ಒಂದು ಪ್ರಸಿದ್ಧ ಭಾಗವತರುಗಳು ಮೇಳೈಸಿದ ಗಾನಸುಧೆಯ ರಸಧಾರೆ. ತೆಂಕುತಿಟ್ಟಿನ ಪ್ರಸಿದ್ಧ ಭಾಗವತರಲ್ಲಿ ಕೆಲವರು ಭಾಗವಹಿಸಿದ್ದ ಅಪೂರ್ವವಾದ ಕಾರ್ಯಕ್ರಮ. ಭಾಗವತರೊಬ್ಬರು ತಮ್ಮ ಸರದಿಯಲ್ಲಿ ದ್ರೌಪದಿ ವಸ್ತ್ರಾಪಹಾರದ “ಕರುಣದಿ ಕಾಯೋ ಗೋವಿಂದಾ…” ಹಾಡಲು ಪ್ರಾರಂಭಿಸಿದರು. ಪ್ರಥಮ ಚರಣದಲ್ಲಿಯೇ ಸಭೆಯನ್ನು ನಿಶ್ಶಬ್ದವಾಗಿಸಿ ಸಭಿಕರೆಲ್ಲರ ಚಿತ್ತವನ್ನು ತನ್ನ ಅತ್ಯದ್ಭುತವಾದ ರಾಗದಾಲಾಪನೆಗಳಿಂದ ತನ್ನ ವಶದಲ್ಲಿರಿಸಿಕೊಳ್ಳುವಲ್ಲಿ ಈ ಮಹಾನ್ ಗಾಯಕರು ಯಶಸ್ವಿಯಾದರು. ಇವರು ಬೇರೆ ಯಾರೂ ಅಲ್ಲ. ತನ್ನ ಸಂಗೀತದ ಅನುಭವಗಳಿಂದ ದಿ| ದಾಮೋದರ ಮಂಡೆಚ್ಚರ ನಂತರ ಯಕ್ಷಗಾನದ ಹಾಡುಗಳ ಪರಂಪರೆಯ ಶೈಲಿಗೆ ಸಂಗೀತದ ಹೊಳಪನ್ನು ಕೊಟ್ಟ ದಿ| ಕುಬಣೂರು ಶ್ರೀಧರ ರಾವ್.
ಕುಬಣೂರರು ಇಂದು ನಮ್ಮೊಡನಿಲ್ಲ ಎಂಬುದು ನಿಜವಾದರೂ ಕೆಲವು ವರ್ಷಗಳ ಹಿಂದೆ ಇವರನ್ನು ಮಾತನಾಡಿಸಬೇಕೆಂದು ಬಹಳಷ್ಟು ಬಾರಿ ಅಂದುಕೊಂಡಿದ್ದೆ. ಆದರೆ ಅವರು ಸದಾ ಬಿಡುವಿಲ್ಲದ ಕಾರ್ಯಕ್ರಮಗಳು, ಅವರೇ ನಡೆಸುತ್ತಿದ್ದ ಮಾಸಪತ್ರಿಕೆಯ ಕೆಲಸ, ಮೇಳದ ಉದ್ಯೋಗಗಳಲ್ಲಿ ವ್ಯಸ್ತರಾಗಿರುತ್ತಿದ್ದುದರಿಂದ ಅವಕಾಶವಾಗಿರಲಿಲ್ಲ. ಆದರೆ ಒಂದು ದಿನ ಮೊದಲೇ ದಿನ ನಿಶ್ಚೈಸಿ ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕಿತು. ಸಣ್ಣದೊಂದು ಸಂದರ್ಶನ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ದಾಗ ಸಂತೋಷದಿಂದ ಒಪ್ಪಿಕೊಂಡಿದ್ದರು.
1956ರಲ್ಲಿ ಜನಿಸಿದ ಕುಬಣೂರು ಶ್ರೀಧರ ರಾವ್ ಮೂಲತಃ ಕೊಡಗು ಜಿಲ್ಲೆಯ ಭಾಗಮಂಡಲದವರು. ಒಂದೂವರೆ ವರ್ಷ ಇರುವಾಗಲೇ ತಾಯಿ ತೀರಿಹೋದ ಕಾರಣ ಕುಬಣೂರಿನ ಮಾವನ ಮನೆಯಲ್ಲಿ ಬೆಳೆಯ ಬೇಕಾಯಿತು. ಆದ ಕಾರಣ ಕುಬಣೂರು ಶ್ರೀಧರ ರಾವ್ ಅಂತ ಹೆಸರು ಬಂತು. ತಂದೆಯ ಹೆಸರು ಶ್ರೀ ಕೃಷ್ಣಯ್ಯ ಹಾಗೂ ತಾಯಿ ಶ್ರೀಮತಿ ರುಕ್ಮಿಣಿ. ಪ್ರಾಥಮಿಕ ವಿದ್ಯಾಭ್ಯಾಸ ಅಂದರೆ 7ನೇ ತರಗತಿಯ ವರೆಗೆ ಕುಬಣೂರು ಶಾಲೆಯಲ್ಲಿ ಆಯಿತು. ನಂತರ ಪ್ರೌಢಶಿಕ್ಷಣ ಮಂಗಲ್ಪಾಡಿ ಪ್ರೌಢಶಾಲೆಯಲ್ಲಿ ಹಾಗೂ ನಂತರ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದರು.
ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿರುವಾಗಲೇ ಕುಬಣೂರಿನ ಶಾಲೆಯಲ್ಲಿ ಯಕ್ಷಗಾನದ ಪರಿಸರವಿದ್ದ ಕಾರಣ ಆ ವಯಸ್ಸಿನಲ್ಲೆ ಶಾಲಾ ವಾರ್ಷಿಕೋತ್ಸವವೇ ಮೊದಲಾದ ಸಂದರ್ಭಗಳಲ್ಲೆಲ್ಲಾ ಯಕ್ಷಗಾನದಲ್ಲಿ ವೇಷಗಳನ್ನು ಮಾಡುತ್ತಿದ್ದರು. ರಾಜ್ಯಪ್ರಶಸ್ತಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಉಪ್ಪಳ ಕೃಷ್ಣ ಮಾಸ್ತರ್ ಹಾಗೂ ಆ ಕಾಲದ ಮೇಳದ ಕಲಾವಿದರಾದ ಬೇಕೂರು ಕೇಶವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿದ್ದರು. ಶಾಲಾ ದಿನಗಳಲ್ಲಿಯೇ ಐ. ರಘು ಮಾಸ್ತರರಿಂದ ಐದಾರು ವರ್ಷ ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿ ಟಿ. ಗೋಪಾಲಕೃಷ್ಣ ಮಯ್ಯ ಹಾಗೂ ಮಾಂಬಾಡಿ ನಾರಾಯಣ ಭಟ್ಟರಲ್ಲಿ ಭಾಗವತಿಕೆಯನ್ನು ಅಭ್ಯಸಿಸಿದರು.
ಪ್ರಾರಂಭದಲ್ಲಿ ವಿಶ್ವಭಾರತಿ ಕಲಾಸಂಘದಿಂದ ಹಲವು ಕಡೆ ಪ್ರದರ್ಶನಗಳನ್ನು ನಡೆಸುತ್ತಿದ್ದುದು ಮಾತ್ರವಲ್ಲದೆ ಯಕ್ಷಗಾನದ ವೇಷಭೂಷಣಗಳನ್ನು ಕೂಡಾ ಯಕ್ಷಗಾನ ಸಂಘ ಸಂಸ್ಥೆಗಳಿಗೆ ಹಾಗೂ ಪ್ರದರ್ಶನಗಳಿಗೆ ಬಾಡಿಗೆಗೆ ಒದಗಿಸುತ್ತಾ ಇದ್ದರು. ಆಗ ಅವರ ಭಾಗಮಂಡಲದ ಆಸ್ತಿ ಪಾಲಾಗಿ ಸಿಕ್ಕಿತು ಹಾಗೂ ಇವರ ತಂದೆಯವರು ವಿಧಿವಶರಾದುದರಿಂದ ಮಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗವನ್ನು ಬಿಟ್ಟು ತೋಟ ನೋಡಿಕೊಳ್ಳಲು ಭಾಗಮಂಡಲದಲ್ಲಿ ನೆಲೆಸಬೇಕಾಗಿ ಬಂತು. ಏಲಕ್ಕಿ ತೋಟವಾದುದರಿಂದ ಮಳೆಗಾಲದಲ್ಲಿ ಮಾತ್ರ ಕೆಲಸವಿರುತ್ತಿತ್ತು. ಮೊದಲು ಕೆಲಸದಲ್ಲಿದ್ದಾಗಲೂ ಕರ್ನೂರು ಕೊರಗಪ್ಪ ರೈಗಳ ಗೋಪಾಲಕೃಷ್ಣ ಕಲಾ ಸಂಪದ, ಪಡೀಲ್ ಇದರಲ್ಲಿ ಭಾಗವತನಾಗಿ ಹೋಗುತ್ತಿದ್ದರು. ಆಮೇಲೆ ಕುಂಬಳೆ ಶೇಷಪ್ಪನವರ ಅನಂತಾಡಿ ಮೇಳ ಹಾಗೂ ಉಪ್ಪಳ ಮೇಳಗಳಿಗೂ ಹವ್ಯಾಸೀ ಭಾಗವತನಾಗಿ ಹಾಡುತ್ತಿದ್ದರು. ಕುಬಣೂರು ಮನೆಯಲ್ಲಿ ಚೆಂಡೆ, ಮದ್ದಳೆಗಳು ಇದ್ದು ಅವುಗಳನ್ನು ಆಟಗಳಿಗೂ ಒದಗಿಸುತ್ತಿದ್ದರು. ಅಲ್ಲದೆ ಕುಬಣೂರು ಶ್ರೀಧರ ರಾವ್ ಹಲವಾರು ಹವ್ಯಾಸೀ ಸಂಸ್ಥೆಗಳಿಗೆ ಭಾಗವತಿಕೆಯನ್ನೂ ಮಾಡುತ್ತಿದ್ದರು. ಅದೂ ಅಲ್ಲದೆ ಆ ಕಾಲದಲ್ಲಿ “ಜುಗಲ್ ಬಂದಿ” ಪ್ರಯೋಗವನ್ನು ಪ್ರಥಮ ಬಾರಿಗೆ ಪರಿಚಯಿಸಿದ ಶ್ರೇಯಸ್ಸು ಕುಬಣೂರು ಶ್ರೀಧರ ರಾವ್ ಅವರಿಗೆ ಸಲ್ಲುತ್ತದೆ. ಅದರಲ್ಲಿ ಪದ್ಯಾಣ ಶಂಕರನಾರಾಯಣ ಭಟ್ಟರು, ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಚೆಂಡೆಗೆ ಮತ್ತು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಮದ್ದಳೆಗೆ ಇದ್ದು “ಬ್ರಹ್ಮಕಪಾಲ” ಎಂಬ ಪ್ರಸಂಗದಲ್ಲಿ ಇದನ್ನು ಪ್ರಪ್ರಥಮವಾಗಿ ಪ್ರಯೋಗ ಮಾಡಲಾಯಿತು. ಬಳಿಕ 1979ರಲ್ಲಿ ಕೂಡ್ಲು ಮೇಳವನ್ನು ಸಂಘಟಿಸಿದ್ದ ಕುಬಣೂರು ಅವರು ಅದರಲ್ಲಿ ದೊಡ್ಡ ಅಗರಿ ಭಾಗವತರು, ಕುದ್ರೆಕೋಡ್ಲು ರಾಮ ಭಟ್ಟರು, ಮಾಂಬಾಡಿಯವರು, ಶಂಕರನಾರಾಯಣ ಸಾಮಗರು, ಹೊಸಹಿತ್ಲು ಮಹಾಲಿಂಗ ಭಟ್ಟರು, ಪೆರುವೋಡಿ ನಾರಾಯಣ ಭಟ್ಟರು, ಕೋಡ್ಳ ಗಣಪತಿ ಭಟ್ಟರು, ಶಂಭು ಶರ್ಮ ಮೊದಲಾದ ಕಲಾವಿದರನ್ನು ಒಟ್ಟು ಸೇರಿಸಿದ್ದರು. ಕೇವಲ ಪೌರಾಣಿಕ ಪ್ರಸಂಗಗಳನ್ನು ಮಾತ್ರ ಸಂಯೋಜಿಸಿದ ಕಾರಣವೋ ಏನೋ, ಅದರಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಯಿತು.
ಆ ಸಮಯದಲ್ಲಿ ಅಂದರೆ 1981ರಲ್ಲಿ ಕರ್ನೂರು ಕೊರಗಪ್ಪ ರೈಗಳು ಕದ್ರಿ ಮೇಳವನ್ನು ಆರಂಭಿಸಿದರು. ಆಗ ಅವರ ಕೋರಿಕೆಯಂತೆ ಕದ್ರಿ ಮೇಳಕ್ಕೆ ಸೇರಿದರು. ಮರುವರ್ಷ ಗಣಪತಿ ಭಟ್ಟರ ನಂದಾವರ ಮೇಳ, ಅದರ ಮರುವರ್ಷ ಅರುವ ಮೇಳ, ಮತ್ತೆ ನಾಲ್ಕು ವರ್ಷ ಬಪ್ಪನಾಡು ಮೇಳಗಳ ತಿರುಗಾಟ. ನಂತರ ಪುನಃ ಕದ್ರಿ ಮೇಳಕ್ಕೆ ಕರೆಬಂದಾಗ ಅಲ್ಲಿ ದೊಡ್ಡ ಕಲಾವಿದರ ಗಡಣವೇ ಇತ್ತು. ರಾಮದಾಸ ಸಾಮಗರು, ಕೋಳ್ಯೂರು ರಾಮಚಂದ್ರ ರಾಯರು, ಚೆನ್ನಪ್ಪ ಶೆಟ್ಟರು, ವಿಶ್ವನಾಥ ಶೆಟ್ಟರು, ಸೀತಾರಾಮ ಕುಮಾರ್, ಬಂಟ್ವಾಳ ಜಯರಾಮ ಆಚಾರ್ಯ, ಮೊದಲಾದವರಿದ್ದರು. ನಂತರ ಕಾಂತಾವರ ಮೇಳಕ್ಕೆ, ಆಮೇಲೆ ಕಲ್ಲಾಡಿ ವಿಠಲ ಶೆಟ್ಟರು ಕಟೀಲು ಮೇಳಕ್ಕೆ ಆಹ್ವಾನಿಸಿದರು. ಹಾಗೆ ಕಳೆದ 27 ವರ್ಷಗಳಿಂದ ಕಟೀಲು ಮೇಳದಲ್ಲೇ ಪ್ರಧಾನ ಭಾಗವತರಾಗಿದ್ದರು.
ಬಪ್ಪನಾಡು ಮೇಳದಲ್ಲಿರುವಾಗ ದೇವೇಂದ್ರನ ಬಗ್ಗೆ ನೃತ್ಯರೂಪಕವೊಂದನ್ನು ಸಂಯೋಜಿಸಿದ್ದರು. ಆ ದೃಶ್ಯದಲ್ಲಿ ಮಾತುಗಳಿಲ್ಲ, ಬರಿಯ ನೃತ್ಯರೂಪಕ. ಕಟೀಲು ಮೇಳಕ್ಕೆ ಸೇರಿದ ನಂತರ ನಾಲ್ಕು ಕನ್ನಡ ಪ್ರಸಂಗಗಳನ್ನು ಬರೆದಿದ್ದ ಶ್ರೀಯುತರು (ದಾಶರಥಿ ದರ್ಶನ, ಮನುವಂಶವಾಹಿನಿ, ಸಾರ್ವಭೌಮ ಸಂಕರ್ಷಣ, ಮಹಾಸತಿ ಮಂದಾಕಿನಿ) ತುಳುವಿನಲ್ಲಿ ಪಟ್ಟದ ಮಣೆ ಎಂಬ ಒಂದು ಪ್ರಸಂಗವನ್ನೂ ಬರೆದಿದ್ದರು. ಅದಲ್ಲದೆ ಕೆಲವು ಸಣ್ಣ ಸಣ್ಣ ಪ್ರಸಂಗಗಳನ್ನೂ ಬರೆದಿದ್ದರು. 1995ರಲ್ಲಿ ‘ಯಕ್ಷಪ್ರಭಾ’ ಮಾಸಪತ್ರಿಕೆಯನ್ನು ಆರಂಭಿಸಿದ್ದರು. ಪತ್ರಿಕೆ ನಡೆಸಲು ಆರಂಭದಲ್ಲಿ ಬಹಳಷ್ಟು ಕಷ್ಟಪಟ್ಟಿದ್ದರು. ಈಗ ಅಲ್ಲಿಂದಲ್ಲಿಗೆ ನಡೆಯುತ್ತಾ ಉಂಟು ಅಂತ ಹೇಳುತ್ತಿದ್ದರು.
“ಪತ್ರಿಕೆಯನ್ನು ಲಾಭಕ್ಕೋಸ್ಕರ ಮಾಡಿದ್ದಲ್ಲ. 8 ವರ್ಷಗಳಿಂದ ದಿ| ದಾಮೋದರ ಮಂಡೆಚ್ಚ ಪ್ರಶಸ್ತಿ ಸಮಿತಿಯ ಸಂಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಗರಿ ಪ್ರಶಸ್ತಿ ಹಾಗೂ ಇತರ ಹಲವಾರು ಪ್ರಶಸ್ತಿ, ಸನ್ಮಾನಗಳು ಬಂದಿವೆ. ಆಮೇಲೆ ಕಲ್ಲಾಡಿ ವಿಠಲ ಶೆಟ್ಟರ ಜೀವನಚರಿತ್ರೆಯ ಬಗ್ಗೆ ಪ್ರಕಟವಾದ ಪುಸ್ತಕ “ಯಕ್ಷ ವಿಜಯ ವಿಠಲ”ದ ಸಂಪಾದಕನಾಗಿದ್ದೆ. ಮದುವೆಯಾದ ಬಳಿಕ ಭಾಗಮಂಡಲದ ಆಸ್ತಿಯನ್ನು ಮಾರಿ ಉಜಿರೆಯಲ್ಲಿ ಆಸ್ತಿ ಖರೀದಿಸಿ ಅಲ್ಲೇ ವಾಸ್ತವ್ಯ ಹೂಡಿದ್ದೇನೆ. ಇಬ್ಬರು ಮಕ್ಕಳಲ್ಲಿ ಮಗಳು ಶ್ರೀವಿದ್ಯಾ ಪತ್ರಿಕೋದ್ಯಮ ಪದವಿ ಪಡೆದು ಟಿವಿ9, ಈಟಿವಿಯಲ್ಲಿ ಕೆಲಸ ಮಾಡಿದ್ದಳು. ಅಳಿಯ ಸಿಂಗಾಪುರದಲ್ಲಿ ಸಾಫ್ಟ್‍ವೇರ್ ಉದ್ಯೋಗಿ. ಮಗ ಶ್ರೀಕಾಂತ ಕರ್ಣಾಟಕ ಬ್ಯಾಂಕ್ ನಲ್ಲಿ ಸಹಾಯಕ ಪ್ರಬಂಧಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಶ್ರೀ ಭೀಮ ಭಟ್ಟರ ಮುಂಬೈ, ಮಹಾರಾಷ್ಟ್ರದ ಮಳೆಗಾಲದ ತಿರುಗಾಟಗಳು ಹಾಗೂ ಶ್ರೀ ನಿಡ್ಲೆ ಗೋವಿಂದ ಭಟ್ಟರ ಮಳೆಗಾಲದ ತಿರುಗಾಟದ ಪ್ರಾರಂಭದ ವರ್ಷಗಳಲ್ಲಿ ಭಾಗವಹಿಸಿದ್ದೆ. ಆಮೇಲೆ ಪತ್ರಿಕೆಯ ಸಂಪಾದಕನಾಗಿ ಜವಾಬ್ದಾರಿ ಹೆಚ್ಚಿದುದರಿಂದ ಅನಿವಾರ್ಯವಾಗಿ ಹೋಗಲಾಗಲಿಲ್ಲ. ಅಗರಿ ಶ್ರೀನಿವಾಸ ಭಾಗವತರ ಸಂಪುಟ ಹೊತ್ತಗೆಯನ್ನು ಸಂಸ್ಕರಿಸಿ ಮುದ್ರಿಸುವಲ್ಲಿ ಸಹಕರಿಸಿದ್ದೇನೆ. ತೆಂಕುತಿಟ್ಟಿನ ಯಕ್ಷಗಾನದ ಕಟೀಲು ಮೇಳದ ಪ್ರಸ್ತುತ ಕಲಾವಿದರಲ್ಲಿ ಅತೀ ಹಿರಿಯನೂ, ತೆಂಕುತಿಟ್ಟಿನ ವೃತ್ತಿಪರ ಹಿರಿಯ ಕಲಾವಿದರಲ್ಲಿ ನಾನೂ ಒಬ್ಬನೂ ಎಂದು ಹೇಳಲು ಸಂತೋಷಿಸುತ್ತೇನೆ…” ಎಂದು ಅಂದು ಮನಬಿಚ್ಚಿ ಮಾತನಾಡಿದ್ದರು.
ಮುಂದೆ ಭಾಗವತರಾಗ ಬಯಸುವವರಿಗೆ ನನ್ನ ಸಂದೇಶ “ಹಾಡುವುದಕ್ಕಾಗಿ ಯಕ್ಷಗಾನವನ್ನು ಆರಿಸಿಕೊಳ್ಳಬೇಡಿ, ಯಕ್ಷಗಾನಕ್ಕಾಗಿ ಹಾಡಿ” ಎಂಬುದಾಗಿ ಅಂದು ಹೇಳಿದ್ದ ಅವರು ಯಕ್ಷಗಾನಕ್ಕಾಗಿಯೇ ಹಾಡಿದರು. ಯಕ್ಷಗಾನದಲ್ಲಿಯೇ ತಮ್ಮ ಸಾರ್ಥಕ ಬದುಕನ್ನು ಕಂಡವರು.
ರಾಗಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನನಗೆ ಕೊಡಬೇಕೆಂದು ಶ್ರೀ ಕುಬಣೂರು ಶ್ರೀಧರ ರಾವ್ ಅವರಲ್ಲಿ ವಿನಂತಿಸಿಕೊಂಡಿದ್ದೆ. ಅವರು ಸಂತೋಷದಿಂದ ‘‘ಇನ್ನೊಮ್ಮೆ ಮಾತನಾಡುವ, ಬನ್ನಿ” ಎಂದು ಒಪ್ಪಿದ್ದರು. ಆದರೆ ಅವರು ಹೇಳಿದ ‘ಇನ್ನೊಮ್ಮೆ…’ ಮತ್ತೆ ಬರಲಾರದು ಎನ್ನುವುದು ವಾಸ್ತವ, ಆದರೆ ಅಷ್ಟೇ ಕಟುವಾದ ಕಹಿ.
ಲೇಖನ: ಮನಮೋಹನ್ ವಿ.ಎಸ್.