ಸಾಂದರ್ಭಿಕ ಚಿತ್ರ
ಯಕ್ಷಗಾನವು ಒಂದು ದೈವೀಕಲೆ. ಕಲಾವಿದನಾಗಲಂತೂ ಭಾಗ್ಯ ಬೇಕು. ಎಲ್ಲರಿಗೂ ಅದು ಸಿದ್ಧಿಸುವುದಿಲ್ಲ. ದೇವರ ಅನುಗ್ರಹದ ಜತೆ ಅವಿರತ ಪರಿಶ್ರಮವೂ ಬೇಕು. ನಾನು ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಭಾರತದ ನಾನಾ ಕಡೆ ಕೆಲಸ ಮಾಡಿದ್ದೇನೆ. ಹೊರದೇಶದಲ್ಲೂ ವೃತ್ತಿಜೀವನದ ಕೆಲಸಮಯಗಳನ್ನು ಕಳೆದಿದ್ದೇನೆ. ಸದ್ಯ ಬಾಗಲಕೋಟೆಯ ಸಮೀಪ ಉದ್ಯೋಗಿ. ವಾಸ್ತವ್ಯ ಕಾಸರಗೋಡು ಜಿಲ್ಲೆ ಪೆರಡಾಲ ಗ್ರಾಮ ನೀರ್ಚಾಲ್ ಎಂಬಲ್ಲಿ. ಹುಟ್ಟೂರು ಕಾಸರಗೋಡು ಜಿಲ್ಲೆಯ ಕುಡಾಲ್ ಮೇರ್ಕಳ ಗ್ರಾಮದ ಎಡಕ್ಕಾನ.
ಶಾಸ್ತ್ರೀಯವಾಗಿ ನಾಟ್ಯ ಕಲಿತವನಲ್ಲ. ಆದರೂ ಶಾಲಾ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಯಕ್ಷಗಾನದಲ್ಲಿ ವೇಷಗಳನ್ನು ಮಾಡಿದ್ದೆ. ಇಂಜಿನಿಯರ್ ಆಗಿ ಉದ್ಯೋಗ ಸಿಕ್ಕಿದ ಕೆಲಸಮಯಗಳ ಬಳಿಕ ಕಲ್ಲಡ್ಕದ ಸಮೀಪ ಪಂಜಿಗದ್ದೆಯ ಹೇಮಾ ಎಂಬವಳನ್ನು ವಿವಾಹವಾದೆ. ಕೆಲಸಮಯದ ಬಳಿಕ ಪುತ್ತೂರಿನಲ್ಲಿ ಅನಿವಾರ್ಯವಾಗಿ ವೇಷ ಮಾಡುವ ಹಾಗಾಯಿತು. ಮನಸ್ಸಿದ್ದು ಅಲ್ಲ. ಸಂಘಟಕರಿಗೆ ತೊಂದರೆಯಾಗಬಾರದು. ಪ್ರೇಕ್ಷಕರಿಗೆ ರಸಭಂಗವಾಗಬಾರದು ಎಂಬ ಉದ್ದೇಶದಿಂದ ಮಾತ್ರ. ಆ ವಿಶಿಷ್ಟ ಸಂದರ್ಭವನ್ನು ವೇಷ ಮಾಡಿದ ಕಾರಣ ಉಂಟಾದ ಪರಿಣಾಮವನ್ನು ಓದುಗರಲ್ಲಿ ಹಂಚಿಕೊಳ್ಳೋಣ ಎನಿಸಿತು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
1990ರ ಸುಮಾರಿಗೆ ಪುತ್ತೂರಿನಲ್ಲಿ ಚೌತಿಹಬ್ಬದ ಸಂದರ್ಭ. ಪ್ರದರ್ಶನವೊಂದು ಏರ್ಪಾಡಾಗಿತ್ತು. ಸಂಘಟಕರು ಪ್ರಸಿದ್ಧ ಕಲಾವಿದರಾದ ಹಾಸ್ಯರತ್ನ ನಯನಕುಮಾರರು. ಪ್ರಸಂಗ ಪ್ರಚಂಡ ಕೌಶಿಕ. ಹಿಮ್ಮೇಳಕ್ಕೆ ಪುತ್ತಿಗೆ ರಘುರಾಮ ಹೊಳ್ಳರು, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು. ವೇಷಕ್ಕೆ ಪುತ್ತೂರು ಚಂದ್ರಶೇಖರ ಹೆಗ್ಡೆಯವರು. ಕೆ. ಗೋವಿಂದ ಭಟ್ಟರು. ಉದ್ಯಾವರ ಜಯಕುಮಾರರು. ಎಲ್ಲರೂ ಘಟಾನುಘಟಿಗಳು. ಪ್ರಸಂಗ ಆರಂಭವಾಗುವ ಸಮಯ ಸಮೀಪಿಸಿದರೂ ಮೇನಕೆ ಪಾತ್ರಧಾರಿ ಉದ್ಯಾವರ ಜಯಕುಮಾರರು ಬಂದಿರಲಿಲ್ಲ.
ಅವರಿಗೆ ಬಹಳ ದೂರದಿಂದ ಬರಬೇಕಿತ್ತು. ಅಲ್ಲದೆ ನಾನು ಇಲ್ಲಿಗೆ ತಲುಪಿದ್ದೇನೆ ಎಂದು ಹೇಳಲು ಆಗ ಮೊಬೈಲ್ ವ್ಯವಸ್ಥೆಯೂ ಇರಲಿಲ್ಲ. ಸಂಪರ್ಕಕ್ಕೆ ಮಾಧ್ಯಮಗಳು ಈಗಿನಂತೆ ಇಲ್ಲದ ಕಾಲ ಅದು. ಅವರು ಸರಿಯಾದ ಸಮಯಕ್ಕೆ ಹೊರಟಿದ್ದರು. ಆದರೆ ಹಬ್ಬದ ದಿನ ಆಗಿದ್ದ ಕಾರಣ ಎಲ್ಲಾ ಕಡೆಗಳಲ್ಲೂ ಮೆರವಣಿಗೆ ಜನಸಾಗರ. ಟ್ರಾಫಿಕ್ ಜಾಮ್ ಆಗಿದ್ದ ಕಾರಣ ಅವರಿಗೆ ಸಕಾಲಕ್ಕೆ ಬರಲಾಗಲಿಲ್ಲ. ಕಲಾವಿದರೆಲ್ಲರಿಗೂ ಗೊಂದಲ. ನಾನೂ ಚೌಕಿಯಲ್ಲಿದ್ದೆ. ಶ್ರೀ ಕೆ. ಗೋವಿಂದ ಭಟ್ಟರು ನನ್ನನ್ನು ಕರೆದರು. ನಾನು ಹೋದೆ. “ನೀನು ಮೀಸೆ ತೆಗೆ” ಎಂದರು.
ಮೇನಕೆ ಮಾಡು ಎಂದು ಹೇಳಿದಾಗ ನಾನು ಭಯಗೊಂಡೆ. ಧರ್ಮಸ್ಥಳ ಮೇಳದ ಮೇರು ಕಲಾವಿದರುಗಳ ತಂಡ. ನನ್ನಿಂದ ಆಗದು ಎಂದೆ. ಆಗ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ನನ್ನ ಬಳಿ ಬಂದು, “ಹೆದರೆಡಿ ಶ್ರೇಷ್ಠ ಕಲಾವಿದರ, ವೃತ್ತಿಕಲಾವಿದರ ಜತೆ ವೇಷ ಮಾಡುವುದು ಬಹಳ ಸುಲಭ. ಎಂಗೊ ಎಲ್ಲಾ ಇಪ್ಪಗ ಹೆದರುಲಾಗ. ನಿಂಗೊ ಧೈರ್ಯಲ್ಲಿ ವೇಷ ಮಾಡಿ” ಎಂದರು. ನಾನು ಒಲ್ಲದ ಮನಸ್ಸಿನಿಂದ ಸಮ್ಮತಿಸಿದೆ. ಮೇಕಪ್ ಮಾಡಿದರು. ನನಗಾಗುವ ರವಿಕೆಯೂ ಇರಲಿಲ್ಲ. ಅಂತೂ ಒಂದನ್ನು ಹಾಕಿಕೊಂಡು ವೇಷ ಸಿದ್ಧವಾಯಿತು.
ಸ್ವರ್ಗದ ಅಪ್ಸರೆ ಮೇನಕೆ… ಕನ್ನಡಿ ನೋಡಿದಾಗ ಭೂಲೋಕದ ಸಾಮಾನ್ಯ ಹೆಣ್ಣಿನಂತೆ ಕಾಣಿಸುತ್ತಿದ್ದೇನೋ ಎಂದು ಅನಿಸಿತು. ಮೇಕಪ್ ಮಾಡುವಾಗ ಭಾಗವತರು, ಮದ್ದಳೆಗಾರರು, ಕಲಾವಿದರೆಲ್ಲಾ ಪದ್ಯ, ಪ್ರಸಂಗನಡೆಯನ್ನು ಹೇಳಿಕೊಟ್ಟಿದ್ದರು. ಕೆ. ಗೋವಿಂದ ಭಟ್ಟರೂ ಧೈರ್ಯ ತುಂಬಿದರು. ಆಗ ಉದ್ಯಾವರ ಜಯಕುಮಾರರು ಬಂದರು. ಸಮಯವಿರಲಿಲ್ಲ. ಮೇಕಪ್ ಮಾಡಿ ವೇಷ ಮಾಡುವಷ್ಟು. ನೀವೇ ಮಾಡಿ ಎಂದು ನನ್ನನ್ನು ಹುರಿದುಂಬಿಸಿ ಕ್ರಮಗಳನ್ನು ಚಂದವಾಗಿ ಹೇಳಿಕೊಟ್ಟರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಅಂತೂ ಪ್ರಸಂಗದುದ್ದಕ್ಕೂ ಪುತ್ತಿಗೆ ರಘುರಾಮ ಹೊಳ್ಳರೂ ಬಲ್ಲಾಳರೂ ನಗುತ್ತಾ ನನ್ನನ್ನು ಪ್ರೋತ್ಸಾಹಿಸಿದರು. ಕೆ. ಗೋವಿಂದ ಭಟ್ಟರೂ ನಾನು ಸೋಲದಂತೆ ನೋಡಿಕೊಂಡರು. ಪ್ರದರ್ಶನ ಮುಗಿದಾಗ ಮನಸ್ಸು ಹಗುರವಾಗಿತ್ತು. ಕಲಾವಿದರನ್ನು ವಿಮರ್ಶಿಸುವುದು ಬಹಳ ಸುಲಭ. ಅನುಭವಿಸಿದಾಗ ಕಷ್ಟ ಎಷ್ಟು ಎಂಬ ಅರಿವಾಗುತ್ತದೆ. ಅಂತೂ ಬಣ್ಣ ತೆಗೆದು ಮನೆ ಸೇರಿದೆ. ಬಾಗಿಲು ಬಡಿದು ಕರೆದೆ. ಕಿಟಕಿ ತೆರೆದು ನೋಡಿದ ನನ್ನವಳು ಚೀರಿ ಬೊಬ್ಬಿಟ್ಟಳು. ಯಾಕೆ ಹೀಗೆ? ಮತ್ತೆ ತಿಳಿಯಿತು. ಹೋಗುವಾಗ ಮೀಸೆ ಇತ್ತು. ವೇಷ ಮಾಡಲು ಮೀಸೆ ಬೋಳಿಸಿದ್ದು ನೆನಪಾಯಿತು.
ನನ್ನವಳು ಕಿಟಿಕಿ ಮುಚ್ಚಿ ಒಳಕೋಣೆ ಸೇರಿಕೊಂಡಿದ್ದಳು. ಕೂಗಿ ಕರೆದೆ. ವಿಚಾರಗಳನ್ನು ಹೇಳಿದೆ. ಒಳಕೋಣೆಯಿಂದ ಹೊರಬಂದು ಕಿಟಿಕಿಯ ಮೂಲಕ ಮತ್ತೆ ನೋಡಿದಳು. ಮಾತನಾಡಿಸಿ ಮತ್ತೊಮ್ಮೆ ನಡೆದುದನ್ನು ವಿವರಿಸಿದೆ. ನಾನೆಂದು ನಿಜವಾದ ಬಳಿಕ ಬಾಗಿಲು ತೆರೆದಳು. ಮುನಿಸಿಕೊಂಡಿದ್ದಳು. ಆಗಾಗ ನನ್ನನ್ನೇ ನೋಡುತ್ತಿದ್ದಳು. ಬೇಸರದ ಜತೆ ನಗುವೂ ಇಣುಕುತ್ತಿತ್ತು. ಯಾವಾಗಲೂ ಪ್ರೀತಿಯಿಂದ ಊಟ ಬಡಿಸುವವಳು ಅಂದು ಸುಮ್ಮನಿದ್ದಳು. ನಾನು ಉಂಡು ಬಂದೆ. ವೇಷ ಮಾಡಿದ್ದೇಕೆಂದು ಆಕ್ಷೇಪಿಸಿ ಮತ್ತೆ ಮೌನಕ್ಕೆ ಶರಣಾದಳು. ಬೆಳಗ್ಗೆ ಎದ್ದು ನಾನು ತವರುಮನೆಗೆ ಹೋಗುತ್ತೇನೆ ಎಂದಳು. ನಾನು ನಗಾಡಿದೆ.
ಅವಳು ಸಿದ್ಧಳಾಗಿ ನಡೆದೇಬಿಟ್ಟಳು. ಸಂಜೆ ಹೋಗಿ ಸಮಾಧಾನ ಪಡಿಸೋಣ ಎಂದು ಸುಮ್ಮನಾದೆ. ಸಂಜೆ ಲ್ಯಾಂಡ್ ಲೈನ್‍ಗೆ ಕರೆ ಮಾಡಿದೆ. ನೀವು ಬಂದರೂ ನಾನು ಬರುವುದಿಲ್ಲ ಎಂದಳು. ನಾನು ಸುಮ್ಮನಾದೆ. ಮರುದಿನ ಸಂಜೆ ಅವಳೇ ಫೋನ್ ಮಾಡಿ ‘ನನ್ನನ್ನು ಕರೆದುಕೊಂಡು ಹೋಗಲು ಯಾವಾಗ ಬರುತ್ತೀರಿ’ ಎಂದಳು. ಹೋಗಿ ಕರೆದುಕೊಂಡು ಬಂದೆ. ಈಗಲೂ ಆ ಘಟನೆಯನ್ನು ನೆನಪಿಸಿ ನಗುತ್ತಾ ಕೆಲವೊಮ್ಮೆ ಹುಸಿಕೋಪವನ್ನು ತೋರುತ್ತಾಳೆ ನನ್ನವಳು. ವೇಷ ಮಾಡಿದ ಕಾರಣದಿಂದ ಮಡದಿಯೊಡನೆ ಹೀಗೊಂದು ಪ್ರಣಯ ಕಲಹ ನಡೆಯಿತು.