ಶೀರ್ಷಿಕೆಯೇ ಸೂಚಿಸುವಂತೆ ಇದು ಬಡಗು ತಿಟ್ಟು ಶ್ರೇಷ್ಠ ಕಲಾವಿದರಾಗಿ ಮೆರೆದ ಹಾರಾಡಿ ಮನೆತನದ ಶ್ರೀ ಹಾರಾಡಿ ರಾಮ ಗಾಣಿಗರ ಕುರಿತಾಗಿ ಪ್ರಕಟವಾದ ಪುಸ್ತಕವು. ಪ್ರಕಾಶಕರು ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆ. ಲೇಖಕರು ಶ್ರೀ ಎಚ್. ಶ್ರೀಧರ ಹಂದೆಯವರು.
ಶ್ರೀ ಹಾರಾಡಿ ರಾಮ ಗಾಣಿಗರ ಬದುಕಿನ ಅವಧಿ 1902-1968. ಹಾರಾಡಿ ಸುಬ್ಬು ಗಾಣಿಗ ಮತ್ತು ಶ್ರೀಮತಿ ಕೊಲ್ಲು ದಂಪತಿಗಳ ಪುತ್ರನಾಗಿ ಜನನ. ಹಿರಿಯರೆಲ್ಲಾ ಕಲಾವಿದರೇ ಆಗಿದ್ದರು. ರಕ್ತಗತವಾಗಿಯೇ ಇದ್ದುದರಿಂದ ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿದ್ದರು. ಹದಿನಾಲ್ಕನೇ ವಯಸ್ಸಿನಲ್ಲಿ ರಂಗಪ್ರವೇಶ. 1916ರಲ್ಲಿ ಮಾರಣಕಟ್ಟೆ ಮೇಳದ ಬಾಲಕಲಾವಿದನಾಗಿ. 45 ವರ್ಷಗಳ ಕಾಲ ಮಂದಾರ್ತಿ ಮೇಳದಲ್ಲಿ ತಿರುಗಾಟ ನಡೆಸಿದ್ದರು.

ಅಲ್ಲದೆ ಸೌಕೂರು, ಅಮೃತೇಶ್ವರೀ, ವರಂಗ ಮೇಳಗಳಲ್ಲೂ ತಿರುಗಾಟ ಮಾಡಿದ್ದರು. ತನ್ನ ಶ್ರೇಷ್ಠ ಅಭಿನಯ, ಮಾತುಗಾರಿಕೆಯಿಂದ ಹಾರಾಡಿ ತಿಟ್ಟಿನ ಕೀರ್ತಿಯನ್ನು ಮೆರೆಸಿದ ಕಲಾವಿದರಿವರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಯೋಜನೆಯಂತೆ ಈ ಕಿರು ಪುಸ್ತಕವು ಓದುಗರ ಕೈ ಸೇರಿದೆ. ಉಡುಪಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ನೀಲಾವರ ಸುರೇಂದ್ರ ಅಡಿಗ ಅವರು ‘ಓದುವ ಮುನ್ನ’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿರುತ್ತಾರೆ.

ಹಾರಾಡಿ ರಾಮ ಗಾಣಿಗರ ಹುಟ್ಟು, ಬದುಕು, ಕಲಾಜೀವನದ ಬಗೆಗೆ ಸಾಕಷ್ಟು ಮಾಹಿತಿಗಳನ್ನು ಈ ಪುಸ್ತಕದಲ್ಲಿ ಶ್ರೀ ಎಚ್. ಶ್ರೀಧರ ಹಂದೆಯವರು ನೀಡಿರುತ್ತಾರೆ. 1962ರಲ್ಲಿ ರಾಜ್ಯ ಪ್ರಶಸ್ತಿ, 1964ರಲ್ಲಿ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದ ಹಾರಾಡಿ ರಾಮ ಗಾಣಿಗರ ಬಗೆಗೆ ಈ ಹಿಂದೆ ಎರಡು ಗ್ರಂಥಗಳು ಪ್ರಕಟವಾಗಿವೆ. ಅವುಗಳು 1) ಕೆ.ಮೋಹನ್ ರಾವ್ ನಿರ್ದೇಶಿತ ಯಕ್ಷದೇಗುಲವು ಹೊರತಂದ ‘ಯಕ್ಷಲೋಕದ ಕೋಲ್ಮಿಂಚು’ 2) ಕಂದಾವರ ರಘುರಾಮ ಶೆಟ್ಟಿ ಅವರ ಸಂಪಾದಕತ್ವದಲ್ಲಿ ಶ್ರೀ ಕ್ಷೇತ್ರ ಮಂದಾರ್ತಿ ಅವರು ಪ್ರಕಟಿಸಿದ ‘ಹಾರಾಡಿ ರಾಮ ಗಾಣಿಗರು’ ಎಂಬ ಪುಸ್ತಕಗಳು.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಈ ವಿಚಾರವನ್ನು ಲೇಖಕರಾದ ಶ್ರೀ ಎಚ್. ಶ್ರೀಧರ ಹಂದೆಯವರು ತಮ್ಮ ಬರಹದಲ್ಲಿ ತಿಳಿಸಿರುತ್ತಾರೆ. ‘ರಂಗಸ್ಥಳ ರಾಜ ಹಾರಾಡಿ ರಾಮ ಗಾಣಿಗ’ ಎಂಬ ಈ ಪುಸ್ತಕವು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸಂಭ್ರಮದ ಸಂದರ್ಭ ಪ್ರಕಟವಾಗಿತ್ತು. ಉಡುಪಿ ಜಿಲ್ಲೆಯ ಹಿರಿಯ ಸಾಧಕರು ಎಂಬ ವಿಚಾರದಡಿ ಈ ಹೊತ್ತಗೆಯು ಪ್ರಕಟವಾಗಿತ್ತು.
ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ