Saturday, January 18, 2025
Homeಯಕ್ಷಗಾನಮಹನೀಯರ ಮಹಾ ನುಡಿ-ಭಾಗ 4 (ಯಕ್ಷಗಾನದಲ್ಲಿ ಹಾಡುಗಾರಿಕೆ - ಶೇಣಿ ಗೋಪಾಲಕೃಷ್ಣ ಭಟ್)

ಮಹನೀಯರ ಮಹಾ ನುಡಿ-ಭಾಗ 4 (ಯಕ್ಷಗಾನದಲ್ಲಿ ಹಾಡುಗಾರಿಕೆ – ಶೇಣಿ ಗೋಪಾಲಕೃಷ್ಣ ಭಟ್)

ಯಕ್ಷಗಾನದಲ್ಲಿ ಹಾಡುಗಾರಿಕೆ – ಶ್ರೀ ಶೇಣಿ ಗೋಪಾಲಕೃಷ್ಣ ಭಟ್. (ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘ, ಮಧೂರು ಈ ಸಂಸ್ಥೆಯ ರಜತ ಮಹೋತ್ಸವ ಸ್ಮರಣ ಸಂಚಿಕೆ ‘ಸುಧಾ ಕಲಶ’ ಪುಸ್ತಕದಲ್ಲಿ)

“ಶಾಸ್ತ್ರೀಯವಾದ ರಾಗ, ತಾಳ ಬದ್ಧತೆಯುಳ್ಳ ಹಾಡುಗಳನ್ನೇ ಆದರೂ, ದೇಶ ಕಾಲಗಳ ಮರ್ಯಾದೆಯನ್ನು ಗಮನಿಸಿ ಹಾಡುವುದೇ ಪಾಂಡಿತ್ಯಕ್ಕೆ ಭೂಷಣ. ಔಚಿತ ಭೋಧವಿಲ್ಲದಿದ್ದರೆ ವೃಥಾ ಶ್ರಮವೂ ಅಭಾಸವೂ ಆಗದಿರದು. ಮುಖ್ಯವಾಗಿ ಯಕ್ಷಗಾನದ ಹಿಮ್ಮೇಳಗಳಾದ ಚೆಂಡೆ ಮದ್ದಳೆಗಳಿರುವುದು ಕುಣಿಕೆಯ ನಿರ್ದೇಶನಕ್ಕಾಗಿ. ನಾಟ್ಯದ ಸ್ವಂತಿಕೆಗೆ ಈ ವಾದನವು ಪೂರಕವಾಗಿದೆಯೆಂಬ ಸತ್ಯವನ್ನು ಕಡೆಗಣಿಸಬಾರದು. ತಾಳ ವಾದ್ಯಗಳ ನಿರ್ದಿಷ್ಟ ಸೊಲ್ಲುಗಳ ಬದಲಾವಣೆಯಾದರೆ, ಶೈಲಿಯೂ ವಿರೂಪಗೊಳ್ಳುವುದೆಂಬ ನೆನಪು ವಾದ್ಯದವರಿಗೆ ಇರುವಷ್ಟು ಕಾಲ ಬೆರಕೆಯ ಭಯ ದೂರವಾಗಿಯೂ ಉಳಿಯುವುದು. ಈ ಮರ್ಮವನ್ನರಿಯದ ಭಾಗವತನು ಸಂಗೀತ ಸಾಮ್ರಾಟ ಪದವೀಧರನಾದರೂ ಯಕ್ಷಗಾನಕ್ಕೆ ಹಾಡುಗಾರನಾಗಲಾರ. ರಾಗ ಪ್ರಧಾನವಲ್ಲದ, ತಾಳ ಪ್ರಧಾನಗೇಯ ಪ್ರಬಂಧಗಳನ್ನು ಹಾಡುವ ಚಾಕಚಕ್ಯತೆಯೇ ಇಲ್ಲಿ ಎದ್ದು ಕಾಣಬೇಕಾದ ಪ್ರಧಾನ ಗುಣವಾಗಿರಬೇಕು. ಈ ಪದ್ಧತಿಯೂ ಶಾಸ್ತ್ರೀಯ ಸಂಗೀತವೆಂದೇ ಅಂಗೀಕೃತವಾಗಿದೆ.

ಜಾಹೀರಾತು

ಒಂದೇ ಹಾಡಿನಲ್ಲಿ ಶೋಕ, ಕ್ರೋಧ, ಹಾಸ್ಯಾದಿಗಳನ್ನು ಬಿಂಬಿಸುವ ನುಡಿಗಟ್ಟುಗಳಿರಬಹುದಾದ ಸಂದರ್ಭಗಳಲ್ಲಿ ಹಾಡುಗಾರನು ಈ ಸಂಚಾರೀ ಭಾವಗಳಿಗೆ ತಾನೇ ಸ್ಪಂದಿಸಿ, ರಾಗಮಾಲಿಕೆಯನ್ನೋ, ತಾಳಮಾಲಿಕೆಯನ್ನೋ ಮಾಡಿದರೆ ತನ್ನ ಅಜ್ಞಾನವನ್ನು ತಾನೇ ಉದ್ಘಾಟಿಸಿಕೊಂಡಂತಾಯಿತು. ಭಾಗವತಿಕೆಯು ಸೂತ್ರಧಾರಿಕೆಯಲ್ಲದೆ, ಪಾತ್ರ ನಿರ್ವಹಣೆಯಲ್ಲವಲ್ಲ? ರಸಭಾವ ಪ್ರಕಟಣೆ ಸೂತ್ರಧಾರಿಯ ಹೊಣೆಯಾದ್ದರಿಂದ ಸ್ಫೂರ್ತಿ ನೀಡುವ ಹಿನ್ನಲೆಯನ್ನೊದಗಿಸುವ ಕರ್ತವ್ಯ ಹಿಮ್ಮೇಳಕ್ಕಿದ್ದರೆ ಸಾಕು. ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ಇರುವ ಈ ಸಾಂಪ್ರದಾಯಿಕ ಅಚ್ಚುಕಟ್ಟುತನವೇ ಯಕ್ಷಗಾನದ ತನ್ನತನ. ಸಂಗೀತ ಶಾಸ್ತ್ರದಲ್ಲಿ ಗುರುತಿಸಲ್ಪಟ್ಟ ಜನ್ಯ ಜನಕ ರಾಗಗಳ ಪಾಠವಿದ್ದು, ಯಕ್ಷಗಾನ ರಚನೆಗಳಲ್ಲಿ ನಮೂದಿಸಿರುವ ರಾಗಗಳನ್ನು ಶುದ್ಧವಾಗಿ ಬಳಸುವ ಅಗತ್ಯದೊಂದಿಗೆ ಇತಿಮಿತಿಯನ್ನರಿತು, ಸಾಹಿತ್ಯವನ್ನು ಸ್ಪಷ್ಟ ಉಚ್ಚಾರದೊಂದಿಗೆ ನಾದತರಂಗವನ್ನು ಸೃಷ್ಟಿಸಿ, ಬಯಲು ರಂಗಮಂಟಪವನ್ನು ಇಂದ್ರಲೋಕವೋ, ಚಂದ್ರಲೋಕವೋ ಆಗಿಸುವ ಭಾಗವತಿಕೆಯೇ ಯಕ್ಷಗಾನದ ಉಳಿವಿಗೆ ಅಗತ್ಯವೆನಿಸುತ್ತದೆ. ಈ ರೀತಿಯ ಲಕ್ಷ್ಯ, ಲಕ್ಷಣಗಳು ಜಾನಪದವೆಂಬ ಹಿಮ್ಮೇಳ ಮುಮ್ಮೇಳಗಳಲ್ಲಿ ಹುಡುಕಿದರೂ ದೊರಕಲಾರವು”.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments