Saturday, January 18, 2025
Homeಯಕ್ಷಗಾನವಿದ್ವಾನ್ ವಳಕ್ಕುಂಜ ನರಸಿಂಹ ಭಟ್ಟರ ‘ಕಾಶ್ಮೀರ ಕಾಳಗ’

ವಿದ್ವಾನ್ ವಳಕ್ಕುಂಜ ನರಸಿಂಹ ಭಟ್ಟರ ‘ಕಾಶ್ಮೀರ ಕಾಳಗ’

ಕವಿಹೃದಯ, ಕವಿಮನಸು, ಕವಿಸಮಯ- ಇವುಗಳೆಲ್ಲದರ ಬಗ್ಗೆ ಬಹಳಷ್ಟು ಕೇಳಿದ್ದೇವೆ. ಕೃತಿಯೊಂದನ್ನು ಹೊರತರುವುದು ಒಂಬತ್ತು ತಿಂಗಳು ಹೊತ್ತು ನೋವು ಅನುಭವಿಸಿ ಪ್ರಸವಿಸಿದಷ್ಟು ಪ್ರಯಾಸದ ಕೆಲಸ ಎಂದು ಹೇಳುವವರೂ ಇದ್ದಾರೆ. ಕೃತಿಯೊಂದು ಸುಂದರ ರೂಪ ಪಡೆಯಬೇಕಾದರೆ ‘ಕವಿ ಕಲ್ಪನೆ’ ಕೂಡಾ ಅಂದವಾದ ಉದ್ಯಾನವನದಲ್ಲಿ ವಿಹರಿಸಬೇಕಾಗುತ್ತದೆ.


      ಯಕ್ಷಗಾನ ನಿಂತಿರುವುದೇ ಪೌರಾಣಿಕ ಕಥೆಗಳ ಭದ್ರವಾದ ಅಡಿಪಾಯದ ಮೇಲೆ. ಹಾಗಂದ ಪುರಾಣೇತರ ಪ್ರಸಂಗಗಳು ಇಲ್ಲವೆಂದಲ್ಲ. ಈಗಂತೂ ಕಾಲ್ಪನಿಕ ಕಥೆಗಳದ್ದೇ ಸುಗ್ಗಿ. ಟೆಂಟ್ ಮೇಳಗಳಂತೂ ವರ್ಷಕ್ಕೊಂದು ಹೊಸ ಪ್ರಸಂಗದ ಕಥಾಹಂದರವನ್ನು ಹೆಣೆಯುತ್ತಿದೆ. ಹರಕೆ ಆಟದ ಮೇಳಗಳು ಮಾತ್ರ ತನ್ನ ಪೌರಾಣಿಕ ಪ್ರಸಂಗಗಳ ಇತಿಮಿತಿಯನ್ನು ದಾಟಿಲ್ಲವೆಂದು ಹೇಳಬಹುದು.


                   20ನೇ ಶತಮಾನದ ಉತ್ತರಾರ್ಧದಲ್ಲೇ ಹಲವು ಪೌರಾಣಿಕೇತರ ಪ್ರಸಂಗಗಳು ರಚನೆಯಾದುವು. ಸಿನಿಮಾ ಕತೆಗಳನ್ನಾಧರಿಸಿದ ಪ್ರಸಂಗಗಳು, ಕಾಲ್ಪನಿಕ ಪ್ರಸಂಗಗಳು, ಜನಜಾಗೃತಿಯ ಸಂದೇಶವನ್ನು ಸಾರುವ ಪ್ರಸಂಗಗಳು. ಹೀಗೆ ಹತ್ತು ಹಲವು ಪೌರಾಣಿಕೇತರ ಪ್ರಸಂಗಗಳಿಂದ ಬೇರೆಯೇ ಆಗಿ ನಿಲ್ಲುವ ಪ್ರಸಂಗವೊಂದಿದೆ. ಅದುವೇ ಭಾರತ್-ಪಾಕ್ ಯುದ್ಧವನ್ನಾಧರಿಸಿ ರಚನೆಯಾದ ‘ಕಾಶ್ಮೀರ-ಕಾಳಗ’. ದಿ| ವಿದ್ವಾನ್ ವಳಕ್ಕುಂಜ ನರಸಿಂಹ ಭಟ್ಟರ ಸುಂದರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಪ್ರಸಂಗ ಅದ್ಭುತವೆಂದೇ ಹೇಳಬಹುದು.


        ಯುದ್ಧದ ನೈಜ ಚಿತ್ರಣವನ್ನು ಪ್ರತಿಬಿಂಬಿಸುತ್ತಾ ಓದುಗರಲ್ಲಿ ರೋಮಾಂಚನ ಉಂಟುಮಾಡಬಲ್ಲ ಸಾಮಥ್ರ್ಯ ಈ ಕಥಾನಕಕ್ಕಿದೆ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು. ವಳಕ್ಕುಂಜ ನರಸಿಂಹ ಭಟ್ಟರು ಈಗ ನಮ್ಮೊಡನಿಲ್ಲ. ಆದರೆ ಅವರು 1966ರಲ್ಲಿ ಬರೆದ ಈ ‘ಕಾಶ್ಮೀರ-ಕಾಳಗ’ ಎಂಬ ಯಕ್ಷಗಾನ ಪ್ರಸಂಗದ ಮುದ್ರಿತ ಪ್ರತಿಗಳೂ ಈಗ ದೊರೆಯಲಾರದು. ಆದರೆ ಅಂದು ಮುದ್ರಿತ ವಾದ ಪ್ರತಿಗಳು ಕೆಲವರು ಯಕ್ಷಾಭಿಮಾನಿಗಳಲ್ಲಿಯಾದರೂ ಉಳಿದುಕೊಂಡಿರಬಹುದು ಎಂಬ ಆಶಾವಾದವನ್ನು ವ್ಯಕ್ತಪಡಿಸುತ್ತಿದ್ದೇವೆ. ಆದರೆ ಈ ಪ್ರಸಂಗದ ಪ್ರತಿ ಈಗ ಅಂತರ್ಜಾಲದ ‘ಯಕ್ಷವಾಹಿನಿ’  ಪ್ರಸಂಗ ಮಾಹಿತಿ ಜಾಲತಾಣದಲ್ಲಿ ಲಭ್ಯವಿದೆ. 


                         ಶಿಕ್ಷಕ ವೃತ್ತಿ ಮತ್ತು ತಾಳಮದ್ದಳೆ ಅರ್ಥಧಾರಿಯಾಗಿ ಎರಡರಲ್ಲೂ ಸಮನ್ವಯತೆಯನ್ನು ಸಾಧಿಸುವುದರ ಜೊತೆಗೆ ವಿದ್ವಾನ್ ನರಸಿಂಹ ಭಟ್ಟರು ಪುರಾಣ ಪ್ರವಚನಗಳನ್ನು ನಡೆಸುತ್ತಿದ್ದರು. ಹಾಗೂ ಆ ಕಾಲದಲ್ಲಿ ಸ್ವಲ್ಪಮಟ್ಟಿಗೆ ಯಕ್ಷಗಾನ ಭಾಗವತರಾಗಿಯೂ ಗುರುತಿಸಿಕೊಂಡಿದ್ದರು.

ಕಲ್ಲಿಕೋಟೆ ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ. ಎ. ಪದವಿಯನ್ನು ಪಡೆದಿದ್ದ ಶ್ರೀಯುತರು ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಮತ್ತು ಕಾವೇರಿ ಕಾಲೇಜು, ಭಾಗಮಂಡಲ ಇಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.


       ಯಕ್ಷಗಾನ ಮತ್ತು ಶಿಕ್ಷಕ ವೃತ್ತಿ ಎರಡೂ ರಂಗಕ್ಕೂ ಇವರಿಂದ ಇನ್ನೂ ಹೆಚ್ಚಿನ ಸೇವೆ ಸಲ್ಲಬಹುದಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ಶ್ರವಣಶಕ್ತಿ ಕುಂಠಿತಗೊಂಡು ತಾನು ಅತಿಯಾಗಿ ಪ್ರೀತಿಸುತ್ತಿದ್ದ ಯಕ್ಷಗಾನ ಮತ್ತು ಶಿಕ್ಷಕ ವೃತ್ತಿ ಎರಡರಿಂದ ಅಕಾಲದಲ್ಲಿಯೇ ದೂರ ಉಳಿಯಬೇಕಾಗಿ ಬಂದದ್ದು ವಿಪರ್ಯಾಸವೆಂದೇ ಹೇಳಬೇಕು. ಒಂದೆರಡು ವರ್ಷಗಳ ಕಾಲ ಪರ್ಕಿನ್‍ಸನ್ ಎಂಬ ಕಾಯಿಲೆಯಿಂದ ಬಳಲಿ 2008ರಲ್ಲಿ ಅವರು ನಿಧನ ಹೊಂದಿದರು.


      ‘ಕಾಶ್ಮೀರ ಕಾಳಗ’ ಪ್ರಸಂಗ ಮುಖ್ಯವಾಗಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನ ಮಂತ್ರಿಗಳಾಗಿದ್ದ ಸಮಯದಲ್ಲಿ ನಡೆದ ಭಾರತ್-ಪಾಕಿಸ್ತಾನ ಯುದ್ಧದ ಚಿತ್ರಣದ ಕಥಾನಕ. ಒಡ್ಡೋಲಗದ ಪದ್ಯ ಹೀಗಿದೆ. ಝಂಪೆತಾಳದಲ್ಲಿ,
ಉತ್ತರದಿಶಾಭಾಗ ಕೊತ್ತಿ ಮೆರೆಯುವ ಢಿಲ್ಲಿ | ಪತ್ತನದ ಲೋಕಸಭೆಯೊಳಗೆ || ಮತ್ತೆ ಶಾಸ್ತ್ರಿಗಳೊಂದು ದಿನ ಚವನ ಮುಖ್ಯರಿಂ | ದಿತ್ತರೋಲಗನ ಜಯವೆನಲೂ ||
   ಮುಂದಕ್ಕೆ ಯುದ್ಧ ನಿಶ್ಚಯವಾಗಲು, ಪಾಕಿಸ್ತಾನದಲ್ಲಿ ನಡೆಯುವ ವಿದ್ಯಮಾನಗಳ ಚಿತ್ರಣ ಈ ರೀತಿ ಇದೆ. ತ್ರಿವುಡೆ ತಾಳದಲ್ಲಿ,
ಇತ್ತಲಿಂತೀ ತೆರೆದೊಳಿರುತಿರೆ | ಲತ್ತರಾವಲ್ಪಿಂಡಿ ನಗರಿಯೊ | ಳಿತ್ತನೋಲಗ ಭುಟ್ಟೊ ಸಹಿತಲಿ | ಮತ್ತೆಯೂಬ ||
ಈ ಪ್ರಸಂಗದುದ್ದಕ್ಕೂ ನಮಗೆ ಕಾಣಸಿಗುವುದು ಅತ್ಯಪೂರ್ವ ಪದ್ಯರಚನಾ ಕೌಶಲ. ಛಂದಸ್ಸು, ತಾಳಗಳಿಗೆ ಧಕ್ಕೆಯಾಗದಂತೆ ಸುಂದರವಾಗಿ ಪದಗಳನ್ನು ಜೋಡಿಸಲಾಗಿದೆ. ಪಾಕಿಸ್ತಾನೀಯರ ಹೆಸರುಗಳನ್ನು ಕೆಲವು ಅಸ್ತ್ರಗಳಾದ ಬಾಂಬು, ಟ್ಯಾಂಕರ್ ಮುಂತಾದ ಶಬ್ದಗಳನ್ನು ಹೆಣೆದಿರುವ ರೀತಿ ಚಂದವೇ ಚಂದ.
ಇನ್ನು ಕೊನೆಯಲ್ಲಿ ಬರುವ ಮಂಗಳ ಪದ್ಯವಂತೂ ತುಂಬಾ ಚೆನ್ನಾಗಿದೆ.
ರಾಧಾಕೃಷ್ಣಗೆ, ರಾಷ್ಟ್ರಾಧ್ಯಕ್ಷಗೆ | ಮೇದಿನಿಯೊಳು ಶಾಂತಿ ಸ್ಥಾಪಕಗೆ | ಸಾದರದಿಂದ ಪ್ರಧಾನಿ ಶಾಸ್ತ್ರಿಗಳಿಂಗೆ | ಮೋದದಿಂದಲಿ ಯುದ್ಧ ಕಾದಿ ಗೆದ್ದವರಿಂಗೆ || ಮಂಗಳಂ ಜಯ ಮಂಗಳಂ || ಹೀಗೆ ಈ ಪದ್ಯ ಮುಂದುವರಿದು ಪ್ರಸಂಗ ಸಮಾಪ್ತಿಯಾಗುತ್ತದೆ.


                       ಒಟ್ಟಿನಲ್ಲಿ ಆ ಕಾಲದಲ್ಲೇ ಒಳ್ಳೆಯ ಒಂದು ಪುರಾಣೇತರ ಪ್ರಸಂಗ ರಚಿಸುವಲ್ಲಿ ವಿದ್ವಾನ್ ನರಸಿಂಹ ಭಟ್ಟರು ಯಶಸ್ವಿಯಾಗಿದ್ದರು. ಯಕ್ಷಗಾನದಲ್ಲಿ ವಾಚಿಕ ಎಂಬುದು ಮೊದಲೇ ಸಿದ್ಧಪಡಿಸಿದ ಪಾಠಾಕ್ಷರಗಳಲ್ಲದ ಕಾರಣ ಪ್ರದರ್ಶನದ ಸಂದರ್ಭದಲ್ಲಿ ಕಲಾವಿದರು ಹೇಗೆ ಜಾಗರೂಕರಾಗಿರಬೇಕೆಂಬುದನ್ನು ಲೇಖಕರು ತಮ್ಮ ಮುನ್ನುಡಿಯಲ್ಲಿ ಹೀಗೆ ಎಚ್ಚರಿಸಿದ್ದಾರೆ.


‘‘ಜೀವಂತ ವ್ಯಕ್ತಿಗಳ ಪ್ರವೇಶವು ಇಲ್ಲಿ ಮುಖ್ಯವಾಗಿರುವುದರಿಂದ ಅವರ ವ್ಯಕ್ತಿತ್ವಕ್ಕೆ ಭಂಗ ಬಾರದಂತೆ ಕಲಾವಿದರು ಪ್ರದರ್ಶಿಸಬೇಕೆಂದು ವಿನಯಪೂರ್ವಕ ವಿಜ್ಞಾಪಿಸಿಕೊಳ್ಳುತ್ತೇನೆ. ಭಾರತವು ಒಂದೇ ವ್ಯಕ್ತಿಯಾಗಿ, ಶಕ್ತಿಯಾಗಿ ಜಾಗೃತವಾಗುವಂತೆ ಜನರಲ್ಲಿ ಪ್ರಚೋದನೆಯುಂಟಾದರೆ ಈ ಕೃತಿಯ ಉದ್ದೇಶವು ಫಲಿಸುವುದು.’’
ಎಲ್ಲಿಯೂ ವಿವಾದಕ್ಕೆಡೆ ಮಾಡಿಕೊಡಬಾರದೆಂದು ಕಲಾವಿದರಲ್ಲಿ ನಯವಾಗಿ ಮತ್ತು ಅಷ್ಟೇ ಮಾರ್ಮಿಕವಾಗಿ ಬಿನ್ನವಿಸಿದ್ದಾರೆ. ಕೆಲವೊಮ್ಮೆ ಹಾಸ್ಯಾಸ್ಪದ ಸನ್ನಿವೇಶಗಳಲ್ಲಿ ಕಲಾವಿದರು ಸಂಭಾಷಣೆಯಲ್ಲಿ ಜಾಗರೂಕ ರಾಗಿರಬೇಕೆಂಬ ಸೂಚನೆ. ಒಟ್ಟಿನಲ್ಲಿ ಸುಂದರವಾದ ಒಂದು ಪ್ರಸಂಗ. ರಾಜಕೀಯವಾದ ಒಂದು ಘಟನೆಯನ್ನು ಹೆಣೆದು ಕಥಾರಚನೆ ಈಗ ಬಹಳ ಕಷ್ಟ. ಆದರೆ ಅಂದು ಅವರು ವಿವಾದಕ್ಕೆಡೆಯಾಗದಂತೆ ಪ್ರಸಂಗ ರಚಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments