ಭಾರತೀಯ ರಂಗಕಲೆಗಳು ಒಂದು ಅತ್ಯದ್ಭುತ, ಸೋಜಿಗಗಳ ವರ್ತುಲ. ಇಲ್ಲಿ ಕಠಿಣ ಪರಿಶ್ರಮ, ಆಸಕ್ತಿ ಮತ್ತು ಸರಿಯಾದ ಮಾರ್ಗದರ್ಶನಗಳಿದ್ದರೆ ಮಾತ್ರ ವಿವಿಧ ಕಲಾಪ್ರಾಕಾರಗಳಲ್ಲಿ ಯಶಸ್ಸು ಸಾಧಿಸಿ ಜನಪ್ರಿಯರಾಗಬಹುದು ಎಂಬುದು ಮಹಾನ್ ಕಲಾವಿದರ ಯಶೋಗಾಥೆಗಳಿಂದ ತಿಳಿದುಬರುವ ಸತ್ಯ. ಕಲೆಯನ್ನು ಕರಗತ ಮಾಡಿಕೊಳ್ಳುವವರಿಗೆ ಬರಿಯ ಆಸಕ್ತಿ, ಅವಕಾಶಗಳಿದ್ದರೆ ಸಾಲದು. ಸೂಕ್ತ ಗುರುವಿನ ಮಾರ್ಗದರ್ಶನ ತರಬೇತಿಗಳೂ ಕಲಾವಿದನ ಕಲಾಬದುಕಿನಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಎಷ್ಟೋ ವರ್ಷಗಳ ಹಿಂದಿನಿಂದಲೂ ಭರತನಾಟ್ಯವೇ ಮೊದಲಾದ ಹೆಚ್ಚಿನೆಲ್ಲಾ ರಂಗ ಕಲೆಗಳಲ್ಲಿ ಕಲಿತು ಪ್ರದರ್ಶನಕ್ಕೆ ಅಣಿಯಾಗಬೇಕಾದರೆ ಕೆಲವಾರು ವರ್ಷಗಳ ಕಾಲ ಆ ಕಲೆಯನ್ನು ಅಭ್ಯಸಿಸಿ ಕರಗತ ಮಾಡಿಕೊಳ್ಳಬೇಕಾಗುತ್ತಿತ್ತು. ಆದರೆ ಯಕ್ಷಗಾನ ಕಲೆಯು ಸ್ವಲ್ಪ ವ್ಯತ್ಯಸ್ತವಾದ ಹಾದಿಯನ್ನು ಹಿಡಿದಿರುವಂತೆ ನಮಗೆ ತೋರುತ್ತದೆ. ಹಲವು ಶತಮಾನಗಳಷ್ಟು ಹಿಂದೆ ಆವಿರ್ಭವಿಸಿ ಬೆಳೆದು ಬಂದ ಈ ಯಕ್ಷಗಾನ ಕಲೆಗೆ ಒಂದು ಶಾಸ್ತ್ರೀಯವಾದ ಲಿಖಿತ ನಿರ್ದೇಶನಗಳು ಆ ಕಾಲದಲ್ಲಿ ಇಲ್ಲದಿದ್ದುದು ಕಲಿಕೆಗೆ ಒಂದು ತೊಡಕಾಗಿತ್ತು. ಕೇವಲ ಅಲಿಖಿತವಾದ ಅಥವಾ ಬಾಯ್ದೆರೆಯಾದ ಟಿಪ್ಪಣಿಗಳು ಮತ್ತು ನಿರ್ದೇಶನಗಳಿಂದ ಈ ಕಲಾಪ್ರಕಾರ ಬೆಳೆದು ಬಂತು. ಸುಮಾರು ನಾಲ್ಕೈದು ದಶಕಗಳಷ್ಟು ಹಿಂದೆ ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನಗಳು ಆರಂಭವಾಗಿರಲಿಲ್ಲ. ಆದುದರಿಂದ ಆ ಕಾಲದಲ್ಲಿ ಕಲಿಕೆಗಾಗಿ ಅದೇ ಪ್ರಶಸ್ತ ಸಮಯವಾಗಿತ್ತು. ಹಿರಿಯ ಕಲಾವಿದರ ಮನೆಯಲ್ಲಿದ್ದುಕೊಂಡು ಸೇವಾ ನಿರತರಾಗಿ ಮೆಚ್ಚುಗೆ ಗಳಿಸಿ ಅವರಿಂದ ಕಲೆಯ ಪೂರ್ಣ ಪಾಠವನ್ನು ಹೇಳಿಸಿಕೊಳ್ಳಬೇಕಾಗಿತ್ತು.
ಆ ಕಾಲದಲ್ಲಿ ಮೇಳಗಳಲ್ಲಿ ಚೌಕಿಯ ಸಹಾಯಕನಾಗಿಯೋ ಅಥವಾ ಕೋಡಂಗಿ ಇನ್ನಿತರ ಪೂರ್ವರಂಗದ ಅಭ್ಯಾಸಿಗಳಾಗಿಯೋ ಮೇಳಗಳಿಗೆ ಸೇರಬೇಕಾಗಿತ್ತು. ಹಿರಿಯ ಕಲಾವಿದರಿಂದ ಕೇಳಿ ತಿಳಿದು, ಅವರ ವೇಷಗಳನ್ನು ನೋಡಿ ಕಲಿಯಬೇಕಾಗಿತ್ತು. ಚೌಕಿಯಲ್ಲಿ ಮತ್ತು ಹಗಲು ಹೊತ್ತು ಬಿಡಾರದಲ್ಲಿ ಸಂದರ್ಭ ದೊರೆತಾಗ ಅಭ್ಯಾಸಿಗಳಿಗೆ ಹಿರಿಯ ಕಲಾವಿದರು ಮತ್ತು ಭಾಗವತರಿಂದ ಯಕ್ಷಗಾನದ ಕಾಗುಣಿತದ ಪಾಠವಾಗುತ್ತಿತ್ತು. ರಾತ್ರಿಯ ಪ್ರದರ್ಶನಗಳಿಂದ ನಿದ್ರಾಹೀನತೆಯೂ ಭಾದಿಸುತ್ತಿದ್ದು, ಇದರಿಂದ ಗುರುಗಳ ಸಿಟ್ಟು, ಕೋಪತಾಪಗಳನ್ನು ಅನುಭವಿಸುವುದರ ಜೊತೆಗೆ ಹೊಡೆತವನ್ನೂ ಕಲಿಯುವ ಸಂದರ್ಭಗಳಲ್ಲಿ ತಿನ್ನಬೇಕಾಗುತ್ತಿತ್ತು. ತನ್ನ ವೇಷ ಮುಗಿದ ನಂತರ ನಿದ್ರಿಸುವ ಹಾಗಿರಲಿಲ್ಲ. ಯಾಕೆಂದರೆ ರಂಗಸ್ಥಳವೇ ಒಂದು ಕಲಿಯುವ ಪಾಠಶಾಲೆಯಾಗಿತ್ತು. ಯಕ್ಷಗಾನವು ಒಂದು ಆಕರ್ಷಣೀಯ ಕಲೆಯಾದರೂ ಕೊರತೆಯೊಂದು ಭಾದಿಸುತ್ತಿತ್ತು. ಅದುವೇ ತರಬೇತಿ ಮತ್ತು ಶಿಕ್ಷಣ. ಕಲಿಯುವ ಅಭ್ಯಾಸಿಗಳಿಗೆ ತರಬೇತಿಯ ಕೊರತೆ. ಉಳಿದ ಕೆಲವೊಂದು ಭಾರತೀಯ ರಂಗಕಲೆಗಳಿಗೆ ಹೋಲಿಸಿದರೆ ಯಕ್ಷಗಾನದ ಮಟ್ಟಿಗೆ ಇದೊಂದು ದೊಡ್ಡ ಕೊರತೆಯಾಗಿಯೇ ಉಳಿದಿತ್ತು. (ಮುಂದುವರಿಯುವುದು)
ಲೇಖಕ: ಮನಮೋಹನ್ ವಿ. ಎಸ್