Saturday, January 18, 2025
Homeಯಕ್ಷಗಾನಚಪ್ಪರಮನೆ ಶ್ರೀಧರ ಹೆಗಡೆ - ಬಡಗುತಿಟ್ಟಿನ ಬಹುಬೇಡಿಕೆಯ ಹಾಸ್ಯಗಾರರು

ಚಪ್ಪರಮನೆ ಶ್ರೀಧರ ಹೆಗಡೆ – ಬಡಗುತಿಟ್ಟಿನ ಬಹುಬೇಡಿಕೆಯ ಹಾಸ್ಯಗಾರರು

ರೂಢಿಯ ಮಾತುಗಳು ಕೆಲವೊಂದು ಬಾರಿ ಶಾಸ್ತ್ರಕ್ಕಿಂತಲೂ ಬಲಿಷ್ಠವಾಗಿರುತ್ತವೆ. ವಿಚಾರವನ್ನು ಮನಮುಟ್ಟುವಂತೆ ತಿಳಿಸಲು ಇಂತಹ ಮಾತುಗಳು ಅತ್ಯಂತ ಸಹಕಾರಿಯಾಗುತ್ತವೆ. ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎಂಬ ಮಾತು ರೂಡಿಯಲ್ಲಿದೆ. ವೇದವು ಸುಳ್ಳೆಂದು ಇದರ ಅರ್ಥವಲ್ಲ. ಗಾದೆಯ ಮಾತುಗಳು ಅರ್ಥಪೂರ್ಣವಾಗಿರುತ್ತವೆ ಎಂದು ತೋರಿಕೊಡಲು ಈ ಸೊಲ್ಲನ್ನು ಬಳಸುತ್ತಾರೆ. ಒಂದು ವಿಚಾರವಾಗಿ ಅಗತ್ಯಕ್ಕಿಂತ ಹೆಚ್ಚು ಏನೇನೋ ಮಾತಾಡುವವರನ್ನು ‘ಊಟದಲ್ಲಿ ಅಗತ್ಯಕ್ಕಿಂತ ಹೆಚ್ಚು ಉಪ್ಪು ತಿನ್ನುವವರು’ ಎಂದು ನಾವು ಆಕ್ಷೇಪಿಸುತ್ತೇವೆ. ವಿಷಯಕ್ಕೆ ಸಂಬಂಧವಿಲ್ಲದೆ ಏನೇನೋ ಮಾತನಾಡಿದ ಎಂಬುದು ಇದರ ಧ್ವನಿ. ‘ಆಷಾಢ ಮಾಸದ ಬಿಸಿಲಿಗೆ ಆನೆಯ ಬೆನ್ನೂ ಒಡೆದು ಹೋದೀತು’ ಎಂಬ ಮಾತಿದೆ. ಬಿಸಿಲಿಗೆ ಆನೆಯ ಬೆನ್ನು ಒಡೆಯುವುದುಂಟೆ? ಆಷಾಡ ಮಾಸದ ಬಿಸಿಲು ಎಷ್ಟು ಪ್ರಕರವಾಗಿರುತ್ತದೆ ಎಂಬುದನ್ನು ಈ ಮಾತು ತಿಳಿಸುತ್ತದೆ.

ಯಕ್ಷಗಾನದ ಕುರಿತಾಗಿ ಬರೆಯುವಾಗ ಇಂತಹ ಮಾತುಗಳೇಕೆ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳಲಾರದು. ಸನ್ನಿವೇಶಕ್ಕೆ, ಪಾತ್ರಕ್ಕೆ ಧಕ್ಕೆಯಾಗದಂತೆ ರಂಗದಲ್ಲಿ ಇಂತಹ ರೂಢಿಯ ಮಾತುಗಳನ್ನು ಕಲಾವಿದರೂ ಉಪಯೋಗಿಸುವುದುಂಟು. ಹಾಸ್ಯಗಾರರಿಗಂತೂ ರೂಢಿಯ ಮಾತುಗಳನ್ನು ಸಂಭಾಷಣೆಗಳಲ್ಲಿ ಬಳಸಿಕೊಳ್ಳುವ ಸಂದರ್ಭಗಳು ಹೆಚ್ಚಾಗಿ ಸಿಗುತ್ತವೆ. ಯಕ್ಷಗಾನದಲ್ಲಿ ಹಾಸ್ಯವು ಹೇಗಿರಬೇಕು ಎಂಬ ಪ್ರಶ್ನೆಗೆ ‘ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ’ ಇರಬೇಕು ಎಂದು ಹಿರಿಯರು ಹೇಳುವುದನ್ನು ನಾವು ಕೇಳಿದ್ದೇವೆ. ಹಿತಮಿತವಾಗಿರಬೇಕು, ಶುಚಿರುಚಿಯಾಗಿರಬೇಕು ಎಂಬುದೇ ಇದರ ಧ್ವನಿ. ಈ ದಿಸೆಯಲ್ಲೇ ಸಾಗಿ ಹಿರಿಯ ಹಾಸ್ಯಗಾರರನೇಕರು ಪ್ರಸಿದ್ಧರಾದರು. ಪ್ರಸ್ತುತ ಇದೆ ತೆರನಾಗಿ ಅಭಿನಯಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದ ಹಾಸ್ಯಗಾರರು ನಮ್ಮ ಜತೆಗೆ ಇದ್ದಾರೆ ಎಂಬುದು ಸಂತೋಷದ ವಿಚಾರ. ಹೀಗೆ ಪಾತ್ರೋಚಿತವಾಗಿ, ಕಲೆಗೆ ಕೊರತೆಯಾಗದಂತೆ ಅಭಿನಯಿಸುತ್ತಿರುವ ಹಾಸ್ಯಗಾರರಲ್ಲಿ ಚಪ್ಪರಮನೆ ಶ್ರೀಧರ ಹೆಗಡೆಯವರೂ ಒಬ್ಬರು.

ಇವರು ಬಡಗುತಿಟ್ಟಿನ ಬಹುಬೇಡಿಕೆಯ ಹಾಸ್ಯಗಾರರು. ಅನುಭವಿಗಳು. ಬಡಗುತಿಟ್ಟಿನ ಹಾಸ್ಯಗಾರರಾದ  ಚಪ್ಪರಮನೆ ಶ್ರೀಧರ ಹೆಗಡೆಯವರು ಈ ಲೋಕದ ಬೆಳಕನ್ನು ಕಂಡದ್ದು 1965ನೇ ಇಸವಿ ನವೆಂಬರ್ 14ರಂದು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ  ಚಪ್ಪರಮನೆ ಎಂಬ ಹಳ್ಳಿ. ತಂದೆ ಶ್ರೀ ನಾರಾಯಣ ವೆಂಕಪ್ಪ ಹೆಗಡೆ. ತಾಯಿ ಶ್ರೀಮತಿ ಸೀತಮ್ಮ. ಮಕ್ಕಳ ದಿನಾಚರಣೆಯ ದಿನದಂದೇ ಶ್ರೀಮತಿ ಸೀತಮ್ಮ ಪುತ್ರನಿಗೆ ಜನ್ಮವಿತ್ತಿದ್ದರು. ತಂದೆ ನಾರಾಯಣ ವೆಂಕಪ್ಪ ಹೆಗಡೆಯವರು ವೇಷಧಾರಿಯಾಗಿದ್ದರು. ಚಿಕ್ಕಪ್ಪ ಕೃಷ್ಣ ಹೆಗಡೆಯವರು ಭಾಗವತಿಕೆಯನ್ನು ಮಾಡುತ್ತಿದ್ದರು.  ಚಪ್ಪರಮನೆ ಶ್ರೀಧರ ಹೆಗಡೆಯವರ ಸೋದರ ಮಾವ ಮಂಚಿಕೇರಿ ಕಲಾವನ ಮನೆಯ ಶ್ರೀ ರಾಮಚಂದ್ರ ಹೆಗಡೆಯವರು ಕಲಾವಿದರಾಗಿದ್ದು, ಯಕ್ಷಗಾನ ಸಂಘವೊಂದರ ನಾಯಕರು. ಹಾಗಾಗಿ ಯಕ್ಷಗಾನದ ನಂಟು ರಕ್ತಗತವಾಗಿಯೇ ಬಂದಿತ್ತು. ಸೋದರ ಮಾವನಿಗೆ ಅಳಿಯನನ್ನು ತುಂಬಾ ಓದಿಸಬೇಕೆಂಬ ಆಸೆಯಿತ್ತು. ಅವಕಾಶಗಳು ಕೂಡಿ ಬರಲಿಲ್ಲವಾದರೂ ಯಕ್ಷಗಾನ ಕಲಾವಿದನಾಗಲು ಪ್ರೋತ್ಸಾಹಿಸಿದ್ದರು.

ಚಪ್ಪರಮನೆ ಹಾಸ್ಯಗಾರರು ಓದಿದ್ದು ಎಂಟನೆಯ ತರಗತಿ ವರೆಗೆ. 2ನೆಯ ತರಗತಿ ವರೆಗೆ ಕಡ್ ಕೇರಿ ಶಾಲೆಯಲ್ಲಿ (ಅಜ್ಜನ ಮನೆಯವರ ಆಶ್ರಯದಲ್ಲಿ). 5ನೇ ಕ್ಲಾಸಿನ ವರೆಗೆ ಚಪ್ಪರಮನೆ ಹಳ್ಳೀಬೈಲು ಶಾಲೆಯಲ್ಲಿ. 8ನೇ ತರಗತಿ ವರೆಗೆ ಬಿಳಗಿ ಹೈಸ್ಕೂಲಿನಲ್ಲಿ. ಚಪ್ಪರಮನೆಯವರನ್ನು ಹೆತ್ತ ಅಬ್ಬೆ ಶ್ರೀಮತಿ ಸೀತಮ್ಮ ಅವರ ತವರು ಮನೆಯವರು ಕಲಾವಿದರೂ, ಕಲಾಭಿಮಾನಿಗಳೂ ಆಗಿದ್ದರು. ಮಲೆನಾಡಿನ ಗ್ರಾಮೀಣ ಪ್ರದೇಶ. ಹಳ್ಳಿಗರಿಗೆ ಮನೋರಂಜನೆಗಾಗಿ ಇದ್ದ ಮಾಧ್ಯಮ ಯಕ್ಷಗಾನ ಮಾತ್ರ. ಯಕ್ಷಗಾನ ಪ್ರದರ್ಶನಗಳನ್ನು ನೋಡಿಯೇ ಬೆಳೆದರು. ಮಧ್ಯಾಹ್ನ ಮೇಲೆ ಶಾಲೆಗೆ ಚಕ್ಕರ್ ಹಾಕಿ ಗೆಳೆಯರ ಜತೆ ಗುಡ್ಡದ ಮೇಲೆ ಯಕ್ಷಗಾನ ಕುಣಿಯುತ್ತಿದ್ದರು. ಯಕ್ಷಗಾನಾಸಕ್ತ ಮಕ್ಕಳಿಗೆ ಮಲೆನಾಡಿನ ಗುಡ್ಡಗಳೇ ರಂಗಸ್ಥಳವಾಗುತ್ತಿತ್ತು. ಹೀಗೆ ಶಾಲೆಗೆ ಹಾಜರಾಗದೆ ಗುಡ್ಡದಲ್ಲಿ ಕುಣಿದ ಗೆಳೆಯರ ತಂಡದಲ್ಲಿ ಯಕ್ಷಗಾನ ಕಲಾವಿದನಾದುದು ಚಪ್ಪರಮನೆಯವರು ಮಾತ್ರ. ಕೃಷಿ ಕುಟುಂಬವಾದ ಕಾರಣ ತೋಟದ ಕೆಲಸ ಮಾಡಲೇ ಬೇಕಾಗಿತ್ತು. ಬಡತನವೂ ಇತ್ತು. ಅಡಕೆ ತೋಟದಲ್ಲಿ ಮದ್ದು ಹೊಡೆಯುವುದು, ಗೊನೆ ಕೊಯ್ಯುವುದು, ಮುಂತಾದ ಕೆಲಸಗಳನ್ನು ಎಂಟು ವರ್ಷಗಳ ಕಾಲ ಮಾಡಿದ್ದರು.  

ಚಪ್ಪರಮನೆ ಶ್ರೀಧರ ಹೆಗಡೆಯವರು ಅಧಿಕೃತವಾಗಿ ಶಾಸ್ತ್ರೀಯವಾಗಿ ನಾಟ್ಯ  ಕಲಿತವರಲ್ಲ.  ಆದರೂ ಸರಿಯಾಗಿ ಕುಣಿಯುತ್ತಾರೆ. ಆಟ ನೋಡಿಯೇ ಕುಣಿಯುವ ಕಲೆಯು ಕರಗತವಾಗಿತ್ತು. ಟೆಂಟ್ ಮೇಳದ ಆಟ ಊರಿಗೆ ಬಂದಾಗ ನೋಡುವ ಆಸೆಯಾಗುತ್ತಿತ್ತು.  ಆದರೆ ಕೈಯಲ್ಲಿ ಹಣವಿರಲಿಲ್ಲ. ದೂರದ ಮರದಡಿಯ ಕತ್ತಲಿನಲ್ಲಿ ನಿಂತು ಚೆಂಡೆ ಪೆಟ್ಟಿಗೆ ಸರಿಯಾಗಿ ಒಬ್ಬರೇ ಕುಣಿಯುತ್ತಿದ್ದರು. ಮಧ್ಯರಾತ್ರಿ ಟೆಂಟ್ ಸರಿಸಿದಾಗ ಹತ್ತಿರ ಬಂದು ಆಟ ನೋಡುತ್ತಿದ್ದರು. ಹೀಗೆ ಸಾಗಿತ್ತು, ಹೆಚ್ಚಾಗಿತ್ತು ಆಟ  ನೋಡುವ ಹುಚ್ಚು. ಶೇಣಿ ಗೋಪಾಲಕೃಷ್ಣ ಭಟ್ ಮತ್ತು ಕೆರೆಮನೆ ವೆಂಕಟಾಚಲ ಭಟ್ಟರ ಅರ್ಥಗಾರಿಕೆಯನ್ನು ಕೇಳುವುದೆಂದರೆ ಇವರಿಗೆ ಬಲು ಪ್ರೀತಿ. ತಾಳಮದ್ದಲೆಯತ್ತಲೂ ಆಕರ್ಷಿತರಾಗಿ ಕೇಳಲು ಸಾಗುತ್ತಿದ್ದರು. ಕಲಾವಿದನಾಗಲು ಚಪ್ಪರಮನೆ ಹಾಸ್ಯಗಾರರಿಗೆ ಕೊಳಗಿ ಶ್ರೀ ಅನಂತ ಹೆಗಡೆಯವರ ಪ್ರೋತ್ಸಾಹವೂ ಇತ್ತು.

“ಪ್ರಮಾಣಪತ್ರವೂ ಇಲ್ಲದೆ ತೊಡಗಿಸಿಕೊಳ್ಳಬಹುದಾದ ಕ್ಷೇತ್ರವು ಯಕ್ಷಗಾನ. ವಿದ್ಯಾರ್ಹತೆಯ ನಿಬಂಧನೆಯೂ ಇಲ್ಲ. ಆದುದರಿಂದಲೇ ಶಾಲೆಯ ಮೆಟ್ಟಿಲುಗಳನ್ನು ನೋಡದವರೂ ಯಕ್ಷಗಾನ ಕಲಾವಿದರಾಗಿದ್ದಾರೆ. ಮಾತ್ರವಲ್ಲ, ಪ್ರಸಿದ್ಧರೂ ಆದರೂ. ಚೌಕಿಗೆ ಹೋಗಿ ನೋಡಿದವನೂ ಆಟ ನೋಡಿದವನೂ ಆಸಕ್ತಿಯಿದ್ದರೆ ಯಕ್ಷಗಾನದಲ್ಲಿ ತೊಡಗಿಸಿಕೊಳ್ಳಬಹುದು. ಇದು ಕಲಾವಿದನಾಗುವ ಆಸೆ ಹೊತ್ತವನಿಗೆ ವರದಾನವೇ ಆಗಿ ಪರಿಣಮಿಸಿತು. ಆದರೆ ಇದರಿಂದ ತೊಡಕುಗಳೂ ಆಗುವುದಿದೆ. ಆದದ್ದಿದೆ. ಕಲಿಯದೇ ರಂಗವೇರಿದರೂ, ರಂಗವೇರಿದ ಮೇಲೆ ಕಲಿಯುತ್ತಾ ಕಾಣಿಸಿಕೊಳ್ಳಬೇಕಾದುದು ಕಲಾವಿದರಿಗೆ ಕರ್ತವ್ಯ. ರಂಗವೇರಲು ಅರ್ಹತೆಯ ಅನಿವಾರ್ಯತೆ ಎಂಬ ನಿಯಮವಿಲ್ಲದ ದಿಸೆಯಿಂದ ನನಗೂ ಕಲಾವಿದನಾಗಲು ಅವಕಾಶವು ದೊರೆತಿತ್ತು” ಇದು ಚಪ್ಪರಮನೆಯವರು ತನ್ನ ಯಕ್ಷಗಾನ ಬದುಕಿನ ಆರಂಭದ ದಿನಗಳನ್ನು ನೆನಪಿಸಿ ಆಡುವ ಮಾತುಗಳು.

ಶಾಸ್ತ್ರೀಯವಾಗಿ ಅಭ್ಯಾಸ ಮಾಡದೇ ಚಪ್ಪರಮನೆಯವರು ರಂಗವೇರುವ ಸನಿವೇಶವು ನಿರ್ಮಾಣವಾಗಿತ್ತು. ಆದರೆ ರಂಗಪ್ರವೇಶ ಮಾಡಿದ ಮೇಲೆ ಹಿಂತಿರುಗಿ ನೋಡಿದವರಲ್ಲ. ಬೆಳೆದರು, ಬೆಳೆದರು, ಬೆಳೆಯುತ್ತಾ ಸಾಗಿದರು. ಬಡಗುತಿಟ್ಟಿನ ಬಹು ಬೇಡಿಕೆಯ ಹಾಸ್ಯಗಾರರಾಗುವಷ್ಟು ಎತ್ತರಕ್ಕೆ ಬೆಳೆದರು.  ಚಪ್ಪರಮನೆ ಹಾಸ್ಯಗಾರರು ಮೊತ್ತ ಮೊದಲು ರಂಗವೇರಿದ್ದು ದಾವಣಗೆರೆಯಲ್ಲಿ. ಸಾಲಿಗ್ರಾಮ ಮೇಳದ ವ್ಯವಸ್ಥಾಪಕರಾಗಿದ್ದ ಶ್ರೀ ಎನ್. ಜಿ. ಹೆಗಡೆಯವರ ನೇತೃತ್ವದಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಎಂಟು ಪ್ರದರ್ಶನಗಳು ನಡೆದಿತ್ತು. ತಂಡದ ಜತೆ ಆಟ ನೋಡಲು ಇವರು ತೆರಳಿದ್ದರು. ಅನಿವಾರ್ಯಕ್ಕೆ ಭಸ್ಮಾಸುರ ಮೋಹಿನಿ ಪ್ರಸಂಗದಲ್ಲಿ ಬ್ರಾಹ್ಮಣನಾಗಿ ರಂಗವೇರಬೇಕಾಯಿತು. ಹಾಸ್ಯಗಾರನಿಲ್ಲದ ಕೊರತೆಯನ್ನು ನೀಗಿದ್ದರು. ನಂತರ ನಡೆದ ಏಳು ಪ್ರದರ್ಶನಗಳಲ್ಲೂ ಇವರೇ ಹಾಸ್ಯ ಪಾತ್ರದಲ್ಲಿ ಅಭಿನಯಿಸಿ ಪ್ರದರ್ಶನಗಳ ಗೆಲುವಿಗೆ ಸಹಕರಿಸಿದ್ದರು. ಇದು ಕಲಾಬದುಕಿನ ಆರಂಭವೂ ಹೌದು. ನಿಜ ಬದುಕಿನ ತಿರುವೂ ಹೌದು. ಬಳಿಕ ಊರ ಪ್ರದರ್ಶನಗಳಲ್ಲಿ ಅವಕಾಶಗಳು ಅರಸಿ ಬರತೊಡಗಿದುವು. ನಾಟ್ಯ ಸರಿಯಾಗಿ ಕಲಿಯದಿದ್ದರೂ ಸರಿಯಾಗಿಯೇ ಕುಣಿಯುತ್ತಿದ್ದರು! ಹಾಸ್ಯದ ಜತೆಗೆ ಸ್ತ್ರೀ ಪಾತ್ರಗಳನ್ನೂ ಮಾಡಲಾರಂಭಿಸಿದ್ದರು.

1991-92ರಲ್ಲಿ ಕಲಾವಿದ ಅಶೋಕ್ ಭಟ್ ಸಿದ್ಧಾಪುರ ಅವರ ಕೇಳಿಕೆಯಂತೆ ಸಾಲಿಗ್ರಾಮ ಮೇಳದಲ್ಲಿ ಮೊದಲ ತಿರುಗಾಟ. ಆಗ ವಿದ್ವಾನ್ ಗಣಪತಿ ಭಟ್ ಮತ್ತು ಶಬರಾಯರ ಭಾಗವತಿಕೆ. ಮುಂದಿನ ವರ್ಷ ಶಿರಸಿ ಮೇಳಕ್ಕೆ. 4 ವರ್ಷಗಳ ತಿರುಗಾಟ. ಕುಂಜಾಲು ರಾಮಕೃಷ್ಣನವರು ಮುಖ್ಯ ಹಾಸ್ಯಗಾರರಾಗಿದ್ದರು. ಅವರ ಒಡನಾಟ, ಕಲಿಕೆಯಿಂದ ಚಪ್ಪರಮನೆಯವರು ಹಾಸ್ಯಗಾರರಾಗಿ ಪಕ್ವತೆಯನ್ನು ಸಾಧಿಸಿದರು. ಅವರನ್ನು ಗುರುವೆಂದು ಗೌರವಿಸುತ್ತಾರೆ. ಪಾತ್ರದ ಸ್ವಭಾವ, ನಿರ್ವಹಣೆಯ ರೀತಿಗಳನ್ನು ಮನಮುಟ್ಟುವಂತೆ ಹೇಳಿಕೊಟ್ಟಿದ್ದರಂತೆ. ಕಾಲ್ಪನಿಕ ಪ್ರಸಂಗಗಳಲ್ಲಿ ವೇಷ ಮಾಡಿದರೂ ಚಪ್ಪರಮನೆಯವರಿಗೆ ಪುರಾಣ ಪ್ರಸಂಗಗಳ ಹಾಸ್ಯ ಪಾತ್ರಗಳಲ್ಲಿಯೇ ಆಸಕ್ತಿ ಹೆಚ್ಚು. ಶಿರಸಿ ಮೇಳದಲ್ಲಿ ಗೋಡೆ, ಕುಮಟಾ ಗೋವಿಂದ ನಾಯಕ್, ಶಿರಳಗಿ ಭಾಸ್ಕರ ಜೋಶಿ, ಬೇಗಾರು ಪದ್ಮನಾಭ ಮೊದಲಾದವರ ಒಡನಾಟವೂ ಸಿಕ್ಕಿತ್ತು. ಪೌರಾಣಿಕ ಪ್ರಸಂಗಗಳ ಎಲ್ಲಾ ಹಾಸ್ಯ ಪಾತ್ರಗಳೂ ಇವರಿಗೆ ಪ್ರಿಯ. ಮಂಥರೆ, ಭೀಷ್ಮ ವಿಜಯದ ವೃದ್ಧ ಬ್ರಾಹ್ಮಣ, ಬೇಹಿನ ಚರ, ಕಾಶೀಮಾಣಿ, ಚಂದ್ರಾವಳೀ ವಿಲಾಸದ ಅತ್ತೆ ಮತ್ತು ಚಂದಗೋಪ ಮೊದಲಾದ ಪಾತ್ರಗಳು ಚಪ್ಪರಮನೆಯವರಿಗೆ ಪ್ರಸಿದ್ಧಿಯನ್ನು ತಂದು ಕೊಟ್ಟಿತು. ಶಿರಸಿ ಮೇಳದ ನಾಲ್ಕು ವರ್ಷಗಳ ತಿರುಗಾಟದ ಬಳಿಕ ನಾಗರಕೊಡಿಗೆ ಬಯಲಾಟ ಮೇಳದಲ್ಲಿ 2 ವರ್ಷ, 2001-2002ರಲ್ಲಿ ಮತ್ತೆ ಒಂದು ವರ್ಷ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ.

ಲೇಖಕ ರವಿಶಂಕರ್ ವಳಕ್ಕುಂಜ ಅವರೊಂದಿಗೆ ಚಪ್ಪರಮನೆ ಶ್ರೀಧರ ಹೆಗಡೆ 

ಮೇಳದ ತಿರುಗಾಟ ನಿಲ್ಲಿಸಿ 2002ರಿಂದ ಕೊಂಡದಕುಳಿಯವರ ಪೂರ್ಣಚಂದ್ರ ತಂಡದಲ್ಲಿ ಖಾಯಂ ಕಲಾವಿದರಾಗಿದ್ದಾರೆ. ಈ ತಂಡದ ಸದಸ್ಯನಾಗಿ ಸಿಂಗಾಪುರ, ಅಬುದಾಭಿ, ಶಾರ್ಜಾ, ದುಬಾಯಿಯಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಅಶೋಕ್ ಭಟ್ ಸಿದ್ಧಾಪುರ ಅವರ ಜತೆಯಾಗಿ ಸ್ನೇಹ ಬಳಗ ಶಿರಸಿ ಎಂಬ ತಂಡವನ್ನು ಸ್ಥಾಪಿಸಿ ಪ್ರದರ್ಶನಗಳನ್ನು ನೀಡಿದ್ದರು. ಮಂಟಪ ಶ್ರೀ ಪ್ರಭಾಕರ ಉಪಾಧ್ಯಾಯರ ಜತೆ ಒಂದು ಘಂಟೆ ಅವಧಿಯ ಯುಗಳ ಯಕ್ಷಗಾನ ಪ್ರದರ್ಶನಗಳಲ್ಲೂ ಅಭಿನಯಿಸಿದ್ದರು. ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದ ಕೈಕೇಯಿ-ಮಂಥರೆ ಸಂಭಾಷಣೆಯ ಈ ಪ್ರದರ್ಶನವು ಅರುವತ್ತಕ್ಕಿಂತಲೂ ಅಧಿಕ ಪ್ರಯೋಗಗಳನ್ನು ಕಂಡಿತ್ತು.

1999ರಲ್ಲಿ ಸಾವಿತ್ರಿ ಅವರು ಚಪ್ಪರಮನೆ ಹಾಸ್ಯಗಾರರ ಬಾಳ ಸಂಗಾತಿಯಾಗಿ ಮನೆಯನ್ನು ತುಂಬಿದ್ದರು.  ಕಲಾಬದುಕಿಗೆ ಮನೆಯಾಕೆಯ ತುಂಬು ಸಹಕಾರವಿದೆಯೆಂಬ ಸಂತೋಷ ಚಪ್ಪರಮನೆ ಹಾಸ್ಯಗಾರರಿಗಿದೆ. ಅನೇಕ ಸಂಘ-ಸಂಸ್ಥೆಗಳು ಇವರ ಕಲಾಸೇವೆಯನ್ನು ಗುರುತಿಸಿ ಗೌರವಿಸಿದೆ. ಮೇಳದ ತಿರುಗಾಟವನ್ನು ನಿಲ್ಲಿಸಿದರೂ ಬದುಕಿಗೆ ಯಕ್ಷಗಾನವನ್ನೇ ಅವಲಂಬಿಸಿದ್ದಾರೆ. ತಾಳಮದ್ದಳೆ ಕ್ಷೇತ್ರದತ್ತ ಆಕರ್ಷಿತರಾಗಿ ಭಾಗವಹಿಸುತ್ತಿದ್ದಾರೆ. ಭಾವನಾತ್ಮಕ, ಸಾತ್ವಿಕ, ಪುರುಷ ಪಾತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ. ಸಂಜಯ, ವಿದುರ, ಹಂಸಧ್ವಜ, ಧರ್ಮರಾಯ, ಅಕ್ರೂರ, ಭೀಷ್ಮ ಪರ್ವದ ಕೌರವ ಮೊದಲಾದ ವೇಷಗಳನ್ನು ಮಾಡಿ ಕಲಾಭಿಮಾನಿಗಳಿಂದ ಹೊಗಳಿಸಿಕೊಂಡಿದ್ದಾರೆ. 

ಅಶೋಕ್ ಭಟ್ ಸಿದ್ಧಾಪುರ, ಲೇಖಕ ರವಿಶಂಕರ್ ವಳಕ್ಕುಂಜ, ಚಪ್ಪರಮನೆ ಶ್ರೀಧರ ಹೆಗಡೆ 

ಚಪ್ಪರಮನೆ ಶ್ರೀಧರ ಹೆಗಡೆ, ಸಾವಿತ್ರಿ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀಪಾದ ಪಶುವೈದ್ಯಕೀಯ ಕಲಿಯುತ್ತಿದ್ದಾರೆ. ಹಾಡುವ ಆಸಕ್ತಿಯಿದ್ದು ಸಂಗೀತ ಜೂನಿಯರ್ ಕಲಿತಿದ್ದಾರೆ. ದೇಶಮಟ್ಟದ ಚಿತ್ರಕಲೆಯಲ್ಲಿ ಕಾಲೇಜು ವತಿಯಿಂದ ಭಾಗವಹಿಸಿ ಮೂರನೆಯ ಸ್ಥಾನವನ್ನು ಪಡೆದಿದ್ದು, ಯಕ್ಷಗಾನ ವೇಷ ಮಾಡಿಯೂ ಅನುಭವವಿದೆ. ಕಿರಿಯ ಪುತ್ರ ಚಿ| ಸಂದೇಶ ಪ್ರಥಮ ಪಿಯುಸಿ ವಿದ್ಯಾರ್ಥಿ. ಆಟ ಕೂಟಗಳಲ್ಲಿ ಭಾಗವಹಿಸುತ್ತಿದ್ದು ತಬಲಾ ಜೂನಿಯರ್ ಪೂರೈಸಿ, ಸೀನಿಯರ್ ಅಭ್ಯಸಿಸುತ್ತಿದ್ದಾರೆ. ಬಡಗು ತಿಟ್ಟಿನ ಬಹು ಬೇಡಿಕೆಯ ಹಾಸ್ಯಗಾರರಾದ ಚಪ್ಪರಮನೆ ಶ್ರೀಧರ ಹೆಗಡೆಯವರಿಂದ ಕಲಾಮಾತೆಯ ಸೇವೆಯು ನಿರಂತರವಾಗಿ ನಡೆಯಲಿ. ಕಲಾಭಿಮಾನಿಗಳ ಪರವಾಗಿ ಶುಭ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments