Saturday, January 18, 2025
Homeಪುಸ್ತಕ ಮಳಿಗೆಶೇಣಿ ದರ್ಶನ

ಶೇಣಿ ದರ್ಶನ

ಶೇಣಿ ದರ್ಶನ ಎಂಬ ಈ ಹೊತ್ತಗೆಯು 2000ನೇ ಇಸವಿಯಲ್ಲಿ ಪ್ರಕಟವಾಗಿ ಓದುಗರ ಕೈ ಸೇರಿತ್ತು. ಯಕ್ಷಗಾನದ ಭೀಷ್ಮ ಎಂದೇ ಖ್ಯಾತರಾದ ಹರಿದಾಸ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ನಿರ್ವಹಿಸಿದ ವಿವಿಧ ಪಾತ್ರಗಳ ಅರ್ಥವೈಭವವನ್ನು ಸಂಗ್ರಹಿಸಿ ಈ ಪುಸ್ತಕದಲ್ಲಿ ನೀಡಲಾಗಿದೆ.  ಸ್ವತಃ ಬರೆಯುದಕ್ಕಿಂತಲೂ ಸಂಗ್ರಹಿಸುವ ಕೆಲಸವು ಕಷ್ಟಕರವಾದುದು. ಸಂಗ್ರಹಿಸಬೇಕಾದ ವಿಷಯದ ಕುರಿತಾಗಿ ಆಸಕ್ತಿ, ಛಲ, ಸಹನೆಗಳೆಂಬ ಗುಣಗಳು ಬೇಕೇ ಬೇಕು. ಆದುದರಿಂದ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಅನೇಕ ಪಾತ್ರಗಳ ವಚನ ರಚನಾ ವೈಭವವನ್ನು ಸಂಗ್ರಹಿಸಿ ಶೇಣಿ ದರ್ಶನ ಎಂಬ ಪುಸ್ತಕ ರೂಪದಲ್ಲಿ ಪ್ರಕಟಿಸಲು ಕಾರಣರಾದವರು ಅಭಿನಂದನೀಯರು. ಈ ಪುಸ್ತಕದ ಸಂಪಾದಕರು ಶ್ರೀ ನಾ. ಕಾರಂತ ಪೆರಾಜೆ. ಕಲಾವಿದರಾಗಿ, ಸಂಘಟಕರಾಗಿ, ಪ್ರಬುದ್ಧ ಬರಹಗಾರರಾಗಿ ನಮಗೆಲ್ಲಾ ಪರಿಚಿತರು. ‘ತೆರೆವ ಮುನ್ನ’ ಎಂಬ ಶೀರ್ಷಿಕೆಯ ತನ್ನ ಸಂಪಾದಕೀಯ ಬರಹದಲ್ಲಿ, ಶೇಣಿಯವರ ಬಗೆಗೆ, ಈ ಹೊತ್ತಗೆಯ ಬಗೆಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿ ಪುಸ್ತಕ ಸಿದ್ಧತಾ ಕಾರ್ಯದಲ್ಲಿ ಸಹಕರಿಸಿದ ಎಲ್ಲಾ ಮಹನೀಯರುಗಳನ್ನೂ ಹೆಸರಿಸಿ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ.

ಈ ಪುಸ್ತಕವು ನಾಲ್ಕು ವಿಭಾಗಗಳಿಂದ ಕೂಡಿದೆ. ಅರ್ಥವೈಭವ ಎಂಬ ವಿಭಾಗದಲ್ಲಿ ಶೇಣಿಯವರು ನಿರ್ವಹಿಸಿದ ಮೂವತ್ತೊಂಭತ್ತು ಪಾತ್ರಗಳ ಅರ್ಥಗಾರಿಕೆಯನ್ನು ಸಂಗ್ರಹಿಸಿ ನೀಡಲಾಗಿದೆ. ಶುಂಭ, ವಿಷ್ಣು, ಶಿವ, ಬ್ರಹ್ಮ, ಜಮದಗ್ನಿ, ಬಲಿ, ದೂರ್ವಾಸ, ಯಮ, ಜಲಂಧರ, ಹಿರಣ್ಯಕಶ್ಯಪ, ಶುಕ್ರಾಚಾರ್ಯ, ಹರಿಶ್ಚಂದ್ರ, ವಿಶ್ವರೂಪಾಚಾರ್ಯ, ಶೂರಪದ್ಮ, ವಿಶ್ವಾಮಿತ್ರ, ಚಾರ್ವಾಕ, ದಂಬ, ಶತ್ರುಪ್ರಸೂಧನ, ಶಂತನು, ಕಂಸ, ಮಾಗಧ, ಕೃಷ್ಣ, ಅರ್ಜುನ, ಕೌರವ, ಶಲ್ಯ, ಕರ್ಣ, ಭೀಷ್ಮ, ದ್ರುಪದ, ಹಂಸಧ್ವಜ, ವೀರವರ್ಮ, ಶ್ರೀರಾಮ, ಶತ್ರುಘ್ನ, ದಶರಥ, ವಾಲಿ, ಹನೂಮಂತ, ರಾವಣ, ಅತಿಕಾಯ, ಅಂಗದ, ಮಾಧವ ಭಟ್ಟ ಎಂಬ 39 ಪಾತ್ರಗಳ ಅರ್ಥವೈಭವ. ಬಳಿಕ ‘ಶೇಣಿ ಉವಾಚ’ ಎಂಬ ವಿಭಾಗದಲ್ಲಿ ಶ್ರೀ ಶೇಣಿಯವರು ತನ್ನ ಅರ್ಥಗಾರಿಕೆಯಲ್ಲಿ ಆಡಿದ ಇನ್ನೂರ ಒಂದು ಶ್ರೇಷ್ಠ ನುಡಿಗಳನ್ನು ಸಂಗ್ರಹಿಸಿ ನೀಡಿರುತ್ತಾರೆ. ಬಳಿಕ ಮನದಾಳದಿಂದ ಎಂಬ ವಿಭಾಗದಲ್ಲಿ ಶೇಣಿಯವರ ಮನದಾಳದ ಮಾತುಗಳನ್ನು ಅಕ್ಷರರೂಪಕ್ಕಿಳಿಸಲಾಗಿದೆ. ಚತುರ್ಮುಖ ಎಂಬ ಭಾಗದಲ್ಲಿ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಸಂದರ್ಶನ ರೂಪದ ಲೇಖನವಿದೆ. ಕೊನೆಯಲ್ಲಿ ‘ಆಕರಗಳು’ ಎಂಬ ಶೀರ್ಷಿಕೆಯಡಿ ಶೇಣಿಯವರು ಅರ್ಥ ಹೇಳಿದ ಧ್ವನಿಸುರುಳಿಗಳ ಮತ್ತು ಅವರ ಕುರಿತಾಗಿ ಪ್ರಕಟವಾದ ಪುಸ್ತಕಗಳ ವಿವರಗಳನ್ನೂ ನೀಡಲಾಗಿದೆ. ಈ ಹೊತ್ತಗೆಯನ್ನು ಓದಿ ಶೇಣಿಯವರ ಅರ್ಥಗಾರಿಕೆಯ ಸೊಗಸನ್ನು ತಿಳಿಯಬಹುದು, ಸವಿಯಬಹುದು. ಈ ಪುಸ್ತಕದ ಪ್ರಕಾಶಕರು, ಕರ್ನಾಟಕ ಸಂಘ, ಪುತ್ತೂರು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments