‘ಸವೆಯದ ದಾರಿ’ ಎಂಬ ಈ ಕೃತಿಯು ಜನಪ್ರಿಯ ವೈದ್ಯ, ಸಾಹಿತಿ, ಲೇಖಕ, ತಾಳಮದ್ದಳೆ ಅರ್ಥಧಾರಿ, ಡಾ. ರಮಾನಂದ ಬನಾರಿಯವರ ಆತ್ಮವೃತ್ತಾಂತವು. ಇದು ಪ್ರಕಟವಾಗಿ ಕೈ ಸೇರಿದ್ದು 2017ರಲ್ಲಿ. ಮಂಜೇಶ್ವರದಲ್ಲಿ ಖ್ಯಾತ ವೈದ್ಯರಾಗಿರುವ ಡಾ. ರಮಾನಂದ ಬನಾರಿಯವರು ಯಕ್ಷ ಗುರುಕುಲದ ರೂವಾರಿ, ಪ್ರಸಂಗಕರ್ತ, ಖ್ಯಾತ ಕಲಾವಿದರಾದ ದಿ| ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಸುಪುತ್ರರು. 1940ರಲ್ಲಿ ಕೀರಿಕ್ಕಾಡಿನಲ್ಲಿ ಜನನ. ಕಲ್ಲಿಕೋಟೆ ವಿಶ್ವವಿದ್ಯಾನಿಲಯದಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಪೂರೈಸಿ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದ್ದರು. ಕೀರಿಕ್ಕಾಡು ಮನೆಯವರು ಎಂದ ಬಳಿಕ ಸಾಹಿತ್ಯಾಸಕ್ತರು, ಕಲಾಸಕ್ತರು ಎಂದು ಬೇರೆ ಹೇಳಬೇಕಾದುದಿಲ್ಲ. ಸಮಾಜಸೇವೆಯೊಂದಿಗೆ ಲೇಖಕರಾಗಿ, ಕನ್ನಡ ಸಾಹಿತ್ಯ ಸೇವೆಯನ್ನೂ ತಾಳಮದ್ದಳೆ ಅರ್ಥಧಾರಿಯಾಗಿ ಕಲಾಮಾತೆಯ ಸೇವೆಯನ್ನೂ ಮಾಡುತ್ತಾ ಬರುತ್ತಿದ್ದಾರೆ.
ಬನಾರಿಯಲ್ಲಿ ಕೀರಿಕ್ಕಾಡು ಮಾಸ್ತರರಿಂದ ಸ್ಥಾಪಿಸಲ್ಪಟ್ಟ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ ಕಲಾ ಚಟುವಟಿಕೆಗಳಲ್ಲಿ ಶ್ರೀಯುತರು ಸಕ್ರಿಯರು. ಅಣ್ಣ ಶ್ರೀ ವನಮಾಲಾ ಕೇಶವ ಭಟ್ಟರ ಜತೆಗೂಡಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿರುತ್ತಾರೆ. ಡಾ. ರಮಾನಂದ ಬನಾರಿ ಅವರ ಆತ್ಮವೃತ್ತಾಂತ ‘ಸವೆಯದ ದಾರಿ’ ಇದರ ಪ್ರಕಾಶಕರು ತಾರಾ ಪ್ರಿಂಟರ್ಸ್ ಮೈಸೂರು. ತಮ್ಮ ಬದುಕಿಗೆ ಪೋಷಕಾಂಶಗಳನ್ನಿತ್ತು ಪ್ರೋತ್ಸಾಹಿಸಿದ ವ್ಯಕ್ತ ಮತ್ತು ಅವ್ಯಕ್ತ ಹೆಸರುಗಳಿಗೆ ಈ ಪುಸ್ತಕವನ್ನು ಡಾ. ರಮಾನಂದ ಬನಾರಿ ಅವರು ಅರ್ಪಿಸಿರುತ್ತಾರೆ. ಮೊದಲಿಗೆ ಎಡನೀರು ಮಠಾಧೀಶರ ಶುಭ ನುಡಿಗಳನ್ನು ನೀಡಲಾಗಿದೆ. ನಾಡೋಜ ಪ್ರೊ| ಹಂಪ ನಾಗರಾಜಯ್ಯ ಅವರು ‘ಸುಶೋಭಿತ ಆತ್ಮಕಥನ’ಎಂಬ ಶೀರ್ಷಿಕೆಯಡಿ ಮುನ್ನುಡಿ ಲೇಖನವನ್ನು ಬರೆದಿರುತ್ತಾರೆ. ಡಾ. ರಮಾನಂದ ಬನಾರಿ ಅವರು ‘ನನ್ನ ನುಡಿ’ ಎಂಬ ಬರಹದಲ್ಲಿ ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ.
ಈ ಆತ್ಮವೃತ್ತಾಂತದಲ್ಲಿ ಮೊದಲ ಪರ್ವ, ಕುಟುಂಬ ಪರ್ವ, ಸಾಹಿತ್ಯ ಪರ್ವ, ಕಲಾ ಪರ್ವ, ಸಂಕೀರ್ಣ ಪರ್ವ ಎಂಬ ಐದು ವಿಭಾಗಗಳಿವೆ. ಬಳಿಕ ಅನುಬಂಧ ಎಂಬ ವಿಭಾಗವಿದ್ದು, ಅದರಲ್ಲಿ ಡಾ. ರಮಾನಂದ ಬನಾರಿ ಅವರ ಬದುಕು-ಬರಹದ ಬಗೆಗೆ ತಿಳಿಸಲಾಗಿದೆ. ಅಲ್ಲದೆ ಶ್ರೀ ಟಿ. ಎ. ಎನ್. ಖಂಡಿಗೆ ಅವರು ಬರೆದ ‘ತಿಳಿ ನೀರಿನಲ್ಲಿ ತೇಲಿ ಬಂದ ಬನಾರಿ ನಾವೆ’ ಎಂಬ ಲೇಖನವನ್ನೂ ನೀಡಲಾಗಿದೆ. ಸುಮಾರು ನಲುವತ್ತರಷ್ಟು ಛಾಯಾಚಿತ್ರಗಳನ್ನೂ ಈ ಹೊತ್ತಗೆಯಲ್ಲಿ ನೀಡಲಾಗಿದೆ. ಪುಸ್ತಕದ ಹೊರ ಆವರಣದಲ್ಲಿ ಡಾ. ರಮಾನಂದ ಬನಾರಿಯವರ ಆತ್ಮೀಯರಾದ ವಿದ್ವಾಂಸರೂ ವಿಮರ್ಶಕರೂ ಆದ ಡಾ. ಬಿ. ಎ. ವಿವೇಕ ರೈ ಅವರ ಲೇಖನವನ್ನೂ ನೀಡಲಾಗಿದೆ. ಡಾ. ರಮಾನಂದ ಬನಾರಿ ಅವರಿಗೆ, ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಎಂಬ ಸಂಸ್ಥೆಗೆ ಶುಭಾಶಯಗಳು. ಸಾಹಿತ್ಯ, ಕಲಾ ಸೇವೆಗಳು ನಿರಂತರವಾಗಿ ನಡೆಯುತ್ತಿರಲಿ ಎಂಬ ಹಾರೈಕೆಗಳು.
ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ