Saturday, January 18, 2025
Homeಯಕ್ಷಗಾನಗಿರಕಿಗಳ ಸುತ್ತ - ಚಂದ್ರಶೇಖರ ಧರ್ಮಸ್ಥಳ (Chandrashekhara Dharmasthala) 

ಗಿರಕಿಗಳ ಸುತ್ತ – ಚಂದ್ರಶೇಖರ ಧರ್ಮಸ್ಥಳ (Chandrashekhara Dharmasthala) 

ಉತ್ತಮ ನಾಟ್ಯ, ಗಿರಕಿ ಹೊಡೆಯುವ ಕಲೆ, ಹಿತಮಿತವಾದ ಮಾತಿನ ಜತೆ, ರೂಪ ಮತ್ತು ವೇಷಕ್ಕೆ ಬೇಕಾದಂತೆ ದೇಹವೂ ಇದ್ದರೆ  ತೆಂಕು ತಿಟ್ಟು ಯಕ್ಷಗಾನದ ಪುಂಡುವೇಷಗಳಲ್ಲಿ ಕಲಾವಿದ ರಂಜಿಸುತ್ತಾನೆ ಎಂಬುದು ನಿಸ್ಸಂಶಯ. ಮಾತುಗಾರಿಕೆಯತ್ತ ಗಮನಹರಿಸಿ ಅಭ್ಯಸಿಸಿದರೆ ಒಂದನೇ ಪುಂಡುವೇಷಧಾರಿಯಾಗಲು ಅವಕಾಶಗಳೂ ಒದಗುತ್ತದೆ. 

ತೆಂಕುತಿಟ್ಟಿನಲ್ಲಿ ಪ್ರಸಕ್ತ ಪುಂಡುವೇಷಧಾರಿಗಳಾಗಿ ಮಿಂಚುತ್ತಿರುವ ಅನೇಕ ಕಲಾವಿದರಲ್ಲಿ ಧರ್ಮಸ್ಥಳ ಮೇಳದ ಕಲಾವಿದ  ಶ್ರೀ ಚಂದ್ರಶೇಖರ ಧರ್ಮಸ್ಥಳ ಅವರೂ ಒಬ್ಬರು. ಸಾಧನೆಯ ಮೂಲಕ ಬಹುಬೇಡಿಕೆಯ ಪುಂಡುವೇಷಧಾರಿಯಾಗಿ ಬೆಳೆದು ಕಾಣಿಸಿಕೊಂಡವರು. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 1975ನೇ ಇಸವಿ ಸೆಪ್ಟಂಬರ್ 22ನೇ ತಾರೀಕಿನಂದು ಶ್ರೀ ಗುರುವಪ್ಪ ಪೂಜಾರಿ ಮತ್ತು ಶ್ರೀಮತಿ ನೀಲಮ್ಮ ದಂಪತಿಗಳ ಪುತ್ರನಾಗಿ ಜನನ. ಓದಿದ್ದು 5ನೇ ತರಗತಿ ವರೇಗೆ. 

ಬಾಲಕನಾಗಿದ್ದಾಗ ತಂದೆಯವರ ಜತೆ ಚಂದ್ರಶೇಖರ ಅವರೂ ಒಂದು ವರ್ಷ ಕುಲಕಸುಬನ್ನು ಮಾಡಿ ಆಮೇಲೆ  2 ವರ್ಷಗಳ ಕಾಲ ಹೋಟೆಲ್‍ನಲ್ಲಿ ಕೆಲಸ ಮಾಡಿದ್ದರು.  ಮಿತ್ರರೊಬ್ಬರು ಅಂಗಡಿ ಕೆಲಸ ಬಿಟ್ಟು ಯಕ್ಷಗಾನ ಸೇರುತ್ತೇನೆ ಎಂದಾಗ ಇವರಿಗೂ ಆಸಕ್ತಿ ಹುಟ್ಟಿ ನಾಟ್ಯ ಕಲಿಯಲು ನಿರ್ಧರಿಸಿದರು. 1990-91ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರಕ್ಕೆ ಸೇರಿ ಕೋಳ್ಯೂರು ರಾಮಚಂದ್ರ ರಾವ್ ಮತ್ತು ತಾರಾನಾಥ ಬಲ್ಯಾಯ ವರ್ಕಾಡಿಯವರಿಂದ ನಾಟ್ಯ ಕಲಿತರು. ನಾಟ್ಯ ಕಲಿತು ಬಪ್ಪನಾಡು ಮೇಳಕ್ಕೆ ಸೇರಿ ಮೊದಲ ತಿರುಗಾಟ ಮಾಡಿದರು.

ಯಾಕೋ ಆಟ ಬೇಡ ಎಂದು ತೀರ್ಮಾನಿಸಿ ಮತ್ತೆ 2 ತಿಂಗಳು ಹೋಟೆಲ್ ಕೆಲಸ ಮಾಡಿದ್ದರು. ಆಗ ಕರ್ನಾಟಕ ಮೇಳದಿಂದ ಕರೆಬಂದಾಗ ನಿರಂತರ 11 ವರ್ಷಗಳ ಕಾಲ ಕರ್ನಾಟಕ ಮೇಳದಲ್ಲಿ ತಿರುಗಾಟ ಮಾಡಿದರು. ಮಳೆಗಾಲದ ಮುಂಬಯಿ ಪ್ರದರ್ಶನಗಳಲ್ಲೂ ಭಾಗವಹಿಸಿದರು. ಕೋಟಿ ಚೆನ್ನಯ ಪ್ರಸಂಗದಲ್ಲಿ ಬಾಲಕೋಟಿ ಮತ್ತು ಚೆನ್ನಯ್ಯರಾಗಿ, ದೇವಪೂಂಜ ಪ್ರತಾಪದಲ್ಲಿ ದೇವಪೂಂಜನಾಗಿ, ಕೋರ್ದಬ್ಬು ಬಾರಗ ಪ್ರಸಂಗದಲ್ಲಿ ಬಬ್ಬು ಪಾತ್ರದಲ್ಲಿ, ಮಹಾಂಕಾಳಿ ಅಪ್ಪೆ ಪ್ರಸಂಗದಲ್ಲಿ ಮಹಾಂಕಾಳಿ ಪಾತ್ರ, ಕಚ್ಚೂರ ಮಾಲ್ದಿ ಪ್ರಸಂಗದ ನಾಗರತಿ (ರಾಜಕುಮಾರಿ) ಪಾತ್ರ ಇವರಿಗೆ ಹೆಸರನ್ನು ತಂದುಕೊಟ್ಟಿತ್ತು. 

ಕರ್ನಾಟಕ ಮೇಳವು ತಿರುಗಾಟವನ್ನು ನಿಲ್ಲಿಸಿದ ನಂತರ ಕಿಶನ್ ಹೆಗ್ಡೆಯವರ ಸಂಚಾಲಕತ್ವದ ಸಾಲಿಗ್ರಾಮ ಮೇಳದಲ್ಲಿ ತಿರುಗಾಟ. ಬಳಿಕ ಪುತ್ತೂರು ಮೇಳದಲ್ಲಿ 1 ವರ್ಷ ತಿರುಗಾಟ ಮಾಡಿದರು. ಮುಂದೆ ಎಡನೀರು ಮೇಳದ ತಿರುಗಾಟದಲ್ಲಿ ಚಂದ್ರಶೇಖರರ ವೇಷವನ್ನು ಧರ್ಮಸ್ಥಳದ ಖಾವಂದರು ನೋಡಿ ಅವರನ್ನು ಧರ್ಮಸ್ಥಳ ಮೇಳಕ್ಕೆ ಸೇರಿಸಿದ್ದರು. 

2008ರಿಂದ ತೊಡಗಿ ಇಂದಿನವರೆಗೂ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡುತ್ತಾ ಬಂದಿದ್ದಾರೆ.  ಧರ್ಮಸ್ಥಳ ಮೇಳದ ಕಲಾವಿದ ಎಂದು ಹೇಳಿಕೊಳ್ಳುವಾಗ ಹೆಮ್ಮೆಯಾಗುತ್ತದೆ ಎನ್ನುವ ಚಂದ್ರಶೇಖರರಿಗೆ ಅಭಿಮನ್ಯು, ಸುದರ್ಶನ, ಅಶ್ವತ್ಥಾಮ, ಭಾರ್ಗವ, ಲಕ್ಷ್ಮಣ, ಚಂಡಮುಂಡರು, ಬಭ್ರುವಾಹನ ಮೊದಲಾದ ಪಾತ್ರಗಳು ಮತ್ತು  ಕಿರೀಟ ವೇಷಗಳಲ್ಲಿ ಹಿರಣ್ಯಾಕ್ಷ, ಇಂದ್ರಜಿತು, ಶಿಶುಪಾಲ ಮೊದಲಾದ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬಲ್ಲವರಾದರೂ ಇವರಿಗೆ ಪುಂಡುವೇಷಗಳಲ್ಲಿ ಹೆಚ್ಚು ಆಸಕ್ತಿ. 

ತನ್ನ 25ನೇ ತಿರುಗಾಟದ ಸಂಭ್ರಮವನ್ನು ಮಂಗಳೂರು ಸರಕಾರೀ ಕಾಲೇಜು ಮೈದಾನದಲ್ಲಿ ‘ರಜತಚಂದ್ರ’ ಎಂಬ ಕಾರ್ಯಕ್ರಮ ಮಾಡಿ ಆಚರಿಸಿದ್ದರು. ಕಲಾಭಿಮಾನಿಗಳೆಲ್ಲರೂ ಸಹಕರಿಸಿ ಸ್ಪಂದಿಸಿದ್ದಾರೆ ಎನ್ನುವ ಚಂದ್ರಶೇಖರರಿಗೆ ಮನೆಯವರ ಸಹಕಾರದಿಂದ ಇನ್ನಷ್ಟು ಕಾಲ ಯಕ್ಷಗಾನದಲ್ಲಿ ಮುಂದುವರಿಯುವ ಆಸೆ ಇದೆ. 

ಶ್ರೀ ಚಂದ್ರಶೇಖರ ಧರ್ಮಸ್ಥಳ ಅವರು ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನಿತರೂ ಆಗಿದ್ದಾರೆ. ಭಾರತದ ನಾನಾ ಕಡೆ ಅಲ್ಲದೆ ಬಹ್ರೈನ್, ಮಸ್ಕತ್, ಕುವೈಟ್, ದುಬಾಯಿ, ಲಂಡನ್, ಅಮೇರಿಕಾದಲ್ಲಿ ನಡೆದ ಪ್ರದರ್ಶನಗಳಲ್ಲೂ ಭಾಗವಹಿಸಿದ್ದಾರೆ.

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments