ನವರಸಗಳಲ್ಲಿ ಒಂದು ಹಾಸ್ಯ. ಪ್ರತಿಯೊಂದು ರಸಗಳೂ ಉತ್ಪತ್ತಿ ಸ್ಥಾನ, ಸಂಕೇತಿಸುವ ಬಣ್ಣ, ಅಭಿಮಾನೀ ದೇವತೆ, ಸ್ಥಾಯೀ ಭಾವ, ವಿರುದ್ಧ ರಸ ಎಂಬ ಐದು ವಿಚಾರಗಳನ್ನು ಒಳಗೊಂಡಿರುತ್ತದೆ. ವಿಕಾರ ವೇಷಗಳು, ಕುಣಿತ, ವಿಕಟ ನಗು, ಸಂಭಾಷಣೆಗಳು ಹಾಸ್ಯ ರಸದ ಉತ್ಪತ್ತಿಗೆ ಕಾರಣವಾಗುತ್ತದೆ. ಸಂಕೇತಿಸುವ ಬಣ್ಣ ಬಿಳಿ. ಗಣಪತಿಯೇ ದೇವರು. ಸ್ಥಾಯೀ ಭಾವ ನಗು. ಯಕ್ಷಗಾನದಲ್ಲಿ ಹಾಸ್ಯ ರಸಕ್ಕೂ ಹಾಸ್ಯಗಾರನಿಗೂ ವಿಶೇಷ ಸ್ಥಾನವಿದೆ. ಗೌರವವಿದೆ. ಮೊದಲಿನ ಕಾಲದಲ್ಲಿ ಎಲ್ಲಾ ವೇಷಗಳನ್ನು ಮಾಡುತ್ತಾ ಹಂತ ಹಂತವಾಗಿ ಸಾಗಿ ಬಂದವನೇ ಹಾಸ್ಯಗಾರನಾಗುತ್ತಾನೆ. ಹಾಸ್ಯಗಾರನು ಅನುಭವಿಯಾದುದರಿಂದ ಕಲಿಕಾಸಕ್ತರು ಮಾಹಿತಿಗಳನ್ನು ಅವರಲ್ಲಿಯೇ ಕೇಳಿ ರಂಗವೇರುವುದು ಮೊದಲಿನಿಂದಲೂ ಬಂದ ರೀತಿಯಾಗಿತ್ತು. ವನಪಾಲಕ, ಬಾಗಿಲ ದೂತ ಮೊದಲಾದ ವೇಷಗಳಲ್ಲಿ ಸಭಿಕರನ್ನು ನಗಿಸಿದಲ್ಲಿಗೆ ಕಲಾವಿದ ಹಾಸ್ಯಗಾರ ಎನಿಸಿಕೊಳ್ಳಲಾರ. ಪುರಾಣ ಪ್ರಸಂಗಗಳ ನಾರದ, ಅಕ್ರೂರ, ಸಂಜಯ, ಪ್ರಾತಿಕಾಮಿ, ಬಾಹುಕ, ಕಟ್ಟು ಹಾಸ್ಯಗಳಿಗೆ ಸಂಬಂಧಿಸಿದ ಪಾತ್ರಗಳನ್ನೂ ನಿರ್ವಹಿಸುವಾಗ ಹಾಸ್ಯಗಾರನೆಷ್ಟು ಪ್ರಬುದ್ಧನೆಂದು ಗುರುತಿಸಬಹುದು. ಪುರಾಣದ ಹೆಚ್ಚಿನ ಎಲ್ಲಾ ಪ್ರಸಂಗಗಳಲ್ಲಿ ನಾರದನ ಪಾತ್ರ ಇರುತ್ತದೆ. ಅಧ್ಯಯನಶೀಲನಲ್ಲದಿದ್ದರೆ ಎಲ್ಲಾ ಪ್ರಸಂಗದ ನಾರದನಾಗಿ ಅಭಿನಯಿಸಲು ಸಾಧ್ಯವೇ ಇಲ್ಲ. ಹಾಸ್ಯಗಾರರು ನಿರ್ವಹಿಸುವ ಪಾತ್ರಗಳು ಪ್ರಸಂಗವನ್ನು ಮುನ್ನಡೆಸಲು ಸಹಕಾರಿಯಾಗುವಂತಿರಬೇಕು. ಜತೆ ವೇಷಗಳನ್ನು ಗೆಲ್ಲಿಸುವಂತಿರಬೇಕು. ಕೊಲ್ಲುವಂತಿರಬಾರದು. ಒಂದೇ ರಾತ್ರಿಯಲ್ಲಿ ಒಂದೇ ಪ್ರಸಂಗದಲ್ಲಿ ಬಾಗಿಲ ದೂತನಾಗಿ, ವನಪಾಲಕನಾಗಿ, ರಾಕ್ಷಸದೂತನಾಗಿ, ನಾರದನಂತಹ ಸಾತ್ವಿಕ, ಭಾವನಾತ್ಮಕ ಪಾತ್ರಗಳಲ್ಲಿ (ಅಕ್ರೂರ, ಬಾಹುಕ, ಸಂಜಯ ಮೊದಲಾದವು) ಅಭಿನಯಿಸಬೇಕಾಗುತ್ತದೆ. ಇದು ಅಷ್ಟು ಸುಲಭವಲ್ಲ. ಮಂಥರೆ, ಚಂದ್ರಾವಳಿ ವಿಲಾಸದ ಅತ್ತೆ, ಚಿತ್ರಾಕ್ಷಿ ಕಲ್ಯಾಣ, ಮನ್ಮಥೋಪಾಖ್ಯಾನ ಮೊದಲಾದ ಪ್ರಸಂಗಗಳ ಮುದುಕಿ ಪಾತ್ರಗಳ ಬಗ್ಗೆ ಹೇಳುವುದಾದರೆ ಎಲ್ಲಾ ವಿಭಿನ್ನ ಸ್ವಭಾವದ ಪಾತ್ರಗಳು. ಬಣ್ಣದ ಮನೆಯಲ್ಲಿ ಮೇಕಪ್ ಮಾಡಿ ಸೀರೆ ಉಟ್ಟು ಸಿದ್ಧರಾಗಬಹುದು. ಆದರೆ ರಂಗವೇರಿ ಅಭಿನಯಿಸುವುದು, ಪಾತ್ರಗಳಿಗೆ ನ್ಯಾಯ ಒದಗಿಸಿ ಕೊಡುವುದು ಅತ್ಯಂತ ಕಷ್ಟ. ನೋಡಿ ಕಲಿತ, ಕೇಳಿ ತಿಳಿದ ಮಾಡಿ ಅನುಭವವುಳ್ಳ ಹಾಸ್ಯಗಾರರು ಮಾತ್ರ ಈ ವೇಷಗಳನ್ನು ನಿರ್ವಹಿಸಿ ಗೆಲ್ಲಬಲ್ಲರು. ನಡೆಯಿಂದಲೂ ನುಡಿಯಿಂದಲೂ ಆತ ಚುರುಕಾಗಿರಬೇಕು. ಪ್ರತ್ಯುತ್ಪನ್ನಮತಿಯಾಗಿರಬೇಕು. ನೇಪಥ್ಯದಲ್ಲಿ ಕ್ಷಿಪ್ರಾತಿಕ್ಷಿಪ್ರವಾಗಿ ಸಿದ್ಧವಾಗುವ ಕಲೆಯೂ ಕರಗತವಾಗಿರಬೇಕು. ಹಿರಿಯ ಅನೇಕ ಹಾಸ್ಯಗಾರರು ಹೀಗೆ ಪ್ರಸಿದ್ಧರಾದರು. ಕೆಲವರು ಪುರಾಣ ಪ್ರಸಂಗಗಳಲ್ಲಿ ರಂಜಿಸಿದರು. ಕೆಲವರು ತುಳು ಪ್ರಸಂಗಗಳಲ್ಲಿ ಮಿಂಚಿದರು. ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಸರಿಸಮನಾಗಿ ಪ್ರಸಿದ್ಧಿಯನ್ನೂ ಪಡೆದವರಿದ್ದಾರೆ. ಪ್ರಸ್ತುತ ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಅಭಿನಯಿಸಿ ಹೆಸರು ಗಳಿಸಿದವರು ಶ್ರೀ ತಿಮ್ಮಪ್ಪ ಹಾಸ್ಯಗಾರರು. ತಿಮ್ಮಪ್ಪ ಹಾಸ್ಯಗಾರರು ತೆಂಕು ತಿಟ್ಟಿನ ಅನುಭವೀ ಹಾಸ್ಯಗಾರರಲ್ಲೊಬ್ಬರು. ಕಳೆದ 38 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ಶ್ರೀಯುತರು ಮಂಗಳೂರು ತಾಲೂಕಿನ ಬಡಗ ಎಡಪದವು ಗ್ರಾಮದ ಮಿಜಾರು ಎಂಬಲ್ಲಿ 1963ನೇ ಇಸವಿ ಶ್ರೀ ಹೊನ್ನಯ್ಯ ಶೆಟ್ಟಿಗಾರ್ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳ ಮಗನಾಗಿ ಜನಿಸಿದರು. ಓದಿದ್ದು ಎಸ್.ಎಸ್.ಎಲ್.ಸಿ ವರೆಗೆ. 4ನೇ ತರಗತಿ ವರೆಗೆ ಮಿಜಾರು ದಡ್ಡಿ ಶಾಲೆಯಲ್ಲಿ, 5 – 7ರ ವರೆಗೆ ಮಿಜಾರು ಶಾಲೆಯಲ್ಲಿ ಮತ್ತು 8ರಿಂದ 10ರ ವರೆಗೆ ಎಡಪದವಿನ ಶ್ರೀ ವಿವೇಕಾನಂದ ಪ್ರೌಢ ಶಾಲೆಯಲ್ಲಿ ವಿದ್ಯಾಭಾಸ ಮಾಡಿದ್ದರು. ಮನೆಯವರಾರೂ ಯಕ್ಷಗಾನ ಕಲಾವಿದರಲ್ಲದಿದ್ದರೂ ಕಲಾಸಕ್ತರಾಗಿದ್ದರು. ತಿಮ್ಮಪ್ಪನವರ ತೀರ್ಥರೂಪರು ಹೊನ್ನಯ್ಯ ಶೆಟ್ಟಿಗಾರರು ಶನಿಕಥೆ ವಾಚನ ಮಾಡುತ್ತಿದ್ದರು. ತಿಮ್ಮಪ್ಪ ಅವರಿಗೆ ಬಾಲ್ಯದಲ್ಲಿಯೇ ಯಕ್ಷಗಾನಾಸಕ್ತಿಯಿತ್ತು. ಊರಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ತಪ್ಪದೆ ನೋಡುತ್ತಿದ್ದರು. ತಾನೂ ಕಲಾವಿದನಾಗಬೇಕೆಂದು ನಿರ್ಧರಿಸುವಷ್ಟು ಯಕ್ಷಗಾನ ಕಲೆಯು ಇವರನ್ನು ಆಕರ್ಷಿಸಿತ್ತು. ಖ್ಯಾತ ಕಲಾವಿದ ಮುಚ್ಚೂರು ಹರೀಶ ಶೆಟ್ಟಿಗಾರರಿಂದ ಹೆಜ್ಜೆಗಾರಿಕೆಯನ್ನು ಅಭ್ಯಸಿಸಿದರು. ಸರಳ ಸಾತ್ವಿಕ ಸ್ವಭಾವದ ಹರೀಶ್ ಶೆಟ್ಟಿಗಾರರು ಸಂಭಾಷಣೆಗಳನ್ನು ಉತ್ತಮವಾಗಿ ವಿದ್ಯಾರ್ಥಿಗಳಿಗೆ ಬರೆದು ಕೊಡುತ್ತಿದ್ದರು ಎಂಬುದನ್ನು ಅವರಿಂದ ಕಲಿತ ವಿದ್ಯಾರ್ಥಿಗಳೂ ಅವರನ್ನು ಹತ್ತಿರದಿಂದ ಬಲ್ಲವರೂ ಹೇಳುತ್ತಾರೆ. ಶಾಲಾ ವಿದ್ಯಾರ್ಥಿಯಾಗಿದ್ದಾಗ ಮುಚ್ಚೂರು ದೇವಸ್ಥಾನದಲ್ಲಿ ನಡೆದ ಪ್ರದರ್ಶನ ‘ಕಚ ದೇವಯಾನಿ’ ಪ್ರಸಂಗದಲ್ಲಿ ನಾರದನಾಗಿ ಮಿಜಾರು ತಿಮ್ಮಪ್ಪ ಅವರು ರಂಗವೇರಿದರು. ಎಸ್.ಎಸ್.ಎಲ್.ಸಿ ಆದ ನಂತರ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸುವ ನಿರ್ಣಯವನ್ನು ಮಾಡಿದ್ದರು. ಶಾಲಾ ವಿದ್ಯಾರ್ಥಿಯಾಗಿದ್ದಾಗ ತಿಮ್ಮಪ್ಪ ಅವರು ನಾಟಕಗಳಲ್ಲಿ ಅಭಿನಯಿಸಿದ್ದರು. ಮಿಜಾರು ತಿಮ್ಮಪ್ಪ ಹಾಸ್ಯಗಾರರ ಮೊದಲ ತಿರುಗಾಟ ಶ್ರೀಧರ ಭಂಡಾರಿಯವರ ಸಂಚಾಲಕತ್ವದ ಪುತ್ತೂರು ಮೇಳದಲ್ಲಿ. ಖ್ಯಾತ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರ ಜತೆ ಸಹ ವಿದೂಷಕನಾಗಿ. (1981-82) ಈ ಮೇಳದಲ್ಲಿ 3 ವರ್ಷಗಳ ತಿರುಗಾಟ. ಬಳಿಕ ಅರುವ ಶ್ರೀ ನಾರಾಯಣ ಶೆಟ್ಟರ ಸಂಚಾಲಕತ್ವದ ಅಳದಂಗಡಿ ಮೇಳದಲ್ಲಿ 2 ವರ್ಷ ಕಲಾಸೇವೆ. ನಂತರ ಶ್ರೀ ನಾರಾಯಣ ಕಮ್ತಿಯವರ ಯಾಜಮಾನ್ಯದ ಬಪ್ಪನಾಡು ಮೇಳಕ್ಕೆ. ಈ ಸಂದರ್ಭ ‘ಧರ್ಮದೈವ ಕೊಡಮಣಿತ್ತಾಯ’ ತುಳು ಪ್ರಸಂಗದ ಮುದುಕಿಯ ವೇಷ ಇವರಿಗೆ ಪ್ರಸಿದ್ಧಿಯನ್ನು ನೀಡಿತ್ತು. ಬಪ್ಪನಾಡು ಕ್ಷೇತ್ರ ಮಹಾತ್ಮೆ ಪ್ರಸಂಗದ ಎಲ್ಲಾ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದರು. ಪುರಾಣ ಮತ್ತು ತುಳು ಸಾಮಾಜಿಕ ಪ್ರಸಂಗಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗುತ್ತಾ ಅನುಭವಗಳನ್ನು ಗಳಿಸಿ ಪಕ್ವರಾಗತೊಡಗಿದರು. ಬಪ್ಪನಾಡು ಮೇಳದಲ್ಲಿ ಎರಡು ತಿರುಗಾಟ. ಇವರ ಪ್ರತಿಭಾ ಪ್ರಧರ್ಶನವನ್ನು ನೋಡಿದ ಕರ್ನಾಟಕ ಮೇಳದ ಸಂಚಾಲಕರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟರು (ಪ್ರಸ್ತುತ ಕಟೀಲು ಆರೂ ಮೇಳಗಳ ಸಂಚಾಲಕರು) ಮೇಳಕ್ಕೆ ಬರಲು ಆಹ್ವಾನಿಸಿದ್ದರು. ಮುಂದಿನ ವರ್ಷ ಕರ್ನಾಟಕ ಮೇಳದಲ್ಲಿ ತಿರುಗಾಟ. ಅದೂ ಹೆಸರಾಂತ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪನವರ ಜತೆ. ಕರ್ನಾಟಕ ಮೇಳವು ಪ್ರಸಿದ್ಧ ಕಲಾವಿದರ ಶ್ರೇಷ್ಠ ತಂಡವಾಗಿತ್ತು. ಮಿಜಾರು ಅಣ್ಣಪ್ಪ ಅವರೊಂದಿಗೆ ಅನೇಕ ಜತೆ ವೇಷಗಳಲ್ಲಿ ತಿಮ್ಮಪ್ಪನವರು ಕಾಣಿಸಿಕೊಂಡಿದ್ದರು. ಮಿಜಾರು ಅಣ್ಣಪ್ಪರು ಆಶೀರ್ವದಿಸಿ ಸಹಕಾರ, ಪ್ರೋತ್ಸಾಹಗಳನ್ನು ನೀಡಿದ್ದರು ಎನ್ನುವ ಮೂಲಕ ಅವರಿಗೆ ತಿಮ್ಮಪ್ಪ ಅವರು ಗೌರವವನ್ನು ಸಲ್ಲಿಸುತ್ತಾರೆ.
16 ವರ್ಷಗಳ ಕಾಲ ಸದ್ರಿ ಮೇಳದಲ್ಲಿ ವ್ಯವಸಾಯ. ಬಳಿಕ ಕುಂಟಾರು ಮೇಳದಲ್ಲಿ 2 ವರ್ಷಗಳು, ಮತ್ತೆ ಕಟೀಲು ಮೇಳದಲ್ಲಿ 2 ವರ್ಷಗಳು, ಎಡನೀರು ಮೇಳದಲ್ಲಿ 2 ವರ್ಷಗಳು, ಸುಂಕದಕಟ್ಟೆ ಮೇಳದಲ್ಲಿ 13 ವರ್ಷಗಳು, ಮತ್ತು 1 ವರ್ಷ ಮಂಗಳಾದೇವಿ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಪುರಾಣ ಪ್ರಸಂಗದ ಎಲ್ಲಾ ಹಾಸ್ಯ ಪಾತ್ರಗಳನ್ನೂ ಕೊರತೆಯಿಲ್ಲದೆ ತುಂಬಬಲ್ಲ ಸಾಮರ್ಥ್ಯ ಇವರಿಗಿದೆ. ಕೋಟಿ ಚೆನ್ನಯ, ದೇವ ಪೂಂಜ ಪ್ರತಾಪ, ಕೋರ್ದಬ್ಬು ಬಾರಗ, ಕಾಡಮಲ್ಲಿಗೆ ಮೊದಲಾದ ತುಳು ಪ್ರಸಂಗಗಳ ವಿವಿಧ ಪಾತ್ರಗಳೂ ಮಿಜಾರು ತಿಮ್ಮಪ್ಪ ಅವರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು. ತನ್ನದೇ ಶೈಲಿಯ ನಾಟ್ಯ ಮತ್ತು ಮಾತುಗಾರಿಕೆಯಿಂದ ಇವರು ಪ್ರೇಕ್ಷಕರನ್ನು ಬಹು ಬೇಗನೆ ಆಕರ್ಷಿಸುತ್ತಾರೆ. ಮಿಜಾರಿನಲ್ಲಿ ಕಳೆದ ವರ್ಷ ಕಟ್ಟಿಸಿದ ಮನೆಯಲ್ಲಿ ಪತ್ನಿ ಶ್ರೀಮತಿ ಜಯಶ್ರೀ ಇವರೊಂದಿಗೆ ವಾಸ. ಮಿಜಾರು ತಿಮ್ಮಪ್ಪ ಹಾಸ್ಯಗಾರರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಅರೋಗ್ಯ, ಸಕಲ ಭಾಗ್ಯಗಳನ್ನು ಕಲಾಮಾತೆಯು ನೀಡಲಿ. ಅವರ ಮನೋಕಾಮನೆಗಳನ್ನೆಲ್ಲಾ ಶ್ರೀ ದೇವರು ಅನುಗ್ರಹಿಸಲಿ. ಕಲಾಭಿಮಾನಿಗಳೆಲ್ಲರ ಪರವಾಗಿ ಶುಭಹಾರೈಕೆಗಳು.
ಲೇಖಕ: ರವಿಶಂಕರ್ ವಳಕ್ಕುಂಜ ಫೋಟೋ: ಕೋಂಗೋಟ್ ರಾಧಾಕೃಷ್ಣ ಭಟ್