Saturday, January 18, 2025
Homeಯಕ್ಷಗಾನಅಹುದೇ ಎನ್ನಯ ರಮಣ....

ಅಹುದೇ ಎನ್ನಯ ರಮಣ….

ಸಾಂದರ್ಭಿಕ ಚಿತ್ರ

ಅವನು ಮತ್ತು ಇವನು ಒಳ್ಳೆಯ ವಯೋವೃದ್ಧ ಸ್ನೇಹಿತರು.
ಆಗಾಗ ಭೇಟಿಯಾಗುವುದಿತ್ತು.ಇಬ್ಬರೂ ಚರ್ಚಿಸದ ವಿಷಯಗಳಿಲ್ಲ. ಸಾಮಾನ್ಯ ವಿಷಯಗಳಿಂದ ಹಿಡಿದು ಸಾಹಿತ್ಯ, ಕಲೆ, ರಾಜಕೀಯ, ಕ್ರೀಡೆ ಹೀಗೆ ಎಷ್ಟೆಷ್ಟೋ ವಿಷಯಗಳು ಮಾತಿನ ನಡುವೆ ಬಂದು ಹೋಗುತ್ತಿತ್ತು, ನಿರರ್ಗಳ ಚರ್ಚೆ ಎಂದೂ ದಾರಿ ತಪ್ಪಿರಲಿಲ್ಲ. ಆದರೆ ಇಂದೇಕೋ ಇಬ್ಬರ ನಡುವೆ ಎಂದಿನ ಮಾತುಕತೆ ಇನ್ನೂ ಪ್ರಾರಂಭ ವಾಗಿರಲಿಲ್ಲ. ನಡುವೆ ಮೌನದ ಗೋಡೆ ಮನೆಮಾಡಿತ್ತು. ಎಷ್ಟು ಹೊತ್ತು ಅಂತ ಹೀಗೆ ಕುಳಿತಿರಬಲ್ಲರು… ಮೊದಲು ಅವನೇ ಮಾತಿಗೆ ತೊಡಗಿದ.


“ಏನಿವತ್ತು ಮೋಡ ಕವಿದ ಹಾಗಿದೆಯಲ್ಲಾ…” ಎಂದ ಅವನು ನಗುತ್ತಾ.  ಇವನು ಕೂಡಾ ಹಾರ್ದಿಕವಾಗಿ ನಗುತ್ತಾ “ಇದು ಚದುರುವ ಮೋಡಗಳು” ಎಂದ
“ಮಳೆ ಬಂದರೆ  ಕಷ್ಟ “ ಅವನೆಂದ.
“ಯಾರಿಗೆ ಕಷ್ಟ? ನನಗಂತೂ ಈ ಸೆಖೆಗೆ ಸಾಕಾಗಿದೆ ಮಾರಾಯ, ಒಮ್ಮೆಮಳೆ ಬಂದರೆ ಸಾಕು ಅಂತ
ಅನಿಸಿಬಿಟ್ಟಿದೆ”
“ನಿನಗೆ ಸಾಕಾಗಿದೆ ಎನ್ನುವುದು ನಿಜವಿರಬಹುದು. ಆದರೆ ಇಂದು ಮಳೆ ಬಂದರೆ ಬೇಸರಿಸುವವರು ತುಂಬಾ ಜನರಿರಬಹುದು”
“ಅದು ಯಾಕೆ ಹಾಗೆ?”
“ಇಷ್ಟೆಲ್ಲಾ ಖರ್ಚು ಮಾಡಿ ಯಕ್ಷಗಾನ ಬಯಲಾಟ ಕಾರ್ಯಕ್ರಮ ಇಟ್ಟುಕೊಂಡಿದ್ದಾರಲ್ಲಾ, ಕಲಾಭಿಮಾನಿಗಳಿಗೆ ಭ್ರಮ ನಿರಸನವಾದೀತು.”


“ಅದೂ ಹೌದಲ್ಲಾ.. ನಾನು ಆ ಬಗ್ಗೆ ಯೋಚಿಸಿರಲಿಲ್ಲ.”
“ನೀನು  ಯೋಚಿಸುವುದು ನಿನ್ನ ಸಾಹಿತ್ಯ ಮತ್ತು ನಿನ್ನ ಕಥಾಪಾತ್ರಗಳ ಬಗ್ಗೆ ಮಾತ್ರ ಬಿಡು..” ಅವನು ಛೇಡಿಸಿದ.
“ಹಾಗೇನಿಲ್ಲ ಮಾರಾಯ, ನನಗೂ ಯಕ್ಷಗಾನ ಎಂದರೆ ಇಷ್ಟ ಎಂದು ನಿನಗೆ ತಿಳಿದಿದೆಯಲ್ಲವೇ?” ಇವನೆಂದ
“ಯಕ್ಷಗಾನದ ವಿಷಯ ಬಂದುದು ಒಳ್ಳೆಯದಾಯಿತು ನೋಡು, ಇದಕ್ಕೆ ಸಂಬಂಧಪಟ್ಟದ್ದು. ಯಕ್ಷಗಾನಕ್ಕೆ ಸಂಬಂಧಿಸಿದ್ದು. ನಿನಗೆ ಒಂದು ಕುತೂಹಲಕರ  ಘಟನೆಯನ್ನು ಹೇಳಬೇಕೆಂದಿದ್ದೆ.  ಅದು ಈಗ ನೆನಪಾಯಿತು ನೋಡು”
ಇವನ  ಕುತೂಹಲ  ಹೆಚ್ಚಾಯಿತು.
“ನೀನು ಕೂಡಾ ಹಿಂದೆ ಖ್ಯಾತ ಯಕ್ಷಗಾನ ಕಲಾವಿದನಾಗಿದ್ದವನು ಅಲ್ವಾ… ಅದೇನು ಸತ್ಯ ಕಥೆಯೋ? ಅಲ್ಲ ಕಾಲ್ಪನಿಕವೋ?” ಎಂದ.
“ನಾನೇನು  ಪ್ರಸಂಗಕರ್ತನಲ್ಲ.. ಸತ್ಯವೋ, ಕಾಲ್ಪನಿಕವೋ ಎಂದು ಹೇಳಲಿಕ್ಕೆ ವಿಮರ್ಶಕನೂ ಅಲ್ಲ, ಯಾರೋ ಹೇಳಿದ್ರು, ನಿನಗೆ ಹೇಳೋಣ ಅನ್ನಿಸಿತು. ನೀನು ಎಷ್ಟಾದರೂ ಕತೆಗಾರ ಅಲ್ವಾ? ಸದ್ಯಕ್ಕೆ ಕೇವಲ ಕಥೆ ಅಂತ ತಿಳಿದುಕೋ” ಎಂದ ಅವನು.
ಇವನು “ಆಯ್ತು ಮಾರಾಯ ಮುದದಿಂದ ಹೇಳು” ಎಂದ ಆಸಕ್ತಿಯಿಂದ.
ಅವನು ಹೇಳತೊಡಗಿದ. ಇವನು ಕೇಳತೊಡಗಿದ.


*********************

‘ತಾದಿ ನದ್ದ ನಕ್ಕತ್ತಾಂ ಕತ್ತಾಂ ತ ತರಿಕಿಟ ಕಿಟತಕ’ ಏಕತಾಳದ ನಡೆಯನ್ನು ಕಲಿಸುತ್ತಿದ್ದ ಚರಣ್ ಆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ.
ಕಾಲೇಜಿನ ವಾರ್ಷಿಕೋತ್ಸವಕ್ಕೆ ಇನ್ನೇನೂ ಕೆಲವೇ ದಿನಗಳು ಉಳಿದಿತ್ತು. ಅಷ್ಟರಲ್ಲಿ ಕಾರ್ಯಕ್ರಮಗಳಲ್ಲಿ ಯಕ್ಷಗಾನವನ್ನು ದಿಢೀರ್ ಸೇರ್ಪಡೆಗೊಳಿಸಲಾಗಿತ್ತು. ಆದರೆ ಯಕ್ಷಗಾನದ ನೃತ್ಯಾಭ್ಯಾಸ ಮಾಡಿದ ಒಂದೆರಡು ವಿದ್ಯಾರ್ಥಿಗಳು ಮಾತ್ರ ಅಲ್ಲಿದ್ದರು. ಅದೂ ಪ್ರಾಥಮಿಕ ಪಾಠ ಮಾತ್ರ ಆಗಿತ್ತು ಅವರಿಗೆ. ಮಿಕ್ಕುಳಿದವರಿಗೆ ಅಭ್ಯಾಸ ಮಾಡಿಸಬೇಕಲ್ಲ ಎಂದು ತಲೆ ಕೆರೆದುಕೊಂಡ ಸ್ವತಃ ಹವ್ಯಾಸೀ ಕಲಾವಿದರಾಗಿದ್ದ ಕನ್ನಡ ಉಪಾನ್ಯಾಸಕರು ಅದಕ್ಕೊಂದು ಸೂಕ್ತ ಕಲಾವಿದನ ಹುಡುಕಾಟವನ್ನು ನಡೆಸಿದರು. ಆಗ ಮೇಳದ ತಿರುಗಾಟದ ಸಮಯವಾದ್ದರಿಂದ ಜನ ಹೊಂದಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅದೂ ಅಲ್ಲದೆ  ಮೇಳದ ಕಾರ್ಯಕ್ರಮಗಳು ದೂರ ದೂರದ ಊರುಗಳಿಗೆ ಬದಲಾವಣೆಯಾಗುತ್ತಾ ಇರುವಾಗ ಸಮಯದ ಹೊಂದಾಣಿಕೆಯೂ ಆಗಬೇಕಿತ್ತು. ಹಗಲು ಕಲಾವಿದರಿಗೆ ನಿದ್ರೆಯ ಸಮಯ, ರಾತ್ರಿ ಪ್ರದರ್ಶನದ ಸಮಯ. ಹಾಗಾಗಿ ಮುಸ್ಸಂಜೆಯ ಹೊತ್ತನ್ನು ನಿಗದಿಪಡಿಸಿದರೂ  ಅದರಲ್ಲಿ ಭಾಗವಹಿಸುವ ವಿದ್ಯಾರ್ಥಿನಿಯರನ್ನು ಹೊತ್ತು ಮೀರುವ ಮೊದಲೇ ಮನೆಗೆ ಕಳುಹಿಸಬೇಕಾದ ಅನಿವಾರ್ಯತೆಯೂ ಇತ್ತು.


ಅಂತೂ ಇಂತೂ ಈ ಸಂದಿಗ್ಧತೆಯ ಸಂಕಟದಲ್ಲಿರುವಾಗಲೇ   ಕನ್ನಡ ಉಪಾನ್ಯಾಸಕರಿಗೆ ಚರಣ್ ನೆನಪಿಗೆ ಬಂದುದು. ಈ ಕಾಲೇಜಿನಲ್ಲೇ ಕಲಿತವನಾದ್ದರಿಂದ ಅವನ ಪರಿಚಯ ಅವರಿಗೆ ಧಾರಾಳವಾಗಿತ್ತು. ತರಗತಿಯಲ್ಲಿ ಸ್ವಲ್ಪ ಕೀಟಲೆಯ ಸ್ವಭಾವದ ಹುಡುಗನಾಗಿದ್ದುದರಿಂದ ಎಲ್ಲಾ ಉಪಾನ್ಯಾಸಕರ ಒಂದು ಕಣ್ಣು ಅವನ ಮೇಲೆಯೇ ಇರುತ್ತಿತ್ತು. ಅದೂ ಅಲ್ಲದೆ ಅವನಿದ್ದ ಮೇಳಗಳ ಪ್ರದರ್ಶನಗಳಿಗೆ ಕೆಲವೊಮ್ಮೆ ಈ ಉಪಾನ್ಯಾಸಕರು ಹೋಗುವುದಿತ್ತು. ಆಗೆಲ್ಲಾ ಚರಣ್ ಧಾವಿಸಿ ಬಂದು ತನ್ನ ಗುರುಗಳಿಗೆ ಮುಂದಿನ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಿಸುವಲ್ಲಿ ನೆರವಾಗುತ್ತಿದ್ದ.
ಆಪತ್ಕಾಲಕ್ಕೆ ಸಿಕ್ಕಿದವನೇ ನಿಜವಾದ ಬಂಧು ಎಂಬಂತೆ ಚರಣ್ ಈ ಹೊತ್ತು ನೆನಪಾದದ್ದು ಒಳ್ಳೆಯದಾಯಿತು ಎಂದುಕೊಂಡರು ಉಪಾನ್ಯಾಸಕರು. ಕೂಡಲೇ ಅವನಿಗೆ ಕರೆ ಮಾಡಿ ತನ್ನ ಅಸಹಾಕತೆಯನ್ನು ತಿಳಿಸಿ ಈ ಕಡಿಮೆ ಸಮಯದಲ್ಲಿ ಆತನಿಂದ ಸಹಾಯವನ್ನು ಅಪೇಕ್ಷಿಸಿದರು. ಚರಣ್ ಸಂತೋಷದಿಂದ ಒಪ್ಪಿಕೊಂಡರೂ ದೂರದೂರಲ್ಲಿ ಪ್ರದರ್ಶನಗಳಿದ್ದರೆ ಬರಲು ಕಷ್ಟವಾಗಬಹುದೆಂದೂ ಅದರ ಬದಲು ಕಾಲೇಜಿಗೆ ದೂರವಿಲ್ಲದ ಸ್ಥಳಗಳಲ್ಲಿನ ಪ್ರದರ್ಶನದ ದಿನ ಅರ್ಧ ದಿನವಿಡೀ ನೃತ್ಯವನ್ನು ಕಲಿಸುವುದಾಗಿ  ಒಪ್ಪಿಕೊಂಡ. ಅದರಂತೆಯೇ ಮೊದಲೇ ದಿನಗಳನ್ನು ನಿಶ್ಚೈಸಿಕೊಂಡು ಚರಣ್ ಕಾಲೇಜಿಗೆ ಬಂದು ಹೋಗುತ್ತಿದ್ದ.


ಅಂದು ಆ ಸಣ್ಣ ಹಂತದ ಯಕ್ಷಗಾನ ತರಗತಿಯ ಮೊದಲ ದಿನ. ಕೆಲವು ಮಂದಿ ಹುಡುಗಿಯರೂ ಇದ್ದರು. ಚರಣ್‍ಗೆ ಸಂಕೋಚವಾಯ್ತು. ‘ಈ ಹುಡುಗಿಯರಿಗೆ ಹೇಗೆ ಕಲಿಸುವುದು’ ಎಂದುಕೊಂಡ ಮನಸ್ಸಿನಲ್ಲೇ.. ಅದೂ ಅಲ್ಲದೆ ಕೆಲವು ಹುಡುಗಿಯರ ತಮಾಶೆ ಮಾಡುವುದು ಮತ್ತು ಹಿಂದಿನಿಂದ ನಗುವ ಸ್ವಭಾವ ಆತನಿಗೆ ಹೊಸತಲ್ಲ. ತನ್ನ ಕಾಲೇಜಿನ ದಿನಗಳಲ್ಲಿಯೂ ಇದೇ ಸಂದರ್ಭಗಳನ್ನು ಎದುರಿಸಿದ್ದಾನಾದುದರಿಂದ ಹೇಗಪ್ಪಾ ಇವರನ್ನು ಸಂಭಾಳಿಸುವುದು ಎಂದುಕೊಂಡ. ‘ಇರಲಿ, ಹಾಗೇನಾದರೂ ತಂಟೆ, ತಕರಾರುಗಳಿದ್ದರೆ ಉಪಾನ್ಯಾಸಕರಲ್ಲೇ ಹೇಳಿಬಿಡುವುದು, ಇದು ನನ್ನಿಂದಾಗದ ಕೆಲಸ’ ಎಂದು ನಿಶ್ಚೈಸಿದ.

ಸಣ್ಣ ಪ್ರಸಂಗವಾದ್ದರಿಂದ ಅದರಲ್ಲಿ ಬರುವ ತಾಳಗಳನ್ನು ಮಾತ್ರ ಕಲಿಸಿದರೆ ಸಾಕು ಎಂದುಕೊಂಡ.  ಸಮಯದ ಅಭಾವವಿರುವುದರಿಂದ ನಾಟ್ಯ ವೈವಿಧ್ಯತೆಗಳು ಮತ್ತು ಚಾಲೂ ಕುಣಿತಗಳನ್ನು ಉಪಯೋಗಿಸದೆ ಬರಿಯ ಹಾಡಿನ ಭಾವಸಹಿತ ನಡೆ, ಬಿಡಿತ, ಮುಕ್ತಾಯಗಳನ್ನು ಕಲಿಸಿದರೆ ಸಾಕಲ್ಲವೆ ಎಂದು ಉಪಾನ್ಯಾಸಕರಲ್ಲಿ ಕೇಳಿದ. ಅವರು “ಧಾರಾಳ ಸಾಕು, ಎಲ್ಲಾ ತಾಳಗಳನ್ನು ಅಗತ್ಯ ಇಲ್ಲದಿದ್ದರೆ ಕಲಿಸುವುದು ಬೇಡ, ಅದು ಸಾಧ್ಯವೂ ಇಲ್ಲ ಈ ಕೆಲವು ದಿನಗಳಲ್ಲಿ. ಕೆಲವು ಸುಲಭದ ತಾಳಗಳಲ್ಲಿ ಮಾತ್ರ ಪದ್ಯ ಹೇಳಲು ಭಾಗವತರನ್ನು ಒಪ್ಪಿಸುವ” ಎಂದರು. ಚರಣ್‍ಗೆ ನಗು ಬಂತು. ಉಪಾನ್ಯಾಸಕರೂ ನಕ್ಕು “ಮತ್ತೇನು ಮಾಡುವುದು ಮಾರಾಯ” ಎಂದರು.
ಅಂದು ಮೊದಲ ದಿನ ಚರಣ್ ಪ್ರಾರಂಭದ ನಿರ್ದೇಶನಗಳನ್ನು ಹಾಗೂ ಕೆಲ ಮಾಹಿತಿಗಳನ್ನು ನೀಡಿ ಏಕತಾಳದ ನಡೆಯನ್ನು ಕಲಿಸತೊಡಗಿದ. ಸುಧನ್ವಾರ್ಜುನ  ಪ್ರಸಂಗವನ್ನು ಆಯ್ದು ಕೊಂಡಿದ್ದರಿಂದ ಅದರಲ್ಲಿ ಬರುವ ಪಾತ್ರಗಳನ್ನು ಹಾಗೂ ಪದ್ಯಗಳನ್ನು ಆ ಮೊದಲೇ ಭಾಗವತರೊಂದಿಗೆ ಕುಳಿತು ಚರ್ಚಿಸಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಒಡ್ಡೋಲಗದ ಪ್ರವೇಶವನ್ನೂ ಅದಕ್ಕೆ ಮೊದಲು ಹೇಳಿಕೊಡಬೇಕಾಗಿತ್ತು. ಅದಕ್ಕೂ ಮೊದಲು  ಏಕತಾಳದ ನಡೆ ಮತ್ತು ಬಿಡಿತದ ಬಗ್ಗೆ ವಿವರಿಸಿದ. ಹಾಗೂ ಬಾಯಿ ತಾಳದೊಂದಿಗೆ ಹೆಜ್ಜೆ ಹಾಕಿ ಅನುಸರಿಸಲು ಹೇಳಿದ. ಸುಧನ್ವ ಮತ್ತು ಪ್ರಭಾವತಿ ಪಾತ್ರ ಮಾಡುವವರು ಇಬ್ಬರೂ ಹುಡುಗಿಯರೇ ಆದ್ದರಿಂದ ಪಾತ್ರೋಚಿತ ಪ್ರಣಯ ದೃಶ್ಯಗಳಲ್ಲಿ ಅಭಿನಯಿಸಲು ಮುಜುಗರ ಪಡಬೇಕಿಲ್ಲ ಎಂದು ಚರಣ್ ಯೋಚಿಸಿದ.

ಎಲ್ಲರೂ ಏಕತಾಳದ ಬಾಯಿತಾಳವನ್ನು ಹೇಳುತ್ತಾ ಹೆಜ್ಜೆ ಹಾಕುತ್ತಿದ್ದರು. ಪ್ರಭಾವತಿಯ ಪಾತ್ರ
ಮಾಡಬೇಕಾದ ಹುಡುಗಿ ಕಿರಣ ಮಾತ್ರ ಮೊಬೈಲ್  ನೋಡುತ್ತಾ  ಅದರಲ್ಲೇ ತಲ್ಲೀನಳಾಗಿದ್ದಳು. ಚರಣ್‍ಗೆ  ಇದು ಸರಿಯೆನಿಸಲಿಲ್ಲ.  “ಕಿರಣ, ಇಲ್ಲಿ ಬನ್ನಿ” ಎಂದು ಕೂಗಿ ಕರೆದ. ಕೂಡಲೇ ಏನು ಎನ್ನುವಂತೆ ಹತ್ತಿರ ಬಂದಳು.
“ನೀವು ಕೂಡಾ ಕಲಿಯಿರಿ. ಇಲ್ಲದಿದ್ದರೆ  ಸಮಯಕ್ಕಾಗುವಾಗ ಗೊತ್ತಾಗುವುದಿಲ್ಲ” ಎಂದ.
“ಆದರೆ ನನಗೆ ಪ್ರಭಾವತಿಯ ಪಾತ್ರದ ಪದ್ಯಕ್ಕೆ ಮಾತ್ರ ಕಲಿಸಿ, ಇದೆಲ್ಲಾ ಯಾಕೆ?” ಎಂದಳು ಕಿರಣ
“ಇಲ್ಲ ಇದು ಏಕತಾಳದ ನಡೆ, ಎಲ್ಲಾ ಪಾತ್ರಕ್ಕೂ ಬೇಕಾಗುತ್ತದೆ. ಪ್ರಭಾವತಿಯ ಒಂದೆರಡು ಪದ್ಯಗಳು ಕೂಡಾ ಏಕತಾಳದಲ್ಲಿದೆ. ಅಲ್ಲದೆ ಎಲ್ಲವನ್ನೂ ನೋಡಿ ಕೊಂಡರೆ  ಒಳ್ಳೆಯದು, ಸಮಯ, ಸಂದರ್ಭ ಬಂದರೆ ಯಾವ ಪಾತ್ರವನ್ನು ಮಾಡಲು ಕೂಡಾ ತಯಾರಾಗಿರಬೇಕು. ಅಕಸ್ಮಾತ್ ಯಾರಾದರೂ ಅನಿವಾರ್ಯ
ಕಾರಣಗಳಿಂದಾಗಿ ಬರಲಾಗದಿದ್ದರೆ ಆಗ ಇನ್ನೊಬ್ಬರು ಮಾಡಲೇ ಬೇಕಾಗುತ್ತದೆ ಎಂದ”
“ಸರಿ” ಎಂದು ಅವರನ್ನು ಕೂಡಿಕೊಂಡಳು ಕಿರಣ. ಯಾಕೋ ಅವನ ಮಾತು ಇಷ್ಟವಾಯಿತು ಅವಳಿಗೆ.

ಏನೋ ಆಕರ್ಷಣೆಯಿದೆ ಅವನ ಮಾತುಗಳಲ್ಲಿ. ಮತ್ತೆ ತಿರುಗಿ ನೋಡಿದಳು ಅವನನ್ನು. ಅವನು ಮಾತ್ರ ಹೆಜ್ಜೆ ಹಾಕಿ ತೋರಿಸುವುದರಲ್ಲಿ ಮಗ್ನನಾಗಿದ್ದ.
ಚರಣ್ ಆ ದಿನ ಕೆಲವು ತಾಳಗಳ ಒಂದೊಂದು ನಡೆ, ಬಿಡಿತ, ಮುಕ್ತಾಯಗಳ ಹೆಜ್ಜೆಗಾರಿಕೆಯನ್ನು ಹೇಳಿ ಕೊಟ್ಟು, ಅವುಗಳ ಬಾಯಿತಾಳವನ್ನು ಬರೆಸಿ ಮರುದಿನ ಸರಿಯಾಗಿ ಅಭ್ಯಾಸ ಮಾಡಿ ಬರುವಂತೆ ತಿಳಿಸಿದ. ಹಾಗೂ ಮರುದಿನ ತಾನು ಅವರವರ ಪದ್ಯಗಳಿಗೆ ನಾಟ್ಯವನ್ನು ಕಲಿಸಲು ಆರಂಭಿಸುವುದಾಗಿ ಹೇಳಿ ತನ್ನ ಆ ದಿನದ ಆಟದ ಕ್ಯಾಂಪ್‍ಗೆ ತೆರಳಿದ.
ಅವನು ಹೋದ ನಂತರವೂ ವಿದ್ಯಾರ್ಥಿಗಳು ಅಭ್ಯಾಸ ಮಾಡುವುದರಲ್ಲಿ ತಲ್ಲೀನರಾಗಿದ್ದರು. ಸ್ವಲ್ಪ ಮಟ್ಟಿಗೆ ಕನ್ನಡ ಉಪಾನ್ಯಾಸಕರೂ ಯಕ್ಷಗಾನದ ನಾಟ್ಯಾದಿ ಅಂಗಗಳನ್ನು ಬಲ್ಲವರಾಗಿದ್ದರಿಂದ ಅವರ ಮೇಲುಸ್ತುವಾರಿಯಲ್ಲಿ ಅಭ್ಯಾಸ ನಡೆಸಿದರು. ಕಿರಣಳಿಗೂ ನಾಟ್ಯದ ಸಣ್ಣ ಪಾಠ ಆಗಿತ್ತು. ಶಾಲೆಯಲ್ಲಿ ಕಲಿಯುತ್ತಿರುವಾಗ ಇದೇ ರೀತಿಯ ಸಂದರ್ಭದಲ್ಲಿ ಒಂದೆರಡು ತಾಳಗಳ ಪರಿಚಯ ಆಗಿತ್ತು. ಅದ್ದರಿಂದ ಒಮ್ಮೆ ಹೇಳಿದ್ದನ್ನು ಬಹಳ ಬೇಗ ಕಲಿತಿದ್ದಳು. ಅಲ್ಲದೆ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದುದರಿಂದ ನಾಟ್ಯದ ಲಯ ಕಂಡುಕೊಂಡಿದ್ದಳು.

ಕಿರಣ ಯಾಕೋ ಅವನ ಬಗ್ಗೆಯೇ ಅಲೋಚಿಸುತ್ತಿದ್ದಳು, ರಂಗದಲ್ಲಿ  ಅವನ  ವೇಷವನ್ನು ನೋಡಿದ್ದಳು.  ಉತ್ತಮ  ಪುಂಡುವೇಷಧಾರಿಯಾಗಿದ್ದ ಅವನಿಗೆ ಅಭಿಮಾನಿಗಳ ಸಂಖ್ಯೆ ಸ್ವಲ್ಪ ಹೆಚ್ಚೇ ಇದ್ದಿತು. ಅವಳಿಗೂ ಅವನ ವೇಷ ಇಷ್ಟವಾಗಿತ್ತು. ಆದರೆ ವೇಷ ಕಳಚಿದ ಮೇಲೆ ಇದೇ ಮೊದಲ ಸಾರಿ  ಮಾತನಾಡಿದ್ದಳು. ವೇಷದಲ್ಲಿ ಮಾತ್ರವಲ್ಲ, ಮಾಮೂಲಿ ಉಡುಪಿನಲ್ಲಿಯೂ ರೂಪವಂತ ಎಂದು ಕೊಂಡಳಾಕೆ. ಅಂತೂ ಅನ್ಯಮನಸ್ಕಳಾಗಿಯೇ ಆಕೆ ಆ ದಿನ ಮನೆಗೆ ತೆರಳಿದಳು.

ಮರುದಿನ ಹಿಂದಿನ ದಿನದ ಪಾಠದ ಅಭ್ಯಾಸವನ್ನು ಪರೀಕ್ಷಿಸಿ ತೃಪ್ತಿಪಟ್ಟು ಚರಣ್  ಮುಂದಿನ  ಅಭ್ಯಾಸಗಳನ್ನು ಮಾಡಿಸುತ್ತಾ  ಹೋದ. ಅರ್ಜುನನ ಒಡ್ಡೋಲಗದ ಸನ್ನಿವೇಶಗಳನ್ನು ಮೊಟಕುಗೊಳಿಸಿ  ಹಂಸದ್ವಜನ  “ಮಂತ್ರಿಗಳಿರ ಕೇಳಿರೀಗ…”  ಪದ್ಯವನ್ನು ಪಾತ್ರಧಾರಿಗೆ ಹೇಗೆ ಅಭಿನಯಿಸುವುದೆಂದು ತೋರಿಸಿದ. ಕಿರಣ ಮಾತ್ರ ಅವನ ನಾಟ್ಯದ ವೈಖರಿ, ಬೋಧನಾ ಸಾಮರ್ಥ್ಯಕ್ಕೆ ಬೆರಗಾಗಿದ್ದಳು. ಮುಂದೆ ಸುಧನ್ವನ ಪ್ರವೇಶ ಪದ್ಯಗಳಿಗೆ ಒಂದಷ್ಟು ಅಭ್ಯಾಸ ನಡೆಯಿತು. ಅಮೇಲೆ ಕಿರಣಳ ಸರದಿ. “ಸತಿಶಿರೋಮಣಿ ಪ್ರಭಾವತಿ ಸೊಬಗಿನಲಿ, ರತಿಯ ಸೋಲಿಪ ರೂಪಿನ..” ಕಿರಣ  ತನ್ನ  ಅವಕಾಶಕ್ಕಾಗಿ ಕಾಯುತ್ತಿದ್ದಳು. 

ಲಗುಬಗನೆ ಬಂದವಳನ್ನು ಚರಣ್ ನೋಡಿ ‘ಇವಳು ಥೇಟ್ ರತಿಯೆ’ ಎಂದುಕೊಂಡ. ಸುಧನ್ವ ಮತ್ತು ಪ್ರಭಾವತಿಯ ಸ್ವಲ್ಪ ಪದ್ಯಗಳಿಗೆ ಕತ್ತರಿ ಹಾಕಿದ ಚರಣ್ “ಕಳವಳಿಸಬೇಡ ಮನದಿ ಕುಂತಿಸುತಗಳುಕುವವನಲ್ಲ ರಣದಿ” ಪದ್ಯಕ್ಕೆ ತಾನೆ ನರ್ತಿಸಿ ತೋರಿಸಿದ. ರಂಗದಲ್ಲಿ ಆತನಿಗೆ ಎಷ್ಟೋ ಬಾರಿ ಸುದನ್ವನ ಪಾತ್ರ ಮಾಡಿದ ಅನುಭವ ಇತ್ತು. ಅವನ ಈ ಪರಿಯ ನೃತ್ಯದ ಸೊಬಗನ್ನು ನೋಡಿ ಕಿರಣ ತಾನು ಪ್ರಭಾವತಿಯಾದದ್ದಕ್ಕೆ ಬಹಳಷ್ಟು ಹಿಗ್ಗಿದಳು. ನಿಧಾನವಾಗಿ ತಾನು ಆತನಿಗೆ ಮನಸೋಲುತ್ತಿರುವೆನೆಂದಾಕೆ ಭಾವಿಸಿದಳು. ಆದರೆ ಇದ್ಯಾವುದರ ಅರಿವಿಲ್ಲದ ಚರಣ್ ಅವಳನ್ನು ಎಚ್ಚರಿಸಿ ಸುದನ್ವನ ಅಭಿನಯಕ್ಕೆ ಪ್ರಭಾವತಿಯ ಭಾವಪೂರ್ಣ ಪ್ರತಿಕ್ರಿಯೆ ಹೇಗಿರಬೇಕೆಂದು ಹೇಳಿಕೊಟ್ಟ. ಆದರೆ ಕಿರಣ ಮಾತ್ರ ಆತನೇ ಸುದನ್ವ ತಾನೇ ಪ್ರಭಾವತಿ ಎಂಬಂತೆ ಭಾವಿಸಿದಳು.


ಅಂತೂ ಇಂತೂ ಆ ಪ್ರಸಂಗ ಅಭ್ಯಾಸ ಪೂರ್ತಿ ಮುಗಿಯಿತು. ಆ ಅಭ್ಯಾಸದ ದಿನಗಳಲ್ಲಿ ಕಿರಣ ಮಾತ್ರ ಎಲ್ಲರಿಗಿಂತ ಮೊದಲೇ ಹಾಜರಾಗುತ್ತಿದ್ದಳು. ಅಲ್ಲದೆ ಅವನು ಹೇಳಿಕೊಟ್ಟ ನಡೆಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ ಅವನ ಮೆಚ್ಚುಗೆಗೆ ಪಾತ್ರಳಾದಳು. ಕೆಲವೊಮ್ಮೆ ಬೇಕೆಂದೇ ಸಂಶಯಗಳನ್ನು  ವ್ಯಕ್ತಪಡಿಸಿ ಅವನ ಸಲಹೆಗಳನ್ನು ಕೇಳುತ್ತಿದ್ದಳು. ತನಗೆ ಅದರ ಬಗ್ಗೆ ಸಂಶಯವಿಲ್ಲದಿದ್ದರೂ ಅವನ ಸಾನ್ನಿಧ್ಯ  ಅವಳಿಗೆ ತೃಪ್ತಿ ತರುತ್ತಿದ್ದುದರಿಂದ ಹಾಗೆ ಮಾಡುತ್ತಿದ್ದಳು. ಆದರೆ ಇದರ ಬಗ್ಗೆ ಆತನೇನೂ ತಲೆ ಕೆಡಿಸಿಕೊಂಡಿರಲಿಲ್ಲ.


ವಾರ್ಷಿಕೋತ್ಸವದ ದಿನ ಬಂತು. ಕಾಲೇಜಿನಲ್ಲಿ ಸಂಭ್ರಮದ ವಾತಾವರಣ. ಕಿರಣ ಆ ದಿನ ಸಂಭ್ರಮದ ಸಡಗರದ ಶೃಂಗಾರದೊಂದಿಗೆ ಕಾಲೇಜಿಗೆ ಬಂದಳು. ಕಾರಣ ಆ ದಿನದ ಅವರ ಪ್ರದರ್ಶನಕ್ಕೆ ಚರಣ್ ಕೂಡಾ ಬರುತ್ತೇನೆಂದು ಹೇಳಿದ್ದ. ಕಾಲೇಜಿಗೆ ಬಂದವಳಿಗೆ ಮೊದಲು ಎದುರಾದದ್ದು ಹಂಸಧ್ವಜ ಪಾತ್ರಧಾರಿ ವಿನಯ್. ಇವಳನ್ನು ಕಂಡ ಕೂಡಲೇ
ವಿನಯ್ ಕರೆದ. “ಏನು?” ಎನ್ನುತ್ತ ಸಮೀಪಕ್ಕೆ ಬಂದಳು.
“ಇವತ್ತು ಸ್ವಾತಿ ಬರುವುದಿಲ್ಲ, ಅವಳಿಗೆ ಟೈಫಾಯಿಡ್ ಅಂತೆ, ಅಶೋಕ್ ಸರ್‍ಗೆ ಸುಧನ್ವ ಪಾತ್ರ ಯಾರು ಮಾಡುವುದು ಅಂತ ಚಿಂತೆ ಆಗಿತ್ತು. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿತು” ಅಂದ.
“ಹೋ, ಹೌದಾ.. ಛೇ.. ಹಾಗಾದರೆ ಸುದನ್ವ ಯಾರು ಮಾಡ್ತಾರೆ? ಅಶೋಕ್ ಸರ್ ಮಾಡ್ತಾರ?”


“ ಅವರು ಸುದನ್ವ ಮಾಡಿದ್ರೆ ಪ್ರಭಾವತಿಗೆ ಕನ್ನಡ ಪಾಠ ಮಾಡ್ತಾರೆ ರಂಗಸ್ಥಳದಲ್ಲಿ.. ಅವರಲ್ಲ. ಅವರು ಚರಣ್ ಸರ್ ಗೆ  ಫೋನ್ ಮಾಡಿ ಅವರನ್ನು ಒಪ್ಪಿಸಿದ್ರು, ಚರಣ್ ಸರ್ ಒಪ್ಪಿದಾರಂತೆ. ಸುದನ್ವ ಮಾಡಿ ಅಮೇಲೆ ಮೇಳದ ಆಟಕ್ಕೆ ಹೋಗ್ತಾರಂತೆ”
ಕಿರಣಳ ಎದೆ ಢವ ಢವ ಹೊಡೆಯಲು ಆರಂಭಿಸಿತು. ಚರಣ್ ಮತ್ತು ತಾನು ಜೋಡಿಯಾಗಿ ರಂಗದಲ್ಲಿ ಆಡುವುದು… ನಿಜವಾಗಿಯೂ ತಾವಿಬ್ಬರೂ ಜೋಡಿಹಕ್ಕಿಗಳಾಗಿ ಜೀವನವೆಂಬ ರಂಗದಲ್ಲಿ ಹಾರಾಡುವುದು.. ಈ ಕಲ್ಪನೆಯೇ ಅವಳಿಗೆ ಅತೀವ ಸುಖವನ್ನು ಕೊಟ್ಟಿತು.
‘‘ಏನಾಯ್ತು?” ಅಂದ ವಿನಯ್.
“ಏನಿಲ್ಲ.. ಪಾಪ ಸ್ವಾತಿ ಹೇಗಿದ್ದಾಳೋ” ಎಂದು ಭಾವ ಮರೆಮಾಚಿದಳು
“ಹಾಗೇನೂ ತೊಂದರೆಯಿಲ್ಲವಂತೆ, ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾರಂತೆ”
“ಆಯ್ತು, ಹೋಗೋಣ, ತಯಾರಿ ಆಗ್ಬೇಕಲ್ವ”

ಅಂದು ಕಿರಣ ತಾನು ತಾನಾಗಿರಲಿಲ್ಲ. ಬಣ್ಣ ಹಚ್ಚುತ್ತಿರುವಾಗಲೂ ಏನೇನೋ ಮಧುರ ಪುಳಕಗಳು ಮೈ ತುಂಬಾ.. ನಡುವೆ ಚರಣ್ ಆಗಾಗ ಬಂದು ಕೆಲವು ಸೂಚನೆಗಳನ್ನು ಕೊಡುತ್ತಿದ್ದ. ವೇಷ ತಯಾರಾಗಿ ಪ್ರವೇಶದ ಮೊದಲು ರಂಗದಲ್ಲಿ ಯಾವ ರೀತಿ ಹೋಗಬೇಕು, ಹೇಗೆ ಹೆಜ್ಜೆ ಹಾಕಬೇಕು ಎಂಬುದರ ಬಗ್ಗೆ ವಿವರಿಸಿದ.
“ಜೀವನದಲ್ಲಿ ಕೂಡಾ ನಾವಿಬ್ಬರು ಜೊತೆಯಾಗಿ ಹೇಗೆ ಹೆಜ್ಜೆ ಹಾಕಬೇಕು ಎಂಬುದನ್ನು ಹೇಳು ರಮಣಾ” ಎಂದಳು ಆಕೆ ಮನಸ್ಸಿನಲ್ಲಿಯೇ.


   ಅಂದು ರಂಗದಲ್ಲಿ ಕಿರಣ ತಾನು ತಾನಾಗಿರಲಿಲ್ಲ. ಯಾವುದೋ ಭ್ರಮಾಧೀನ ಮಾದಕತೆಯ ಪ್ರಪಂಚದಲ್ಲಿ ತಾನಿರುವಂತೆ ಆಕೆಗೆ ಭಾಸವಾಗುತ್ತಿತ್ತು. ಚರಣ್ ಕೂಡಾ ಅವಳ ಸ್ಥಿತಿಯಲ್ಲಿನ ಬದಲಾವಣೆಯನ್ನು ಗಮನಿಸಿದ. ಅವನಿಗೂ ಅವಳ ಈ ನಡೆ ಅರ್ಥವಾಗಿತ್ತು. ಅವನ ಮನದಲ್ಲಿಯೂ ಸಂತಸ ಮಿಶ್ರಿತ ಅಚ್ಚರಿ. ಸುಧನ್ವನ ಜೊತೆಗಿನ ಸಂಭಾಷಣೆಯನ್ನು ಮುಗಿಸಿ ಜೊತೆಯಾಗಿ ರಂಗದಿಂದ ಜೊತೆಯಾಗಿ ನಿರ್ಗಮಿಸುವಾಗ
“ಅಹುದು.. ನೀನೇ ಎನ್ನಯ ರಮಣ” ಎಂದು ಅವನ ಕಿವಿಯಲ್ಲಿ ಉಸುರಿದಳು.


         ಬಬ್ರುವಾಹನ ಪ್ರಸಂಗದ ‘ಅಹುದೇ ಎನ್ನಯ ರಮಣ’ ಪದ್ಯವನ್ನು ಕಿವಿಯಲ್ಲಿ ಗುಟ್ಟಾಗಿ ಯಾಕೆ ಹೇಳಿದಳು ಎಂದು ಅವನಿಗೆ ಅರ್ಥವಾಗಿತ್ತು! ದಿಗ್ಭ್ರಮೆಯಿಂದ ಚೇತರಿಸಿಕೊಂಡ ಚರಣ್ ಸುದನ್ವನ ಮುಂದಿನ ಭಾಗದ ಅಭಿನಯಕ್ಕೆ ಪುನಃ ರಂಗಕ್ಕೆ ಪ್ರವೇಶಿಸಿದ. ಯುದ್ದದ ನಂತರ ಪ್ರಸಂಗ ಮುಕ್ತಾಯವಾಗಿ ಚೌಕಿಗೆ ಬಂದು ಸುತ್ತಲೂ ಕಣ್ಣು ಹಾಯಿಸಿದಾಗ ಕಿರಣ ಕಾಣಸಿಗಲಿಲ್ಲ. ತನ್ನ ಮುಖಾಮುಖಿ ಯಾಗುವುದನ್ನು ತಪ್ಪಿಸಿಕೊಂಡಿದ್ದಾಳೆ ಅಂದುಕೊಂಡ. ವಿನಯ್ ನನ್ನು ಕರೆದು ಅವಳ ಬಗ್ಗೆ ವಿಚಾರಿಸಿದ. “ಅವಳು ಮೈಗೆ ಹುಶಾರಿಲ್ಲ ಎಂದು ತಂದೆಯ ಜೊತೆಗೆ ಮನೆಗೆ ತೆರಳಿದ್ದಾಳೆ” ಎಂದವನು ಹೇಳಿದ.
ಚರಣ್‍ಗೆ ಏನೋ ಕಳೆದುಕೊಂಡ ಅನುಭವ. ಆದರೂ ಕರ್ತವ್ಯ ಎಚ್ಚರಿಸಿತು. ಮೇಳದ ಆಟಕ್ಕೆ ತಡವಾಗುತ್ತದೆ ಎಂದು ಕನ್ನಡ ಉಪಾನ್ಯಾಸಕರಾದ ಅಶೋಕ್‍ರ ಅನುಮತಿಯನ್ನು ಪಡೆದು ಮೇಳದ ಆಟಕ್ಕೆ ತೆರಳಿದ.
ಇದಾದ ನಂತರ ಹಲವು ಬಾರಿ ಚರಣ್ ಕಿರಣಳನ್ನು ಕಾಣಲೋಸುಗ ಏನಾದರೂ ನೆಪ ಮಾಡಿ ಕಾಲೇಜಿಗೆ ಬರುತ್ತಿದ್ದ.
ಒಂದೆರಡು ಬಾರಿ “ಅವಳಿಲ್ಲ, ರಜೆ” ಎಂಬ ಉತ್ತರ ಕೇಳಿ  ಕಂಗಾಲಾದ. ‘ಎಲ್ಲಿಗೆ ಹೋದಳು ಇವಳು. ನನ್ನಲ್ಲಿ ಬರಡಾಗಿ ಬತ್ತಿ ಹೋಗಿದ್ದ ಪ್ರೀತಿಯ ಸೆಲೆಯನ್ನು ಉಕ್ಕಿಸಿ ಅದು ಭೋರ್ಗೆರೆಯಲು ಪ್ರಾರಂಭವಾದಾಗ ತಾನು ಕಾಣದಾದಳಲ್ಲ, ಛೇ’ ಎಂದುಕೊಂಡ. ಮತ್ತೊಮ್ಮೆ ಪ್ರಯತ್ನಿಸೋಣ ಎಂದು ಅವಳಿದ್ದ ಕಾಲೇಜಿಗೆ ಬಂದಾಗ ಸಿಕ್ಕಿದ ಉತ್ತರ ಕೇಳಿ ಅವನಿಗೆ ದಿಕ್ಕೇ ತೋಚ ದಂತಾಗಿತ್ತು.
                   “ಅವಳ ಅಪ್ಪನಿಗೆ ಎಲ್ಲಿಗೋ ದೂರದೂರಿಗೆ ವರ್ಗವಾದ ಕಾರಣ ಅವಳು ಕಾಲೇಜಿನಿಂದ ವರ್ಗಾವಣಾ ಪತ್ರ ತೆಗೆದುಕೊಂಡು ಹೋಗಿದ್ದಾಳೆ” ಹುಚ್ಚನಂತಾದ ಅವನು ಈ ಯಕ್ಷಗಾನದಿಂದ ಅವಳು ಹತ್ತಿರವಾದಳು. ಇದರಲ್ಲಿದ್ದರೆ ನನಗೆ ಸದಾ ಅವಳು ನೆನಪಾಗುತ್ತಾಳೆ ಎಂದು ಮೇಳಕ್ಕೆ  ರಾಜೀನಾಮೆ ನೀಡಿ ಬೇರೊಂದು ಊರಿಗೆ ಉದ್ಯೋಗ ನಿಮಿತ್ತ ತೆರಳಿದ.

*   *   *******

ಇಷ್ಟು ಹೇಳಿ ಅವನು ನಿಲ್ಲಿಸಿದ.  ಇವನಿಗೆ  ರಸಭಂಗವಾದಂತೆನಿಸಿತು.
“ಇದೇನು ಅಪೂರ್ಣ ಕಥೆ?” ಎಂದ ಇವನು
“ಪೂರ್ಣವಾಯ್ತಲ್ಲ, ಇನ್ನೇನು ಬೇಕು?” ಎಂದ ಅವನು
“ಅಲ್ಲ ಕಿರಣ ಏನಾದಳು? ಚರಣ್ ಎಲ್ಲಿ ಹೋದ?” ಇವನು ಕೇಳಿದ.
“ಹೋ ಅದಾ.. ಅವಳು ಒಮ್ಮೆ ಚರಣ್ ಗೆ ಕಾಣಸಿಕ್ಕಿದ್ದಳು, ಪರಿಸ್ಥಿತಿಯ ಒತ್ತಡದಿಂದ ಅವಳು ಹಾಗೆ ಮಾಡಿದ್ದಂತೆ, ಚರಣ್ ಅವಳನ್ನು ಕ್ಷಮಿಸಿದ್ದಾನೆ. ಅವಳು ಈಗ ಅಜ್ಜಿಯಾಗಿದ್ದಾಳೆ, ಮೊಮ್ಮಕ್ಕಳೂ ಇದ್ದಾರೆ ಅವಳಿಗೆ” ಎಂದ ಅವನು.
“ಅದು ಸರಿ, ಅಂದು ಮೇಳ ಬಿಟ್ಟ ಚರಣ್ ಈಗೆಲ್ಲಿ?” ಎಂದ ಇವನು
“ ಇಲ್ಲಿಯೇ ಇದ್ದಾನೆ ನಿನ್ನೆದುರು… ಚರಣ್ ನಾನೇ ಕಣೋ” ಅವನೆಂದ ನಗುತ್ತಾ…
 ಇವನು ಬೆಚ್ಚಿಬಿದ್ದ.. ಮೌನ.. ಅಲ್ಲಿ ನೀರವ ಮೌನ ಅವರಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments