Saturday, January 18, 2025
Homeಯಕ್ಷಗಾನಮೊತ್ತಮೊದಲ ಬಾರಿಗೆ ಮಹಿಷಾಸುರನ ವೇಷ ಮಾಡಿದ್ದು ಯಾರು? ಇಲ್ಲಿದೆ ಕುತೂಹಲಕರ ಮಾಹಿತಿ  (Who  played the...

ಮೊತ್ತಮೊದಲ ಬಾರಿಗೆ ಮಹಿಷಾಸುರನ ವೇಷ ಮಾಡಿದ್ದು ಯಾರು? ಇಲ್ಲಿದೆ ಕುತೂಹಲಕರ ಮಾಹಿತಿ  (Who  played the role of Mahishasura in Yakshagana for the first time? Here is the interesting information)

ಶ್ರೀ ದೇವಿ ಮಹಾತ್ಮೆ ಪ್ರಸಂಗ ಯಕ್ಷಗಾನ ಪ್ರಸಂಗಗಳಲ್ಲೇ ಅತಿ ಜನಪ್ರಿಯವಾದ ಪ್ರಸಂಗ. ಮಾತ್ರವಲ್ಲದೆ ಇದುವರೆಗೆ ಯಕ್ಷಗಾನದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಪ್ರದರ್ಶಿತವಾದ ಪ್ರಸಂಗ. ಅಸಂಖ್ಯಾತ ಜನರು ಶ್ರೀದೇವಿಯ ಈ ಕಥೆಯ ಯಕ್ಷಗಾನ ಪ್ರದರ್ಶನವನ್ನು ನೋಡಿ, ಕೇಳಿ ಭಕ್ತಿ ಭಾವದಲ್ಲಿ ಮಿಂದು ಪುನೀತರಾಗಿದ್ದಾರೆ.

ಅದರಲ್ಲೂ ಈ ಪ್ರಸಂಗದಲ್ಲೂ ಬರುವ ಕೆಲವು ಪಾತ್ರಗಳನ್ನೂ ನೋಡಲೆಂದೇ ಜನರು ಕಾದು ಕುಳಿತಿರುತ್ತಾರೆ. ಅಂತಹಾ ಪಾತ್ರಗಳಲ್ಲಿ ಮಹಿಷಾಸುರನ ಪಾತ್ರವೂ ಒಂದು. ಕೋಣನ ಪ್ರತಿರೂಪದಿಂದ ಈ ಪಾತ್ರವು ಸಭೆಯಲ್ಲಿ ಬೆಂಕಿಯ ದೊಂದಿಯೊಂದಿಗೆ ಅಬ್ಬರದ ಪ್ರವೇಶದಿಂದ ಬರುವಾಗ ಜನರು ರೋಮಾಂಚನಗೊಳ್ಳುತ್ತಾರೆ.

ಇಂತಹಾ ಅಪೂರ್ವವೂ, ಅವರ್ಣನೀಯವೂ ಆದ ಪಾತ್ರವೊಂದರ ಪ್ರತಿಸೃಷ್ಟಿ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡುವುದು ಸಹಜ. ಮಾತ್ರವಲ್ಲದೆ ಈ ಪಾತ್ರವನ್ನು ಮೊದಲು ಮಾಡಿದವರು ಯಾರು ಎಂಬ ಕುತೂಹಲವೂ ಇರಬಹುದು. ಎಷ್ಟೋ ವರ್ಷಗಳ ಮೊದಲು ಹಿರಣ್ಯಕಶಿಪು, ರಾವಣ, ಮಾಗಧ ಮೊದಲಾದ ಪಾತ್ರಗಳನ್ನೂ ಬಣ್ಣದ ವೇಷದವರೇ ಮಾಡುವ ಕ್ರಮ ಯಕ್ಷಗಾನದಲ್ಲಿ ಇತ್ತು.

ಆದರೆ ಮಹಿಷಾಸುರ ಪಾತ್ರವನ್ನು ಕೊಂಬಿನ ಕಿರೀಟದೊಂದಿಗೆ ಮೊದಲು ಚಿತ್ರಿಸಿದವರು ಯಾರು  ಎಂಬ ಕುತೂಹಲಕಾರಿ ಅಂಶವನ್ನು  ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ತಮ್ಮ ಆತ್ಮಕಥೆ ‘ಯಕ್ಷಗಾನ ಮತ್ತು ನಾನು‘ ಎಂಬ ಪುಸ್ತಕದಲ್ಲಿ ಹೇಳಿದ್ದಾರೆ.

“ನನಗೆ ಬಯಲಾಟದ ದರ್ಶನ ಮೊದಲಿಗಾದುದು ಇಚ್ಲಂಪಾಡಿ ಮೇಳದ ಮೂಲಕವಾದರೂ ಆಮೇಲೆ ಕೂಡ್ಲು, ಅಡೂರು, ಕೊರಕ್ಕೋಡು, ಹಂಪನಕಟ್ಟೆಯೇ ಮುಂತಾದ ಮೇಳಗಳ ಪ್ರದರ್ಶನಗಳನ್ನೂ ನೋಡುವ ಅವಕಾಶಗಳು ಧಾರಾಳ ದೊರೆತಿದ್ದುವು. ಈ ಆಟಗಳನ್ನು ನೋಡುವುದರೊಂದಿಗೆ ವೇಷಗಾರಿಕೆಯಲ್ಲಿಯೂ,ಪ್ರಯೋಗ ಕ್ರಮದಲ್ಲಿಯೂ ಆಗುತ್ತಿದ್ದ ಕೆಲವು ಬದಲಾವಣೆಗಳನ್ನೂ ಹೊಸತನಗಳನ್ನೂ ಗುರುತಿಸಿಕೊಂಡು ಬಂದಿದ್ದೇನೆ.

ಅದುವರೆಗೆ ರಂಗದಲ್ಲಿ ಪ್ರಯೋಗವಾಗದೆ ಇದ್ದ ‘ದೇವಿ ಮಹಾತ್ಮ್ಯೆ’ (ದೇವಿ ಮಹಾತ್ಮೆ) ಪ್ರಸಂಗವನ್ನು ಕೊರಕ್ಕೋಡು ಮೇಳದವರು ಸ್ಥಳೀಯ ದೇವೀ ಸನ್ನಿಧಿಯಲ್ಲಿ ಪ್ರಪ್ರಥಮವಾಗಿ ಆಡುವವರಿದ್ದಾರೆಂಬ ಸುದ್ದಿ ಹಬ್ಬಿತು. ಮೂರು ದಿನಗಳ ದೇವೀ ಮಹಾತ್ಮೆ ಪ್ರಸಂಗದ ಪ್ರದರ್ಶನದಲ್ಲಿ ಎರಡನೆಯ ದಿನದ ಮಹಿಷಾಸುರ ವಧೆಯ ಪ್ರದರ್ಶನಕ್ಕೆ ನಾನೂ ನೋಟಕನಾಗಿದ್ದೆ. ಬಣ್ಣದ ವೇಷದಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿಕೊಂಡಿದ್ದ ಉದಯೋನ್ಮುಖ ಕಲಾವಿದ ಪಟ್ಟಾಜೆ ಕುಂಞ ಎಂಬವರು ಮಹಿಷಾಸುರನ ವೇಷಧಾರಿಯಾಗಿದ್ದರು. ಅಂದಿನವರೆಗೆ ರಾವಣ, ಕಂಸ, ಜರಾಸಂಧ ಮುಂತಾದ ಪಾತ್ರ ವ್ಯತ್ಯಾಸಗಳಿದ್ದರೂ ಅವೆಲ್ಲಾ ಖಳ ಪಾತ್ರಗಳೆಂಬ ಕಾರಣಕ್ಕಾಗಿ, ವೇಷ ವ್ಯತ್ಯಾಸವಿಲ್ಲದೆ ಒಂದೇ ಕ್ರಮದ ರಾಕ್ಷಸ ವೇಷದಿಂದ ರಂಗದಲ್ಲಿ ಕಾಣಿಸುತ್ತಿದ್ದುದು ರೂಢಿಯಾಗಿತ್ತು.

ಆದರೆ ಮಹಿಷಾಸುರನ ವೇಷವು ರೂಢಿಯ ರಾಕ್ಷಸ ವೇಷದ ಕಿರೀಟದ ಬದಲಿಗೆ ನೀಳವಾದ ಕೋಡುಗಳನ್ನು ಧರಿಸಿ, ಕಪ್ಪು ಬಟ್ಟೆಯನ್ನು ತಲೆಗೆ ಮುಂಡಾಸಿನಂತೆ ಸುತ್ತಿ ಮುಂದಲೆಗೆ ಎದೆಪದಕವನ್ನು ಕಟ್ಟಿ ಮಾಡಿಕೊಂಡ ಆವಿಷ್ಕಾರದಿಂದ ಕೋಣನ ತಲೆಯನ್ನೇ ಹೊತ್ತು ಬಂದ ಮಾನವ ದೇಹದಂತೆ ತೋರುತ್ತಿತ್ತು. ಮುಖವರ್ಣಿಕೆಯಲ್ಲಿಯೂ ವೇಷಧಾರಣೆಯಲ್ಲಿಯೂ, ಆಟ ನೋಟಗಳಲ್ಲಿಯೂ ವಾಸ್ತವಿಕತೆಯು ಎದ್ದು ಕಾಣುತ್ತಿದ್ದ ಆ ಭೀಕರ ದೃಶ್ಯವು ಕುಂಞನವರ ಪ್ರತಿಭೆಗೆ ಸಾಕ್ಷಿಯಾಗಿತ್ತು. ಆಮೇಲೆ ಎಲ್ಲ ಮೇಳದವರೂ ಇಂದಿನ ವರೆಗೆ ಶತಸಂಖ್ಯೆಯಲ್ಲಿ ದೇವಿ ಮಹಾತ್ಮೆ ಪ್ರಸಂಗವನ್ನು ಆಡಿದ್ದಾರಾದರೂ ಇದರ ಕೊಡುಗೆಯ ಕೀರ್ತಿ ಕೊರಕ್ಕೋಡು ಮೇಳಕ್ಕೂ, ಮಹಿಷಾಸುರನ ವೇಷದ ನೂತನ ಪದ್ಧತಿಯ ಕೊಡುಗೆಯ ಋಣ ಕುಂಞನವರಿಗೂ ಸಲ್ಲಬೇಕು” (ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು – ತಮ್ಮ ಆತ್ಮಕಥೆ’ ಯಕ್ಷಗಾನ ಮತ್ತು ನಾನು ಎಂಬ ಪುಸ್ತಕದಲ್ಲಿ)

RELATED ARTICLES

2 COMMENTS

LEAVE A REPLY

Please enter your comment!
Please enter your name here

Most Popular

Recent Comments