ವಾಲ್ಮೀಕಿರಾಮಾಯಣಕೋಶ ಎಂಬ ಈ ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದವರು ಖ್ಯಾತ ತಾಳಮದ್ದಳೆ ಅರ್ಥಧಾರಿಗಳೂ, ವಿದ್ವಾಂಸರೂ, ನಮಗೆಲ್ಲಾ ಹಿರಿಯರೂ ಆದ ಮೂಡಂಬೈಲು ಶ್ರೀ ಗೋಪಾಲಕೃಷ್ಣ ಶಾಸ್ತ್ರಿಗಳು. ಈ ಪುಸ್ತಕದ ಮೂಲಪ್ರತಿಯು ಹಿಂದಿ ಭಾಷೆಯಲ್ಲಿದ್ದು ಅದನ್ನು ಬರೆದವರು ಶ್ರೀ ಪಂಡಿತ ರಾಮಕುಮಾರ ರಾಯ್ ಅವರು. ಕನ್ನಡ ಸಾಹಿತ್ಯ ಲೋಕಕ್ಕೆ ಇದು ಒಂದು ಅತ್ಯುತ್ತಮ ಕೊಡುಗೆ. ಒಳ್ಳೆಯ ಮಾಹಿತಿಗಳನ್ನು ನೀಡುವ ಪುಸ್ತಕ. ವಾಲ್ಮೀಕಿ ರಾಮಾಯಣದಲ್ಲಿ ಬರುವ ಪಾತ್ರಗಳ ಪರಿಚಯವನ್ನು ನೀಡಲಾಗಿದ್ದು, ಅತ್ಯಂತ ಸವಿವರವಾಗಿದೆ. ಸುಮಾರು ಸಾವಿರಕ್ಕೆ ಹತ್ತಿರದ ಪಾತ್ರಗಳ ಪರಿಚಯವನ್ನು ಕೊಡಲಾಗಿದ್ದು ಇದು 2014ನೇ ಇಸವಿಯಲ್ಲಿ ಮುದ್ರಿತವಾಗಿತ್ತು. ಈ ಕೃತಿಯು ಒಟ್ಟು 448 ಪುಟಗಳನ್ನು ಹೊಂದಿದೆ. ಇದರ ಪ್ರಕಾಶಕರು ‘ಯಕ್ಷ ಗುರುಕುಲ ಶಿಕ್ಷಣ ಟ್ರಸ್ಟ್ ‘ ಉಡುಪಿ. ಪ್ರಕಾಶಕರ ಮಾತು ಎಂಬ ಶೀರ್ಷಿಕೆಯಡಿಯಲ್ಲಿ ಶ್ರೀ ಹೇರಂಜೆ ಕೃಷ್ಣ ಭಟ್ಟರು ಸರ್ವ ರೀತಿಯ ಸಹಕಾರವನ್ನು ನೀಡಿದ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ) ಸಂಪಾಜೆ ಸಂಸ್ಥೆಗೂ, ಪುಸ್ತಕ ಉತ್ತಮ ರೀತಿಯಲ್ಲಿ ಹೊರಬರಲು ಶ್ರಮಿಸಿದ ಡಾ. ಪಾದೆಕಲ್ಲು ವಿಷ್ಣು ಭಟ್ಟರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಗ್ರಂಥವನ್ನು ಪರಿಶೀಲಿಸಿ ಪ್ರೋತ್ಸಾಹಿಸಿದ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರಿಗೆ, ಮುನ್ನುಡಿ ಬರೆದ ಪ್ರೊ| ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸಿದ್ದಾರೆ. ‘ನಿವೇದನ’ ಎಂಬ ಶೀರ್ಷಿಕೆಯಡಿ ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು ಅನಿಸಿಕೆಗಳನ್ನು ಅಕ್ಷರರೂಪಕ್ಕಿಳಿಸಿದ್ದಾರೆ. ಹಿಂದಿ ಮೂಲ ಪ್ರತಿಯಲ್ಲಿ ಲೇಖಕ ಪಂಡಿತ ರಾಮಕುಮಾರ ರಾಯ್ ಅವರು ಬರೆದ ಪ್ರಾಕ್ಕಥನ ಎಂಬ ಲೇಖನವನ್ನು ಕನ್ನಡಕ್ಕೆ ಅನುವಾದಿಸಿ ಕೊಡಲಾಗಿದೆ. ಕೊನೆಗೆ ‘ಪರಿಶಿಷ್ಟ’ ಎಂಬ ವಿಭಾಗವಿದ್ದು ಪರಿಶಿಷ್ಟ ಒಂದರಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಸಿಗುವ ಪಶು ಪಕ್ಷಿಗಳ ಹೆಸರುಗಳನ್ನೂ ನೀಡಲಾಗಿದೆ. ಪರಿಶಿಷ್ಟ ಎರಡರಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಸಿಗುವ ಮರಗಿಡಗಳ ಹೆಸರುಗಳನ್ನೂ ನೀಡಲಾಗಿದೆ. ಈ ವಿಚಾರಕ್ಕೆ ಖ್ಯಾತ ಸಸ್ಯ ಶಾಸ್ತ್ರಜ್ಞರಾದ ಡಾ. ಕೆ. ಗೋಪಾಲಕೃಷ್ಣ ಭಟ್ ಮತ್ತು ಡಾ. ಶ್ರೀ ವೆಂಕಟ್ರಮಣ ಗೌಡ ಅವರುಗಳು ಕಾರಣರು ಎಂಬುದನ್ನು ಹೇರಂಜೆ ಕೃಷ್ಣ ಭಟ್ಟರು ಪ್ರಕಾಶಕರ ಮಾತು ಲೇಖನದಡಿಯಲ್ಲಿ ತಿಳಿಸಿರುತ್ತಾರೆ. ಪರಿಶಿಷ್ಟ ಮೂರರಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಸಿಗುವ ಅಸ್ತ್ರ ಶಸ್ತ್ರಗಳ ಹೆಸರುಗಳನ್ನು ನೀಡಲಾಗಿದ್ದು ಇದೊಂದು ಶ್ರೇಷ್ಠ ಪುಸ್ತಕ.
ಲೇಖನ:ರವಿಶಂಕರ್ ವಳಕ್ಕುಂಜ
ಶ್ರೀಯುತರಲ್ಲಿ ಹೃತ್ಪೂರ್ವಕ ನಮಸ್ಕಾರಗಳು .
ಶ್ರೀ ಗೋಪಾಲಕೃಷ್ಣ ಶಾಸ್ತೀ ಇವರ ಮಹಾಭಾರತ ಕೋಶ ಹಾಗು ಭಾಗವತ ಕೋಶ ಗಳೆರಡನ್ನು ಪಡೆದುಕೊಂಡಿದ್ದೆವು. ಆದರೆ ಅವರಿಂದಲೇ ವಿರಚಿತ ರಾಮಾಯಣ ಕೋಶ ಗ್ರಂಥದ ಕುರಿತಾಗಿ ಶೋಧಿಸಿ ತುಂಬ ನಿರಾಶೆಯಲ್ಲಿದ್ದಾಗ ಅಮೃತದಂತೆ net ನಲ್ಲಿ ಮಾಹಿತಿ ದೊರೆತು ತುಂಬ ಸಂತಸವಾಗಿದೆ. ಸದರಿ ಗ್ರಂಥದ ಉಪಲಬ್ಧತೆ ಹಾಗು ಪಡೆದುಕೊಳ್ಳುವ ವಿಳಾಸ ದೊರಕಿಸಿದಲ್ಲಿ ಮಹದುಪಕಾರವಾಗುವದು.
ವಿಳಾಸ – ವಾದಿರಾಜ.ನಾರಾಯಣ.ಮಂಗಲಗಿ.
ಮನೆ- ಶ್ರೀ ಕೃಷ್ಣ .ಹುಯಿಲಗೋಳ.
ಬಿರ್ಡಿಕರ ಚಾಳ, ಉಳವಿ ಬಸಪ್ಪನ ಗುಡಿಯ ಹತ್ತಿರ,
ಮಾಳಮಡ್ಡಿ , ಧಾರವಾಡ – ೫೮೦೦೦೭
ಮೊಬೈಲ್ ಸಂ. ೯೪೪೯೩೧೮೦೪೨.