Saturday, January 18, 2025
Homeಪುಸ್ತಕ ಮಳಿಗೆಆಶುವೈಖರಿ (ಯಕ್ಷಗಾನ ತಾಳಮದ್ದಳೆ ರಂಗದ ಆಲೋಚನೆಗಳು) - ಡಾ. ಕೆ. ಎಂ. ರಾಘವ ನಂಬಿಯಾರ್

ಆಶುವೈಖರಿ (ಯಕ್ಷಗಾನ ತಾಳಮದ್ದಳೆ ರಂಗದ ಆಲೋಚನೆಗಳು) – ಡಾ. ಕೆ. ಎಂ. ರಾಘವ ನಂಬಿಯಾರ್

‘ಆಶುವೈಖರಿ’ ಎಂಬ ಕೃತಿಯು ವಿದ್ವಾಂಸರಾದ ಡಾ. ಕೆ. ಎಂ. ರಾಘವ ನಂಬಿಯಾರರು ಕನ್ನಡ ಸಾಹಿತ್ಯ ಲೋಕಕ್ಕೆ, ಯಕ್ಷಗಾನ ಕ್ಷೇತ್ರಕ್ಕೆ ನೀಡಿರುವ ಅನೇಕ ಕೊಡುಗೆಗಳಲ್ಲಿ ಒಂದು. ಶ್ರೀಯುತರಿಂದ ರಚಿಸಲ್ಪಟ್ಟ ‘ರಾನಂ ಪ್ರಸಂಗ ಸಂಪುಟ’ದ ಬಗ್ಗೆ ಬರೆಯಲು ಈ ಹಿಂದೆ ಅವಕಾಶವಾಗಿತ್ತು. ಈ ಕೃತಿಯ ಬಗೆಗೆ ಬರೆಯಲೂ ಸಂತೋಷ ಪಡುತ್ತೇನೆ.  ಡಾ. ಕೆ. ಎಂ. ರಾಘವ ನಂಬಿಯಾರರ ರಂಗ ವಿಚಿಕಿತ್ಸೆ ಎಂಬ ಕೃತಿಯ ಬಗ್ಗೆ ಈ ಹಿಂದೆ ಶ್ರೀ ಕೃಷ್ಣ ಪ್ರಕಾಶ ಉಳಿತ್ತಾಯರು ಲೇಖನವೊಂದನ್ನು ಬರೆದಿದ್ದರು. ಯಕ್ಷಗಾನ ಹಿಮ್ಮೇಳ ಮುಮ್ಮೇಳಗಳೆಂಬ ಉಭಯ ವಿಭಾಗಗಳಲ್ಲಿ ಪರಿಣತರಾದ ಶ್ರೀ ನಂಬಿಯಾರರ ‘ಆಶುವೈಖರಿ’ ಎಂಬ ಕೃತಿಯು 2012ನೇ ಇಸವಿಯಲ್ಲಿ ಮುದ್ರಿತವಾಗಿತ್ತು. ಈ ಕೃತಿಯ ಶೀರ್ಷಿಕೆಯ ಬಗೆಗೆ ತಿಳಿಯುವ ಕುತೂಹಲ ಹುಟ್ಟಿಕೊಂಡು ಚೆನ್ನಾಗಿ ಯೋಚಿಸಿದರೆ ಇದು ಯಕ್ಷಗಾನದ ಕುರಿತಾದ, ಅದರಲ್ಲೂ ವಾಚಿಕಕ್ಕೆ ಸಂಬಂಧಿಸಿದ ಪುಸ್ತಕ ಎಂದು ಖಂಡಿತಾ ಅರ್ಥ ಮಾಡಿಕೊಳ್ಳಬಹುದು. ಯಾಕೆಂದರೆ ನಾಟಕ ಚಲನಚಿತ್ರಗಳಂತೆ ಸಿದ್ಧಪಡಿಸಿದ ಸಂಭಾಷಣೆಗಳಿಂದ ಯಕ್ಷಗಾನ ಪ್ರದರ್ಶನಗಳೂ ತಾಳಮದ್ದಲೆಗಳೂ ನಡೆಯುವುದಲ್ಲ. ವ್ಯಕ್ತಿಯು ತಾನು ಪಾತ್ರವಾಗಿ, ಭಾಗವತನು ಹೇಳಿದ ಪದ್ಯಗಳಿಗೆ ರಂಗದಲ್ಲೇ ಸಂಭಾಷಣೆಗಳನ್ನು ಹೇಳುತ್ತಾ ಸಾಗಬೇಕು. ಅದೂ ಪ್ರಸಂಗಕ್ಕೆ, ಪಾತ್ರಕ್ಕೆ ಕೊರತೆಯಾಗದಂತೆ. ಆಶುಭಾಷಣದಂತೆ. ವಾಕ್ ವೈಖರೀ ರೂಪವನ್ನು ಪಡೆದಾಗ ಮಾತ್ರ ಪ್ರೇಕ್ಷಕನೂ ಅನುಭವಿಸುತ್ತಾನೆ. ಪ್ರದರ್ಶನವು ಗೆಲ್ಲುತ್ತದೆ. ನನ್ನ ಮತಿಯ ಮಿತಿಯೊಳಗೆ ಅರ್ಥ ಮಾಡಿಕೊಂಡ ವಿಚಾರ ಇದು. ತಪ್ಪಿರಲೂ ಬಹುದು. ಈ ಕೃತಿಯ ಪ್ರಕಾಶಕರು ಸಾಗರ್ ಪ್ರಕಾಶನ ಬೆಂಗಳೂರು. ಇದು ನೂರಾ ಅರುವತ್ತೆಂಟು ಪುಟಗಳುಳ್ಳ ಪುಸ್ತಕ. ಶ್ರೀ ನಂಬಿಯಾರರು ಈ ಕೃತಿಯನ್ನು ತನ್ನ ಆತ್ಮೀಯರಾಗಿದ್ದ ಶ್ರೀ ಎಂ. ಶ್ರೀಧರ ಪಾಂಡಿ ಅವರಿಗೆ ಅರ್ಪಿಸಿದ್ದಾರೆ. ಯಕ್ಷಗಾನವನ್ನೇ ತನ್ನ ಉಸಿರೆಂದು ತಿಳಿದು ಜೀವಿಸಿದ್ದ ಶ್ರೀಧರ ಪಾಂಡಿಯವರ ಪರಿಚಯ ಲೇಖನವನ್ನು ಬರೆದು ಮೊದಲಾಗಿ ಅವರನ್ನು ನೆನಪಿಸಿಕೊಂಡಿದ್ದಾರೆ. ಯಕ್ಷಗಾನಕ್ಕೆ ಶ್ರೀಧರ ಪಾಂಡಿಯವರ ಕೊಡುಗೆ, ನಂಬಿಯಾರರಿಗೆ ಅವರು ನೀಡಿದ ಸಹಕಾರ, ಒಡನಾಟಗಳ ಬಗೆಗೆ ವಿವರಗಳು ಈ ಲೇಖನದಲ್ಲಿವೆ. ಬಳಿಕ ಲೇಖಕನ ನೆಲೆಯಲ್ಲಿ  ಡಾ. ಕೆ. ಎಂ. ರಾಘವ ನಂಬಿಯಾರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಮುನ್ನುಡಿ ಲೇಖನವನ್ನು ಬರೆದವರು ಶ್ರೀ ಅಂಬಾತನಯ ಮುದ್ರಾಡಿ ಅವರು. ಈ ಕೃತಿಯ ಎಲ್ಲ ಲೇಖನಗಳಲ್ಲೂ ಇರುವ ವಿಶೇಷತೆಗಳನ್ನು ಗುರುತಿಸಿ ತಮ್ಮ ಮುನ್ನುಡಿ ಬರಹದಲ್ಲಿ ನಮೂದಿಸಿರುತ್ತಾರೆ. ಬಳಿಕ ಶ್ರೀ  ಡಾ. ಕೆ. ಎಂ. ರಾಘವ ನಂಬಿಯಾರರು ಬರೆದ ಲೇಖನಗಳಿವೆ.

ಅವುಗಳು, ೧. ಕುವೆಂಪು ಮತ್ತು ಯಕ್ಷಗಾನ ತಾಳಮದ್ದಳೆ ೨. ಹಿಂದಕ್ಕೊಮ್ಮೆ ನೋಡಿದಾಗ೩. ಉಡುಪಿ ಜಿಲ್ಲೆಯ ಅರ್ಥಧಾರಿಗಳ ಬೆಳಸು ೪. ಅರ್ಥಗಾರಿಕೆ: ಒಂದು ಸ್ವರೂಪ ಸಮೀಕ್ಷೆ ೫. ತಾಳಮದ್ದಳೆಯ ಸಾತ್ವಿಕ ಪಾತ್ರಗಳು ೬. ಪ್ರಸಂಗದಲ್ಲಿ ತಾತ್ವಿಕ ಸಂಘರ್ಷ ೭. ನಾ ಮೆಚ್ಚಿದ ತಾಳಮದ್ದಳೆ ಈಗೆಲ್ಲಿ ?೮. ಕಲಾರೂಪವಾಗಿ ಅರ್ಥಗಾರಿಕೆ ೯. ಪದದ ಅರ್ಥ: ಕಗ್ಗಂಟೆಲ್ಲಿದೆ ?೧೦. ತಾಳಮದ್ದಳೆ – ಹೊಸ ಸವಾಲು ೧೧. ಗುರುವಿನ ನೆನಪು ೧೨. ಅರ್ಥಗಾರಿಕೆಯ ಶಿಷ್ಯ ಪರಂಪರೆ ೧೩. ತಾಳಮದ್ದಳೆಯಲ್ಲಿ ಹಿಮ್ಮೇಳ ಎಂಬ ಲೇಖನಗಳು. ಬಳಿಕ ಗೇರುಸೊಪ್ಪೆ ಶಾಂತಪ್ಪಯ್ಯ ವಿರಚಿತ ಕರ್ಣಾರ್ಜುನ ಪ್ರಸಂಗಕ್ಕೆ ಶ್ರೀ ನಂಬಿಯಾರರು ಬರೆದ ಅರ್ಥಗಾರಿಕೆಯನ್ನು ನೀಡಲಾಗಿದೆ. ಹೊತ್ತಗೆಯ ಕೊನೆಯ ಪುಟದಲ್ಲಿ  ಡಾ. ಕೆ. ಎಂ. ರಾಘವ ನಂಬಿಯಾರರು ಬರೆದ ಇತರ ಕೃತಿಗಳ ವಿವರಗಳನ್ನು ನೀಡಲಾಗಿದೆ. 

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments