Sunday, November 10, 2024
Homeಸುದ್ದಿಜಿಲ್ಲೆಯಕ್ಷಾಂಗಣದಿಂದ 8ನೇ ವರ್ಷದ ನುಡಿಹಬ್ಬ - ಹರಿಕೃಷ್ಣ ಪುನರೂರು ಅವರಿಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ

ಯಕ್ಷಾಂಗಣದಿಂದ 8ನೇ ವರ್ಷದ ನುಡಿಹಬ್ಬ – ಹರಿಕೃಷ್ಣ ಪುನರೂರು ಅವರಿಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ

ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ನವೆಂಬರ್ ತಿಂಗಳಲ್ಲಿ 8ನೇ ಕನ್ನಡ ನುಡಿ ಹಬ್ಬದ ಪ್ರಯುಕ್ತ ಏರ್ಪಡಿಸಿರುವ ‘ಯಕ್ಷಗಾನ ತಾಳಮದ್ದಳೆ ಪರ್ವ’ ಸಂದರ್ಭ ಶ್ರೇಷ್ಠ ಸಾಧಕರಿಗೆ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ನೀಡಲು ನಿರ್ಧರಿಸಿದೆ. 2019-2020ರ ಸಾಲಿಗೆ ಅವಿಭಜಿತ ದ.ಕ. ಜಿಲ್ಲೆಯ ಧಾರ್ಮಿಕ, ಸಾಮಾಜಿಕ ನೇತಾರ, ಉದ್ಯಮಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಈ ಪುರಸ್ಕಾರ ಸ್ವೀಕರಿಸಲಿದ್ದಾರೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.

ಪುನರೂರು ವ್ಯಕ್ತಿ-ವಿಶೇಷ: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪ ಪುನರೂರಿನಲ್ಲಿ ಪಟೇಲ್ ವಾಸುದೇವ ರಾವ್ ಮತ್ತು ಲಕ್ಷ್ಮೀ ಅಮ್ಮ ದಂಪತಿಗೆ 1943 ಜೂನ್ 5 ರಂದು ಜನಿಸಿದ ಹರಿಕೃಷ್ಣ ಪುನರೂರು ಅವರು ಮೆಟ್ರಿಕ್ಯುಲೇಶನ್ ಮುಗಿಸಿ ಹೊಟೇಲ್ ಉದ್ಯಮದಲ್ಲಿ ಭದ್ರ ನೆಲೆ ಕಂಡವರು. ಬಳಿಕ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡ ಅವರು ಮೂಲ್ಕಿ ಎಜ್ಯುಕೇಶನ್ ಸೊಸೈಟಿ, ಶಾರದಾ ವಿದ್ಯಾ ಸಂಸ್ಥೆ, ಪಟೇಲ್ ವಾಸುದೇವ ಸ್ಮಾರಕ ಟ್ರಸ್ಟ್ – ಇವುಗಳನ್ನು ಹುಟ್ಟು ಹಾಕಿ ಶಿಕ್ಷಣ ರಂಗದಲ್ಲಿ ಸೇವೆಗೈದರು. ಮೂಲ್ಕಿ, ಕಿನ್ನಿಗೋಳಿ, ಮಂಗಳೂರಿನ ಸಹಕಾರಿ ಸಂಘಗಳಲ್ಲಿ ನಿರ್ದೇಶಕರಾದರು. ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯಲ್ಲಿ ಜಿಲ್ಲಾ ಗವರ್ನರ್ ಹುದ್ದೆಗೇರಿ ಅಂಧತ್ವ ನಿವಾರಣೆಗಾಗಿ ತನು-ಮನ-ಧನ ವ್ಯಯಿಸಿ ಪ್ರತಿಷ್ಠಿತ ‘ನೈಟ್ ಆಫ್ ದಿ ಬ್ಲೈಂಡ್’ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರೆಸಿದರು. ಮೂಲ್ಕಿಯ ಸ್ವಂತ ಜಾಗದಲ್ಲಿ 101 ಕಾಂಕ್ರೀಟ್ ಮನೆಗಳನ್ನು ನಿರ್ಮಿಸಿ ಬಡವರಿಗೆ ಉಚಿತವಾಗಿ ವಿತರಿಸಿದರು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂಗಳೂರಿನ ಕಾರಣೀಕ ಹನುಮಂತ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿತ್ವ. ಮಂಗಳೂರು ಮಂಗಳಾದೇವಿ ದೇವಸ್ಥಾನ, ಪುನರೂರು ವಿಶ್ವನಾಥ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಹಾಗೂ ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನಗಳಲ್ಲಿ ಸಕ್ರಿಯ ದುಡಿಮೆ, ವಿಶ್ವ ಹಿಂದೂ ಪರಿಷತ್, ಹೊಟೇಲ್ ಮಾಲಕರ ಸಂಘ, ಭಾರತ ಸೇವಾದಳ ಮುಂತಾದ ಸಂಘಟನೆಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಹರಿಕೃಷ್ಣರ ಸೇವೆ ಗಣನೀಯ.

ಕರ್ನಾಟಕ ಬ್ಯಾಂಕಿನ ನಿರ್ದೇಶಕರಾಗಿ, ವರ್ಧಮಾನ ಪ್ರಶಸ್ತಿ ಪೀಠದ ಉಪಾಧ್ಯಕ್ಷರಾಗಿ, ಪಾಜಕ ಪ್ರತಿಷ್ಠಾನ, ಮಕ್ಕಳ ಸಾಹಿತ್ಯ ಸಂಗಮ, ರಾಗ-ತರಂಗ ಮೊದಲಾದ ಸಂಸ್ಥೆಗಳನ್ನು ಮುನ್ನಡೆಸಿದ ಕೀರ್ತಿ ಅವರದು. ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಜಿಲ್ಲೆ, ತಾಲೂಕು, ಹೋಬಳಿಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ್ದಲ್ಲದೆ, ಸ್ವತಃ ಸಾಹಿತಿಯಲ್ಲದಿದ್ದರೂ ಸಾಹಿತ್ಯ ಪರಿಚಾರಕರಾಗಿ ಪ್ರತಿಷ್ಠಿತ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಹುದ್ದೆಗೇರಿ ಹೊಸ ಇತಿಹಾಸ ನಿರ್ಮಿಸಿದವರು ಪುನರೂರು.


ಲಯನ್ಸ್ ಸಂಸ್ಥೆಯ ಉತ್ತಮ ಸೇವೆಗೆ 10 ಬಾರಿ ಅಂತಾರಾಷ್ಟ್ರೀಯ ಮನ್ನಣೆ, 63 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಡಾ. ಶಿವರಾಮ ಕಾರಂತರಿಂದ `ಪರಿಸರ ಪ್ರೇಮಿ’ ಪುರಸ್ಕಾರ, ಡಾ. ರಾಜಕುಮಾರ್ ಅವರಿಂದ ‘ಕನ್ನಡ ಕಣ್ಮಣಿ’ ಬಿರುದು, ಪೇಜಾವರ ಶ್ರೀ ವಿಶ್ವೇಶ ತೀರ್ಥರಿಂದ ‘ಧರ್ಮದರ್ಶಿ’ ಉಪಾಧಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಲ್ಲದೆ ಈಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶತಮಾನೋತ್ಸವ ಪ್ರಶಸ್ತಿ – ಇತ್ಯಾದಿ ಗೌರವಗಳಿಗೆ ಪಾತ್ರರಾದ ಹರಿಕೃಷ್ಣ ಪುನರೂರು ಅವರದು ಅಗಾಧ ಸಾಧನೆಯ ಮೇರು ವ್ಯಕ್ತಿತ್ವ.

ಇದೇ 2020 ನವೆಂಬರ 29ರಂದು ಮಂಗಳೂರಿನ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ‘ಪಾರಿಜಾತ’ ಸಭಾಂಗಣದಲ್ಲಿ ಜರಗುವ ಯಕ್ಷಾಂಗಣದ ಎಂಟನೆಯ ನುಡಿಹಬ್ಬದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಶಾಸಕ ವೇದವ್ಯಾಸ ಕಾಮತ್ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಪ್ರದಾನ ಮಾಡುವರು. ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಕೆ.ಸಿ. ನಾಯ್ಕ್ ಸಮಾರಂಭವನ್ನು ಉದ್ಘಾಟಿಸುವರು. ಯಕ್ಷಾಂಗಣದ ಗೌರವಾಧ್ಯಕ್ಷ ಹಾಗೂ ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮೇಯರ್ ದಿವಾಕರ ಪಾಂಡೇಶ್ವರ, ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯದ ಮಹಾಪ್ರಬಂಧಕರಾದ ಸುಜಯ ಯು. ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮತ್ತಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments