Saturday, January 18, 2025
Homeಯಕ್ಷಗಾನಪ್ರಶಸ್ತಿ ಪುರಸ್ಕೃತರ ಪರಿಚಯ - ಶ್ರೀ ವಿಷ್ಣು ಗಜಾನನ ಭಟ್ ಮೂರೂರು, ಕೆ. ಅಜಿತ್‍ಕುಮಾರ್ ಅಂಬಲಪಾಡಿ

ಪ್ರಶಸ್ತಿ ಪುರಸ್ಕೃತರ ಪರಿಚಯ – ಶ್ರೀ ವಿಷ್ಣು ಗಜಾನನ ಭಟ್ ಮೂರೂರು, ಕೆ. ಅಜಿತ್‍ಕುಮಾರ್ ಅಂಬಲಪಾಡಿ

ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಕಳೆದ ಏಳು ವರ್ಷಗಳಿಂದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಮತ್ತು ಟಿ. ವಿ.ರಾವ್ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿದೆ. ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ನವಂಬರ್ 7, ಶನಿವಾರ ಸಂಜೆ 5.15 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ.ಪ್ರಶಸ್ತಿ ಸ್ವೀಕರಿಸಲಿರುವ ಈರ್ವರು ಕಲಾವಿದರ ಕಿರು ಪರಿಚಯ.


ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ – ಶ್ರೀ ವಿಷ್ಣು ಗಜಾನನ ಭಟ್ ಮೂರೂರು


ಇವರು ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ.ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಮೀಪದ ಮೂರೂರಿನವರು. ಗಜಾನನ ಭಟ್-ಭಾಗೀರಥಿ ದಂಪತಿಯ ಸುಪುತ್ರರು.ಎಸ್. ಎಸ್. ಎಲ್.ಸಿ.ಅನಂತರ ಹದಿನಾರರ ಕಿರು ಹರೆಯದಲ್ಲೇ ಯಕ್ಷರಂಗ ಪ್ರವೇಶಿಸಿ ನಾಲ್ಕು ದಶಕಗಳ ಕಾಲ ಯಕ್ಷಲೋಕದ ಸ್ತ್ರೀ ಪಾತ್ರಗಳನ್ನು ಪರಿಣಾಮಕಾರಿಯಾಗಿ ಕಲಾ ರಸಿಕರಿಗೆ ದರ್ಶಿಸಿದವರು. ಯಕ್ಷಗಾನದ ಆರಂಭಿಕ ಪಾಠವನ್ನು ಮೂರೂರು ರಾಮ ಹೆಗಡೆಯವರಿಂದ ಪಡೆದರು. ಮುಂದೆ ಕರ್ಕಿ ಮೇಳದ ಪ್ರಸಿದ್ಧ ಕಲಾವಿದರಾದ ಪಿ. ವಿ. ಹಾಸ್ಯಗಾರರಲ್ಲಿ ಯಕ್ಷನಾಟ್ಯ ತರಬೇತಿ ಪಡೆದು ಶ್ರೇಷ್ಠ ಕಲಾವಿದರಾಗಿ ರೂಪುಗೊಂಡರು.


ಗುಂಡುಬಾಳ, ಅಮೃತೇಶ್ವರೀ, ಹಿರೆಮಹಾಲಿಂಗೇಶ್ವರ, ಶಿರಸಿ, ಪಂಚಲಿಂಗ, ಪೆರ್ಡೂರು, ಇಡಗುಂಜಿ, ಪೂರ್ಣಚಂದ್ರ ಮೇಳಗಳಲ್ಲಿ ಕಲಾಸೇವೆ ಗೈದಿರುತ್ತಾರೆ. ಪೌರಾಣಿಕ ಮತ್ತು ಕಾಲ್ಪನಿಕ ಪ್ರಸಂಗಗಳಲ್ಲಿ ಸ್ತ್ರೀ ಪಾತ್ರಗಳನ್ನು ಮನೋಜ್ಞವಾಗಿ ಚಿತ್ರಿಸಿ ಕಲಾರಸಿಕರ ಪ್ರೀತ್ಯಾದರಕ್ಕೆ ಪಾತ್ರರು. ಪಾತ್ರದ ಮನೋಧರ್ಮ ಅರಿತು ಅಭಿವ್ಯಕ್ತಿಸುವ ಕಲೆಯನ್ನು ಕರಗತ ಮಾಡಿಕೊಂಡವರು. ಗರತಿಯ ಪಾತ್ರ ನಿರ್ವಹಣೆಯಲ್ಲಂತೂ ವಿಶೇಷ ಸಿದ್ಧಿ-ಪ್ರಸಿದ್ಧಿ ಪಡೆದವರು. ಕರುಣರಸ ಪ್ರತಿಪಾದನೆಯಲ್ಲಿ ಅಸಾಧಾರಣ ಪ್ರತಿಭೆ ಮೆರೆದವರು. ದಾಕ್ಷಾಯಿಣಿ, ಸೀತೆ, ಅಂಬೆ, ಮಂಡೋದರಿ, ಮೇನಕೆ, ಚಂದ್ರಮತಿ, ದಮಯಂತಿ, ಪ್ರಭಾವತಿ, ಸಾವಿತ್ರಿ, ಶಕುಂತಲೆ ಹೀಗೆ ಪೌರಾಣಿಕ ಸ್ತ್ರೀ ಪಾತ್ರಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಹದವರಿತ ಕುಣಿತ, ಭಾವಪೂರ್ಣ ಅಭಿನಯ, ಲಾಲಿತ್ಯಪೂರ್ಣ ಮಾತುಗಾರಿಕೆಯಿಂದ ಕಲಾರಸಿಕರ ಮನಗೆದ್ದಿದ್ದಾರೆ. ಪುರುಷ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ತಾಳಮದ್ದಲೆ ಅರ್ಥಧಾರಿಯಾಗಿ ಅನೇಕ ಕೂಟಗಳಲ್ಲಿ ಭಾಗವಹಿಸಿದ್ದಾರೆ. ಉಡುಪಿ ಯಕ್ಷಗಾನ ಕಲಾರಂಗದ ಕೋಟ ವೈಕುಂಟ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.


ಟಿ. ವಿ. ರಾವ್ ಪ್ರಶಸ್ತಿ – ಕೆ. ಅಜಿತ್‍ಕುಮಾರ್ ಅಂಬಲಪಾಡಿ

ವೇಷಧಾರಿ, ಹಿಮ್ಮೇಳ ವಾದಕ ಕಪ್ಪೆಟ್ಟು ಅಜಿತ್‍ಕುಮಾರ್ ಬಾಬು ಶೆಟ್ಟಿಗಾರ್ – ಭವಾನಿ ದಂಪತಿ ಸುಪುತ್ರರು. ಇವರಿಗೆ ಯಕ್ಷಗಾನ ತಂದೆಯಿಂದ ಬಂದ ಬಳುವಳಿ.ಬಾಬು ಶೆಟ್ಟಿಗಾರ್‍ ಯಕ್ಷಗಾನದ ಎಲ್ಲಾ ಅಂಗಗಳನ್ನು ಬಲ್ಲ ಕಲಾವಿದರಾಗಿದ್ದರು. ಅಜಿತರಿಗೆ ತಂದೆಯೇ ಯಕ್ಷಗಾನದ ಮೊದಲ ಗುರು. ಬಾಬು ಶೆಟ್ಟಿಗಾರ್ ಹಾಗೂ ಸಮಾನಾಸಕ್ತ ಸ್ನೇಹಿತರು ಸ್ಥಾಪಿಸಿ ಬೆಳೆಸಿದ ಅಂಬಲಪಾಡಿಯ ‘ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿ’ ಅವರ ಕಲಿಕೆಗೂ ಕಲಿತ ಕಲೆಯನ್ನು ಪ್ರದರ್ಶಿಸುವುದಕ್ಕೂ ವೇದಿಕೆಯಾಯಿತು. ಅಲ್ಲಿ ಹಿರಿಯಡಕ ಗೋಪಾಲ ರಾಯರಿಂದ ಮದ್ದಳೆ ವಾದನ, ಕೆಮ್ಮಣ್ಣು ಆನಂದರಿಂದ ಚಂಡೆ ವಾದನ ತರಬೇತಿ ಪಡೆದರು. ಇವರ ಆಳಂಗ ಬಣ್ಣದ ವೇಷಕ್ಕೆ ತುಂಬಾ ಪೂರಕ. ಬಣ್ಣದ ವೇಷಗಳಲ್ಲದೆ ಮಂಡಳಿಯಲ್ಲಿ ಕಿರೀಟ, ಮುಂಡಾಸಿನ ವೇಷಗಳನ್ನೂ ನಿರ್ವಹಿಸಿದ್ದಾರೆ.


1997 ರಲ್ಲಿ ಪ್ರೊ.ಎಂ.ಎಲ್. ಸಾಮಗರ ನೇತೃತ್ವದ ತಂಡದೊಂದಿಗೆ ಕಲಾವಿದರಾಗಿ ಸಿಂಗಾಪುರ ಪ್ರವಾಸ ಮಾಡಿದ್ದಾರೆ. ಬೆಂಗಳೂರಿನ ‘ಶಂಕರ ಫೌಂಡೇಶನ್’ನ ಶ್ರೀಮತಿ ಲಕ್ಷ್ಮೀ ಹೆಗಡೆ ಗೋಪಿ ಮುಂದಾಳುತ್ವದ ನೃತ್ಯರೂಪಕ ತಂಡದೊಂದಿಗೆ ಅಮೆರಿಕಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಪ್ರವಾಸ ನಡೆಸಿ ತಮ್ಮ ಚಂಡೆಯ
ಅಬ್ಬರ ಮೊಳಗಿಸಿದ್ದಾರೆ.

ಪ್ರೊ.ಉದ್ಯಾವರ ಮಾಧವ ಆಚಾರ್ಯರ ‘ಸಮೂಹ ಉಡುಪಿ’ ಹಾಗೂ ಬೆಂಗಳೂರಿನ ‘ಯಕ್ಷದೇಗುಲ’, ‘ಕರ್ನಾಟಕ ಕಲಾದರ್ಶಿನಿ’ ತಂಡದ ಸದಸ್ಯರಾಗಿ ಹಲವು ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನವೂ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕಲಾಪ್ರದರ್ಶನ ನೀಡಿದ್ದಾರೆ.
ಉಡುಪಿಯ ಪ್ರತಿಷ್ಠಿತ ಸಾಂಸ್ಕøತಿಕ, ಸಾಮಾಜಿಕ ಸಂಘಟನೆಯಾದ ‘ಯಕ್ಷಗಾನಕಲಾರಂಗ’ದ ಸಕ್ರಿಯ ಸದಸ್ಯರು. ಅನೇಕ ಸಾಂಸ್ಕøತಿಕ ಕಲಾ ಕಾರ್ಯಕ್ರಮಗಳ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ.


ಪ್ರೊ. ನಾರಾಯಣ ಎಂ. ಹೆಗಡೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments