ಶೀರ್ಷಿಕೆಯೇ ಸೂಚಿಸುವಂತೆ ಇದು ಯಕ್ಷಗಾನ ಕಲೆಯ ಮೇರು ಕಲಾವಿದರಾಗಿ ಮೆರೆದ ದಿ| ಅಳಿಕೆ ಶ್ರೀ ರಾಮಯ್ಯ ರೈಗಳ ಕುರಿತಾದ ಕೃತಿಯು. ಈ ಪುಸ್ತಕವು ಪ್ರಕಟವಾದುದು 2012ರಲ್ಲಿ. ಪ್ರಕಾಶಕರು ‘ದೆಹಲಿಮಿತ್ರ’ ಎಂಬ ಸಂಸ್ಥೆ. ಸಂಪಾದಕರು ಶ್ರೀ ಡಾ. ನಿತ್ಯಾನಂದ ಬಿ. ಶೆಟ್ಟಿ ಅವರು. ಸಹ ಸಂಪಾದಕರು ಶ್ರೀ ವಸಂತ ಶೆಟ್ಟಿ ಬೆಳ್ಳಾರೆ, ಕೆ. ಬಾಲಕೃಷ್ಣ ನಾಯಕ್, ಡಾ. ವೈ. ಅವನೀಂದ್ರನಾಥ ರಾವ್ ಅವರುಗಳು. ಅಳಿಕೆ ಶ್ರೀ ರಾಮಯ್ಯ ರೈಗಳ ಬಗೆಗೆ ಹಿಂದೆ ಒಂದು ಲೇಖನವನ್ನು ಬರೆಯಲು ಅವಕಾಶವಾಗಿತ್ತು. ಅವರ ಕುರಿತಾದ ಪುಸ್ತಕದ ಬಗೆಗೆ ಬರೆಯಲೂ ಸಂತೋಷಪಡುತ್ತೇನೆ. ಸಂಪಾದಕರಾದ ಶ್ರೀ ಡಾ. ನಿತ್ಯಾನಂದ ಬಿ. ಶೆಟ್ಟರು ‘ಸಂಪಾದಕರ ಮಾತು’ ಎಂಬ ಶೀರ್ಷಿಕೆಯಡಿ ತಮ್ಮ ಅನಿಸಿಕೆಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ. ಸಹಸಂಪಾದಕ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರ ‘ಮಿತ್ರನ ಮಾತು’ ಎಂಬ ಲೇಖನವನ್ನೂ ನೀಡಲಾಗಿದೆ. ಈ ಹೊತ್ತಗೆಯು ಒಟ್ಟು ಆರು ವಿಭಾಗಗಳಲ್ಲಿ ಕಾಣಿಸಿಕೊಂಡಿದೆ. ಭಾಗ ಒಂದರಲ್ಲಿ ಅಳಿಕೆಯವರ ಆತ್ಮಕಥನವನ್ನು ನೀಡಲಾಗಿದೆ. ಭಾಗ ಎರಡರಲ್ಲಿ ಅಳಿಕೆಯವರ ಬರಹಗಳನ್ನು ನೀಡಲಾಗಿದೆ. ಭಾಗ ಮೂರರಲ್ಲಿ ಅಳಿಕೆಯವರ ಸಂದರ್ಶನ ಲೇಖನವಿದೆ. ಸಂದರ್ಶಿಸಿದವರು ಶ್ರೀ ದಿವಾಕರ ಶೆಟ್ಟಿ. ಭಾಗ ನಾಲ್ಕರಲ್ಲಿ ಅಳಿಕೆಯವರ ಮಕ್ಕಳಾದ ದುರ್ಗಾಪ್ರಸಾದ್ ರೈ, ವೇದಾ ಜಿ.ಶೆಟ್ಟಿ ಮತ್ತು ಬಂಧು ಉಬರಡ್ಕ ಉಮೇಶ ಶೆಟ್ಟರ ಲೇಖನವಿದೆ.
ಭಾಗ ಐದರಲ್ಲಿ ಅಗರಿ ಶ್ರೀನಿವಾಸ ಭಾಗವತ, ಮಲ್ಪೆ ಶಂಕರನಾರಾಯಣ ಸಾಮಗ, ನೆಡ್ಲೆ ನರಸಿಂಹ ಭಟ್ಟ , ಕೆ.ಪುರುಷೋತ್ತಮ ಭಟ್, ಬಲಿಪ ನಾರಾಯಣ ಭಾಗವತ, ಧನಂಜಯ ಕುಂಬ್ಳೆ, ಕೊಳ್ಯೂರು ರಾಮಚಂದ್ರ ರಾವ್, ಎಚ್. ಶ್ರೀಧರ ಹಂದೆ, ವೆಂಕಟರಾಮ ಭಟ್ಟ ಸುಳ್ಯ, ಪಡ್ರೆ ಚಂದು, ಮಿಜಾರು ಅಣ್ಣಪ್ಪ, ಬಾಲಕೃಷ್ಣ ಶೆಟ್ಟಿ ಮುಂಡಾಜೆ, ಸದಾಶಿವ ಶೆಟ್ಟಿ ಮುಂಡಾಜೆ, ತಾರಾನಾಥ ವರ್ಕಾಡಿ, ಕೆ.ಎಚ್. ದಾಸಪ್ಪ ರೈ, ಅರುವ ಕೊರಗಪ್ಪ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಬಾಲಕೃಷ್ಣ ಶೆಟ್ಟಿ ಪೊಳಲಿ, ಅಮೃತ ಸೋಮೇಶ್ವರ, ಎಂ. ಪ್ರಭಾಕರ ಜೋಶಿ, ಪು. ಶ್ರೀನಿವಾಸ ಭಟ್ಟ, ಎನ್. ವಿ. ಶೆಟ್ಟಿ ಮುಲ್ಕಿ, ಕೆ. ಸದಾಶಿವ, ಪಿ.ಪೂವಪ್ಪ ಶೆಟ್ಟಿ ಇವರುಗಳ ಲೇಖನಗಳಿವೆ. ಭಾಗ ಆರರಲ್ಲಿ ಬಣ್ಣ ಮತ್ತು ಕಪ್ಪು ಬಿಳುಪಿನ ಸುಮಾರು ಹದಿನೈದು ಚಿತ್ರಗಳಿವೆ. ಅಳಿಕೆ ಶ್ರೀ ರಾಮಯ್ಯ ರೈಗಳ ಜೀವಿತಾವಧಿ 1915-1989. ಶ್ರೀಯುತರು ತಮ್ಮ ಆತ್ಮಕಥನದಲ್ಲಿ ಅವರು ಪ್ರವೇಶಿಸಿದಾಗ ಯಕ್ಷಗಾನವು ಹೇಗಿತ್ತು ? ಹೇಗೆ ಬದಲಾಗುತ್ತಾ ಬಂತು, ಅದಕ್ಕೆ ಕಾರಣಗಳು, ಸಹ ಕಲಾವಿದರು, ಪ್ರೇಕ್ಷಕರು, ಕಲಾಬದುಕಿನಲ್ಲಿ ಸಂತೋಷ, ನೋವಿನ ಅನುಭವಗಳನ್ನು ಹೊಂದಿದ ಕ್ಷಣಗಳು, ಮೊದಲಾದ ವಿಚಾರಗಳ ಬಗೆಗೆ ಬಹಳ ಸೊಗಸಾಗಿ ವಿವರಣೆಯನ್ನು ನೀಡಿರುತ್ತಾರೆ. ‘ಅಳಿಕೆ- ಯಕ್ಷಗಾನದ ಮೇರು ಕಲಾವಿದ ಅಳಿಕೆ ರಾಮಯ್ಯ ರೈ ಸ್ಮೃತಿ-ಕೃತಿ’ ಯು ಸಂಗ್ರಹಯೋಗ್ಯ ಅತ್ಯುತ್ತಮ ಪುಸ್ತಕವು.
ಲೇಖನ: ರವಿಶಂಕರ್ ವಳಕ್ಕುಂಜ