Saturday, January 18, 2025
Homeಯಕ್ಷಗಾನಉಡುವೆಕೋಡಿ ಸುಬ್ಬಪ್ಪಯ್ಯ - ತಾಳಮದ್ದಳೆಯ ನಿಜ ಅರ್ಥಧಾರಿ (Uduvekodi Subbappayya)

ಉಡುವೆಕೋಡಿ ಸುಬ್ಬಪ್ಪಯ್ಯ – ತಾಳಮದ್ದಳೆಯ ನಿಜ ಅರ್ಥಧಾರಿ (Uduvekodi Subbappayya)

ಅದು ಕರ್ಣಾವಸಾನ ಪ್ರಸಂಗದ ತಾಳಮದ್ದಳೆ.  ಕರ್ಣನಾಗಿ ಪ್ರಸಿದ್ಧ ತಾಳಮದ್ದಳೆ ಅರ್ಥಧಾರಿ ಉಡುವೆಕೋಡಿ ಸುಬ್ಬಪ್ಪಯ್ಯನವರು ಅರ್ಥ ಹೇಳುತ್ತಿದ್ದರು. ಶಿವ ಶಿವಾ ಸಮರದೊಳು ಪದ್ಯಕ್ಕೆ ಕರ್ಣನಾಗಿ ಉಡುವೆಕೋಡಿಯವರು ಅರ್ಥ ಹೇಳಿದ ನಂತರ “ಎನ್ನ ಕುಲವನು ಕೃಷ್ಣನು ಎಚ್ಚರಿಸುತ…. ” ಎಂಬ ಪದ್ಯಕ್ಕೆ ಭಾಗವತರು ಬಾಯಿ ತಾಳಗಳನ್ನು ಹಾಕುತ್ತಾ ಹಿಮ್ಮೇಳದವರು ತುಂಬಾ ಹೊತ್ತು ಬಾರಿಸಿದರು. ಆ ಪದ್ಯಕ್ಕೆ ಉಡುವೆಕೋಡಿಯವರು ಅರ್ಥ ಹೇಳಲಿಲ್ಲ. ಆ ದಿನ ಪ್ರೇಕ್ಷಕರಿಗೂ ಬೇಸರವಾಗಿತ್ತು. ಆ ಪದ್ಯಕ್ಕೆ ಅಷ್ಟು ಸಮಯ ತೆಗೆದುಕೊಂಡದ್ದು ಸಂಧರ್ಬೋಚಿತವಲ್ಲ ಎಂದು ನಿರ್ಣಯಿಸಿ ಅವರು ಮುಂದಿನ ಪದ್ಯಕ್ಕೆ ಅರ್ಥ ಹೇಳಿದ್ದರು. ಈ ವಿಷಯವನ್ನು ಕೆಲವರು ಈಗಲೂ ಆಡಿಕೊಳ್ಳುತ್ತಿರುವುದನ್ನು ಕೇಳಿದ್ದೇನೆ. 


ಇನ್ನೊಂದು ಪ್ರಸಿದ್ಧ ಕಲಾವಿದರ ಕೂಟ. ಮೊದಲ ಪ್ರಸಂಗ ‘ಕೃಷ್ಣ ಸಂಧಾನ’ ಉಡುವೆಕೋಡಿಯವರಿಗೆ ಎರಡನೇ ಪ್ರಸಂಗದಲ್ಲಿ ಅರ್ಥವಿದ್ದುದರಿಂದ ಅವರು ಸಭೆಯಲ್ಲಿ ಆಸೀನರಾಗಿದ್ದರು. ಮೊದಲ ಪ್ರಸಂಗದಲ್ಲಿ ಕೌರವನ ಪಾತ್ರಧಾರಿಯಾದ ಪ್ರಸಿದ್ಧ ಕಲಾವಿದರೊಬ್ಬರು ಯಾವ ಯಾವ ಪದ ಹೇಳಬೇಕೆಂಬುದನ್ನು  ತಾಳಮದ್ದಳೆ ಆರಂಭವಾಗುವ ಮುಂಚಿತವಾಗಿಯೇ ಭಾಗವತರಿಗೆ ಟಿಕ್ ಮಾಡಿ ಕೊಟ್ಟಿದ್ದರು. ಅದರ ಪ್ರಕಾರ ಭಾಗವತರು ಪದ್ಯ ಹೇಳಿದಾಗ ಕೌರವನ ಪಾತ್ರಧಾರಿ ವೇದಿಕೆಯಲ್ಲಿ ಕುಳಿತುಕೊಂಡೇ ”ಆ ಪದ್ಯ ಯಾಕೆ ಹೇಳಿದ್ದು? ಈ ಪದ್ಯ ಹೇಳು” ಎಂದು ಇನ್ನೊಂದು ಪದ್ಯವನ್ನು ಸೂಚಿಸಿದರು. ಭಾಗವತರು ಪ್ರಸಿದ್ಧ ಅರ್ಥಧಾರಿಯ ಈ ವರಸೆಗೆ ಹೆದರಿ ನಡುಗತೊಡಗಿದರು. ಆಗ ಸಭೆಯಲ್ಲಿದ್ದ ಉಡುವೆಕೋಡಿಯವರು ಮಧ್ಯೆ ಪ್ರವೇಶಿಸಿ ಕೌರವ ಅರ್ಥಧಾರಿಯ ಈ ನಡೆಯನ್ನು ನಯವಾಗಿ ಆಕ್ಷೇಪಿಸಿದರು. “ನೀವು ಮೊದಲೇ ಟಿಕ್ ಮಾಡಿ ಕೊಟ್ಟ ಪದ್ಯವನ್ನೇ ಭಾಗವತರು ಹೇಳಿದ್ದಾರೆ. ಈಗ ವೇದಿಕೆಯಲ್ಲಿ ಈ ರೀತಿ ಹೇಳುವುದು ಸರಿಯಲ್ಲ. ಅದೂ ಅಲ್ಲದೆ ಯಕ್ಷಗಾನಕ್ಕೆ ಭಾಗವತನೇ ನಿರ್ದೇಶಕ. ಅವರು ಹೇಳಿದ ಪದ್ಯಕ್ಕೆ ನಾವು ಅರ್ಥ ಹೇಳಬೇಕು” ಎಂದು ಒಳ್ಳೆಯ ಮಾತುಗಳಿಂದ ತಿಳಿ ಹೇಳಿದರು. ಆಗ ಇಡೀ ಸಭೆಯೇ ಚಪ್ಪಾಳೆಯ ಮೂಲಕ ಉಡುವೆಕೋಡಿಯವರ ಮಾತುಗಳನ್ನು ಅನುಮೋದಿಸಿತ್ತು. 

ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಉಡುವೆಕೋಡಿ ಸುಬ್ಬಪ್ಪಯ್ಯನವರದು ಮೇಲ್ಪಂಕ್ತಿಯಲ್ಲಿ ನಿಲ್ಲುವ ಹೆಸರುಗಳಲ್ಲಿ ಒಂದು. ತನ್ನ ನೇರವಾದ ವ್ಯಕ್ತಿತ್ವಕ್ಕೆ ಹೆಸರಾದವರು. ಧರಿಸುವ ಬಟ್ಟೆಯಂತೆಯೇ ಮನಸ್ಸು ವ್ಯಕ್ತಿತ್ವಗಳೂ ಸ್ವಚ್ಛ, ಶುಭ್ರ. ತಾಳಮದ್ದಳೆ ಅರ್ಥಧಾರಿಯಾಗಿಯೂ ಕಲಾರಂಗದಲ್ಲಿಯೂ ನಿಜಜೀವನದ ಸ್ವಚ್ಚತೆ, ಶುಭ್ರತೆಗಳನ್ನು ಅನುಸರಿಸಿ ಕಾಪಾಡಿಕೊಂಡು ಬಂದವರು. ಎಂದೂ ತನ್ನ ಜೀವನದ ಆದರ್ಶ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿರುವ, ತನ್ನತನದ ಪ್ರದರ್ಶನಕ್ಕಾಗಿ ಯಾವತ್ತೂ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳದ ಉಡುವೆಕೋಡಿ ಸುಬ್ಬಪ್ಪಯ್ಯನಂತಹವರು ಇಂದಿನ ಕಲಾಜಗತ್ತಿನಲ್ಲಿ ಪ್ರತ್ಯೇಕವಾಗಿಯೇ ನಿಲ್ಲುತ್ತಾರೆ. ಈ ಅಪರೂಪದ ಗುಣಗಳಿಂದಲೇ ನಮಗೆ ಅವರು ಇಷ್ಟವಾಗುತ್ತಾರೆ.   ಉಡುವೆಕೋಡಿಯವರು ಹುಟ್ಟಿದ್ದು 1941ರ ಜನವರಿ 19ರಂದು. ಅಂದರೆ ಈಗವರಿಗೆ ವಯಸ್ಸು 79. ತನ್ನ ಈ 80ನೆಯ ವಯಸ್ಸಿನಲ್ಲಿಯೂ ಕ್ರಿಯಾಶೀಲ ವ್ಯಕ್ತಿತ್ವದಿಂದ ಇರುವವರು. ಉಡುವೆಕೋಡಿ ನಾರಾಯಣಯ್ಯ ಮತ್ತು ವೆಂಕಟಲಕ್ಷ್ಮಿ ದಂಪತಿಯರ ಪುತ್ರನಾಗಿ ಜನಿಸಿದ ಉಡುವೆಕೋಡಿಯವರು ಆ ಕಾಲದಲ್ಲಿಯೂ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಪೂರ್ತಿಗೊಳಿಸಿದ ವಿದ್ಯಾವಂತ. ಖಳ ಪಾತ್ರಗಳಾದ ರಾವಣ, ಕೌರವ ಮೊದಲಾದ ಪಾತ್ರಗಳನ್ನು ಇವರು ಪ್ರಸ್ತುತಪಡಿಸುವ ಕ್ರಮ ಅನನ್ಯವಾದುದು. ಸಾತ್ವಿಕ ಪಾತ್ರಗಳಲ್ಲೂ ಅಷ್ಟೇ ಪ್ರಭುತ್ವ ಇವರಿಗುಂಟು. ಭರತ, ಹನುಮಂತ, ವಿದುರ, ಕರ್ಣ ಮೊದಲಾದ ಪಾತ್ರಗಳನ್ನೂ ಮನಮುಟ್ಟುವಂತೆ ಚಿತ್ರಿಸಬಲ್ಲರು. ಹಾಸ್ಯ ರಸದ ಉತ್ತರ ಕುಮಾರನ ಅರ್ಥವನ್ನೂ ಅಷ್ಟೇ ಪರಿಣಾಮಕಾರಿಯಾಗಿ ಹೇಳಬಲ್ಲರು. 

ದೇರಾಜೆ ಸೀತಾರಾಮಯ್ಯನವರ ಶಿಷ್ಯನಾಗಿ ತಾಳಮದ್ದಳೆ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡುವ ದಿಸೆಯಲ್ಲಿ ದಾಪುಗಾಲು ಹಾಕುತ್ತಿರುವಾಗಲೇ ಅನಿರೀಕ್ಷಿತವಾಗಿ ಆ ಕ್ಷೇತ್ರದಿಂದ ಕೆಲವು ವರ್ಷಗಳ ಕಾಲ ಹಿಂದೆ ಸರಿದು ಅಜ್ಞಾತವಾಗಿದ್ದರು. ಕೆಲವೊಮ್ಮೆ ಸರಿಪಡಿಸಲಾಗದ ನ್ಯೂನತೆಗಳನ್ನು ಹೊಂದಿದ ವ್ಯವಸ್ಥೆಯನ್ನು ಅನುಸರಿಸಿಕೊಂಡು ಹೋಗಲು ಮನಸ್ಸಾಕ್ಷಿ ಒಪ್ಪದೇ ಹಾಗೆ ಮಾಡಿದ್ದಾರೇನೋ ಎಂಬ ಸಂಶಯ ನಮಗೆ ಮೂಡುತ್ತದೆ. ಆದರೆ ಅದರ ಬಗ್ಗೆ ಅವರೇನೂ ಹೇಳಲಾರರು. ಆ ಪ್ರಶ್ನೆಗೆ ನಗುವೇ ಅವರ ಉತ್ತರ. ಆದರೂ ಕೆಲವು ಪ್ರಶ್ನೆಗಳಿಗೆ ಮನಸ್ಸು ಬಿಚ್ಚಿ ಉತ್ತರಿಸುತ್ತಾರೆ. ಅಂತಹ ಕೆಲವು ಪ್ರಶ್ನೋತ್ತರಗಳ ಮಾದರಿ ಇಲ್ಲಿದೆ. 

ಪ್ರಶ್ನೆ: ತಾಳಮದ್ದಳೆಯ ಅರ್ಥಗಾರಿಕೆಗೆ ಮೊದಲ ಆಸಕ್ತಿ ಹೇಗೆ ಮೂಡಿತು?

ಉಡುವೆಕೋಡಿ: ಹುಟ್ಟಿದ ಊರು, ಪರಿಸರಗಳೇ ಮೊದಲ ಪ್ರೇರಣೆ. ಕಲ್ಮಡ್ಕ, ಚೊಕ್ಕಾಡಿಯ ಪರಿಸರ ಯಕ್ಷಗಾನದ ಆಡೊಂಬೊಲವೇ ಆಗಿತ್ತು. ಯಕ್ಷಗಾನಕ್ಕೆ ಗಂಡುಮೆಟ್ಟಿನ ನೆಲವಾಗಿತ್ತದು. ಸಾಂಸ್ಕೃತಿಕ ಕೇಂದ್ರವಾಗಿದ್ದ ಆ ನೆಲದಲ್ಲಿ ದೇರಾಜೆ ಸೀತಾರಾಮಯ್ಯ, ಕೊಳಂಬೆ ಪುಟ್ಟಣ್ಣ ಗೌಡರೇ ಮೊದಲಾದ ಪ್ರಸಿದ್ಧ ಅರ್ಥಧಾರಿಗಳಿದ್ದರು. ಊರಲ್ಲಿ ಯಕ್ಷಗಾನದ ಸಂಘಗಳಲ್ಲಿ ವಾರಕ್ಕೊಂದು ಅಭ್ಯಾಸ ಕೂಟಗಳು ನಡೆಯುತ್ತಿದ್ದುವು. ಇಂತಹಾ ಅಭ್ಯಾಸ ಕೂಟಗಳು ತಾಳಮದ್ದಳೆ ಅರ್ಥಧಾರಿಗಳಿಗೆ ಬಹಳ ಪ್ರಯೋಜನಕಾರಿಯಾಗುತ್ತಿತ್ತು. ನನ್ನ ತೀರ್ಥರೂಪರಾದ ಉಡುವೆಕೋಡಿ ನಾರಾಯಣಯ್ಯನವರೂ ಅರ್ಥಧಾರಿಗಳಾಗಿದ್ದರು. ಆದುದರಿಂದ ಆಸಕ್ತಿ ಬೆಳೆದು ಬಂತು. ಸಂಬಂಧಿಕರೂ ಆದ ದೇರಾಜೆ ಸೀತಾರಾಮಯ್ಯನವರು ನನಗೆ ತಾಳಮದ್ದಳೆ ಕ್ಷೇತ್ರದಲ್ಲಿ ಗುರುಗಳು. ಅವರ ಮಾರ್ಗದರ್ಶನಗಳಿಂದ ಅರ್ಥಧಾರಿಯಾಗಿ ಬೆಳೆಯಲು ಸಾಧ್ಯವಾಯಿತು. 

ಪ್ರಶ್ನೆ: ಶೇಣಿ, ಸಾಮಗ, ದೇರಾಜೆಯವರ ಕೂಟಗಳಲ್ಲೂ ತಾಳಮದ್ದಳೆಯ ವೇದಿಕೆ ಹಂಚಿಕೊಂಡ ನೀವು ಆ ಕಾಲಕ್ಕೂ ಈ ಕಾಲಕ್ಕೂ ಕೊಂಡಿಯಂತಿರುವವರು. ಈ ಕಾಲಕ್ಕೆ ಆಗುವಾಗ ಈ ಕ್ಷೇತ್ರದಲ್ಲಿ ಬದಲಾವಣೆಗಳಾಗಿವೆಯೇ? ಉಡುವೆಕೋಡಿ: ಆಗಿದೆ. ಕೆಲವು ಅಪೇಕ್ಷಿತ ಬದಲಾವಣೆಗಳು ಮತ್ತು ಇನ್ನು ಕೆಲವು ಅನಪೇಕ್ಷಿತ ಬದಲಾವಣೆಗಳು. ನಾವು ತುಂಬಾ ಹಿಂದಕ್ಕೆ ಹೋದರೆ ಆ ಕಾಲದಲ್ಲಿ ಪದ್ಯದಷ್ಟೇ ಚುಟುಕಾಗಿ ಅರ್ಥಗಾರಿಕೆಯಿತ್ತು. ಆದರೆ ಅಭಿನಯರಹಿತ ತಾಳಮದ್ದಳೆಯಲ್ಲಿ ಮಾತಿನ ಮಹತ್ವವನ್ನು ಅರಿತ ವಿದ್ವಾಂಸರು ಮಾತಿನ ಮಂಟಪದಲ್ಲಿ ದೃಶ್ಯ ನಿರ್ಮಾಣ ಮಾಡಬೇಕಾದ ಅನಿವಾರ್ಯತೆಯನ್ನು ಮನಗಂಡರು.  ಆದುದರಿಂದ ಮಾತುಗಾರಿಕೆ ಎನ್ನುವುದು ಬೆಳೆದು ಬಂತು. ಅದು ಬೆಳೆಯುತ್ತಾ ಬೆಳೆಯುತ್ತಾ ಅಪೇಕ್ಷಿತ ಬದಲಾವಣೆಗಳನ್ನು ಕಾಣುತ್ತಲೇ ಇದೆ. 


ಪ್ರಶ್ನೆ: ತಾಳಮದ್ದಳೆ ಅರ್ಥಧಾರಿಯಾಗಿ ನೀವು ಆರಂಭದಲ್ಲಿ ಆಕ್ರಮಣ ಶೈಲಿಯನ್ನು ರೂಡಿಸಿಕೊಂಡಿದ್ದಿರಿ ಎಂದು ಹೇಳುವುದನ್ನು ಕೇಳಿದ್ದೇವೆ. ನಿಜವೇ?

ಉಡುವೆಕೋಡಿ: ಮೊದ ಮೊದಲು ಆ ಶೈಲಿ ಇತ್ತು. ಒಂದು ಕಾಲದಲ್ಲಿ ಮಾತುಗಾರಿಕೆಯಲ್ಲಿಯೇ ಗೆಲ್ಲಬೇಕೆಂಬ ಹುರುಪೂ ಇತ್ತು. ಇದನ್ನು ಗಮನಿಸಿದ ಗುರುಗಳಾದ ದೇರಾಜೆ ಸೀತಾರಾಮಯ್ಯನವರು ಒಂದು ದಿನ ಈ ಬಗ್ಗೆ ತಿಳಿ ಹೇಳಿದರು. “ಅರ್ಥ ಹೇಳಲು ಕುಳಿತವರು ಅಗತ್ಯಕ್ಕಿಂತ ಹೆಚ್ಚು ತರ್ಕ ಮಾಡಬಾರದು. ಹೆಚ್ಚು ತರ್ಕ ಮಾಡಲು ಇರುವ ವೇದಿಕೆಯಲ್ಲ ಇದು. ತಂಡವಾಗಿ ಹೋದರೆ ತಾಳಮದ್ದಳೆ ಯಶಸ್ವಿಯಾಗುತ್ತದೆ. ಯಕ್ಷಗಾನ ತಾಳಮದ್ದಳೆಯೆಂದರೆ ಇನ್ನೊಬ್ಬರನ್ನು ಸೋಲಿಸಲು ಮಾತ್ರವೇ ಇರುವಂತದ್ದಲ್ಲ.  ಗೆಲ್ಲುವ ಪಾತ್ರ ಗೆಲ್ಲಬೇಕು. ಸೋಲುವ ಪಾತ್ರ ಸೋಲಬೇಕು. ಸೋಲುವ ಪಾತ್ರ ಮಾತುಗಾರಿಕೆಯಲ್ಲಿ ಗೆದ್ದರೆ ಪಾತ್ರವೂ ಸೋಲುತ್ತದೆ. ತಾಳಮದ್ದಲೆಯೂ ಸೋಲುತ್ತದೆ”  ಎಂದು ದೇರಾಜೆಯವರು ರಂಗದ ಸೂಕ್ಷ್ಮತೆಯನ್ನು ಹೇಳಿದ್ದರು. ಆಮೇಲೆ ನಾನು ನನ್ನ ಆಕ್ರಮಣ ಶೈಲಿಯನ್ನು ಬಿಟ್ಟುಬಿಟ್ಟೆ. 

ಪ್ರಶ್ನೆ: ಕೀರಿಕ್ಕಾಡು, ವೆಂಕಪ್ಪ ಶೆಟ್ಟಿ, ಶೇಣಿ,  ಸಾಮಗರ ತಾಳಮದ್ದಳೆಯ ವೈಭವದ ಯುಗ ಈಗ ಇಲ್ಲ ಎಂದು ಹೇಳುತ್ತಿರುವುದು ನಿಜವೇ? ಉಡುವೆಕೋಡಿ: ಈಗ ತಾಳಮದ್ದಳೆಗಳು ಸಂಖ್ಯೆಯಲ್ಲಿ ಹೆಚ್ಚಳಗೊಂಡಿವೆ. ಮೊದಲು ಕಡಿಮೆ ತಾಳಮದ್ದಳೆಗಳು ನಡೆಯುತ್ತಿದ್ದುವು. ಯಾಕೆಂದರೆ ಆಗ ವಾಹನ ಸೌಕರ್ಯಗಳಿರಲಿಲ್ಲ. ಎಷ್ಟೋ ದೂರ ಹೋಗಿ ತಾಳಮದ್ದಳೆಗಳಲ್ಲಿ ಭಾಗವಹಿಸಿ ಬರಬೇಕಾಗಿತ್ತು. ಈಗ ಸ್ವಂತ ವಾಹನ ಸೌಕರ್ಯಗಳಿರುವುದರಿಂದ ಒಂದೇ ದಿನದಲ್ಲಿ ಮೂರು ತಾಳಮದ್ದಳೆಗಳಲ್ಲಿ ಭಾಗವಹಿಸುವವರೂ ಇದ್ದಾರೆ. ಆದುದರಿಂದ ತಾಳಮದ್ದಳೆಗಳು ಎಷ್ಟೋ ಹೆಚ್ಚಾಗಿವೆ. ಆದರೆ ಗುಣಮಟ್ಟದ ಬಗ್ಗೆ ಏನೂ ಹೇಳಲಾರೆ.  

ಪ್ರಶ್ನೆ: ನೀವು ಸನ್ಮಾನ ಮತ್ತು ವೇದಿಕೆಗಳಿಂದ ದೂರ ಇರಲು ಬಯಸುವವರು. ಅದು ಯಾಕೆ?

ಉಡುವೆಕೋಡಿ: ಮೊದಲಿನಿಂದಲೂ ನನ್ನ ಸ್ವಭಾವವೇ ಹಾಗೆ. ಸನ್ಮಾನ ಮಾಡಿಸಿಕೊಳ್ಳುವುದು ನನಗೆ ಇಷ್ಟ ಇರಲಿಲ್ಲ. ಆದರೆ ಅನಿರೀಕ್ಷಿತವಾಗಿ ನನಗೆ ತಿಳಿಯದೆ ಆ ಕ್ಷಣದಲ್ಲಿ ಒಂದೆರಡು ಸನ್ಮಾನಗಳನ್ನು ಮಾಡಿದ್ದಾರೆ. ಆದುದರಿಂದ ಸನ್ಮಾನ ಸ್ವೀಕರಿಸಿದ್ದೇ ಇಲ್ಲ ಎಂದು ಹೇಳುವ ಹಾಗಿಲ್ಲ. ಆದರೆ ನಾನು ಅವುಗಳಿಂದ ದೂರ ಎನ್ನುವುದು ನಿಜ.

ಉಡುವೆಕೋಡಿಯವರು ಮೊದಲೆಲ್ಲಾ ಸಂಭಾವನೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಆದರೆ ಬಹಳಷ್ಟು ಒತ್ತಾಯಪೂರ್ವಕವಾಗಿ ಸ್ವೀಕರಿಸಲು ಮನವಿ ಮಾಡುತ್ತಿರುವುದರಿಂದ ಅನಿವಾರ್ಯವಾಗಿ ಸಂಭಾವನೆ ತೆಗೆದುಕೊಂಡರೂ ಅದನ್ನು ಯಕ್ಷಗಾನಕ್ಕಾಗಿಯೇ ವಿನಿಯೋಗಿಸುತ್ತಾರೆ. ತಾಳಮದ್ದಳೆಯ ಭಾಗವಹಿಸುವಿಕೆಯಿಂದ ಕೊಡಲ್ಪಟ್ಟ ಸಂಭಾವನೆಯ ಮೊತ್ತವನ್ನು ಯಕ್ಷಗಾನಕ್ಕಾಗಿ ದುಡಿಯುವ ಸಂಸ್ಥೆಗಳಿಗೆ ಮತ್ತು ಯಕ್ಷಗಾನದ ಇತರ ಸಂಘ ಸಂಸ್ಥೆಗಳಿಗೆ ದಾನವಾಗಿ ನೀಡುತ್ತಿದ್ದಾರೆ. ಉಡುವೆಕೋಡಿ ಸುಬ್ಬಪ್ಪಯ್ಯನವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿಯೂ ಮುಂದಾಳುಗಳಾಗಿದ್ದು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸುಳ್ಯ ತಾಲೂಕಿನ ಕಲ್ಮಡ್ಕ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಾಗೂ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳಲ್ಲಿ ನಿರ್ದೇಶಕರಾಗಿಯೂ, ದ.ಕ ಕೃಷಿಕರ ಸಹಕಾರಿ ಮಾರಾಟ ಸಂಘದ ನಿರ್ದೇಶಕರಾಗಿಯೂ, ರೆಗ್ಯುಲೇಟೆಡ್ ಮಾರ್ಕೆಟಿಂಗ್ ಸೊಸೈಟಿಯ ಸರಕಾರದ ನಾಮನಿರ್ದೇಶನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಗೂ ನಾಡಿನ ಹಲವು ದೇವಸ್ಥಾನ ಹಾಗೂ ಇತರ ಧಾರ್ಮಿಕ, ಸಾಂಸ್ಕೃತಿಕ ಸಂಸ್ಥೆಗಳ ನೇತೃತ್ವವನ್ನು ವಹಿಸಿ ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಉಡುವೆಕೋಡಿ ಸುಬ್ಬಪ್ಪಯ್ಯ – ಸಂಕ್ಷಿಪ್ತ ಮಾಹಿತಿ 

ಹೆಸರು: ಉಡುವೆಕೋಡಿ ಸುಬ್ಬಪ್ಪಯ್ಯ
ಪತ್ನಿ: ಶ್ರೀಮತಿ ಸುಲೋಚನಾ   ಜನನ: ಜನವರಿ 19, 1941

ಜನನ ಸ್ಥಳ:   ಸುಳ್ಯ ತಾಲೂಕಿನ ಕಲ್ಮಡ್ಕ    ತಂದೆ ತಾಯಿ:  ತಂದೆ ಶ್ರೀ ಉಡುವೆಕೋಡಿ ನಾರಾಯಣಯ್ಯ . ತಾಯಿ ಶ್ರೀಮತಿ ವೆಂಕಟಲಕ್ಷ್ಮಿ  ವಿದ್ಯಾಭ್ಯಾಸ: ಬಿ. ಎ. ಪದವಿ (ಸಂತ ಅಲೋಶಿಯಸ್ ಕಾಲೇಜು, ಮಂಗಳೂರು)

ಯಕ್ಷಗಾನ ಗುರುಗಳು:  ದೇರಾಜೆ ಸೀತಾರಾಮಯ್ಯ ಅನುಭವ: ಹಲವಾರು ಪ್ರಸಿದ್ಧ  ತಾಳೆಮದ್ದಳೆ ಕೂಟಗಳಲ್ಲಿ ಸುಮಾರು ೪೫ ವರ್ಷಗಳಿಂದ ತಾಳಮದ್ದಳೆ ಕೂಟಗಳಲ್ಲಿ ಕಲಾಭಿಮಾನಿಗಳ ಬೇಡಿಕೆಯ ಅರ್ಥಧಾರಿಯಾಗಿ ಅನುಭವ. 
 ಮಕ್ಕಳು:  ಪುತ್ರ ಸತೀಶ. ಬೆಂಗಳೂರಿನಲ್ಲಿ ಸ್ವ ಉದ್ಯೋಗಿ. ಹಿರಿಯ ಪುತ್ರಿ ಸುನೀತಾ ವಿವಾಹಿತೆ, ಪ್ರಸ್ತುತ ಇಂಗ್ಲೆಂಡ್ ನಲ್ಲಿ ನೆಲೆಸಿದ್ದಾರೆ. ಕಿರಿಯ ಪುತ್ರಿ ಸಂಧ್ಯಾ ಕಜೆ ವಿವಾಹಿತೆ. ಉಡುವೆಕೋಡಿಯವರಿಗೆ ಐದು ಮಂದಿ ಮೊಮ್ಮಕ್ಕಳು.  ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಪ್ರಶಸ್ತಿ ಸನ್ಮಾನಗಳನ್ನು ಸ್ವೀಕರಿಸಲು ಒಪ್ಪುವುದಿಲ್ಲ. ಆದರೆ ಅನಿರೀಕ್ಷಿತವಾಗಿ ಆ ಕ್ಷಣದಲ್ಲಿ ವೇದಿಕೆಗೆ ಕರೆದು ಸನ್ಮಾನಿಸಿದವರು ಇದ್ದಾರೆ. ಆದುದರಿಂದ ಅನಿವಾರ್ಯ ಸಂದರ್ಭಗಳನ್ನು ಹೊರತು ಪಡಿಸಿದರೆ ಅವರು ಪ್ರಶಸ್ತಿ ಸನ್ಮಾನ, ವೇದಿಕೆಗಳಿಂದ ಸದಾ ದೂರ.

ಲೇಖನ: ಮನಮೋಹನ್ ವಿ.ಎಸ್. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments