Thursday, November 21, 2024
Homeಲೇಖನರಾಜಸ್ತಾನದ ಆಕರ್ಷಕ ಕಲ್ಬೇಲಿಯಾ ನೃತ್ಯ (Kalbelia dance Of Rajastan, Indian Folk)ಭಾರತದ ಕಲಾವೈವಿಧ್ಯತೆ – ಭಾಗ 3

ರಾಜಸ್ತಾನದ ಆಕರ್ಷಕ ಕಲ್ಬೇಲಿಯಾ ನೃತ್ಯ (Kalbelia dance Of Rajastan, Indian Folk)ಭಾರತದ ಕಲಾವೈವಿಧ್ಯತೆ – ಭಾಗ 3

ಕಲ್ಬೇಲಿಯಾ ಎಂದರೆ ರಾಜಸ್ತಾನದ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಒಂದು ಜನಾಂಗದ ಹೆಸರು. ಪರಿಶಿಷ್ಟ ಪಂಗಡಕ್ಕೆ ಸೇರಿದ ಇವರ ಸಾಂಪ್ರದಾಯಿಕ ಉದ್ಯೋಗವೆಂದರೆ ಹಾವುಗಳನ್ನು ಹಿಡಿಯುವುದು. ಮೊದಲೆಲ್ಲಾ ಹಾವಿನ ವಿಷದ  ವ್ಯಾಪಾರವನ್ನೂ ಮಾಡುತ್ತಿದ್ದರು. ಆದರೆ ಹಾವನ್ನು ಕೊಲ್ಲುತ್ತಿರಲಿಲ್ಲ. ಅವರ ಈ ನೃತ್ಯವು  ಕಲ್ಬೇಲಿಯಾ ನೃತ್ಯ ಎಂದು ಇಡೀ ಪ್ರಪಂಚದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ. ಹಾವುಗಳೊಂದಿಗೆ ಜೀವನ ನಿರ್ವಹಣೆಯ ಸಂಬಂಧ ಹೊಂದಿದ ಇವರ ನೃತ್ಯ ಮತ್ತು ಅವರ ಸಮುದಾಯದ ವೇಷಭೂಷಣಗಳಲ್ಲಿ ಸರ್ಪಗಳ ಹೋಲಿಕೆಯಿದೆ. ಪುರುಷರು ಹಾವಿನ ವಿಷಗಳ ವ್ಯವಹಾರವನ್ನು ಮಾಡಿದರೆ ಮಹಿಳೆಯರು  ಕಲ್ಬೇಲಿಯಾ ನೃತ್ಯವನ್ನು ಮಾಡಿ ಜೀವನ ಸಾಗಿಸುತ್ತಿದ್ದರು. ಹಳ್ಳಿಗಳ ಮನೆಗಳಲ್ಲಿ ಹಾವುಗಳು ಮನೆಯೊಳಗೆ ಪ್ರವೇಶ ಮಾಡಿದರೆ ಹಾವು ಹಿಡಿಯಲು ಈ ಜನಾಂಗದವರನ್ನು ಕರೆಯುತ್ತಿದ್ದರು. ಇವರು ಗಿಡಮೂಲಿಕೆಗಳ ಚಿಕಿತ್ಸೆಯನ್ನೂ ಬಲ್ಲವರಾದುದರಿಂದ ಆ ರೀತಿಯೂ ಜೀವನ ನಿರ್ವಹಣೆ ಮಾಡುತ್ತಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸಾರ ಹಾವುಗಳ ವ್ಯವಹಾರವನ್ನು ಮಾಡುವುದಕ್ಕೆ ನಿರ್ಬಂಧಗಳಿರುವುದರಿಂದ ಈಗ ಅವರು ಈ ವ್ಯಾಪಾರವನ್ನು ಬಿಟ್ಟು ಇತರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೆಚ್ಚಾಗಿ ಮರುಭೂಮಿಯಲ್ಲಿ ಪ್ರದರ್ಶಿತವಾಗುವ ಕಲ್ಬೇಲಿಯಾ ನೃತ್ಯವು ಕಲ್ಬೇಲಿಯಾ ಜನಾಂಗದ ಸಂಸ್ಕೃತಿಯ ಒಂದು ಭಾಗವಾಗಿದೆ. ಈ ನೃತ್ಯವು ಸರ್ಪಗಳ ಚಲನವಲನವನ್ನು ಹೋಲುತ್ತದೆ.

ಈ ಜನಾಂಗದ ಹುಡುಗಿಯರು ಸರ್ಪಗಳಂತೆ ಬಾಗುತ್ತಾ ಬಳುಕುತ್ತಾ ಈ ನೃತ್ಯವನ್ನು ಮಾಡುತ್ತಾರೆ.  ಕಲ್ಬೇಲಿಯಾ ನೃತ್ಯದ ಹಾಡುಗಳು ಪುರಾಣ ಮತ್ತು ಜಾನಪದ ಕಥೆಗಳನ್ನು ಆಧರಿಸಿದೆ. ಅತ್ಯಂತ ಸುಂದರವಾದ ನೃತ್ಯ. ರೋಮಾಂಚನಗೊಳಿಸುವ ಅಂಗಾಂಗ ಚಲನೆ ಇದರ ವೈಶಿಷ್ಟ್ಯ. ಆದರೆ ಖೇದಕರವಾದ ವಿಚಾರವೇನೆಂದರೆ ಈ ನೃತ್ಯಪ್ರಕಾರಕ್ಕೆ ಯಾವುದೇ ಪಠ್ಯಗಳೂ ಕೈಪಿಡಿಗಳೂ ಇಲ್ಲ. ತರಬೇತಿಯನ್ನು ಪಡೆಯಲು ಲಿಖಿತ ಟಿಪ್ಪಣಿಗಳೂ ಇಲ್ಲ. ಆದುದರಿಂದ ಈ ಸುಂದರ ನೃತ್ಯವನ್ನು ಪುನರುಜ್ಜೀವನಗೊಳಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಭಾರತ ಸರಕಾರವೂ ಬಹಳ ಆಕರ್ಷಕವಾದ ಈ ಜಾನಪದ ನೃತ್ಯವನ್ನು ಉಳಿಸಲು ಕ್ರಮಗಳನ್ನು ಕೈಗೊಂಡಿದೆ. ವಿದೇಶಿಯರು ಈ ನೃತ್ಯಕ್ಕೆ ಮಾರುಹೋಗಿದ್ದಾರೆ. ರಷ್ಯಾ ಸೇರಿದಂತೆ ಅಸಂಖ್ಯಾತ ಮಹಿಳೆಯರು ಈ ನೃತ್ಯವನ್ನು ಕಲಿತು ಅದನ್ನು ಅದ್ಭುತವಾಗಿ ಪ್ರದರ್ಶನ ಮಾಡುತ್ತಾರೆ. ಯುನೆಸ್ಕೊ ಕೂಡ ಈ ನೃತ್ಯವನ್ನು ತನ್ನ ಅಮೂರ್ತ ಹಾಗೂ ಅಸ್ಪಷ್ಟ ಪರಂಪರೆಯ ಪಟ್ಟಿಗೆ ಸೇರಿಸಿದೆ. 

ಲೇಖನ: ಮನಮೋಹನ್ ವಿ. ಎಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments