Thursday, November 21, 2024
Homeಯಕ್ಷಗಾನನಟರಾಜನಿಗೆ ನಮಿಸಲು ತೆರಳಿದವರು  ನಾಟ್ಯ ಕಲಿತರು - ಕೆದಿಲ ಶ್ರೀ ಜಯರಾಮ ಭಟ್

ನಟರಾಜನಿಗೆ ನಮಿಸಲು ತೆರಳಿದವರು  ನಾಟ್ಯ ಕಲಿತರು – ಕೆದಿಲ ಶ್ರೀ ಜಯರಾಮ ಭಟ್

ಯಕ್ಷಗಾನದ ಟೆಂಟ್ ಮೇಳಗಳು ವಿಜೃಂಭಿಸುತ್ತಿದ್ದ ಕಾಲ. ಕಲೆಕ್ಷನ್ ಆಗಬೇಕಾದರೆ ಪ್ರೇಕ್ಷಕರನ್ನು ಆಕರ್ಷಿಸಲೇ ಬೇಕು. ಕರಪತ್ರ, ರಸೀದಿಗಳ ಸಹಿತ ಮನೆ ಮನೆಗೆ ತೆರಳುವುದು ಪ್ರಚಾರದ ಒಂದು ದಾರಿ. ಬ್ಯಾನರ್ ಕಟ್ಟಿ ನೇತಾಡಿಸುವುದು ಒಂದು ದಾರಿ. ಮತ್ತೊಂದು ದಾರಿಯೂ ಆರಂಭವಾಗಿತ್ತು. ಪ್ರದರ್ಶನದ ದಿನ ಬೆಳಗಿನಿಂದ ಆರಂಭಿಸಿ ಸಂಜೆಯ ತನಕ ಜೀಪು, ಕಾರುಗಳಿಗೆ ಧ್ವನಿವರ್ಧಕ ಅಳವಡಿಸಿ ಒಳಗೊಬ್ಬ ಕುಳಿತು ಆಟದ ವಿವರಣೆಯನ್ನು ಆಕರ್ಷಣೀಯವಾಗಿ ಮೈಕ್ ಹಿಡಿದು ವಿವರಿಸುತ್ತಾ ಸಾಗುವುದು. ಜನರನ್ನು ಕಂಡಾಗ ಕರಪತ್ರವನ್ನೂ ಹೊರಕ್ಕೆಸೆಯುತ್ತಿದ್ದರು.

ಕೆಲವೊಂದು ಕಡೆ ಈಗಲೂ ಈ ಕ್ರಮ ಚಾಲ್ತಿಯಲ್ಲಿದೆ. ಕಲಾಭಿಮಾನಿಗಳನ್ನು ರಾತ್ರಿಯ ಪ್ರದರ್ಶನಕ್ಕೆ ಸೆಳೆಯಲು ತನ್ನ ಮಾತಿನ ಮೋಡಿಯಿಂದ ಪರಮಾವಧಿ ಪ್ರಯತ್ನಿಸುತ್ತಾನೆ ಮೈಕ್ ಹಿಡಿದವ. ಅದೂ ಒಂದು ಕಲೆಯೇ ಹೌದು. ಭಾಗವತರ ಹಾಡನ್ನೂ ಚೆಂಡೆ ಬಾರಿಸುವವರ ಕೈಚಳಕವನ್ನೂ, ಹಾಸ್ಯಗಾರರನ್ನೂ, ಮಾತಿನ ಮಲ್ಲರಾದ ಕಲಾವಿದರನ್ನೂ ತನ್ನದೇ ಆದ ಶೈಲಿಯಲ್ಲಿ ಆತ ಹೊಗಳುತ್ತಾ ಇರುವಾಗ ವಾಹನವು ಮುಂದೆ ಸಾಗುತ್ತದೆ. “ಕಲಾಭಿಮಾನಿಗಳೇ, ಕಲಾರಸಿಕರೇ, ಕಲಾಬಂಧುಗಳೇ , ನಿಂತಿರುವ ನಿಪುಣರೇ, ಕುಳಿತಿರುವ ಕುಶಲಿಗರೇ, ಅತ್ತ ಇತ್ತ ಚಲಿಸುತ್ತಿರುವ ನಾಗರಿಕರೇ, ಇದು ಆಟದ ಪ್ರಚಾರ. ಒಂದೇ ಒಂದು ಆಟ, ನಿನ್ನೆ ನಡೆದಿಲ್ಲ. ನಾಳೆ ನಡೆಯುವುದಿಲ್ಲ. ಇಂದು ಮಾತ್ರ ಅವಕಾಶ. ಮರೆಯದಿರಿ. ಮರೆತು ನಿರಾಶರಾಗದಿರಿ…” ಹೀಗೆ ಮುಂದುವರಿಯುತ್ತದೆ. ಸ್ತ್ರೀ ವೇಷಗಳ ಬಗೆಗೆ ಆತ ಹೀಗೊಂದು ಮಾತನ್ನು ಹೇಳುತ್ತಾನೆ. ‘ಗಂಡಾಗಿ ಹುಟ್ಟಿ ಹೆಣ್ಣಾಗಿ ನರ್ತಿಸುವ ………..’ ಇವರ ವೇಷವನ್ನು ನೋಡಲು ಮರೆಯದಿರಿ. ‘ಹೆಣ್ಣನ್ನೂ ನಾಚುವಂತೆ ಅಭಿನಯಿಸುವ ” ಎಂದೂ ಹೇಳುತ್ತಾರೆ. ಮನಸೂರೆಗೊಳ್ಳುವಂತಹ ಅವರ ವಿವರಣೆಯನ್ನು ಕೇಳಿಯೇ ಆಟ  ನೋಡಲು ತೀರ್ಮಾನಿಸುತ್ತಾರೆ.

ಫೋಟೋ: ಕೊಂಗೋಟ್ ರಾಧಾಕೃಷ್ಣ ಭಟ್

ಹೌದು. ಹಿಂದಿನ ಕಾಲದಲ್ಲಿ ಗಂಡಸರು ಮಾತ್ರ ಯಕ್ಷಗಾನದಲ್ಲಿ ವೇಷ ಮಾಡುತ್ತಿದ್ದರು. ಅದಕ್ಕೆ ಕಾರಣಗಳೂ ಇವೆ. ಆದರೆ ಈಗ ಹಾಗಲ್ಲ. ಹಗಲೂ ಪ್ರದರ್ಶನಗಳು. ಮಹಿಳಾ ತಂಡಗಳು ಕಲಾಸೇವೆಯನ್ನು ಮಾಡುತ್ತಿವೆ. ಅನೇಕ ಮಹಿಳೆಯರು ಯಕ್ಷಗಾನ ಕಲಾವಿದೆಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಒಂದಂತೂ ಸತ್ಯ. ಪುರುಷರು ಸ್ತ್ರೀ ವೇಷ ಮಾಡುವುದೂ ಸ್ತ್ರೀಯರು ಪುರುಷ ವೇಷಗಳನ್ನು ನಿರ್ವಹಿಸುವುದೂ ಅಷ್ಟು ಸುಲಭವಲ್ಲ. ಸಾಧನೆ ಬೇಕು. ಹೆಣ್ಣು ಪುರುಷ ವೇಷ ಮಾಡಿದರೆ ಪ್ರಸಂಗದ ಕೊನೆಯ ತನಕ ತಾನು ಪುರುಷನಂತೇ ವ್ಯವಹರಿಸುವುದು, ಪುರುಷನು ಹೆಣ್ಣಿನ ವೇಷ ಧರಿಸಿದರೆ ಕೊನೆ ತನಕವೂ ಸ್ತ್ರೀಯಂತೆ ರಂಗದೊಳಗೆ ಕಾಣಿಸಿಕೊಳ್ಳುವುದು ಎಂದರೆ ಸಣ್ಣ ವಿಚಾರವೇ? ಆ ಕಲೆ ಗೊತ್ತಿರದಿದ್ದರೆ, ಗೊತ್ತಿದ್ದೂ ರಂಗದೊಳಗೆ ಎಚ್ಚರ ತಪ್ಪಿದರೆ ಪಾತ್ರವೂ, ಪ್ರದರ್ಶನವೂ ಕೆಟ್ಟು ಹೋದಂತೆಯೇ. ಹೀಗೆ ಗಂಡಾಗಿ ಹುಟ್ಟಿ ಹೆಣ್ಣಾಗಿ ರಂಗದೊಳಗೆ ಮೆರೆದ ಸ್ತ್ರೀ ಪಾತ್ರಧಾರಿಗಳು ಅನೇಕರು. ಪಾತಾಳ ವೆಂಕಟ್ರಮಣ ಭಟ್, ಕೊಳ್ಯೂರು  ರಾಮಚಂದ್ರ ರಾವ್, ಕೊಕ್ಕಡ ಈಶ್ವರ ಭಟ್, ಎಂ.ಕೆ. ರಮೇಶಾಚಾರ್ಯ, ಸಂಜಯಕುಮಾರ್ ಮೊದಲಾದ ಹಿರಿಯ ಕಲಾವಿದರು ತೆಂಕಿನಲ್ಲಿ ಪ್ರಸಿದ್ಧರು. ಪೈವಳಿಕೆ ಐತಪ್ಪ, ಮಂಕುಡೆ ಸಂಜೀವ ಶೆಟ್ರು, ಅಪ್ರತಿಮ ಸ್ತ್ರೀವೇಷಧಾರಿಗಳಾಗಿದ್ದರಂತೆ. ಶ್ರೀ ಕೆದಿಲ ಜಯರಾಮ ಭಟ್ಟರು ಪ್ರಸ್ತುತ ತಿರುಗಾಟ ನಡೆಸುತ್ತಿರುವ ಅನುಭವೀ ಸ್ತ್ರೀ ವೇಷಧಾರಿಗಳಲ್ಲೊಬ್ಬರು. 

ಶ್ರೀ ಕೆದಿಲ ಜಯರಾಮ ಭಟ್ಟರ ಮೂಲ ಮನೆ ಇರುವುದು ಪುತ್ತೂರು ತಾಲೂಕಿನ ಈಶ್ವರಮಂಗಲ ಸಮೀಪದ ಹೊಸಂಗಡಿ ಎಂಬಲ್ಲಿ. ಶ್ರೀಯುತರು 1964 ಏಪ್ರಿಲ್ 4ರಂದು ಪುತ್ತೂರು ಬೀರಮಲೆ ಎಂಬಲ್ಲಿ ಈ ಲೋಕದ ಬೆಳಕನ್ನು ಕಂಡವರು. ತಂದೆ ಶಂಕರನಾರಾಯಣ ಭಟ್, ತಾಯಿ ಲಕ್ಷ್ಮಿ ಅಮ್ಮ. ಹಿರಿಯರೆಲ್ಲರೂ ಕೃಷಿಕರು. ಜಯರಾಮ ಭಟ್ಟರು ಓದಿದ್ದು ಎಸ್.ಎಸ್.ಎಲ್.ಸಿ. ಪುತ್ತೂರು ದರ್ಬೆಯ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ. ಪಿಯುಸಿ 1 ವರ್ಷ ಓದಿ ಅನಿವಾರ್ಯವಾಗಿ ಓದು ನಿಲ್ಲಿಸಬೇಕಾಯಿತು. ವಿದ್ಯಾರ್ಥಿಯಾಗಿದ್ದಾಗ ಯಕ್ಷಗಾನಾಸಕ್ತಿ ಇರಲಿಲ್ಲ. ನಾಟಕದತ್ತ ಒಲವನ್ನು ಹೊಂದಿದ್ದರು. ಶಾಲಾ ಪ್ರದರ್ಶನಗಳ ಸೀನ್ ಸೀನರಿ ನಾಟಕಗಳಲ್ಲಿ ಅಭಿನಯಿಸಿದ್ದರು. ಕನ್ನಡದಲ್ಲಿ ಪುರಾಣ ಮತ್ತು ಸಾಮಾಜಿಕ ನಾಟಕಗಳಲ್ಲಿ ಮತ್ತು ಕುಂಕುಮ, ಬಯ್ಯಮಲ್ಲಿಗೆ ಮೊದಲಾದ ತುಳು ನಾಟಕಗಳಲ್ಲೂ ಅಭಿನಯಿಸಿದ್ದರು. ಯಕ್ಷಗಾನ ಕಲಾವಿದನಾಗಬೇಕೆಂಬ ಬಯಕೆಯೂ ಇರಲಿಲ್ಲ. ಯಕ್ಷಗಾನ ಕಲಾವಿದನಾಗುತ್ತೇನೆಂಬ ಕಲ್ಪನೆಯೂ ಇರಲಿಲ್ಲ. ವಿಚಿತ್ರ ಸನ್ನಿವೇಶವೊಂದು ಇವರು ಯಕ್ಷಗಾನ ಸೇರಲು ವೇದಿಕೆಯಾಗಿತ್ತು.

ಪುತ್ತೂರಿನ ಬೀರಮಲೆಯ ಇವರ ಮನೆಯ ಪಕ್ಕ ವಾಸ್ತವ್ಯವಿದ್ದ ಕುಟುಂಬದ ಸುರೇಶ ಹೆಗಡೆ ಎಂಬ ವಿದ್ಯಾರ್ಥಿ ಯಕ್ಷಗಾನಾಸಕ್ತ. ನಾಟ್ಯ ಕಲಿಯಲೆಂದು ಅವರು ಧರ್ಮಸ್ಥಳ ಲಲಿತ ಕಲಾ ಕೇಂದ್ರಕ್ಕೆ ತೆರಳುವಾಗ ಜಯರಾಮ ಭಟ್ಟರೂ ಹೋಗಿದ್ದರು. ಸಂದರ್ಶನಕ್ಕಾಗಿ ಅಲ್ಲ. ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನಕ್ಕೆ. ಸುರೇಶ ಹೆಗಡೆ ಭಾಗವತಿಕೆ ಕಲಿಯುವ ಆಸೆಯಿಂದ ಹೋಗಿದ್ದರು. ಮಾತ್ರವಲ್ಲ ಸಂದರ್ಶನದಲ್ಲಿ ಆಯ್ಕೆಯಾಗಿದ್ದರು. ಇವರ ಜತೆಗೆ ಜಯರಾಮ ಭಟ್ಟರ ಸಂದರ್ಶನವೂ ನಡೆದಿತ್ತು. ಸಂದರ್ಶಕರು ಕುಣಿಯಲು ಹೇಳಿದಾಗ ಪ್ರವೇಶದ ಕ್ರಮವನ್ನು ಚೆನ್ನಾಗಿ ಮಾಡಿ ತೋರಿಸಿದ್ದರು. ಯೋಗಾ ಯೋಗ ಎಂದರೆ ಇದು. ನಟರಾಜನಿಗೆ ನಮಿಸಲು ಹೋದವರು ನಾಟ್ಯ ಕಲಿಯುವಂತಾಗಿತ್ತು. ಮಂಜುನಾಥನ ಮತ್ತು ಕಲಾಮಾತೆಯ ಸಂಕಲ್ಪವು ಜಯರಾಮ ಭಟ್ಟರು ಯಕ್ಷಗಾನ ಕಲಾವಿದರೇ ಆಗಬೇಕೆಂದಿತ್ತು. ಕೇಂದ್ರದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯಾಭ್ಯಾಸ ಆರಂಭ. ಕಲಿಕಾ ಕೇಂದ್ರದಲ್ಲಿ ಪದ್ಮನಾಭ ಉಪಾಧ್ಯಾಯ, ಜಗದಾಭಿರಾಮ ಸ್ವಾಮಿ ಪಡುಬಿದ್ರಿ ಇವರ ಸಹಪಾಠಿಗಳಾಗಿದ್ದರು. ಆಗ ನೆಡ್ಲೆ ನರಸಿಂಹ ಭಟ್ಟರು ಹಿಮ್ಮೇಳಕ್ಕೆ ಗುರುಗಳಾಗಿದ್ದರು.

ಕೇಂದ್ರದ ವಿದ್ಯಾರ್ಥಿಗಳಿಂದ ನಡೆದ ಪ್ರದರ್ಶನದಲ್ಲಿ ದಾಕ್ಷಾಯಿಣಿ ಪಾತ್ರವನ್ನು ಮಾಡಿದ್ದರು. ನಾಟ್ಯ ಕಲಿತ ನಂತರ ಕಟೀಲು ಮೇಳಕ್ಕೆ ಸೇರುವ ನಿರ್ಣಯ ಮಾಡಿದಾಗ ನೆಡ್ಲೆ ನರಸಿಂಹ ಭಟ್ಟರು ಟೆಂಟ್ ಮೇಳಕ್ಕೆ ಸೇರು ಎಂದಿದ್ದರಂತೆ. ಕೆದಿಲ ಜಯರಾಮ ಭಟ್ಟರು ತಿರುಗಾಟ ಆರಂಭಿಸಿದ್ದು ಅರುವ ಮೇಳದಲ್ಲಿ. ಅರುವ ನಾರಾಯಣ ಶೆಟ್ಟರ ಸಂಚಾಲಕತ್ವ. 2ನೇ ಸ್ತ್ರೀ ವೇಷಧಾರಿಯಾಗಿ ಆಗ ನೆಡ್ಲೆ ಉಮೇಶ ಹೆಬ್ಬಾರರು 1ನೇ ಸ್ತ್ರೀ ವೇಷಧಾರಿಯಾಗಿದ್ದರು. ಮುಂದಿನ ವರ್ಷ ಬಪ್ಪನಾಡು ಮೇಳಕ್ಕೆ. 1 ತಿಂಗಳ ತಿರುಗಾಟ ನಡೆಸಿ ಅನಿವಾರ್ಯ ಕಾರಣದಿಂದ ಮನೆಗೆ ತೆರಳಿದ್ದರು. ಅದೇ ವರುಷ ಮತ್ತೆ ಅರುವ ಮೇಳದಲ್ಲಿ ವ್ಯವಸಾಯ. ಮುಂದಿನ ವರ್ಷ ಕಲ್ಲಾಡಿ ದೇವಿಪ್ರಸಾದ್ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳಕ್ಕೆ. 1 ವರ್ಷ ತಿರುಗಾಟ. ಮಧೂರು ಮೇಳ ಆರಂಭವಾದ ವರ್ಷ ಸದ್ರಿ ಮೇಳಕ್ಕೆ ಸೇರಿ 2 ವರ್ಷಗಳ ವ್ಯವಸಾಯ. ಕದ್ರಿ ಮೇಳವನ್ನು ಶ್ರೀ ಡಿ. ಮನೋಹರ ಕುಮಾರರು ವಹಿಸಿಕೊಂಡ ವರ್ಷ ಸದ್ರಿ ಮೇಳದಲ್ಲಿ ಕಲಾಸೇವೆ. ಮುಂದಿನ 2 ವರ್ಷಗಳ ಕಾಲ ಬಡಗಿನ ಮಂದಾರ್ತಿ ಮೇಳಕ್ಕೆ. ಬಡಗಿನ ನಾಟ್ಯ, ತಿರುಗಾಟದ ಅನುಭವ ಇದ್ದಿರಲಿಲ್ಲ. ಆದರೂ ಮೇಳದಲ್ಲಿದ್ದುಕೊಂಡೇ ಅಭ್ಯಸಿಸಿದ್ದರು. ಪುರಾಣ ಪ್ರಸಂಗಗಳ ಅನುಭವವೂ ಆಗಿತ್ತು ಮಂದಾರ್ತಿ ಮೇಳದಲ್ಲಿ.

ಮುಂದಿನ ವರ್ಷ ಕಸ್ತೂರಿ ಪೈಗಳ ಸುರತ್ಕಲ್ ಮೇಳದಲ್ಲಿ ಕಲಾ ಸೇವೆ. ಸ್ತ್ರೀ ಪಾತ್ರಕ್ಕೆ ನನಗೆ ಎಂ.ಕೆ. ರಮೇಶಾಚಾರ್ಯರೇ ಆದರ್ಶ. ಅವರು ಹೇಳಿ ಕೊಟ್ಟಿದ್ದಾರೆ. ಅವರ ವೇಷ ನೋಡಿ ಕಲಿತೆ. ಮಾತುಗಾರಿಕೆಯನ್ನೂ ಹೇಳಿ ಕೊಟ್ಟಿದ್ದಾರೆ ಎಂದು ಜಯರಾಮ ಭಟ್ಟರು ಅವರನ್ನು ಗೌರವಿಸುತ್ತಾರೆ. ಎಂ.ಕೆ ಅವರ ದಮಯಂತಿಗೆ ಚೈದ್ಯರಾಣಿಯಾಗಿ ಜಯರಾಮ ಭಟ್ಟರು ಅಭಿನಯಿಸಿದ ವೀಡಿಯೊ ಈಗಲೂ ಇದೆ. ಎಂ.ಕೆ ಅವರು ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸಿದ್ದರಂತೆ. ಈ ಹೊತ್ತಿಗೆ ಕೆದಿಲ ಜಯರಾಮ ಭಟ್ಟರು ಸ್ತ್ರೀ ಪಾತ್ರಧಾರಿಯಾಗಿ ಗುರುತಿಸಲ್ಪಟ್ಟು ಖ್ಯಾತರಾಗಿದ್ದರು. ದೈವದತ್ತವಾದ ರೂಪ ಮತ್ತು ಸಾಧನೆಯಿಂದ ಸಿದ್ಧಿಸಿದ ನಾಟ್ಯ ಇವೆರಡೂ ಅವರಿಗೆ ಪ್ಲಸ್ ಪಾಯಿಂಟ್ ಆಗಿದ್ದುವು. ಶೃಂಗಾರ ಮತ್ತು ಕರುಣ ರಸಗಳಲ್ಲಿ ಅತ್ಯುತ್ತಮವಾದ ಅಭಿನಯ ಇವರದು. ಆ ಕಾರಣದಿಂದಲೇ ಪೆರ್ಡೂರು ಮೇಳಕ್ಕೆ ಕರೆ ಬಂದಿತ್ತು. ಭಾಗವತ ಸುಬ್ರಹ್ಮಣ್ಯ ಧಾರೇಶ್ವರರು ಪ್ರತಿಭೆಯನ್ನು ಗುರುತಿಸಿ ಅವಕಾಶವಿತ್ತಿದ್ದರು. ಅವರ ಗರಡಿಯಲ್ಲಿ ವೇಷಗಳು ಕ್ಲಿಕ್ ಆದುವು. ಧಾರೇಶ್ವರರ ಬಗೆಗೆ ಜಯರಾಮ ಭಟ್ಟರು ಅಭಿಮಾನವನ್ನೂ ಪ್ರಕಟಿಸುತ್ತಾರೆ.

ಆಗ ಕನ್ನಡ ಸಿನೆಮಾ ರಂಗದಲ್ಲಿ ತನ್ನ ರೂಪ ಮತ್ತು ಪ್ರತಿಭೆಯಿಂದ ಮಿಂಚುತ್ತಿದ್ದ ನಟಿ ಮಾಲಾಶ್ರೀ. ತನ್ನ ರೂಪ, ನಾಟ್ಯಗಳಿಂದ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದ ಜಯರಾಮ ಭಟ್ಟರು ‘ಯಕ್ಷರಂಗದ ಮಾಲಾಶ್ರೀ’ ಎಂದೇ ಕರೆಸಿಕೊಂಡರು. ಕರಪತ್ರಗಳಲ್ಲೂ ಸ್ತ್ರೀ ಪಾತ್ರದಲ್ಲಿ ಯಕ್ಷರಂಗದ ಮಾಲಾಶ್ರೀ ಕೆದಿಲ ಜಯರಾಮ ಭಟ್ ಎಂದೇ ಮುದ್ರಿತವಾಗುತ್ತಿತ್ತು. ವೈ. ಕರುಣಾಕರ ಶೆಟ್ರ ಪೆರ್ಡೂರು ಮೇಳದಲ್ಲಿ 3 ತಿರುಗಾಟ. ವಸಂತ ಭಾರ್ಗವಿ, ಪವಿತ್ರ ಪದ್ಮಿನಿ, ಪಟ್ಟಾಭಿಷೇಕ(ಕೈಕೇಯಿ), ಕೀಚಕ ವಧೆ (ಸೈರಂಧ್ರಿ) ಚಂದ್ರಾವಳೀ ವಿಲಾಸ (ಚಂದ್ರಾವಳಿ), ಭಸ್ಮಾಸುರ ಮೋಹಿನಿ(ಮೋಹಿನಿ), ವಿಶ್ವಾಮಿತ್ರ ಮೇನಕೆ, ಮೊದಲಾದ ಪ್ರಸಂಗಗಳು ಹೆಸರನ್ನು ತಂದು ಕೊಟ್ಟಿತ್ತು. ಬಳಿಕ 1 ವರ್ಷ ಕಿಶನ್ ಹೆಗ್ಡೆಯವರ ಮಂಗಳಾದೇವಿ ಮೇಳಕ್ಕೆ. ಮುಂದಿನ ವರ್ಷ ಒಂದು ತಿಂಗಳ ತಿರುಗಾಟ ಕಳೆದಾಗ ಕಿಶನ್ ಹೆಗ್ಡೆಯವರು ಜಯರಾಮ ಭಟ್ಟರನ್ನು ಸಾಲಿಗ್ರಾಮ ಮೇಳಕ್ಕೆ ಕಳುಹಿಸಿದ್ದರು. 3 ವರ್ಷ ಸಾಲಿಗ್ರಾಮ ಮೇಳದಲ್ಲಿ ಕಲಾಸೇವೆ. ನಂತರ 3 ವರ್ಷ  ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ. ಬಳಿಕ ಗೋಳಿಗರಡಿ ಟೆಂಟಿನ ಮೇಳ ಆರಂಭವಾದ ವರ್ಷ 1 ತಿರುಗಾಟ. ಪುನಃ ಸಾಲಿಗ್ರಾಮ ಮೇಳದಲ್ಲಿ 1 ತಿರುಗಾಟ. ಮರಳಿ ಧರ್ಮಸ್ಥಳ ಮೇಳದಲ್ಲಿ 8 ವರ್ಷಗಳ ಕಲಾಸೇವೆ. ಬಳಿಕ ಎಡನೀರು ಉಭಯ ಮೇಳಗಳಲ್ಲಿ  ತಲಾ ಒಂದು ತಿರುಗಾಟ. 2018 – 19ರಲ್ಲಿ ಸುಂಕದಕಟ್ಟೆ ಮೇಳದಲ್ಲಿ. ಹೀಗೆ ಒಟ್ಟು ವಿವಿಧ ಮೇಳಗಳಲ್ಲಿ 33 ವರ್ಷಗಳ ವ್ಯವಸಾಯ ಕೆದಿಲ ಶ್ರೀ ಜಯರಾಮ ಭಟ್ಟರದು.

ವೃತ್ತಿ ಕಲಾವಿದನಾಗಿ ತಿರುಗಾಟ ಆರಂಭಿಸಿದ ಕೆಲವು ವರ್ಷಗಳ ನಂತರ ಕೆದಿಲದಲ್ಲಿ ವಾಸಿಸುತ್ತಿದ್ದ ಕಾರಣ ಕೆದಿಲ ಜಯರಾಮ ಭಟ್ ಎಂದೇ ಕರೆಸಿಕೊಂಡರು. ಅನೇಕ ವರ್ಷಗಳ ಕಾಲ ಕೆದಿಲದಲ್ಲಿ ವಾಸ್ತವ್ಯ ಹೂಡಿದ್ದರು. ಪ್ರಸ್ತುತ ಕೆಲವು ವರ್ಷಗಳಿಂದ ಪತ್ನಿ ಪುತ್ರನ ಜತೆ ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ನೇರಳಕಟ್ಟೆ ಸಮೀಪದ ಕೇಪುಳಕೆರೆ ಎಂಬಲ್ಲಿ ವಾಸಿಸುತ್ತಿದ್ದಾರೆ. ಮಳೆಗಾಲದಲ್ಲಿ ಪುತ್ತೂರು ಶ್ರೀಧರ ಭಂಡಾರಿಯವರ ಶ್ರೀ ಮಹಾಲಿಂಗೇಶ್ವರ ಪ್ರವಾಸೀ ಯಕ್ಷಗಾನ ಮಂಡಳಿ ಪುತ್ತೂರು ಮತ್ತು ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಈ ಉಭಯ ತಂಡಗಳ ಕಲಾವಿದನಾಗಿ  ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಮಳೆಗಾಲದಲ್ಲಿ ಬಡಗಿನ ತಂಡದ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ತೆಂಕು ಮತ್ತು ಬಡಗಿನ ಪ್ರದರ್ಶನಗಳಲ್ಲೂ, ಪುರಾಣ, ಕನ್ನಡ ಸಾಮಾಜಿಕ, ತುಳು ಪ್ರಸಂಗಗಳಲ್ಲಿ ಸ್ತ್ರೀ ಪತ್ರಗಳನ್ನು ನಿರ್ವಹಿಸಿದ ಅನುಭವೀ ಕಲಾವಿದ ಕೆದಿಲ ಜಯರಾಮ ಭಟ್ಟರು.

ಶ್ರೀಯುತರ ಪತ್ನಿ ಶ್ರೀಮತಿ ವಾಣಿ. ಕೆದಿಲ ಜಯರಾಮ ಭಟ್, ವಾಣಿ ದಂಪತಿಗಳಿಗೆ ಓರ್ವ ಪುತ್ರ. ಹೆಸರು ಮಾ| ಕ್ಷಮಿತ್. ಪುತ್ತೂರು ತೆಂಕಿಲ ವಿವೇಕಾನಂದ ಶಾಲೆಯ ವಿದ್ಯಾರ್ಥಿ. ಮಾ| ಕ್ಷಮಿತ್ ಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಕೆದಿಲ ಜಯರಾಮ ಭಟ್ಟರು ಇನ್ನಷ್ಟು ವರ್ಷ ಕಾಲ ಸ್ತ್ರೀ ಪಾತ್ರಧಾರಿಯಾಗಿ ಮೆರೆಯಲಿ. ಕಲಾಮಾತೆಯು ಸಕಲ ಭಾಗ್ಯಗಳನ್ನೂ ಇವರಿಗೆ ಅನುಗ್ರಹಿಸಲಿ ಎಂಬ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments