Saturday, January 18, 2025
Homeಯಕ್ಷಗಾನಬಣ್ಣದ ಬದುಕಿನಿಂದ ಸ್ವಯಂ ನಿವೃತ್ತರಾದ ಬಣ್ಣದ ವೇಷಧಾರಿ ಕಲ್ಮಡ್ಕ ಸುಬ್ಬಣ್ಣ ಭಟ್ (ಅಮೈ)

ಬಣ್ಣದ ಬದುಕಿನಿಂದ ಸ್ವಯಂ ನಿವೃತ್ತರಾದ ಬಣ್ಣದ ವೇಷಧಾರಿ ಕಲ್ಮಡ್ಕ ಸುಬ್ಬಣ್ಣ ಭಟ್ (ಅಮೈ)

ಯಕ್ಷಗಾನ ಕಲಾವಿದರಾಗಬೇಕೆಂದು ಬಯಸಿದವರೆಲ್ಲರಿಗೂ ಕಲಾವಿದರಾಗುವ ಭಾಗ್ಯವು ಸಿದ್ಧಿಸುವುದಿಲ್ಲ. ಕಲಾವಿದರಾಗುವ ಅವಕಾಶ ಸಿಕ್ಕಿದರೂ ಅವರೆಲ್ಲರೂ ರಂಗದಲ್ಲಿ ಹೊಳೆದು ಕಾಣಿಸಿಕೊಳ್ಳರಾರರು. ಪ್ರತಿಭೆಯ ಜತೆ ಅವಕಾಶಗಳು, ಯೋಗ ಭಾಗ್ಯಗಳು ಕೂಡಿಕೊಂಡಾಗ ಮಾತ್ರ ಆತ ಕಲಾವಿದನಾಗಿ ಪ್ರಸಿದ್ಧಿಯನ್ನು ಹೊಂದುತ್ತಾನೆ. ಎಲ್ಲವೂ ತನಗನುಕೂಲವಾಗಿ ಒದಗಿ, ಉತ್ತಮ ಕಲಾವಿದನಾಗಿ ರಂದಲ್ಲಿ ಮೆರೆದು, ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದ ಅನೇಕ ಕಲಾವಿದರು ಅನಿವಾರ್ಯ ಕಾರಣಗಳಿಂದ ಕಲಾ ಬದುಕಿಗೆ ವಿದಾಯ ಹೇಳಿ ಮನೆಯ ಹೊಣೆಗಾರಿಕೆಯನ್ನು ಹೊತ್ತದ್ದೂ ಇದೆ.

ಅಂತಹಾ ಕಲಾವಿದರ ವೇಷಗಳನ್ನು ನೋಡಿದ ಪ್ರೇಕ್ಷಕರು “ಛೇ , ಅವರು ಮೇಳ ಬಿಡಬಾರದಿತ್ತು. ಯಕ್ಷಗಾನ ಕಲಾವಿದನಾಗಿಯೇ ಮುಂದುವರಿಯಬೇಕಿತ್ತು. ಕಲಾಬದುಕಿಗೆ ವಿದಾಯ ಹೇಳಿ ಮನೆಯಲ್ಲಿ ಉಳಿಯಬಾರದಿತ್ತು. ಇದು ಯಕ್ಷಗಾನಕ್ಕೂ, ಪ್ರೇಕ್ಷಕರಾದ ನಮಗೂ ಬಲು ದೊಡ್ಡ ನಷ್ಟ” ಹೀಗೆ ಹೇಳಿರುವುದನ್ನೂ ನಾವು ಕೇಳಿರುತ್ತೇವೆ.

ಆದರೆ ಇದು ಅನಿವಾರ್ಯ. ಒಂದನ್ನು ಪಡೆಯಬೇಕಾದರೆ ಇನ್ನೊಂದನ್ನು ಬಿಡಬೇಕಾದ ಅನಿವಾರ್ಯತೆಗೆ ಕಲಾವಿದನು ಸಿಲುಕಿರುತ್ತಾನೆ. ಕಲಾವಿದನಾಗಿಯೇ ಮುಂದುವರಿದರೆ ಮನೆಯ ಸುವ್ಯವಸ್ಥೆಗೆ ಕೊರತೆಯಾದರೆ? ಮನೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡರೆ ಯಕ್ಷಗಾನವು ಒಬ್ಬ ಉತ್ತಮ ಕಲಾವಿದನನ್ನು ಕಳೆದುಕೊಂಡಾಗುತ್ತದೆ. ಇಂತಹ ಗೊಂದಲದ ಸಂದಿಗ್ಧ ಸ್ಥಿತಿಯಲ್ಲಿ ಚೆನ್ನಾಗಿ ಯೋಚಿಸಿಯೇ ಕಲಾವಿದರು ನಿರ್ಣಯಕ್ಕೆ ಬರುತ್ತಾರೆ. ಕಲಾವಿದರಿಗೆಂದಲ್ಲ, ಎಲ್ಲರಿಗೂ ಮನೆ ಮತ್ತು ಮನೆಯವರು ಮುಖ್ಯ ತಾನೇ? ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲೇ ಬೇಕು. ಹೀಗೆ ಕಲಾ ಬದುಕಿಗೆ ಅನಿವಾರ್ಯವಾಗಿ ವಿದಾಯ ಹೇಳಿ ಉತ್ತಮ ಕಲಾವಿದರನೇಕರು ಮೇಳ ಬಿಟ್ಟು ಮನೆ ವಾರ್ತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡದ್ದಿದೆ. ಅಂತಹ ಕಲಾವಿದರಲ್ಲೊಬ್ಬರು ಶ್ರೀ ಕಲ್ಮಡ್ಕ ಸುಬ್ಬಣ್ಣ ಭಟ್. 

ಶ್ರೀ ಸುಬ್ಬಣ್ಣ ಭಟ್ಟರ ಹುಟ್ಟೂರು ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಅಮೈ. ಶ್ರೀ ಕೆ. ನಾರಾಯಣ ಭಟ್ ಮತ್ತು ಶ್ರೀಮತಿ ಶಂಕರಿ ಅಮ್ಮ ದಂಪತಿಗಳ ಪುತ್ರನಾಗಿ ಜನನ. (1955 ನವೆಂಬರ್ 5ರಂದು ಜನನ) ಇವರ ಮೂಲ ಮನೆ ಕಾಸರಗೋಡು ತಾಲೂಕಿನ ಪೆರಡಾಲ ಸಮೀಪದ ಕೊಡ್ವಕೆರೆ ಎಂಬಲ್ಲಿ. ದಾಖಲೆಗಳಲ್ಲಿ ಇವರ ಹೆಸರು ಸುಬ್ರಾಯ ಭಟ್ ಎಂದು. ಆದರೆ ಕಲಾವಿದರೆಲ್ಲರೂ ಸುಬ್ಬಣ್ಣ ಭಟ್ ಎಂದೇ ಕರೆಯುತ್ತಿದ್ದರು. ಓದಿದ್ದು ಹತ್ತನೇ ತರಗತಿಯ ವರೆಗೆ. ಕಲ್ಮಡ್ಕ ಶಾಲೆ ಮತ್ತು ಬಾಳಿಲ ವಿದ್ಯಾ ಬೋಧಿನೀ ಪ್ರೌಢ ಶಾಲೆಯಲ್ಲಿ. ಆಗ ಕಲ್ಮಡ್ಕದ ಸಂಗಮ ಕಲಾ ಸಂಘವು ಕಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿತ್ತು. ಶಾಲಾ ವಿದ್ಯಾರ್ಥಿಯಾಗಿದ್ದಾಗ ಅಮೈ ಸುಬ್ಬಣ್ಣ ಭಟ್ಟರು ಸಂಗಮ ಕಲಾ ಸಂಘದ ರೂವಾರಿ ಕೆರೆಕೋಡಿ ಪಂಡಿತ ಗಣಪತಿ ಭಟ್ಟರಿಂದ ಯಕ್ಷಗಾನ ಅಭ್ಯಸಿಸಿದ್ದರು. ಕಲ್ಮಡ್ಕ ಸಂಗಮ ಕಲಾ ಸಂಘದ ಪ್ರದರ್ಶನದಲ್ಲಿ ರಂಗ ಪ್ರವೇಶ. ಹೆಚ್ಚಿನ ನಾಟ್ಯ ಕಲಿಯಲು ಕೆರೆಕೋಡಿ ಗಣಪತಿ ಭಟ್ಟರ ಸಲಹೆ.

ಅದೇ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಲಿತ ಕಲಾ ಕೇಂದ್ರ ಆರಂಭವಾಗಿತ್ತು. ಸದ್ರಿ ಕೇಂದ್ರದ ಮೊದಲ ತಂಡದ ವಿದ್ಯಾರ್ಥಿಯಾಗಿ ಸೇರ್ಪಡೆ. ಶ್ರೀ ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸ. ಆಗ ಹಿಮ್ಮೇಳ ಗುರುಗಳಾಗಿದ್ದವರು ಮಾಂಬಾಡಿ ನಾರಾಯಣ ಭಾಗವತರು. ತರಬೇತಿ ಕೇಂದ್ರದಲ್ಲಿ ಪದ್ಯಾಣ ಗಣಪತಿ ಭಟ್, ಚೆನ್ನಪ್ಪ ಶೆಟ್ಟಿ, ಡಿ.ಮನೋಹರ ಕುಮಾರ್, ಉಬರಡ್ಕ ಉಮೇಶ ಶೆಟ್ಟಿ, ಮುಂಡಾಜೆ ಸದಾಶಿವ, ಮುಂಡಾಜೆ ಬಾಲಕೃಷ್ಣ ಶೆಟ್ಟಿ, ತೊಡಿಕಾನ ವಿಶ್ವನಾಥ ಗೌಡ, ಮಾಡಾವು ಕೊರಗಪ್ಪ ರೈ ಮೊದಲಾದವರು ಸುಬ್ಬಣ್ಣ ಭಟ್ಟರ ಸಹಪಾಠಿಗಳಾಗಿದ್ದರು. ಲಲಿತ ಕಲಾ ಕೇಂದ್ರದಲ್ಲಿ ತರಬೇತಿಯನ್ನು ಹೊಂದಿ ಸಂಗಮ ಕಲಾ ಕೇಂದ್ರದ ಪ್ರದರ್ಶನಗಳಲ್ಲಿ ಸಕ್ರಿಯರಾಗಿದ್ದರು. ವೇಷಗಾರಿಕೆ, ಮೇಕಪ್, ವೇಷಭೂಷಣಗಳ ನಿರ್ವಹಣೆ, ಕಲಿಕಾಸಕ್ತರಿಗೆ ತರಬೇತಿ ಈ ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಎಲ್ಲಾ ವಿಚಾರಗಳಿಗೆ ಪಟ್ಟಾಜೆ ವೈದ್ಯ ಗಣೇಶ ಭಟ್ಟರ ನಿರ್ದೇಶನ, ಪ್ರೋತ್ಸಾಹವು ದೊರಕಿತ್ತು. ಸುಮಾರು ಎಂಟು ವರ್ಷಗಳ ಕಾಲ ಊರ, ಪರವೂರ ಮತ್ತು ಕಲ್ಮಡ್ಕ ಸಂಘದ ಪ್ರದರ್ಶನಗಳಲ್ಲಿ ಕಲಾಸೇವೆಯನ್ನು ಮಾಡಿದ್ದರು.

1981ರಲ್ಲಿ ಕಟೀಲು ಎರಡನೇ ಮೇಳಕ್ಕೆ ಪುಂಡುವೇಷಧಾರಿಯಾಗಿ ಸೇರ್ಪಡೆ. ನಾಲ್ಕು ವರ್ಷಗಳ ಬಳಿಕ ಬಣ್ಣದ ವೇಷಧಾರಿಯಾಗಿ ಭಡ್ತಿ. ಆಗ ಒಂದನೇ ಬಣ್ಣದ ವೇಷಧಾರಿಯಾಗಿದ್ದ ಬಣ್ಣದ ಮಹಾಲಿಂಗ ಅವರ ನಿರ್ದೇಶನ, ಸಹಕಾರವು ದೊರಕಿತ್ತು. ಬಳಿಕ ಕಟೀಲು 3ನೇ ಮೇಳಕ್ಕೆ 2ನೇ ಬಣ್ಣದ ವೇಷಧಾರಿಯಾಗಿ ಸೇರ್ಪಡೆ. ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆ. ಮೂರನೇ ಮೇಳದಲ್ಲಿ ಐದು ತಿರುಗಾಟ. ಎಲ್ಲಾ ತರದ ವೇಷಗಳನ್ನೂ ಮಾಡಬೇಕಾಗಿ ಬಂದಿತ್ತು. ಬಳಿಕ ಕಟೀಲು ಒಂದನೇ ಮೇಳಕ್ಕೆ. ಕುಬಣೂರು ಶ್ರೀಧರ ರಾಯರ ಭಾಗವತಿಕೆಯಡಿ ಎರಡು ತಿರುಗಾಟ. ಬಳಿಕ ವೈಯುಕ್ತಿಕ ಸಮಸ್ಯೆಗಳಿಂದಾಗಿ ಕಲಾ ಬದುಕಿಗೆ ನಿವೃತ್ತಿಯನ್ನು ಘೋಷಿಸಿ ಮನೆಗೆ ಮರಳಿದ್ದರು. ಆದರೂ ಹಲವು ವರ್ಷಗಳ ಕಾಲ ವೇಷ ಮಾಡಿದ್ದರು. 

ಪ್ರಸ್ತುತ ಇವರು ಕೃಷಿಕರು. ಅತ್ಯುತ್ತಮ ಕೃಷಿಕರೆಂದು ಹೆಸರು ಗಳಿಸಿದ್ದಾರೆ. ಕಟೀಲು ಮೇಳದ ತಮ್ಮ ಹದಿಮೂರು ತಿರುಗಾಟಗಳಲ್ಲಿ ಪುಂಡು, ಕಿರೀಟ, ಬಣ್ಣದ ವೇಷಗಳಲ್ಲಿ ಕಲ್ಮಡ್ಕ ಸುಬ್ಬಣ್ಣ ಭಟ್ಟರು ಕಾಣಿಸಿಕೊಂಡಿದ್ದರು. ಕಿರೀಟ ವೇಷಗಳಲ್ಲಿ ದೇವೇಂದ್ರ, ಅರ್ಜುನ, ಹಿರಣ್ಯಾಕ್ಷ, ಇಂದ್ರಜಿತು ಹೆಸರು ನೀಡಿದ ಪಾತ್ರಗಳು. ಹೆಚ್ಚಿನ ಎಲ್ಲಾ ಬಣ್ಣದ ವೇಷಗಳನ್ನೂ ನಿರ್ವಹಿಸಿರುತ್ತಾರೆ. ಕಲ್ಮಡ್ಕ ಸುಬ್ಬಣ್ಣ ಭಟ್ಟರು ಹೆಣ್ಣು ಬಣ್ಣದ ವೇಷಗಳನ್ನು ಅತ್ಯುತ್ತಮವಾಗಿ ಚಿತ್ರಿಸುತ್ತಿದ್ದರೆಂದು ಪ್ರೇಕ್ಷಕರು ಹೇಳುತ್ತಾರೆ. ಕೇಶಾವರೀ ಕಿರೀಟದ ವೇಷಗಳೂ ಇವರಿಗೆ ಒಳ್ಳೆಯ ಹೆಸರನ್ನು ಗಳಿಸಿ ಕೊಟ್ಟಿತ್ತು.

1994ರಲ್ಲಿ ಗಂಗಮ್ಮ ಅವರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಕಲ್ಮಡ್ಕ ಸುಬ್ಬಣ್ಣ ಭಟ್, ಗಂಗಮ್ಮ ದಂಪತಿಗಳಿಗೆ ಏಕಮಾತ್ರ ಪುತ್ರಿ ಕು| ಅಪರ್ಣಾ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿನಿ. ಸರಳ, ಸಜ್ಜನ, ವಿನಯವಂತರಾದ ಶ್ರೀಯುತರು ತೆರೆದುಕೊಳ್ಳುವ ಸ್ವಭಾವದವರಲ್ಲ. ಸಹೃದಯೀ ಹಿರಿಯ ಕಲಾವಿದರಾದ ಕಲ್ಮಡ್ಕ ಶ್ರೀ ಸುಬ್ಬಣ್ಣ ಭಟ್ ಮತ್ತು ಮನೆಯವರಿಗೆ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಶುಭ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments