವಿವಾಹಿತ. ಕಿರಿಯ ಪುತ್ರ ರಾಘವೇಂದ್ರ ಉದ್ಯೋಗಿ. ಶ್ರೀ ಬಾಬು ಕುಲಾಲರಿಂದ ಕಲಾಮಾತೆಯ ಸೇವೆಯು ನಿರಂತರವಾಗಿ ನಡೆಯುತ್ತಿರಲಿ. ಅವರಿಗೆ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments