ಪಾತಾಳ ವೆಂಕಟ್ರಮಣ ಭಟ್ ಈ ಹೆಸರೇ ಯಕ್ಷಗಾನದ ಸ್ತ್ರೀ ಪಾತ್ರಧಾರಿಗಳ ಬಗ್ಗೆ ಮಾತನಾಡುವಾಗ ಸಂಚಲನ ಉಂಟುಮಾಡುವ ಹೆಸರು. ಅವರ ವೇಷವನ್ನು ಸ್ವತಃ ನೋಡದಿದ್ದರೂ ಅವರ ಬಗ್ಗೆ ಬಹಳಷ್ಟು ಹೇಳುವುದನ್ನು ಕೇಳಿದ್ದೇನೆ. ಮತ್ತು ಬರೆದದ್ದನ್ನು ಓದಿದ್ದೇನೆ. ಅದಕ್ಕೆ ಅವರ ಅಪೂರ್ವ ಕೆಲವು ಛಾಯಾಚಿತ್ರಗಳೂ ಸಾಕ್ಷಿಯಾಗಿವೆ. ಬಾಲ್ಯದಲ್ಲಿ ಹಿರಿಯರ ಜೊತೆಗೆ ಆಟಗಳಿಗೆ (ಯಕ್ಷಗಾನ ಪ್ರದರ್ಶನ) ಹೋಗುತ್ತಿದ್ದೆವು.
ಸ್ತ್ರೀ ವೇಷದ ರಂಗ ಪ್ರವೇಶದ ಹೊತ್ತಿಗೆಲ್ಲಾ ನಮ್ಮ ಚಿಕ್ಕಪ್ಪರೊಬ್ಬರು “ಸ್ತ್ರೀ ವೇಷವೆಂದರೆ ಪಾತಾಳ ವೆಂಕಟ್ರಮಣ ಭಟ್ಟರದ್ದು. ಅಂತಹ ಸ್ತ್ರೀ ಪಾತ್ರಧಾರಿಗಳು ಈಗಿಲ್ಲ. ಉದ್ದವಾದ ಜಡೆಯನ್ನು ಹಿಂದಕ್ಕೆ ತಳ್ಳಿ ಅವರು ನೃತ್ಯ ಮಾಡುವ ಚಂದವೇ ಬೇರೆ ” ಎಂದು ಎಲ್ಲರೆದುರು ಪ್ರದರ್ಶನ ನೋಡುತ್ತಿರುವಾಗಲೇ ಹೇಳುತ್ತಿದ್ದರು.
ಅವರ ಮಾತಿಗೆ ಅಕ್ಕ ಪಕ್ಕದಲ್ಲಿ ಕುಳಿತು ಆಟ ನೋಡುತ್ತಿದ್ದವರೆಲ್ಲಾ ತಲೆಯಾಡಿಸುತ್ತಾ ಸಹಮತ ವ್ಯಕ್ತಪಡಿಸುತ್ತಿದ್ದರು. ಬೆಳೆದು ದೊಡ್ಡವನಾಗುತ್ತಿರುವಂತೆ ಬಹಳಷ್ಟು ಬಾರಿ ಪಾತಾಳದವರ ಹೆಸರನ್ನು ಹಲವರ ಬಾಯಿಯಿಂದ ಕೇಳಿದ್ದೆ. ಕೇವಲ ಹೆಸರು ಮಾತ್ರ ಕೇಳಿದ್ದೆನಾದ್ದರಿಂದ ಅವರನ್ನು ಮುಖತಃ ಕಂಡು ಮಾತನಾಡಿಸುವ ಅವಕಾಶಗಳಿರಲಿಲ್ಲ.
ಕೆಲವೊಮ್ಮೆ ಅವರು ಯಕ್ಷಗಾನ ಪ್ರದರ್ಶನಗಳಿಗೆ ಬರುತ್ತಿದ್ದುದನ್ನೂ ಬಂದು ಮುಂದಿನ ಸಾಲಿನಲ್ಲೇ ಆಸೀನರಾಗುತ್ತಿದ್ದುದನ್ನೂ ದೂರದಿಂದಲೇ ಗಮನಿಸುತ್ತಿದ್ದೆ. ಆಗೆಲ್ಲ ಹತ್ತಿರ ಹೋಗಿ ಮಾತನಾಡಿಸುವ ಹಾಗಿರಲಿಲ್ಲ. ಧೈರ್ಯವೂ ಇರಲಿಲ್ಲ. ನಮ್ಮದೇನಿದ್ದರೂ ಲಾಸ್ಟ್ ಬೆಂಚ್. ಮುಂದಿನ ಸಾಲುಗಳಲ್ಲಿ ಕುಳಿತುಕೊಳ್ಳುವ ಅರ್ಹತೆ ನಮಗಿಲ್ಲವೆಂದು ನನ್ನ ಮಾತಿನ ಅರ್ಥವಲ್ಲ.
ಆದರೆ ಯಾಕೋ ಒಂದು ಹಿಂಜರಿತ ನಮ್ಮನ್ನು ಮುಂದಕ್ಕೆ ಹೋಗದಂತೆ ತಡೆಯುತ್ತಿತ್ತು ಮತ್ತು ನಮ್ಮಂತಹವರು ಸ್ವಲ್ಪ ಹಿಂದುಗಡೆಯ ಆಸನವನ್ನೇ ಹೆಚ್ಚು ಇಷ್ಟಪಡುತ್ತಿದ್ದೆವು. ಅದಿರಲಿ. ಕೊನೆಗೂ ಪಾತಾಳ ವೆಂಕಟ್ರಮಣ ಭಟ್ಟರ ಮನೆಗೆ ಹೋಗಿ ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತು.
ಅವರ ಸುಪುತ್ರರಾದ ಪಾತಾಳ ಅಂಬಾಪ್ರಸಾದರ ಪರಿಚಯ ಕೆಲವು ವರ್ಷಗಳ ಹಿಂದೆ ಆಯಿತು. ಅವರು ಆತ್ಮೀಯರಾದುದರಿಂದ ಅವರ ಮುಖಾಂತರ ಪಾತಾಳ ವೆಂಕಟ್ರಮಣ ಭಟ್ಟರ ಮನೆಗೆ ಹೋಗುವ ಸಂದರ್ಭ ಬಂತು. ಹಾಗೆ ಹೋದವನಿಗೆ ಅವರ ಯಕ್ಷಗಾನ ಜೀವನದ ಬಗ್ಗೆ ತಿಳಿಯುವ ಅವಕಾಶ ಒದಗಿ ಬಂತು. ಪಾತಾಳರು ಮಾತಿಗೆ ಕುಳಿತರೆ ನಿರರ್ಗಳವಾಗಿ ಮಾತನಾಡುತ್ತಾರೆ. ಅವರ ಯಕ್ಷಗಾನ ಜೀವನದ ಪಯಣ ಸಾಗಿ ಬಂದ ಬಗೆಯನ್ನು ವಿವರಿಸಿದ್ದರು.
ಅದನ್ನು ಈ ಲೇಖನದಲ್ಲಿ ಉಲ್ಲೇಖಿಸುವುದಿಲ್ಲ. ಅವರ ಜೀವನ ಚರಿತ್ರೆಯ ಬಗ್ಗೆ ವಿವರವಾಗಿ ಪಾತಾಳ ವೆಂಕಟ್ರಮಣ ಭಟ್ಟರ ಅಭಿನಂದನಾ ಗ್ರಂಥವಾದ ‘ಯಕ್ಷ ಶಾಂತಲಾ ಪಾತಾಳ’ ಎಂಬ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಓದಿ ನೋಡಿದರೆ ಪಾತಾಳದವರ ಕಲಾ ಜೀವನದ ವರ್ಣರಂಜಿತ ಅಧ್ಯಾಯಗಳನ್ನು ಅರಿಯಬಹುದು.
ಆ ಪುಸ್ತಕದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. ಅಂದ ಹಾಗೆ ಮತ್ತೆ ವಿಷಯಕ್ಕೆ ಬರೋಣ. ಪಾತಾಳರು ಅಂದು ಕೆಲವು ಪ್ರಮುಖವಾದ ವಿಚಾರಗಳನ್ನು ತಿಳಿಸಿದರು. ಮುಖ್ಯವಾಗಿ ಸ್ತ್ರೀ ವೇಷಗಳ ಲಾಲಿತ್ಯವು ಹೇಗಿರಬೇಕೆಂಬ ವಿಚಾರವೂ ಮಾತಿನ ನಡುವೆ ಬಂತು. ಸ್ತ್ರೀ ವೇಷದ ಲಾಲಿತ್ಯವೂ ಶೃಂಗಾರವೂ ಪಾತ್ರದಿಂದ ಪಾತ್ರಕ್ಕೆ ಹೇಗೆ ಭಿನ್ನವಾಗಿರಬೇಕೆಂದು ವೆಂಕಟ್ರಮಣ ಭಟ್ಟರು ಮಾಡಿ ತೋರಿಸಿದರು.
ಶೃಂಗಾರಗಳಲ್ಲಿಯೂ ಹಲವು ವಿಧಗಳಿರುವುದರಿಂದ ಪ್ರತಿಯೊಂದು ಪಾತ್ರದ ಶೃಂಗಾರವೂ ಬೇರೆಯೇ ಎಂದು ಕಲಾವಿದರು ಅರಿತುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ರಂಗದಲ್ಲಿ ಅಭಾಸಗಳುಂಟಾಗಬಹುದು ಎಂದು ಅವರು ಎಚ್ಚರಿಸುತ್ತಾರೆ. ಪಾತಾಳ ವೆಂಕಟ್ರಮಣ ಭಟ್ಟರು ತನಗೆ 50 ವರ್ಷಗಳು ತುಂಬುವ ಕಾಲಕ್ಕೆ ರಂಗದಿಂದ ಸ್ವಯಂ ನಿವೃತ್ತಿಯನ್ನು ಬಯಸಿ ಪಡೆದವರು.
ಅವರ ಈ ನಡೆ ನನಗೆ ಬಹಳಷ್ಟು ಆಶ್ಚರ್ಯವನ್ನುಂಟುಮಾಡಿತ್ತು. ಅದನ್ನು ಅವರಲ್ಲಿ ಕೇಳಿದ್ದೆ. ಅವರು ಮುಗುಳು ನಗುತ್ತಾ ವಯೋಸಹಜವಾಗಿ ಮುಖದಲ್ಲಿ ಕಾಣುವ ಪ್ರಾಯದ ಕುರುಹುಗಳಿಂದ ಸ್ತ್ರೀ ಪಾತ್ರವನ್ನು ಮಾಡಲು ತೊಡಕಾಗುತ್ತಿತ್ತು. ವಯಸ್ಸಾದ ಮೇಲೆ ಹರೆಯದ ಸ್ತ್ರೀ ಪಾತ್ರ ಮಾಡುವುದು ಅಷ್ಟು ಸಮಂಜಸವಾಗಿ ಕಾಣುವುದಿಲ್ಲ. ಇದರಿಂದ ಪಾತ್ರದ ಸಹಜ ಸೌಂದರ್ಯಕ್ಕೆ ರಂಗದಲ್ಲಿ ಧಕ್ಕೆ ಒದಗಬಹುದಾದ ಸಾಧ್ಯತೆಯಿದೆ. ಆಮೇಲೆ ನಾನು ಪುರುಷಪಾತ್ರಗಳನ್ನು ಮಾಡಲು ಆಸಕ್ತಿ ತೋರಿಸದೆ ಇದ್ದುದರಿಂದ ಸಹಜವಾಗಿ ನಿವೃತ್ತಿಯನ್ನು ಬಯಸಿದೆ ಎಂದು ಅವರು ಹೇಳುತ್ತಾರೆ.
ಪಾತಾಳ ವೆಂಕಟ್ರಮಣ ಭಟ್ಟರು ಸುಮಾರು 30 ವರ್ಷಗಳ ಕಾಲ ಸ್ತ್ರೀ ಸಾಮ್ರಾಜ್ಯದ ಪ್ರಮೀಳೆಯಾಗಿ ರಂಗದಲ್ಲಿ ಮೆರೆದರು. ಯಕ್ಷಗಾನದಲ್ಲಿ ಸ್ತ್ರೀ ವೇಷದ ಹಳೆಯ ವೇಷಭೂಷಣಗಳು, ಪರಿಕರಗಳಿಂದ ಬೇಸತ್ತು ಸ್ತ್ರೀ ವೇಷದ ವಿನ್ಯಾಸ ಮತ್ತು ಆಕರ್ಷಣೆಗಳ ಬಗ್ಗೆ ಸ್ವಯಂ ಸಂಶೋಧನೆ ನಡೆಸಿ ಅದನ್ನು ರಂಗದಲ್ಲಿ ಪ್ರಯೋಗಿಸಬೇಕೆಂಬ ಆಲೋಚನೆಯೊಂದು ಅವರಿಗೆ ಬಂತು. ಅದರಂತೆ ಬೇಲೂರಿನ ಶಿಲಾಬಾಲಿಕೆಗಳ ಅಂಗಾಂಗ ಭಂಗಿಗಳು, ನಿಲ್ಲುವ ಭಂಗಿ, ಶೃಂಗಾರ, ಲಾಲಿತ್ಯಗಳಿಗೆ ಮಾರುಹೋಗಿ ಅದರಂತೆ ತಮ್ಮ ಸ್ತ್ರೀವೇಷದ ವೇಷಭೂಷಣಗಳು ಮತ್ತು ಅಂಗಭಂಗಿಗಳನ್ನು ಬದಲಾಯಿಸಿದರು.
ಇದು ಒಂದು ಹೊಸ ಸಂಶೋಧನೆ. ಯಕ್ಷಗಾನಕ್ಕೆ ಪಾತಾಳ ವೆಂಕಟ್ರಮಣ ಭಟ್ಟರ ಕೊಡುಗೆ. ಹೀಗೆ ಮೋಹಿನಿ, ಮೇನಕೆ, ಊರ್ವಶಿ ಮೊದಲಾದ ಹಲವಾರು ಪಾತ್ರಗಳ ಮರುಸೃಷ್ಟಿ ಮಾಡಿದರು. ಇದರಿಂದ ಯಕ್ಷಗಾನದ ಸ್ತ್ರೀವೇಷಗಳ ವಿಚಾರದಲ್ಲಿ ಹೊಸ ಅವಿಷ್ಕಾರವೇ ಆಯಿತು. ಬೇಲೂರಿನ ಯವನಿಕೆಗಳ ಆಭರಣಗಳ ರೀತಿಯಲ್ಲಿ ಡಾಬು, ತೋಳುಕಟ್ಟು, ಕೊರಳ ಆಭರಣಗಳು, ಶಿರೋಭೂಷಣಗಳನ್ನು ವಿನ್ಯಾಸಗೊಳಿಸಿದ್ದು ಮಾತ್ರವಲ್ಲ ಶಿಲಾಬಾಲಿಕೆಗಳ ಅಂಗಭಂಗಿಗಳು, ಕಣ್ಣಿನ ದೃಷ್ಟಿ, ಬಾಗುವಿಕೆ ಎಲ್ಲವನ್ನೂ ಯಕ್ಷಗಾನದ ಸ್ತ್ರೀಪಾತ್ರಗಳ ಮೂಲಕ ಅಭಿವ್ಯಕ್ತಿಗೊಳಿಸಿದರು.
ಆದರೆ ಇಂತಹಾ ಹೊಸ ಪ್ರಯೋಗಗಳನ್ನು ಮಾಡುವಾಗ ಯಕ್ಷಗಾನದ ಮೂಲ ಆಶಯಕ್ಕೆ ಧಕ್ಕೆಯಾಗಬಾರದು ಎಂದು ಪಾತಾಳರು ಎಚ್ಚರಿಸುತ್ತಾರೆ, ಯಾವುದೇ ಆವಿಷ್ಕಾರಗಳನ್ನು ನಡೆಸುವಾಗ ಸಾಧ್ಯಾಸಾಧ್ಯತೆಗಳ ಬಗ್ಗೆ ಸೂಕ್ತ ತಿಳುವಳಿಕೆಯನ್ನು ಹೊಂದಿ ಪ್ರಯೋಗ ಮಾಡಬೇಕೆಂಬ ಸೂಕ್ಷ್ಮ ವಿಷಯವನ್ನು ಅವರು ತಿಳಿಹೇಳುತ್ತಾರೆ. ಸ್ತ್ರೀ ವೇಷಗಳ ಕುಣಿತದ ವಿಚಾರ ಬಂದಾಗಲೂ ಹೇಗೆ ಕುಣಿಯಬೇಕೆಂದೂ ಅವರು ತೋರಿಸಿಕೊಟ್ಟರು. ಹಾಗೂ ಹೇಗೆ ಕುಣಿಯಬಾರದೆಂದೂ ಅವರು ತೋರಿಸಿದರು.
ಮುಖ್ಯವಾಗಿ ನಾಟ್ಯ ಮಾಡುವಾಗ ಉತ್ಸಾಹದ ಭರದಲ್ಲಿ ಒಂದಂಗುಲಕ್ಕಿಂತ ಹೆಚ್ಚಿನ ಎತ್ತರಕ್ಕೆ ಕಾಲುಗಳನ್ನು ಎತ್ತಿ ನೃತ್ಯ ಮಾಡುವುದು ಸಮಂಜಸವಲ್ಲ. ಸೌಮ್ಯ ರಸದಲ್ಲಿ ಸ್ತ್ರೀಪಾತ್ರವು ಹೇಗೆ ರಂಗದಲ್ಲಿ ನಿಲ್ಲಬೇಕೆಂದೂ ವೀರರಸದ ಯಾವ ಭಂಗಿ ಸ್ತ್ರೀ ಪಾತ್ರಕ್ಕೆ ಒಪ್ಪುತ್ತದೆ ಎಂಬುದನ್ನೂ ಮಾಡಿ ತೋರಿಸಿದರು.
ಇಂತಹಾ ಹಲವಾರು ಸೂಕ್ಷ್ಮ ವಿಷಯಗಳನ್ನು ಪಾತಾಳ ವೆಂಕಟ್ರಮಣ ಭಟ್ಟರು ಹೇಳುತ್ತಾರೆ. ಹಲವಾರು ಸ್ತ್ರೀ ಪಾತ್ರಧಾರೀ ಕಲಾವಿದರು ಅವರಿಂದ ಸಲಹೆ ಸೂಚನೆಗಳನ್ನು ಪಡೆಯಲು ಬಂದಿದ್ದರು ಎಂದೂ ಅವರು ಆ ಸಂಧರ್ಭದಲ್ಲಿ ಹೇಳಿದ್ದರು. ಏನೇ ಆಗಲಿ, ಯಕ್ಷಗಾನದ ಅನೇಕ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಸ್ತ್ರೀ ಪಾತ್ರದ ಸೂಕ್ಷ್ಮತೆಯ ಬಗ್ಗೆಯೂ ಪಾತಾಳ ವೆಂಕಟ್ರಮಣ ಭಟ್ಟರಿಂದ ಮುಂದಿನ ಪೀಳಿಗೆಯು ಕಲಿಯಬೇಕಾದುದು ತುಂಬಾ ಇದೆ.