Saturday, January 18, 2025
Homeಯಕ್ಷಗಾನಯಕ್ಷಗಾನಕ್ಕೆ ಡೇರೆ ಮೇಳಗಳು ಬಂದದ್ದು ಹೇಗೆ ? (ಮಹನೀಯರ ಮಹಾ ನುಡಿ-ಭಾಗ 7)

ಯಕ್ಷಗಾನಕ್ಕೆ ಡೇರೆ ಮೇಳಗಳು ಬಂದದ್ದು ಹೇಗೆ ? (ಮಹನೀಯರ ಮಹಾ ನುಡಿ-ಭಾಗ 7)

(ಡಾ. ಶೇಣಿ ಗೋಪಾಲಕೃಷ್ಣ ಭಟ್ – ‘ಯಕ್ಷಗಾನ ಮತ್ತು ನಾನು’ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ – 1981)  
ಯಕ್ಷಗಾನದಲ್ಲಿ ಬಯಲಾಟ ಮತ್ತು ತಾಳಮದ್ದಳೆ ಎಂಬ ಎರಡು ಪ್ರಾಕಾರಗಳು ಮೊದಲಿನಿಂದಲೂ ರೂಡಿಯಲ್ಲಿ ಬೆಳೆದು ಬಂದದ್ದವಾದರೂ ‘ಯಕ್ಷಗಾನ ನಾಟಕ’ ಎಂಬ ಮೂರನೆಯದೊಂದು ಪ್ರಾಕಾರವನ್ನು ಸೃಷ್ಟಿಸಿದವರು ಕುರಿಯ ವೆಂಕಟರಮಣ ಶಾಸ್ತ್ರಿ ಎಂಬವರು.

ಮುಂದಿನ ದಿನಗಳಲ್ಲಿ ಯಕ್ಷಗಾನ ವ್ಯವಸಾಯದಿಂದ ತನ್ನನ್ನೂ ರಂಗವನ್ನೂ ಮೆರೆಸಿದ ವಿಠಲ ಶಾಸ್ತ್ರಿಗಳ ತಂದೆಯವರಾದ ಅವರು ಅಭಿಜಾತ ಕಲಾವಿದರಿದ್ದುದರಿಂದ ರಂಗ ವೈಭವಗಳೊಂದಿಗೆ, ದೊಡ್ಡ ನಾಟಕ ಕಂಪೆನಿಯವರಂತೆ ವಿವಿಧ ಪರಿಕರಗಳ ಸಂಗ್ರಹಣದಿಂದ, ಬೇರೆ ಬೇರೆ ಕಡೆಗಳಲ್ಲಿ ಹಂಗಾಮಿ ಥಿಯೇಟರುಗಳನ್ನು ರಚಿಸಿ, ಕಲಾವಿದರ ದೊಡ್ಡ ಗುಂಪೊಂದನ್ನು ಕಟ್ಟಿಕೊಂಡು ಯಕ್ಷಗಾನ ನಾಟಕಗಳನ್ನಾಡುತ್ತಿದ್ದರು. ಒಮ್ಮೆ ಕಾಸರಗೋಡಿನಲ್ಲಿಯೂ ‘ಮೊಕ್ಕಾಂ’ ಮಾಡಿಕೊಂಡು ತಮ್ಮ ನಾಟಕಗಳನ್ನು ಪ್ರದರ್ಶಿಸುತ್ತಿದ್ದಾಗ ಪ್ರಹ್ಲಾದ ಚರಿತ್ರೆಯನ್ನು ಅಭಿನಯಿಸಿದ್ದರು.

ಕಿಕ್ಕಿರಿದ ಪ್ರೇಕ್ಷಕರ ಸಮೂಹದಲ್ಲಿ ಒಬ್ಬನಾಗಿ ಕುಳಿತ ನಾನು ವಿಶೇಷ ಕುತೂಹಲದಿಂದ ಆ ಪ್ರಸಂಗವನ್ನು ನೋಡಿದೆ. ಹಿರಿಯ ಶಾಸ್ತ್ರಿಗಳ ಹಿರಣ್ಯಕಶ್ಯಪು, ಕಿರಿಯ ಶಾಸ್ತ್ರಿಗಳ ಪ್ರಹ್ಲಾದನೂ, ಕಾಡೂರು ರಾಮ ಭಟ್ಟರ ಹಿರಣ್ಯಾಕ್ಷನ ಪಾತ್ರವೂ ನನ್ನಲ್ಲಿ ಅದ್ಭುತ ಪರಿಣಾಮವನ್ನುಂಟುಮಾಡಿದುವು. ಯಕ್ಷಗಾನ ವೇಷಧಾರಿಗಳಲ್ಲಿ ಆಗ ದೊಡ್ಡ ಹೆಸರಾಗಿದ್ದ ಹೊಸಹಿತ್ತಿಲು ಗಣಪತಿ ಭಟ್ಟರು ದೇವೇಂದ್ರನಾಗಿಯೂ ಇತರ ಕೆಲವು ಹೊಸ ಮುಖಗಳು ವಿವಿಧ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು.

ಬಲಿಪ ನಾರಾಯಣ ಭಾಗವತರು(ಹಿರಿಯ) ಹಾಡುಗಾರರಾಗಿಯೂ, ಕುದ್ರೆಕೋಡ್ಲು ರಾಮ ಭಟ್ಟರು ಮದ್ದಳೆಗಾರರಾಗಿಯೂ ಇದ್ದುದರಿಂದ ಹಿಮ್ಮೇಳಕ್ಕೆ ಪೂರ್ಣ ಕಳೆ ತುಂಬಿ ಕರ್ಣಾನಂದಕರವಾಗಿತ್ತು. ಯಕ್ಷಗಾನದ ಈ ಪ್ರಕಾರವೂ ಜನಪ್ರಿಯವಾಗಬಲ್ಲುದೆಂಬುದನ್ನು ಅನುಭವದಿಂದ ನಾನಂದು ಕಂಡುಕೊಂಡೆ. ಹೀಗೆ ಜನಪ್ರಿಯನಾಗಿ ಮುಂದೆಯೂ ಈ ಪ್ರಕಾರವು ಬೆಳೆದು ಬರಬಹುದಾಗಿತ್ತಾದರೂ ಏಕೋ ವೆಂಕಟರಮಣ ಶಾಸ್ತ್ರಿಯವರು ತಮ್ಮ ಕಂಪೆನಿಯನ್ನು ಮುಚ್ಚಿದರು.

ಆದರೆ ಅವರ ಸ್ಪೂರ್ತಿಯು ಸ್ವಲ್ಪ ಸಮಯದಲ್ಲೇ ವಿಠಲ ಶಾಸ್ತ್ರಿಗಳನ್ನು ಯಕ್ಷಗಾನದ ಬಯಲಾಟದ ರಂಗಸ್ಥಳಕ್ಕೆ ಬರುವಂತೆ ಮಾಡಿತು. ಇದಕ್ಕಿಂತಲೂ ಪ್ರಾಮುಖ್ಯವಾದ ಕೊಡುಗೆಯೊಂದು ಈ ನಾಟಕ ಪ್ರಾಕಾರದಿಂದ ಯಕ್ಷಗಾನ ಮೇಳದ ಸಂಚಾಲಕರಿಗೆ ದೊರೆಯಿತೆಂದು ಹೇಳಬೇಕು.

ಬಯಲಾಟಗಳಿಗೆ ಡೇರೆಯನ್ನು ರಚಿಸಿ, ಪ್ರೇಕ್ಷಕರು ಟಿಕೇಟಿನ ಮೂಲಕ ಪ್ರವೇಶಿಸಿ, ಆರಾಮವಾಗಿ ತಂತಮ್ಮ ಆಸನಗಳಲ್ಲಿ ಕುಳಿತು ನೋಡುವ ಸೌಲಭ್ಯವನ್ನೊದಗಿಸಿದರೆ ಆಡುವವರಿಗೂ, ನೋಡುವವರಿಗೂ ಅನುಕೂಲತೆ ಹೆಚ್ಚಬಹುದೆಂಬ ವಿಶ್ವಾಸವಿಟ್ಟು, ಬಹು ಕಾಲದಿಂದಲೂ ಯಕ್ಷಗಾನ ಮೇಳದ ಸಂಚಾಲಕರಾಗಿದ್ದ ಕಲ್ಲಾಡಿ ಕೊರಗ ಶೆಟ್ಟರು ಮೊದಲಿಗೆ ಇದನ್ನು ಬಳಕೆಗೆ ತಂದರು. ಇತಿಮಿತಿಯ ರಂಗಶೃಂಗಾರದಿಂದ ಅವರು ತೊಡಗಿದ ಈ ಪದ್ಧತಿಯು ಈ ದಿನಗಳಲ್ಲಿ ಎಲ್ಲ ಮೇಳದ ಸಂಚಾಲಕರಿಗೂ ದೊಡ್ಡ ದೇಣಿಗೆಯಾಗಿ ಬೆಳೆದಿದೆ.

ಅಲ್ಲದೆ ಹೋದರೆ ದಿನಕ್ಕೊಬ್ಬನಂತೆ ಬಯಲಾಟದ ಖರ್ಚು ವೆಚ್ಚಗಳನ್ನು ವಹಿಸಿ ಆಟದ ವೀಳ್ಯದ ಮೊತ್ತವನ್ನು ಕೊಡುವ ದಾತೃಗಳನ್ನು ಹುಡುಕಿ, ಅವರ ಕೈಯಳತೆಗನುಸರಿಸಿ, ಸಂಚಾಲಕನೂ ತನ್ನ ಕೈಗಳನ್ನು ಚಾಚಬೇಕಾಗಿದ್ದ ಪರಿಸ್ಥಿತಿಯು ಇಂದಿಗೂ ಉಳಿಯುತ್ತಿತ್ತು. ಅನಾಥಾಶ್ರಮದಲ್ಲಿ ಬೆಳೆಯುತ್ತಿದ್ದವನು ತನ್ನದೇ ಮನೆಯಲ್ಲಿ ಸ್ವಂತ ಸಂಪಾದನೆಯಿಂದ ಬದುಕುವಾಗ ಸಿಕ್ಕುವ ತೃಪ್ತಿಯಂತೆ ಎಲ್ಲ ಸಂಚಾಲಕರ ಸಹಿತ ಇಡೀ ಕೂಟದವರಿಗೆ ಈ ಮಾರ್ಗದರ್ಶನ ನೆಮ್ಮದಿಯನ್ನೂ ಭರವಸೆಯನ್ನೂ ತಂದಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments