Saturday, January 18, 2025
Homeಯಕ್ಷಗಾನಕೊಕ್ಕಡ ಈಶ್ವರ ಭಟ್ - ಉಭಯ ತಿಟ್ಟುಗಳಿಗೂ ಸೈ 

ಕೊಕ್ಕಡ ಈಶ್ವರ ಭಟ್ – ಉಭಯ ತಿಟ್ಟುಗಳಿಗೂ ಸೈ 

ಅರುವತ್ತು ವರ್ಷಗಳ ದುಡಿಮೆ ಎಂದರೆ ಅದೇನು ಸುಲಭದ ಕಾರ್ಯವಲ್ಲ. ಅದರಲ್ಲೂ ಯಕ್ಷಗಾನದಂತಹಾ ರಂಗಕ್ರಿಯೆಯಲ್ಲಿ ಕಲಾವಿದರು ಸದಾ ಚಲನಶೀಲರಾಗಿರಬೇಕಾಗುತ್ತದೆ. ವೇಷಧಾರಿಗಳಂತೂ ಯಾವತ್ತೂ ಚುರುಕಿನ ನಡೆಯುಳ್ಳವರಾಗಿರಬೇಕಾಗುತ್ತದೆ. ಒಂದು ದಿನ ಏನಾದರೂ ಅನಾರೋಗ್ಯದ ಕಾರಣದಿಂದಲೂ ಔದಾಸೀನ್ಯವನ್ನು ತೋರಿದರೂ ಆ ದಿನದ ಒಟ್ಟು ಪ್ರದರ್ಶನದಲ್ಲಿ ಅದೊಂದು ಕಪ್ಪುಚುಕ್ಕೆಯಾಗಿ ಪರಿಣಮಿಸಿ ಆತನ ವೈಫಲ್ಯವನ್ನು ಎತ್ತಿತೋರಿಸುತ್ತದೆ.

ವಯಸ್ಸು ಎಲ್ಲರಿಗೂ ಬಾಧಕವೇ. ಕಲಾವಿದನೂ ಇದಕ್ಕೆ ಹೊರತಲ್ಲ. ಆದರೆ ಹೆಚ್ಚಿನ ಕಲಾವಿದರು ವಯಸ್ಸನ್ನು ಮೀರಿದ ಎತ್ತರಕ್ಕೆ ಬೆಳೆದು ರಂಗದಲ್ಲಿ ವಿಜೃಂಭಿಸಿದವರಿದ್ದಾರೆ. ಹೌದು. ಕೊಕ್ಕಡ ಈಶ್ವರ ಭಟ್ಟರು ಪ್ರಸಿದ್ಧ ಸ್ತ್ರೀವೇಷಧಾರಿಯಾಗಿ ಅರುವತ್ತಕ್ಕೂ ಹೆಚ್ಚು ವರ್ಷಗಳ ಕಾಲ ರಂಗದಲ್ಲಿ ದುಡಿದವರು. ಅರುವತ್ತು ವರ್ಷಗಳನ್ನು ಯಕ್ಷಗಾನಕ್ಕೆಂದೇ ವಿನಿಯೋಗಿಸಿದರು ಎಂದರೆ ಅದೊಂದು ಅದ್ಭುತ ಸಾಧನೆಯೇ ಸರಿ.

 ಈಶ್ವರ ಭಟ್ಟರು ಜನಿಸಿದ್ದು ಅಡ್ಯನಡ್ಕ ಸಮೀಪದ ಕಡೆಂಗೋಡ್ಲು ಎಂಬ ಸ್ಥಳದಲ್ಲಿಯಾದರೂ ‘ಕೊಕ್ಕಡ ಈಶ್ವರ ಭಟ್’ ಎಂದೇ ಪ್ರಸಿದ್ಧಿಯನ್ನು ಪಡೆದವರು. ತಂದೆ ಮಹಾಲಿಂಗ ಭಟ್ ತಾಯಿ ಪರಮೇಶ್ವರೀ ಅಮ್ಮನವರ ಐದು ಗಂಡು, ಐದು ಹೆಣ್ಣುಮಕ್ಕಳಲ್ಲಿ ಓರ್ವರಾಗಿ ಜನಿಸಿದ ಈಶ್ವರ ಭಟ್ಟರದು ಹೋರಾಟದ ಜೀವನ. ಆ ಕಾಲದಲ್ಲಿ ಎಲ್ಲಾ ಮಕ್ಕಳಿಗೂ ಶಿಕ್ಷಣ ಕೊಡುವಷ್ಟು ಆರ್ಥಿಕ ಸ್ಥಿತಿ ಸದೃಢವಾಗಿರಲಿಲ್ಲ. ಆದುದರಿಂದ ಆರನೇ ತರಗತಿಗೆ ವಿದ್ಯೆಗೆ ವಿದಾಯ ಹೇಳಿದ ಈಶ್ವರ ಭಟ್ಟರು ಅಲ್ಲಿ ಇಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾಗ ಅವರ ಜೀವನದ ತಿರುವೋ ಎಂಬಂತೆ ಅವರನ್ನು ಯಕ್ಷಗಾನ ರಂಗ ಕೈಬೀಸಿ ಕರೆಯಿತು.

ಅವರ ಅಕ್ಕನ ಗಂಡ ಭಾವನೇ ಆದ ಪೆರುವೋಡಿ ಕೃಷ್ಣ ಭಟ್ಟರು ಮೂಲ್ಕಿ ಮೇಳವನ್ನು ಮುನ್ನಡೆಸುತ್ತಿದ್ದ ಕಾಲ. ಭಾವನ ಪ್ರೀತಿಯ ಕರೆಗೆ ಓಗೊಟ್ಟ ಈಶ್ವರ ಭಟ್ಟರು ಯಕ್ಷಗಾನವೇ ತನ್ನ ಉಸಿರು ಎಂದು ನಿಶ್ಚೈಸಿ ತನ್ನ ಸಾಧನೆಯ ಹಾದಿಯಲ್ಲಿ ಒಂದೊಂದೇ ಮೆಟ್ಟಿಲನ್ನು ಏರತೊಡಗಿದರು. ಆ ಕಾಲದಲ್ಲಿ ಮೂಲ್ಕಿ ಮೇಳದಲ್ಲಿ ಸ್ತ್ರೀವೇಷಧಾರಿಯಾಗಿದ್ದ ಕುಡಾನ ಗೋಪಾಲಕೃಷ್ಣ ಭಟ್ಟರಲ್ಲಿ ನಾಟ್ಯಾಭ್ಯಾಸ ಮಾಡಿ ಪೂರ್ವರಂಗದ ವೇಷಗಳನ್ನು ಮಾಡುತ್ತಾ ರಂಗಾನುಭವವನ್ನು ಪಡೆಯ ತೊಡಗಿದರು. ಭರತನಾಟ್ಯದ ನಡೆಗಳನ್ನು ಬಲ್ಲ ಹಾಗೂ ಅದನ್ನು ರಂಗದಲ್ಲಿ ಪ್ರಯೋಗಿಸಬಲ್ಲ ಕೊಕ್ಕಡ ಈಶ್ವರ ಭಟ್ಟರು ಮೂಲ್ಕಿ ಮೇಳದಲ್ಲಿ ಸುಮಾರು ಐದಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಆಮೇಲೆ ಸುರತ್ಕಲ್ ಮೇಳಕ್ಕೆ ಸೇರುತ್ತಾರೆ.

ಈ ಮೇಳಗಳಲ್ಲದೆ ಬಡಗಿನ ಇಡಗುಂಜಿ, ಶಿರಸಿ, ಸಾಲಿಗ್ರಾಮ ಮೇಳಗಳಲ್ಲಿಯೂ ವೇಷಧಾರಿಯಾಗಿ ತೆಂಕು-ಬಡಗಿನಲ್ಲಿ ಸಮಾನ ಪ್ರಭುತ್ವವನ್ನು ಸಾಧಿಸಿ ನಿಜಾರ್ಥದಲ್ಲಿ ಸವ್ಯಸಾಚಿಯಾದ ಕೀರ್ತಿ ಇವರಿಗೆ ಸಲ್ಲುತ್ತದೆ. ತನ್ನ ಒಡನಾಟದ ಹಿರಿಯ ಕಲಾವಿದರನ್ನು ಗೌರವದಿಂದ ಸ್ಮರಿಸುವ ಇವರು ಹಿರಿಯ ಕಲಾವಿದರ ಮಾರ್ಗದರ್ಶನ ಸಹಕಾರಗಳಿಗೆ ಯಾವತ್ತೂ ಕೃತಜ್ಞನಾಗಿದ್ದೇನೆ ಎಂದು ವಿನೀತಭಾವವನ್ನು ತೋರುತ್ತಾರೆ.


                     

ಸ್ತ್ರೀವೇಷಧಾರಿಯಾಗಿ ವಿವಿಧ ಮೇಳಗಳಲ್ಲಿ : ಕೊಕ್ಕಡ ಈಶ್ವರ ಭಟ್ಟರು ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ ವೇಷಧಾರಿಯಾಗಿ ಸಮಾನ ಗೌರವವನ್ನು ಪಡೆದ ಕಲಾವಿದ. ಎರಡು ತಿಟ್ಟುಗಳ ಮೇಳಗಳಲ್ಲಿ ವೇಷಧಾರಿಯಾಗಿದ್ದರು. ಮೂಲ್ಕಿ ಮೇಳದಲ್ಲಿ ಐದು ವರ್ಷ, ಸುರತ್ಕಲ್ ಮೇಳದಲ್ಲಿ ಐದು ವರ್ಷ, ಇಡಗುಂಜಿ ಮೇಳದಲ್ಲಿ ಎರಡು ವರ್ಷ, ಪುನಃ ಸುರತ್ಕಲ್ ಮೇಳದಲ್ಲಿ ಹದಿನಾಲ್ಕು ವರ್ಷ ಸೇವೆ ಸಲ್ಲಿಸಿ, ನಂತರ ಸಾಲಿಗ್ರಾಮ, ಬಪ್ಪನಾಡು, ಶಿರಸಿ, ಕುಮಟಾ, ಕದ್ರಿ, ಕುಂಬ್ಳೆ, ಎಡನೀರು, ಬೆಳ್ಮಣ್ಣು ಮೇಳಗಳಲ್ಲಿ ವಿವಿಧ ಅವಧಿಗಳಲ್ಲಿ ಸ್ತ್ರೀವೇಷಧಾರಿಯಾಗಿ ಜನಮನ್ನಣೆಗೆ ಪಾತ್ರರಾಗಿ ಪೂರ್ಣಕಾಲಿಕ ಸೇವೆಯಿಂದ ನಿವೃತ್ತರಾಗಿದ್ದರೂ ಈಗಲೂ ಅಲ್ಲಲ್ಲಿ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ತನ್ನ ಯಕ್ಷಜೀವನದ ಅರುವತ್ತು ವಸಂತಗಳನ್ನು ಪೂರೈಸಿದವರು.


                         

ಪ್ರಶಸ್ತಿಗಳು : ಯಕ್ಷರಂಗದಲ್ಲಿ ಪ್ರೇಕ್ಷಕರ ಹೃದಯದಲ್ಲಿ ಸಂಚಲನ ಮೂಡಿಸಿದ ಕೊಕ್ಕಡ ಈಶ್ವರ ಭಟ್ಟರು ನಿಜಜೀವನದಲ್ಲಿ ಸರಳ, ಮೃದು, ಮಿತಭಾಷಿ. ತನ್ನ ಸಾಧನೆ, ಸಾಮರ್ಥ್ಯಗಳನ್ನು ಹೇಳಿಕೊಳ್ಳದ ಸಂಕೋಚ ಸ್ವಭಾವ ಅವರದು. ಅವರಿಗೆ ಬಂದ ಪ್ರಶಸ್ತಿಗಳು ಹಲವಾರು.


                      ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸನ್ಮಾನ, ಶ್ರೀ ವೀರಾಂಜನೇಯ ಸ್ವಾಮಿ ಪ್ರತಿಷ್ಠಾನ ಕೋಡಪದವು, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಶೇಣಿ ಸಂಸ್ಮರಣ ಪ್ರಶಸ್ತಿ, ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಮ್, ಎಡನೀರು ಮಠ ಸಂಮಾನ, ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ದ. ಕ. ಜಿಲ್ಲಾ ಯಕ್ಷ ಪ್ರತಿಷ್ಠಾನ, ಪಡ್ರೆ ಚಂದು ಸ್ಮಾರಕ ಪ್ರಶಸ್ತಿ ಹಾಗೂ ಹತ್ತು ಹಲವಾರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments