(ಶ್ರೀ ಅಳಿಕೆ ರಾಮಯ್ಯ ರೈ – ತನ್ನ ಆತ್ಮಕಥನ ‘ಅಳಿಕೆ ಸ್ಮೃತಿ – ಕೃತಿ’ಯಲ್ಲಿ )
“ಯಕ್ಷಗಾನದ ಪೂರ್ವಸ್ಥಿತಿ ಹೇಗಿತ್ತು? (ಪದ್ಧತಿ) ಇದು ಯಾವ ಕಾಲದಲ್ಲಿ ಆರಂಭವಾಯಿತು? ಯಾರಿಂದ? ಇತ್ಯಾದಿ ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ತರ. ನಿಶ್ಚಿತವಾಗಿ ಇದಮಿತ್ತಂ ಎಂದು ಹೇಳುವುದಕ್ಕೆ ತಕ್ಕ ಪುರಾವೆಗಳು ಎಲ್ಲಿಯೂ ಸಿಗುವುದಿಲ್ಲ. ಯಕ್ಷಗಾನ ರಂಗದ ನಮ್ಮ ಕಾಲದ ಸಕಲ ಆಯಾಮಗಳಲ್ಲೂ ನುರಿತ, ಆ ಕುರಿತು ಆಗ ಅಧಿಕಾರವಾಣಿಯಿಂದ ನುಡಿಯುವವರು ಎಂದು ನಾವು ಗೌರವ ಕೊಡುತ್ತಿದ್ದ – ಯಕ್ಷಗಾನ ಭಾಸ್ಕರ ‘ಕವಿಭೂಷಣ’ ಕೆ.ಪಿ. ವೆಂಕಪ್ಪ ಶೆಟ್ಟರು ಈ ಕಲೆಯ ಉಗಮವನ್ನು ರಾಮಾಯಣದ ಪೂರ್ವಕಾಲಕ್ಕೂ ಪೂರ್ವಕ್ಕೆ ಒಯ್ದಿದ್ದಾರೆ. ಪೂರ್ವಕಾಲದಲ್ಲಿ ಕನಕಲಂಕೆಯನ್ನಾಳುತ್ತಿದ್ದ ಧನಾಧಿಪ ಕುಬೇರನನ್ನು ಸೋಲಿಸಿ ಅಲ್ಲಿಂದ ಹೊರಹಾಕಿ ರಾವಣನು ಲಂಕೆಯನ್ನು ವಶಮಾಡಿಕೊಂಡನಂತೆ. ಅಲ್ಲಿಂದ ಓಡಿದ ಯಕ್ಷರು ನಮ್ಮತ್ತ ಬಂದು ಅಳಕಾವತಿಗೆ ಹೋಗುವ ದಾರಿಯಲ್ಲಿ ಪ್ರಯಾಣದ ಆಯಾಸ, ಪ್ರಯಾಸ, ಬೇಸರ ಕಳೆಯಲು ಆಡಿ ಅಭಿನಯಿಸಿದ ಕಲೆಯೇ ಯಕ್ಷಗಾನ. ಇಂದು ಆಯಾ ಪ್ರಾಂತೀಯರ ಅಭಿರುಚಿಗೆ ತಕ್ಕಂತೆ, ಅವರ ಸಂಸ್ಕೃತಿಗೆ ಸರಿಯಾಗಿ, ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೂಪದಿಂದ ಪ್ರಕಾಶಕ್ಕೆ ಬಂತೆಂದು ಹೇಳಬಹುದು. ಇನ್ನೊಂದು ಕಥೆ ಭಾಗವತದ್ದು. ವಜ್ರನಾಭನ ಮಗಳು ಪ್ರಭಾವತಿಯನ್ನು ಮದುವೆಯಾಗಲು ಮನ್ಮಥನು ಯಾದವರೊಂದಿಗೆ ಹೋಗಿ ಯಕ್ಷಗಾನ ಆಟವನ್ನು ಆಡಿ ಪ್ರಭಾವತಿಯನ್ನು ಮದುವೆಯಾದನೆಂಬ ಕಥಾ ಪ್ರಸಂಗದಲ್ಲಿ ನಾನೇ ಮನ್ಮಥನಾಗಿ ಅಭಿನಯಿಸಿದ್ದೇನೆ. ಹೇಗಿದ್ದರೂ ಯಕ್ಷಗಾನ ಕಲೆ ಕೆಲವು ಶತಮಾನಗಳಿಗೆ ಪೂರ್ವದಲ್ಲೇ ಇಲ್ಲಿ ಬೆಳಕನ್ನು ಕಂಡ ಕಲೆಯೆಂದು ನನ್ನ ದೃಢ ನಂಬುಗೆ”.