Saturday, January 18, 2025
Homeಯಕ್ಷಗಾನಮೋಹನ ಬೈಪಡಿತ್ತಾಯ - ಯಕ್ಷಗಾನದ ಓರ್ವ ಸಮರ್ಥ ಹಿಮ್ಮೇಳ ಶಿಕ್ಷಕ (Mohana Baipadithaya)

ಮೋಹನ ಬೈಪಡಿತ್ತಾಯ – ಯಕ್ಷಗಾನದ ಓರ್ವ ಸಮರ್ಥ ಹಿಮ್ಮೇಳ ಶಿಕ್ಷಕ (Mohana Baipadithaya)

ಅದು ಉಜಿರೆಯ ಕೇಂದ್ರ ಭಾಗ. ಶ್ರೀ ಜನಾರ್ದನ ಸ್ವಾಮಿಯ ದಿವ್ಯಸನ್ನಿಧಿ. ಶ್ರೀ ಜನಾರ್ದನ ಸ್ವಾಮಿ ದೇವಳದ ಎದುರುಭಾಗದ ಒಂದು ಕಟ್ಟಡದಲ್ಲಿ ಯಕ್ಷಗಾನ ಹಿಮ್ಮೇಳ ಕಲಿಕಾ ಕೇಂದ್ರವಿದೆ. ಅತ್ತಿತ್ತ ನೋಡುತ್ತಾ ಅಳುಕಿನಿಂದಲೇ ಒಳಪ್ರವೇಶಿಸಿದಾಗ ಆಕರ್ಷಕ ವ್ಯಕ್ತಿತ್ವದ ಮಹಾನುಭಾವರೊಬ್ಬರು ಚೆಂಡೆಯ ಕೋಲುಗಳಿಂದ ಎತ್ತರದ ಮರದ ಮಣೆಯೊಂದಕ್ಕೆ ತಾಳಗಳನ್ನು ಬಾರಿಸುತ್ತಾ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದನ್ನು ಕಾಣಬಹುದು. ಕಲಿಯುವವರ ಜೊತೆಗೆ ತಾನೂ ಒಬ್ಬ ಕಲಿಯುವವನಂತೆಯೇ ಕಾಣುತ್ತಾರೆ.

ಅವರೇ ಯಕ್ಷಗಾನದ ಶಾಸ್ತ್ರೀಯ ಹಿಮ್ಮೇಳ ವಾದಕ, ಭಾಗವತ, ಹಿಮ್ಮೇಳದ ಎಲ್ಲಾ ಅಂಗಗಳನ್ನೂ ಕರತಲಾಮಲಕ ಮಾಡಿಕೊಂಡ ಶ್ರೀ ಮೋಹನ ಬೈಪಾಡಿತ್ತಾಯರು.   ಶ್ರೀ ಮೋಹನ ಬೈಪಾಡಿತ್ತಾಯರು ಒಂದು ಕಾಲದಲ್ಲಿ ಅಂದರೆ 1980ರ ನಂತರ ಯಕ್ಷರಂಗಕ್ಕೆ ಬಹಳ ಪರಿಚಿತ ಹೆಸರು. ಯಕ್ಷರಂಗದ ಔನ್ನತ್ಯದ ಸಾಧನೆಯಲ್ಲಿರುವಾಗಲೇ ದಿಢೀರ್ ಬಂದೊದಗಿದ ಅಪಘಾತದ ಆಪತ್ತು ಅವರ ಜೀವನದ ದೊಡ್ಡ ತಿರುವು. ಈ ಅಪಘಾತ ಕಲಾಪ್ರದರ್ಶನದ ಸಾಧನೆಗೆ ತೊಡಕುಂಟುಮಾಡಿದರೂ ಅವರ ಮನೋಧೈರ್ಯ, ಛಲ ಅವರನ್ನು ಸಾಧನೆಯ ಹಾದಿಯಲ್ಲಿ ಮುನ್ನಡೆಯುವಂತೆ ಪ್ರೇರೇಪಿಸಿತು.

ಪ್ರದರ್ಶನಗಳಲ್ಲಿ ಭಾಗವಹಿಸದಿದ್ದರೇನಂತೆ, ಪ್ರದರ್ಶನಕ್ಕೆ ಪೂರಕವಾದ ಪ್ರತಿಭೆಗಳ ನಿರ್ಮಾಣದ ಸಾಹಸಕ್ಕೆ ಕೈ ಹಾಕಿದರು. ಅವರ ಪ್ರಯತ್ನದ ಫಲವೇ ನಮ್ಮ ಕಣ್ಣ ಮುಂದಿದೆ. ಯಕ್ಷರಂಗದಲ್ಲಿ ಅವರ ಶಿಷ್ಯಂದಿರು ಮಿಂಚುತ್ತಿದ್ದಾರೆ. ತೆರೆಮರೆಯಲ್ಲಿ ಅವರ ಕೈಂಕರ್ಯವನ್ನು ಜನ ಗುರುತಿಸಿದ್ದಾರೆ. ಮೋಹನ ಬೈಪಾಡಿತ್ತಾಯರು ನಡೆಸುತ್ತಿರುವ ಹಿಮ್ಮೇಳ ತರಗತಿಗಳಲ್ಲಿ ಹಲವಾರು ಯಕ್ಷಗಾನ ಕಲಾಸಕ್ತರೂ ಕಲಿಯುತ್ತಿದ್ದಾರೆ. ಅವರ ಗರಡಿಯಲ್ಲಿ ಹಲವರು ಪಳಗಿದ್ದಾರೆ. 

ರಾಮಕೃಷ್ಣ ಬೈಪಾಡಿತ್ತಾಯ ಮತ್ತು ಪದ್ಮಾವತಿ ಅಮ್ಮ ದಂಪತಿಯ ಮಗನಾಗಿ 1952ರಲ್ಲಿ ಕಡಬದಲ್ಲಿ ಜನಿಸಿದ ಮೋಹನ ಬೈಪಾಡಿತ್ತಾಯರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಡಬದಲ್ಲಿಯೂ, ಪ್ರೌಢಶಿಕ್ಷಣವನ್ನು ರಾಮಕುಂಜದಲ್ಲಿಯೂ, ಪದವಿಪೂರ್ವ ಶಿಕ್ಷಣ ಪೂರ್ಣಪ್ರಜ್ಞ ಕಾಲೇಜಿನಲ್ಲಿಯೂ ಪಡೆದರು. ಇವರ ಒಡಹುಟ್ಟಿದವರು ಹಿರಿಯ ಸಹೋದರ ಖ್ಯಾತ ಮದ್ದಳೆವಾದಕರಾದ ಶ್ರೀ ಹರಿನಾರಾಯಣ ಬೈಪಾಡಿತ್ತಾಯರ ಸಹಿತ ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರು. ಮೋಹನ ಬೈಪಡಿತ್ತಾಯರ  ಧರ್ಮಪತ್ನಿ ಶ್ರೀಮತಿ ಲಲಿತಾ ಬೈಪಾಡಿತ್ತಾಯ, ಇಬ್ಬರು ಗಂಡುಮಕ್ಕಳು ಮತ್ತು ಓರ್ವ ಪುತ್ರಿ ಮಮತಾ ಮತ್ತು ಅಳಿಯ ಶ್ರೀ ರಾಘವೇಂದ್ರ ಕ್ಯಾಂಪ್ಕೋ ಸಂಸ್ಥೆಯಲ್ಲಿ ವ್ಯವಸ್ಥಾಪಕರು. 

 
ಕಾಲೇಜು ಶಿಕ್ಷಣ ನಿಲ್ಲಿಸಿದ ಸಮಯದಲ್ಲಿ ಮೋಹನ ಬೈಪಡಿತ್ತಾಯರ ಮನೆಯಲ್ಲಿ ಯಕ್ಷಗಾನದ ಕಂಪು ಹರಡತೊಡಗಿತ್ತು. ಅಣ್ಣ ಹರಿನಾರಾಯಣ ಬೈಪಾಡಿತ್ತಾಯರಿಗೆ ಯಕ್ಷಗಾನ ಕಲಿಸುವುದನ್ನು ನೋಡಿ ಅದರ ಬಗ್ಗೆ ಇವರಿಗೂ ಆಸಕ್ತಿ ಬೆಳೆಯಿತು. ಕಲಿಯಬೇಕೆಂಬ ಆಸಕ್ತಿಯಿದ್ದುದರಿಂದ ಅಣ್ಣನಿಗೆ ಕಲಿಸುವಾಗ ಅವರಷ್ಟಕ್ಕೆ ತಾಳಗಳ ಅಭ್ಯಾಸ ಮಾಡಿಕೊಂಡಿರುತ್ತಿದ್ದರು. ಅಣ್ಣನ ಕಲಿಕೆಯ ನಂತರ ಇವರ ಆಸಕ್ತಿಯನ್ನು ಕಂಡು ಅಣ್ಣ ಹರಿನಾರಾಯಣ ಬೈಪಡಿತ್ತಾಯರೇ ಮೋಹನ ಬೈಪಡಿತ್ತಾಯರಿಗೆ ಪ್ರಥಮ ಪಾಠ ಹೇಳಿಕೊಟ್ಟರು. ಆದುದರಿಂದ ಯಕ್ಷಗಾನಕ್ಕೆ ಅಣ್ಣನೇ ಇವರಿಗೆ ಮೊದಲ ಗುರು. 1968-69ರಲ್ಲಿ ಇವರು ಯಕ್ಷಗಾನ ಕಲಾ ವ್ಯವಸಾಯ ಪ್ರಾರಂಭಿಸಿದ್ದು. ಕಡಬದ ಗಣೇಶ ಯಕ್ಷಗಾನ ಸಂಘದಲ್ಲಿ ಹವ್ಯಾಸಿ ಕಲಾವಿದನಾಗಿಯೇ ಸುಮಾರು 10 ವರ್ಷ ಭಾಗವಹಿಸಿದ್ದರು. ಸ್ವಂತ ಜಾಗ, ಮನೆ ಇಲ್ಲದೆ ಬಡತನದಲ್ಲಿ ಬೆಳೆದಿದ್ದರೂ ಯಕ್ಷಗಾನದ ಆಸಕ್ತಿ ಮಾತ್ರ ಅವರನ್ನು ಸೆಳೆಯಿತು. ಯಕ್ಷಗಾನವನ್ನೇ ಜೀವನೋಪಾಯವನ್ನಾಗಿ ಮಾಡಿಕೊಂಡರು. ಅಣ್ಣ ತಮ್ಮಂದಿರಿಬ್ಬರೂ ಹವ್ಯಾಸಿ ಕಲಾವಿದರಾಗಿ, ಯಕ್ಷಗಾನ ತರಗತಿಗಳನ್ನೂ ಮಾಡುತ್ತಿದ್ದರು. ಇವರ ಅಣ್ಣ ಹರಿನಾರಾಯಣ ಬೈಪಾಡಿತ್ತಾಯರ ಯಕ್ಷಗಾನ ತರಗತಿ, ತರಬೇತಿಗಳಿಂದ ಹಲವು ಶಿಷ್ಯಂದಿರು ತಯಾರಾದರು.

ಕಡಬ ನಾರಾಯಣ ಆಚಾರ್ಯರಿಗೆ ಮೃದಂಗದ ಪಾಠ ಅಣ್ಣನಿಂದ ಮತ್ತು ಚೆಂಡೆಯ ಪಾಠ ಮೋಹನ ಬೈಪಾಡಿತ್ತಾಯರಿಂದಲೂ ಆಗಿತ್ತು. ಮೋಹನ ಬೈಪಡಿತ್ತಾಯರಿಗೆ ಯಕ್ಷಗಾನದ ಆಸಕ್ತಿ ಶಾಲಾ ದಿನಗಳಲ್ಲಿರುವಾಗಲೇ ಇತ್ತು. ಪಿ.ಯು.ಸಿ. ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ನಂತರ ಯಕ್ಷಗಾನವೇ ಉಸಿರಾಯಿತು. ಆದಿಸುಬ್ರಹ್ಮಣ್ಯ ಮೇಳದಲ್ಲಿರುವಾಗಲೇ ಚೆಂಡೆ, ಮದ್ದಳೆ ಬಾರಿಸುತ್ತಿದ್ದರು. ಆಮೇಲೆ ಭಾಗವತಿಕೆಗೆ ಅಗತ್ಯ ಬಿದ್ದಾಗ ಜನ ಇವರನ್ನು ಭಾಗವತಿಕೆ ಮಾಡುವಂತೆ ಪ್ರೇರೇಪಿಸಿದರು.
 ನಂತರ ಸುಮಾರು 10 ವರ್ಷಗಳ ಕಾಲ ಹವ್ಯಾಸಿ ಕಲಾವಿದನಾಗಿಯೇ ಮುಂದುವರಿದರು. 

ಇವರಿಗೆ ಸುಮಾರು 25 ವರ್ಷಗಳ ನಂತರ ಮದುವೆಯ ಕೇಳಿಕೆ ಬಂತು. ಮದುವೆಗೂ ಮೊದಲು ಮೋಹನ ಬೈಪಡಿತ್ತಾಯರು ವೇಣೂರು ಮೇಳದಲ್ಲಿದ್ದರು. ಆಗ ಅದರಲ್ಲಿ ಶೀನಪ್ಪ ರೈ, ಕಾಂಚನ ಸಂಜೀವ ರೈ ಮೊದಲಾದವರಿದ್ದರು. ಮೊದಲ ತಿರುಗಾಟ ಮದ್ದಳೆಗಾರನಾಗಿ ಆ ಮೇಳದಲ್ಲಿ 4 ರೂಪಾಯಿ ಸಂಬಳಕ್ಕೆ ಆಯಿತು. ಆಗೆಲ್ಲಾ ಪೆಟ್ರೋಮ್ಯಾಕ್ಸ್ ಬೆಳಕಿನಲ್ಲಿ ಆಟದ ಪ್ರದರ್ಶನ ನಡೆಯುತ್ತಿತ್ತು. ಆಮೇಲೆ ಮೇಳದ ತಿರುಗಾಟ ನಿಲ್ಲಿಸಿದರು. ಹವ್ಯಾಸಿಯಾಗಿ ಮುಂದುವರಿಯುತ್ತಿರುವಾಗ ಮಾರ್ಪನಡ್ಕದಲ್ಲಿ ಆಟ ಆಯಿತು. ‘ತ್ರಿಜನ್ಮ ಮೋಕ್ಷ’ ಪ್ರಸಂಗದಲ್ಲಿ ಇವರು ಅನಿವಾರ್ಯವಾಗಿ ಪದ್ಯ ಹೇಳಬೇಕಾಯಿತು. ಅಲ್ಲಿ ಬೈಪಡಿತ್ತಾಯರಿಗೆ ಹುಡುಗಿ ಕೊಡಲು ಪ್ರಪೋಸ್ ಮಾಡಿದವರೂ ಆಟಕ್ಕೆ ಬಂದಿದ್ದರು. 

ಮದುವೆಯ ನಂತರ ಸುಬ್ರಹ್ಮಣ್ಯ ಮೇಳದಲ್ಲಿ ತಿರುಗಾಟ ಪ್ರಾರಂಭವಾಯಿತು. ನಾಲ್ಕು ವರ್ಷ ಸುಬ್ರಹ್ಮಣ್ಯ ಮೇಳದಲ್ಲಿದ್ದರು. ಇವರ ಪದ್ಯದ ಜೊತೆಗೆ ಕಿರಿಯ ಸಹೋದರ ಕೇಶವ ಬೈಪಾಡಿತ್ತಾಯ ಮದ್ದಳೆ ಬಾರಿಸುತ್ತಿದ್ದರು. ಹೀಗೆ ಒಂದೇ ಪ್ರದರ್ಶನದಲ್ಲಿ ಮದ್ದಳೆ, ಚೆಂಡೆ ಮತ್ತು ಭಾಗವತಿಕೆ ಈ ಮೂರನ್ನೂ ಪ್ರತಿದಿನ ಮಾಡುತ್ತಿದ್ದರು. ಅನಿವಾರ್ಯ ಕಾರಣಗಳಿಂದಾಗಿ ಆಮೇಲೆ ನಂದಾವರ ಮೇಳಕ್ಕೆ ಸೇರಿದರು. ಆ ಮೇಳದಲ್ಲಿ ಕುಬಣೂರು ಶ್ರೀಧರ ರಾಯರು ಮತ್ತು ಮೋಹನ ಬೈಪಡಿತ್ತಾಯರು ಭಾಗವತಿಕೆ ಮಾಡುತ್ತಿದ್ದರು. ಮೂರು ವರ್ಷ ಆ ಮೇಳದಲ್ಲಿದ್ದರು.  ಆಮೇಲೆ ಶೇಖರ್ ಶೆಟ್ಟಿ ಸಂಚಾಲಕತ್ವದ ಬಪ್ಪನಾಡು ಮೇಳದಲ್ಲಿ ಎರಡು ವರ್ಷ ತಿರುಗಾಟ.

ಆಮೇಲೆ 1987ರಲ್ಲಿ ಶೇಖರ ಶೆಟ್ಟಿಯವರ ಬೆಳ್ಮಣ್ ಮೇಳದ ಹಿಮ್ಮೇಳ ಕಲಾವಿದರೊಬ್ಬರು ರಜೆಯಲ್ಲಿದ್ದುದರಿಂದ ಬದಲಿ ಕಲಾವಿದರಾಗಿ ನಾಲ್ಕು ದಿನ ಭಾಗವಹಿಸಲು ಹೋಗಿದ್ದರು. ಮೇ 17ರಂದು ಆಟ ಮುಗಿಸಿ ಹಿಂತಿರುಗುವಾಗ ಇವರ ವಾಹನ ಅಪಘಾತಕ್ಕೀಡಾದದ್ದು ದುರಂತವೆಂದೇ ಹೇಳಬೇಕು. ಗಂಭೀರ ಸ್ಥಿತಿಯಲ್ಲಿದ್ದ ಮೋಹನ ಬೈಪಡಿತ್ತಾಯರು ಬದುಕಿ ಉಳಿದುದೇ ಪವಾಡವೆಂದು ಹೇಳಬೇಕು. ಆಮೇಲೆ ಒಂದು ವರ್ಷ ಆಸ್ಪತ್ರೆವಾಸದಲ್ಲಿದ್ದ ಅವರಿಗೆ  7 ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದರು. ಆಮೇಲೆ ಎರಡು ವರ್ಷ ಮನೆಯಲ್ಲಿದಯೇ ಇದ್ದರು. ಆ ಸಂದರ್ಭದಲ್ಲಿ ಇವರ ಜೊತೆಗಿದ್ದ ಶಿಷ್ಯಂದಿರಲ್ಲಿ ಒಬ್ಬರಾದ ಪದ್ಮನಾಭ ಉಪಾಧ್ಯಾಯ ಭಾಗಶಃ ಇವರಿಂದ ಹಿಮ್ಮೇಳವಾದನ ಮತ್ತು ಭಾಗವತಿಕೆ ಕಲಿತಿದ್ದರು.

ಆಮೇಲೆ ಒಂದೆರಡು ಮೇಳಗಳಲ್ಲಿ ಸ್ವಲ್ಪ ಕಾಲ ದುಡಿದು 1994ರಲ್ಲಿ ಮೇಳದ ಸಹವಾಸ ಸಾಕು ಎಂದು ತೀರ್ಮಾನಿಸಿ ಹಿಮ್ಮೇಳ ತರಗತಿಗಳನ್ನು ನಡೆಸಿ ಹಲವಾರು ಆಸಕ್ತರಿಗೆ ಯಕ್ಷಗಾನದ ಪಾಠ ಮಾಡತೊಡಗಿದರು. ಈ ನಡುವೆ 2002ರಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಅವರ ಅನುಗ್ರಹದ ಮೇರೆಗೆ ಮುಂಬಯಿಗೆ ತೆರಳಿ ಅಲ್ಲಿನ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಕಾರ್ಯನಿಮಿತ್ತ ವಾಸ ಮಾಡತೊಡಗಿದರು. ಆ ಸಮಯದಲ್ಲಿಯೂ ಅಲ್ಲಿ ನೆರೊಲ್ ಶನಿಮಂದಿರ, ವಿಕ್ರೋಲಿ ಕನ್ನಡ ಸಂಘಗಳಲ್ಲಿ ಯಕ್ಷಗಾನ ಹಿಮ್ಮೇಳ ತರಬೇತಿ ಮತ್ತು ತರಗತಿಗಳನ್ನೂ ನಡೆಸಿದರು. ಅಲ್ಲಿನ ಶ್ರೀ ಗುರುನಾರಾಯಣ ಯಕ್ಷಗಾನ ಕಲಾಮಂಡಳಿ, ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ, ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ- ಮೊದಲಾದ ಸಂಘಗಳಲ್ಲಿ ಭಾಗವತರಾಗಿಯೂ ಸೇವೆ ಸಲ್ಲಿಸಿದರು.

ಒಂದೆರಡು ವರ್ಷಗಳ ನಂತರ ಮುಂಬಯಿಯಿಂದ ಮರಳಿ ಊರಿಗೆ ವಾಸ್ತವ್ಯ ಬದಲಾಯಿಸುವ ಆ ಸಮಯದಲ್ಲಿ ಅಲ್ಲಿನ ಅಭಿಮಾನಿಗಳು ಮತ್ತು ಶಿಷ್ಯವೃಂದದವರು ನಡೆಸಿದ ಬೀಳ್ಕೊಡುಗೆ ಅವಿಸ್ಮರಣೀಯ. ಆ ಅಭಿಮಾನಕ್ಕಾಗಿ ಮೋಹನ ಬೈಪಡಿತ್ತಾಯರು ಈಗಲೂ ಪ್ರತಿ ವರ್ಷ ಮುಂಬಯಿಗೆ ಹೋಗುತ್ತಿರುತ್ತಾರೆ.
“ಹೆಚ್ಚಾಗಿ ನಾನು ಕೆಲವು ವಿಷಯಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಈಗೀಗ ಯಕ್ಷಗಾನದ ಸರ್ವಾಂಗಗಳಲ್ಲಿಯೂ ಅನೇಕ ಬದಲಾವಣೆಗಳಾಗುತ್ತಾ ಉಂಟು. ಒಳ್ಳೆಯ ಹಾಡುಗಾರರೆಲ್ಲಾ ಭಾಗವತರಾಗಲು ಸಾಧ್ಯವಿಲ್ಲ. ಒಳ್ಳೆಯ ಹಾಡುಗಾರರು ನಮ್ಮಲ್ಲಿ ತುಂಬಾ ಮಂದಿ ಇದ್ದಾರೆ. ಆದರೆ ಭಾಗವತರಾಗಲು ಹೆಚ್ಚಿನ ಸಾಧನೆ ಅಗತ್ಯ. ಅಗರಿ, ಕಡತೋಕ ಮೊದಲಾದವರು ಉತ್ತಮ ನಿರ್ದೇಶನ ಸಾಮರ್ಥ್ಯವುಳ್ಳ ಭಾಗವತರು. ಶೇಣಿಯವರಂತಹಾ ಅದ್ಭುತ ಪಾಂಡಿತ್ಯವುಳ್ಳ ಕಲಾವಿದರಿಗೂ ನಿರ್ದೇಶಿಸಬಲ್ಲ ಸಾಮರ್ಥ್ಯ ಅಗರಿ ಭಾಗವತರಲ್ಲಿತ್ತು. ಹೊಸ ಆವಿಷ್ಕಾರ ಮತ್ತು ಬದಲಾವಣೆಗಳಿಗೆ ಸ್ವಾಗತ. ಆದರೆ ಚೌಕಟ್ಟು ಮೀರಕೂಡದು. ಕಡತೋಕ ಮಂಜುನಾಥ ಭಾಗವತರು ಮುಮ್ಮೇಳ ಕಲಾವಿದರ ಸಾಮರ್ಥ್ಯವನ್ನನುಸರಿಸಿ ಪದ್ಯದ ಆವರ್ತನವನ್ನು ಮಾಡುತ್ತಿದ್ದರು. ಇದು ಭಾಗವತರ ಸಾಮರ್ಥ್ಯ ಮತ್ತು ಜಾಣ್ಮೆ. ಈ ವಿಷಯದಲ್ಲಿ ಹೆಚ್ಚು ವಿಮರ್ಶೆ ಇಲ್ಲ. ಕೇಳಿದರೆ ಜನರಿಗೆ ಬೇಕಾದ್ದನ್ನು ನಾವು ಕೊಡ್ತೇವೆ ಎಂದು ಹೇಳುತ್ತಾರೆ. ಜನರು ಬೇಕು ಎಂದು ಚೌಕಿಯಲ್ಲಿ ಬಂದು ಹೇಳುವುದಿಲ್ಲ. ನಾವು ಕೊಟ್ಟ ಕಾರಣದಿಂದಲೇ ಅಲ್ಲವೇ ಜನರಿಗೆ ಗೊತ್ತಾಗುವುದು?” ಎಂದು ಮೋಹನ ಬೈಪಡಿತ್ತಾಯರು ಹೇಳುತ್ತಾರೆ. 

ಅಪಘಾತದ ನಂತರ ಕಲಾಪ್ರದರ್ಶನಗಳಲ್ಲಿ ಭಾಗವಹಿಸಲು ತುಂಬಾ ಕಷ್ಟವಾಗುತ್ತದೆ.  ಬೈಪಡಿತ್ತಾಯರು ಪ್ರದರ್ಶನಗಳ ಭಾಗವಹಿಸುವಿಕೆಯಿಂದ ವಿಮುಖನಾಗಲು ಇದೂ ಒಂದು ಕಾರಣ. ಈಗ ಎಲ್ಲೆಲ್ಲೂ ಹೊಸಗಾಳಿ, ಹೊಸತನದ ಆವಿಷ್ಕಾರಗಳು ನಡೆಯುತ್ತಿರುವುದರಿಂದ ಯಕ್ಷಗಾನ ಕಲಿತವರು ತಾನು ಕಲಿತ ಕೂಡಲೇ ಹೊಸ ಪ್ರಯೋಗಗಳಿಗೆ ತನ್ನನ್ನು ತಾನೇ ಒಡ್ಡಿಕೊಳ್ಳುವುದರಿಂದ ಅದಕ್ಕೆ ಹೊಂದಿಕೊಳ್ಳುವುದೂ ಕಷ್ಟವಾಗಬಹುದು. ಆದರೆ ಕಲಾಸೇವೆಗೆ ಅವಕಾಶವಿದ್ದೇ ಇದೆ. ಈಗ ಇವರು ಮಾಡುತ್ತಿರುವುದೂ ಕಲಾಸೇವೆಯೇ. ನೂರಾರು ಮಂದಿ ವಿದ್ಯಾರ್ಥಿಗಳಿಗೆ ಕಲೆಯನ್ನು ಹೇಳಿಕೊಟ್ಟಿದ್ದಾರೆ. 


“ಉಜಿರೆಯಲ್ಲಿ ತರಗತಿ ನಡೆಸಲು ಸ್ಥಳಾವಕಾಶ ನೀಡಿ ಸಹಕರಿಸಿದವರು ಶ್ರೀ ವಿಜಯರಾಘವ ಪಡ್ವೆಟ್ನಾಯರು. ಅವರ ಸಹಕಾರ ಮತ್ತು ಆಶೀರ್ವಾದದಿಂದಲೇ ಈ ತರಗತಿ ನಡೆಸಲು ಸಾಧ್ಯವಾಯಿತು. ಈಗ ಮೂರು ವರ್ಷಗಳಿಂದ ಅಂದರೆ 2015ರಿಂದ ಈ ತರಗತಿಯನ್ನು ನಡೆಸುತ್ತಿದ್ದೇನೆ. ರಮೇಶ್ ಭಟ್ ಪುತ್ತೂರು, ಜಗನ್ನಿವಾಸ ರಾವ್, ರಾಮಚಂದ್ರ ಅರ್ಬಿತ್ತಾಯ, ರಾಮಪ್ರಸಾದ ಕಲ್ಲೂರಾಯ, ಅಮೋಘ ಕುಂಟಿನಿ, ಶ್ರೀಶ ನಿಡ್ಲೆ, ಮಹೇಶ್ ಕನ್ಯಾಡಿ ಇವರಿಗೆಲ್ಲಾ ಹೇಳಿಕೊಟ್ಟಿದ್ದೇನೆ. ಅಲ್ಲದೆ ಕಡಬ ನಾರಾಯಣ ಆಚಾರ್ಯ, ಪದ್ಮನಾಭ ಉಪಾಧ್ಯಾಯ, ಕೃಷ್ಣಪ್ರಕಾಶ ಉಳಿತ್ತಾಯರಿಗೂ ನನ್ನ ಅನುಭವಗಳನ್ನು ಧಾರೆ ಎರೆದಿದ್ದೇನೆ. ಇವರಲ್ಲದೆ ಇನ್ನೂ ಹಲವಾರು ಮಂದಿ ಶಿಷ್ಯರು ಹವ್ಯಾಸಿ ರಂಗದಲ್ಲಿಯೂ ಮಿಂಚುತ್ತಿದ್ದಾರೆ” ಎಂದು ಬೈಪಡಿತ್ತಾಯರು ತಿಳಿಸಿದರು. 

ಅಣ್ಣ ಹರಿನಾರಾಯಣ ಬೈಪಾಡಿತ್ತಾಯ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಪದ್ಯಾಣ ಶಂಕರನಾರಾಯಣ ಭಟ್, ಕುದ್ರೆಕೋಡ್ಲು ರಾಮ ಭಟ್ ಹಾಗೂ ನನ್ನ ಹಿಂದಿನ ಹೆಚ್ಚಿನ ಎಲ್ಲಾ ಮದ್ದಳೆವಾದಕರನ್ನೂ ಮೆಚ್ಚುವ ಮೋಹನ ಬೈಪಾಡಿತ್ತಾಯರ ಒಡನಾಟದ ಕಲಾವಿದರು ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪ್ರಭಾಕರ ಗೋರೆ, ಚೇವಾರು ಶಂಕರ ಕಾಮತ್, ಚೇವಾರು ರಾಮಕೃಷ್ಣ ಕಾರಂತ್, ಲಕ್ಷ್ಮೀಶ ಅಮ್ಮಣ್ಣಾಯರು, ಅಡೂರು ಗಣೇಶ್ ರಾವ್, ಪದ್ಮನಾಭ ಉಪಾಧ್ಯಾಯ ಹಾಗೂ ಪ್ರಸ್ತುತ ರಂಗದಲ್ಲಿರುವ ಹಲವು ಹಿಮ್ಮೇಳ ಕಲಾವಿದರು.
“1987ರಲ್ಲಿ ಬೆಳ್ಮಣ್ ಮೇಳದಲ್ಲಿದ್ದಾಗ ನಡೆದ ವಾಹನ ಅಪಘಾತ ನನ್ನ ಜೀವನದಲ್ಲಿ ಮುಖ್ಯ ತಿರುವು. 2002ರ ನಂತರ ನಾನು ಮುಂಬಯಿಯಲ್ಲಿ ಹಲವಾರು ಮಂದಿಗೆ ಹಿಮ್ಮೇಳ ತರಗತಿಯನ್ನು ನಡೆಸುತ್ತಿದ್ದೆ. ಮುಂಬಯಿಯಿಂದ ಮರಳುವಾಗ ಶಿಷ್ಯವೃಂದ ಮತ್ತು ಅಭಿಮಾನಿಗಳು ಬೀಳ್ಕೊಡುಗೆ ಸಮಾರಂಭದಲ್ಲಿ ಸತ್ಕರಿಸಿದ್ದು ಮರೆಯಲಾರದ ಘಟನೆ” ಎಂದು ಬೈಪಡಿತ್ತಾಯರು ಹೇಳುತ್ತಾರೆ. 

ಪ್ರಸ್ತುತ ಹಲವಾರು ವರ್ಷಗಳಿಂದ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಕಟ್ಟಡವೊಂದರಲ್ಲಿ ಯಕ್ಷಗಾನ ತರಗತಿಗಳನ್ನು ನಿರಂತರವಾಗಿ ನಡೆಸುತ್ತಲೇ ಇದ್ದಾರೆ. ಈ ಯಕ್ಷಗಾನ ತರಗತಿಯನ್ನು ನಡೆಸುವುದಕ್ಕೆ ದೇವಳದ ಧರ್ಮದರ್ಶಿ ಶ್ರೀ ವಿಜಯರಾಘವ ಪಡ್ವೆಟ್ನಾಯರ ಸಹಕಾರದಿಂದಲೇ ಸಾಧ್ಯ ವಾಯಿತು ಎಂದು ಮೋಹನ ಬೈಪಾಡಿತ್ತಾಯರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments