Saturday, January 18, 2025
Homeಯಕ್ಷಗಾನಲಕ್ಷ್ಮೀಶ ಅಮ್ಮಣ್ಣಾಯ - ಮದ್ದಳೆಯ ‘ಶುದ್ಧಹಸ್ತ’ (Lakshmisha Ammannaya)

ಲಕ್ಷ್ಮೀಶ ಅಮ್ಮಣ್ಣಾಯ – ಮದ್ದಳೆಯ ‘ಶುದ್ಧಹಸ್ತ’ (Lakshmisha Ammannaya)

ಮಾತಿಗೆ ಕುಳಿತರೆ ಬಹಳಷ್ಟೂ ಮಾತನಾಡುವ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರು ಮದ್ದಳೆಯ ನುಡಿತದಲ್ಲೂ  ನಿಪುಣರು. ತಾನು ಸ್ವತಃ  ಪ್ರಚಾರಪ್ರಿಯರಲ್ಲ. ತಮ್ಮ ಬಗ್ಗೆ ತಾವೇ ಹೇಳಿಕೊಳ್ಳುವುದಿಲ್ಲ. ಆದರೆ ಅವರ ಮದ್ದಳೆಯ ನುಡಿತ ಅವರ ಬಗ್ಗೆ ಎಲ್ಲವನ್ನೂ ನಮಗೆ ತಿಳಿಸಿಕೊಡುತ್ತದೆ. ಕೆಲವೊಮ್ಮೆ ಜನಪ್ರಿಯತೆ ಮತ್ತು ಶ್ರೇಷ್ಠತೆಗಳು ಪರಸ್ಪರ ಸಂಬಂಧವಿರದ ಶಬ್ದಗಳ ಹಾಗೆ ಗೋಚರಿಸುತ್ತವೆ. ಶ್ರೇಷ್ಠರೆಲ್ಲಾ ಜನಪ್ರಿಯರಲ್ಲ. ಜನಪ್ರಿಯರೆಲ್ಲ ಶ್ರೇಷ್ಠರಾಗಿಯೂ ಇಲ್ಲ. ಅಮ್ಮಣ್ಣಾಯರು ತಮ್ಮ  ಕಲಾಜೀವನದಲ್ಲಿ 22 ವರ್ಷಗಳನ್ನು ಮೇಳದ ತಿರುಗಾಟಗಳಲ್ಲಿಯೂ  ಆಮೇಲೆ ವಿಶೇಷ ಅಭಿಮಾನದಿಂದ ಕರೆದಲ್ಲಿಗೆ ಹವ್ಯಾಸೀ ಕಲಾವಿದನಾಗಿಯೂ  ಭಾಗವಹಿಸಿದ್ದಾರೆ. ಎಡನೀರು ಮೇಳದಲ್ಲಿ ಹೆಚ್ಚಾಗಿ ಅತಿಥಿ ಕಲಾವಿದನಾಗಿ ಭಾಗವಹಿಸಿದ್ದಾರೆ. ಅವರಿಗೆ ಕೃಷಿಭೂಮಿ ಸಾಕಷ್ಟಿದೆ. ಕೃಷಿ ಕೆಲಸಗಳಲ್ಲಿ ಹಾಗೂ ಹವ್ಯಾಸೀ ಕಲಾವಿದನಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಲಕ್ಷ್ಮೀಶ ಅಮ್ಮಣ್ಣಾಯರು ಯಕ್ಷಗಾನದ ಹಿಮ್ಮೇಳ ಕಲಿತ ಕಥೆಯೇ ಆಸಕ್ತಿದಾಯಕ ಮತ್ತು ರೋಚಕವಾಗಿದೆ. ಅವರ  ಮೂಲ ತರವಾಡು ಮನೆಯಲ್ಲಿ ಯಕ್ಷಗಾನದ ವೇಷಭೂಷಣಗಳು ಮತ್ತು  ಯಕ್ಷಗಾನದ ರಂಗಸ್ಥಳದ ಪರಿಕರಗಳಾದ ಪರದೆ, ನಾಟಕದ ಪರದೆ ಮತ್ತು ಹಿಮ್ಮೇಳದ ವಾದನಗಳೆಲ್ಲಾ ಇದ್ದುವು. ಇವರ ತಂದೆಯವರಾದ ವಿಷ್ಣು ಅಮ್ಮಣ್ಣಾಯರು ಉತ್ತಮ ಭಾಗವತ ಮತ್ತು ಅರ್ಥಧಾರಿಯಾಗಿದ್ದರು. ಅವರ ಮನೆಯಲ್ಲಿ  ಪ್ರತಿದಿನವೂ ಸಂಗೀತದ ಸಮಾರಾಧನೆಯೇ ನಡೆಯುತ್ತಿತ್ತಂತೆ.  ಇವರ ದೊಡ್ಡಪ್ಪನ ಮಗ ಪುರುಷೋತ್ತಮ ಅಮ್ಮಣ್ಣಾಯ ಮತ್ತು ಚಿಕ್ಕಪ್ಪನ ಮಗ ದಿನೇಶ ಅಮ್ಮಣ್ಣಾಯ ಹಾಗೂ ಲಕ್ಷ್ಮೀಶ ಅಮ್ಮಣ್ಣಾಯರು ಒಟ್ಟು ಸೇರಿದರೆ ಮತ್ತೆ ಕೇಳುವುದೇ ಬೇಡ. ದಿನಾಲೂ ಯಕ್ಷೋತ್ಸವ.  ಚಿಕ್ಕಂದಿನಲ್ಲಿ  ಲಕ್ಷ್ಮೀಶ ಅಮ್ಮಣ್ಣಾಯರಿಗೆ ಯಕ್ಷಗಾನದ ಆಸಕ್ತಿಯಿರಲಿಲ್ಲ.  ಬ್ಯಾನರ್ ಬರೆಯುವುದೇ ಮೊದಲಾದ ಚಿತ್ರಕಲೆ(painting)ಯಲ್ಲಿ ಅತೀವ ಉತ್ಸಾಹ, ಶ್ರದ್ಧೆಗಳಿದ್ದುವು.  ಸುತ್ತಮುತ್ತಲಿನ ಜನರೆಲ್ಲರೂ ಬ್ಯಾನರ್ ಬರೆಯುವ ಕೆಲಸಗಳನ್ನು ಮಾಡಿಕೊಡಬೇಕೆಂದು ದುಂಬಾಲು ಬೀಳುತ್ತಿದ್ದರು. ಇದರಿಂದಾಗಿ ಯಕ್ಷಗಾನ ಕಲಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು.  ಭಾಗವತಿಕೆ ಕಲಿಸಬೇಕೆಂದು ತಂದೆಯವರ ಇಚ್ಛೆಯಾಗಿತ್ತು. ಆದರೆ ಇವರಿಗೆ ಪದ್ಯ ಹೇಳಲು ಬರಲಿಲ್ಲ.  ಸಹೋದರ ಸಂಬಂಧಿ ದಿನೇಶ ಅಮ್ಮಣ್ಣಾಯರು ಕಲಿತು ಪರಿಣತಿಯನ್ನೂ ಸಾಧಿಸಿದರು.  ಆ ನಂತರ ಅಮ್ಮಣ್ಣಾಯರ ತಂದೆಯವರು ಭಾಗವತಿಕೆ ಕಲಿಸುವ ಸಾಹಸವನ್ನು ಕೈಬಿಟ್ಟು ಚೆಂಡೆ-ಮದ್ದಳೆ ಕಲಿಸಲು ಆರಂಭಿಸಿದರು.  15 ದಿನಗಳ ಅವಧಿಯ ಕ್ಲಾಸು ಮಾಡಿದರೂ ಅಷ್ಟಾಗಿ ಬಾರಿಸಲು ಬರಲೇ ಇಲ್ಲ. ವಿಷ್ಣು ಅಮ್ಮಣ್ಣಾಯರು ಮಗನ ಮೇಲಿನ ಕೋಪದಿಂದ  ಚೆಂಡೆ-ಮದ್ದಳೆಯನ್ನು ಅಟ್ಟಕ್ಕೆ ಹಾಕಿದರು. ಕಾರಣವಿಷ್ಟೇ.  ಲಕ್ಷ್ಮೀಶ ಅಮ್ಮಣ್ಣಾಯರ  ದೊಡ್ಡ ಅಣ್ಣ ಮೋಹನ್ ಅಮ್ಮಣ್ಣಾಯ ಮೃದಂಗ ವಿದ್ವಾನ್ ಇನ್ನೊಬ್ಬ ರಘುರಾಮ ಅಮ್ಮಣ್ಣಾಯ ವಯೋಲಿನ್, ವೋಕಲ್ ವಿದ್ವಾನ್. ಇವನಿಗೆ ಮಾತ್ರ  ಸಂಗೀತ ಸಿದ್ಧಿಸುವುದಿಲ್ಲವೋ ಎಂಬ ಆತಂಕದಿಂದ ಅವರು ಹಾಗೆ ಮಾಡಿದ್ದಿರಬಹುದು. ಆಮೇಲೆ  ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಹಿಮ್ಮೇಳ ತರಗತಿಗೆ ಸೇರಿದರು. ಒಂದು ದಿನ ಲಕ್ಷ್ಮೀಶ ಅಮ್ಮಣ್ಣಾಯರು ಮದ್ದಳೆ ಬಾರಿಸುತ್ತಿದ್ದುದನ್ನು ಧರ್ಮಸ್ಥಳ ಕೇಂದ್ರದಲ್ಲಿ ಗಮನಿಸಿದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಅವರನ್ನು ಧರ್ಮಸ್ಥಳ ಮೇಳಕ್ಕೆ ಸೇರಿಸಿದರು. ಮುಂದಿನದ್ದು ಇತಿಹಾಸ. ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಪ್ರೋತ್ಸಾಹ ಮತ್ತು ಕಲಿಸುವಿಕೆ, ಕಡತೋಕ ಮಂಜುನಾಥ ಭಾಗವತರ ಒಡನಾಟ ಮಾರ್ಗದರ್ಶನಗಳಿಂದ ಲಕ್ಷ್ಮೀಶ ಅಮ್ಮಣ್ಣಾಯರು ಬಹುಬೇಗ ಪ್ರಸಿದ್ಧಿಯ ಪಥದತ್ತ ಮುನ್ನಡೆದರು.  ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು  ಮೇಳಕ್ಕೆ ಸೇರಿದ ಎರಡನೇ ವರ್ಷದಲ್ಲೇ ಪೀಠಿಕೆ ಬಾರಿಸಲು ಅವಕಾಶ ನೀಡಿದರು. ಲಕ್ಷ್ಮೀಶ ಅಮ್ಮಣ್ಣಾಯರು ಚೆಂಡೆ ಬಾರಿಸುವ ಸಂದರ್ಭಗಳಲ್ಲೆಲ್ಲಾ ಸ್ವತಃ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಮದ್ದಳೆ ಬಾರಿಸಲು ಕುಳಿತು ಹುರಿದುಂಬಿಸುತ್ತಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಬಲ್ಪದಲ್ಲಿದ್ದ ಅವರ ಜಾಗ ಮಾರಾಟವಾಗುವ ಸಂದರ್ಭದಲ್ಲಿ  ಕೃಷಿಯನ್ನು ನೋಡಿಕೊಳ್ಳಬೇಕಾದ ಕಾರಣದಿಂದ ಲಕ್ಷ್ಮೀಶ ಅಮ್ಮಣ್ಣಾಯರು ಧರ್ಮಸ್ಥಳ ಮೇಳವನ್ನು ಬಿಡಬೇಕಾಗಿ ಬಂತು. ಆದರೂ ಆಮೇಲೆ ವಿವಿಧ ಮೇಳಗಳಲ್ಲಿ ತಿರುಗಾಟ ಮಾಡಿದ್ದರು. 

1958ರಲ್ಲಿ ಸುಳ್ಯ ತಾಲೂಕಿನ ಪಂಜದ ಸಮೀಪ ಬಲ್ಪ ಗ್ರಾಮದ ಮೂಡ್ನೂರು ಮನೆಯಲ್ಲಿ ಹುಟ್ಟಿದ  ಲಕ್ಷ್ಮೀಶ ಅಮ್ಮಣ್ಣಾಯರು ಮದ್ದಳೆಗಾರನಾಗಿ ಧರ್ಮಸ್ಥಳ ಮೇಳದಲ್ಲಿ 4 ವರ್ಷಗಳು, ಮಂಗಳಾದೇವಿ ಮತ್ತು ಬಪ್ಪನಾಡು ಮೇಳಗಳಲ್ಲಿ ತಲಾ 2 ವರ್ಷಗಳು, ಪುತ್ತೂರು, ಅರುವ, ಕರ್ನಾಟಕ ಮೇಳಗಳಲ್ಲಿ ತಲಾ 1 ವರ್ಷ, ಕುಂಬ್ಳೆ ಮೇಳದಲ್ಲಿ 4 ವರ್ಷ, ಕದ್ರಿ ಮೇಳದಲ್ಲಿ ಸುಮಾರು 7 ವರ್ಷಗಳ ಕಾಲ ತಿರುಗಾಟ ನಡೆಸಿದ್ದಾರೆ. ಯಕ್ಷಗಾನದಲ್ಲಿ ಗುರುಗಳು ಶ್ರೀ ಮುಂಡ್ರುಪ್ಪಾಡಿ ಶ್ರೀಧರ ರಾವ್ ಮತ್ತು ತಂದೆಯವರಾದ ಶ್ರೀ ವಿಷ್ಣು ಅಮ್ಮಣ್ಣಾಯರು. ಲಕ್ಷ್ಮೀಶ ಅಮ್ಮಣ್ಣಾಯರ ತಂದೆ  ಶ್ರೀ ವಿಷ್ಣು ಅಮ್ಮಣ್ಣಾಯ ತಾಯಿ  ಶ್ರೀಮತಿ ಲಕ್ಷ್ಮೀ, ಪತ್ನಿ ಶ್ರೀಮತಿ ಗೀತಾ ಎಲ್. ಅಮ್ಮಣ್ಣಾಯ, ಮಗಳು ವಿಭಾರಾಣಿ(ಬರಹಗಾರ್ತಿ, ಸಾಹಿತಿ), ಅಳಿಯ ಕೃಷ್ಣಪ್ರಕಾಶ ಉಳಿತ್ತಾಯ(ಖ್ಯಾತ ಯುವ ಮದ್ದಳೆಗಾರ, ಕರ್ನಾಟಕ ಬ್ಯಾಂಕ್ ಅಧಿಕಾರಿ, ಸೃಜನಶೀಲ ಸಾಹಿತಿ ), ಮಗ ಗುರುಮೂರ್ತಿ, ಸೊಸೆ  ಅನುಷ್ಕಾ (ಸಂಗೀತ ಪ್ರವೀಣೆ) ಮಗಳು ಶುಭಾರಾಣಿ, ಅಳಿಯ ಕಾರ್ತಿಕೇಯ. 

“ಒಂದು ಕಾಲದಲ್ಲಿ ಮೈಕ್ ವ್ಯವಸ್ಥೆ ಹೇಗಿತ್ತು ಅಂದರೆ, ಇಡೀ ರಂಗಸ್ಥಳದಲ್ಲಿ ಎರಡೇ ಮೈಕ್ ಇತ್ತು. ಒಂದು ಮೈಕ್ ಭಾಗವತರಿಗಿಂತ ಸ್ವಲ್ಪ ದೂರವೇ ಇತ್ತು. ಈಗಿನ ಹಾಗೆ ಭಾಗವತರ ಮುಖದ ಸಮೀಪ ಇರಲಿಲ್ಲ. ಆಗ ಭಾಗವತರ ಪದ್ಯ, ಚೆಂಡೆ, ಮದ್ದಳೆಗಳ ಸಮನ್ವಯವು ನಾದದಲ್ಲಿ ಪ್ರತಿಫಲಿಸಿ ಸುಂದರವಾಗಿ ಮೂಡುತ್ತಿದ್ದುವು. ಯಾವಾಗ ಮೈಕ್ ಭಾಗವತರ ಮುಖದ ಸಮೀಪಕ್ಕೆ ಬಂತೋ ಆಗ ಮದ್ದಳೆಯ ನಾದವೂ ಅನಿವಾರ್ಯವಾಗಿ ಏರಿಕೆಯನ್ನು ಬಯಸಿತು. ಮದ್ದಳೆಗೆ ಮೈಕ್ ಇಡುವುದರಲ್ಲಿ ಒಂದು ನಿಪುಣತೆಯಿದೆ. ಮದ್ದಳೆಯ ಎರಡೂ ಬದಿಗೆ ಮೈಕ್ ಇಡಬೇಕು. ಬಲಕ್ಕೆ ಇಡುವ ಮೈಕ್‍ನ ಶಬ್ದಕ್ಕಿಂತ ಎಡಕ್ಕೆ ಇಡುವ ಮೈಕ್‍ನ Volume ಕಡಿಮೆ ಇಡಬೇಕು. ಸುಮಾರು ಅರ್ಧದಷ್ಟು ಕಡಿಮೆ. ಹಾಗೂ ಮೈಕ್‍ನ್ನು ಮದ್ದಳೆಗಿಂತ ಎಷ್ಟು ದೂರದಲ್ಲಿ ಇಡಬೇಕು ಎಂದು ಮದ್ದಳೆಗಾರನಿಗೆ ತಿಳಿದಿರಬೇಕು. ಈ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳದಿದ್ದರೆ ಮದ್ದಳೆಯ ನಾದವೇ ಅತಿಯಾಗಿ ಕೇಳಿಸಿ ಚೆಂಡೆಯ ತೀವ್ರತೆ ಕಡಿಮೆಯಾದೆಂತೆನಿಸುತ್ತದೆ. ಧ್ವನಿವರ್ಧಕಗಳನ್ನು ಉಪಯೋಗಿಸಲು ಹಿಮ್ಮೇಳದವರಿಗೆ ಗೊತ್ತಿರಬೇಕು. ಇದಕ್ಕೇ ಹೇಳುವುದು ಸಮನ್ವಯತೆ ಬೇಕು ಅಂತ. ಇದನ್ನೆಲ್ಲಾ ನೋಡುವಾಗ ಈ ರೀತಿಯ ವ್ಯವಸ್ಥೆಗಳನ್ನು ನಿರ್ಧರಿಸಲು ಸರಿಯಾದ ಒಬ್ಬ ರಂಗತಂತ್ರಜ್ಞ, ನಿರ್ದೇಶಕ ಬೇಕಾಗುತ್ತದೆ. ಅವರ ಮಾತೇ ಅಂತಿಮವಾಗಿರಬೇಕು”. ಎಂದು ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರು ಹೇಳುತ್ತಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments