ಇನ್ನು ಯಕ್ಷಗಾನ ಕಲಾವಿದರಿಗೆ ಕೊರೋನಾ ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದ್ದಾರೆ. ಮೇಳಗಳು ತಿರುಗಾಟಕ್ಕೆ ಹೊರಡುವ ಮೊದಲು ಪ್ರತಿಯೊಬ್ಬ ಕಲಾವಿದನೂ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಮೇಳಗಳು ತಿರುಗಾಟಕ್ಕೆ ಹೊರಟ ನಂತರವೂ ಪ್ರತಿ ವಾರವೂ ಈ ಪರೀಕ್ಷೆ ಉಚಿತವಾಗಿ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಈ ಜಿಲ್ಲೆಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಕಲಾವಿದರಿದ್ದಾರೆ. ಕೆಲವು ಮೇಳಗಳು ಈ ಬಾರಿ ತಿರುಗಾಟ ನಡೆಸುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದ ಕಾರಣ ಧಾರ್ಮಿಕ ಕ್ಷೇತ್ರಗಳ ಮೂಲಕ ಮೇಳಗಳನ್ನು ಹೊರಡಿಸಬೇಕು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಆದುದರಿಂದ ಎಲ್ಲೆಲ್ಲಿ ಹೊಸ ಮೇಳಗಳನ್ನು ಹೊರಡಿಸಬಹುದು ಎಂಬುದನ್ನು ಪರಿಶೀಲಿಸಲಾಗುವುದು. ಯಾವ ಕಲಾವಿದರೂ ನಿರುದ್ಯೋಗಿಯಾಗಬಾರದು. ಪ್ರತಿಯೊಬ್ಬ ಕಲಾವಿದರಿಗೂ ಅವಕಾಶ ದೊರೆಯುವಂತಹ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರು ತಮ್ಮ ಕೆಲಸವನ್ನು ಕಳೆದುಕೊಂಡು ಜೀವನ ನಡೆಸಲು ಕಷ್ಟಪಡಬಾರದು. ಆದುದರಿಂದ ಎಲ್ಲಾ ರೀತಿಯ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಯಕ್ಷಗಾನ ಪ್ರಾರಂಭಿಸಲು ಅನುಮತಿ ನೀಡಲಾಗುವುದು’ ಎಂದು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು. ಇಡೀ ರಾತ್ರಿ ಪ್ರದರ್ಶನ ನಡೆಸಬೇಕೇ ಎಂಬ ಬಗ್ಗೆ ಅಥವಾ ಯಕ್ಷಗಾನ ಪ್ರದರ್ಶನಕ್ಕೆ ಬೇರೆಯದೇ ಸ್ವರೂಪ ನೀಡಬೇಕೆ ಎಂಬ ಬಗೆಗೆ ಹಾಗೂ ಯಕ್ಷಗಾನ ಕಲಾವಿದರಿಗೆ ಪಿಂಚಣಿ ನೀಡಬೇಕು ಎಂಬ ಪ್ರಸ್ತಾಪಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.