Friday, September 20, 2024
Homeಯಕ್ಷಗಾನಯಕ್ಷರಂಗ ಕಂಡ ವಿಸ್ಮಯ - ಎಂಪೆಕಟ್ಟೆ ರಾಮಯ್ಯ ರೈ (Empekatte Ramayya Rai)

ಯಕ್ಷರಂಗ ಕಂಡ ವಿಸ್ಮಯ – ಎಂಪೆಕಟ್ಟೆ ರಾಮಯ್ಯ ರೈ (Empekatte Ramayya Rai)

ಯಾವುದೇ ಕಲಾಪ್ರಾಕಾರಗಳೇ ಇರಲಿ ಅಥವಾ ಒಂದು ಒಲಿಂಪಿಕ್ಸ್, ವಿಶ್ವಕಪ್ ಗಳಂತಹಾ ಆಟಗಳೇ ಇರಲಿ, ಅಥವಾ ಸಂಶೋಧನೆ, ಯುದ್ಧಗಳೇ ಇರಲಿ ಎಲ್ಲರೂ ಒಂದು ತಂಡವಾಗಿ (Team Work) ಕೆಲಸ ಮಾಡಿದಾಗ ಮಾತ್ರ ಅಲ್ಲಿ ಯಶಸ್ಸು ಬೇಗನೆ ಸಿಗಲು ಸಾಧ್ಯ.

ತನ್ನ ಸಾಮರ್ಥ್ಯವನ್ನು ಪ್ರಕಟಪಡಿಸುವುದರ ಜೊತೆಗೆ ಇನ್ನೊಬ್ಬರನ್ನು ಯಶಸ್ಸಿನತ್ತ ಪ್ರೇರೇಪಿಸುವ ಒಳ್ಳೆಯತನವೇ ಮುಖ್ಯವಾಗಿ ಗುರುತಿಸಲ್ಪಡುವ ವಿಚಾರ. ತಾನು ಸೋತು ಒಟ್ಟು ಸನ್ನಿವೇಶವನ್ನು ಗೆಲ್ಲಿಸುವ ಕೆಲವು ವ್ಯಕ್ತಿತ್ವಗಳನ್ನಾದರೂ ನಾವು ಗಮನಿಸಬಹುದು. ಅಂತಹವರಲ್ಲಿ ಯಕ್ಷಗಾನದ ವಿಶಿಷ್ಟ ಶೈಲಿಯ ಕಲಾವಿದ ಎಂಪೆಕಟ್ಟೆ ರಾಮಯ್ಯ ರೈಗಳು ಒಬ್ಬರು.  ಎಂಪೆಕಟ್ಟೆ ರಾಮಯ್ಯ ರೈಗಳು ನಮಗೆ ಇಷ್ಟವಾಗುವುದು ಇದೇ ಕಾರಣಕ್ಕೆ.

ಇಂದಿನ ಕಲಾವಿದರು ಎಂಪೆಕಟ್ಟೆಯವರ ಈ ಆದರ್ಶಗಳನ್ನು ಗೌರವಿಸಬೇಕಾದ ಹಾಗೂ ಅನುಸರಿಸಬೇಕಾದ ಅವಶ್ಯಕತೆ ತುಂಬಾ ಇದೆ. ಎಂಪೆಕಟ್ಟೆ ರಾಮಯ್ಯ ರೈಗಳು ಇಂದು ನಮ್ಮೊಡನಿಲ್ಲದಿದ್ದರೂ ಕಲಾವಿದನಾಗಿ ಅವರು ಏರಿದ ಎತ್ತರ ಮತ್ತು ರಂಗದಲ್ಲಿ ಅವರ ಪ್ರದರ್ಶನ ಎಂದಿಗೂ ಮೌಲ್ಯಯುತವಾಗಿರುತ್ತದೆ ಹಾಗೂ ಗೌರವಿಸಲ್ಪಡುತ್ತದೆ.

ಯಕ್ಷಗಾನದ ಇತಿಹಾಸ, ಆಗುಹೋಗುಗಳ ಬಗ್ಗೆ ಮಾತಾಡುವಾಗ, ನಡುವೆ ಇವರ ಹೆಸರೊಂದು ಉಲ್ಲೇಖಿಸದಿದ್ದರೆ ಆ ಮಾತುಕತೆಗಳು ಅರ್ಥ ಕಳೆದುಕೊಳ್ಳುತ್ತವೆ. ಶೇಣಿ, ಸಾಮಗರಾದಿಯಾಗಿ ಹಲವಾರು ಕಲಾಕೋವಿದರ ಪಾಂಡಿತ್ಯಪೂರ್ಣ ಮಾತುಗಾರಿಕೆ ಹಾಗೂ ಧಿಗಿಣಗಳಿಂದೊಡಗೂಡಿದ ಮತ್ತು ಅಪೂರ್ವ ನೃತ್ಯಕೌಶಲದ ಕಲಾವಿದರ ಪಾಂಡಿತ್ಯ ಪ್ರದರ್ಶನ.  ಇವರೆಲ್ಲರ ನಡುವೆ ಎಂಪೆಕಟ್ಟೆಯವರದು ಪ್ರತ್ಯೇಕವಾಗಿ ನಿಲ್ಲುವ ಪ್ರದರ್ಶನ . 

ಕಲಾಜಗತ್ತಿನಲ್ಲಿ  ಮುಂದಿನ ಪೀಳಿಗೆಯವರು ನೆನಪಿನಲ್ಲಿಡುವಂತೆ ಯಕ್ಷಗಾನ ಲೋಕದಲ್ಲಿ ತನ್ನತನದ ಬೀಜವನ್ನು ಬಿತ್ತಿದರು.   ದೇವೇಂದ್ರ’’ನ ಪಾತ್ರದಲ್ಲಿ ಎಂಪೆಕಟ್ಟೆಯವರಷ್ಟು ಪ್ರಭಾವಶಾಲಿಯಾಗಿ ನಿರ್ವಹಿಸುವವರು ಮತ್ತೊಬ್ಬರಿಲ್ಲ. ಸಮುದ್ರಮಥನದ ದೇವೇಂದ್ರ ಎಂಪೆಕಟ್ಟೆ ರಾಮಯ್ಯ ರೈಗಳಿಗೆ ಹೆಸರು ತಂದುಕೊಟ್ಟ ಪಾತ್ರ. ಅದು ಅವರ ಮಾಸ್ಟರ್ ಪೀಸ್. ಅದರಂತೆಯೇ ತ್ರಿಪುರ ಮಥನದ ದೇವೇಂದ್ರ ಕೂಡಾ. ಒಡ್ಡೋಲಗದ ದೇವೇಂದ್ರನ ಪಾತ್ರವನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸುವುದರಲ್ಲಿ ಎಂಪೆಕಟ್ಟೆಯವರದು ಎತ್ತಿದ ಕೈ.

ಎಂಪೆಕಟ್ಟೆಯವರು ಒಮ್ಮೆ ಮಾಡಿದ ಪಾತ್ರವನ್ನು ನೋಡಿದ ಪ್ರೇಕ್ಷಕರಿಗೆ ಅದೇ ಪಾತ್ರವನ್ನು ಬೇರೆ ಕಲಾವಿದರು ಮಾಡಿದಾಗ ಅಷ್ಟು ಪರಿಣಾಮಕಾರಿ ಎಂದೆನಿಸುತ್ತಿರಲಿಲ್ಲ. ಆದುದರಿಂದ ಆ ಕಾಲದಲ್ಲಿ ಅವರ ಅನುಪಸ್ಥಿತಿಯಲ್ಲಿ ಅವರು ನಿರ್ವಹಿಸಿದ ಪಾತ್ರವನ್ನು ಮಾಡುವುದು ಬೇರೆಯವರಿಗೆ ದೊಡ್ಡ ಸವಾಲೇ ಆಗಿತ್ತು. 

ಎಂಪೆಕಟ್ಟೆಯವರ ಮಾತುಗಾರಿಕೆ ಕೆಲವರಿಗೆ ಪಾತ್ರದ ಮತ್ತು ಸಂದರ್ಭದ ಔಚಿತ್ಯವನ್ನು ಮೀರಿದಂತೆ ಎಂದು ಅನಿಸಿದರೂ ಕೆಲವೊಮ್ಮೆ ಮಾತಿನ ಮಲ್ಲರ ನಡುವಿನ ಬಿಗು ಸನ್ನಿವೇಶದಲ್ಲಿ ಅವರ ವಿತಂಡ ವಾದವು ಪರಿಸ್ಥಿತಿಯನ್ನು ತಿಳಿಗೊಳಿಸಲು ಸಹಾಯಕವಾಗುತ್ತಿತ್ತು. ಶೇಣಿ, ಸಾಮಗ, ಸುಂದರ ರಾಯರೇ ಮೊದಲಾದವರು ರೈಗಳ ಮಾತಿಗೆ ನಕ್ಕು ಸುಮ್ಮನಾಗುತ್ತಾರೆ. ಎಂಪೆಕಟ್ಟೆ ಏರು ಪದ್ಯದ ಕುಣಿತದ ಶೈಲಿ ಬಹಳ ಆಕರ್ಷಕ. ಅಂತಹ ಆಕರ್ಷಕ ಶೈಲಿ ಈಗಿನ ಯಕ್ಷಗಾನದಲ್ಲಿ ಮಾಯವಾಗಿರುವುದು ಕಂಡುಬರುತ್ತದೆ.

ಆ ಶೈಲಿಯನ್ನು ಎಂಪೆಕಟ್ಟೆಯವರೇ ಹುಟ್ಟು ಹಾಕಿದರು ಎಂಬುದು ಈ ಮಾತಿನ ಅರ್ಥವಲ್ಲ. ವೀರ ರಸದ ಪದ್ಯಗಳಿಗೆ ಮೂರು ಕುತ್ತುಗಳನ್ನು ಹಾರಿ ಮತ್ತೆ ಒಂದು ಸುತ್ತು ಬರಲು ತೊಡಗುವ ಮುನ್ನ ಒಮ್ಮೆ ಕೆಳಗೆ ನೋಡಿ ಮುಖವನ್ನು ಮೇಲೆತ್ತುವ ಆ ಶೈಲಿ ಅಪೂರ್ವವೂ ಅನನ್ಯವೂ ಆಗಿತ್ತು. ಈಗಿನ ಕಲಾವಿದರು ಯಾಕೆ ಇಂತಹಾ ಶೈಲಿಗಳನ್ನು ತಮ್ಮ ನಾಟ್ಯದಲ್ಲಿ ಅಳವಡಿಸಿಕೊಳ್ಳುವುದಿಲ್ಲ ಎಂದು ಆಶ್ಚರ್ಯವಾಗುತ್ತದೆ. ದಡ ಬಡ ಹಾರಿ ದೇಹವನ್ನು ದಂಡಿಸಿಕೊಳ್ಳುವ ಬದಲು ನಿರಾಯಾಸವಾಗಿ ಆಕರ್ಷಕ ಶೈಲಿಯಿಂದ ನೃತ್ಯವನ್ನು ಪ್ರಸ್ತುತಪಡಿಸುವ ಕಲೆ ಅವರಿಗೆ ಕರಗತವಾಗಿತ್ತು.

ವೈಯುಕ್ತಿಕ ವಿಚಾರಗಳನ್ನು ಎಂದೂ ರಂಗದಲ್ಲಿ ಪ್ರತಿಫಲಿಸದೆ ತಾನು ಸೋತು ಸಹಪಾತ್ರಧಾರಿಗಳನ್ನು ಗೆಲ್ಲಿಸಿದ ಮಹಾನುಭಾವ ಅವರು. ಖಳ ಪಾತ್ರಗಳಲ್ಲಿ ಮಾತ್ರವಲ್ಲದೆ ಅರ್ಜುನ, ಅತಿಕಾಯನಂತಹಾ ಸಾತ್ವಿಕ ಪಾತ್ರಗಳಲ್ಲೂ ಮಿಂಚಿದ ಎಂಪೆಕಟ್ಟೆ ರಾಮಯ್ಯ ರೈಗಳು  ಮಹಾಕಲಿ ಮಗಧೇಂದ್ರದಲ್ಲಿ ಮಾಗಧ, ಸಮುದ್ರಮಥನದ ಮತ್ತು ತ್ರಿಪುರಮಥನದ ದೇವೇಂದ್ರ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ವ್ಯಾಪಾರಿ ಶೆಟ್ಟಿ ಮತ್ತು ಕುಟ್ಟಿಮೂಸೆ, ಗದಾಯುದ್ಧದ ಭೀಮ, ದೇವಿ ಮಹಾತ್ಮೆಯಲ್ಲಿ ಮಧು, ಕೈಟಭ, ‘ಶಬರಿಮಲೆ ಅಯ್ಯಪ್ಪ’ದಲ್ಲಿ ವಾವರ, ವಂಶವಾಹಿನಿಯ ಯುಧಾಜಿತು, ಇಂದ್ರಜಿತು, ಅರ್ಜುನ, ಅತಿಕಾಯ, ಹಿರಣ್ಯಾಕ್ಷ, ಮೊದಲಾದುವು ಅವರ ಇಷ್ಟದ ಪಾತ್ರಗಳು.

ಖ್ಯಾತ ಹಾಸ್ಯ ಕಲಾವಿದ ನಯನ ಕುಮಾರ್ ಮತ್ತು ಎಂಪೆಕಟ್ಟೆಯವರದು ರಂಗದಲ್ಲಿ ಅವಿನಾಭಾವ ಸಂಬಂಧ. ಆ ದಿನಗಳಲ್ಲಿ ಈ ಜೋಡಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿತ್ತು. ‘ಪೌಂಡ್ರಕ ವಾಸುದೇವ’ ಪಾತ್ರವಹಿಸಿ ‘ಅಜಯ’ನಾಗಿ ಪಾತ್ರವಹಿಸಿದ ನಯನ ಕುಮಾರರ ಜೊತೆ ಹಾಸ್ಯದ ಹೊನಲನ್ನೇ ಹರಿಸುವ ಸನ್ನಿವೇಶ, ಕೃಷ್ಣನ ಪಾತ್ರವಹಿಸುವ ಕುಂಬಳೆ ಸುಂದರ ರಾವ್ ಜೊತೆಗಿನ ವಾಗ್ವಾದ ಇವೆಲ್ಲಾ ರಮಣೀಯವೂ ಮನರಂಜನೀಯವೂ ಆದ ಸನ್ನಿವೇಶಗಳು.

ಚಂದ್ರಾವಳಿ ವಿಲಾಸ ಚಂದಗೋಪ, ‘ಮಹಾರಥಿ ಕರ್ಣ’ ಪ್ರಸಂಗದ ಕರ್ಣನಿಗೆ ಶಾಪಗೈಯುವ ಪರಶುರಾಮ ಪಾತ್ರಗಳೂ ಇವರಿಗೆ ಹೆಸರು ತಂದು ಕೊಟ್ಟ ಪಾತ್ರಗಳು.  ಏರುಪದ್ಯದಲ್ಲಿ ಎದೆಯ ಮೇಲೆ ಕೈಯಿಟ್ಟು ಸುತ್ತುಬರುವ ವಿಧಾನ, ನಾಟ್ಯಶೈಲಿ, ಕಣ್ಣನ್ನು ತಿರುಗಿಸುವ ರೀತಿ, ಗದೆಯನ್ನೊಮ್ಮೆ ಮೇಲೆತ್ತಿ ತಿರುಗಿಸುವ ಪರಿ, ಕುತ್ತು ಹಾರಿದ ನಂತರ ಒಮ್ಮೆ ಕೆಳಮುಖವಾಗಿ ನೋಡಿ ಮುಖ ಮೇಲೆತ್ತುವ ಶೈಲಿ ಇವುಗಳೆಲ್ಲಾ ಎಂಪೆಕಟ್ಟೆಯವರ ಮಾಸ್ಟರ್ ಪೀಸ್ ಗಳು.

ಖಳ ಪಾತ್ರಗಳಷ್ಟೇ ಅಲ್ಲದೆ ಪ್ರಣಯ ದೃಶ್ಯಗಳಲ್ಲೂ ಎಂಪೆಕಟ್ಟೆಯವರು ಉತ್ಕೃಷ್ಟವಾದ ಅಭಿನಯವನ್ನು ನೀಡುತ್ತಿದ್ದವರು. ಆ ದಿನಗಳಲ್ಲಿ ಉತ್ತಮ ಜೋಡಿಯೆಂದೇ ಗುರುತಿಸಲ್ಪಿಟ್ಟಿದ್ದ ಎಂಪೆಕಟ್ಟೆ-ನಯನಕುಮಾರ್ ಜೋಡಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿತ್ತು. ಆದರೆ ಈಗ ಇಬ್ಬರೂ ಇಲ್ಲ. ಜನರು ಇಬ್ಬರ ಮೇಲೆ ಇನ್ನಷ್ಟು ನಿರೀಕ್ಷೆಗಳನ್ನು ಇರಿಸಿದ್ದರೂ ಎಲ್ಲರ ನಂಬಿಕೆಗಳನ್ನೂ ಹುಸಿಗೊಳಿಸಿ ಇಬ್ಬರೂ ಮರೆಯಾದದ್ದು ವಿಪರ್ಯಾಸವೆಂದೇ ಹೇಳಬೇಕು. 


ಲೇಖನ : ಮನಮೋಹನ್ ವಿ. ಎಸ್.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments