Saturday, January 18, 2025
HomeUncategorizedಪದ್ಯಾಣ ಜಯರಾಮ ಭಟ್ - ನಾದೋಪಾಸನೆಯ ಗುಂಗಿನಲ್ಲಿ 

ಪದ್ಯಾಣ ಜಯರಾಮ ಭಟ್ – ನಾದೋಪಾಸನೆಯ ಗುಂಗಿನಲ್ಲಿ 

ಪದ್ಯಾಣ ಜಯರಾಮ ಭಟ್ (ಫೋಟೋ: ರಾಧಾಕೃಷ್ಣ ರಾವ್. ಯು)

ಯಕ್ಷಗಾನ ಜಯರಾಮ ಭಟ್ಟರಿಗೆ ರಕ್ತಗತವಾಗಿ ಬಂದದ್ದು. ಕಲೆಯ ಬೀಡಾದ ಮನೆಯಲ್ಲಿ ಯಕ್ಷಗಾನ ತಾಳ ನಿನಾದಗಳು ಹುಟ್ಟಿನಿಂದಲೇ ಕಿವಿಗೆ ಕೇಳಿಸುತ್ತಿದ್ದುವು. ಹುಟ್ಟಿನಿಂದಲೇ ಮದ್ದಳೆಯ ಮತ್ತು ಚೆಂಡೆಯ ಪೆಟ್ಟುಗಳನ್ನು ಕೇಳಿಯೇ ಬೆಳೆದದ್ದು. ಸಹೋದರರಲ್ಲಿ ಭಾಗವತರಾದ ಪದ್ಯಾಣ ಗಣಪತಿ ಭಟ್ ಮಾತ್ರ ಶಾಸ್ತ್ರೀಯವಾಗಿ ಯಕ್ಷಗಾನ ಕಲಿತವರು. ಪದ್ಯಾಣ ಜಯರಾಮ ಭಟ್ಟರು ನೋಡಿ, ಕೇಳಿ, ಬಾರಿಸಿ ಕಲಿತವರು.

ಅಜ್ಜ ಪುಟ್ಟು ನಾರಾಯಣ ಭಾಗವತರು ದೊಡ್ಡ ಭಾಗವತರು. ತಂದೆ ಪದ್ಯಾಣ ತಿರುಮಲೇಶ್ವರ ಭಟ್ಟರು ಕೂಡಾ ಕಲಾವಿದರು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಜಯರಾಮ ಭಟ್ಟರು ಗಾಯಕನಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆಗ ಭಾವಗೀತೆಗಳನ್ನು ಹಾಡುತ್ತಿದ್ದರು. ಪದವಿ ಶಿಕ್ಷಣವನ್ನು ಮುಗಿಸಿದ ಮೇಲೆ ಯಕ್ಷಗಾನದ ಎಲ್ಲಾ ವಿಭಾಗಗಳಲ್ಲಿ ಹೆಚ್ಚಿನ ಕಲಿಕೆಯನ್ನು ಹೊಂದಲು ಅವರಿಗೆ ಅನುಕೂಲವಾಯಿತು.

ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಗಾತ್ರದಲ್ಲಿ ತನಗಿಂತಲೂ ದೊಡ್ಡದಾಗಿದ್ದ ಮದ್ದಳೆ ಯನ್ನು ಸರಾಗವಾಗಿ ಬಾರಿಸಲು ಪ್ರಾರಂಭಿಸಿದರು. ತಂದೆಯವರು ಇತರರಿಗೆ ಕಲಿಸುವುದನ್ನು ನೋಡಿ, ಅವರು ಬಾರಿಸುವುದನ್ನು ನೋಡಿ ಕಲಿಯಲು ಸುರುಮಾಡಿದ್ದ ಜಯರಾಮ ಭಟ್ಟರು ಕಾಲೇಜಿಗೆ ಬಂದಾಗ ಮದ್ದಳೆಯಲ್ಲಿ ಪಳಗಿದ್ದರು. ಕಾಲೇಜಿಗೆ ಹೋಗುತ್ತಿರುವಾಗಲೇ ಪ್ರಮುಖ ಭಾಗವತರ ಜತೆ ಮದ್ದಳೆಯ ಸಾಥ್ ನೀಡಿದ ಅನುಭವವಾಗಿತ್ತು. (ಮಂಡೆಚ್ಚರು ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಅವರು ಮತ್ತು ಪದ್ಯಾಣ ಶಂಕರ ನಾರಾಯಣ ಭಟ್ಟರ ಜೊತೆಗೆ ಜಯರಾಮ ಭಟ್ಟರ ಮದ್ದಳೆವಾದನವನ್ನೂ ಮೆಚ್ಚಿಕೊಂಡಿದ್ದರು.)


‘‘ಅಗರಿ ದೊಡ್ಡ ಭಾಗವತರಿಗೆ, ಕಡತೋಕ, ಮಂಡೆಚ್ಚರು, ಅಗರಿ ರಘುರಾಮ ಭಾಗವತರೇ ಮೊದಲಾದವರ ಜೊತೆಗೂ ಮೃದಂಗ ವಾದನದಲ್ಲಿ ಸಹಕರಿಸಿದ್ದೇನೆ’’ ಎಂದು ಪದ್ಯಾಣ ಜಯರಾಮ ಭಟ್ಟರು ನೆನಪಿಸಿಕೊಳ್ಳುತ್ತಾರೆ.  ಇವರು ಪೂರ್ಣಾವಧಿ ಭಾಗವತನಾಗಿಯೇ ಕಲಾಸೇವೆ ಮಾಡುತ್ತಿದ್ದಾಗ ಎಂಟು ವರ್ಷಗಳ ಹಿಂದೆ ಆರೋಗ್ಯದ ತೊಂದರೆಯಿಂದಾಗಿ ವೈದ್ಯರ ಕಟು ನಿರ್ದೇಶನದಂತೆ ಭಾಗವತಿಕೆಯನ್ನು  ಬಿಟ್ಟರು. ಎರಡು ವರ್ಷ ಹಾಡಬಾರದು ಎಂಬುದಾಗಿ ವೈದ್ಯರು ತಾಕೀತು ಮಾಡಿದ್ದರು. ಆದರೆ ಮೃದಂಗ ಬಾರಿಸಲು ಅನುಮತಿಯೂ ಸಿಕ್ಕಿತು. ಹಾಗೆ ಎರಡು ವರ್ಷಕ್ಕೆ ಬಿಟ್ಟ ಭಾಗವತಿಕೆಯನ್ನು ಜಯರಾಮ ಭಟ್ಟರು ಮತ್ತೆಂದೂ ಮಾಡಲಿಲ್ಲ. ಹಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಈಗ ಸಾ.ಪಾ.ಸಾ. ಹೇಳಲು ಕಷ್ಟವಾಗುತ್ತದೆ ಎನ್ನುತ್ತಾರೆ.

ಕದ್ರಿ ಮೇಳದಲ್ಲಿ 2 ವರ್ಷ, ಕುಂಟಾರು ಮೇಳದಲ್ಲಿ 2 ವರ್ಷ, ಕರ್ನಾಟಕ ಮೇಳದಲ್ಲಿ ಒಂದು ವರ್ಷ, ಹೀಗೆ ಐದು ವರ್ಷಗಳ ಕಾಲ ಭಾಗವತನಾಗಿಯೇ ಕಲಾಸೇವೆ ಮಾಡಿದ್ದರು. ಆಮೇಲೆ ಅನಿವಾರ್ಯ ವಾಗಿ ಮೃದಂಗವಾದಕನಾಗಿ ಮುಂದುವರಿದರು. ಚೆಂಡೆ ಬಾರಿಸುವುದು ಅಪರೂಪ. ಭಾಗವತಿಕೆಯಲ್ಲಿ ಸುಮಾರು ಒಂದು ವರ್ಷ ಪೂಜ್ಯ ಎಡನೀರು ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳವರಿಂದ ಅನುಗ್ರಹವಾಯಿತು.  ಅವರ ಮಾರ್ಗದರ್ಶನದಲ್ಲಿ ಭಾಗವತಿಕೆಯನ್ನು ಅಭ್ಯಾಸ ಮಾಡಿದ್ದರು.

ಕಾಲೇಜಲ್ಲಿರುವಾಗ ಹಾಡುಗಾರನಾಗಿದ್ದುದು ಮತ್ತು ಸಂಗೀತದ ಬಗ್ಗೆ ಆಸಕ್ತಿಯಿದ್ದುದು ಮುಂದೆ ಇವರಿಗೆ ಭಾಗವತಿಕೆ ಕಲಿಯಲು ಪ್ರೇರಣೆಯಾಯಿತು. ಕೆಲವು ತಿಂಗಳುಗಳ ಕಾಲ ಶಾಸ್ತ್ರೀಯ ಸಂಗೀತವನ್ನೂ ಕಲಿತರು. ಅಂದು ಕಲಿತ ಸಂಗೀತದ ಜ್ಞಾನ ಕೆಲವೊಮ್ಮೆ ಇಂದಿಗೂ ಪ್ರಯೋಜನಕ್ಕೆ ಬರುತ್ತದೆಯಂತೆ. ಈಗಲೂ ಮೇಳಗಳಲ್ಲಿ ಭಾಗವತರು, ಕಲಾವಿದರು ರಾಗ, ತಾಳಗಳ ಬಗ್ಗೆ ಪದ್ಯಾಣ ಜಯರಾಮ ಭಟ್ಟರಲ್ಲಿ ಸಲಹೆಯನ್ನು ಕೇಳುವುದು, ಸಂಶಯವನ್ನು ನಿವಾರಿಸಿಕೊಳ್ಳುವುದು ಎಷ್ಟೋ ಬಾರಿ ನಡೆಯುತ್ತದೆ.

ಪದ್ಯಾಣ ಜಯರಾಮ ಭಟ್ – ಮಗಳು ಸುಜಯಾ – ಪತ್ನಿ ಸುಮಂಗಲಾ

                                       
19-11-1957ರಲ್ಲಿ ಜನಿಸಿದ ಶ್ರೀ ಪದ್ಯಾಣ ಜಯರಾಮ ಭಟ್ಟರು ಪಡೆದದ್ದು B.Com. ಪದವಿ. ತಂದೆ ಪದ್ಯಾಣ ತಿರುಮಲೇಶ್ವರ ಭಟ್, ತಾಯಿ ಸಾವಿತ್ರಮ್ಮ, ವಿವೇಕಾನಂದ ಕಾಲೇಜಿನಲ್ಲಿ B.Com. ಪದವಿ. ಪ್ರಾಥಮಿಕ ವಿದ್ಯಾಭ್ಯಾಸ ಕಲ್ಮಡ್ಕ ಶಾಲೆ ಮತ್ತೆ ಹೈಸ್ಕೂಲ್ ಬಾಳಿಲ ಶಾಲೆಗಳಲ್ಲಿ, ಮೃದಂಗವಾದನದ ಕಲಿಕೆ ಸ್ವಯಂ ನೋಡಿ, ಕೇಳಿ ಮತ್ತು ತಂದೆಯಿಂದ ಹಾಗೂ ಮುಂದೆ ಭಾಗವತಿಕೆ ಕಲಿಕೆ ಎಡನೀರು ಶ್ರೀಗಳಿಂದ ಒಂದು ವರ್ಷಗಳ ಕಾಲ. (ಪದ್ಯಾಣ ಶಂಕರನಾರಾಯಣ ಭಟ್ಟರು ಇವರ ಸಣ್ಣಜ್ಜನ ಮಗ. ಇವರಿಗೆ ಚಿಕ್ಕಪ್ಪನಾಗಬೇಕು.)
ಪತ್ನಿ : ಶ್ರೀಮತಿ ಸುಮಂಗಲಾ. ಮಗಳು : ಸುಜಯಾ – M.B.A. ಪದವೀಧರೆ. ಮಗಳು ಸುಜಯಾ ಯಕ್ಷಗಾನ ಕಲಾವಿದೆ, ಪುತ್ತೂರು ಶ್ರೀಧರ ಭಂಡಾರಿಯವರ ಶಿಷ್ಯೆ.‘ಯಕ್ಷಕೂಟ’ ಪುತ್ತೂರು ಮಕ್ಕಳ ತಂಡದಲ್ಲಿ ಸಕ್ರಿಯ ಸದಸ್ಯೆಯಾಗಿದ್ದರು. ಹಲವಾರು ವೇಷಗಳನ್ನು ನಿರ್ವಹಿಸಿದ್ದರು.


ಅನುಭವ : ಕರ್ನಾಟಕ ಮೇಳ ಒಂದು ವರ್ಷ, ಕದ್ರಿ ಮೇಳ 2 ವರ್ಷ, ಕುಂಟಾರು ಮೇಳ ಎರಡು ವರ್ಷಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ ಅನುಭವ. ಹೀಗೆ ಐದು ವರ್ಷ ಭಾಗವತರಾಗಿ ತಿರುಗಾಟ. ಆಮೇಲೆ ಮಂಗಳಾದೇವಿ ಮೇಳದಲ್ಲಿ ಎರಡು ವರ್ಷಗಳ ಕಾಲ ಭಾಗವತ ಮತ್ತು ಮದ್ದಳೆಗಾರರಾಗಿ ತಿರುಗಾಟ. ಆಮೇಲೆ ಎಡನೀರು ಮೇಳ ಮತ್ತು ಹೊಸನಗರ ಮೇಳಗಳಲ್ಲಿ ಸುಮಾರು 12 ವರ್ಷಗಳಿಗೂ ಹೆಚ್ಚಿನ ತಿರುಗಾಟದ ಅನುಭವ. ಪ್ರಸ್ತುತ ಹನುಮಗಿರಿ ಮೇಳದಲ್ಲಿ ಮುಖ್ಯ ಮದ್ದಳೆಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿದೇಶ ಪ್ರವಾಸ : ಕುವೈಟ್, ಸತತ ಎರಡು ವರ್ಷಗಳಲ್ಲಿ ಅಮೇರಿಕಾ ಪ್ರವಾಸ.
ಉದ್ಯಮಿಯಾಗಿ : ಹೋಟೆಲ್ ಉದ್ಯಮಿಯಾಗಿ ಮೂರು ವರ್ಷಗಳ ಅನುಭವ. ಬೆಂಗಳೂರಿನಲ್ಲಿ ಮೂರು ವರ್ಷಗಳ ಕಾಲ ಹೋಟೆಲ್ ನಡೆಸುತ್ತಿದ್ದರು. ಇದಕ್ಕೂ ಮೊದಲು 1985ರಿಂದ 1987ರ ವರೆಗೆ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದರು. ಅದಕ್ಕೂ ಮೊದಲು ಎಡನೀರು ಮಠದಲ್ಲಿ ಸ್ವಾಮೀಜಿಯವರ ಆಪ್ತನಾಗಿ ಕೆಲಸ ಮಾಡಿದ್ದರು.


ಬೆಳ್ಳಾರೆಯಲ್ಲಿ ಜರಗಿದ ಭಾರೀ ಜನಸ್ತೋಮ ಸೇರಿದ ಕರ್ನಾಟಕ ಮೇಳದ ಆಟವೊಂದರಲ್ಲಿ ಕುತೂಹಲಕಾರಿ ಪ್ರಸಂಗವೊಂದು ನಡೆಯಿತು. ಆ ದಿನದ ಆಟಕ್ಕೆ ಅನಿವಾರ್ಯ ಕಾರಣದಿಂದಾಗಿ ಶ್ರೀ ದಾಮೋದರ ಮಂಡೆಚ್ಚರು ರಜೆಯಲ್ಲಿದ್ದರು. ಯುವ ಭಾಗವತರಾಗಿದ್ದ ದಿನೇಶ ಅಮ್ಮಣ್ಣಾಯರು ಅಸೌಖ್ಯದಿಂದ ಬಳಲುತ್ತಿದ್ದರು. ಆ ದಿನ ಪದ್ಯಾಣ ಜಯರಾಮ ಭಟ್ಟರು ಆಟವೊಂದನ್ನು ಮುಗಿಸಿ ಹಗಲು ನಿದ್ರಿಸಿದ್ದರು. ಬೆಳ್ಳಾರೆ ಆಟದ ಸಂಘಟಕರು ಆ ದಿನ ಕಾರಲ್ಲಿ ಕಲ್ಮಡ್ಕದ ಪದ್ಯಾಣರ ಮನೆಗೆ ಹಾಜರ್. ಹೊಸ ಪ್ರಸಂಗ, ತುಳು ಪ್ರಸಂಗ ಬೇರೆ. ಪ್ರಾರಂಭದಲ್ಲಿ ಅಸಮ್ಮತಿ ಸೂಚಿಸಿದರೂ ಸಂಘಟಕರು ಅಸಹಾಯಕತೆ ತೋಡಿಕೊಂಡಾಗ ವಿಧಿಯಿಲ್ಲದೆ ಹೊರಟರು.

ಆಟ ನಡೆಯುವ ಸ್ಥಳ ತಲುಪಿದಾಗ ಶ್ರೀ ದಿನೇಶ ಅಮ್ಮಣ್ಣಾಯರು ಅನಾರೋಗ್ಯದಲ್ಲಿದ್ದರೂ ಪದ್ಯ ಹೇಳುತ್ತಿದ್ದುದು ಕಂಡುಬಂತು. ದಿನೇಶ ಅಮ್ಮಣ್ಣಾಯರಿಗೆ ವಿಶ್ರಾಂತಿಯ ಅವಶ್ಯಕತೆ ಖಂಡಿತಾ ಇತ್ತು ಎಂದು ಮನಗಂಡ ಪದ್ಯಾಣ ಜಯರಾಮ ಭಟ್ಟರು ಆ ರಾತ್ರಿಯ ಆಟದಲ್ಲಿ ಭಾಗವತಿಕೆ ಮಾಡಿ ಆಟಕ್ಕೆ ಮತ್ತು ಪ್ರೇಕ್ಷಕರಿಗೆ ರಸಭಂಗವಾಗದಂತೆ ನೋಡಿಕೊಂಡರು. ಇದು ಒಂದು ಅಪೂರ್ವ ಅನುಭವ ಎಂದ ಜಯರಾಮ ಭಟ್ಟರು ನೆನಪಿಸಿಕೊಳ್ಳುತ್ತಾರೆ.


ಒಂದೆರಡು ದಿನಗಳ ನಂತರ ಜಯರಾಮ ಭಟ್ಟರನ್ನು ಭಾಗವತಿಕೆಗೆ ಕರೆಯಲು ಕರ್ನಾಟಕ ಮೇಳದ ಯಜಮಾನರು ಮನೆಗೆ ಜನ  ಕಳಿಸಿದರು. ಭಾಗವತ ದಿನೇಶ ಅಮ್ಮಣ್ಣಾಯರಿಗೆ ಅನಾರೋಗ್ಯದ ಕಾರಣದಿಂದ ಕೆಲವಾರು   ದಿನಗಳ ರಜೆ ಮಾಡಬೇಕಾಗಿ ಬಂತು. ಅದಕ್ಕಾಗಿ ಸುಮಾರು 15 ದಿನಗಳ ಕಾಲ ಪದ್ಯಾಣ ಜಯರಾಮ ಭಟ್ಟರು ಕರ್ನಾಟಕ ಮೇಳದಲ್ಲಿ ಪುನಃ ತಿರುಗಾಟ ಮಾಡಬೇಕಾಯಿತು.
‘‘ಆ 15 ದಿನಗಳ ಕಾಲ ಶ್ರೀ ದಾಮೋದರ ಮಂಡೆಚ್ಚರ ಜೊತೆಗೆ ಭಾಗವಹಿಸಿದ್ದು ಮತ್ತು ತಿರುಗಾಟ ಮಾಡಿದ್ದು ನನಗೆ ದೊಡ್ಡ ಲಾಭದ ಹಾಗೂ ಹೆಮ್ಮೆಯ ವಿಷಯ’’ ಎಂದು ಪದ್ಯಾಣ ಜಯರಾಮ ಭಟ್ಟರು ವಿನೀತಭಾವದಿಂದ ನುಡಿಯುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments